ಪ್ರಧಾನ ಮಂತ್ರಿಯವರ ಕಛೇರಿ
ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
31 OCT 2025 4:13PM by PIB Bengaluru
ನಾನು ಸರ್ದಾರ್ ಪಟೇಲ್ ಎಂದು ಹೇಳುತ್ತೇನೆ, ಮತ್ತು ನೀವೆಲ್ಲರೂ ಅಮರ್ ರಹೇನ್, ಅಮರ್ ರಹೇನ್ ಎಂದು ಹೇಳಿ.
ಸರ್ದಾರ್ ಪಟೇಲ್ - ಅಮರ್ ರಹೇನ್, ಅಮರ್ ರಹೇನ್.
ಸರ್ದಾರ್ ಪಟೇಲ್ - ಅಮರ್ ರಹೇನ್, ಅಮರ್ ರಹೇನ್.
ಸರ್ದಾರ್ ಪಟೇಲ್ - ಅಮರ್ ರಹೇನ್, ಅಮರ್ ರಹೇನ್.
ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಐತಿಹಾಸಿಕ ಸಂದರ್ಭ, ಏಕತಾನಗರದಲ್ಲಿ ಈ ಶುಭ ಬೆಳಗ್ಗೆ, ಈ ವಿಹಂಗಮ ನೋಟ, ಸರ್ದಾರ್ ಸಾಹೇಬರ ಪಾದಗಳ ಬಳಿ ನಮ್ಮ ಉಪಸ್ಥಿತಿಯ ಮೂಲಕ ಇಂದು ನಾವೆಲ್ಲರೂ ಒಂದು ಮಹಾನ್ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. ದೇಶಾದ್ಯಂತ ನಡೆಯುತ್ತಿರುವ ಏಕತಾ ಓಟ, ಕೋಟ್ಯಂತರ ಭಾರತೀಯರ ಉತ್ಸಾಹ, ನಾವು ಹೊಸ ಭಾರತದ ಸಂಕಲ್ಪವನ್ನು ನೇರವಾಗಿ ಅನುಭವಿಸುತ್ತಿದ್ದೇವೆ. ನಿನ್ನೆ ಸಂಜೆ ನಡೆದ ಅದ್ಭುತ ಪ್ರಸ್ತುತಿ ಸೇರಿದಂತೆ ಇತ್ತೀಚೆಗೆ ಇಲ್ಲಿ ನಡೆದ ಕಾರ್ಯಕ್ರಮಗಳು ಭೂತಕಾಲದ ಸಂಪ್ರದಾಯ, ವರ್ತಮಾನದ ಕಠಿಣ ಪರಿಶ್ರಮ, ಶೌರ್ಯ ಮತ್ತು ಭವಿಷ್ಯದ ಸಾಧನೆಗಳ ಒಂದು ನೋಟವನ್ನು ಹೊಂದಿದ್ದವು. ಸರ್ದಾರ್ ಸಾಹೇಬರ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ, ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಸರ್ದಾರ್ ಸಾಹೇಬರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿವಸ್(ರಾಷ್ಟ್ರೀಯ ಏಕತಾ ದಿನ)ದಂದು ಎಲ್ಲಾ 140 ಕೋಟಿ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇತಿಹಾಸ ಬರೆಯುವಾಗ ಸಮಯ ವ್ಯರ್ಥ ಮಾಡಬಾರದು, ಇತಿಹಾಸ ರೂಪಿಸಲು ನಾವು ಶ್ರಮಿಸಬೇಕು ಎಂಬುದನ್ನು ಸರ್ದಾರ್ ಪಟೇಲ್ ನಂಬಿದ್ದರು. ಈ ಭಾವನೆ ಅವರ ಜೀವನ ಚರಿತ್ರೆಯಲ್ಲಿ ಪ್ರತಿಫಲಿಸುತ್ತದೆ. ಸರ್ದಾರ್ ಸಾಹೇಬ್ ಅವರು ಮಾಡಿದ ನೀತಿಗಳು, ಅವರು ತೆಗೆದುಕೊಂಡ ನಿರ್ಧಾರಗಳು ಹೊಸ ಇತಿಹಾಸ ಸೃಷ್ಟಿಸಿದವು, ಹೊಸ ಚರಿತ್ರೆ ನಿರ್ಮಿಸಿದವು. ಸ್ವಾತಂತ್ರ್ಯದ ನಂತರ, ಅವರು 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸುವ ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿದರು. ಒಂದು ಭಾರತ - ಒಂದು ಶ್ರೇಷ್ಠ ಭಾರತ(ಏಕ್ ಭಾರತ್- ಶ್ರೇಷ್ಠ ಭಾರತ) ಎಂಬ ಕಲ್ಪನೆ ಅವರಿಗೆ ಅತ್ಯಂತ ಮುಖ್ಯವಾಗಿತ್ತು. ಅದಕ್ಕಾಗಿಯೇ ಇಂದು, ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆಯು ಸ್ವಾಭಾವಿಕವಾಗಿ ರಾಷ್ಟ್ರೀಯ ಏಕತೆಯ ಭವ್ಯ ಹಬ್ಬವಾಗಿದೆ. ನಾವು 140 ಕೋಟಿ ದೇಶವಾಸಿಗಳು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಮತ್ತು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುವಂತೆಯೇ, ಅದೇ ರೀತಿ ಏಕತಾ ದಿನದ ಮಹತ್ವವು ನಮಗೆ ಸ್ಫೂರ್ತಿ ಮತ್ತು ಹೆಮ್ಮೆಯ ಕ್ಷಣವಾಗಿದೆ. ಇಂದು ಕೋಟ್ಯಂತರ ಜನರು ಏಕತೆಯ ಸಂಕಲ್ಪ ಮಾಡಿದ್ದಾರೆ, ದೇಶದ ಏಕತೆಯನ್ನು ಬಲಪಡಿಸುವ ಅಂತಹ ಕಾರ್ಯಗಳನ್ನು ನಾವು ಉತ್ತೇಜಿಸುತ್ತೇವೆ ಎಂದು ನಾವು ಸಂಕಲ್ಪ ಮಾಡಿದ್ದೇವೆ. ಇಲ್ಲಿ ಏಕತಾ ನಗರದಲ್ಲಿಯೇ, ಏಕತಾ ಮಾಲ್ ಮತ್ತು ಏಕತಾ ಉದ್ಯಾನವು ಏಕತೆಯ ಎಳೆಯನ್ನು ಬಲಪಡಿಸುವುದನ್ನು ಕಾಣಬಹುದು.
ಸ್ನೇಹಿತರೆ,
ಪ್ರತಿಯೊಬ್ಬ ನಾಗರಿಕನು ದೇಶದ ಏಕತೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳಿಂದ ದೂರವಿರಬೇಕು. ಇದು ರಾಷ್ಟ್ರೀಯ ಕರ್ತವ್ಯ, ಇದು ಸರ್ದಾರ್ ಸಾಹೇಬರಿಗೆ ನಿಜವಾಗಿ ಸಲ್ಲಿಸುವ ಗೌರವ. ಇಂದು ದೇಶಕ್ಕೆ ಬೇಕಾಗಿರುವುದು ಇದೇ, ಪ್ರತಿಯೊಬ್ಬ ಭಾರತೀಯನಿಗೂ ಏಕತಾ ದಿನದ ಸಂದೇಶ ಮತ್ತು ಸಂಕಲ್ಪವೂ ಇದೇ ಆಗಿದೆ.
ಸ್ನೇಹಿತರೆ,
ಸರ್ದಾರ್ ಸಾಹೇಬರು ದೇಶದ ಸಾರ್ವಭೌಮತ್ವವನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸಿದರು, ಆದರೆ ದುರದೃಷ್ಟವಶಾತ್, ಸರ್ದಾರ್ ಸಾಹೇಬರು ನಿಧನರಾದ ನಂತರದ ವರ್ಷಗಳಲ್ಲಿ, ಅಂದಿನ ಸರ್ಕಾರಗಳು ದೇಶದ ಸಾರ್ವಭೌಮತ್ವದ ಬಗ್ಗೆ ಗಂಭೀರವಾಗಿರಲಿಲ್ಲ. ಒಂದೆಡೆ, ಕಾಶ್ಮೀರದಲ್ಲಿ ಮಾಡಿದ ತಪ್ಪುಗಳು, ಮತ್ತೊಂದೆಡೆ, ಈಶಾನ್ಯದಲ್ಲಿ ಉದ್ಭವಿಸಿದ ಸಮಸ್ಯೆಗಳು ಮತ್ತು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಪ್ರವರ್ಧಮಾನಕ್ಕೆ ಬಂದ ನಕ್ಸಲೈಟ್-ಮಾವೋವಾದಿ ಭಯೋತ್ಪಾದನೆ, ಇವು ದೇಶದ ಸಾರ್ವಭೌಮತ್ವಕ್ಕೆ ನೇರ ಸವಾಲುಗಳಾಗಿದ್ದವು. ಆದಾಗ್ಯೂ, ಸರ್ದಾರ್ ಸಾಹೇಬರ ನೀತಿಗಳನ್ನು ಅನುಸರಿಸುವ ಬದಲು, ಆ ಯುಗದ ಸರ್ಕಾರಗಳು ಬೆನ್ನುಮೂಳೆಯಿಲ್ಲದ ವಿಧಾನವನ್ನು ಆರಿಸಿಕೊಂಡವು. ಇದರ ಪರಿಣಾಮಗಳನ್ನು ದೇಶವು ಹಿಂಸೆ ಮತ್ತು ರಕ್ತಪಾತ ಅನುಭವಿಸಿತು.
ಸ್ನೇಹಿತರೆ,
ಇಂದಿನ ಯುವ ಪೀಳಿಗೆಯ ಅನೇಕರಿಗೆ ಸರ್ದಾರ್ ಸಾಹೇಬರು ರಾಜಪ್ರಭುತ್ವದ ರಾಜ್ಯಗಳನ್ನು ವಿಲೀನಗೊಳಿಸಿದಂತೆಯೇ ಇಡೀ ಕಾಶ್ಮೀರ ಪ್ರದೇಶವನ್ನು ವಿಲೀನಗೊಳಿಸಲು ಬಯಸಿದ್ದರು ಎಂಬುದು ತಿಳಿದಿಲ್ಲದಿರಬಹುದು. ಆದರೆ ನೆಹರೂ ಜಿ ಅವರ ಆಸೆ ಈಡೇರಲು ಬಿಡಲಿಲ್ಲ. ಕಾಶ್ಮೀರವನ್ನು ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಧ್ವಜದೊಂದಿಗೆ ವಿಭಜಿಸಲಾಯಿತು!
ಸ್ನೇಹಿತರೆ,
ದಶಕಗಳಿಂದ ಕಾಂಗ್ರೆಸ್ ಕಾಶ್ಮೀರದ ಮೇಲೆ ಮಾಡಿದ ತಪ್ಪಿನ ಬೆಂಕಿಯಲ್ಲಿ ದೇಶ ಸುಟ್ಟುಹೋಯಿತು. ಕಾಂಗ್ರೆಸ್‌ನ ಕಳಪೆ ನೀತಿಗಳಿಂದಾಗಿ, ಕಾಶ್ಮೀರದ ಒಂದು ಭಾಗವು ಪಾಕಿಸ್ತಾನದ ಅಕ್ರಮ ಆಕ್ರಮಣಕ್ಕೆ ಒಳಗಾಯಿತು. ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡಿತು.
ಸ್ನೇಹಿತರೆ,
ಕಾಶ್ಮೀರ ಮತ್ತು ದೇಶವು ಭಾರಿ ಬೆಲೆ ತೆತ್ತಿವೆ. ಆದರೂ, ಕಾಂಗ್ರೆಸ್ ಯಾವಾಗಲೂ ಭಯೋತ್ಪಾದನೆಗೆ ವಿಧೇಯವಾಗಿ ಉಳಿದಿದೆ.
ಸ್ನೇಹಿತರೆ,
ಕಾಂಗ್ರೆಸ್ ಸರ್ದಾರ್ ಸಾಹೇಬರ ದೃಷ್ಟಿಕೋನವನ್ನು ಮರೆತಿತ್ತು, ಆದರೆ ನಾವು ಮರೆತಿಲ್ಲ. 2014ರ ನಂತರ, ದೇಶವು ಮತ್ತೊಮ್ಮೆ ಅವರ ಸ್ಫೂರ್ತಿದಾಯಕ ಉಕ್ಕಿನ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಇಂದು ಕಾಶ್ಮೀರವು 370ನೇ ವಿಧಿಯ ಸಂಕೋಲೆಗಳಿಂದ ಮುಕ್ತವಾಗಿದೆ ಮತ್ತು ಮುಖ್ಯವಾಹಿನಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದೆ. ಇಂದು ಪಾಕಿಸ್ತಾನ ಮತ್ತು ಭಯೋತ್ಪಾದನೆಯ ಸೂತ್ರಧಾರಿಗಳು ಭಾರತದ ನಿಜವಾದ ಶಕ್ತಿ ಏನೆಂದು ತಿಳಿದುಕೊಂಡಿದ್ದಾರೆ! ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಇಂದು ಭಾರತವನ್ನು ನೋಡಿ ಹುಬ್ಬೇರಿಸಲು ಧೈರ್ಯ ಮಾಡಿದರೆ, ಭಾರತ ಅವರ ಮನೆಗಳಿಗೆ ನುಗ್ಗಿ ಪ್ರತಿದಾಳಿ ನಡೆಸುವುದನ್ನು ಇಡೀ ಜಗತ್ತು ನೋಡಿದೆ. ಪ್ರತಿ ಬಾರಿಯೂ ಭಾರತದ ಪ್ರತಿಕ್ರಿಯೆ ಮೊದಲಿಗಿಂತ ದೊಡ್ಡದಾಗಿದೆ, ಮೊದಲಿಗಿಂತ ಹೆಚ್ಚು ನಿರ್ಣಾಯಕವಾಗಿದೆ. ಇದು ಭಾರತದ ಶತ್ರುಗಳಿಗೆ ಸಂದೇಶವೂ ಆಗಿದೆ, ಇದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಭಾರತ, ಅದು ತನ್ನ ಭದ್ರತೆ ಮತ್ತು ಗೌರವದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.
ಸ್ನೇಹಿತರೆ,
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಕಳೆದ 11 ವರ್ಷಗಳಲ್ಲಿ ಭಾರತದ ಅತಿದೊಡ್ಡ ಯಶಸ್ಸು ನಕ್ಸಲಿಸಂ-ಮಾವೋವಾದಿ ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯುತ್ತಿದೆ. 2014ರ ಮೊದಲು, ನಮ್ಮ ದೇಶದಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ ನಕ್ಸಲೀಯರು ಮತ್ತು ಮಾವೋವಾದಿಗಳು ದೇಶದೊಳಗೆ, ದೇಶದ ಹೃದಯ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ನಕ್ಸಲೀಯ ಪ್ರದೇಶಗಳಲ್ಲಿ ದೇಶದ ಸಂವಿಧಾನವನ್ನು ಜಾರಿಗೊಳಿಸಲಾಗಿರಲಿಲ್ಲ. ಅಲ್ಲಿ ಪೊಲೀಸ್ ಆಡಳಿತವು ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ನಕ್ಸಲೀಯರು ಹೊಸ ಆದೇಶಗಳನ್ನು ಬಹಿರಂಗವಾಗಿ ಹೊರಡಿಸುತ್ತಿದ್ದರು. ಅವರು ರಸ್ತೆಗಳ ನಿರ್ಮಾಣವನ್ನು ತಡೆದರು. ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಬಾಂಬ್‌ಗಳಿಂದ ಸ್ಫೋಟಿಸಲಾಯಿತು. ಆಗ ಸರ್ಕಾರ ಮತ್ತು ಆಡಳಿತವು ಅವರ ಮುಂದೆ ಅಸಹಾಯಕವಾಗಿ ಕಾಣುತ್ತಿತ್ತು.
ಸ್ನೇಹಿತರೆ,
2014ರ ನಂತರ, ನಮ್ಮ ಸರ್ಕಾರವು ನಕ್ಸಲಿಸಂ-ಮಾವೋವಾದಿ ಭಯೋತ್ಪಾದನೆಯ ಮೇಲೆ ಭಾರಿ ದಾಳಿ ನಡೆಸಿತು. ನಾವು ನಗರ ನಕ್ಸಲೀಯ ಬೆಂಬಲಿಗರು ಮತ್ತು ನಗರ ನಕ್ಸಲೀಯರನ್ನು ಸಹ ಅಂಚಿನಲ್ಲಿಟ್ಟಿದ್ದೇವೆ. ನಾವು ಸೈದ್ಧಾಂತಿಕ ಯುದ್ಧವನ್ನು ಗೆದ್ದಿದ್ದೇವೆ ಮತ್ತು ಅವರ ಭದ್ರಕೋಟೆಗಳಲ್ಲಿ ಅವರನ್ನು ಎದುರಿಸಿದ್ದೇವೆ; ಫಲಿತಾಂಶಗಳು ಇಂದು ದೇಶದ ಮುಂದೆ ಇವೆ. 2014ರ ಮೊದಲು, ದೇಶದ ಸುಮಾರು 125 ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯ ಹಿಡಿತದಲ್ಲಿದ್ದವು. ಇಂದು ಈ ಸಂಖ್ಯೆ ಕೇವಲ 11ಕ್ಕೆ ಇಳಿದಿದೆ. ಅದರಲ್ಲಿಯೂ ಸಹ, ನಕ್ಸಲ್ ಚಟುವಟಿಕೆ ಇನ್ನೂ 3 ಜಿಲ್ಲೆಗಳಲ್ಲಿ ಮಾತ್ರ ಗಂಭೀರ ರೀತಿಯಲ್ಲಿ ಪ್ರಚಲಿತವಾಗಿದೆ. ಇಂದು, ಸರ್ದಾರ್ ಪಟೇಲ್ ಅವರ ಸಮ್ಮುಖದಲ್ಲಿ, ಏಕತಾ ನಗರದ ಈ ಭೂಮಿಯಿಂದ, ದೇಶವು ನಕ್ಸಲಿಸಂ, ಮಾವೋವಾದ ಮತ್ತು ಆ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ, ನಾವು ನಿಲ್ಲುವುದಿಲ್ಲ, ನಾವು ಶಾಂತಿಯಿಂದ ಕುಳಿತುಕೊಳ್ಳುವುದಿಲ್ಲ ಎಂದು ನಾನು ಇಡೀ ದೇಶಕ್ಕೆ ಭರವಸೆ ನೀಡುತ್ತೇನೆ.
ಸ್ನೇಹಿತರೆ,
ಇಂದು ಒಳನುಸುಳುವಿಕೆ ದೇಶದ ಏಕತೆ ಮತ್ತು ಆಂತರಿಕ ಭದ್ರತೆಗೆ ಗಮನಾರ್ಹ ಬೆದರಿಕೆ ಒಡ್ಡುತ್ತಿದೆ. ದಶಕಗಳಿಂದ ವಿದೇಶಿ ನುಸುಳುಕೋರರು ದೇಶಕ್ಕೆ ಬರುತ್ತಲೇ ಇದ್ದರು, ಅವರು ದೇಶವಾಸಿಗಳ ಸಂಪನ್ಮೂಲಗಳನ್ನು ಆಕ್ರಮಿಸುತ್ತಲೇ ಇದ್ದರು, ಜನಸಂಖ್ಯಾ ಸಮತೋಲನವನ್ನು ಹಾಳು ಮಾಡುತ್ತಲೇ ಇದ್ದರು, ದೇಶದ ಏಕತೆಯನ್ನು ಪಣಕ್ಕಿಡುತ್ತಲೇ ಇದ್ದರು, ಆದರೆ ಹಿಂದಿನ ಸರ್ಕಾರಗಳು ಇಂತಹ ದೊಡ್ಡ ಸಮಸ್ಯೆಗೆ ಕಣ್ಣು ಮುಚ್ಚುತ್ತಲೇ ಇದ್ದವು. ಮತ ಬ್ಯಾಂಕ್ ರಾಜಕೀಯಕ್ಕಾಗಿ ದೇಶದ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ಅಪಾಯಕ್ಕೆ ಸಿಲುಕಿಸಲಾಯಿತು. ಈಗ ಮೊದಲ ಬಾರಿಗೆ ದೇಶವು ಈ ದೊಡ್ಡ ಬೆದರಿಕೆಯ ವಿರುದ್ಧ ನಿರ್ಣಾಯಕ ಯುದ್ಧ ನಡೆಸಲು ನಿರ್ಧರಿಸಿದೆ. ನಾನು ಕೆಂಪುಕೋಟೆಯಿಂದ ಜನಸಂಖ್ಯಾ ಮಿಷನ್ ಘೋಷಿಸಿದ್ದೇನೆ.
ಆದರೆ ಸ್ನೇಹಿತರೆ,
ಇಂದು ನಾವು ಈ ವಿಷಯವನ್ನು ಗಂಭೀರವಾಗಿ ಎತ್ತುತ್ತಿರುವಾಗ, ಕೆಲವರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಇಡುತ್ತಿದ್ದಾರೆ. ಈ ಜನರು ಒಳನುಸುಳುವವರಿಗೆ ಹಕ್ಕುಗಳನ್ನು ನೀಡಲು ರಾಜಕೀಯ ಯುದ್ಧ ನಡೆಸುತ್ತಿದ್ದಾರೆ. ಒಮ್ಮೆ ದೇಶ ವಿಭಜನೆಯಾದ ನಂತರ, ಅದು ವಿಭಜನೆಯಾಗುತ್ತಲೇ ಇದ್ದರೂ ಅದು ಅವರಿಗೆ ಮುಖ್ಯವಲ್ಲ ಎಂದು ಅವರು ನಂಬುತ್ತಾರೆ. ಆದರೆ ಸತ್ಯವೆಂದರೆ ದೇಶದ ಭದ್ರತೆ ಮತ್ತು ಗುರುತು ಅಪಾಯದಲ್ಲಿದ್ದರೆ, ಪ್ರತಿಯೊಬ್ಬ ವ್ಯಕ್ತಿಯು ಅಪಾಯದಲ್ಲಿರುತ್ತಾರೆ. ಆದ್ದರಿಂದ, ಇಂದು ರಾಷ್ಟ್ರೀಯ ಏಕತಾ ದಿನದಂದು, ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನುಸುಳುಕೋರನನ್ನು ಓಡಿಸುತ್ತೇವೆ ಎಂದು ನಾವು ಮತ್ತೊಮ್ಮೆ ಪ್ರತಿಜ್ಞೆ ಮಾಡಬೇಕು.
ಸ್ನೇಹಿತರೆ,
ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯ ಏಕತೆಯ ಬಗ್ಗೆ ಮಾತನಾಡುವಾಗ, ಅದರ ಒಂದು ಅಂಶವೆಂದರೆ ನಾವು ವಿಚಾರಗಳ ವೈವಿಧ್ಯತೆಯನ್ನು ಗೌರವಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಸ್ವೀಕಾರಾರ್ಹ, ಆದರೆ ಯಾವುದೇ ಹೃದಯ ವ್ಯತ್ಯಾಸಗಳು ಇರಬಾರದು. ಆದರೆ ವಿಪರ್ಯಾಸವನ್ನು ನೋಡಿ, ಸ್ವಾತಂತ್ರ್ಯದ ನಂತರ, ದೇಶದ ಜವಾಬ್ದಾರಿಯನ್ನು ವಹಿಸಿದ ಜನರೇ, 'ನಾವು ಜನರು' ಎಂಬ ಮನೋಭಾವವನ್ನು ಕೊಲ್ಲಲು ಪ್ರಯತ್ನಿಸಿದರು. ಅವರು ತಮ್ಮದೇ ಆದ ಚಿಂತನೆ ಮತ್ತು ಸಿದ್ಧಾಂತಕ್ಕಿಂತ ಭಿನ್ನವಾಗಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಘಟನೆಯನ್ನು ತಿರಸ್ಕರಿಸಿದರು, ಅದನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸಿದರು. ರಾಜಕೀಯ ಅಸ್ಪೃಶ್ಯತೆಯನ್ನು ದೇಶದಲ್ಲಿ ಸಂಸ್ಕೃತಿಯನ್ನಾಗಿ ಮಾಡಲಾಯಿತು. ಕಾಂಗ್ರೆಸ್ ಸರ್ಕಾರದಲ್ಲಿ ಸರ್ದಾರ್ ಪಟೇಲ್ ಮತ್ತು ಅವರ ಪರಂಪರೆಗೆ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ? ಈ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಮತ್ತು ಅವರ ಮರಣದ ನಂತರವೂ ಏನು ಮಾಡಿದರು? ನೇತಾಜಿ ಸುಭಾಷ್ ಚಂದ್ರ ಬೋಸ್‌ಗೆ ಅವರು ಏನು ಮಾಡಿದರು? ಡಾ. ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರಂತಹ ಜನರಿಗೆ ಕಾಂಗ್ರೆಸ್ ಅದೇ ರೀತಿ ಮಾಡಿತು. ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಶತಮಾನೋತ್ಸವ ಸೂಚಿಸುತ್ತದೆ. ಸಂಘದ ಮೇಲೆ ಯಾವ ರೀತಿಯ ದಾಳಿಗಳು ಮತ್ತು ಪಿತೂರಿಗಳನ್ನು ಮಾಡಲಾಯಿತು! ಒಂದು ಪಕ್ಷ ಮತ್ತು ಒಂದು ಕುಟುಂಬದ ಹೊರಗಿನ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ವಿಚಾರವನ್ನು ಅಸ್ಪೃಶ್ಯರನ್ನಾಗಿ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು.
ಸಹೋದರ ಸಹೋದರಿಯರೆ,
ದೇಶವನ್ನು ವಿಭಜಿಸುತ್ತಿದ್ದ ಈ ರಾಜಕೀಯ ಅಸ್ಪೃಶ್ಯತೆಯನ್ನು ಕೊನೆಗೊಳಿಸಿದ್ದೇವೆ ಎಂಬುದು ನಮಗೆ ಹೆಮ್ಮೆಯಿದೆ. ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯನ್ನು ನಾವು ನಿರ್ಮಿಸಿದ್ದೇವೆ. ಬಾಬಾ ಸಾಹೇಬರ ಪಂಚತೀರ್ಥವನ್ನು ನಾವು ನಿರ್ಮಿಸಿದ್ದೇವೆ. ದೆಹಲಿಯಲ್ಲಿರುವ ಬಾಬಾ ಸಾಹೇಬರ ಮಹಾ ಪರಿನಿರ್ವಾಣ ಸ್ಥಳವಾದ ಮನೆಯು ಕಾಂಗ್ರೆಸ್ ಯುಗದಲ್ಲಿ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆಯಲ್ಲಿತ್ತು. ಆ ಪವಿತ್ರ ಸ್ಥಳವನ್ನು ನಾವು ಐತಿಹಾಸಿಕ ಸ್ಮಾರಕವನ್ನಾಗಿ ಪರಿವರ್ತಿಸಿದ್ದೇವೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಒಬ್ಬ ಮಾಜಿ ಪ್ರಧಾನಿಯ ಹೆಸರಿನಲ್ಲಿ ಮಾತ್ರ ವಸ್ತುಸಂಗ್ರಹಾಲಯವಿತ್ತು. ನಾವು ರಾಜಕೀಯ ಅಸ್ಪೃಶ್ಯತೆಯನ್ನು ಮೀರಿ ಪ್ರಧಾನಿ ವಸ್ತುಸಂಗ್ರಹಾಲಯವನ್ನು ರೂಪಿಸಿದ್ದೇವೆ, ಇದನ್ನು ದೇಶದ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಗಳಿಗೆ ಸಮರ್ಪಿಸಿದ್ದೇವೆ. ಕರ್ಪೂರಿ ಠಾಕೂರ್ ಅವರಂತಹ ಜನಪ್ರಿಯ ನಾಯಕರಿಗೆ ನಾವು ಭಾರತ ರತ್ನ ನೀಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಪ್ರಣಬ್ ಮುಖರ್ಜಿ ಅವರಿಗೆ ನಾವು ಭಾರತ ರತ್ನ ನೀಡಿದ್ದೇವೆ. ಮುಲಾಯಂ ಸಿಂಗ್ ಯಾದವ್ ಅವರಂತಹ ವಿರುದ್ಧ ಸಿದ್ಧಾಂತವನ್ನು ಹೊಂದಿರುವ ನಾಯಕನನ್ನು ನಾವು ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ. ಈ ನಿರ್ಧಾರಗಳ ಹಿಂದಿನ ಉದ್ದೇಶವೆಂದರೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರದ ಏಕತೆಯ ಮನೋಭಾವವನ್ನು ಬಲಪಡಿಸುವುದಾಗಿದೆ. ಆಪರೇಷನ್ ಸಿಂದೂರ್ ನಂತರ ವಿದೇಶಕ್ಕೆ ಹೋದ ನಮ್ಮ ಸರ್ವಪಕ್ಷ ನಿಯೋಗದಲ್ಲಿಯೂ ನಾವು ಈ ಏಕತೆಯ ನೋಟವನ್ನು ನೋಡಿದ್ದೇವೆ.
ಸ್ನೇಹಿತರೆ,
ರಾಜಕೀಯ ಲಾಭಕ್ಕಾಗಿ ದೇಶದ ಏಕತೆಯ ಮೇಲೆ ದಾಳಿ ಮಾಡುವ ಕಲ್ಪನೆಯು ಗುಲಾಮಗಿರಿಯ ಮನಸ್ಥಿತಿಯ ಭಾಗವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅಧಿಕಾರವನ್ನು ಬ್ರಿಟಿಷರಿಂದ ಪಡೆದಿದ್ದು ಮಾತ್ರವಲ್ಲದೆ, ಗುಲಾಮಗಿರಿಯ ಮನಸ್ಥಿತಿಯನ್ನೂ ಅಳವಡಿಸಿಕೊಂಡಿದೆ. ನೀವೇ ನೋಡಿ, ಕೆಲವೇ ದಿನಗಳಲ್ಲಿ ನಮ್ಮ ರಾಷ್ಟ್ರೀಯ ಗೀತೆ ವಂದೇ ಮಾತರಂ 150 ವರ್ಷಗಳನ್ನು ಪೂರೈಸಲಿದೆ. 1905ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜಿಸಿದಾಗ, ವಂದೇ ಮಾತರಂ ಪ್ರತಿಭಟನೆಯಲ್ಲಿ ಪ್ರತಿಯೊಬ್ಬ ನಾಗರಿಕನ ಧ್ವನಿಯಾಯಿತು. ವಂದೇ ಮಾತರಂ ದೇಶದ ಏಕತೆ ಮತ್ತು ಒಗ್ಗಟ್ಟಿನ ಧ್ವನಿಯಾಯಿತು. ಬ್ರಿಟಿಷರು ವಂದೇ ಮಾತರಂ ಹೇಳುವ ಕಲ್ಪನೆಯನ್ನೇ ನಿಷೇಧಿಸಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಬ್ರಿಟಿಷರು ಯಶಸ್ವಿಯಾಗಲಿಲ್ಲ! ವಂದೇ ಮಾತರಂ ಎಂಬ ಘೋಷಣೆ ಭಾರತದ ಮೂಲೆ ಮೂಲೆಯಿಂದಲೂ ಪ್ರತಿಧ್ವನಿಸುತ್ತಲೇ ಇತ್ತು. ಆದಾಗ್ಯೂ, ಬ್ರಿಟಿಷರು ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂಗ್ರೆಸ್ ಮಾಡಿತು. ಕಾಂಗ್ರೆಸ್ ಧಾರ್ಮಿಕ ಆಧಾರದ ಮೇಲೆ ವಂದೇ ಮಾತರಂನ ಒಂದು ಭಾಗವನ್ನು ತೆಗೆದುಹಾಕಿತು. ಅಂದರೆ, ಕಾಂಗ್ರೆಸ್ ಸಮಾಜವನ್ನು ವಿಭಜಿಸಿತು, ಬ್ರಿಟಿಷರ ಕಾರ್ಯಸೂಚಿಯನ್ನು ಸಹ ಮುಂದುವರೆಸಿತು. ಇಂದು ನಾನು ಒಂದು ವಿಷಯವನ್ನು ಬಹಳ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ - ಕಾಂಗ್ರೆಸ್ ವಂದೇ ಮಾತರಂ ಅನ್ನು ಮುರಿಯಲು, ಕತ್ತರಿಸಲು ಮತ್ತು ವಿಭಜಿಸಲು ನಿರ್ಧರಿಸಿದ ದಿನ, ಆ ದಿನವೇ ಅದು ಭಾರತದ ವಿಭಜನೆಗೆ ಅಡಿಪಾಯ ಹಾಕಿತು. ಕಾಂಗ್ರೆಸ್ ಆ ಪಾಪ ಮಾಡದಿದ್ದರೆ, ಇಂದು ಭಾರತದ ಚಿತ್ರಣವೇ ಬೇರೆಯಾಗಿರುತ್ತಿತ್ತು!
ಸ್ನೇಹಿತರೆ,
ಆ ಸಮಯದಲ್ಲಿ ಸರ್ಕಾರದಲ್ಲಿದ್ದ ಜನರ ಇಂತಹ ಚಿಂತನೆಯಿಂದಾಗಿ, ದೇಶವು ಹಲವು ದಶಕಗಳ ಕಾಲ ಗುಲಾಮಗಿರಿಯ ಸಂಕೇತಗಳನ್ನು ಹೊಂದಿತ್ತು. ನೀವು ನಮಗೆ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ನೌಕಾಪಡೆಯ ಧ್ವಜದಿಂದ ಗುಲಾಮಗಿರಿಯ ಗುರುತು ತೆಗೆದುಹಾಕಲಾಯಿತು ಎಂಬುದು ನಿಮಗೆ ನೆನಪಿದೆಯೇ? ನಾವು ಈ ಬದಲಾವಣೆಯನ್ನು ಮಾಡಿದಾಗ ರಾಜಪಥವು ಕರ್ತವ್ಯ ಮಾರ್ಗವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ತ್ಯಾಗದ ತಾಣವಾದ ಅಂಡಮಾನ್‌ನಲ್ಲಿರುವ ಸೆಲ್ಯುಲಾರ್ ಜೈಲಿಗೆ ಮೊರಾರ್ಜಿ ದೇಸಾಯಿ ಸರ್ಕಾರದ ಅವಧಿಯಲ್ಲಿ ಮಾತ್ರ ರಾಷ್ಟ್ರೀಯ ಸ್ಮಾರಕ ಸ್ಥಾನಮಾನ ನೀಡಲಾಯಿತು. ಕೆಲವು ಸಮಯದ ಹಿಂದೆ, ಅಂಡಮಾನ್ ದ್ವೀಪಗಳಿಗೆ ಬ್ರಿಟಿಷರ ಹೆಸರಿಡಲಾಗಿತ್ತು. ನಾವು ಇವುಗಳಿಗೆ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಹೆಸರಿಟ್ಟಿದ್ದೇವೆ. ಅನೇಕ ದ್ವೀಪಗಳಿಗೆ ಪರಮ ವೀರ ಚಕ್ರ ವಿಜೇತರ ಹೆಸರಿಡಲಾಗಿದೆ. ನಾವು ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸಹ ಸ್ಥಾಪಿಸಿದ್ದೇವೆ.
ಸ್ನೇಹಿತರೆ,
ದೇಶದ ರಕ್ಷಣೆಯಲ್ಲಿ ಹುತಾತ್ಮರಾದ ಸೈನಿಕರಿಗೂ ಗುಲಾಮ ಮನಸ್ಥಿತಿಯಿಂದಾಗಿ ಸರಿಯಾದ ಗೌರವ ಸಿಗಲಿಲ್ಲ. ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಾಪಿಸುವ ಮೂಲಕ ನಾವು ಆ ನೆನಪುಗಳನ್ನು ಅಮರಗೊಳಿಸಿದ್ದೇವೆ. ದೇಶದ ಆಂತರಿಕ ಭದ್ರತೆಯಲ್ಲಿಯೂ ಸಹ, 36 ಸಾವಿರ ಸೈನಿಕರು, ನಮ್ಮ ಪೊಲೀಸ್ ಪಡೆಯ ಈ ಸೈನಿಕರು, ಪೊಲೀಸ್ ಪಡೆಯ ಈ ಖಾಕಿ ಧರಿಸಿದ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂಬುದು ದೇಶಕ್ಕೆ ತಿಳಿದಿಲ್ಲ. 36 ಸಾವಿರ ಹುತಾತ್ಮರು, ಈ ಸಂಖ್ಯೆ ಚಿಕ್ಕದಲ್ಲ. ನಮ್ಮ ಪೊಲೀಸರು, ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್, ಸಿಆರ್‌ಪಿಎಫ್, ನಮ್ಮ ಎಲ್ಲಾ ಅರೆಸೈನಿಕ ಪಡೆಗಳು, ಅವರ ಧೈರ್ಯಕ್ಕೆ ಗೌರವ ನೀಡದೆ ವಂಚಿಸಲಾಯಿತು. ಪೊಲೀಸ್ ಸ್ಮಾರಕ ನಿರ್ಮಿಸುವ ಮೂಲಕ ಆ ಹುತಾತ್ಮರನ್ನು ಗೌರವಿಸಿದ್ದು ನಮ್ಮ ಸರ್ಕಾರ. ಇಂದು ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನಿಂತು, ದೇಶಾದ್ಯಂತ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಜನರಿಗೆ, ಇಂದು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಜನರಿಗೆ ನಾನು ವಂದಿಸುತ್ತೇನೆ, ನಾನು ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನಿಲ್ಲುತ್ತೇನೆ, ಇಂದು ನಾನು ಅವರನ್ನು ವಂದಿಸುತ್ತೇನೆ, ಅವರ ಬಗ್ಗೆ ನನಗೆ ಹೆಮ್ಮೆ ಅನಿಸುತ್ತದೆ, ನಾನು ಅವರನ್ನು ಗೌರವಿಸುತ್ತೇನೆ. ಇಂದು ದೇಶವು ಗುಲಾಮಗಿರಿ ಮನಸ್ಥಿತಿಯ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡುವವರನ್ನು ಗೌರವಿಸುವ ಮೂಲಕ, ನಾವು 'ರಾಷ್ಟ್ರ ಮೊದಲು' ಎಂಬ ಮನೋಭಾವವನ್ನು ಬಲಪಡಿಸುತ್ತಿದ್ದೇವೆ.
ನನ್ನ ಪ್ರೀತಿಯ ದೇಶವಾಸಿಗಳೆ,
ಏಕತೆಯು ರಾಷ್ಟ್ರ ಮತ್ತು ಸಮಾಜದ ಅಸ್ತಿತ್ವದ ಅಡಿಪಾಯವಾಗಿದೆ. ಸಮಾಜದಲ್ಲಿ ಏಕತೆ ಇರುವವರೆಗೆ, ರಾಷ್ಟ್ರದ ಸಮಗ್ರತೆ ಸುರಕ್ಷಿತವಾಗಿರುತ್ತದೆ. ಆದ್ದರಿಂದ, ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು, ದೇಶದ ಏಕತೆಯನ್ನು ಮುರಿಯುವ ಪ್ರತಿಯೊಂದು ಪಿತೂರಿಯನ್ನು ನಾವು ವಿಫಲಗೊಳಿಸಬೇಕು, ನಾವು ಅದನ್ನು ಏಕತೆಯ ಶಕ್ತಿಯಿಂದ ವಿಫಲಗೊಳಿಸಬೇಕು. ಅದಕ್ಕಾಗಿಯೇ, ಇಂದು ದೇಶವು ರಾಷ್ಟ್ರೀಯ ಏಕತೆಯ ಪ್ರತಿಯೊಂದು ಮುಂಭಾಗದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತದ ಏಕತೆಯ ಈ ಆಚರಣೆಯು 4 ಆಧಾರಸ್ತಂಭಗಳನ್ನು ಹೊಂದಿದೆ. ಏಕತೆಯ ಮೊದಲ ಆಧಾರಸ್ತಂಭವೆಂದರೆ, ಅದು ಸಾಂಸ್ಕೃತಿಕ ಏಕತೆ! ಸಾವಿರಾರು ವರ್ಷಗಳಿಂದ ರಾಜಕೀಯ ಸಂದರ್ಭಗಳನ್ನು ಲೆಕ್ಕಿಸದೆ ಭಾರತವನ್ನು ಒಂದು ರಾಷ್ಟ್ರವಾಗಿ ಅಮರವಾಗಿರಿಸಿದ ಸಂಸ್ಕೃತಿ ಇದು. ನಮ್ಮ 12 ಜ್ಯೋತಿರ್ಲಿಂಗಗಳು, 7 ಪುರಿಗಳು, 4 ಧಾಮಗಳು, 50ಕ್ಕೂ ಹೆಚ್ಚು ಶಕ್ತಿಪೀಠಗಳು, ತೀರ್ಥಯಾತ್ರೆಗಳ ಸಂಪ್ರದಾಯ, ಇವು ಭಾರತವನ್ನು ಜಾಗೃತ ರಾಷ್ಟ್ರವನ್ನಾಗಿ ಮಾಡುವ ಜೀವ ಶಕ್ತಿಗಳಾಗಿವೆ. ಇಂದು ನಾವು ಸೌರಾಷ್ಟ್ರ ತಮಿಳು ಸಂಗಮ ಮತ್ತು ಕಾಶಿ ತಮಿಳು ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಈ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ, ನಾವು ಭಾರತದ ಶ್ರೇಷ್ಠ ಯೋಗ ವಿಜ್ಞಾನಕ್ಕೆ ಹೊಸ ಗುರುತು ನೀಡುತ್ತಿದ್ದೇವೆ. ಇಂದು ನಮ್ಮ ಯೋಗವು ಜನರನ್ನು ಸಂಪರ್ಕಿಸುವ ಮಾಧ್ಯಮವಾಗುತ್ತಿದೆ.
ಸ್ನೇಹಿತರೇ,
ನಮ್ಮ ಏಕತೆಯ ಎರಡನೇ ಸ್ತಂಭ ಭಾಷಾ ಏಕತೆ! ಭಾರತದ ನೂರಾರು ಭಾಷೆಗಳು ಮತ್ತು ಉಪಭಾಷೆಗಳು ಭಾರತದ ಮುಕ್ತ ಮತ್ತು ಸೃಜನಶೀಲ ಚಿಂತನೆಯ ಸಂಕೇತವಾಗಿದೆ. ಏಕೆಂದರೆ, ಇಲ್ಲಿ ಯಾವುದೇ ಸಮಾಜ, ಶಕ್ತಿ ಅಥವಾ ಪಂಗಡವು ಭಾಷೆಯನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡಿಲ್ಲ. ಒಂದೇ ಭಾಷೆಯನ್ನು ಹೇರುವ ಪ್ರಯತ್ನ ನಡೆದಿಲ್ಲ. ಅದಕ್ಕಾಗಿಯೇ ಭಾರತವು ಭಾಷಾ ವೈವಿಧ್ಯತೆಯ ವಿಷಯದಲ್ಲಿ ಜಗತ್ತಿನಲ್ಲಿ ಶ್ರೀಮಂತ ರಾಷ್ಟ್ರವಾಗಿದೆ. ನಮ್ಮ ಭಾಷೆಗಳು ಸಂಗೀತದ ವಿಭಿನ್ನ ಸ್ವರಗಳಂತೆ ನಮ್ಮ ಗುರುತನ್ನು ಬಲಪಡಿಸಿವೆ. ಅದಕ್ಕಾಗಿಯೇ ಸ್ನೇಹಿತರೇ, ನಾವು ಪ್ರತಿಯೊಂದು ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸುತ್ತೇವೆ. ಭಾರತವು ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳು ಅನ್ನು ಹೊಂದಿದೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ. ಸಂಸ್ಕೃತದಂತಹ ಜ್ಞಾನದ ಪರಂಪರೆಯನ್ನು ನಾವು ಹೊಂದಿದ್ದೇವೆ. ಅದೇ ರೀತಿ, ಪ್ರತಿಯೊಂದು ಭಾರತೀಯ ಭಾಷೆಗೂ ತನ್ನದೇ ಆದ ವಿಶಿಷ್ಟತೆ, ತನ್ನದೇ ಆದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪತ್ತು ಇದೆ. ನಾವು ಪ್ರತಿಯೊಂದು ಭಾರತೀಯ ಭಾಷೆಯನ್ನು ಉತ್ತೇಜಿಸುತ್ತಿದ್ದೇವೆ. ಭಾರತದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿ ಪ್ರಗತಿ ಸಾಧಿಸಬೇಕೆಂದು ನಾವು ಬಯಸುತ್ತೇವೆ. ಭಾರತದ ಜನರು ದೇಶದ ಇತರ ಭಾಷೆಗಳನ್ನು ಸಹ ತಿಳಿದುಕೊಳ್ಳಬೇಕು ಮತ್ತು ಕಲಿಯಬೇಕು. ಭಾಷೆಗಳು ನಮ್ಮ ಏಕತೆಯ ಏಕೀಕರಣಕಾರರಾಗಲಿ. ಮತ್ತು ಇದು ಒಂದು ದಿನದ ಕೆಲಸವಲ್ಲ. ಇದು ನಡೆಯುತ್ತಿರುವ ಕೆಲಸ, ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಜವಾಬ್ದಾರಿಯನ್ನು ಹೊರಬೇಕು.
ಸ್ನೇಹಿತರೇ,
ನಮ್ಮ ಏಕತೆಯ ಮೂರನೇ ಸ್ತಂಭ ತಾರತಮ್ಯ-ಮುಕ್ತ ಅಭಿವೃದ್ಧಿ! ಏಕೆಂದರೆ ಬಡತನ ಮತ್ತು ತಾರತಮ್ಯವು ಸಾಮಾಜಿಕ ರಚನೆಯಲ್ಲಿನ ದೊಡ್ಡ ದೌರ್ಬಲ್ಯಗಳಾಗಿವೆ. ದೇಶದ ಶತ್ರುಗಳು ಯಾವಾಗಲೂ ಈ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ಅದಕ್ಕಾಗಿಯೇ ಸರ್ದಾರ್ ಸಾಹೇಬ್ ಬಡತನದ ವಿರುದ್ಧ ದೇಶಕ್ಕಾಗಿ ದೀರ್ಘಾವಧಿಯ ಯೋಜನೆಯಲ್ಲಿ ಕೆಲಸ ಮಾಡಲು ಬಯಸಿದ್ದರು. 1947 ಕ್ಕಿಂತ 10 ವರ್ಷಗಳ ಹಿಂದೆ ಭಾರತ ಸ್ವಾತಂತ್ರ್ಯ ಪಡೆದಿದ್ದರೆ, 1947 ರ ವೇಳೆಗೆ ಭಾರತವು ಆಹಾರ ಕೊರತೆಯ ಬಿಕ್ಕಟ್ಟಿನಿಂದ ಮುಕ್ತವಾಗುತ್ತಿತ್ತು ಎಂದು ಸರ್ದಾರ್ ಪಟೇಲ್ ಒಮ್ಮೆ ಹೇಳಿದ್ದರು. ರಾಜಪ್ರಭುತ್ವದ ರಾಜ್ಯಗಳನ್ನು ವಿಲೀನಗೊಳಿಸುವ ಸವಾಲನ್ನು ಅವರು ಪರಿಹರಿಸಿದಂತೆಯೇ, ಆಹಾರ ಕೊರತೆಯ ಸವಾಲನ್ನು ಪರಿಹರಿಸುವವರೆಗೆ ಅವರು ನಿಲ್ಲುವುದಿಲ್ಲ ಎಂದು ಅವರು ಹೇಳಿದರು. ಇದು ಸರ್ದಾರ್ ಸಾಹೇಬ್ ಅವರ ಇಚ್ಛಾಶಕ್ತಿಯಾಗಿತ್ತು. ದೊಡ್ಡ ಸವಾಲುಗಳನ್ನು ಸಹ ನಿಭಾಯಿಸಲು, ನಾವು ಈ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಮತ್ತು ನಮ್ಮ ಸರ್ಕಾರವು ಸರ್ದಾರ್ ಸಾಹೇಬ್ ಅವರ ಈಡೇರದ ನಿರ್ಣಯಗಳನ್ನು ಸಹ ಪೂರೈಸಲು ಕೆಲಸ ಮಾಡುತ್ತಿದೆ ಎಂದು ನನಗೆ ಹೆಮ್ಮೆ ಇದೆ. ಕಳೆದ ದಶಕದಲ್ಲಿ, ನಾವು 25 ಕೋಟಿ ದೇಶವಾಸಿಗಳನ್ನು ಬಡತನದಿಂದ ಹೊರತಂದಿದ್ದೇವೆ. ಇಂದು ಕೋಟ್ಯಂತರ ಬಡವರಿಗೆ ಮನೆಗಳು ಸಿಗುತ್ತಿವೆ. ಶುದ್ಧ ನೀರು ಪ್ರತಿ ಮನೆಗೆ ತಲುಪುತ್ತಿದೆ. ಉಚಿತ ವೈದ್ಯಕೀಯ ಆರೈಕೆ ಲಭ್ಯವಿದೆ. ಅಂದರೆ, ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ, ಇದು ಇಂದಿನ ದೇಶದ ಧ್ಯೇಯ ಮತ್ತು ದೃಷ್ಟಿಕೋನ. ಈ ತಾರತಮ್ಯ ಮತ್ತು ಭ್ರಷ್ಟಾಚಾರ ಮುಕ್ತ ನೀತಿಗಳು ಇಂದು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತಿವೆ.
ಸ್ನೇಹಿತರೆ,
ರಾಷ್ಟ್ರೀಯ ಏಕತೆಯ 4ನೇ ಆಧಾರಸ್ತಂಭವೆಂದರೆ - ಸಂಪರ್ಕದ ಮೂಲಕ ಹೃದಯಗಳ ಸಂಪರ್ಕ. ಇಂದು ದೇಶದಲ್ಲಿ ದಾಖಲೆ ಸಂಖ್ಯೆಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ವಂದೇ ಭಾರತ್ ಮತ್ತು ನಮೋ ಭಾರತ್‌ನಂತಹ ರೈಲುಗಳು ಭಾರತೀಯ ರೈಲ್ವೆಯನ್ನು ಪರಿವರ್ತಿಸುತ್ತಿವೆ. ಸಣ್ಣ ನಗರಗಳು ಸಹ ಈಗ ವಿಮಾನ ನಿಲ್ದಾಣ ಸೌಲಭ್ಯಗಳೊಂದಿಗೆ ಸಂಪರ್ಕ ಹೊಂದುತ್ತಿವೆ. ಈ ಆಧುನಿಕ ಮೂಲಸೌಕರ್ಯವು ಭಾರತದ ಬಗ್ಗೆವಿಶ್ವದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. ಇದು ದೇಶದೊಳಗೆ ಉತ್ತರ ಮತ್ತು ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಇಂದು ಜನರು ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕಾಗಿ ಇತರ ರಾಜ್ಯಗಳಿಗೆ ಸುಲಭವಾಗಿ ಪ್ರಯಾಣಿಸುತ್ತಿದ್ದಾರೆ. ಇದು ಜನರಿಂದ ಜನರಿಗೆ ಸಂಪರ್ಕ ಮತ್ತು ಸಾಂಸ್ಕೃತಿಕ ವಿನಿಮಯದ ಹೊಸ ಯುಗವಾಗಿದೆ. ಇದು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತಿದೆ, ಡಿಜಿಟಲ್ ಕ್ರಾಂತಿಯು ಈ ಏಕತೆಯನ್ನು ಬಲಪಡಿಸಲು ಅವಕಾಶವನ್ನು ಒದಗಿಸಿದೆ. ಇಂದು ಡಿಜಿಟಲ್ ಸಂಪರ್ಕವು ಹೃದಯಗಳನ್ನು ಸಂಪರ್ಕಿಸುವ ಹೊಸ ಹಾದಿಯನ್ನು ಸುಗಮಗೊಳಿಸುತ್ತಿದೆ.
ಸ್ನೇಹಿತರೆ,
ಸರ್ದಾರ್ ಪಟೇಲ್ ಅವರು ಒಮ್ಮೆ "ನಾನು ದೇಶಕ್ಕಾಗಿ ಕೆಲಸ ಮಾಡುವಾಗ ನನಗೆ ಅತ್ಯಂತ ಸಂತೋಷ ಸಿಗುತ್ತದೆ" ಎಂದು ಹೇಳಿದ್ದರು. ಇಂದು ನಾನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅದೇ ಮನವಿ ಮಾಡುತ್ತೇನೆ. ದೇಶಕ್ಕಾಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ಭಾರತ ಮಾತೆಯ ಆರಾಧನೆಯು ದೇಶದ ಪ್ರತಿಯೊಬ್ಬ ನಾಗರಿಕನ ಶ್ರೇಷ್ಠ ಪೂಜೆಯಾಗಿದೆ. 140 ಕೋಟಿ ಭಾರತೀಯರು ಒಟ್ಟಾಗಿ ನಿಂತಾಗ, ಬಂಡೆಗಳು ಸ್ವತಃ ದಾರಿ ಬಿಡುತ್ತವೆ. 140 ಕೋಟಿ ದೇಶವಾಸಿಗಳು ಒಂದೇ ಧ್ವನಿಯಲ್ಲಿ ಮಾತನಾಡಿದಾಗ, ಆ ಮಾತುಗಳು ಭಾರತದ ಯಶಸ್ಸಿನ ಘೋಷಣೆಯಾಗುತ್ತವೆ. ನಾವು ಈ ಏಕತೆಯ ಮೂಲಭೂತ ಮಂತ್ರವನ್ನು ನಮ್ಮ ಸಂಕಲ್ಪವನ್ನಾಗಿ ಮಾಡಿಕೊಳ್ಳಬೇಕು. ನಾವು ವಿಭಜನೆಯಾಗಬಾರದು, ನಾವು ದುರ್ಬಲಗೊಳ್ಳಬಾರದು. ಇದು ಸರ್ದಾರ್ ಸಾಹೇಬರಿಗೆ ನಮ್ಮ ನಿಜವಾದ ಗೌರವವಾಗಿದೆ. ಒಟ್ಟಾಗಿ ನಾವು 'ಒಂದು ಭಾರತ, ಅತ್ಯುತ್ತಮ ಭಾರತ' ಎಂಬ ಸಂಕಲ್ಪವನ್ನು ಬಲಪಡಿಸುತ್ತೇವೆ ಎಂಬ ವಿಶ್ವಾಸ ನನಗಿದೆ. ಒಟ್ಟಾಗಿ ನಾವು ಅಭಿವೃದ್ಧಿ ಹೊಂದಿದ ಭಾರತ ಮತ್ತು ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುತ್ತೇವೆ. ಈ ಭಾವನೆಯೊಂದಿಗೆ, ನಾನು ಮತ್ತೊಮ್ಮೆ ಸರ್ದಾರ್ ಸಾಹೇಬರಿಗೆ ನನ್ನ ಗೌರವ ಸಲ್ಲಿಸುತ್ತೇನೆ. ನನ್ನೊಂದಿಗೆ ಹೇಳಿ - ಭಾರತ ಮಾತೆಗೆ ಜಯವಾಗಲಿ. ಸ್ನೇಹಿತರೇ, ಈ ಧ್ವನಿ ದೇಶದ ಮೂಲೆ ಮೂಲೆಯನ್ನು ತಲುಪಬೇಕು.
ಭಾರತ ಮಾತೆಗೆ ಜಯವಾಗಲಿ!
ಭಾರತ ಮಾತೆಗೆ ಜಯವಾಗಲಿ!
ಭಾರತ ಮಾತೆಗೆ ಜಯವಾಗಲಿ!
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ಎಲ್ಲರಿಗೂ ತುಂಬು ಧನ್ಯವಾದಗಳು!
*****
(Release ID: 2185365)
Visitor Counter : 3