ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್ಸ್ ಅನಿಮೇಷನ್ ಬಜಾರ್ ಮತ್ತು ಇಂಡಿಯಾಜಾಯ್ 2025ರ 8ನೇ ಆವೃತ್ತಿಯನ್ನು ಹೈದರಾಬಾದ್‌‌ ನಲ್ಲಿ ಉದ್ಘಾಟಿಸಲಾಯಿತು


ಹೈದರಾಬಾದ್‌ ನಲ್ಲಿ ಶೀಘ್ರದಲ್ಲೇ ಭಾರತೀಯ ಸೃಜನಶೀಲತೆ ಮತ್ತು ತಂತ್ರಜ್ಞಾನ ಸಂಸ್ಥೆ (ಐ.ಐ.ಸಿ.ಟಿ) ಸ್ಥಾಪನೆಯಾಗಲಿದೆ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು

ಭಾರತೀಯ ಸಿನಿಮಾದಲ್ಲಿ ಹೆಚ್ಚುತ್ತಿರುವ ಪೈರಸಿ ಪಿಡುಗನ್ನು ಎದುರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅವಿರತವಾಗಿ ಶ್ರಮಿಸುತ್ತಿದೆ: ಶ್ರೀ ಸಂಜಯ್ ಜಾಜು

Posted On: 01 NOV 2025 6:43PM by PIB Bengaluru

ಗೇಮಿಂಗ್, ಅನಿಮೇಷನ್ ಮತ್ತು ಡಿಜಿಟಲ್ ಮನರಂಜನಾ ಉದ್ಯಮದ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು ಹೈದರಾಬಾದ್‌ ನಲ್ಲಿ ಶೀಘ್ರದಲ್ಲೇ ಭಾರತೀಯ ಸೃಜನಶೀಲತೆ ಮತ್ತು ತಂತ್ರಜ್ಞಾನ ಸಂಸ್ಥೆಯ (ಐ.ಐ.ಸಿ.ಟಿ) ಪ್ರಾದೇಶಿಕ ಕೇಂದ್ರ ಸ್ಥಾಪನೆಯಾಗಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಶನಿವಾರ ಘೋಷಿಸಿದರು.

ಹೈಟೆಕ್ಸ್‌ನ ಹೆಚ್‌.ಐ.ಸಿ.ಸಿಯಲ್ಲಿ ನಡೆದ ವೇವ್ಸ್ ಅನಿಮೇಷನ್ ಬಜಾರ್ ಮತ್ತು ಇಂಡಿಯಾಜಾಯ್ 2025ರ 8ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಂಜಯ್ ಜಾಜು "ದೇಶದಲ್ಲಿ ಈ ರೀತಿಯ ಮೊದಲನೆಯದಾದ ಭಾರತೀಯ ಸೃಜನಶೀಲತೆ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಭಾರತದಾದ್ಯಂತ ಸ್ಥಾಪಿಸಲಾಗುವುದು ಮತ್ತು ಅದರ ಒಂದು ಕ್ಯಾಂಪಸ್ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಸ್ಥಾಪನೆಯಾಗಲಿದೆ" ಎಂದು ಹೇಳಿದರು.

ತೆಲುಗು ಚಲನಚಿತ್ರೋದ್ಯಮದ ಕೊಡುಗೆ ಮತ್ತು ಎ.ವಿ.ಜಿ.ಸಿ ವಲಯವನ್ನು ಉತ್ತೇಜಿಸಲು ತೆಲಂಗಾಣ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಒತ್ತಿ ಹೇಳಿದ ಶ್ರೀ ಸಂಜಯ್ ಜಾಜು, ಭಾರತದ ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್ (ಎ.ವಿ.ಜಿ.ಸಿ) ಪರಿಸರ ವ್ಯವಸ್ಥೆಯ ಕೇಂದ್ರವಾಗಿ ಹೈದರಾಬಾದ್ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ ಮತ್ತು ದೇಶದ ಸೃಜನಶೀಲ ಆರ್ಥಿಕತೆಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು. "ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯವು ವೇಗವಾಗಿ ವಿಸ್ತರಿಸುತ್ತಿದ್ದು, ರಾಷ್ಟ್ರದ ಮೃದು ಶಕ್ತಿಯ (ಸಾಂಸ್ಕೃತಿಕ ಶಕ್ತಿ) ಪ್ರಮುಖ ಅಭಿವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಅವರು ಹೇಳಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವಾದ ವೇವ್ಸ್ ಉಪಕ್ರಮದ ಬಗ್ಗೆ ಮಾತನಾಡಿದ ಶ್ರೀ ಸಂಜಯ್ ಜಾಜು, ಇದು ಭಾರತವನ್ನು ಸೃಜನಶೀಲತೆ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ಜಾಗತಿಕ ನಾಯಕನನ್ನಾಗಿ ರೂಪಿಸುತ್ತದೆ ಎಂದು ಹೇಳಿದರು. "ದಕ್ಷಿಣ ಭಾರತ, ವಿಶೇಷವಾಗಿ ಹೈದರಾಬಾದ್, ಭಾರತೀಯ ಸಿನಿಮಾ ಮತ್ತು ಸೃಜನಶೀಲ ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೈದರಾಬಾದ್ ಹಲವಾರು ಪ್ಯಾನ್-ಇಂಡಿಯನ್ ಚಲನಚಿತ್ರಗಳನ್ನು ನಿರ್ಮಿಸಿದೆ, ಇವುಗಳಿಗೆ ವಿಶ್ವ ದರ್ಜೆಯ ಸ್ಟುಡಿಯೋಗಳು ಮತ್ತು ನಾವೀನ್ಯತೆ ಮತ್ತು ಕಲಾತ್ಮಕ ಶ್ರೇಷ್ಠತೆಯನ್ನು ಉತ್ತೇಜಿಸುವ ನೀತಿ ಚೌಕಟ್ಟಿನ ಬೆಂಬಲವಿದೆ" ಎಂದು ಹೇಳಿದರು. ಐಪಿಎಲ್ ಭಾರತೀಯ ಕ್ರಿಕೆಟ್ ಅನ್ನು ಪರಿವರ್ತಿಸಿದಂತೆಯೇ, ವೇವ್ಸ್‌ ಉಪಕ್ರಮವು ಸೃಜನಶೀಲತೆಯನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಮತ್ತು ಸಹಯೋಗ ಮತ್ತು ನಾವೀನ್ಯತೆಗಾಗಿ ಜಾಗತಿಕ ವೇದಿಕೆಯನ್ನು ಸೃಷ್ಟಿಸುವ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡಲು ಸಜ್ಜಾಗಿದೆ ಎಂದು ಅವರು ಹೇಳಿದರು.

ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ನವೋದ್ಯಮಗಳ ಇನ್ಕ್ಯುಬೇಷನ್ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಭಾರತೀಯ ಸೃಜನಶೀಲತೆ ಮತ್ತು ತಂತ್ರಜ್ಞಾನ ಸಂಸ್ಥೆ (ಐ.ಐ.ಸಿ.ಟಿ) ಮತ್ತು ಟಿ-ಹಬ್ ನಡುವೆ ತಿಳುವಳಿಕೆ ಒಪ್ಪಂದ (ಎಂ.ಒ.ಯು)ಕ್ಕೆ ಸಹಿ ಹಾಕಲಾಯಿತು.

ಈ ಕಾರ್ಯಕ್ರಮದ ಭಾಗವಾಗಿ, ವಿಷಯ (ಕಂಟೆಂಟ್‌) ರಚನೆಕಾರರನ್ನು ಖರೀದಿದಾರರು ಮತ್ತು ಒ.ಟಿ.ಟಿ ಪ್ಲಾಟ್‌ಫಾರ್ಮ್‌ ಗಳೊಂದಿಗೆ ಸಂಪರ್ಕಿಸುವ ಆನ್‌ಲೈನ್ ಮಾರುಕಟ್ಟೆಯಾದ ವೇವ್ಸ್ ಬಜಾರ್ ಅನ್ನು ಶ್ರೀ ಸಂಜಯ್ ಜಾಜು ಉದ್ಘಾಟಿಸಿದರು. ಈ ವೇದಿಕೆಯು ಸೃಷ್ಟಿಕರ್ತರು ತಮ್ಮ ಕೆಲಸವನ್ನು ಹಣಗಳಿಸಲು ಮತ್ತು ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ನಂತರ, ಶ್ರೀ ಸಂಜಯ್ ಜಾಜು ತೆಲುಗು ಮತ್ತು ಮಲಯಾಳಂ ಚಲನಚಿತ್ರ ನಿರ್ಮಾಪಕರೊಂದಿಗೆ ನಡೆದ ಐ.ಎಫ್‌.ಎಫ್‌.ಐ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದರು ಮತ್ತು ಜಪಾನ್ ಅನ್ನು ಐ.ಎಫ್‌.ಎಫ್‌.ಐ 2025ರ ಪಾಲುದಾರ ರಾಷ್ಟ್ರವೆಂದು ಘೋಷಿಸಿದರು. ಮುಂಬರುವ ವೇವ್ಸ್ ಉಪಕ್ರಮವು ಸೃಜನಶೀಲತೆ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಭಾರತೀಯ ಸಿನಿಮಾವನ್ನು ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ಭಾರತೀಯ ಸಿನಿಮಾದಲ್ಲಿ ಹೆಚ್ಚುತ್ತಿರುವ ಪೈರಸಿ ಪಿಡುಗನ್ನು ಎದುರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅವಿರತವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಪುನರುಚ್ಚರಿಸಿದರು. ಇದಲ್ಲದೆ, ಹೆಚ್ಚುವರಿಯಾಗಿ, ಬಹುಭಾಷಾ ಚಲನಚಿತ್ರ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಮತ್ತು ಸರಳಗೊಳಿಸಲು ಸಚಿವಾಲಯವು ಹೊಸ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ ಎಂದು ಅವರು ಹೇಳಿದರು.

ವೇವ್ಸ್ ಅನಿಮೇಷನ್ ಬಜಾರ್ ಮತ್ತು ಇಂಡಿಯಾಜಾಯ್ 2025 ಅನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಎರಡು ದಿನಗಳ ಈ ಕಾರ್ಯಕ್ರಮವು ಚಲನಚಿತ್ರಗಳು, ಇ-ಸ್ಪೋರ್ಟ್ಸ್, ವಿ.ಎಫ್‌.ಎಕ್ಸ್, ಅನಿಮೇಷನ್, ಒ.ಟಿ.ಟಿ, ಕಾಮಿಕ್ಸ್ ಮತ್ತು ಇತರ ಉದಯೋನ್ಮುಖ ಡಿಜಿಟಲ್ ಮನರಂಜನಾ ವಲಯಗಳಲ್ಲಿ ಭಾರತದ ಸೃಜನಶೀಲ ಆರ್ಥಿಕತೆಯನ್ನು ಪ್ರದರ್ಶಿಸುತ್ತದೆ.

ಕಾರ್ಯಕ್ರಮದಲ್ಲಿ ತೆಲಂಗಾಣ ಐ.ಟಿ. ಸಚಿವರಾದ ಶ್ರೀ ದುಡಿಲ್ಲಾ ಶ್ರೀಧರ್ ಬಾಬು; ನಿರ್ಮಾಪಕರು ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ದಿಲ್ ರಾಜು; ನಟ ಶ್ರೀ ತೇಜ ಸಜ್ಜ; ಮತ್ತು ಟಿ.ವಿ.ಎ.ಜಿ.ಎ ಮತ್ತು ತೆಲುಗು ಚಲನಚಿತ್ರೋದ್ಯಮದ ಹಲವಾರು ಪ್ರಮುಖರು ಭಾಗವಹಿಸಿದ್ದರು.

 

*****


(Release ID: 2185322) Visitor Counter : 10