ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಇಂಡಿಯಾ ಮ್ಯಾರಿಟೈಮ್ ವೀಕ್ 2025ರ ಸಂದರ್ಭದಲ್ಲಿ ಕಡಲ ನಾಯಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು


ಭಾರತದ ಕಡಲ ವಲಯವು ಹೆಚ್ಚಿನ ವೇಗ ಮತ್ತು ಶಕ್ತಿಯೊಂದಿಗೆ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ

ನಾವು ಒಂದು ಶತಮಾನಕ್ಕೂ ಹಳೆಯದಾದ ವಸಾಹತುಶಾಹಿ ಕಾಲದ ಶಿಪ್ಪಿಂಗ್ ಕಾನೂನುಗಳನ್ನು 21ನೇ ಶತಮಾನಕ್ಕೆ ಸೂಕ್ತವಾದ ಆಧುನಿಕ, ಭವಿಷ್ಯದ ಕಾನೂನುಗಳೊಂದಿಗೆ ಬದಲಾಯಿಸಿದ್ದೇವೆ: ಪ್ರಧಾನಮಂತ್ರಿ 

ಇಂದು, ಭಾರತದ ಬಂದರುಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯಂತ ದಕ್ಷವೆಂದು ಪರಿಗಣಿಸಲ್ಪಟ್ಟಿವೆ; ಅನೇಕ ವಿಷಯಗಳಲ್ಲಿ, ಅವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಂದರುಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ: ಪ್ರಧಾನಮಂತ್ರಿ

ಹಡಗು ನಿರ್ಮಾಣದಲ್ಲಿ ಹೊಸ ಎತ್ತರವನ್ನು ತಲುಪಲು ಭಾರತವು ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದೆ, ನಾವು ಈಗ ದೊಡ್ಡ ಹಡಗುಗಳಿಗೆ 'ಮೂಲಸೌಕರ್ಯ ಆಸ್ತಿ' ಗಳ ಸ್ಥಾನಮಾನವನ್ನು ನೀಡಿದ್ದೇವೆ: ಪ್ರಧಾನಮಂತ್ರಿ

ಭಾರತದ ಶಿಪ್ಪಿಂಗ್ ವಲಯದಲ್ಲಿ ಕೆಲಸ ಮಾಡಲು ಮತ್ತು ವಿಸ್ತರಿಸಲು ಇದು ಸರಿಯಾದ ಸಮಯ: ಪ್ರಧಾನಮಂತ್ರಿ

ಜಾಗತಿಕ ಸಮುದ್ರಗಳು ಪ್ರಕ್ಷುಬ್ಧಗೊಂಡಾಗ, ಜಗತ್ತು ಸ್ಥಿರವಾದ ದೀಪಸ್ತಂಭವನ್ನು  ಹುಡುಕುತ್ತದೆ, ಆ ಪಾತ್ರವನ್ನು ಶಕ್ತಿ ಮತ್ತು ಸ್ಥಿರತೆಯೊಂದಿಗೆ ನಿರ್ವಹಿಸಲು ಭಾರತವು ಉತ್ತಮ ಸ್ಥಿತಿಯಲ್ಲಿದೆ: ಪ್ರಧಾನಮಂತ್ರಿ

ಜಾಗತಿಕ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ಬದಲಾಗುತ್ತಿರುವ ಪೂರೈಕೆ ಸರಪಳಿಗಳ ನಡುವೆ, ಭಾರತವು ಕಾರ್ಯತಂತ್ರದ ಸ್ವಾಯತ್ತತೆ, ಶಾಂತಿ ಮತ್ತು ಸಮಗ್ರ ಬೆಳವಣಿಗೆಯ ಸಂಕೇತವಾಗಿ ನಿಂತಿದೆ: ಪ್ರಧಾನಮಂತ್ರಿ

Posted On: 29 OCT 2025 5:58PM by PIB Bengaluru

ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಇಂಡಿಯಾ ಮ್ಯಾರಿಟೈಮ್ ವೀಕ್ 2025ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಡಲ ನಾಯಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಜಾಗತಿಕ ಕಡಲ ಸಿಇಒ ವೇದಿಕೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಜಾಗತಿಕ ಕಡಲ ನಾಯಕರ ಸಮಾವೇಶಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಈ ಕಾರ್ಯಕ್ರಮವು 2016ರಲ್ಲಿ ಮುಂಬೈನಲ್ಲಿ ಪ್ರಾರಂಭವಾಯಿತು ಮತ್ತು ಇದೀಗ ಇದು ಜಾಗತಿಕ ಶೃಂಗಸಭೆಯಾಗಿ ವಿಕಸನಗೊಂಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. 85ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯು ಬಲವಾದ ಸಂದೇಶವನ್ನು ಕಳುಹಿಸುತ್ತದೆ ಎಂದು ಶ್ರೀ ಮೋದಿ ಬಣ್ಣಿಸಿದರು. ನೌಕಾ ಸಾರಿಗೆ ದಿಗ್ಗಜರ ಸಿಇಒಗಳು, ಸ್ಟಾರ್ಟ್‌ ಅಪ್‌ ಗಳು, ನೀತಿ ನಿರೂಪಕರು ಮತ್ತು ನಾವೀನ್ಯಕಾರರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಒಗ್ಗೂಡಿರುವುದನ್ನು ಅವರು ಗಮನಿಸಿದರು. ಇದಲ್ಲದೆ, ಸಣ್ಣ ದ್ವೀಪ ರಾಷ್ಟ್ರಗಳ ಪ್ರತಿನಿಧಿಗಳ ಹಾಜರಾತಿಯನ್ನು ಅವರು ಶ್ಲಾಘಿಸಿದರು ಮತ್ತು ಅವರ ಸಾಮೂಹಿಕ ದೃಷ್ಟಿಕೋನವು ಶೃಂಗಸಭೆಯ ಪರಸ್ಪರ ಸಹಕಾರ ಮತ್ತು ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ಹೇಳಿದರು.

ಈ ಸಮಾವೇಶದಲ್ಲಿ ಶಿಪ್ಪಿಂಗ್ ವಲಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ ಶ್ರೀ ಮೋದಿ, ಶಿಪ್ಪಿಂಗ್ ವಲಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳಿಗೆ (MoUs) ಸಹಿ ಹಾಕಲಾಗಿದೆ ಎಂದು ಒತ್ತಿ ಹೇಳಿದರು. ಇದು ಭಾರತದ ಕಡಲ ಸಾಮರ್ಥ್ಯಗಳ ಮೇಲಿನ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು, ಅಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಉಪಸ್ಥಿತಿಯು ಅವರ ಸಾಮಾನ್ಯ ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿಸಿದರು.

"21ನೇ ಶತಮಾನದಲ್ಲಿ, ಭಾರತದ ಕಡಲ ವಲಯವು ಹೆಚ್ಚಿನ ವೇಗ ಮತ್ತು ಶಕ್ತಿಯೊಂದಿಗೆ ಮುಂದುವರಿಯುತ್ತಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 2025 ನೇ ವರ್ಷವು ಈ ವಲಯಕ್ಕೆ ವಿಶೇಷವಾಗಿ ಮಹತ್ವದ್ದಾಗಿದೆ ಎಂದು ಅವರು ಬಣ್ಣಿಸಿದರು ಮತ್ತು ಪ್ರಮುಖ ಸಾಧನೆಗಳನ್ನು ಹಂಚಿಕೊಂಡರು. ಭಾರತದ ಮೊದಲ ಆಳ-ನೀರಿನ ಅಂತಾರಾಷ್ಟ್ರೀಯ ಟ್ರಾನ್ಸ್‌ ಶಿಪ್‌ ಮೆಂಟ್ ಹಬ್  ಆದ ವಿಝಿಂಜಂ ಬಂದರು ಈಗ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು. ಇತ್ತೀಚೆಗೆ ವಿಶ್ವದ ಅತಿದೊಡ್ಡ ಕಂಟೈನರ್ ಹಡಗು ಈ ಬಂದರಿಗೆ ಆಗಮಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಉಲ್ಲೇಖಿಸಿದರು. 2024-25ರಲ್ಲಿ, ಭಾರತದ ಪ್ರಮುಖ ಬಂದರುಗಳು ಇದುವರೆಗಿನ ಅತಿ ಹೆಚ್ಚು ಸರಕುಗಳನ್ನು ನಿರ್ವಹಿಸಿ, ಹೊಸ ದಾಖಲೆಯನ್ನು ನಿರ್ಮಿಸಿವೆ ಎಂದು ಶ್ರೀ ಮೋದಿ ಹೇಳಿದರು. ಮೊದಲ ಬಾರಿಗೆ, ಭಾರತೀಯ ಬಂದರೊಂದು ಮೆಗಾವ್ಯಾಟ್-ಪ್ರಮಾಣದ ಸ್ವದೇಶಿ ಹಸಿರು ಹೈಡ್ರೋಜನ್ ಘಟಕವನ್ನು ಪ್ರಾರಂಭಿಸಿದೆ ಎಂದು ಅವರು ಘೋಷಿಸಿದರು, ಈ ಸಾಧನೆಯ ಶ್ರೇಯವನ್ನು ಕಾಂಡ್ಲಾ ಬಂದರಿಗೆ ನೀಡಿದರು. ಜೆ ಎನ್‌ ಪಿ ಟಿ (JNPT) ಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಲಾಗಿದೆ, ಅಲ್ಲಿ ಭಾರತ್ ಮುಂಬೈ ಕಂಟೈನರ್ ಟರ್ಮಿನಲ್‌ ನ 2 ನೇ ಹಂತವು ಪ್ರಾರಂಭವಾಗಿದೆ ಎಂದು ಅವರು ಹೇಳಿದರು. "ಇದು ಟರ್ಮಿನಲ್‌ ನ ನಿರ್ವಹಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ, ಇದು ಭಾರತದ ಅತಿದೊಡ್ಡ ಕಂಟೈನರ್ ಬಂದರಾಗಿ ಮಾರ್ಪಟ್ಟಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಬಂದರು ಮೂಲಸೌಕರ್ಯದಲ್ಲಿನ ಅತಿದೊಡ್ಡ ಎಫ್‌ ಡಿ ಐ (FDI) ನಿಂದಾಗಿ ಇದು ಸಾಧ್ಯವಾಗಿದೆ ಎಂದು ಒತ್ತಿಹೇಳಿದ ಅವರು, ಈ ಕೊಡುಗೆಗಾಗಿ ಸಿಂಗಾಪುರದ ಪಾಲುದಾರರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

ಈ ವರ್ಷ, ಭಾರತವು ಕಡಲ ವಲಯದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳ (ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ವಸಾಹತುಶಾಹಿ ಕಾಲದ ಶಿಪ್ಪಿಂಗ್ ಕಾನೂನುಗಳನ್ನು 21ನೇ ಶತಮಾನಕ್ಕೆ ಸೂಕ್ತವಾದ ಆಧುನಿಕ ಮತ್ತು ಭವಿಷ್ಯದ ಶಾಸನಗಳೊಂದಿಗೆ ಬದಲಾಯಿಸಲಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಈ ಹೊಸ ಕಾನೂನುಗಳು ರಾಜ್ಯ ಕಡಲ ಮಂಡಳಿಗಳನ್ನು ಸಶಕ್ತಗೊಳಿಸುತ್ತವೆ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು  ಬಲಪಡಿಸುತ್ತವೆ ಮತ್ತು ಬಂದರು ನಿರ್ವಹಣೆಯಲ್ಲಿ ಡಿಜಿಟಲೀಕರಣವನ್ನು ವಿಸ್ತರಿಸುತ್ತವೆ ಎಂದು ಅವರು ಉಲ್ಲೇಖಿಸಿದರು.

ಇದಲ್ಲದೆ, ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆ ಅಡಿಯಲ್ಲಿ, ಭಾರತೀಯ ಕಾನೂನುಗಳನ್ನು ಅಂತರರಾಷ್ಟ್ರೀಯ ಒಪ್ಪಂದಗಳಿಗೆ  ಜಾಗತಿಕವಾಗಿ ಹೊಂದಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಹೊಂದಾಣಿಕೆಯು ಸುರಕ್ಷತಾ ಮಾನದಂಡಗಳಲ್ಲಿನ ವಿಶ್ವಾಸವನ್ನು ಹೆಚ್ಚಿಸಿದೆ, ವ್ಯಾಪಾರ ಮಾಡುವುದನ್ನು ಸುಲಭಗೊಳಿಸಿದೆ ಮತ್ತು ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಿದೆ. ಈ ಪ್ರಯತ್ನಗಳು ಪಾಲುದಾರರು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕರಾವಳಿ ಹಡಗು ಸಾಗಣೆ ಕಾಯ್ದೆಯನ್ನು ವ್ಯಾಪಾರವನ್ನು ಸರಳಗೊಳಿಸಲು ಮತ್ತು ಪೂರೈಕೆ ಸರಪಳಿ ಭದ್ರತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ವಿಸ್ತಾರವಾದ ಕರಾವಳಿಯುದ್ದಕ್ಕೂ ಈ ಕಾಯ್ದೆಯು ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. 'ಒಂದು ರಾಷ್ಟ್ರ, ಒಂದು ಬಂದರು ಪ್ರಕ್ರಿಯೆ' ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಬಂದರು-ಸಂಬಂಧಿತ ಕಾರ್ಯವಿಧಾನಗಳನ್ನು ಪ್ರಮಾಣೀಕರಿಸುತ್ತದೆ ಮತ್ತು ದಾಖಲೆಗಳ ಅಗತ್ಯತೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದರು. ಶಿಪ್ಪಿಂಗ್ ವಲಯದಲ್ಲಿನ ಈ ಸುಧಾರಣೆಗಳು ಭಾರತದ ದಶಕದ ಸುದೀರ್ಘ ಸುಧಾರಣಾ ಪಯಣದ ಮುಂದುವರಿಕೆಯಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಕಳೆದ ಹತ್ತು-ಹನ್ನೊಂದು ವರ್ಷಗಳನ್ನು ಸ್ಮರಿಸಿದ ಅವರು, ಭಾರತದ ಕಡಲ ವಲಯದಲ್ಲಿನ ಪರಿವರ್ತನೆ ಐತಿಹಾಸಿಕವಾದುದು ಎಂದು ಬಣ್ಣಿಸಿದರು. ಮಾರಿಟೈಮ್ ಇಂಡಿಯಾ ವಿಷನ್ ಅಡಿಯಲ್ಲಿ 150 ಕ್ಕೂ ಹೆಚ್ಚು ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ, ಇದರ ಪರಿಣಾಮವಾಗಿ ಪ್ರಮುಖ ಬಂದರುಗಳ ಸಾಮರ್ಥ್ಯವು ಸುಮಾರು ದ್ವಿಗುಣಗೊಂಡಿದೆ, ಹಡಗುಗಳ 'ಟರ್ನ್ಅರೌಂಡ್ ಟೈಮ್' (ಹಡಗುಗಳು ಬಂದರಿಗೆ ಬಂದು ಹೋಗುವ ಸಮಯ) ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಕ್ರೂಸ್ ಪ್ರವಾಸೋದ್ಯಮಕ್ಕೆ ಹೊಸ ವೇಗ ಸಿಕ್ಕಿದೆ. ಒಳನಾಡು ಜಲಮಾರ್ಗಗಳಲ್ಲಿ ಸರಕು ಸಾಗಣೆಯು ಶೇಕಡಾ 700 ಕ್ಕಿಂತ ಹೆಚ್ಚು ಹೆಚ್ಚಾಗಿದೆ, ಕಾರ್ಯಾಚರಣೆಯಲ್ಲಿರುವ ಜಲಮಾರ್ಗಗಳ ಸಂಖ್ಯೆ ಮೂರರಿಂದ ಮೂವತ್ತೆರಡಕ್ಕೆ ಏರಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ದಶಕದಲ್ಲಿ ಭಾರತೀಯ ಬಂದರುಗಳ ನಿವ್ವಳ ವಾರ್ಷಿಕ ಹೆಚ್ಚುವರಿ ಒಂಬತ್ತು ಪಟ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

"ಭಾರತದ ಬಂದರುಗಳು ಈಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯಂತ ದಕ್ಷ ಬಂದರುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿವೆ, ಮತ್ತು ಅನೇಕ ಸಂದರ್ಭಗಳಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಂದರುಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಪ್ರಮುಖ ಕಾರ್ಯಕ್ಷಮತೆಯ ಅಂಕಿಅಂಶಗಳನ್ನು) ಹಂಚಿಕೊಂಡರು, ಭಾರತದಲ್ಲಿ ಸರಾಸರಿ 'ಕಂಟೈನರ್ ಡ್ವೆಲ್ ಟೈಮ್' (ಕಂಟೈನರ್‌ಗಳು ಬಂದರಿನಲ್ಲಿ ನಿಲ್ಲುವ ಸಮಯ) ಮೂರು ದಿನಗಳಿಗಿಂತ ಕಡಿಮೆಯಾಗಿದೆ, ಇದು ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಉತ್ತಮವಾಗಿದೆ ಎಂದು ತಿಳಿಸಿದರು. ಸರಾಸರಿ 'ವೆಸೆಲ್ ಟರ್ನ್ಅರೌಂಡ್ ಟೈಮ್' (ಹಡಗು ಬಂದರಿಗೆ ಬಂದು, ಸರಕು ಇಳಿಸಿ/ಏರಿಸಿ, ಹೊರಡುವ ಸಮಯ) 96 ಗಂಟೆಗಳಿಂದ ಕೇವಲ 48 ಗಂಟೆಗಳಿಗೆ ಇಳಿದಿದೆ, ಇದು ಭಾರತೀಯ ಬಂದರುಗಳನ್ನು ಜಾಗತಿಕ ಶಿಪ್ಪಿಂಗ್ ಲೈನ್‌ ಗಳಿಗೆ  ಹೆಚ್ಚು ಸ್ಪರ್ಧಾತ್ಮಕ ಮತ್ತು ಆಕರ್ಷಕವಾಗಿಸಿದೆ ಎಂದು ಅವರು ಬಣ್ಣಿಸಿದರು. ವಿಶ್ವಬ್ಯಾಂಕ್‌ ನ 'ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್' ನಲ್ಲಿ ಭಾರತವು ಗಮನಾರ್ಹ ಸುಧಾರಣೆಯನ್ನು ತೋರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಕಡಲ ಮಾನವ ಸಂಪನ್ಮೂಲದಲ್ಲಿ ಭಾರತದ ಬೆಳೆಯುತ್ತಿರುವ ಶಕ್ತಿಯನ್ನು ಅವರು ಒತ್ತಿ ಹೇಳಿದರು, ಕಳೆದ ದಶಕದಲ್ಲಿ ಭಾರತೀಯ ನಾವಿಕರ ಸಂಖ್ಯೆ 1.25 ಲಕ್ಷದಿಂದ 3 ಲಕ್ಷಕ್ಕೂ ಅಧಿಕಕ್ಕೆ ಏರಿದೆ ಎಂದು ತಿಳಿಸಿದರು. ಇಂದು, ನಾವಿಕರ ಸಂಖ್ಯೆಗೆ ಸಂಬಂಧಿಸಿದಂತೆ ಭಾರತವು ಜಾಗತಿಕವಾಗಿ ಅಗ್ರ ಮೂರು ದೇಶಗಳಲ್ಲಿ ಸ್ಥಾನ ಪಡೆದಿದೆ.

21ನೇ ಶತಮಾನದ ಕಾಲು ಭಾಗ ಕಳೆದಿದೆ ಮತ್ತು ಮುಂದಿನ 25 ವರ್ಷಗಳು ಇನ್ನಷ್ಟು ನಿರ್ಣಾಯಕವಾಗಿವೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. 'ನೀಲಿ ಆರ್ಥಿಕತೆ' ಮತ್ತು 'ಸುಸ್ಥಿರ ಕರಾವಳಿ ಅಭಿವೃದ್ಧಿ' ಮೇಲೆ ಭಾರತವು ಗಮನ ಕೇಂದ್ರೀಕರಿಸಿದೆ ಎಂದು ಅವರು ಒತ್ತಿ ಹೇಳಿದರು. 'ಹಸಿರು ಲಾಜಿಸ್ಟಿಕ್ಸ್', ಬಂದರು ಸಂಪರ್ಕ, ಮತ್ತು ಕರಾವಳಿ ಕೈಗಾರಿಕಾ ಕ್ಲಸ್ಟರ್‌ಗಳ ಮೇಲೆ ಸರ್ಕಾರವು ಬಲವಾದ ಒತ್ತು ನೀಡಿದೆ ಎಂದು ಅವರು ಬಣ್ಣಿಸಿದರು. 

"ಹಡಗು ನಿರ್ಮಾಣವು ಈಗ ಭಾರತದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಹಡಗು ನಿರ್ಮಾಣದಲ್ಲಿ ಭಾರತದ ಐತಿಹಾಸಿಕ ಪ್ರಾಮುಖ್ಯತೆಯನ್ನು ಸ್ಮರಿಸಿದ ಅವರು, ಈ ಕ್ಷೇತ್ರದಲ್ಲಿ ದೇಶವು ಒಮ್ಮೆ ಪ್ರಮುಖ ಜಾಗತಿಕ ಕೇಂದ್ರವಾಗಿತ್ತು ಎಂದು ತಿಳಿಸಿದರು. ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದಿಂದ ಅನತಿ ದೂರದಲ್ಲಿರುವ ಅಜಂತಾ ಗುಹೆಗಳಲ್ಲಿ, ಆರನೇ ಶತಮಾನದ ವರ್ಣಚಿತ್ರವೊಂದು ಮೂರು-ದಂಡಗಳ ಹಡಗಿನ ವಿನ್ಯಾಸವನ್ನು ಚಿತ್ರಿಸುತ್ತದೆ ಎಂದು ಅವರು ಹೇಳಿದರು. ಪ್ರಾಚೀನ ಭಾರತೀಯ ಕಲೆಯಲ್ಲಿ ಕಂಡುಬರುವ ಈ ವಿನ್ಯಾಸವನ್ನು ಶತಮಾನಗಳ ನಂತರ ಇತರ ದೇಶಗಳು ಅಳವಡಿಸಿಕೊಂಡವು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.

"ಒಂದು ಕಾಲದಲ್ಲಿ ಭಾರತದಲ್ಲಿ ನಿರ್ಮಿತವಾದ ಹಡಗುಗಳು ಜಾಗತಿಕ ವ್ಯಾಪಾರದ ಅವಿಭಾಜ್ಯ ಅಂಗವಾಗಿದ್ದವು," ಎಂದು ಒತ್ತಿ ಹೇಳಿದ ಶ್ರೀ ಮೋದಿ, "ನಂತರ ಭಾರತವು ಹಡಗು ವಿಘಟನಾ ವಲಯದಲ್ಲಿ ಮುನ್ನಡೆ ಸಾಧಿಸಿತು, ಇದೀಗ ಹಡಗು ನಿರ್ಮಾಣ ವಲಯದಲ್ಲಿ ನವೀನ ಶಿಖರಗಳನ್ನು ತಲುಪಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ," ಎಂದು ತಿಳಿಸಿದರು. ಬೃಹತ್ ಹಡಗುಗಳಿಗೆ ಭಾರತವು 'ಮೂಲಸೌಕರ್ಯ ಆಸ್ತಿ' ಸ್ಥಾನಮಾನವನ್ನು ನೀಡಿದೆ ಎಂದು ಅವರು ಉಲ್ಲೇಖಿಸಿದರು. ಈ ನೀತಿಯ ನಿರ್ಧಾರವು, ಇಲ್ಲಿ ನೆರೆದಿರುವ ಎಲ್ಲಾ ಹಡಗು ನಿರ್ಮಾಣಕಾರರಿಗೆ ಹೊಸ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ. "ಇದು ಹೊಸ ಹಣಕಾಸು ಆಯ್ಕೆಗಳನ್ನು ಒದಗಿಸುತ್ತದೆ, ಬಡ್ಡಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸಾಲ ಲಭ್ಯತೆಯನ್ನು ಸುಗಮಗೊಳಿಸುತ್ತದೆ," ಎಂದು ಅವರು ಬಣ್ಣಿಸಿದರು. ಈ ಸುಧಾರಣೆಗೆ ಮಹತ್ತರ ಚಾಲನೆ ನೀಡಲು, ಸರ್ಕಾರವು ಸುಮಾರು ₹70,000 ಕೋಟಿ ಹೂಡಿಕೆ ಮಾಡಲಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. "ಈ ಹೂಡಿಕೆಯು ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ದೀರ್ಘಕಾಲೀನ ಹಣಕಾಸು ಸೌಲಭ್ಯವನ್ನು ಉತ್ತೇಜಿಸುತ್ತದೆ, 'ಗ್ರೀನ್‌ಫೀಲ್ಡ್' ಮತ್ತು 'ಬ್ರೌನ್‌ ಫೀಲ್ಡ್' (ಹಾಲಿ ಇರುವ) ಶಿಪ್‌ ಯಾರ್ಡ್‌ಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ, ಉನ್ನತ ಕಡಲ ಕೌಶಲ್ಯಗಳನ್ನು ಬೆಳೆಸುತ್ತದೆ ಮತ್ತು ಯುವಕರಿಗಾಗಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ," ಎಂದರು. ಈ ಉಪಕ್ರಮವು ಎಲ್ಲಾ ಪಾಲುದಾರರಿಗೆ ನೂತನ ಹೂಡಿಕೆ ಅವಕಾಶಗಳನ್ನು ಸಹ ತೆರೆಯಲಿದೆ ಎಂದು ಅವರು ಮಾತು ಸೇರಿಸಿದರು.

"ಈ ಸಮಾವೇಶ ನಡೆಯುತ್ತಿರುವ ಭೂಮಿಯು ಛತ್ರಪತಿ ಶಿವಾಜಿ ಮಹಾರಾಜರ ನಾಡು" ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. "ಅವರು ಕೇವಲ ಕಡಲ ಭದ್ರತೆಗೆ ಅಡಿಪಾಯ ಹಾಕಿದ್ದಲ್ಲದೆ, ಅರಬ್ಬಿ ಸಮುದ್ರದ ವ್ಯಾಪಾರ ಮಾರ್ಗಗಳಲ್ಲಿ ಭಾರತದ ಶಕ್ತಿಯನ್ನು ಪ್ರತಿಪಾದಿಸಿದರು," ಎಂದು ಹೇಳಿದರು. "ಸಮುದ್ರಗಳು ಗಡಿಗಳಲ್ಲ, ಬದಲಿಗೆ ಅವಕಾಶಗಳಿಗೆ ಹೆಬ್ಬಾಗಿಲು" ಎಂಬ ಶಿವಾಜಿ ಮಹಾರಾಜರ ದೃಷ್ಟಿಕೋನವನ್ನು ಅವರು ಒತ್ತಿ ಹೇಳಿದರು, "ಭಾರತವು ಇದೇ ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ," ಎಂದು ತಿಳಿಸಿದರು.

ಜಾಗತಿಕ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಭಾರತದ ಬದ್ಧತೆಯನ್ನು ಒತ್ತಿ ಹೇಳಿದ ಮತ್ತು ದೇಶವು ವಿಶ್ವದರ್ಜೆಯ ಮೆಗಾ-ಪೋರ್ಟ್‌ಗಳನ್ನು ಸಕ್ರಿಯವಾಗಿ ನಿರ್ಮಿಸುತ್ತಿದೆ ಎಂದು ತಿಳಿಸಿದ ಶ್ರೀ ಮೋದಿ, ಮಹಾರಾಷ್ಟ್ರದ ವಧವನ್‌ ನಲ್ಲಿ ₹76,000 ಕೋಟಿ ವೆಚ್ಚದಲ್ಲಿ ಹೊಸ ಬಂದರನ್ನು ನಿರ್ಮಿಸಲಾಗುತ್ತಿದೆ ಎಂದು ಘೋಷಿಸಿದರು. ಭಾರತವು ತನ್ನ ಪ್ರಮುಖ ಬಂದರುಗಳ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲು ಮತ್ತು ಕಂಟೈನರೈಸ್ಡ್ ಕಾರ್ಗೋದಲ್ಲಿ ತನ್ನ ಪಾಲನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಈ ಗುರಿಗಳನ್ನು ಸಾಧಿಸುವಲ್ಲಿ ಸಭೆಯಲ್ಲಿ ಹಾಜರಿರುವ ಎಲ್ಲಾ ಪಾಲುದಾರರು ಪ್ರಮುಖ ಸಹವರ್ತಿಗಳು ಎಂದು ಪ್ರಧಾನಮಂತ್ರಿ ದೃಢಪಡಿಸಿದರು ಮತ್ತು ಅವರ ಆಲೋಚನೆಗಳು, ನಾವೀನ್ಯತೆಗಳು ಮತ್ತು ಹೂಡಿಕೆಗಳನ್ನು ಸ್ವಾಗತಿಸಿದರು. ಬಂದರು ಮತ್ತು ಹಡಗು ಸಾಗಣೆ ವಲಯದಲ್ಲಿ ಭಾರತವು ಶೇಕಡಾ 100 ರಷ್ಟು ಎಫ್‌ ಡಿ ಐ (FDI) ಗೆ ಅನುಮತಿ ನೀಡುತ್ತದೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ವೇಗವಾಗಿ ವಿಸ್ತರಿಸುತ್ತಿದೆ ಎಂದು ಅವರು ಪುನರುಚ್ಚರಿಸಿದರು. "ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್"  ದೃಷ್ಟಿಕೋನದ ಅಡಿಯಲ್ಲಿ, ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತಿದೆ ಮತ್ತು ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಭಾರತದ ಶಿಪ್ಪಿಂಗ್ ವಲಯದಲ್ಲಿ ತೊಡಗಿಸಿಕೊಳ್ಳಲು ಮತ್ತು ವಿಸ್ತರಿಸಲು ಈ ಕ್ಷಣವನ್ನು ಬಳಸಿಕೊಳ್ಳುವಂತೆ ವಿವಿಧ ದೇಶಗಳ ಹೂಡಿಕೆದಾರರನ್ನು ಅವರು ಒತ್ತಾಯಿಸಿದರು, "ಇದೇ ಸರಿಯಾದ ಸಮಯ" ಎಂದು ಹೇಳಿದರು.

ಭಾರತದ ದೃಢವಾದ ಪ್ರಜಾಪ್ರಭುತ್ವ ಮತ್ತು ವಿಶ್ವಾಸಾರ್ಹತೆಯನ್ನು ಒಂದು ನಿರ್ಣಾಯಕ ಶಕ್ತಿಯಾಗಿ ಒತ್ತಿಹೇಳಿದ ಪ್ರಧಾನಮಂತ್ರಿಯವರು, "ಜಾಗತಿಕ ಸಮುದ್ರಗಳು ಪ್ರಕ್ಷುಬ್ಧಗೊಂಡಾಗ, ಜಗತ್ತು ಸ್ಥಿರವಾದ ದೀಪಸ್ತಂಭವನ್ನು ಹುಡುಕುತ್ತದೆ, ಆ ಪಾತ್ರವನ್ನು ಶಕ್ತಿ ಮತ್ತು ಸ್ಥಿರತೆಯೊಂದಿಗೆ ನಿರ್ವಹಿಸಲು ಭಾರತವು ಉತ್ತಮ ಸ್ಥಿತಿಯಲ್ಲಿದೆ" ಎಂದು ಹೇಳಿದರು. ಜಾಗತಿಕ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು, ಮತ್ತು ಬದಲಾಗುತ್ತಿರುವ ಪೂರೈಕೆ ಸರಪಳಿಗಳ ನಡುವೆ, ಭಾರತವು ಕಾರ್ಯತಂತ್ರದ ಸ್ವಾಯತ್ತತೆ, ಶಾಂತಿ ಮತ್ತು ಅಂತರ್ಗತ ಬೆಳವಣಿಗೆಯ ಸಂಕೇತವಾಗಿ ನಿಂತಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತದ ಕಡಲ ಮತ್ತು ವ್ಯಾಪಾರ ಉಪಕ್ರಮಗಳು ಈ ವಿಶಾಲ ದೃಷ್ಟಿಕೋನದ ಅವಿಭಾಜ್ಯ ಅಂಗಗಳಾಗಿವೆ ಎಂದು ಅವರು ಒತ್ತಿ ಹೇಳಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಇದು ವ್ಯಾಪಾರ ಮಾರ್ಗಗಳನ್ನು ಮರುವ್ಯಾಖ್ಯಾನಿಸುತ್ತದೆ ಮತ್ತು ಶುದ್ಧ ಇಂಧನ ಹಾಗೂ ಸ್ಮಾರ್ಟ್ ಲಾಜಿಸ್ಟಿಕ್ಸ್ ಅನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.

ಸಮಗ್ರಕಡಲ ಅಭಿವೃದ್ಧಿಯ ಮೇಲೆ ಭಾರತದ ಗಮನವನ್ನು ಕೇಂದ್ರೀಕರಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನ, ತರಬೇತಿ, ಮತ್ತು ಮೂಲಸೌಕರ್ಯಗಳ ಮೂಲಕ ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳು ಮತ್ತು ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳನ್ನು ಸಬಲೀಕರಣಗೊಳಿಸುವುದರ ಮೂಲಕ ಮಾತ್ರ ಈ ಗುರಿಯನ್ನು ಸಾಧಿಸಬಹುದು ಎಂದು ಹೇಳಿದರು. ಹವಾಮಾನ ಬದಲಾವಣೆ, ಪೂರೈಕೆ ಸರಪಳಿ ಅಡೆತಡೆಗಳು, ಆರ್ಥಿಕ ಅನಿಶ್ಚಿತತೆ, ಮತ್ತು ಕಡಲ ಭದ್ರತೆಯ ಸವಾಲುಗಳನ್ನು ಎದುರಿಸಲು ಸಾಮೂಹಿಕ ಕ್ರಿಯೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಶಾಂತಿ, ಪ್ರಗತಿ, ಮತ್ತು ಸಮೃದ್ಧಿಯ ಕಡೆಗೆ ಒಟ್ಟಾಗಿ ಸಾಗಲು ಹಾಗೂ ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಶ್ರೀ ಮೋದಿ ಎಲ್ಲಾ ಭಾಗವಹಿಸುವವರಿಗೆ ಕರೆ ನೀಡಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿಯವರು ಶೃಂಗಸಭೆಯ ಭಾಗವಾದ ಎಲ್ಲಾ ಗಣ್ಯರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್, ಶ್ರೀ ಶಂತನು ಠಾಕೂರ್ ಮತ್ತು ಶ್ರೀ ಕೀರ್ತಿ ವರ್ಧನ್ ಸಿಂಗ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಜಾಗತಿಕ ಕಡಲ ಸಿಇಒ ವೇದಿಕೆ ಯು ಇಂಡಿಯಾ ಮ್ಯಾರಿಟೈಮ್ ವೀಕ್ 2025ರ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಜಾಗತಿಕ ಕಡಲ ಕಂಪನಿಗಳ ಸಿಇಒಗಳು, ಪ್ರಮುಖ ಹೂಡಿಕೆದಾರರು, ನೀತಿ ನಿರೂಪಕರು, ನಾವೀನ್ಯಕಾರರು ಮತ್ತು ಅಂತಾರಾಷ್ಟ್ರೀಯ ಪಾಲುದಾರರನ್ನು ಒಟ್ಟುಗೂಡಿಸಿ ಜಾಗತಿಕ ಕಡಲ ಪರಿಸರ ವ್ಯವಸ್ಥೆಯ ಭವಿಷ್ಯದ ಬಗ್ಗೆ ಚರ್ಚಿಸಲು ವೇದಿಕೆ ಒದಗಿಸುತ್ತದೆ. ಈ ವೇದಿಕೆಯು ಸುಸ್ಥಿರ ಕಡಲ ಬೆಳವಣಿಗೆ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು, ಹಸಿರು ಹಡಗು ಸಂಚಾರ ಮತ್ತು ಸಮಗ್ರ ನೀಲಿ ಆರ್ಥಿಕತೆ  ತಂತ್ರಗಳ ಕುರಿತು ಸಂವಾದಕ್ಕೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಪ್ರಧಾನಮಂತ್ರಿಯವರ ಭಾಗವಹಿಸುವಿಕೆಯು, 'ಕಡಲ ಅಮೃತ ಕಾಲ ದೃಷ್ಟಿ 2047'ಕ್ಕೆ ಅನುಗುಣವಾಗಿ, ಮಹತ್ವಾಕಾಂಕ್ಷೆಯ, ಭವಿಷ್ಯ-ಆಧಾರಿತ ಕಡಲ ಪರಿವರ್ತನೆಗೆ ಅವರ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ದೀರ್ಘಕಾಲೀನ ದೃಷ್ಟಿಕೋನವು ನಾಲ್ಕು ಆಯಕಟ್ಟಿನ ಸ್ತಂಭಗಳ ಮೇಲೆ ನಿರ್ಮಿತವಾಗಿದೆ — ಬಂದರು-ನೇತೃತ್ವದ ಅಭಿವೃದ್ಧಿ, ಹಡಗು ಸಾಗಣೆ ಮತ್ತು ಹಡಗು ನಿರ್ಮಾಣ, ಅಡೆತಡೆಯಿಲ್ಲದ ಲಾಜಿಸ್ಟಿಕ್ಸ್, ಮತ್ತು ಕಡಲ ಕೌಶಲ್ಯ-ನಿರ್ಮಾಣ. ವಿಶ್ವದ ಪ್ರಮುಖ ಕಡಲ ಶಕ್ತಿಗಳಲ್ಲಿ ಭಾರತವನ್ನು ಸ್ಥಾಪಿಸುವುದು ಇದರ ಗುರಿಯಾಗಿದೆ. ಭಾರತ ಕಡಲ ವಾರ 2025, ಈ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರಲು ಭಾರತ ಸರ್ಕಾರದ ಪ್ರಮುಖ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹಡಗು ಸಾಗಣೆ, ಬಂದರುಗಳು, ಹಡಗು ನಿರ್ಮಾಣ, ಕ್ರೂಸ್ ಪ್ರವಾಸೋದ್ಯಮ, ಮತ್ತು ನೀಲಿ ಆರ್ಥಿಕತೆಯ ಹಣಕಾಸು ಕ್ಷೇತ್ರಗಳ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತದೆ.

"ಸಾಗರಗಳನ್ನು ಒಂದುಗೂಡಿಸುವುದು, ಒಂದೇ ಕಡಲ ದೃಷ್ಟಿಕೋನ" ಎಂಬ ವಿಷಯದ ಅಡಿಯಲ್ಲಿ ಅಕ್ಟೋಬರ್ 27 ರಿಂದ 31, 2025 ರವರೆಗೆ ಆಯೋಜಿಸಲಾಗಿರುವ IMW 2025, ಜಾಗತಿಕ ಕಡಲ ಕೇಂದ್ರವಾಗಿ ಮತ್ತು ನೀಲಿ ಆರ್ಥಿಕತೆಯಲ್ಲಿ ನಾಯಕನಾಗಿ ಹೊರಹೊಮ್ಮಲು ಭಾರತದ ಆಯಕಟ್ಟಿನ ಮಾರ್ಗಸೂಚಿಯನ್ನು ಪ್ರದರ್ಶಿಸುತ್ತದೆ. IMW 2025 ರಲ್ಲಿ 85ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿದ್ದು, 1,00,000ಕ್ಕೂ ಹೆಚ್ಚು ಪ್ರತಿನಿಧಿಗಳು, 500+ ಪ್ರದರ್ಶಕರು ಮತ್ತು 350+ ಅಂತಾರಾಷ್ಟ್ರೀಯ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ.

 

 

*****


(Release ID: 2184015) Visitor Counter : 9