ಕೃಷಿ ಸಚಿವಾಲಯ
azadi ka amrit mahotsav

₹38,000 ಕೋಟಿ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಧನ್ಯವಾದ ಅರ್ಪಣೆ 


ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಕೃಷಿ ವಲಯದ ಪ್ರಗತಿ ಪರಾಮರ್ಶೆ

"ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆ ಚೆನ್ನಾಗಿದ್ದು ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ": ಶ್ರೀ ಶಿವರಾಜ್ ಸಿಂಗ್ 

ಅನುಕೂಲಕರ ಹವಾಮಾನ ಮತ್ತು ನೀರಿನ ಸಾಕಷ್ಟು ಲಭ್ಯತೆಯಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ

Posted On: 28 OCT 2025 6:50PM by PIB Bengaluru

ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ₹38,000 ಕೋಟಿ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ನೀಡಿದ್ದಕ್ಕಾಗಿ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲಾ ರೈತರ ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.  ಅಲ್ಲದೇ, ಶ್ರೀ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಾಮರ್ಶನ ಸಭೆಯಲ್ಲಿ, 2025ರ ಮುಂಗಾರು ಋತುವಿನಲ್ಲಿ ಬಿತ್ತನೆ ಅತ್ಯಂತ ತೃಪ್ತಿಕರವಾಗಿದೆ ಎಂದು ತಿಳಿಸಲಾಯಿತು. ಭತ್ತದ ಒಟ್ಟು ಬಿತ್ತನೆ ಪ್ರದೇಶ 441.58 ಲಕ್ಷ ಹೆಕ್ಟೇರ್‌ಗಳಿಗೆ ತಲುಪಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿದೆ. ಎಣ್ಣೆಕಾಳುಗಳ ಬಿತ್ತನೆಯ ಒಟ್ಟು ಪ್ರದೇಶವು 190.13 ಲಕ್ಷ ಹೆಕ್ಟೇರ್‌‌ ಗಳಷ್ಟಿದ್ದು, ಸೋಯಾಬೀನ್ ಮತ್ತು ನೆಲಗಡಲೆ ಪ್ರಮುಖ ಬೆಳೆಗಳಾಗಿವೆ. ಅದೇ ರೀತಿ, ದ್ವಿದಳ ಧಾನ್ಯಗಳನ್ನು 120.41 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಇದು ಪೌಷ್ಟಿಕಾಂಶ ಭದ್ರತೆಯತ್ತ ಪ್ರಮುಖ ಹೆಜ್ಜೆಯಾಗಿದೆ. ಇನ್ನು ಕಬ್ಬು ಬೆಳೆಯುವ ಪ್ರದೇಶ ವ್ಯಾಪ್ತಿಯು 59.07 ಲಕ್ಷ ಹೆಕ್ಟೇರ್‌ಗಳಾಗಿದ್ದು, ಕಬ್ಬು ಬೆಳೆಗಾರರಿಗೆ ನೇರವಾಗಿ ಅನುಕೂಲಕರವಾಗಿದೆ.

ಈ ವರ್ಷದ ಮುಂಗಾರು ಅನುಕೂಲಕರವಾಗಿದ್ದು ಸಾಕಷ್ಟು ಮಳೆ ಮತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಹೆಚ್ಚಳದಿಂದ ಭಾರತದ ಕೃಷಿ ವಲಯಕ್ಕೆ ಗಮನಾರ್ಹ ಅನುಕೂಲಗಳಾಗಿವೆ. ಬಹುತೇಕ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸಾಮಾನ್ಯವಾಗಿದೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದು, ನೀರಾವರಿ ಅಗತ್ಯಗಳು ಸಮರ್ಪಕವಾಗಿ ದೊರೆಯುತ್ತಿದ್ದು ಮುಂಗಾರು ಬೆಳೆಗಳ ಸಕಾಲಿಕ ಬಿತ್ತನೆಗೆ ಅನುವು ಮಾಡಿಕೊಟ್ಟಿದೆ ಎಂದು ಕೃಷಿ ಪ್ರಗತಿಯ ಸಾಪ್ತಾಹಿಕ ಪರಿಶೀಲನೆಯ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಗಮನಿಸಿದರು. ಸ್ಥಿರವಾದ ಮಣ್ಣಿನ ತೇವಾಂಶವು ಬೆಳೆಯ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಹಿಂಗಾರು ಬೆಳೆಗಳ ಬಿತ್ತನೆಯ ಪ್ರದೇಶದ ವಿಸ್ತರಣೆಗೆ ಬೆಂಬಲವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ನೀರಾವರಿ ಯೋಜನೆಗಳು ಮತ್ತು ಜಲಾಶಯಗಳಿಗೆ ನೀರಿನ ಲಭ್ಯತೆಯಲ್ಲಿ ಸುಧಾರಣೆಯು ನೀರಾವರಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ವೃದ್ಧಿಗೆ ಅನುವು ಮಾಡಿಕೊಟ್ಟಿದೆ ಎಂಬ ಬಗ್ಗೆ ಕೃಷಿ ಆಯುಕ್ತ ಡಾ. ಪಿ.ಕೆ. ಸಿಂಗ್ ಅವರು ವರದಿಯನ್ನು ಮಂಡಿಸಿದ್ದಾರೆ.  ದೇಶಾದ್ಯಂತ 161 ಜಲಾಶಯಗಳಲ್ಲಿನ ಒಟ್ಟು ನೇರ ಸಂಗ್ರಹ 165.58 ಶತಕೋಟಿ ಘನ ಮೀಟರ್ (BCM) ರಷ್ಟಿದ್ದು, ಇದು ಕಳೆದ ವರ್ಷದ ಮಟ್ಟದ ಶೇ. 104.30 ಮತ್ತು ಹತ್ತು ವರ್ಷಗಳ ಸರಾಸರಿಯ ಶೇ. 115.95 ಆಗಿದೆ. 

ಕೆಲವು ಪ್ರದೇಶಗಳಲ್ಲಿ ಮುಂಗಾರು ಬೆಳೆಗಳ ಕೊಯ್ಲು ಪ್ರಾರಂಭವಾಗಿದ್ದು, ಒಟ್ಟು ಖಾರಿಫ್ ಪ್ರದೇಶದ ಸುಮಾರು 27% ರಷ್ಟು ಭಾಗದಲ್ಲಿ ಕಟಾವು ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಹಿಂಗಾರು ಬಿತ್ತನೆಯ ಆರಂಭಿಕ ಹಂತಗಳೂ ಶುರುವಾಗಿವೆ. ದೇಶಾದ್ಯಂತ ಈರುಳ್ಳಿ, ಆಲೂಗಡ್ಡೆ ಮತ್ತು ಟೊಮೆಟೊ ಬೆಳೆಗಳ ಸ್ಥಿತಿ ತೃಪ್ತಿಕರವಾಗಿದ್ದು, ಪ್ರಸ್ತುತ ಅಕ್ಕಿ ಮತ್ತು ಗೋಧಿಯ ದಾಸ್ತಾನು ಬಫರ್ ಮಿತಿಗಿಂತಲೂ ಹೆಚ್ಚಿದೆ ಎಂದು ಸಭೆಗೆ ತಿಳಿಸಲಾಯಿತು.

ಸಕಾಲಿಕ ಮತ್ತು ಅನುಕೂಲಕರ ಮುಂಗಾರು, ಸಾಕಷ್ಟು ಜಲಾಶಯ ಸಂಪನ್ಮೂಲಗಳು, ದಕ್ಷ ಯೋಜನೆ ಮತ್ತು ಡಿಜಿಟಲ್ ನಾವಿನ್ಯತೆಗಳೊಂದಿಗೆ ದೇಶದ ಕೃಷಿ ವಲಯವು ದಾಖಲೆಯ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಪಾದಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ರೈತ ಸ್ನೇಹಿ ನೀತಿಗಳಿಂದ ಸಾಧ್ಯವಾಗಿರುವ ಈ ಸಾಧನೆಗಳು ಕೃಷಿಕರ ಜೀವನೋಪಾಯವನ್ನು ಸುಧಾರಿಸುತ್ತಿವೆ ಮತ್ತು ರಾಷ್ಟ್ರದ ಆಹಾರ ಭದ್ರತೆಯನ್ನು ಬಲಪಡಿಸುತ್ತಿವೆ ಎಂದು ಅವರು ಹೇಳಿದ್ದಾರೆ. 

ಮುಂಬರುವ ಹಿಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಹೆಚ್ಚಿನ ಬಿತ್ತನೆ ಮತ್ತು ದಾಖಲೆಯ ಉತ್ಪಾದಕತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರಾಜ್ಯಗಳ ಸಮನ್ವಯದೊಂದಿಗೆ ಎಲ್ಲಾ‌ ಅಗತ್ಯ ಬೆಂಬಲವನ್ನು ನೀಡಲಿದೆ.

 

*****


(Release ID: 2183579) Visitor Counter : 5