ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೋಜ್‌ಗಾರ್ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ವೀಡಿಯೊ ಕಾನ್ಫರೆನ್ಸ್ ಭಾಷಣ

Posted On: 24 OCT 2025 12:53PM by PIB Bengaluru

ಸ್ನೇಹಿತರೆ,

ಈ ಬಾರಿ ಬೆಳಕಿನ ಹಬ್ಬ ದೀಪಾವಳಿ ನಿಮ್ಮೆಲ್ಲರ ಜೀವನದಲ್ಲಿ ಹೊಸ ಬೆಳಕು ತಂದಿದೆ. ಹಬ್ಬದ ಆಚರಣೆಯ ನಡುವೆ, ಅಂದರೆ ಆಚರಣೆಯ 2 ಪಟ್ಟು ಸಂತೋಷ ಮತ್ತು ಯಶಸ್ಸಿನ ನಡುವೆ, ಕಾಯಂ ಉದ್ಯೋಗದ ನೇಮಕಾತಿ ಪತ್ರ ಪಡೆದಿರುವ ಈ ಸಂತೋಷವನ್ನು ಇಂದು ದೇಶದ 51 ಸಾವಿರಕ್ಕೂ ಹೆಚ್ಚು ಯುವಕರು ಸ್ವೀಕರಿಸಿದ್ದಾರೆ. ನಿಮ್ಮ ಎಲ್ಲಾ ಕುಟುಂಬಗಳಲ್ಲಿ ಎಷ್ಟು ಸಂತೋಷ ತುಂಬಿದೆ ಎಂಬುದು ನನಗೆ ತಿಳಿದಿದೆ. ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜೀವನದಲ್ಲಿ ಈ ಹೊಸ ಆರಂಭಕ್ಕೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೆ,

ನಿಮ್ಮ ಈ ಉತ್ಸಾಹ, ಕಠಿಣ ಪರಿಶ್ರಮದ ಸಾಮರ್ಥ್ಯ, ನಿಮ್ಮ ಕನಸುಗಳು ನನಸಾಗುವುದರಿಂದ ಹುಟ್ಟಿದ ನಿಮ್ಮ ಆತ್ಮವಿಶ್ವಾಸ ಮತ್ತು ನಿಮ್ಮ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ನಿಮ್ಮ ಉತ್ಸಾಹ ಎಲ್ಲವೂ ಸೇರಿದಾಗ, ನಿಮ್ಮ ಯಶಸ್ಸು ವೈಯಕ್ತಿಕವಾಗಿರುವುದಿಲ್ಲ, ಅದು ರಾಷ್ಟ್ರದ ಯಶಸ್ಸಾಗುತ್ತದೆ. ಇಂದು ನಿಮಗೆ ಸರ್ಕಾರಿ ನೇಮಕಾತಿ ಪತ್ರ ಸಿಕ್ಕಿರುವುದು ಮಾತ್ರವಲ್ಲ, ರಾಷ್ಟ್ರದ ಸೇವೆಯಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವ ಅವಕಾಶವೂ ಸಿಕ್ಕಿದೆ. ನೀವು ಈ ಮನೋಭಾವದಿಂದ, ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಕೆಲಸ ಮಾಡುತ್ತೀರಿ. ಭವಿಷ್ಯದ ಭಾರತಕ್ಕಾಗಿ ಉತ್ತಮ ವ್ಯವಸ್ಥೆಗಳನ್ನು ಸೃಷ್ಟಿಸುವಲ್ಲಿ ನೀವು ಪಾತ್ರ ವಹಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ನಮ್ಮ ಮಂತ್ರ 'ನಾಗರಿಕ್ ದೇವೋ ಭವ:' ನಿಮಗೂ ತಿಳಿದಿದೆ. ಸೇವಾ ಮನೋಭಾವ ಮತ್ತು ಸಮರ್ಪಣಾ ಮನೋಭಾವದಿಂದ, ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ನಾವು ಹೇಗೆ ಉಪಯುಕ್ತವಾಗಬಹುದು ಎಂಬುದನ್ನು ನಾವು ಎಂದಿಗೂ ಮರೆಯಬಾರದು.

ಸ್ನೇಹಿತರೆ,

ಕಳೆದ 11 ವರ್ಷಗಳಿಂದ ದೇಶವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ. ಇದರಲ್ಲಿ ನಮ್ಮ ಯುವಕರ, ನಿಮ್ಮೆಲ್ಲರ ಪಾತ್ರ ದೊಡ್ಡದು. ಆದ್ದರಿಂದ, ಯುವಜನರ ಸಬಲೀಕರಣವು ಬಿಜೆಪಿ-ಎನ್‌ಡಿಎ ಸರ್ಕಾರದ ಆದ್ಯತೆಯಾಗಿದೆ. ಇಂದು ಉದ್ಯೋಗ ಮೇಳಗಳು ಯುವಕರ ಕನಸುಗಳನ್ನು ನನಸಾಗಿಸುವ ಮಾಧ್ಯಮಗಳಾಗಿವೆ. ಈ ಉದ್ಯೋಗ ಮೇಳಗಳ ಮೂಲಕ ಇತ್ತೀಚಿನ ದಿನಗಳಲ್ಲಿ 11 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಈ ಪ್ರಯತ್ನಗಳು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗಿರದೆ, ನಾವು ದೇಶಾದ್ಯಂತ 'ಪಿಎಂ ವಿಕಸಿತ ಭಾರತ ರೋಜ್‌ಗಾರ್ ಯೋಜನೆ'ಯನ್ನು ಸಹ ಪ್ರಾರಂಭಿಸಿದ್ದೇವೆ. ಇದರ ಅಡಿ, 3.5 ಕೋಟಿ ಯುವಕರಿಗೆ ಉದ್ಯೋಗ ನೀಡುವ ಗುರಿ ನಿಗದಿಪಡಿಸಲಾಗಿದೆ.

ಸ್ನೇಹಿತರೆ,

ಇಂದು ಒಂದೆಡೆ, ಕೌಶಲ್ಯ ಭಾರತ ಮಿಷನ್‌ನಂತಹ ಅಭಿಯಾನಗಳ ಮೂಲಕ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ, ಮತ್ತೊಂದೆಡೆ, ರಾಷ್ಟ್ರೀಯ ವೃತ್ತಿ ಸೇವಾ ವೇದಿಕೆಯಂತಹ ಉಪಕ್ರಮಗಳು ಅವರನ್ನು ಹೊಸ ಅವಕಾಶಗಳಿಗೆ ಸಂಪರ್ಕಿಸುತ್ತಿವೆ. ಇದರ ಮೂಲಕ 7 ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳ ಬಗ್ಗೆ, ಅಂದರೆ 7 ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳ ಬಗ್ಗೆ ಯುವಕರಿಗೆ ಮಾಹಿತಿ ನೀಡಲಾಗಿದೆ. ಈ 7 ಕೋಟಿ ಖಾಲಿ ಹುದ್ದೆಗಳು, ಇದು ಸಣ್ಣ ಅಂಕಿಅಂಶವೇನಲ್ಲ.

ಸ್ನೇಹಿತರೆ,

ಯುವ ಜನರಿಗೆ ಮತ್ತೊಂದು ಪ್ರಮುಖ ಹೆಜ್ಜೆ "ಪ್ರತಿಭಾ ಸೇತು ಪೋರ್ಟಲ್"! ಯುಪಿಎಸ್‌ಸಿ ಅಂತಿಮ ಹಂತಕ್ಕೆ ತಲುಪಿದ, ಆದರೆ ಆಯ್ಕೆಯಾಗದ ಅಭ್ಯರ್ಥಿಗಳ ಕಠಿಣ ಪರಿಶ್ರಮ ಇನ್ನು ಮುಂದೆ ವ್ಯರ್ಥವಾಗುವುದಿಲ್ಲ. ಆದ್ದರಿಂದ, ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಈ ಪೋರ್ಟಲ್ ಮೂಲಕ ಆ ಯುವಕರನ್ನು ಆಹ್ವಾನಿಸಬಹುದು, ಸಂದರ್ಶನಗಳನ್ನು ನಡೆಸಬಹುದು ಮತ್ತು ಅವಕಾಶಗಳನ್ನು ಸಹ ಒದಗಿಸಬಹುದು. ಯುವ ಪ್ರತಿಭೆಯ ಸರಿಯಾದ ಬಳಕೆಯು ಭಾರತದ ಯುವ ಶಕ್ತಿಯನ್ನು ವಿಶ್ವದ ಮುಂದೆ ತರುತ್ತದೆ.

ಸ್ನೇಹಿತರೆ,

ಈ ಬಾರಿ, ಜಿಎಸ್ಟಿ ಉಳಿತಾಯ ಹಬ್ಬವು ಈ ಹಬ್ಬದ ಋತುವಿಗೆ ಹೊಸ ಚಿತ್ತಾರ ಮೂಡಿಸಿದೆ. ದೇಶದಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಮಾಡುವ ಮೂಲಕ ಸಾಧಿಸಲಾದ ಮಹತ್ವದ ಸುಧಾರಣೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಇದರ ಪರಿಣಾಮವು ಜನರ ಉಳಿತಾಯಕ್ಕೆ ಮಾತ್ರ ಸೀಮಿತವಾಗದೆ, ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳಿಂದಾಗಿ ಉದ್ಯೋಗಾವಕಾಶಗಳು ಸಹ ವಿಸ್ತರಿಸುತ್ತಿವೆ. ದಿನನಿತ್ಯದ ವಸ್ತುಗಳು ಅಗ್ಗವಾದಾಗ, ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದಾಗ, ಉತ್ಪಾದನೆ ಮತ್ತು ಪೂರೈಕೆ ಸರಪಳಿಯೂ ಸಹ ವೇಗ ಪಡೆಯುತ್ತದೆ. ಕಾರ್ಖಾನೆಗಳು ಹೆಚ್ಚು ಉತ್ಪಾದಿಸಿದಾಗ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದಕ್ಕಾಗಿಯೇ, ಈ ಜಿಎಸ್ಟಿ ಉಳಿತಾಯ ಹಬ್ಬವು ಉದ್ಯೋಗ ಹಬ್ಬವಾಗಿ ಬದಲಾಗುತ್ತಿದೆ. ಧನ್ ತೇರಸ್ ಮತ್ತು ದೀಪಾವಳಿಯಂದು ದಾಖಲೆಯ ಮಾರಾಟ ನಡೆದ ರೀತಿ, ಹೊಸ ದಾಖಲೆಗಳು ಸೃಷ್ಟಿಯಾಗಿವೆ. ಹಳೆಯ ದಾಖಲೆಗಳನ್ನು ಮುರಿಯಲಾಗಿದೆ ಎಂಬುದನ್ನು ನಾವು ಇದೀಗ ನೋಡಿದ್ದೇವೆ, ಇದು ಜಿಎಸ್ಟಿ ಸುಧಾರಣೆಗಳು ದೇಶದ ಆರ್ಥಿಕತೆಗೆ ಹೇಗೆ ಹೊಸ ಉತ್ತೇಜನ ನೀಡಿವೆ ಎಂಬುದನ್ನು ತೋರಿಸುತ್ತಿದೆ. ಎಂಎಸ್ಎಂಇ ವಲಯ ಮತ್ತು ಚಿಲ್ಲರೆ ಅಥವಾ ಬಿಡಿ ವ್ಯಾಪಾರದಲ್ಲಿ ಈ ಸುಧಾರಣೆಯ ಸಕಾರಾತ್ಮಕ ಪರಿಣಾಮವನ್ನು ನಾವು ನೋಡುತ್ತಿದ್ದೇವೆ. ಇದರಿಂದಾಗಿ, ಉತ್ಪಾದನೆ, ಸರಕು ಸಾಗಣೆ, ಪ್ಯಾಕೇಜಿಂಗ್ ಮತ್ತು ವಿತರಣೆಯಂತಹ ಕ್ಷೇತ್ರಗಳಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಇಂದು ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಭಾರತದ ಯುವ ಶಕ್ತಿಯನ್ನು ಭಾರತದ ದೊಡ್ಡ ಶಕ್ತಿ ಎಂದು ನಾವು ಪರಿಗಣಿಸಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಈ ದೃಷ್ಟಿಕೋನ ಮತ್ತು ವಿಶ್ವಾಸದೊಂದಿಗೆ ಮುಂದುವರಿಯುತ್ತಿದ್ದೇವೆ. ನಮ್ಮ ವಿದೇಶಾಂಗ ನೀತಿಯು ಸಹ ಭಾರತದ ಯುವಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ನಮ್ಮ ರಾಜತಾಂತ್ರಿಕ ಮಾತುಕತೆಗಳು, ನಮ್ಮ ಜಾಗತಿಕ ಒಪ್ಪಂದಗಳು, ಯುವಕರ ತರಬೇತಿ, ಕೌಶಲ್ಯವರ್ಧನೆ ಮತ್ತು ಉದ್ಯೋಗ ಸೃಷ್ಟಿಯನ್ನು ಸಹ ಇವುಗಳಲ್ಲಿ ಸೇರಿಸಲಾಗಿದೆ. ಇತ್ತೀಚೆಗೆ ಬ್ರಿಟಿಷ್ ಪ್ರಧಾನ ಮಂತ್ರಿ ಭಾರತಕ್ಕೆ ಭೇಟಿ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ, ಭಾರತ ಮತ್ತು ಬ್ರಿಟನ್ ಕೃತಕ ಬುದ್ಧಿಮತ್ತೆ, ಹಣಕಾಸು ತಂತ್ರಜ್ಞಾನ ಮತ್ತು ಸ್ವಚ್ಛ ಇಂಧನದಂತಹ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು ಒಪ್ಪಿಕೊಂಡಿವೆ. ಕೆಲವು ತಿಂಗಳ ಹಿಂದೆ ಭಾರತ ಮತ್ತು ಬ್ರಿಟನ್ ನಡುವೆ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಅದೇ ರೀತಿ, ಹಲವಾರು ಐರೋಪ್ಯ ದೇಶಗಳೊಂದಿಗೆ ಹೂಡಿಕೆ ಪಾಲುದಾರಿಕೆ ಸ್ಥಾಪಿಸಲಾಗಿದೆ. ಇವು ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಬ್ರೆಜಿಲ್, ಸಿಂಗಾಪುರ್, ಕೊರಿಯಾ ಮತ್ತು ಕೆನಡಾ ಮುಂತಾದ ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇವು ಹೂಡಿಕೆಯನ್ನು ಹೆಚ್ಚಿಸುತ್ತವೆ, ಸ್ಟಾರ್ಟಪ್‌ಗಳು ಮತ್ತು ಎಂಎಸ್ಎಂಇಗಳನ್ನು ಬೆಂಬಲಿಸುತ್ತವೆ, ರಫ್ತುಗಳನ್ನು ಹೆಚ್ಚಿಸುತ್ತವೆ ಮತ್ತು ಯುವ ಜನರಿಗೆ ಜಾಗತಿಕ ಯೋಜನೆಗಳಲ್ಲಿ ಕೆಲಸ ಮಾಡಲು ಹೊಸ ಅವಕಾಶಗಳನ್ನು ಒದಗಿಸುತ್ತವೆ.

ಸ್ನೇಹಿತರೆ,

ಇಂದು ನಾವು ದೇಶದ ಯಶಸ್ಸು ಮತ್ತು ದೃಷ್ಟಿಕೋನಗಳ ಬಗ್ಗೆ ಮಾತನಾಡುತ್ತಿದ್ದೇವೆ, ಮುಂಬರುವ ದಿನಗಳಲ್ಲಿ, ಅವುಗಳಲ್ಲಿ ನಿಮ್ಮ ಪಾತ್ರವೂ ದೊಡ್ಡದಾಗಿರುತ್ತದೆ. 'ಅಭಿವೃದ್ಧಿ ಹೊಂದಿದ ಭಾರತ'ದ ಗುರಿಯತ್ತ ನಾವು ನಿರಂತರವಾಗಿ ಕೆಲಸ ಮಾಡಬೇಕು. ನಿಮ್ಮಂತಹ ಯುವ ಕರ್ಮಯೋಗಿಗಳು ಈ ಸಂಕಲ್ಪವನ್ನು ಸಿದ್ಧಿಗೆ(ಸಂಕಲ್ಪ ಫಲಪ್ರದವಾಗುವಂತೆ) ತರುವವರು. ಐಗಾಟ್ ಕರ್ಮಯೋಗಿ ಭಾರತ್ ವೇದಿಕೆಯು ಈ ಪ್ರಯಾಣದಲ್ಲಿ ನಿಮಗೆ ಅಪಾರ ಸಹಾಯ ಮಾಡುತ್ತದೆ. ಸುಮಾರು 1.5 ಕೋಟಿ ಉದ್ಯೋಗಿಗಳು ಈ ವೇದಿಕೆಗೆ ಸೇರುತ್ತಿದ್ದಾರೆ, ಅವರು ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ ಮತ್ತು ಕೌಶಲ್ಯ ಪರಿಷ್ಕರಣೆಗೆ ಒಳಗಾಗುತ್ತಿದ್ದಾರೆ. ನೀವು ಸಹ ಅವರೊಂದಿಗೆ ಸೇರಿಕೊಂಡರೆ, ನಿಮ್ಮಲ್ಲಿ ಹೊಸ ಕೆಲಸದ ಸಂಸ್ಕೃತಿ ಮತ್ತು ಉತ್ತಮ ಆಡಳಿತದ ಪ್ರಜ್ಞೆ ಬೆಳೆಯುತ್ತದೆ. ನಿಮ್ಮ ಪ್ರಯತ್ನಗಳಿಂದ ಮಾತ್ರ ಭಾರತದ ಭವಿಷ್ಯವು ರೂಪುಗೊಳ್ಳುತ್ತದೆ, ದೇಶವಾಸಿಗಳ ಕನಸುಗಳು ನನಸಾಗುತ್ತವೆ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ತುಂಬು ಧನ್ಯವಾದಗಳು.

 

****

 


(Release ID: 2182580) Visitor Counter : 4