ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಂದ ರೈಲ್ವೆ ಮಂಡಳಿಯ ವಾರ್ ರೂಂನಲ್ಲಿ ಹಬ್ಬದ ಋತುವಿನ ಪ್ರಯಾಣಿಕರ ಓಡಾಟದ ಪರಿಶೀಲನೆ; ದೇಶಾದ್ಯಂತ ನೈಜ-ಸಮಯದ ಸಮನ್ವಯ ಮತ್ತು ಪ್ರಮುಖ ನಿಲ್ದಾಣಗಳಲ್ಲಿ ಮಿನಿ ನಿಯಂತ್ರಣ ಕೊಠಡಿಗಳ ಸ್ಥಾಪನೆಗೆ ಒತ್ತು


ಪ್ರತಿ ನಿಲ್ದಾಣದ ಸ್ಥಿತಿ, ಹೆಚ್ಚುವರಿ ರೈಲುಗಳ ಅವಶ್ಯಕತೆ ಮತ್ತು ಇತರ ಕಾರ್ಯಾಚರಣೆಯ ಅಗತ್ಯಗಳ ಕುರಿತು ದೇಶಾದ್ಯಂತ ನೈಜ-ಸಮಯದ ಸಮನ್ವಯಕ್ಕೆ ನಿಯಂತ್ರಣ ಕೊಠಡಿಗಳು ಅನುವು ಮಾಡಿಕೊಡುತ್ತವೆ: ಅಶ್ವಿನಿ ವೈಷ್ಣವ್

ಶ್ರೀ ರವನೀತ್ ಸಿಂಗ್ ಬಿಟ್ಟು ಅವರಿಂದ ಅಂಬಾಲಾ ಕಂಟೋನ್ಮೆಂಟ್ ನಿಲ್ದಾಣಕ್ಕೆ ಭೇಟಿ ಮತ್ತು ಭಾರತೀಯ ರೈಲ್ವೆಯ ವಿಶೇಷ ಹಬ್ಬದ ಋತುವಿನ ವ್ಯವಸ್ಥೆಗಳ ಪರಿಶೀಲನೆ

ಛಠ್ ಹಬ್ಬದ ದಟ್ಟಣೆಯನ್ನು ನಿರ್ವಹಿಸಲು ಮುಂದಿನ ನಾಲ್ಕು ದಿನಗಳಲ್ಲಿ 1,205 ವಿಶೇಷ ರೈಲುಗಳು; ಅಕ್ಟೋಬರ್ ಮತ್ತು ನವೆಂಬರ್ 2025ರಲ್ಲಿ ಬಿಹಾರಕ್ಕಾಗಿ 2,220 ವಿಶೇಷ ರೈಲುಗಳು

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ತಕ್ಷಣದ ನೆರವು, ಆಸ್ಪತ್ರೆಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತದೆ

ಹಬ್ಬದ ದಟ್ಟಣೆಯ ಸಮಯದಲ್ಲಿ ಸುಗಮ ಪ್ರಯಾಣದ ಅನುಭವಕ್ಕಾಗಿ ರೈಲ್ವೆಯ ವಿಶೇಷ ವ್ಯವಸ್ಥೆಗಳನ್ನು ಶ್ಲಾಘಿಸಿದ ಪ್ರಯಾಣಿಕರು

Posted On: 23 OCT 2025 8:18PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯಲ್ಲಿರುವ ರೈಲ್ವೆ ಮಂಡಳಿಯ ವಾರ್ ರೂಂಗೆ  ಭೇಟಿ ನೀಡಿ, ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಓಡಾಟದ ಕುರಿತು ಪರಿಶೀಲನೆ ನಡೆಸಿದರು. ವಿಭಾಗ , ವಲಯ  ಮತ್ತು ರೈಲ್ವೆ ಮಂಡಳಿ ಮಟ್ಟದಲ್ಲಿ ವಾರ್ ರೂಂಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ವೈಷ್ಣವ್ ತಿಳಿಸಿದರು. ಮಂಡಳಿಯು ಎಲ್ಲಾ ಸ್ಥಳಗಳಿಂದ ಲೈವ್ ಫೀಡ್‌ಗಳನ್ನು ಸ್ವೀಕರಿಸುತ್ತದೆ ಎಂದು ಅವರು ಹೇಳಿದರು. ಪ್ರಮುಖ ನಿಲ್ದಾಣಗಳಲ್ಲಿ ಸಣ್ಣ ನಿಯಂತ್ರಣ ಕೊಠಡಿಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಸೇರಿಸಿದರು. ಈ ಮೇಲ್ವಿಚಾರಣಾ ವ್ಯವಸ್ಥೆಯು ದೇಶದಾದ್ಯಂತ ಪ್ರತಿ ನಿಲ್ದಾಣದ ಸ್ಥಿತಿ, ಹೆಚ್ಚುವರಿ ರೈಲುಗಳ ಅವಶ್ಯಕತೆ ಮತ್ತು ಇತರ ಕಾರ್ಯಾಚರಣೆಯ ಅಗತ್ಯಗಳ ಕುರಿತು ರಿಯಲ್‌ ಟೈಮ್‌ ಸಮನ್ವಯಕ್ಕೆ ಅನುವು ಮಾಡಿಕೊಡುತ್ತದೆ.

ನಿಲ್ದಾಣಗಳಲ್ಲಿ ಪ್ರಯಾಣಿಕರ ವ್ಯವಸ್ಥಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು 'ಹೋಲ್ಡಿಂಗ್' ಮತ್ತು 'ವೇಯ್ಟಿಂಗ್' ಪ್ರದೇಶಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಹಬ್ಬದ ಸಂದರ್ಭದ ದಟ್ಟಣೆಯನ್ನು ನಿರ್ವಹಿಸಲು ಸುಮಾರು 10,700 ಕಾಯ್ದಿರಿಸಿದ ಮತ್ತು 3,000 ಕಾಯ್ದಿರಿಸದ  ರೈಲುಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ ಎರಡು ವರ್ಷಗಳ ದತ್ತಾಂಶ ವಿಶ್ಲೇಷಣೆಯ ಮೂಲಕ ಅಗತ್ಯವಿರುವ ವಿಶೇಷ ರೈಲುಗಳ ನಿಖರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಈ ದತ್ತಾಂಶವನ್ನು ಒಂದು ಮಾದರಿಯಲ್ಲಿ ಬಳಸಿಕೊಂಡು ಪ್ರತಿ ಗಮ್ಯಸ್ಥಾನದ ಬೇಡಿಕೆಯನ್ನು ನಿರ್ಣಯಿಸಲಾಗುತ್ತದೆ ಎಂದು ಅವರು ಹೇಳಿದರು. ಪ್ರಯಾಣಿಕರ ದಟ್ಟಣೆಯ ಮೊದಲ ಗರಿಷ್ಠ ಹಂತವು ಅಕ್ಟೋಬರ್ 17 ರಿಂದ 20 ರವರೆಗೆ ಕಂಡುಬಂದಿದ್ದು, ಅಕ್ಟೋಬರ್ 18 ಮತ್ತು 19 ರಂದು ಅತಿ ಹೆಚ್ಚು ಜನರು ಪ್ರಯಾಣಿಸಿದ್ದಾರೆ. ಎರಡನೇ ಗರಿಷ್ಠ ಹಂತವು ಅಕ್ಟೋಬರ್ 22 ಮತ್ತು 24ರ ನಡುವೆ ನಿರೀಕ್ಷಿಸಲಾಗಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು.

ನವದೆಹಲಿ ನಿಲ್ದಾಣದಲ್ಲಿನ ಶಾಶ್ವತ 'ಹೋಲ್ಡಿಂಗ್ ಏರಿಯಾ' ಈಗ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತಿದೆ. ಇದು 7,000 ಕ್ಕೂ ಹೆಚ್ಚು ಜನರ ಸಾಮರ್ಥ್ಯ, ಪುರುಷರಿಗಾಗಿ 150 ಮತ್ತು ಮಹಿಳೆಯರಿಗಾಗಿ 150 ಶೌಚಾಲಯಗಳು, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು, ಟಿಕೆಟ್ ಕೌಂಟರ್‌ ಗಳು ಮತ್ತು ಉಚಿತ ಆರ್‌.ಒ. ನೀರನ್ನು ಹೊಂದಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಕೇಂದ್ರ ರೈಲ್ವೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾದ ಶ್ರೀ ರವನೀತ್ ಸಿಂಗ್ ಬಿಟ್ಟು ಅವರು ಅಂಬಾಲಾ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಹಬ್ಬದ ಋತುವಿನಲ್ಲಿ ಭಾರತೀಯ ರೈಲ್ವೆಯು ಮಾಡಿರುವ ವಿಶೇಷ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ನವೀಕರಿಸಿದ ಸೇವೆಗಳು ಮತ್ತು ಸೌಲಭ್ಯಗಳೊಂದಿಗೆ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಿದ ಭಾರತೀಯ ರೈಲ್ವೆ

ಅಕ್ಟೋಬರ್ 22 ಮತ್ತು 24ರ ನಡುವೆ ಪ್ರಯಾಣಿಕರ ದಟ್ಟಣೆ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಯಿದ್ದು, ಛಠ್ ಪೂಜೆಗೂ ಮುನ್ನ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ರೈಲ್ವೆಯು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಛತ್‌ ಹಬ್ಬದ ದಟ್ಟಣೆಯನ್ನು ನಿಭಾಯಿಸಲು, ನಿಯಮಿತ ರೈಲು ಸೇವೆಗಳ ಜೊತೆಗೆ, ಮುಂದಿನ ನಾಲ್ಕು ದಿನಗಳಲ್ಲಿ 1,205 ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ.

ದಿನಾಂಕ 21.10.2025 ರಂದು, ದೆಹಲಿ ಪ್ರದೇಶದ 6 ಪ್ರಮುಖ ನಿಲ್ದಾಣಗಳಾದ - ನವದೆಹಲಿ, ದೆಹಲಿ ಜಂಕ್ಷನ್, ಆನಂದ್ ವಿಹಾರ್ ಟರ್ಮಿನಲ್, ಹಜರತ್ ನಿಜಾಮುದ್ದೀನ್, ಶಕೂರ್‌ ಬಸ್ತಿ ಮತ್ತು ಘಾಜಿಯಾಬಾದ್‌ ನಿಂದ 1,69,986 ಕಾಯ್ದಿರಿಸದ ಹೊರ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇದು ಕಳೆದ ವರ್ಷದ ಇದೇ ದಿನಕ್ಕೆ (ದೀಪಾವಳಿಯ ಮರುದಿನ 01.11.2024) ಹೋಲಿಸಿದರೆ 5.62% ಹೆಚ್ಚಳವಾಗಿದೆ. ಅದೇ ರೀತಿ, ದಿನಾಂಕ 22.10.2025 ರಂದು, ದೆಹಲಿ ಪ್ರದೇಶದ 6 ಪ್ರಮುಖ ನಿಲ್ದಾಣಗಳಿಂದ 1,71,753 ಕಾಯ್ದಿರಿಸದ ಹೊರ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇದು ಕಳೆದ ವರ್ಷದ ಇದೇ ದಿನಕ್ಕೆ (ದೀಪಾವಳಿಯ 2ನೇ ದಿನ 02.11.2024) ಹೋಲಿಸಿದರೆ 7.01% ಹೆಚ್ಚಳವಾಗಿದೆ.

ಇಂದು, ದೆಹಲಿ ಪ್ರದೇಶದ ಪ್ರಮುಖ ನಿಲ್ದಾಣಗಳಿಂದ 30 ವಿಶೇಷ ರೈಲುಗಳು ಹೊರಡಲಿದ್ದು, 6 ವಿಶೇಷ ರೈಲುಗಳು ಸಂಚರಿಸಲಿವೆ. ಅಕ್ಟೋಬರ್ 24 ರಂದು, ದೆಹಲಿ ಪ್ರದೇಶದ ಪ್ರಮುಖ ನಿಲ್ದಾಣಗಳಿಂದ 17 ವಿಶೇಷ ರೈಲುಗಳು ಸಂಚರಿಸಲಿವೆ.

ಸೂಕ್ಷ್ಮವಾದ ಯೋಜನೆ, ವರ್ಧಿತ ಪ್ರಯಾಣಿಕರ ಸೇವೆಗಳು, ಹಾಗೂ ಅನುಕೂಲತೆ ಮತ್ತು ಕಾಳಜಿಯ ಮೇಲೆ ಹೆಚ್ಚು ಗಮನಹರಿಸುವ ಮೂಲಕ, ಭಾರತೀಯ ರೈಲ್ವೆಯು ಅಡೆತಡೆಯಿಲ್ಲದ ಪ್ರಯಾಣದ ಅನುಭವವನ್ನು ನೀಡಲು ಬದ್ಧವಾಗಿದೆ. ಪ್ರಯಾಣದ ಏರಿಕೆಯನ್ನು ನಿಭಾಯಿಸಲು, ವಿಶೇಷ ರೈಲುಗಳ ದೃಢವಾದ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 30, 2025 ರವರೆಗೆ ಭಾರತದಾದ್ಯಂತ ಸಂಚರಿಸಲಿರುವ 12,000 ಕ್ಕೂ ಹೆಚ್ಚು ವಿಶೇಷ ರೈಲುಗಳ ಪೈಕಿ, ಹಬ್ಬದ ಪ್ರಯಾಣದ ಬೇಡಿಕೆಯನ್ನು ಪೂರೈಸಲು 2,220 ರೈಲುಗಳು ಬಿಹಾರಕ್ಕೆ ಸೇವೆ ಸಲ್ಲಿಸಲಿವೆ.

ಬಿಹಾರಕ್ಕೆ ಪ್ರಯಾಣಿಸುತ್ತಿರುವ ಪ್ರಯಾಣಿಕರು ರೈಲ್ವೆಯು ಮಾಡಿರುವ ವ್ಯವಸ್ಥೆಗಳ ಬಗ್ಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷ ರೈಲುಗಳು, ಸ್ವಚ್ಛತೆ ಮತ್ತು ಸುಗಮ ಪ್ರಯಾಣದ ಅನುಭವಕ್ಕಾಗಿ ಅವರು ರೈಲ್ವೆಯನ್ನು ಶ್ಲಾಘಿಸಿದ್ದಾರೆ. ಶಾಂಭವಿ ಭಾರದ್ವಾಜ್ ಅವರು ನವದೆಹಲಿಯಿಂದ ಸೋನ್‌ ಪುರಕ್ಕೆ ಪ್ರಯಾಣಿಸಿದ್ದು, ರೈಲ್ವೆ ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಲಭ್ಯವಿದ್ದ ಸ್ವಚ್ಛತೆ ಹಾಗೂ ಸೌಲಭ್ಯಗಳನ್ನು ಮೆಚ್ಚಿಕೊಂಡಿದ್ದಾರೆ.

ಆನಂದ್ ವಿಹಾರ್‌ ನಿಂದ ಭಾಗಲ್ಪುರ್‌ ಗೆ ವಿಕ್ರಮಶಿಲಾ ಎಕ್ಸ್‌ ಪ್ರೆಸ್ ಮೂಲಕ ಪ್ರಯಾಣಿಸಿದ ಪ್ರಯಾಣಿಕರು, ಭಾರತೀಯ ರೈಲ್ವೆಯಿಂದ ಒದಗಿಸಲಾದ ಸೌಲಭ್ಯಗಳು ಮತ್ತು ವ್ಯವಸ್ಥೆಗಳನ್ನು ಶ್ಲಾಘಿಸಿದ್ದಾರೆ.

ಹಬ್ಬದ ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಸಹ ಭಾರತೀಯ ರೈಲ್ವೆಯ ನವೀಕರಿಸಿದ ಸೌಲಭ್ಯಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸೋನ್‌ ಪುರ ವಿಭಾಗದ ಹಾಜಿಪುರ ನಿಲ್ದಾಣದಲ್ಲಿ ಮಾಡಲಾದ ಸ್ವಚ್ಛತಾ ವ್ಯವಸ್ಥೆಗಳು ಭಾರತೀಯ ಪ್ರಯಾಣಿಕರನ್ನು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರನ್ನೂ ಸಹ ಮೆಚ್ಚಿಸಿವೆ.

ನವದೆಹಲಿ ರೈಲ್ವೆ ನಿಲ್ದಾಣದಲ್ಲಿರುವ ಯಾತ್ರಿ ಸೌಲಭ್ಯ ಕೇಂದ್ರದ ಸೌಲಭ್ಯಗಳನ್ನು ಅನೇಕ ಪ್ರಯಾಣಿಕರು ಶ್ಲಾಘಿಸಿದರು. ಅವರು ಸ್ವಚ್ಛತೆ ಮತ್ತು ಒಟ್ಟಾರೆ ವ್ಯವಸ್ಥೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಹಬ್ಬದ ದಟ್ಟಣೆಯ ನಡುವೆಯೂ ರೈಲ್ವೆಯಿಂದ ಸಹಾನುಭೂತಿಯ ನೆರವು

ಛತ್‌ ಪೂಜೆಯ ಸಂದರ್ಭದಲ್ಲಿ, ಹಬ್ಬದ ದಟ್ಟಣೆಯ ಹೊರತಾಗಿಯೂ, ರೈಲ್ವೆಯ ಸಮರ್ಪಿತ ಉದ್ಯೋಗಿಗಳು ವಯಸ್ಸಾದವರು, ದಿವ್ಯಾಂಗರು ಮತ್ತು ಅಗತ್ಯವಿರುವ ಇತರರ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕಾಳಜಿ ವಹಿಸಿದರು.

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಪ್ರಯಾಣಿಕರಿಗೆ ತಕ್ಷಣದ ನೆರವು ಮತ್ತು ತುರ್ತು ಪ್ರಥಮ ಚಿಕಿತ್ಸೆಯನ್ನು ಒದಗಿಸಲಾಯಿತು. ಹೆಚ್ಚಿನ ಆರೈಕೆಗಾಗಿ ಮಹಿಳಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಗತ್ಯವಿರುವ ಪ್ರತಿ ಪ್ರಯಾಣಿಕರಿಗೂ ಸಕಾಲದಲ್ಲಿ ವೈದ್ಯಕೀಯ ನೆರವು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುತ್ತಿದೆ.

ತನ್ನ ವ್ಯಾಪಕ ಜಾಲ, ಬದ್ಧತೆಯುಳ್ಳ ಉದ್ಯೋಗಿ ವರ್ಗ ಮತ್ತು ಪ್ರಯಾಣಿಕ-ಕೇಂದ್ರಿತ ವಿಧಾನದೊಂದಿಗೆ, ಭಾರತೀಯ ರೈಲ್ವೆಯು ಪ್ರತಿಯೊಬ್ಬ ಪ್ರಯಾಣಿಕನಿಗೂ ದಕ್ಷತೆ ಮತ್ತು ಕಾಳಜಿಯಿಂದ ಸೇವೆ ಸಲ್ಲಿಸುವ ತನ್ನ ಭರವಸೆಯಲ್ಲಿ ಸ್ಥಿರವಾಗಿದೆ. ಹೆಚ್ಚುವರಿ ರೈಲುಗಳನ್ನು ಓಡಿಸುವುದರಿಂದ ಹಿಡಿದು ಸ್ವಚ್ಛತೆ, ಸುರಕ್ಷತೆ ಮತ್ತು ಸಮಯಪಾಲನೆಯನ್ನು ಕಾಪಾಡಿಕೊಳ್ಳುವವರೆಗೆ, ಹಬ್ಬದ ದಟ್ಟಣೆಯ ಸಮಯದಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಪ್ರಯತ್ನವನ್ನೂ ಮಾಡಲಾಗುತ್ತಿದೆ. ರೈಲ್ವೆ ಸಿಬ್ಬಂದಿಯ ಪೂರ್ವಭಾವಿ ಕ್ರಮಗಳು ಮತ್ತು ಸಮರ್ಪಣಾ ಭಾವವು, ರಾಷ್ಟ್ರವ್ಯಾಪಿ ಪ್ರಯಾಣಿಕರಿಗೆ ಹಬ್ಬದ ಋತುವಿನ ಪ್ರಯಾಣವನ್ನು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತಮ-ಸಮನ್ವಯದಿಂದ ಕೂಡಿರುವಂತೆ ಮಾಡಲು ಸಂಸ್ಥೆಯ ಬದ್ಧತೆಯನ್ನು ಒತ್ತಿಹೇಳುತ್ತದೆ.

 

*****


(Release ID: 2181996) Visitor Counter : 8