ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಫಿಟ್ ಇಂಡಿಯಾದಿಂದ ಅಕ್ಟೋಬರ್ 31 ರಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಪೆಡಲ್ ಟು ಪ್ಲಾಂಟ್ ಸೈಕ್ಲಿಂಗ್ ಯಾತ್ರೆ ಆಯೋಜನೆ


ಫಿಟ್ ಇಂಡಿಯಾ ಐರನ್ ವೀಲ್ಸ್ ಆಫ್ ಯೂನಿಟಿ ಸೈಕ್ಲಿಂಗ್ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಶುಭ ಕೋರಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ

Posted On: 17 OCT 2025 1:47PM by PIB Bengaluru

ಯುವಜನ ವ್ಯವಹಾರ ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತನ್ನ ಪ್ರಮುಖ ಉಪಕ್ರಮವಾದ ಫಿಟ್ ಇಂಡಿಯಾ ಅಡಿಯಲ್ಲಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ನೆನಪಿನಲ್ಲಿ 2025ರ ಅಕ್ಟೋಬರ್ 31 ರಿಂದ “ಐರನ್ ವೀಲ್ಸ್ ಆಫ್ ಯೂನಿಟಿ” ಎಂಬ ಶೀರ್ಷಿಕೆಯಡಿ ಎರಡು ರಾಷ್ಟ್ರವ್ಯಾಪಿ ಸೈಕ್ಲಿಂಗ್ ಯಾತ್ರೆಗಳನ್ನು ಆಯೋಜಿಸಲಿದೆ. ಈ ಯಾತ್ರೆಗಳು ದೇಶದ ಉದ್ದಗಲಕ್ಕೂ ಸಂಚರಿಸಲಿದ್ದು, ಅವು ರಾಷ್ಟ್ರೀಯ ಐಕ್ಯತೆ ಮತ್ತು ಸದೃಢ ಮತ್ತು ಸ್ಥಿತಿಸ್ಥಾಪಕ ಭಾರತದ ಸ್ಫೂರ್ತಿಯ ಸಂಕೇತವಾಗಿವೆ.

ಕಾಶ್ಮೀರದಿಂದ ಕನ್ಯಾಕುಮಾರಿ (ಕೆ2ಕೆ) ಸೈಕ್ಲಿಂಗ್ ಯಾತ್ರೆಯು ಅಕ್ಟೋಬರ್ 31 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಆರಂಭವಾಗಿ ಪಂಜಾಬ್, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಪ್ರಯಾಣಿಸಿ 2025ರ ನವೆಂಬರ್ 16 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಮಾಪನಗೊಳ್ಳಲಿದೆ. ಒಟ್ಟು 150 ಸವಾರರು ಈ ಉಪಕ್ರಮದಲ್ಲಿ ಭಾಗವಹಿಸಿ- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸೂಕ್ತವಾದ ಗೌರವ ಸಲ್ಲಿಸಲಿದ್ದಾರೆ.

2023ರ ಮೇ 17 ರಂದು ಮೌಂಟ್ ಎವರೆಸ್ಟ್ ಅನ್ನು ಏರಿದ ಮತ್ತು ‘ಹವಾಮಾನ ಬದಲಾವಣೆಗೆ ಮುನ್ನ ಬದಲಾಗಿ’ ಎಂಬ ಸಂದೇಶವನ್ನು ಹರಡಲು ಭಾರತದಿಂದ ಲಂಡನ್‌ಗೆ ಸೈಕಲ್‌ನಲ್ಲಿ ಪ್ರಯಾಣಿಸಿದ ಪರ್ವತಾರೋಹಿ ನಿಶಾ ಕುಮಾರಿ ಅವರು ಕೆ2ಕೆ ಯಾತ್ರೆಯನ್ನು ಮುನ್ನಡೆಸಲಿದ್ದಾರೆ.

ಮತ್ತೊಂದು ಯಾತ್ರೆ 'ಪೆಡಲ್ ಟು ಪ್ಲಾಂಟ್' ಅರುಣಾಚಲ ಪ್ರದೇಶದ ಪಂಗ್ಸೌದಿಂದ ಆರಂಭವಾಗಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಮೂಲಕ 4000 ಕಿಲೋಮೀಟರ್ ದೂರವನ್ನು ಪೂರ್ಣಗೊಳಿಸಲಿದ್ದು, 2025ರ ಡಿಸೆಂಬರ್ 31 ರಂದು ಗುಜರಾತ್‌ನ ಮುಂದ್ರಾದಲ್ಲಿ ಕೊನೆಗೊಳ್ಳಲಿದೆ. ಈ ಮಾರ್ಗದಲ್ಲಿ ಸೈಕಲ್ ಸವಾರರು (ಸೈಕ್ಲಿಸ್ಟ್‌ಗಳು) 100,000 ಸಸಿಗಳನ್ನು ನೆಡಲಿದ್ದಾರೆ ಮತ್ತು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹವಾಮಾನ ಮತ್ತು ಫಿಟ್‌ನೆಸ್ ಜಾಗೃತಿ ಗೋಷ್ಠಿಗಳನ್ನು ನಡೆಸಲಿದ್ದಾರೆ.

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ’ಫಿಟ್ ಇಂಡಿಯಾ ಐರನ್ ವೀಲ್ಸ್ ಆಫ್ ಯೂನಿಟಿ’ ಅಭಿಯಾನದಲ್ಲಿ ಭಾಗವಹಿಸುತ್ತಿರುವ ಸೈಕ್ಲಿಸ್ಟ್‌ಗಳಿಗೆ  ಶುಭಾಶಯಗಳನ್ನು ತಿಳಿಸಿದ್ದಾರೆ. ಅವರು, ನಮ್ಮ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಇದನ್ನು ಆಯೋಜಿಸಲಾಗುತ್ತಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ನಾಗರಿಕರು ಹೆಚ್ಚು ದೈಹಿಕ ಕ್ಷಮತೆ ಕಾಯ್ದುಕೊಳ್ಳಬೇಕು ಮತ್ತು ಆರೋಗ್ಯವಂತರಾಗಬೇಕೆಂದು ಬಯಸುತ್ತಾರೆ. ಈ ಉಪಕ್ರಮವು ಅವರ ದೂರದೃಷ್ಟಿಯನ್ನು ವರ್ಧಿಸುತ್ತದೆ ಮತ್ತು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತದೆ. ನಾನು ಈ ಹಿಂದೆ ಹೇಳಿದ್ದಂತೆ, ಸೈಕ್ಲಿಂಗ್ ದೈಹಿಕ ಕ್ಷಮತೆ (ಫಿಟ್ನೆಸ್) ಅನ್ನು ಕಾಯ್ದುಕೊಳ್ಳಲು ಉತ್ತಮ ಮಾರ್ಗವಾಗಿದೆ ಮತ್ತು ಮಾಲಿನ್ಯಕ್ಕೆ ಪರಿಹಾರವಾಗಿದೆ. ಪ್ರತಿಯೊಬ್ಬ ಭಾರತೀಯರೂ ಸೈಕಲ್‌ ತೆಗೆದುಕೊಂಡು ಕನಿಷ್ಠ 30 ನಿಮಿಷದಿಂದ ಒಂದು ಗಂಟೆಯವರೆಗೆ ತಮ್ಮ ಸ್ವಂತ ಫಿಟ್ನೆಸ್‌ಗಾಗಿ ಮೀಸಲಿಡಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.

ಡಾ. ಮನ್ಸುಖ್ ಮಾಂಡವಿಯಾ ಅವರು ಆರಂಭಿಸಿರುವ  ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಆಂದೋಲನದ ಮುಂದುವರಿದ ಭಾಗವಾದ  “ಐರನ್ ವೀಲ್ಸ್ ಆಫ್ ಯೂನಿಟಿ’’ ಉಪಕ್ರಮವು ಸುಸ್ಥಿರ ಫಿಟ್ನೆಸ್ ಮತ್ತು ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಉತ್ತೇಜಿಸುವ ಗುರಿ ಹೊಂದಿದೆ. ರಾಷ್ಟ್ರವ್ಯಾಪಿ ಇಂತಹ ಯಾತ್ರೆಗಳು ಇಂಗಾಲದ ಹೊರಸೂಸುವಿಕೆಯನ್ನು 100,000 ಕಿಲೋಗ್ರಾಂಗಳಷ್ಟು ತಗ್ಗಿಸುವ ನಿರೀಕ್ಷೆಯಿದೆ, ಇದು ಫಿಟ್ ಇಂಡಿಯಾದ ಪರಿಸರ ಸುಸ್ಥಿರತೆ ಮತ್ತು ಸ್ವಾಸ್ಥ್ಯ ರಾಷ್ಟ್ರದ ಬದ್ಧತೆಯನ್ನು ಒತ್ತಿಹೇಳುತ್ತದೆ.

 

*****


(Release ID: 2180353) Visitor Counter : 12