ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಹಂಪಿಯಲ್ಲಿ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ(ಪಿ.ಎಂ.ಐ.ಎಸ್) ಕಲಿಕಾರ್ಥಿಗಳೊಂದಿಗೆ ಸಂವಾದ ನಡೆಸಿದರು
ʻಪಿ.ಎಂ.ಐ.ಎಸ್ʼ ಮೂಲಕ ಯುವಕರ ಪರಿವರ್ತನೆಯ ಯಶೋಗಾಥೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಯಿತು
ಕಲಿಕಾರ್ಥಿಗಳ ಸಾಧನೆಗಳಿಗಾಗಿ ಅಭಿನಂದಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್
Posted On:
16 OCT 2025 1:44PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2025ರ ಅಕ್ಟೋಬರ್ 15ರಂದು ಕರ್ನಾಟಕದ ಹಂಪಿಯಲ್ಲಿ ʻಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆʼ(ಪಿ.ಎಂ.ಐ.ಎಸ್) ಅಡಿ ತರಬೇತಿ ಪಡೆಯುತ್ತಿರುವ ಕಲಿಕಾರ್ಥಿಗಳೊಂದಿಗೆ (ಇಂಟರ್ನಿ) ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್, ಎಂ.ಎಸ್.ಪಿ.ಎಲ್, ಐ.ಬಿ.ಎಂ, ಟಿ.ಸಿ.ಎಸ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್, ಎಚ್.ಎ.ಎಲ್, ಎನ್.ಎಂ.ಡಿ.ಸಿ ಮತ್ತು ಹನಿವೆಲ್ ಟೆಕ್ನಾಲಜಿ ಸೊಲ್ಯೂಷನ್ಸ್ ಸೇರಿದಂತೆ ಪ್ರಮುಖ ಪಾಲುದಾರ ಕಂಪನಿಗಳ ಪ್ರತಿನಿಧಿಗಳೊಂದಿಗೆ ರಾಜ್ಯದಾದ್ಯಂತದ 60 ಕ್ಕೂ ಹೆಚ್ಚು ಇಂಟರ್ನಿಗಳು ಭಾಗವಹಿಸಿದರು.

ಸಂವಾದದ ವೇಳೆ, ಸಚಿವರು ಕಲಿಕಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು, ʻಪಿ.ಎಂ.ಐ.ಎಸ್ʼ ಅಡಿಯಲ್ಲಿ ಕಲಿಕಾರ‍್ಥಿಗಳ ಅನುಭವ ಮತ್ತು ಆಕಾಂಕ್ಷೆಗಳನ್ನು ಆಲಿಸಿದರು. ಇಂಟರ್ನ್‌ಶಿಪ್ ಸಮಯದಲ್ಲಿ ಅವರ ಕಲಿಕೆ ಮತ್ತು ಕೌಶಲ್ಯ ಅನುಭವದ ಜೊತೆಗೆ ಯೋಜನೆಗೆ ಸೇರಲು ಅವರನ್ನು ಪ್ರೇರೇಪಿಸಿದ್ದು ಯಾವುದು ಎಂಬುದರ ಬಗ್ಗೆ ಅವರು ಚರ್ಚಿಸಿದರು. ʻಪಿ.ಎಂ.ಐ.ಎಸ್ʼ ಇಂಟರ್ನಿಗಳೊಂದಿಗೆ ಸಂವಾದದ ವೇಳೆ ಕಲಿಕಾರ್ಥಿಗಳ ವೃತ್ತಿಪರ ಪ್ರಯಾಣಕ್ಕಾಗಿ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಸಚಿವರು ನೀಡಿದರು.
ಇದಲ್ಲದೆ, ತಮ್ಮ ಇಂಟರ್ನ್‌ಶಿಪ್‌ನಲ್ಲಿ ಅಸಾಧಾರಣ ಕಾರ್ಯಕ್ಷಮತೆಯನ್ನು ಹೊಂದಿರುವ ಕೆಲವು ಕಲಿಕಾರ್ಥಿಗಳನ್ನು ಈಗಾಗಲೇ ಆಯಾ ಕಂಪನಿಗಳು ಪೂರ್ಣ ಅವಧಿಯ ನೌಕರಿಯಲ್ಲಿ ತೊಡಗಿಸಿಕೊಂಡಿವೆ. ಅವರ ಸಾಧನೆಗಳಿಗಾಗಿ ಸಚಿವರು ಅಭಿನಂದಿಸಿದರು ಮತ್ತು ಅವರ ಪ್ರಯತ್ನಗಳಲ್ಲಿ ನಿರಂತರ ಯಶಸ್ಸಿಗೆ ಹಾರೈಸಿದರು.
ಇಂಟರ್ನಿಗಳ ಸಮರ್ಪಣೆಯನ್ನು ಸಚಿವರು ಶ್ಲಾಘಿಸಿದರು ಮತ್ತು ಇಂದಿನ ವಿಕಸನಗೊಳ್ಳುತ್ತಿರುವ ಕೆಲಸದ ಸ್ಥಳದಲ್ಲಿ ಹೊಂದಾಣಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ಈ ಇಂಟರ್ನ್‌ಶಿಪ್ ವ್ಯಕ್ತಿತ್ವ ವಿಕಸನಕ್ಕೆ ಹಲವು ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಬಗ್ಗೆ ತಿಳಿದು ಸಂತೋಷವಾಗಿದೆ. ಇಂಟರ್ನಿಗಳು ಕೆಲಸದ ಪ್ರಮುಖ ಅಂಶಗಳನ್ನು ಕಲಿಯುತ್ತಿದ್ದಾರೆ ಮತ್ತು ಸಂವಹನಕ್ಕೆ ಅಡೆತಡೆಗಳನ್ನು ನಿವಾರಿಸುವಂತಹ ಇತರ ಕೌಶಲ್ಯಗಳಲ್ಲಿ ನೈಪುಣ್ಯ ಸಾಧಿಸುತ್ತಿದ್ದಾರೆ," ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ʻಪಿ.ಎಂ.ಐ.ಎಸ್ʼ ಮೂಲಕ ಯುವಕರ ಪರಿವರ್ತನೆಯ ಗಮನಾರ್ಹ ಯಶೋಗಾಥೆಗಳನ್ನು ಪ್ರದರ್ಶಿಸಲಾಯಿತು.
ಅಂತಹ ಒಂದು ಯಶೋಗಾಥೆಯೆಂದರೆ, ಆಂಧ್ರಪ್ರದೇಶದ ಕಡಪದ ಕಲುವಾ ಹರಿ ಕೃಷ್ಣ ಅವರು ಐ.ಟಿ. ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ನಂತರ ʻಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ʼ(ಟಿ.ಸಿ.ಎಸ್) ಸಂಸ್ಥೆಯಲ್ಲಿ ಪೂರ್ಣ ಸಮಯದ ಉದ್ಯೋಗ ಪಡೆದರು. ರೈತ ಮತ್ತು ಗೃಹಿಣಿಯ ಮಗನಾದ ಹರಿ ತಮ್ಮ ಪ್ರಯಾಣವನ್ನು "ನಿಜವಾಗಿಯೂ ಪರಿವರ್ತನೆ" ಎಂದು ಬಣ್ಣಿಸಿದರು. ಸಚಿವರಿಂದ ವೈಯಕ್ತಿಕವಾಗಿ ಉದ್ಯೋಗದ ಆಫರ್ ಲೆಟರ್ ಸ್ವೀಕರಿಸಬೇಕೆಂಬ ಇಚ್ಛೆಯನ್ನು ಹರಿ ವ್ಯಕ್ತಪಡಿಸಿದರು. ಈ ವಿನಂತಿಯನ್ನು ಸಚಿವರು ಸವಿನಯದಿಂದ ಸ್ವೀಕರಿಸಿದರು.

ಆಂಧ್ರಪ್ರದೇಶದ ಚಿತ್ತೂರಿನ ಮತ್ತೊಬ್ಬ ಇಂಟರ್ನಿಯಾದ ಆರ್. ಲಕ್ಷ್ಮಿ ಪ್ರಸನ್ನ ಅವರು ಇನ್ಫೋಸಿಸ್‌ಗೆ ಸೇರಿದ ನಂತರ ʻಪಿ.ಎಂ.ಐ.ಎಸ್ʼ ತನಗೆ ಹೇಗೆ ಹೊಸ ಅವಕಾಶಗಳನ್ನು ತೆರೆಯಿತು ಎಂಬ ಸಂಗತಿಯನ್ನು ಹಂಚಿಕೊಂಡರು. ಕೃಷಿ ಹಿನ್ನೆಲೆಯಿಂದ ಬಂದ ಅವರಿಗೆ ಈ ಇಂಟರ್ನ್‌ಶಿಪ್ ಹೇಗೆ ವಿಶ್ವಾಸ ತುಂಬಿತು ಮತ್ತು ಕಾರ್ಪೊರೇಟ್ ಜಗತ್ತಿಗೆ ಮಾನ್ಯತೆ ನೀಡಿತು ಎಂದು ಅವರು ಹೇಳಿದರು.
ಅದೇ ರೀತಿ, ʻಹನಿವೆಲ್ ಟೆಕ್ನಾಲಜಿ ಸೊಲ್ಯೂಷನ್ಸ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್ʼನಲ್ಲಿ ಎಂಬೆಡೆಡ್ ಎಂಜಿನಿಯರ್ ಇಂಟರ್ನಿ ಆಗಿರುವ ಕೇರಳ ಮೂಲದ ಶ್ರೀಮತಿ ಗೌರಿ ಎಚ್. ಅವರು ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ. ಒಂಟಿ ತಾಯಿಯ ಮಗಳಾದ ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದರು. ಆದರೆ ಅವರ ಕ್ಷೇತ್ರದಲ್ಲಿ ಸೀಮಿತ ಅವಕಾಶಗಳಿದ್ದವು. ಅವರು ಸದಾ ಕನಸು ಕಾಣುತ್ತಿದ್ದ ವೃತ್ತಿಜೀವನಕ್ಕೆ ಹೆಜ್ಜೆ ಇರಿಸಲು ಅವರಿಗೆ ʻಪಿ.ಎಂ.ಐ.ಎಸ್ʼ ಸಹಾಯ ಮಾಡಿತು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಗೌರಿ ಅವರ ಸಕಾರಾತ್ಮಕತೆ ಮತ್ತು ಪರಿಶ್ರಮದಿಂದ ನಾನು ಪ್ರಭಾವಿತಳಾಗಿದ್ದೇನೆ. ಅವರಂತಹ ಯಶೋಗಾಥೆಗಳು ʻಪಿ.ಎಂ.ಐ.ಎಸ್ʼನ ನೈಜ ಉದ್ದೇಶ ಮತ್ತು ಆಶಯವನ್ನು ಸಾಕಾರಗೊಳಿಸುತ್ತವೆ," ಎಂದು ಹೇಳಿದರು.
ಈ ಸಂವಾದವು ʻಪಿ.ಎಂ.ಐ.ಎಸ್ʼನ ಹೆಚ್ಚುತ್ತಿರುವ ಪ್ರಭಾವವನ್ನು ಒತ್ತಿಹೇಳಿತು ಮತ್ತು ʻವಿಕಸಿತ ಭಾರತ-2047ʼರ ದೃಷ್ಟಿಕೋನಕ್ಕೆ ಅನುಗುಣವಾಗಿ ಭವಿಷ್ಯ ಸನ್ನದ್ಧ ಕಾರ್ಯಪಡೆಯನ್ನು ಬೆಳೆಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿತು.
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಬಗ್ಗೆ
ʻಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆʼಯು(ಪಿ.ಎಂ.ಐ.ಎಸ್) 5 ವರ್ಷಗಳ ಅವಧಿಯಲ್ಲಿ ಭಾರತೀಯ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಸುಗಮಗೊಳಿಸಲು ಪ್ರಧಾನಮಂತ್ರಿ ಅವರ ಐದು ಯೋಜನೆಗಳು ಮತ್ತು ಉಪಕ್ರಮಗಳ ಪ್ಯಾಕೇಜ್‌ನ ಭಾಗವಾಗಿದೆ. ʻಪಿ.ಎಂ.ಐ.ಎಸ್ʼ ಪ್ರಸ್ತುತ ಯಾವುದೇ ಪೂರ್ಣ ಸಮಯದ ಶೈಕ್ಷಣಿಕ ಕಾರ್ಯಕ್ರಮ ಅಥವಾ ಉದ್ಯೋಗಕ್ಕೆ ದಾಖಲಾಗದ 21-24 ವರ್ಷ ವಯಸ್ಸಿನ ಯುವಕರನ್ನು ಗುರಿಯಾಗಿಸಿಕೊಂಡಿದೆ. ಇದು ಭಾರತದಾದ್ಯಂತದ ಉನ್ನತ ಕಂಪನಿಗಳಲ್ಲಿ ಸಂಭಾವನೆ ಸಮೇತ ಇಂಟರ್ನ್‌ಶಿಪ್ ಅವಕಾಶವನ್ನು ನೀಡುತ್ತದೆ. ಈ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚು ಇಂಟರ್ನ್‌ಶಿಪ್‌ಗಳನ್ನು ನೀಡಲು ಯೋಜಿಸಲಾಗಿದೆ ಮತ್ತು ಭಾರತೀಯ ಯುವಕರ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://pminternship.mca.gov.in/
*****
(Release ID: 2179891)
Visitor Counter : 8