ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಡೆಹ್ರಾಡೂನ್‌ನಲ್ಲಿ ನಾಳೆ 8ನೇ ರಾಷ್ಟ್ರೀಯ ಪೋಷಣ್ ಮಾಹೆಯ ಸಮಾರೋಪ ಸಮಾರಂಭ
ವರ್ತನೆ ಬದಲಾವಣೆ, ಪೌಷ್ಠಿಕಾಂಶ ಜಾಗೃತಿ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಒಂದು ತಿಂಗಳ ಕಾಲ ನಡೆದ ಜನಾಂದೋಲನದ ಮುಕ್ತಾಯ ಸಮಾರಂಭ
Posted On:
16 OCT 2025 10:05AM by PIB Bengaluru
ಪೋಷಣೆ ಎನ್ನುವುದು ಕೇವಲ ಪೌಷ್ಟಿಕಾಂಶದ ಬಗ್ಗೆ ಅಲ್ಲ - ಇದು ಸದೃಢ, ಆರೋಗ್ಯಕರ ಮತ್ತು ಹೆಚ್ಚು ಸಮರ್ಥ ಭಾರತವನ್ನು ಪೋಷಿಸುವ ಬಗ್ಗೆಯಾಗಿದೆ. ಮಹಿಳೆಯರ ಆರೋಗ್ಯ ಮತ್ತು ಪೋಷಣೆಯೇ ಕುಟುಂಬಗಳಿಗೆ ಬಲ ಮತ್ತು ವಿಕಸಿತ ಭಾರತದ ಅಡಿಪಾಯವಾಗಿದೆ ಎಂದು ಒತ್ತಿಹೇಳುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ 8 ನೇ ರಾಷ್ಟ್ರೀಯ ಪೋಷಣ್ ಮಾಸಕ್ಕೆ (2025ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16) ಮಧ್ಯಪ್ರದೇಶದ ಧಾರ್ ನಿಂದ 2025ರ ಸೆಪ್ಟೆಂಬರ್ 17 ರಂದು ಚಾಲನೆ ನೀಡಲಾಯಿತು.
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಹಿಮಾಲಯನ್ ಸಾಂಸ್ಕೃತಿಕ ಕೇಂದ್ರದಲ್ಲಿ 8ನೇ ರಾಷ್ಟ್ರೀಯ ಪೋಷಣ್ ಮಾಹೆ 2025ರ ಸಮಾರೋಪ ಸಮಾರಂಭವು ನಾಳೆ (ಅಕ್ಟೋಬರ್ 17, 2025) ನಡೆಯಲಿದೆ. ಈ ಕಾರ್ಯಕ್ರಮವು ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಅಡಿಯಲ್ಲಿ ದೇಶಾದ್ಯಂತ ನಡವಳಿಕೆ ಬದಲಾವಣೆ, ಪೌಷ್ಠಿಕಾಂಶ ಜಾಗೃತಿ, ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಒಂದು ತಿಂಗಳು ಮೀಸಲಿರಿಸಿ ನಡೆದ ಜನಾಂದೋಲನದ ಮುಕ್ತಾಯ ಕಾರ್ಯಕ್ರಮವಾಗಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಈ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಉತ್ತರಾಖಂಡ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಶ್ರೀಮತಿ ರೇಖಾ ಆರ್ಯ, ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಗಣೇಶ್ ಜೋಶಿ ಅವರೂ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಭಾರತ ಸರ್ಕಾರ ಮತ್ತು ಉತ್ತರಾಖಂಡ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯಾದ್ಯಂತದ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೋಷಣೆಯನ್ನು ಸುಧಾರಿಸುವತ್ತ ಆದ್ಯ ಗಮನದೊಂದಿಗೆ, "ಸ್ವಸ್ಥ ಹೆಣ್ಣು, ಸಶಕ್ತ ಪರಿವಾರ (ಸ್ವಸ್ಥ ನಾರಿ, ಸಶಕ್ತ ಪರಿವಾರ್)" ಎಂಬ ಧ್ಯೇಯವಾಕ್ಯದಡಿಯಲ್ಲಿ ಈ ವರ್ಷದ ಪೋಷಣ್ ಮಾಸವನ್ನು ದೇಶಾದ್ಯಂತ ಆಚರಿಸಲಾಗಿದ್ದು, ಸಮಗ್ರ ಆರೋಗ್ಯ ತಪಾಸಣೆ ಮತ್ತು ಸೇವೆಗಳಿಗೆ ಒತ್ತು ನೀಡಲಾಗಿದೆ. ಸ್ಥೂಲಕಾಯ ಸಮಸ್ಯೆಗೆ ಪರಿಹಾರ, ಸಕ್ಕರೆ ಮತ್ತು ಖಾದ್ಯತೈಲ ಸೇವನೆ ಕಡಿಮೆ ಮಾಡುವುದು, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE), ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ (IYCF) ಅಭ್ಯಾಸಗಳು, ಪೌಷ್ಟಿಕಾಂಶ ವಿಷಯದಲ್ಲಿ ಪುರುಷರನ್ನು ಸಜ್ಜುಗೊಳಿಸುವುದು, ತಳಮಟ್ಟದ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಸ್ಥಳೀಯರಿಗೆ ಅವಕಾಶ ನೀಡುವುದು ಹಾಗೂ ಒಮ್ಮುಖ ಕ್ರಮಗಳು ಮತ್ತು ಡಿಜಿಟಲೀಕರಣಕ್ಕೆ ಈ ಮಾಸಾಚರಣೆಯಲ್ಲಿ ಪ್ರಮುಖ ಗಮನ ಹರಿಸಲಾಗಿತ್ತು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರ ನೇತೃತ್ವದಲ್ಲಿ, ಒಂದು ತಿಂಗಳ ಕಾಲ ನಡೆದ ಪೋಷಣ್ ಮಾಸ 2025ರ ಕಾರ್ಯಕ್ರಮಗಳು ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳನ್ನು "ಇಡೀ ಸರ್ಕಾರ, ಇಡೀ ಸಮಾಜ" ಎಂಬ ಉತ್ಸಾಹದಲ್ಲಿ ಒಂದುಗೂಡಿಸಿತು. ಮನೆ ಮಟ್ಟದ ಪೌಷ್ಟಿಕಾಂಶ ಪ್ರದರ್ಶನಗಳಿಂದ ಹಿಡಿದು ದೊಡ್ಡ ಪ್ರಮಾಣದ ಜಾಗೃತಿ ಅಭಿಯಾನಗಳವರೆಗೆ ನಡೆದ ವಿವಿಧ ಚಟುವಟಿಕೆಗಳು ಪೌಷ್ಟಿಕ, ಆರೋಗ್ಯಕರ ಮತ್ತು ಸಬಲೀಕೃತ ರಾಷ್ಟ್ರವಾಗಿ 2047ರ ವೇಳೆಗೆ ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯ ಹಾಕುವ ಸುಪೋಷಿತ ಭಾರತಕ್ಕೆ ಹಂಚಿತ ರಾಷ್ಟ್ರೀಯ ಬದ್ಧತೆಯನ್ನು ಪ್ರತಿಬಿಂಬಿಸಿವೆ.
ಸಮಾರೋಪ ಸಮಾರಂಭದಲ್ಲಿ ಸಮುದಾಯದ ಸಜ್ಜುಗೊಳಿಸುವಿಕೆ, ಕ್ಷೇತ್ರ ಉಪಕ್ರಮಗಳ ಪ್ರದರ್ಶನದ ಜೊತೆಗೆ ಪೋಷಣ್ ಮತ್ತು ಮಿಷನ್ ಶಕ್ತಿ ಚಾಂಪಿಯನ್‌ಗಳ ಸನ್ಮಾನ ಕಾರ್ಯಕ್ರಮವಿರಲಿದೆ. ಇದು ಸುಪೋಷಿತ ಮತ್ತು ವಿಕಸಿತ ಭಾರತಕ್ಕಾಗಿ ಜನಾಂದೋಲನವನ್ನು ಮುನ್ನಡೆಸುವ ಸಾಮೂಹಿಕ ಕ್ರಿಯೆಯ ಕಾರ್ಯಕ್ರಮವಾಗಿದೆ.
****
(Release ID: 2179804)
Visitor Counter : 8