ರೈಲ್ವೇ ಸಚಿವಾಲಯ
ʻಭವಿಷ್ಯಕ್ಕೆ ಸಿದ್ಧವಾದ ರೈಲ್ವೆ’ ವಿಷಯದ 16ನೇ ಅಂತರರಾಷ್ಟ್ರೀಯ ರೈಲ್ವೆ ಸಲಕರಣೆಗಳ ಪ್ರದರ್ಶನ-2025 ಅನ್ನು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು
ವಿಕಸಿತ ಭಾರತ ವಿಷನ್ ಅಡಿಯಲ್ಲಿ 2047ರ ವೇಳೆಗೆ 7,000 ಕಿಮೀ ಮೀಸಲಾದ ಪ್ರಯಾಣಿಕರ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲು ರೈಲ್ವೆ ಯೋಜಿಸುತ್ತಿದ್ದು, ಇದನ್ನು ಗಂಟೆಗೆ 350 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗುವುದು: ಅಶ್ವಿನಿ ವೈಷ್ಣವ್
ವಂದೇ ಭಾರತ್ 4.0, ಅಮೃತ್ ಭಾರತ್ 4.0 ಮತ್ತು ಭವಿಷ್ಯದ ಪೀಳಿಗೆಯ ರೈಲ್ವೆ ಉತ್ಪಾದನಾ ಮಾನದಂಡಗಳ ದೃಷ್ಟಿಕೋನವನ್ನು ಐ.ಆರ್.ಇ.ಇ 2025ರಲ್ಲಿ ವಿವರಿಸಿದರು
Posted On:
15 OCT 2025 6:10PM by PIB Bengaluru
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ರೈಲ್ವೆ ಪ್ರದರ್ಶನವಾದ 16ನೇ ಅಂತಾರಾಷ್ಟ್ರೀಯ ರೈಲ್ವೆ ಸಲಕರಣೆಗಳ ಪ್ರದರ್ಶನ-2025 ಅನ್ನು ಉದ್ಘಾಟಿಸಿದರು.
ಗಂಟೆಗೆ 320 ಕಿ.ಮೀ. ಮತ್ತು ಗರಿಷ್ಠ ಗಂಟೆಗೆ 350 ಕಿ.ಮೀ. ವೇಗಕ್ಕಾಗಿ ವಿನ್ಯಾಸಗೊಳಿಸಲಾದ ಮೀಸಲಾದ ಪ್ರಯಾಣಿಕರ ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಕೇಂದ್ರ ಸಚಿವರು ಘೋಷಿಸಿದರು. ದೇಶಾದ್ಯಂತ ಇಂತಹ ಅನೇಕ ಕಾರಿಡಾರ್ ಗಳನ್ನು ನಿರ್ಮಿಸಲಾಗುವುದು, ಇದು 2047ರ ವೇಳೆಗೆ ಸುಮಾರು 7,000 ಕಿ.ಮೀ. ಮೀಸಲಾದ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಸರ್ಕಾರದ ವಿಕಸಿತ ಭಾರತ ದೃಷ್ಟಿಕೋನದ ಭಾಗವಾಗಿದೆ ಎಂದು ಅವರು ಹೇಳಿದರು. ಈ ಕಾರಿಡಾರ್ ಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಿಗ್ ನಲಿಂಗ್ ವ್ಯವಸ್ಥೆಗಳು ಮತ್ತು ಆಧುನಿಕ ಕಾರ್ಯಾಚರಣೆ ನಿಯಂತ್ರಣ ಕೇಂದ್ರಗಳನ್ನು (OCC) ಹೊಂದಿರುತ್ತವೆ.
ವಂದೇ ಭಾರತ್ ಒಂದು ದೊಡ್ಡ ಯಶಸ್ಸು ಎಂದು ಸಚಿವರು ಹೇಳಿದರು. ತಾಂತ್ರಿಕ ಮಾನದಂಡಗಳಲ್ಲಿ, ಇದು ವಿಶ್ವದ ಅತ್ಯುತ್ತಮವಾದವುಗಳೊಂದಿಗೆ ಸರಿಸಮಾನವಾಗಿದೆ. ರಫ್ತು ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನವನ್ನು ಹರಿಸಿರುವ ಭಾರತವು ಭವಿಷ್ಯದ ಪೀಳಿಗೆಯ ಹೈ-ಸ್ಪೀಡ್ ರೈಲುಗಳ ಮೇಲೆ ಕೆಲಸ ಮಾಡುತ್ತಿದೆ. ಭಾರತವು ಪ್ರಸ್ತುತ ವಂದೇ ಭಾರತ್ 3.0 ಅನ್ನು ನಿರ್ವಹಿಸುತ್ತಿದೆ, ಇದು ಅದರ ಹಿಂದಿನ ಆವೃತ್ತಿಗಳಿಗಿಂತ ಗಮನಾರ್ಹ ಸುಧಾರಣೆಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ವಂದೇ ಭಾರತ್ 3.0 ಈಗಾಗಲೇ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತದೆ, ಕಡಿಮೆ ಶಬ್ದ ಮತ್ತು ಕಂಪನ ಮಟ್ಟವನ್ನು ಕಾಯ್ದುಕೊಂಡು ಕೇವಲ 52 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ. ವೇಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವರು ಎತ್ತಿ ತೋರಿಸಿದರು. ಮುಂದಿನ 18 ತಿಂಗಳೊಳಗೆ ವಂದೇ ಭಾರತ್ 4.0 ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಾರ್ಯಕ್ಷಮತೆ ಮತ್ತು ಪ್ರಯಾಣಿಕರ ಅನುಭವದ ಪ್ರತಿಯೊಂದು ಅಂಶದಲ್ಲೂ ಜಾಗತಿಕ ಮಾನದಂಡಗಳನ್ನು ಹೊಂದಿರುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಹೊಸ ಆವೃತ್ತಿಯು ಶೌಚಾಲಯಗಳನ್ನು ಹೆಚ್ಚಿಸುವುದು, ಆಸನಗಳನ್ನು ಸುಧಾರಿಸುವುದು ಮತ್ತು ಬೋಗಿಗಳ ಒಟ್ಟಾರೆ ಕಾರ್ಯನೈಪುಣ್ಯವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ವಂದೇ ಭಾರತ್ 4.0 ಅನ್ನು ಜಾಗತಿಕ ಮಾನದಂಡವಾಗಿ ಸ್ಥಾಪಿಸುವುದು ಗುರಿಯಾಗಿದ್ದು, ಗುಣಮಟ್ಟ ಮತ್ತು ಸೌಕರ್ಯದಲ್ಲಿ ಅತ್ಯಂತ ಮುಂದುವರಿದ ರೈಲಾಗಲಿದ್ದು, ಪ್ರಪಂಚದಾದ್ಯಂತದ ದೇಶಗಳು ಅದನ್ನು ಅಳವಡಿಸಿಕೊಳ್ಳಲು ಬಯಸುತ್ತವೆ ಎಂದು ಅವರು ಹೇಳಿದರು.

ಅಮೃತ್ ಭಾರತ್ ರೈಲುಗಳ ಪ್ರಗತಿಯ ಬಗ್ಗೆಯೂ ಸಚಿವರು ಚರ್ಚಿಸಿದರು. ಅಮೃತ್ ಭಾರತ್ 2.0 ಕಾರ್ಯನಿರ್ವಹಿಸುತ್ತಿದೆ, ಜೊತೆಗೆ ಆವೃತ್ತಿ 3.0 ಪುಶ್-ಪುಲ್ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಯಲ್ಲಿದೆ. ಇದು ದೀರ್ಘ-ದೂರ ಪ್ರಯಾಣಗಳಿಗೆ ಸೂಕ್ತವಾಗಿದೆ ಎಂದು ಅವರು ಹೇಳಿದರು. ಅಮೃತ್ ಭಾರತ್ 4.0 ಮುಂದಿನ ಪೀಳಿಗೆಯ ರೈಲು ಸೆಟ್ ಗಳು ಮತ್ತು ಲೋಕೋಮೋಟಿವ್ ಗಳನ್ನು ಒಳಗೊಂಡಿರುತ್ತದೆ ಎಂದು ಸಚಿವರು ತಿಳಿಸಿದರು. ಮುಂದಿನ 36 ತಿಂಗಳೊಳಗೆ, ಹೊಸ ಪೀಳಿಗೆಯ ಪ್ರಯಾಣಿಕ ಲೋಕೋಮೋಟಿವ್ ಗಳನ್ನು ವಿನ್ಯಾಸಗೊಳಿಸುವ, ತಯಾರಿಸುವ ಮತ್ತು ಪರೀಕ್ಷೆಗೆ ಸಿದ್ಧಗೊಳಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಕಳೆದ 11 ವರ್ಷಗಳಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತೀಯ ರೈಲ್ವೆಯ ಆಧುನೀಕರಣ ಮತ್ತು ವಿಸ್ತರಣೆಗೆ ವಿಶೇಷ ಗಮನ ನೀಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದಕ್ಕಾಗಿ, ರೈಲ್ವೆ ಬಜೆಟ್ ಅನ್ನು ನಿರಂತರವಾಗಿ ಹೆಚ್ಚಿಸಲಾಗಿದೆ. ಕಳೆದ 11 ವರ್ಷಗಳಲ್ಲಿ, 35,000 ಕಿಲೋಮೀಟರ್ ಗಳಿಗೂ ಹೆಚ್ಚು ಹೊಸ ಹಳಿಗಳನ್ನು ಹಾಕಲಾಗಿದೆ ಮತ್ತು 46,000 ಕಿಲೋಮೀಟರ್ಗಳಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ವಿಶ್ವ ವೇದಿಕೆಯಲ್ಲಿ, ಭಾರತೀಯ ರೈಲ್ವೆ ಈಗ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಭಾರತದಲ್ಲಿ ತಯಾರಾದ ರೈಲು ಎಂಜಿನ್ ಗಳು ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಿಗೆ ರಫ್ತಾಗುತ್ತಿವೆ.
156 ವಂದೇ ಭಾರತ್ ಸೇವೆಗಳು, 30 ಅಮೃತ ಭಾರತ್ ಸೇವೆಗಳು ಮತ್ತು 4 ನಮೋ ಭಾರತ್ ಸೇವೆಗಳು ಈಗ ಭಾರತದಾದ್ಯಂತ ಚಾಲನೆಯಲ್ಲಿವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. 2024-25ರಲ್ಲಿ ದಾಖಲೆಯ 7,000 ಕ್ಕೂ ಹೆಚ್ಚು ಕೋಚ್ಗಳು, ಸರಿಸುಮಾರು 42,000 ವ್ಯಾಗನ್ ಗಳು ಮತ್ತು 1,681 ಲೋಕೋಮೋಟಿವ್ಗಳನ್ನು ಉತ್ಪಾದಿಸಲಾಗಿದೆ ಎಂದು ಅವರು ಹೇಳಿದರು. ಇದರೊಂದಿಗೆ, ದೇಶದ ಮೊದಲ 9,000 ಎಚ್.ಪಿ. ವಿದ್ಯುತ್ ಲೋಕೋಮೋಟಿವ್ ಅನ್ನು ಉದ್ಘಾಟಿಸಲಾಯಿತು, ಜೊತೆಗೆ 12,000 ಎಚ್.ಪಿ. ಲೋಕೋಮೋಟಿವ್ ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ಪ್ರತಿದಿನ 20 ದಶಲಕ್ಷಕ್ಕಿಂತಲೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಭಾರತೀಯ ರೈಲ್ವೆ, ಈಗ ಸರಕು ಸಾಗಣೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಜಾಲವಾಗಿದೆ, ಇದು ಅಮೆರಿಕವನ್ನು ಮೀರಿಸಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಬುಲೆಟ್ ರೈಲು ಯೋಜನೆ ವೇಗವಾಗಿ ಪ್ರಗತಿಯಲ್ಲಿದೆ ಮತ್ತು ಮೀಸಲಾದ ಸರಕು ಕಾರಿಡಾರ್ ಕೆಲಸವು 99% ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ, ದೇಶಾದ್ಯಂತ 1,300 ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ.
ಭಾರತೀಯ ರೈಲ್ವೆಯು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರದ ಚೆನಾಬ್ ಸೇತುವೆ, ಪಂಬನ್ನಲ್ಲಿರುವ ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆ ಮತ್ತು ಕುತುಬ್ ಮಿನಾರ್ ಗಿಂತ 42 ಮೀಟರ್ ಎತ್ತರದ ಬೈರಾಬಿ ಸೈರಂಗ್ ಸೇತುವೆ ಸೇರಿದಂತೆ ಹಲವಾರು ಗಮನಾರ್ಹ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಿದೆ. ರೈಲ್ವೆಯಲ್ಲಿ ಸುರಕ್ಷತೆ ಮತ್ತು ತಾಂತ್ರಿಕ ನಾವೀನ್ಯತೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ, ಪ್ರಸ್ತುತ ಹಣಕಾಸು ವರ್ಷಕ್ಕೆ ₹1.16 ಲಕ್ಷ ಕೋಟಿ ಬಜೆಟ್ ಅನ್ನು ನಿಗದಿಪಡಿಸಲಾಗಿದೆ, ಇದರಲ್ಲಿ ಸ್ಥಳೀಯ ಸುರಕ್ಷತಾ ವ್ಯವಸ್ಥೆ ʻಕವಚ್ʼ ಕೂಡ ಸೇರಿದೆ.
ಈ ಕಾರ್ಯಕ್ರಮದಲ್ಲಿ, ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿ.ಇ.ಒ ಶ್ರೀ ಸತೀಶ್ ಕುಮಾರ್ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. (ಡಾ.) ಮನೋಜ್ ಚೌಧರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. 'ಭವಿಷ್ಯ-ವಾಸ್ತವಿಕ' ಎಂಬ ವಿಷಯವನ್ನು ಆಧರಿಸಿದ ಪ್ರದರ್ಶನ ‘ಭವಿಷ್ಯಕ್ಕೆ ಸಿದ್ಧವಾದ ರೈಲ್ವೆ’ (‘Future-Ready Railways’) ಅನ್ನು ಭಾರತ ಮಂಟಪದಲ್ಲಿ ಅಕ್ಟೋಬರ್ 15 ರಿಂದ 17, 2025 ರವರೆಗೆ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 450ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದು, ಆಧುನಿಕ ರೈಲು ಮತ್ತು ಮೆಟ್ರೋ ಉತ್ಪನ್ನಗಳು, ನಾವೀನ್ಯತೆಗಳು ಮತ್ತು ಸುಸ್ಥಿರ ಪರಿಹಾರಗಳನ್ನು ಪ್ರದರ್ಶಿಸುತ್ತಾರೆ.
*****
(Release ID: 2179671)
Visitor Counter : 4