ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಡಿಶಾ ಪರ್ಬದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 24 NOV 2024 8:20PM by PIB Bengaluru

ಜೈ ಜಗನ್ನಾಥ್!

ಜೈ ಜಗನ್ನಾಥ್!

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಧರ್ಮೇಂದ್ರ ಪ್ರಧಾನ್ ಜೀ, ಶ್ರೀ ಅಶ್ವಿನಿ ವೈಷ್ಣವ್ ಜೀ, ಒಡಿಯಾ ಸಮಾಜದ ಅಧ್ಯಕ್ಷ ಶ್ರೀ ಸಿದ್ಧಾರ್ಥ್ ಪ್ರಧಾನ್ ಜೀ, ಒಡಿಯಾ ಸಮಾಜದ ಇತರ ಅಧಿಕಾರಿಗಳು, ಒಡಿಶಾದ ಎಲ್ಲಾ ಕಲಾವಿದರು, ಇತರ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!

ಒಡಿಶಾದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರ ಮತ್ತು ಜುಹಾರ್. ಒಡಿಶಾದ ಸಂಸ್ಕೃತಿಯ ಭವ್ಯ ಆಚರಣೆಯಾದ ಒಡಿಶಾ ಪರ್ಬ 2024 ರ ಭಾಗವಾಗಲು ನನಗೆ ಹೆಮ್ಮೆ ಇದೆ. ನಿಮ್ಮೆಲ್ಲರನ್ನೂ ಭೇಟಿ ಮಾಡುವುದು ನನಗೆ ತುಂಬಾ ಸಂತೋಷವನ್ನು ತರುತ್ತದೆ.

ಒಡಿಶಾ ಪರ್ಬದ ಸಂದರ್ಭದಲ್ಲಿ ನಾನು ನಿಮ್ಮೆಲ್ಲರಿಗೂ ಮತ್ತು ಒಡಿಶಾದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ವರ್ಷ ಸ್ವಾಭಾ ಕಬಿ ಗಂಗಾಧರ ಮೆಹರ್ ಅವರ ಪುಣ್ಯತಿಥಿಯ ಶತಮಾನೋತ್ಸವವೂ ಆಗಿದೆ. ಈ ಸಂದರ್ಭದಲ್ಲಿ ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ನಾನು ಭಕ್ತ ದಾಸಿಯಾ ಬೌರಿ ಜೀ, ಭಕ್ತ ಸಲಾಬೇಗಾ ಜೀ ಮತ್ತು ಒಡಿಯಾ ಭಾಗವತದ ಸಂಯೋಜಕ ಶ್ರೀ ಜಗನ್ನಾಥ ದಾಸ್ ಜೀ ಅವರನ್ನು ಗೌರವಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ. ಒಡಿಶಾ ತನ್ನ ಸಾಂಸ್ಕೃತಿಕ ವೈವಿಧ್ಯತೆಯ ಮೂಲಕ ಭಾರತವನ್ನು ಜೀವಂತವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸ್ನೇಹಿತರೇ,

ಒಡಿಶಾ ಸದಾ ಸಂತರು ಮತ್ತು ವಿದ್ವಾಂಸರ ನಾಡು. ಒಡಿಶಾದ ವಿದ್ವಾಂಸರು ಮಹಾಭಾರತ ಮತ್ತು ಒಡಿಯಾ ಭಾಗವತದಂತಹ ಪವಿತ್ರ ಗ್ರಂಥಗಳನ್ನು ಸರಳ ಭಾಷೆಯಲ್ಲಿ ಪ್ರತಿ ಮನೆಗೂ ತಂದ ರೀತಿ ಮತ್ತು ಋಷಿಮುನಿಗಳ ಬುದ್ಧಿವಂತಿಕೆಯೊಂದಿಗೆ ಜನರನ್ನು ಸಂಪರ್ಕಿಸಿದ ರೀತಿಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚು ಶ್ರೀಮಂತಗೊಳಿಸಿದೆ. ಭಗವಾನ್ ಜಗನ್ನಾಥ ಜೀ ಬಗ್ಗೆ ಒಡಿಯಾ ಭಾಷೆಯಲ್ಲಿ ವ್ಯಾಪಕ ಸಾಹಿತ್ಯ ಲಭ್ಯವಿದೆ. ಭಗವಾನ್ ಜಗನ್ನಾಥನ ಒಂದು ಕಥೆಯನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಭಗವಾನ್ ತನ್ನ ದೇವಾಲಯದಿಂದ ಹೊರಬಂದು ವೈಯಕ್ತಿಕವಾಗಿ ಯುದ್ಧವನ್ನು ಮುನ್ನಡೆಸಿದಾಗ ಯುದ್ಧಭೂಮಿಗೆ ಹೋಗುವ ದಾರಿಯಲ್ಲಿ, ಅವರು ತಮ್ಮ ಭಕ್ತ ಮಣಿಕಾ ಗೌಡುನಿ ಬಡಿಸಿದ ಮೊಸರನ್ನು ಸೇವಿಸಿದರು. ಈ ಕಥೆ ನಮಗೆ ಆಳವಾದ ಪಾಠಗಳನ್ನು ಕಲಿಸುತ್ತದೆ. ನಾವು ಶುದ್ಧ ಉದ್ದೇಶದಿಂದ ವರ್ತಿಸಿದರೆ, ಭಗವಂತನೇ ನಮ್ಮನ್ನು ನಡೆಸುತ್ತಾನೆ ಎಂದು ಅದು ನಮಗೆ ನೆನಪಿಸುತ್ತದೆ. ಪ್ರತಿಯೊಂದು ಸಂದರ್ಭದಲ್ಲಿ ನಾವು ಎಂದಿಗೂ ಒಂಟಿಯಾಗಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೇವರು ನಮ್ಮೊಂದಿಗಿರುವುದರಿಂದ ನಾವು ಯಾವಾಗಲೂ "ಪ್ಲಸ್ ಒನ್" ಆಗಿದ್ದೇವೆ.

ಸ್ನೇಹಿತರೇ,

ಒಡಿಶಾದ ಸಂತ-ಕವಿ ಭೀಮಾ ಭೋಯಿ ಹೇಳಿದರು, " ಮೋ ಜೀವನ ಪಛೇ ನರ್ಕೆ ಪಡಿಥಾವು ಜಗತ ಉದ್ಧಾರ ಹೇ’’ ಇದರರ್ಥ 'ಪ್ರಪಂಚದ ಮೋಕ್ಷವನ್ನು ಖಾತರಿಪಡಿಸಿದರೆ ನನ್ನ ಜೀವನವು ದುಃಖಕ್ಕೆ ಬೀಳಲಿ.' ಈ ಮನೋಭಾವವು ಒಡಿಶಾದ ಸಂಸ್ಕೃತಿಯನ್ನು ಸಾಕಾರಗೊಳಿಸುತ್ತದೆ. ಒಡಿಶಾ ಪ್ರತಿ ಯುಗದಲ್ಲೂ ರಾಷ್ಟ್ರ ಮತ್ತು ಮಾನವೀಯತೆಗೆ ಯಾವಾಗಲೂ ಸೇವೆ ಸಲ್ಲಿಸಿದೆ. ಪವಿತ್ರ ಪುರಿ ಧಾಮವು 'ಏಕ್ ಭಾರತ್, ಶ್ರೇಷ್ಠ ಭಾರತ್' (ಒಂದು ಭಾರತ, ಶ್ರೇಷ್ಠ ಭಾರತ) ಪರಿಕಲ್ಪನೆಯನ್ನು ಬಲಪಡಿಸಿದೆ. ಒಡಿಶಾದ ವೀರ ಪುತ್ರರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಪೈಕಾ ದಂಗೆಯ ಹುತಾತ್ಮರಿಗೆ ನೀಡಬೇಕಾದ ಋಣವನ್ನು ನಾವು ಎಂದಿಗೂ ತೀರಿಸಲಾರೆವು. ಪೈಕಾ ದಂಗೆಯ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಸೌಭಾಗ್ಯ ನಮ್ಮ ಸರ್ಕಾರಕ್ಕೆ ಸಿಕ್ಕಿತ್ತು.

ಸ್ನೇಹಿತರೇ,

ಇಡೀ ದೇಶವು ಉತ್ಕಲ್ ಕೇಶರಿ ಹರೇಕೃಷ್ಣಾ ಮಹಾತಾಬ್ ಅವರ ಕೊಡುಗೆಗಳನ್ನು ಸ್ಮರಿಸುತ್ತಿದೆ. ನಾವು ಅವರ 125ನೇ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಒಡಿಶಾ ಇತಿಹಾಸದುದ್ದಕ್ಕೂ ರಾಷ್ಟ್ರಕ್ಕೆ ಗಮನಾರ್ಹ ನಾಯಕತ್ವವನ್ನು ನೀಡಿದೆ. ಇಂದು, ಬುಡಕಟ್ಟು ಸಮುದಾಯಕ್ಕೆ ಸೇರಿದ ಒಡಿಶಾದ ಮಗಳು ದ್ರೌಪದಿ ಮುರ್ಮು ಜೀ ಅವರು ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ - ಇದು ನಮಗೆಲ್ಲರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ಅವರ ನಾಯಕತ್ವವು ಭಾರತದಾದ್ಯಂತ ಬುಡಕಟ್ಟು ಸಮುದಾಯಗಳಿಗೆ ಸಾವಿರಾರು ಕೋಟಿ ರೂ.ಗಳ ಕಲ್ಯಾಣ ಉಪಕ್ರಮಗಳಿಗೆ ಸ್ಫೂರ್ತಿ ನೀಡಿದೆ. ಇದು ಒಡಿಶಾ ಮಾತ್ರವಲ್ಲದೆ ಭಾರತದ ಇಡೀ ಬುಡಕಟ್ಟು ಸಮಾಜಕ್ಕೆ ಪ್ರಯೋಜನವನ್ನು ನೀಡಿದೆ.

ಸ್ನೇಹಿತರೇ,

ಒಡಿಶಾ ಸುಭದ್ರಾ ಮಾತೆಯ ನಾಡು. ಇದು 'ನಾರಿ ಶಕ್ತಿ' (ಮಹಿಳಾ ಶಕ್ತಿ) ಮತ್ತು ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಒಡಿಶಾದ ಮಹಿಳೆಯರು ಪ್ರಗತಿ ಹೊಂದಿದಾಗ ಅದು ಪ್ರಗತಿ ಹೊಂದುತ್ತದೆ. ಅದಕ್ಕಾಗಿಯೇ, ನಾನು ಕೆಲವು ದಿನಗಳ ಹಿಂದೆ ಒಡಿಶಾದ ತಾಯಂದಿರು ಮತ್ತು ಸಹೋದರಿಯರಿಗಾಗಿ ಸುಭದ್ರಾ ಯೋಜನೆಯನ್ನು ಪ್ರಾರಂಭಿಸಿದೆ. ಇದು ರಾಜ್ಯದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಉತ್ಕಲ್ ನ ಈ ಮಹಾನ್ ಪುತ್ರರ ಬಗ್ಗೆ ರಾಷ್ಟ್ರವು ತಿಳಿದುಕೊಳ್ಳಲಿ ಮತ್ತು ಅವರ ಜೀವನದಿಂದ ಸ್ಫೂರ್ತಿ ಪಡೆಯಲಿ. ಇದಕ್ಕಾಗಿಯೇ ಇಂತಹ ಘಟನೆಗಳು ಅಪಾರ ಪ್ರಾಮುಖ್ಯತೆಯನ್ನು ಹೊಂದಿವೆ.

ಸ್ನೇಹಿತರೇ,

ಉತ್ಕಲ್ ಐತಿಹಾಸಿಕವಾಗಿ ಭಾರತದ ಕಡಲ ಪರಾಕ್ರಮವನ್ನು ವಿಸ್ತರಿಸಿದೆ. ನಿನ್ನೆಯಷ್ಟೇ ಒಡಿಶಾದಲ್ಲಿ ಭವ್ಯವಾದ ಬಾಲಿ ಜಾತ್ರಾ ಮುಕ್ತಾಯಗೊಂಡಿತು. ಈ ವರ್ಷವೂ ಅದರ ಭವ್ಯ ಆಚರಣೆಯು ಕಟಕ್ ನ ಮಹಾನದಿಯ ದಡದಲ್ಲಿ ನವೆಂಬರ್ 15ರಂದು ಕಾರ್ತಿಕ ಪೂರ್ಣಿಮೆಯಿಂದ ಪ್ರಾರಂಭವಾಯಿತು. ಬಾಲಿ ಜಾತ್ರಾ ಭಾರತ ಮತ್ತು ಒಡಿಶಾದ ಕಡಲ ಪರಾಕ್ರಮದ ಸಂಕೇತವಾಗಿದೆ. ನೂರಾರು ವರ್ಷಗಳ ಹಿಂದೆ, ಇಂದು ನಮ್ಮಲ್ಲಿರುವ ಸುಧಾರಿತ ತಂತ್ರಜ್ಞಾನವಿಲ್ಲದಿದ್ದರೂ, ಈ ನೆಲದ ನಾವಿಕರು ಸಮುದ್ರಗಳನ್ನು ದಾಟುವ ಮೂಲಕ ಗಮನಾರ್ಹ ಧೈರ್ಯವನ್ನು ಪ್ರದರ್ಶಿಸಿದರು. ನಮ್ಮ ವ್ಯಾಪಾರಿಗಳು ಹಡಗುಗಳಲ್ಲಿ ಇಂಡೋನೇಷ್ಯಾದ ಬಾಲಿ, ಸುಮಾತ್ರಾ ಮತ್ತು ಜಾವಾದಂತಹ ಸ್ಥಳಗಳಿಗೆ ಪ್ರಯಾಣಿಸಿದರು. ಈ ಪ್ರಯಾಣಗಳ ಮೂಲಕ, ವ್ಯಾಪಾರ ಮಾತ್ರವಲ್ಲದೆ ಸಾಂಸ್ಕೃತಿಕ ವಿನಿಮಯವೂ ನಡೆಯಿತು. ಇಂದು, ಒಡಿಶಾದ ಕಡಲ ಶಕ್ತಿಯು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ದೃಷ್ಟಿಕೋನವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸ್ನೇಹಿತರೇ,

ಕಳೆದ ಹತ್ತು ವರ್ಷಗಳ ಅಚಲ ಪ್ರಯತ್ನಗಳು ಒಡಿಶಾದ ಭವಿಷ್ಯದ ಬಗ್ಗೆ ಹೊಸ ಭರವಸೆಯನ್ನು ಹುಟ್ಟುಹಾಕಿವೆ. 2024ರಲ್ಲಿ ಒಡಿಶಾದ ಜನರಿಂದ ಬಂದ ಅಭೂತಪೂರ್ವ ಆಶೀರ್ವಾದವು ಈ ದೃಷ್ಟಿಕೋನಕ್ಕೆ ವೇಗವನ್ನು ನೀಡಿದೆ. ನಾವು ದೊಡ್ಡ ಕನಸುಗಳನ್ನು ಕಲ್ಪಿಸಿದ್ದೇವೆ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೇವೆ. 2036 ರ ವೇಳೆಗೆ, ಒಡಿಶಾ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ, ಒಡಿಶಾವನ್ನು ದೇಶದ ಪ್ರಬಲ, ಶ್ರೀಮಂತ ಮತ್ತು ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ.

ಸ್ನೇಹಿತರೇ,

ಒಡಿಶಾ ಸೇರಿದಂತೆ ಪೂರ್ವ ಭಾರತವನ್ನು ಹಿಂದುಳಿದ ಎಂದು ಹಣೆಪಟ್ಟಿ ಹಚ್ಚಿದ ಸಮಯವಿತ್ತು. ಆದಾಗ್ಯೂ, ನಾನು ಪೂರ್ವ ಪ್ರದೇಶವನ್ನು ಭಾರತದ ಅಭಿವೃದ್ಧಿಯ ಎಂಜಿನ್ ಆಗಿ ನೋಡುತ್ತೇನೆ. ಆದ್ದರಿಂದ, ಪೂರ್ವ ಭಾರತದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಅದು ಸಂಪರ್ಕ, ಆರೋಗ್ಯ ರಕ್ಷಣೆ ಅಥವಾ ಶಿಕ್ಷಣವಾಗಿರಲಿ, ಪೂರ್ವ ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಕೆಲಸವನ್ನು ವೇಗಗೊಳಿಸಿದ್ದೇವೆ. ಒಂದು ದಶಕದ ಹಿಂದಿನ ಅವಧಿಗೆ ಹೋಲಿಸಿದರೆ, ಕೇಂದ್ರ ಸರ್ಕಾರವು ಈಗ ಒಡಿಶಾದ ಅಭಿವೃದ್ಧಿಗೆ ಮೂರು ಪಟ್ಟು ಬಜೆಟ್ ಅನ್ನು ಮೀಸಲಿಟ್ಟಿದೆ. ಈ ವರ್ಷದ ಹಂಚಿಕೆಯು ಹಿಂದಿನ ವರ್ಷಕ್ಕಿಂತ ಶೇ.30 ರಷ್ಟು ಹೆಚ್ಚಾಗಿದೆ. ಒಡಿಶಾದ ಪ್ರಗತಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ತ್ವರಿತವಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ.

ಸ್ನೇಹಿತರೇ,

ಬಂದರು ಆಧಾರಿತ ಕೈಗಾರಿಕಾ ಅಭಿವೃದ್ಧಿಗೆ ಒಡಿಶಾ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ಈ ಪ್ರದೇಶದಲ್ಲಿ ವ್ಯಾಪಾರವನ್ನು ಹೆಚ್ಚಿಸಲು ಧಮ್ರಾ, ಗೋಪಾಲ್ಪುರ, ಅಸ್ತರಂಗ, ಪಾಲೂರು ಮತ್ತು ಸುವರ್ಣರೇಖಾದಂತಹ ಬಂದರುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಒಡಿಶಾ ಭಾರತದ ಗಣಿಗಾರಿಕೆ ಮತ್ತು ಲೋಹದ ಶಕ್ತಿ ಕೇಂದ್ರವಾಗಿದೆ, ಉಕ್ಕು, ಅಲ್ಯೂಮಿನಿಯಂ ಮತ್ತು ಇಂಧನ ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಈ ಕ್ಷೇತ್ರಗಳತ್ತ ಗಮನ ಹರಿಸುವ ಮೂಲಕ, ನಾವು ಒಡಿಶಾದಲ್ಲಿ ಸಮೃದ್ಧಿಗೆ ಹೊಸ ಬಾಗಿಲುಗಳನ್ನು ತೆರೆಯಬಹುದು.

ಸ್ನೇಹಿತರೇ,

ಒಡಿಶಾದ ಫಲವತ್ತಾದ ಭೂಮಿಯು ಗೋಡಂಬಿ, ಸೆಣಬು, ಹತ್ತಿ, ಅರಿಶಿನ ಮತ್ತು ಎಣ್ಣೆಕಾಳುಗಳನ್ನು ಹೇರಳವಾಗಿ ಉತ್ಪಾದಿಸುತ್ತದೆ. ಈ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು, ನಮ್ಮ ರೈತ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುವುದು ನಮ್ಮ ಗುರಿಯಾಗಿದೆ. ಒಡಿಶಾದ ಸಮುದ್ರಾಹಾರ ಸಂಸ್ಕರಣಾ ಉದ್ಯಮವನ್ನು ವಿಸ್ತರಿಸಲು ಗಮನಾರ್ಹ ಸಾಮರ್ಥ್ಯವಿದೆ. ಒಡಿಶಾ ಸಮುದ್ರಾಹಾರವನ್ನು ಹೆಚ್ಚಿನ ಬೇಡಿಕೆಯಿರುವ ಜಾಗತಿಕ ಬ್ರಾಂಡ್ ಆಗಿ ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಸ್ನೇಹಿತರೇ,

ಒಡಿಶಾವನ್ನು ಹೂಡಿಕೆದಾರರಿಗೆ ಆದ್ಯತೆಯ ತಾಣವನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಸುಗಮ ವ್ಯಾಪಾರವನ್ನು ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ. 'ಉತ್ಕರ್ಷ್ ಉತ್ಕಲ್'ನಂತಹ ಉಪಕ್ರಮಗಳ ಮೂಲಕ ಹೂಡಿಕೆಯನ್ನು ಉತ್ತೇಜಿಸಲಾಗುತ್ತಿದೆ. ಹೊಸ ಸರ್ಕಾರ ರಚನೆಯಾದ ಮೊದಲ 100 ದಿನಗಳಲ್ಲಿ, ಒಡಿಶಾ 45,000 ಕೋಟಿ ರೂಪಾಯಿಗಳ ಹೂಡಿಕೆಗೆ ಅನುಮೋದನೆ ನೀಡಿದೆ. ಇಂದು, ಒಡಿಶಾ ದೂರದೃಷ್ಟಿ ಮತ್ತು ಮಾರ್ಗಸೂಚಿ ಎರಡನ್ನೂ ಹೊಂದಿದೆ. ಇದು ಹೂಡಿಕೆಗಳನ್ನು ಆಕರ್ಷಿಸುವುದಲ್ಲದೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಪ್ರಯತ್ನಗಳಿಗಾಗಿ ನಾನು ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಂಝಿ ಜೀ ಮತ್ತು ಅವರ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಒಡಿಶಾದ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುವ ಮೂಲಕ, ನಾವು ಅದನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು. ಒಡಿಶಾದ ವ್ಯೂಹಾತ್ಮಕ ಸ್ಥಳವು ಗಮನಾರ್ಹ ಪ್ರಯೋಜನವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ, ಇದು ಪೂರ್ವ ಮತ್ತು ಆಗ್ನೇಯ ಏಷ್ಯಾದೊಂದಿಗಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಒಡಿಶಾದ ಪಾತ್ರವು ಭವಿಷ್ಯದಲ್ಲಿ ಗಮನಾರ್ಹವಾಗಿ ಬೆಳೆಯುತ್ತದೆ. ನಮ್ಮ ಸರ್ಕಾರವು ರಾಜ್ಯದಿಂದ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ಒಡಿಶಾದಲ್ಲಿ ನಗರೀಕರಣವನ್ನು ಉತ್ತೇಜಿಸಲು ಅಗಾಧ ಅವಕಾಶಗಳಿವೆ. ನಮ್ಮ ಸರ್ಕಾರ ಈ ದಿಕ್ಕಿನಲ್ಲಿ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೆಚ್ಚು ಕ್ರಿಯಾತ್ಮಕ ಮತ್ತು ಉತ್ತಮ ಸಂಪರ್ಕಿತ ನಗರಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ನಾವು ಒಡಿಶಾದ ಶ್ರೇಣಿ 2 ನಗರಗಳಲ್ಲಿ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇವೆ. ನಿರ್ದಿಷ್ಟವಾಗಿ, ಪಶ್ಚಿಮ ಒಡಿಶಾದ ಜಿಲ್ಲೆಗಳು ಹೊಸ ಮೂಲಸೌಕರ್ಯ ಅಭಿವೃದ್ಧಿಯನ್ನು ನೋಡುತ್ತವೆ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೇ,

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಡಿಶಾ ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮುತ್ತಿದೆ. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ, ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಲು ಸಜ್ಜಾಗಿದೆ. ಈ ಪ್ರಯತ್ನಗಳು ರಾಜ್ಯದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸುತ್ತಿವೆ.

ಸ್ನೇಹಿತರೇ,

ಒಡಿಶಾ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದಾಗಿ ಯಾವಾಗಲೂ ವಿಶೇಷವಾಗಿದೆ. ಒಡಿಶಾದ ಕಲಾ ಪ್ರಕಾರಗಳು ಎಲ್ಲರನ್ನೂ ಆಕರ್ಷಿಸುತ್ತವೆ ಮತ್ತು ಸ್ಫೂರ್ತಿ ನೀಡುತ್ತವೆ. ಅದು ಒಡಿಸ್ಸಿ ನೃತ್ಯವಾಗಿರಲಿ ಅಥವಾ ವರ್ಣಚಿತ್ರಗಳಾಗಿರಲಿ, ರಾಜ್ಯವು ಕಲಾತ್ಮಕ ಉತ್ಕೃಷ್ಟತೆಯಿಂದ ತುಂಬಿದೆ. ಸೌರಾ ಚಿತ್ರಕಲೆಯ ಬುಡಕಟ್ಟು ಕಲೆ ಮತ್ತು ಸಂಬಲ್ಪುರಿ, ಬೊಮ್ಕೈ ಮತ್ತು ಕೋಟ್ಪಾಡ್ ನೇಕಾರರ ಕರಕುಶಲತೆಯು ಅಷ್ಟೇ ಗಮನಾರ್ಹವಾಗಿದೆ. ನಾವು ಈ ಕಲಾ ಪ್ರಕಾರಗಳು ಮತ್ತು ಕರಕುಶಲ ವಸ್ತುಗಳನ್ನು ಹೆಚ್ಚು ಉತ್ತೇಜಿಸಿದಷ್ಟೂ, ಈ ಪರಂಪರೆಯನ್ನು ಸಂರಕ್ಷಿಸುವ ಮತ್ತು ಶ್ರೀಮಂತಗೊಳಿಸುವ ನುರಿತ ಒಡಿಯಾ ಕುಶಲಕರ್ಮಿಗಳನ್ನು ನಾವು ಹೆಚ್ಚು ಗೌರವಿಸುತ್ತೇವೆ.

ಸ್ನೇಹಿತರೇ,

ಒಡಿಶಾ ವಾಸ್ತುಶಿಲ್ಪ ಮತ್ತು ವಿಜ್ಞಾನದ ಅಪಾರ ಪರಂಪರೆಯನ್ನು ಹೊಂದಿದೆ. ಕೊನಾರ್ಕ್ ನ ಸೂರ್ಯ ದೇವಾಲಯವು ಅದರ ಭವ್ಯತೆ ಮತ್ತು ವೈಜ್ಞಾನಿಕ ತೇಜಸ್ಸು ಮತ್ತು ಲಿಂಗರಾಜ್ ಮತ್ತು ಮುಕ್ತೇಶ್ವರದಂತಹ ಪ್ರಾಚೀನ ದೇವಾಲಯಗಳು ತಮ್ಮ ವಾಸ್ತುಶಿಲ್ಪದ ವೈಭವದಿಂದ ಎಲ್ಲರನ್ನೂ ಬೆರಗುಗೊಳಿಸುತ್ತವೆ. ಇಂದು ಜನರು ಈ ಅದ್ಭುತಗಳನ್ನು ನೋಡಿದಾಗ, ಶತಮಾನಗಳ ಹಿಂದೆ ಒಡಿಶಾದ ವಿಜ್ಞಾನದ ಜ್ಞಾನವು ಎಷ್ಟು ಮುಂದುವರೆದಿತ್ತು ಎಂದು ಅವರು ಆಶ್ಚರ್ಯ ಪಡುತ್ತಾರೆ.

ಸ್ನೇಹಿತರೇ,

ಒಡಿಶಾ ಪ್ರವಾಸೋದ್ಯಮಕ್ಕೆ ಅಪರಿಮಿತ ಸಾಮರ್ಥ್ಯದ ನಾಡು. ಈ ಸಾಮರ್ಥ್ಯವನ್ನು ಅರಿತುಕೊಳ್ಳಲು, ನಾವು ಅನೇಕ ಆಯಾಮಗಳಲ್ಲಿ ಕೆಲಸ ಮಾಡಬೇಕಾಗಿದೆ. ಒಡಿಶಾ ಮತ್ತು ರಾಷ್ಟ್ರ ಮಟ್ಟದಲ್ಲಿ ಒಡಿಶಾದ ಪರಂಪರೆ ಮತ್ತು ಅಸ್ಮಿತೆಯನ್ನು ಗೌರವಿಸುವ ಮತ್ತು ಆಚರಿಸುವ ಸರ್ಕಾರಗಳನ್ನು ನಾವು ಹೊಂದಿದ್ದೇವೆ ಎಂಬುದನ್ನು ನೀವು ನೋಡಬಹುದು. ಕಳೆದ ವರ್ಷ, ಜಿ-20 ಶೃಂಗಸಭೆಯ ಸಮಯದಲ್ಲಿ, ನಾವು ಭವ್ಯವಾದ ಸೂರ್ಯ ದೇವಾಲಯವನ್ನು ಜಾಗತಿಕ ನಾಯಕರು ಮತ್ತು ರಾಜತಾಂತ್ರಿಕರಿಗೆ ಪ್ರದರ್ಶಿಸಿದ್ದೇವೆ. ಅದರ ಮಹತ್ವವನ್ನು ಬಿಂಬಿಸಿದ್ದೇವೆ. ರತ್ನ ಭಂಡಾರ ಸೇರಿದಂತೆ ಮಹಾಪ್ರಭು ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಈಗ ತೆರೆಯಲಾಗಿದೆ ಎಂದು ನನಗೆ ಸಂತೋಷವಾಗಿದೆ.

ಸ್ನೇಹಿತರೇ,

ಒಡಿಶಾದ ಗುರುತನ್ನು ಜಾಗತಿಕವಾಗಿ ಪ್ರಚುರಪಡಿಸಲು ನಾವು ಅನೇಕ ನವೀನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಉದಾಹರಣೆಗೆ, ನಾವು ಬಾಲಿ ಜಾತ್ರಾ ದಿನವನ್ನು ಘೋಷಿಸಬಹುದು ಮತ್ತು ಅದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಚಾರ ಮಾಡಬಹುದು. ಅಂತೆಯೇ, ಶಾಸ್ತ್ರೀಯ ಒಡಿಸ್ಸಿ ನೃತ್ಯ ಪ್ರಕಾರವನ್ನು ಆಚರಿಸಲು ನಾವು ಒಡಿಸ್ಸಿ ದಿನವನ್ನು ಪ್ರಾರಂಭಿಸಬಹುದು. ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೇರಿದಂತೆ ವಿವಿಧ ಬುಡಕಟ್ಟು ಪರಂಪರೆಗಳನ್ನು ಆಚರಿಸಲು ಹೊಸ ಸಂಪ್ರದಾಯಗಳನ್ನು ಪ್ರಾರಂಭಿಸಬಹುದು. ಇದು ಪ್ರವಾಸೋದ್ಯಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸುತ್ತದೆ. ಅವಕಾಶಗಳನ್ನು ಸೃಷ್ಟಿಸುತ್ತದೆ. ಶೀಘ್ರದಲ್ಲೇ, ಪ್ರವಾಸಿ ಭಾರತೀಯ ದಿವಸ್ ಕೂಡ ಭುವನೇಶ್ವರದಲ್ಲಿ ನಡೆಯಲಿದ್ದು, ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸಲಿದೆ. ಇದೇ ಮೊದಲ ಬಾರಿಗೆ ಒಡಿಶಾ ಪ್ರವಾಸಿ ಭಾರತೀಯ ದಿವಸ್ ಆಯೋಜಿಸಲಿದೆ. ಇದು ರಾಜ್ಯಕ್ಕೆ ಗಮನಾರ್ಹ ಅವಕಾಶವನ್ನು ಒದಗಿಸುತ್ತದೆ.

ಸ್ನೇಹಿತರೇ,

ಅನೇಕ ಸ್ಥಳಗಳಲ್ಲಿ, ಬದಲಾಗುತ್ತಿರುವ ಸಮಯವು ಜನರು ತಮ್ಮ ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಮರೆಯುವಂತೆ ಮಾಡಿದೆ. ಆದಾಗ್ಯೂ, ಒಡಿಯಾ ಸಮುದಾಯವು ಎಲ್ಲೇ ವಾಸಿಸುತ್ತಿದ್ದರೂ ಅವರ ಭಾಷೆ, ಸಂಸ್ಕೃತಿ ಮತ್ತು ಹಬ್ಬಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ನಾನು ಗಮನಿಸಿದ್ದೇನೆ. ಒಬ್ಬರ ಮಾತೃಭಾಷೆ ಮತ್ತು ಸಾಂಸ್ಕೃತಿಕ ಬೇರುಗಳ ಶಕ್ತಿಯು ನಮ್ಮನ್ನು ನಮ್ಮ ಪರಂಪರೆಯೊಂದಿಗೆ ಸಂಪರ್ಕಿಸುತ್ತದೆ. ಇತ್ತೀಚೆಗೆ ನಾನು ದಕ್ಷಿಣ ಅಮೆರಿಕದ ಗಯಾನಾದಲ್ಲಿ ಈ ಉತ್ಸಾಹವನ್ನು ನೋಡಿದೆ. 200 ವರ್ಷಗಳ ಹಿಂದೆ ವಲಸೆ ಹೋದರೂ ನೂರಾರು ಕಾರ್ಮಿಕರು ರಾಮಚರಿತ ಮಾನಸ ಮತ್ತು ಭಗವಾನ್ ರಾಮನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು, ಭಾರತದೊಂದಿಗಿನ ತಮ್ಮ ಸಂಬಂಧವನ್ನು ಉಳಿಸಿಕೊಂಡರು. ಅಂತಹ ಪರಂಪರೆಯ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿ ಪ್ರಗತಿ ಸಾಧಿಸಿದಾಗ, ಅದರ ಪ್ರಯೋಜನಗಳು ಎಲ್ಲರಿಗೂ ತಲುಪುತ್ತವೆ. ಈ ರೀತಿಯಾಗಿ ನಾವು ಒಡಿಶಾವನ್ನು ಹೊಸ ಎತ್ತರಕ್ಕೆ ಏರಿಸಬಹುದು.

ಸ್ನೇಹಿತರೇ,

ಈ ಆಧುನಿಕ ಯುಗದಲ್ಲಿ, ನಾವು ನಮ್ಮ ಬೇರುಗಳನ್ನು ಬಲಪಡಿಸುವಾಗ ಸಮಕಾಲೀನ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಒಡಿಶಾ ಪರ್ಬದಂತಹ ಕಾರ್ಯಕ್ರಮಗಳು ಇದಕ್ಕೆ ಮಾಧ್ಯಮವಾಗಿ ಕಾರ್ಯನಿರ್ವಹಿಸಬಹುದು.

ಮುಂಬರುವ ವರ್ಷಗಳಲ್ಲಿ ಈ ಕಾರ್ಯಕ್ರಮವು ದೆಹಲಿಯಲ್ಲಿ ತನ್ನ ಪ್ರಸ್ತುತ ಗಡಿಗಳನ್ನು ಮೀರಿ ಇನ್ನಷ್ಟು ಬೆಳೆಯುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಶಾಲೆಗಳು, ಕಾಲೇಜುಗಳು ಮತ್ತು ರಾಜ್ಯಗಳಾದ್ಯಂತ ಜನರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಇತರ ರಾಜ್ಯಗಳ ಜನರು ಒಡಿಶಾದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದರ ಸಂಸ್ಕೃತಿಯನ್ನು ನಿಕಟವಾಗಿ ಅನುಭವಿಸುವುದು ಬಹಳ ಮುಖ್ಯ. ಒಡಿಶಾ ಪರ್ಬಾದ ಕಂಪನವು ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳನ್ನು ತಲುಪುತ್ತದೆ. ಸಾಮೂಹಿಕ ಭಾಗವಹಿಸುವಿಕೆಗೆ ಪ್ರಬಲ ವೇದಿಕೆಯಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ಭಾವನೆಯೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ತುಂಬ ಧನ್ಯವಾದಗಳು!

ಜೈ ಜಗನ್ನಾಥ್!

 

*****


(ಪ್ರಕಟಣೆ ಐ.ಡಿ.: 2178900) ವಿಸಿಟರ್ ಕೌಂಟರ್ : 65