ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ದಿನಾಚರಣೆಯಂದು ಪ್ರಧಾನಮಂತ್ರಿ ಗೌರವ ನಮನ 


ಭಾರತದಾದ್ಯಂತ ಸಾಮಾಜಿಕ-ರಾಜಕೀಯ ಜಾಗೃತಿಯನ್ನು ಪ್ರೇರೇಪಿಸುವಲ್ಲಿ ಲೋಕನಾಯಕ ಜಯ ಪ್ರಕಾಶ ನಾರಾಯಣ್ ಅವರ ಪಾತ್ರವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ 

ತುರ್ತು ಪರಿಸ್ಥಿತಿಯ ಸಮಯದಲ್ಲಿ ಬರೆದ ಲೋಕನಾಯಕ ಜಯಪ್ರಕಾಶ್ ನಾರಾಯಣ್  ಅವರ 'ಪ್ರಿಸನ್ ಡೈರಿ'ಯ ಅಪರೂಪದ ಪುಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ 

Posted On: 11 OCT 2025 9:29AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಭಾರತದ ಅತ್ಯಂತ ನಿರ್ಭೀತ ಆತ್ಮಸಾಕ್ಷಿಯ ಧ್ವನಿಗಳಲ್ಲಿ ಒಬ್ಬರು, ಅವರು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದಣಿವರಿಯದ ಪ್ರತಿಪಾದಕ ಎಂದು ಪ್ರಧಾನಮಂತ್ರಿ ಅವರನ್ನು ಬಣ್ಣಿಸಿದ್ದಾರೆ. 

ಲೋಕನಾಯಕ ಜಯಪ್ರಕಾಶ ನಾರಾಯಣ ಅವರು ಸಾಮಾನ್ಯ ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ದೇಶದ ಸಂಪೂರ್ಣ ಕ್ರಾಂತಿಗಾಗಿ ಅವರು ನೀಡಿದ್ದ ಸ್ಪಷ್ಟ ಕರೆ ಸಮಾನತೆ, ನೀತಿಶಾಸ್ತ್ರ ಮತ್ತು ಉತ್ತಮ ಆಡಳಿತದ ಮೇಲೆ ನಿರ್ಮಿಸಲಾದ ರಾಷ್ಟ್ರವನ್ನು ಕಲ್ಪಿಸುವ ಸಾಮಾಜಿಕ ಚಳುವಳಿಯನ್ನು ಹುಟ್ಟುಹಾಕಿತ್ತು. 

ಜಯಪ್ರಕಾಶ ನಾರಾಯಣ್ ಅವರ ಶಾಶ್ವತ ಪರಂಪರೆಯನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಬಿಹಾರ ಮತ್ತು ಗುಜರಾತ್‌ ಸೇರಿದಂತೆ ಹಲವಾರು ಜನಾಂದೋಲನಗಳಿಗೆ ಪ್ರೇರಣೆ ನೀಡಿದರು. ಇದು ಭಾರತದಾದ್ಯಂತ ಸಾಮಾಜಿಕ-ರಾಜಕೀಯ ಜಾಗೃತಿಗೆ ಕಾರಣವಾಯಿತು. ಈ ಚಳವಳಿಗಳು, ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನವನ್ನು ತುಳಿದ ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಬೆಚ್ಚಿಬೀಳಿಸಿದ್ದವು ಎಂದು ಪ್ರಧಾನಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ದೇಶದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬರೆದ ಲೋಕನಾಯಕ್ ಜಯಪ್ರಕಾಶ ನಾರಾಯಣ ಅವರ "ಪ್ರಿಸನ್ ಡೈರಿ" ಯ ದಾಖಲೆ ಪುಟಗಳ ಅಪರೂಪದ ನೋಟವನ್ನು ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ. ಈ ಪುಸ್ತಕವು ಜಯ ಪ್ರಕಾಶ ನಾರಾಯಣ ಅವರ ಏಕಾಂತ ಬಂಧನದ ಸಮಯದಲ್ಲಿ ಅವರ ವೇದನೆ ಮತ್ತು ಪ್ರಜಾಪ್ರಭುತ್ವದ ಮೇಲಿನ ಅವರ ಅವಿಶ್ರಾಂತ ನಂಬಿಕೆಯನ್ನು ಸೆರೆಹಿಡಿಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಉಲ್ಲೇಖವಾದ 'ಭಾರತದ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆದ ಪ್ರತಿಯೊಂದು ಮೊಳೆಯೂ ನನ್ನ ಹೃದಯಕ್ಕೆ ಹೊಡೆದ ಮೊಳೆಯಂತೆ." ಎಂಬ ಬರಹವನ್ನು ಪ್ರಸ್ತಾಪಿಸಿದ್ದಾರೆ. 

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ: 

“ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮ ವಾರ್ಷಿಕೋತ್ಸವದಂದು, ಭಾರತದ ಅತ್ಯಂತ ನಿರ್ಭೀತ ಆತ್ಮಸಾಕ್ಷಿಯ ಧ್ವನಿಗಳಲ್ಲಿ ಒಬ್ಬರಾದ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದಣಿವರಿಯದ ಪ್ರತಿಪಾದಕರಾದ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ."

"ಲೋಕನಾಯಕ್ ಜೆಪಿ ಸಾಮಾನ್ಯ ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸಂಪೂರ್ಣ ಕ್ರಾಂತಿಗಾಗಿ ಅವರ ಸ್ಪಷ್ಟ ಕರೆಯು ಸಮಾನತೆ, ನೀತಿಶಾಸ್ತ್ರ ಮತ್ತು ಉತ್ತಮ ಆಡಳಿತದ ಮೇಲೆ ನಿರ್ಮಿಸಲಾದ ರಾಷ್ಟ್ರವನ್ನು ಕಲ್ಪಿಸುವ ಸಾಮಾಜಿಕ ಚಳುವಳಿಯನ್ನು ಹುಟ್ಟುಹಾಕಿತು. ಅವರು ಹಲವಾರು ಸಾಮೂಹಿಕ ಚಳುವಳಿಗಳಿಗೆ ಸ್ಫೂರ್ತಿ ನೀಡಿದರು, ವಿಶೇಷವಾಗಿ ಬಿಹಾರ ಮತ್ತು ಗುಜರಾತ್‌ನಲ್ಲಿ, ಇದು ಭಾರತದಾದ್ಯಂತ ಸಾಮಾಜಿಕ-ರಾಜಕೀಯ ಜಾಗೃತಿಗೆ ಕಾರಣವಾಯಿತು. ಈ ಚಳುವಳಿಗಳು ಆಗಿನ ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ನಡುಗಿಸಿದವು, ಅದು ತುರ್ತು ಪರಿಸ್ಥಿತಿಯನ್ನು ಹೇರಿತು ಮತ್ತು ನಮ್ಮ ಸಂವಿಧಾನವನ್ನು ತುಳಿದು ಹಾಕಿತು."

“ಲೋಕನಾಯಕ್ ಜೆಪಿ ಅವರ ಜನ್ಮ ವಾರ್ಷಿಕೋತ್ಸವದಂದು, ಆರ್ಕೈವ್‌ಗಳಿಂದ ಅಪರೂಪದ ನೋಟ…

ತುರ್ತು ಪರಿಸ್ಥಿತಿಯ ಸಮಯದಲ್ಲಿ ಬರೆದ ಅವರ ಪುಸ್ತಕ, ಜೈಲು ದಿನಚರಿಯ ಪುಟಗಳು ಇಲ್ಲಿವೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ, ಲೋಕನಾಯಕ್ ಜೆಪಿ ಹಲವಾರು ದಿನಗಳನ್ನು ಏಕಾಂತ ಸೆರೆವಾಸದಲ್ಲಿ ಕಳೆದರು. ಅವರ ಜೈಲು ದಿನಚರಿಯು ಪ್ರಜಾಪ್ರಭುತ್ವದ ಮೇಲಿನ ಅವರ ವೇದನೆ ಮತ್ತು ಅವಿನಾಭಾವ ನಂಬಿಕೆಯನ್ನು ಸೆರೆಹಿಡಿಯುತ್ತದೆ.

“ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲ್ಪಟ್ಟ ಪ್ರತಿಯೊಂದು ಮೊಳೆಯೂ ನನ್ನ ಹೃದಯಕ್ಕೆ ಹೊಡೆದ ಮೊಳೆಯಂತಿದೆ” ಎಂದು ಅವರು ಬರೆದಿದ್ದಾರೆ.”

 

*****


(Release ID: 2177781) Visitor Counter : 5