ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟ ಸಮ್ಮೇಳನದ (CII) ನಂತರ ಬಜೆಟ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿಯವರು ಮಾಡಿದ ಭಾಷಣದ ಕನ್ನಡ ಅನುವಾದ

प्रविष्टि तिथि: 30 JUL 2024 3:44PM by PIB Bengaluru

ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಂಜೀವ್ ಪುರಿಯವರೇ, ಕೈಗಾರಿಕಾ ಜಗತ್ತಿನ ಗಣ್ಯ ವ್ಯಕ್ತಿಗಳೇ, ಹಿರಿಯ ರಾಜತಾಂತ್ರಿಕರೇ, ದೇಶಾದ್ಯಂತದ ವ್ಯಾಪಾರ ಮುಖಂಡರೇ, ವೀಡಿಯೊ ಕಾನ್ಫರೆನ್ಸ್ ಮೂಲಕ ನಮ್ಮೊಂದಿಗೆ ಸೇರಿರುವ ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಇದು ಯುವ ಜನತೆಯ ಸಭೆಯಾಗಿದ್ದರೆ, ನಾನು "ಹೌ ಇಸ್ ದ ಜೋಶ್?" ಎಂದು ಪ್ರಾರಂಭಿಸುತ್ತಿದ್ದೆ, ಆದರೆ ಈಗಲೂ ಈ ಪ್ರಶ್ನೆ ಸಂದರ್ಬೊಚಿತವೆಂದು ತೋರುತ್ತದೆ. ನನ್ನ ದೇಶದ ಸಾಧಕರು ಉತ್ಸಾಹದಿಂದಿರುವಾಗ, ಭಾರತ ಎಂದಿಗೂ ಹಿಂದುಳಿಯಲು ಸಾಧ್ಯವಿವೇ ಇಲ್ಲ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಭಾರತೀಯ ಕೈಗಾರಿಕಾ ಒಕ್ಕೂಟಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ, ನಾವು ಚರ್ಚೆಯಲ್ಲಿ ಪಾಲ್ಗೊಂಡದ್ದು ನನಗೆ ಇನ್ನೂ ನೆನಪಿದೆ, ಇದು ನಿಮ್ಮಲ್ಲಿ ಅನೇಕರಿಗೆ ನೆನಪಿರಬಹುದು. ವಿಷಯದ ಕೇಂದ್ರ ಬಿಂದು "ನಮ್ಮ ಅಭಿವೃದ್ದಿ ಹೇಗೆ" ಎಂಬುದಾಗಿತ್ತು. ಆ ಸಾಂಕ್ರಾಮಿಕ ರೋಗದ ಸಮಯದಲ್ಲಿಯೇ ನಾನು, ಭಾರತ ಶೀಘ್ರದಲ್ಲೇ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ನಿಮಗೆ ಭರವಸೆ ನೀಡಿದ್ದೆ. ಈ ವಿಷಯದ ಬಗ್ಗೆ ಹಿಂದಿರುಗಿ ನೋಡಿದಾಗ ಇಂದು ನಾವು ಎಲ್ಲಿದ್ದೇವೆ? ಭಾರತವು ಶೇಕಡಾ 8 ರಷ್ಟು ಪ್ರಭಾವಶಾಲಿ ದರದಲ್ಲಿ ಬೆಳೆಯುತ್ತಿದೆ. ಇಂದು, ನಾವೆಲ್ಲರೂ "ವಿಕಸಿತ ಭಾರತ" ಪಯಣದ ಬಗ್ಗೆ ಚರ್ಚಿಸುತ್ತಿದ್ದೇವೆ. ಈ ಪರಿವರ್ತನೆಯು ಕೇವಲ ಭಾವನೆಗಳ ಬಗ್ಗೆ ಮಾತ್ರವಲ್ಲದೆ ಆತ್ಮವಿಶ್ವಾಸದ ಬಗ್ಗೆಯೂ ಆಗಿದೆ. ಪ್ರಸ್ತುತ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಈ ನಿಟ್ಟಿನಲ್ಲಿ ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ದಿನ ಬಹಳ ದೂರವಿಲ್ಲ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ನೀಡಿದ ಭರವಸೆಗಳನ್ನು ಅವರು ಚುನಾವಣೆಯಲ್ಲಿ ಗೆದ್ದಮೇಲೆ ಮರೆತುಬಿಡುವುದು ಸಾಮಾನ್ಯವಾಗಿದೆ. ಆದರೆ, ನಾನು ಈ ಪ್ರವೃತ್ತಿಗೆ ಅಪವಾದವಾಗಿದ್ದೇನೆ. ನನ್ನ ಮೂರನೇ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾನು ಭರವಸೆ ನೀಡಿದ್ದನ್ನು ನೀವು ನೆನಪಿಸಿಕೊಳ್ಳಬಹುದು. ನಾವು ಆ ಗುರಿಯತ್ತ ಸ್ಥಿರವಾಗಿ ಮುನ್ನಡೆಯುತ್ತಿದ್ದೇವೆಂದು ತಿಳಿಸಲು ನಾನು ಹರ್ಷಿಸುತ್ತೇನೆ.

ಸ್ನೇಹಿತರೇ,

2014 ರಲ್ಲಿ ನೀವು ದೇಶಕ್ಕೆ ಸೇವೆ ಸಲ್ಲಿಸುವ ಸದವಕಾಶವನ್ನು ನಮಗೆ ನೀಡಿದಾಗ, ಅಂದರೆ 2014 ರಲ್ಲಿ ನಾವು ಸರ್ಕಾರವನ್ನು ರಚಿಸಿದಾಗ, ನಮ್ಮ ಸರ್ಕಾರವು ಭಾರತದ ಆರ್ಥಿಕತೆಯನ್ನು ಮತ್ತೆ ದಾರಿಗೆ ತರುವುದು ಹೇಗೆ ಎಂಬ ಒಂದು ನಿರ್ಣಾಯಕ ಸವಾಲನ್ನು ಎದುರಿಸಬೇಕಾಗಿತ್ತು. 2014 ಕ್ಕಿಂತ ಮೊದಲು ನಮ್ಮ ರಾಷ್ಟ್ರವನ್ನು "ದುರ್ಬಲ ಐದರ" ಪಟ್ಟಿಯಲ್ಲಿದ್ದು, ಆ ಅವಧಿಯಲ್ಲಿ ನಡೆದ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಳು ನಮಗಿನ್ನೂ ನೆನಪಿವೆ. ನಮ್ಮ ಸರ್ಕಾರ ಆ ಸಮಯದಲ್ಲಿ ಆರ್ಥಿಕತೆಯ ಸ್ಥಿತಿಯನ್ನು ವಿವರಿಸುವ ಶ್ವೇತಪತ್ರವನ್ನು ಮಂಡಿಸಿದೆ. ನಾನು ಈಗ ಆ ವಿವರಗಳನ್ನು ಕೆದಕಲು ಹೋಗುವುದಿಲ್ಲ, ಆದರೆ, ನಮ್ಮ ಹಿಂದಿನ ಆರ್ಥಿಕ ಪರಿಸ್ಥಿತಿಗಳು ಮತ್ತು ನಾವು ಎದುರಿಸಿದ ಸವಾಲುಗಳನ್ನು ಚರ್ಚಿಸಲು ಮತ್ತು ಅಧ್ಯಯನ ಮಾಡಲು ನಾನು ನಿಮ್ಮನ್ನು ಮತ್ತು ನಿಮ್ಮಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತೇನೆ. ನಾವು ಇಂದು ಇರುವ ಸ್ಥಾನವನ್ನು ತಲುಪಲು, ಭಾರತದ ಉದ್ಯಮವನ್ನು ಆ ರೀತಿಯ ಕ್ಲಿಷ್ಟಕರವಾದ ದೊಡ್ಡ ಬಿಕ್ಕಟ್ಟಿನಿಂದ ಪಾರು ಮಾಡಿದ್ದೇವೆ. ನಿಮಗೆ ತಿಳಿದಂತೆ ಕೆಲವೇ ದಿನಗಳ ಹಿಂದೆ ಬಜೆಟ್ ಅನ್ನು ಮಂಡಿಸಲಾಯಿತು. ನಾನು ನಿಮ್ಮ ಸಂಸ್ಥೆಯಿಂದ ಸಿದ್ಧಪಡಿಸಲಾದ ದಾಖಲೆಯನ್ನು ಗಮನಿಸುತ್ತಿದ್ದೆ, ಅದನ್ನು ನಾನು ಮುಂದಿನ ದಿನಗಳಲ್ಲಿ ವಿವರವಾಗಿ ಅಧ್ಯಯನ ಮಾಡಲು ಯೋಚಿಸುತ್ತಿದ್ದೇನೆ. ಬಜೆಟ್ ಬಗ್ಗೆ ಚರ್ಚೆಗಳು ನಡೆಯುತ್ತಿರುವುದರಿಂದ, ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಸ್ನೇಹಿತರೇ,

2013-14 ರಲ್ಲಿ, ಡಾ. ಮನಮೋಹನ್ ಸಿಂಗ್ ಅವರ ಹಿಂದಿನ ಸರ್ಕಾರದ ಕೊನೆಯ ಬಜೆಟ್ 16 ಲಕ್ಷ ಕೋಟಿ ರೂ. ಗಳಾಗಿತ್ತು. ಇಂದು, ನಮ್ಮ ಸರ್ಕಾರದ ಅಡಿಯಲ್ಲಿ, ಬಜೆಟ್ ಮೂರು ಪಟ್ಟು ಹೆಚ್ಚಾಗಿದ್ದು 48 ಲಕ್ಷ ಕೋಟಿ ರೂ. ಗಳಿಗೆ ತಲುಪಿದೆ. ಸಂಪನ್ಮೂಲ ಹೂಡಿಕೆಯ ಅತ್ಯಂತ ಉತ್ಪಾದಕ ರೂಪವೆಂದು ಗುರುತಿಸಲ್ಪಟ್ಟ ಬಂಡವಾಳ ವೆಚ್ಚವು ಕುತೂಹಲಕಾರಿ ಪಥವನ್ನು ತಲುಪಿದೆ. 2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ ಕೊನೆಗೊಂಡಾಗ, ಯುಪಿಎ ಸರ್ಕಾರದ ಮೊದಲ ಬಜೆಟ್‌ನಲ್ಲಿ ಬಂಡವಾಳ ವೆಚ್ಚವು ಸುಮಾರು 90 ಸಾವಿರ ಕೋಟಿ ರೂ. ಗಳಷ್ಟಿತ್ತು. ಒಂದು ದಶಕದ ಯುಪಿಎ ಸರ್ಕಾರದ ಅಧಿಕಾರದ ನಂತರ, 2014 ರ ವೇಳೆಗೆ, ಯುಪಿಎ ಸರ್ಕಾರ ಇದನ್ನು 2 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿತ್ತು. ಇಂದು, ನಮ್ಮ ಬಂಡವಾಳ ವೆಚ್ಚವು 11 ಲಕ್ಷ ಕೋಟಿ ರೂ. ಗಳನ್ನು ಮೀರಿದೆ. ಈ ಎರಡೂ ಸರ್ಕಾರಗಳ ಬಜೆಟ್‌ಗಳನ್ನು ಹೋಲಿಸಿದರೆ, ಹಿಂದಿನ ಸರ್ಕಾರವು ಒಂದು ದಶಕದಲ್ಲಿ ತನ್ನ ಬಂಡವಾಳವನ್ನು ದ್ವಿಗುಣಗೊಳಿಸಿದ್ದರೆ, ನಮ್ಮ ಸರ್ಕಾರವು ಅದನ್ನು ಐದು ಪಟ್ಟು ಹೆಚ್ಚಿಸಿದೆ. ವಿವಿಧ ವಲಯಗಳನ್ನು ಗಮನಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ, ಭಾರತವು ಈಗ ಪ್ರತಿಯೊಂದು ವಲಯದ ಆರ್ಥಿಕತೆಯ ಮೇಲೆ ಹೇಗೆ ತನ್ನ ವಿಶೇಷ ಗಮನವನ್ನು ಹರಿಸುತ್ತಿದೆ ಎಂಬುದು ನಿಮಗೆ ತಿಳಿಯುತ್ತದೆ. ಹಿಂದಿನ ಸರ್ಕಾರದ 10 ವರ್ಷಗಳಿಗೆ ಹೋಲಿಸಿದರೆ, ನಮ್ಮ ಸರ್ಕಾರ ರೈಲ್ವೆ ಬಜೆಟ್ ಅನ್ನು ಎಂಟು ಪಟ್ಟು, ಹೆದ್ದಾರಿ ಬಜೆಟ್ ಅನ್ನು ಎಂಟು ಪಟ್ಟು, ಕೃಷಿ ಬಜೆಟ್ ಅನ್ನು ನಾಲ್ಕು ಪಟ್ಟು ಮತ್ತು ರಕ್ಷಣಾ ಬಜೆಟ್ ಅನ್ನು ಎರಡು ಪಟ್ಟು ಹೆಚ್ಚು ವೃದ್ದಿಸಿದೆ.

ಸ್ನೇಹಿತರೇ,

ಈ ಪ್ರಗತಿಯನ್ನು ಎಲ್ಲಾ ವಲಯಗಳಲ್ಲಿ ಬಜೆಟ್ ಹೆಚ್ಚಳದ ಮೂಲಕ ಮಾತ್ರವಲ್ಲದೆ ತೆರಿಗೆಗಳಲ್ಲಿ ದಾಖಲೆಯ ಕಡಿತದ ಮೂಲಕವೂ ಸಾಧಿಸಲಾಗುತ್ತಿದೆ. 2014 ರಲ್ಲಿ, 1 ಕೋಟಿ ರೂ. ಆದಾಯ ಹೊಂದಿರುವ MSMEಗಳು ಮಾತ್ರ ಪೂರ್ವಭಾವಿ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ, 3 ಕೋಟಿ ರೂ.ವರೆಗಿನ ಆದಾಯ ಹೊಂದಿರುವ MSMEಗಳು ಕೂಡಾ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. 2014 ರಲ್ಲಿ, 50 ಕೋಟಿ ರೂ. ವರೆಗಿನ ಆದಾಯ ಹೊಂದಿರುವ MSMEಗಳಿಗೆ 30 ಪ್ರತಿಶತ ತೆರಿಗೆ ವಿಧಿಸಲಾಗುತ್ತಿತ್ತು, ಆದರೆ ಈಗ, ಈ ದರವನ್ನು 22 ಪ್ರತಿಶತಕ್ಕೆ ಇಳಿಸಲಾಗಿದೆ. ಅಂತೆಯೇ, 2014 ರಲ್ಲಿ 30 ಪ್ರತಿಶತದಷ್ಟಿದ್ದ ಕಾರ್ಪೊರೇಟ್ ತೆರಿಗೆ ದರವು ಈಗ 400 ಕೋಟಿ ರೂ. ವರೆಗಿನ ಆದಾಯ ಹೊಂದಿರುವ ಕಂಪನಿಗಳಿಗೆ 25 ಪ್ರತಿಶತವಾಗಿದೆ.

ಸ್ನೇಹಿತರೇ,

ಇದು ಕೇವಲ ಬಜೆಟ್ ಹಂಚಿಕೆಯನ್ನು ಹೆಚ್ಚಿಸುವ ಅಥವಾ ತೆರಿಗೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಾತ್ರವಲ್ಲದೆ, ಉತ್ತಮ ಆಡಳಿತವನ್ನು ಅನುಷ್ಠಾನಗೊಳಿಸುವ ಬಗ್ಗೆಯೂ ಆಗಿದೆ. ಇದನ್ನು ನಾನು ಒಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ಉದಾಹರಣೆಗೆ, ಕಡಿಮೆ ತೂಕದೊಂದಿಗೆ ದುರ್ಬಲವಾಗಿ ಕಾಣುವ ವ್ಯಕ್ತಿಯನ್ನು ಪರಿಗಣಿಸುವುದಾದರೆ, ಅನಾರೋಗ್ಯದಿಂದಾಗಿ ಆತನ ದೇಹವು ಊದಿಕೊಂಡು ಉಬ್ಬಿದಂತೆ ಕಾಣುವುದರಿಂದ ಆತನ ಬಟ್ಟೆಗಳು ಮೊದಲಿಗಿಂತ ಬಿಗಿಯಾದಂತೆ ಕಾಣುತ್ತವೆ. ಹೀಗೆ ಕಾಣುವ ಆತನ ರೂಪದ ಹೊರತಾಗಿ, ನಾವು ಅವರನ್ನು ಆರೋಗ್ಯವಂತರೆಂದು ಪರಿಗಣಿಸಲು ಸಾಧ್ಯವೆ? ನಾವು ಅವರನ್ನು ಆರೋಗ್ಯಕರ ವ್ಯಕ್ತಿಯೆಂದು ಪರಿಗಣಿಸುತ್ತೇವೆಯೇ? ಅವರು ಮೇಲ್ನೋಟಕ್ಕೆ ಆರೋಗ್ಯಕರವಾಗಿ ಕಾಣಿಸಬಹುದು, ಆದರೆ ವಾಸ್ತವದಲ್ಲಿ, ಅವರು ಆರೋಗ್ಯವಾಗಿರುವುದಿಲ್ಲ. 2014 ರ ಹಿಂದಿನ ಬಜೆಟ್‌ನ ಪರಿಸ್ಥಿತಿ ಕೂಡಾ ಇದೇ ರೀತಿಯದ್ದಾಗಿತ್ತು. ಆ ಸಮಯದಲ್ಲಿ, ಆರೋಗ್ಯಕರ ಆರ್ಥಿಕತೆಯ ಅನಿಸಿಕೆಯನ್ನು ಜನರ ಮನದಲ್ಲಿ ಮೂಡಿಸಲು ಮಹತ್ವದ ಘೋಷಣೆಗಳನ್ನು ಸರ್ಕಾರವು ಮಾಡುತ್ತಿತ್ತು. ಆದಾರೂ, ಈ ಘೋಷಣೆಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುತ್ತಿರಲಿಲ್ಲ. ಮೂಲಸೌಕರ್ಯಕ್ಕಾಗಿ ನಿಗದಿಪಡಿಸಿದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಲಾಗುತ್ತಿರಲಿಲ್ಲ. ಈ ಘೋಷಣೆಗಳು ಸುದ್ದಿಗಳನ್ನು ಮಾಡಿ, ಸಾಂದರ್ಭಿಕವಾಗಿ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದವು. ಆದರೆ, ಹಿಂದಿನ ಸರ್ಕಾರಗಳು ತಮ್ಮ ಘೋಷಿತ ಯೋಜನೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ದಶಕದಲ್ಲಿ, ಈ ಸನ್ನಿವೇಶವು ಪರಿವರ್ತನೆಯಾಗಿ, ನಮ್ಮ ಸರ್ಕಾರವು ಮೂಲಸೌಕರ್ಯವನ್ನು ನಿರ್ಮಿಸುತ್ತಿರುವ ಅಭೂತಪೂರ್ವ ವೇಗ ಮತ್ತು ಪ್ರಮಾಣಕ್ಕೆ ನೀವೇ ಸಾಕ್ಷಿಯಾಗಿದ್ದೀರಿ.

ಸ್ನೇಹಿತರೇ,

ಇಂದಿನ ಜಗತ್ತು ಅನಿಶ್ಚಿತತೆಗಳಿಂದ ತುಂಬಿದೆ. ಇಂತಹ ಚಂಚಲತೆಯ ನಡುವೆಯೂ, ಭಾರತದ ಬೆಳವಣಿಗೆ ಮತ್ತು ಸ್ಥಿರತೆಯು ಅಸಾಧಾರಣವಾಗಿದೆ. ಈ ರೀತಿಯ ಅನಿಶ್ಚಿತ ಕಾಲದಲ್ಲಿಯೂ ಕೂಡಾ, ಭಾರತದ ವಿದೇಶಿ ವಿನಿಮಯ ಸಂಗ್ರಹವು ಗಮನಾರ್ಹವಾಗಿ ಹೆಚ್ಚಾಗಿದೆ. ಅನೇಕ ದೇಶಗಳು ಕಡಿಮೆ ಬೆಳವಣಿಗೆ ಅಥವಾ ಹೆಚ್ಚಿನ ಹಣದುಬ್ಬರದೊಂದಿಗೆ ಸೆಣೆಸುತ್ತಿರುವ ಈ ಸಂದರ್ಭದಲ್ಲಿಯೂ, ಭಾರತವು ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದೊಂದಿಗೆ ಮೆರೆಯುತ್ತಿದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ಭಾರತದ ಹಣಕಾಸಿನ ವ್ಯವಹಾರವು ಜಗತ್ತಿಗೆ ಮಾದರಿಯಾಗಿದೆ. ಜಾಗತಿಕ ಸರಕು ಮತ್ತು ಸೇವೆಗಳ ರಫ್ತಿಗೆ ನಮ್ಮ ಕೊಡುಗೆ ಸ್ಥಿರವಾಗಿ ಹೆಚ್ಚುತ್ತಿದ್ದು, ಇಂದು, ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 16 ರಷ್ಟಿದೆ. ಗಮನಾರ್ಹವಾಗಿ, ಕಳೆದ ದಶಕದಲ್ಲಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ ಭಾರತವು ಈ ಬೆಳವಣಿಗೆಯನ್ನು ಸಾಧಿಸಿದೆ. ಈ 100 ವರ್ಷಗಳಲ್ಲಿ, ಅತ್ಯಂತ ತೀವ್ರವಾದ ಸಾಂಕ್ರಾಮಿಕ ರೋಗದಿಂದ ಹಿಡಿದು ಪ್ರಪಂಚದ ವಿವಿಧ ಭಾಗಗಳಲ್ಲಿನ ಯುದ್ಧಗಳು ಮತ್ತು ಭಾರತದಲ್ಲಿ ಅಪ್ಪರಿಸಿದ ಚಂಡಮಾರುತಗಳು, ಬರಗಳು ಮತ್ತು ಭೂಕಂಪಗಳಂತಹ ಪ್ರಮುಖ ನೈಸರ್ಗಿಕ ವಿಕೋಪಗಳವರೆಗೆ, ನಾವು ಪ್ರತಿಯೊಂದು ಸವಾಲನ್ನು ಎದುರಿಸಿದ್ದೇವೆ. ಈ ಬಿಕ್ಕಟ್ಟುಗಳು ಸಂಭವಿಸದಿದ್ದರೆ, ಭಾರತದ ಪ್ರಗತಿಯು ಇನ್ನೂ ಹೆಚ್ಚಿರುತ್ತಿತ್ತು. ನನ್ನ ನಂಬಿಕೆ ಮತ್ತು ಅನುಭವದ ಆಧಾರದ ಮೇಲೆ ನಾನು ಈ ವಿಷಯವನ್ನು ವಿಶ್ವಾಸದಿಂದ ಹೇಳುತ್ತಿದ್ದೇನೆ.

ಸ್ನೇಹಿತರೇ,

ಇಂದು, ನಮ್ಮ ದೇಶವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನದೊಂದಿಗೆ ದಾಪುಗಾಲಿಡುತ್ತಿದೆ. ಕಳೆದ ದಶಕದಲ್ಲಿ, 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ನಮ್ಮ ನಾಗರಿಕರಿಗೆ ಜೀವನ ಸುಲಭತೆ ಮತ್ತು ಉತ್ತಮ ಗುಣಮಟ್ಟದ ಜೀವನ ನೀಡುವುದೇ ನಮ್ಮ ಗುರಿಯಾಗಿದೆ.

ಸ್ನೇಹಿತರೇ,

ಉದ್ಯಮ 4.0 ಅಥವಾ ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ನಮ್ಮ ದೇಶದ ಯುವಕರಲ್ಲಿ ಉದ್ಯಮಶೀಲತೆಯತ್ತ ಸಾಗುವ ಉತ್ಸಾಹ ಹೆಚ್ಚುತ್ತಿದೆ. ಮುದ್ರಾ ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾದಂತಹ ಉಪಕ್ರಮಗಳು ಅವರಿಗೆ ಅಪಾರ ಪ್ರಯೋಜನವನ್ನು ನೀಡುತ್ತಿವೆ. ಮುದ್ರಾ ಯೋಜನೆಯ ಮೂಲಕ, 8 ಕೋಟಿಗೂ ಹೆಚ್ಚು ವ್ಯಕ್ತಿಗಳು ಮೊದಲ ಬಾರಿಗೆ ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ, ದೇಶದಲ್ಲಿ ಸುಮಾರು 1 ಲಕ್ಷ 40 ಸಾವಿರ ಸ್ಟಾರ್ಟ್-ಅಪ್‌ಗಳಿವೆ, ಇದು ಲಕ್ಷಾಂತರ ಯುವಜನರಿಗೆ ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತದೆ. ಈ ಪ್ರಸ್ತುತ ಬಜೆಟ್‌ನಲ್ಲಿ ಘೋಷಿಸಲಾದ 2 ಲಕ್ಷ ಕೋಟಿ ರೂ. ಗಳ ಪ್ರಧಾನ ಮಂತ್ರಿ ಪ್ಯಾಕೇಜ್ ವ್ಯಾಪಕ ಪ್ರಶಂಸೆಯನ್ನು ಗಳಿಸಿದೆ. 4 ಕೋಟಿಗೂ ಹೆಚ್ಚು ಯುವಕರು ಇದರಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಈ ಪ್ರಧಾನ ಮಂತ್ರಿ ಪ್ಯಾಕೇಜ್ ಸಮಗ್ರ ಮತ್ತು ಸಂಪೂರ್ಣವಾಗಿದ್ದು, ಪರಸ್ಪರ ಸಂಬಂಧ ಹೊಂದಿರುವ, ಆದಿಯಿಂದ ಅಂತ್ಯದವರೆಗೆ ಪರಿಹಾರಗಳನ್ನು ನೀಡಲು ಸಕ್ಷಮವಾಗಿದೆ. ಇದರ ದೃಷ್ಟಿಕೋನ ಸ್ಪಷ್ಟವಾಗಿದ್ದು, ಭಾರತದ ಕಾರ್ಯಪಡೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವುದು ಮತ್ತು ಭಾರತದ ಉತ್ಪನ್ನಗಳು ಗುಣಮಟ್ಟದಲ್ಲಿ ಮಾತ್ರವಲ್ಲದೆ ಮೌಲ್ಯದಲ್ಲಿಯೂ ಸ್ಪರ್ಧಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ. ನಮ್ಮ ಯುವಕರ ಕೌಶಲ್ಯಗಳನ್ನು ಹೆಚ್ಚಿಸಲು, ಅವರ ಮಾನ್ಯತೆಯನ್ನು ಹೆಚ್ಚಿಸಲು ಮತ್ತು ಅವರಿಗೆ ಸುಲಭ ಉದ್ಯೋಗಾವಕಾಶಗಳನ್ನು ಒದಗಿಸಲು ನಾವು ಇಂಟರ್ನ್‌ಶಿಪ್ ಯೋಜನೆಯನ್ನು ಕೂಡಾ ಪರಿಚಯಿಸಿದ್ದೇವೆ. ಹೆಚ್ಚುವರಿಯಾಗಿ, ಉದ್ಯೋಗಗಳನ್ನು ಸೃಷ್ಟಿಸುವವರಿಗೆ ಗಣನೀಯ ಪ್ರೋತ್ಸಾಹ ನೀಡಲು ನಾವು ಸಿದ್ದರಿದ್ದೇವೆ. ಇದರ ಪರಿಣಾಮವಾಗಿ, ಸರ್ಕಾರವು ಇಪಿಎಫ್‌ಒ ಕೊಡುಗೆಗಳಲ್ಲಿ ಪ್ರೋತ್ಸಾಹಕಗಳನ್ನು ಘೋಷಿಸಿದೆ.

ಸ್ನೇಹಿತರೇ,

ನಮ್ಮ ಸರ್ಕಾರದ ಉದ್ದೇಶ ಮತ್ತು ಬದ್ಧತೆಯು ಬಹಳ ಸ್ಪಷ್ಟವಾಗಿದೆ. ನಮ್ಮ ನಿರ್ದೇಶನ ಅಚಲವಾಗಿದೆ. ರಾಷ್ಟ್ರಕ್ಕೆ ಪ್ರಾಧಾನ್ಯತೆ ನೀಡುವ ನಮ್ಮ ಸಮರ್ಪಣೆಯಾಗಿರಲಿ, $5 ಟ್ರಿಲಿಯನ್ ಆರ್ಥಿಕತೆಯ ನಮ್ಮ ಮಹತ್ವಾಕಾಂಕ್ಷೆಯಾಗಲಿ, ಸ್ಯಾಚುರೇಶನ್ ವಿಧಾನವನ್ನು ಸಾಧಿಸುವ ನಮ್ಮ ಗುರಿಯಾಗಲಿ, "ಶೂನ್ಯ ಪರಿಣಾಮ, ಶೂನ್ಯ ದೋಷ" ತತ್ವಕ್ಕೆ ನಮ್ಮ ಬದ್ಧತೆಯಾಗಲಿ, ಸ್ವಾವಲಂಬಿ ಭಾರತಕ್ಕಾಗಿ ನಮ್ಮ ದೃಢ ಸಂಕಲ್ಪವಾಗಲಿ ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ನಮ್ಮ ದೀರ್ಘಕಾಲೀನ ಅನ್ವೇಷಣೆಯಾಗಲಿ, ನಾವು ಪೂರ್ಣ ಗಮನ ಮತ್ತು ದೃಢನಿಶ್ಚಯದಿಂದ ಕೆಲಸ ಮಾಡುತ್ತಿದ್ದೇವೆ. ನಾವು ನಮ್ಮ ಯೋಜನೆಗಳನ್ನು ನಿರಂತರವಾಗಿ ಅಭಿವೃದ್ದಿಗೊಳಿಸಿ, ಅವುಗಳ ಪ್ರಗತಿಯನ್ನು ಪರಿಶೀಲಿಸುತ್ತೇವೆ. ಸರ್ಕಾರದ ವಿಧಾನ ಮತ್ತು ಅಭಿವೃದ್ಧಿಯ ಬಗೆಗಿನ ನಮ್ಮ ಬದ್ಧತೆಯ ಬಗ್ಗೆ ನಿಮಗೂ ಕೂಡಾ ಚೆನ್ನಾಗಿ ಅರಿವಿದೆ. ನಾವು ನಿರಂತರವಾಗಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ಉದ್ಯಮವು ಸರ್ಕಾರದೊಂದಿಗೆ ಕೈ ಜೋಡಿಸಿ, ವಾಸ್ತವವಾಗಿ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಧಿಸುವಲ್ಲಿ ನಮ್ಮೊಂದಿಗೆ ಸ್ಪರ್ಧಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಅದರೊಂದಿಗೆ ನೀವು ಸರ್ಕಾರದ ನಿರೀಕ್ಷೆಗಳನ್ನು ಮೀರಿ ಕಾರ್ಯಸಾಧಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಸರ್ಕಾರ ಮತ್ತು ಉದ್ಯಮ ಎರಡೂ ತುರ್ತು ಮತ್ತು ಹಂಚಿಕೆಯ ಜವಾಬ್ದಾರಿಯೊಂದಿಗೆ PM ಪ್ಯಾಕೇಜ್ ಅನ್ನು ಮುನ್ನಡೆಸಬೇಕು. ಈ ಸವಾಲನ್ನು ಎದುರಿಸುವ ನಿಮ್ಮ ಸಾಮರ್ಥ್ಯದಲ್ಲಿ ನನಗೆ ಸಂಪೂರ್ಣವಾಗಿ ವಿಶ್ವಾಸ ಹಾಗೂ ನಂಬಿಕೆ ಇದೆ.

ಸ್ನೇಹಿತರೇ,

ಈ ವರ್ಷದ ಬಜೆಟ್‌ನಲ್ಲಿ ಅಭಿವೃದ್ಧಿ ಹೊಂದಿದ ಭಾರತದತ್ತ ನಮ್ಮ ಪ್ರಯಾಣವನ್ನು ಪ್ರಬಲಪಡಿಸುವ ಮತ್ತೊಂದು ನಿರ್ಣಾಯಕ ಅಂಶವೆಂದರೆ - ಉತ್ಪಾದನೆ. ಕಳೆದ ದಶಕದಲ್ಲಿ, ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಗಮನಾರ್ಹ ರೂಪಾಂತರವನ್ನು ನಾವು ಕಂಡಿದ್ದೇವೆ. ನಾವು ಮಹತ್ವಾಕಾಂಕ್ಷೆಯ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ವಿವಿಧ ವಲಯಗಳಲ್ಲಿ ಎಫ್‌ಡಿಐ ನಿಯಮಗಳನ್ನು ಸರಳೀಕರಿಸಿದ್ದೇವೆ, ಮಲ್ಟಿ-ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ನಿರ್ಮಿಸಿದ್ದೇವೆ ಮತ್ತು 14 ವಲಯಗಳಿಗೆ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಧನ ಯೋಜನೆಯನ್ನು ಪರಿಚಯಿಸಿದ್ದೇವೆ. ಈ ಉಪಕ್ರಮಗಳು ಉತ್ಪಾದನಾ ವಲಯದ ವಿಶ್ವಾಸವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಈ ಬಜೆಟ್‌ನಲ್ಲಿ, ದೇಶಾದ್ಯಂತ 100 ಪ್ರಮುಖ ನಗರಗಳಲ್ಲಿ ಹೂಡಿಕೆ-ಸಿದ್ಧ "ಪ್ಲಗ್ ಮತ್ತು ಪ್ಲೇ" ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿಯನ್ನು ಘೋಷಿಸಿದ್ದೇವೆ. ಈ ನಗರಗಳು ಅಭಿವೃದ್ಧಿ ಹೊಂದಿದ ಭಾರತದ ಹೊಸ ಬೆಳವಣಿಗೆಯ ಕೇಂದ್ರಗಳಾಗಲಿವೆ. ಇದರ ಹೊರತಾಗಿ, ಸರ್ಕಾರವು ಅಸ್ತಿತ್ವದಲ್ಲಿರುವ ಕೈಗಾರಿಕಾ ಕಾರಿಡಾರ್‌ಗಳನ್ನು ಆಧುನೀಕರಿಸುತ್ತದೆ. ಕೋಟ್ಯಂತರ ಜನರಿಗೆ ಉದ್ಯೋಗವನ್ನು ಒದಗಿಸುವ MSMEಗಳ ಮೇಲೆ ನಾವು ಗಮನಾರ್ಹ ಒತ್ತು ನೀಡುತ್ತಿದ್ದೇವೆ. MSMEಗಳು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಸರ್ಕಾರವು ಅವುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. 2014 ರಿಂದ, MSMEಗಳು ಅಗತ್ಯವಿರುವ ಕಾರ್ಯನಿರತ ಬಂಡವಾಳ ಮತ್ತು ಸಾಲವನ್ನು ಪಡೆಯಲು, ಅವುಗಳ ಅನುಸರಣೆ ಹೊರೆ ಮತ್ತು ತೆರಿಗೆಗಳನ್ನು ಕಡಿಮೆ ಮಾಡಲು, ಅವುಗಳ ಮಾರುಕಟ್ಟೆ ಪ್ರವೇಶ ಮತ್ತು ನಿರೀಕ್ಷೆಗಳನ್ನು ಸುಧಾರಿಸಲು ಮತ್ತು ಅವುಗಳ ಕಾರ್ಯಾಚರಣೆಗಳನ್ನು ಔಪಚಾರಿಕಗೊಳಿಸಲು ನಾವು ಕಾರ್ಯನಿರತರಾಗಿದ್ದೇವೆ. ಪ್ರಸ್ತುತ ಬಜೆಟ್ MSMEಗಳಿಗೆ ಹೊಸ ಸಾಲ-ಖಾತರಿ ಯೋಜನೆಯನ್ನು ಕೂಡಾ ಪರಿಚಯಿಸುತ್ತದೆ.

ಸ್ನೇಹಿತರೇ,

ಬಜೆಟ್ ಮಂಡಿಸಿದಾಗ, ತದ ನಂತರದ ಚರ್ಚೆಯು ಸಾಮಾನ್ಯವಾಗಿ ಕೆಲವೇ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ಚರ್ಚೆಯ ಬಹುಪಾಲು ಮಾಧ್ಯಮ ಕಾರ್ಯಸೂಚಿಗಳಿಂದ ನಡೆಸಲ್ಪಡುತ್ತದೆ. ಹೆಚ್ಚು ಚಿಂತನಶೀಲ ವಾತಾವರಣದಲ್ಲಿ, ನಾವು ಪರಿಸ್ಥಿತಿಯನ್ನು ವಿಸ್ತಾರವಾಗಿ ಅವಲೋಕಿಸುತ್ತೇವೆ. ಸಾಂದರ್ಭಿಕವಾಗಿ, ಉದ್ಯಮ ವೃತ್ತಿಪರರು ಅಥವಾ ತಜ್ಞರು ಈ ವಿಷಯಗಳನ್ನು ತಿಳಿಸುತ್ತಾರೆ, ಆದರೆ ಬಜೆಟ್‌ನ ಅಂಶಗಳನ್ನು ಎಲ್ಲಾ ವಲಯಗಳಲ್ಲಿ ನಿರಂತರವಾಗಿ ಪರಿಶೀಲಿಸಿ, ಸೂಕ್ಷ್ಮ ಮಟ್ಟದಲ್ಲಿ ವಿವರವಾಗಿ ವಿಶ್ಲೇಷಿಸಬೇಕು ಎಂಬುದು ನನ್ನ ಅಭಿಪ್ರಾಯ. ಉದಾಹರಣೆಗೆ, ಪ್ರಸ್ತುತ ಬಜೆಟ್ ನಲ್ಲಿ ಪರಮಾಣು ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಹಂಚಿಕೆಯನ್ನು ನೀಡಲಾಗಿದೆ. ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸಲಾಗುತ್ತಿದೆ. ಭೂಮಿ ಗುರುತಿಸುವಿಕೆಗಾಗಿ ಸಂಖ್ಯೆಗಳನ್ನು ಹಂಚಿಕೆ ಮಾಡಲು ನಾವು ರೈತರಿಗೆ ಭೂ-ಆಧಾರ್ ಕಾರ್ಡ್‌ಗಳನ್ನು ಸಹ ನೀಡುತ್ತೇವೆ. ಬಾಹ್ಯಾಕಾಶ ಆರ್ಥಿಕತೆಗಾಗಿ 1000 ಕೋಟಿ ರೂ.ಗಳ ಸಾಹಸೋದ್ಯಮ ಬಂಡವಾಳವನ್ನು ಒದಗಿಸಲಾಗಿದೆ. ಈ ಬಜೆಟ್ ನಿರ್ಣಾಯಕ ಖನಿಜ ಮಿಷನ್ ಅನ್ನು ಕೂಡಾ ಘೋಷಿಸಿದೆ. ನಾವು ಶೀಘ್ರದಲ್ಲಿಯೇ ಕಡಲಾಚೆಯ ಗಣಿಗಾರಿಕೆ ಬ್ಲಾಕ್‌ಗಳ ಮೊದಲ ಹಂತದ ಹರಾಜನ್ನು ಕೂಡಾ ಪ್ರಾರಂಭಿಸುತ್ತೇವೆ. ಈ ಪ್ರಕಟಣೆಗಳು ನಮ್ಮ ದೇಶದ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯಲು ಉಪಕಾರಿಯಾಗಿ, ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೇ,

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದ್ದಂತೆ, ವಿಶೇಷವಾಗಿ ನಮ್ಮ ಉದಯೋನ್ಮುಖ ವಲಯಗಳಲ್ಲಿ ಹೊಸ ಸಾಧ್ಯತೆಗಳು ಹೊರಹೊಮ್ಮುತ್ತಿವೆ. ತಂತ್ರಜ್ಞಾನವು ವರ್ತಮಾನ ಮಾತ್ರವಲ್ಲ, ಭವಿಷ್ಯವೂ ಆಗಿದೆ. ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವ ದೇಶವು ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ನಾವು ಈ ಉದ್ಯಮವನ್ನು ಭಾರತದಲ್ಲಿ ಮುನ್ನಡೆಸುತ್ತಿದ್ದೇವೆ. ನಾವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಸಹ ಉತ್ತೇಜಿಸುತ್ತಿದ್ದೇವೆ. ನಾವು ಪ್ರಸ್ತುತ ಮೊಬೈಲ್ ಉತ್ಪಾದನಾ ಕ್ರಾಂತಿಯ ಭಾಗವಾಗಿದ್ದೇವೆ. ಒಂದು ಕಾಲದಲ್ಲಿ ಮೊಬೈಲ್ ಫೋನ್‌ಗಳ ಆಮದುದಾರರಾಗಿದ್ದ ಭಾರತವು ಈಗ ಜಾಗತಿಕವಾಗಿ ಅಗ್ರ ಮೊಬೈಲ್ ತಯಾರಕ ಮತ್ತು ರಫ್ತುದಾರರಲ್ಲಿ ಒಂದಾಗಿದೆ. ಹಸಿರು ಉದ್ಯೋಗ ವಲಯಕ್ಕಾಗಿ ನಾವು ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದ್ದೇವೆ, ಹಸಿರು ಹೈಡ್ರೋಜನ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯು ಹಲವಾರು ಮಾರಾಟಗಾರರಿಗೆ ಅಗತ್ಯವಿರುವ ಬೃಹತ್ ಯೋಜನೆಯಾಗಿದ್ದು, ಸರ್ಕಾರವು ಪ್ರತಿ ಮನೆಗೆ 75,000 ರೂ. ಗಳನ್ನು ಒದಗಿಸುತ್ತಿದೆ, ಇದು ಈ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯನ್ನು ಸೂಚಿಸುತ್ತದೆ.

ಈ ಬಜೆಟ್‌ನಲ್ಲಿ ಶುದ್ಧ ಇಂಧನಕ್ಕಾಗಿ ತೆಗೆದುಕೊಂಡ ಕ್ರಮಗಳು ಗಣನೀಯ ಚರ್ಚಿಸಲ್ಪಡುತ್ತಿವೆ. ಇಂದಿನ ಯುಗದಲ್ಲಿ, ಇಂಧನ ಸುರಕ್ಷತೆ ಮತ್ತು ಇಂಧನ ಪರಿವರ್ತನೆ ಎರಡೂ ಆರ್ಥಿಕತೆ ಮತ್ತು ಪರಿಸರ ವಿಜ್ಞಾನಕ್ಕೆ ನಿರ್ಣಾಯಕವಾಗಿವೆ. ಹೆಚ್ಚುವರಿಯಾಗಿ, ನಾವು ಸಣ್ಣ ಪರಮಾಣು ರಿಯಾಕ್ಟರ್‌ಗಳ ಕುರಿತಾಗಿಯೂ ಕಾರ್ಯನಿರ್ವಹಿಸುತ್ತಿದ್ದೇವೆ, ಇದು ಇಂಧನ ಪ್ರವೇಶದ ಮೂಲಕ ಉದ್ಯಮಕ್ಕೆ ಪ್ರಯೋಜನವನ್ನು ನೀಡುವುದಲ್ಲದೆ, ಪೂರೈಕೆ ಸರಪಳಿಯಾದ್ಯಂತ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮ ಕೈಗಾರಿಕೆಗಳು ಮತ್ತು ಉದ್ಯಮಿಗಳು ಸದಾ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ನಾನು ಉಲ್ಲೇಖಿಸಿರುವ ಎಲ್ಲಾ ಉದಯೋನ್ಮುಖ ಕ್ಷೇತ್ರಗಳಲ್ಲಿ ನೀವು ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವಿರೆಂದು ನನಗೆ ವಿಶ್ವಾಸವಿದೆ. ನನಗೆ, "ಜಾಗತಿಕ ನಾಯಕ" ಎಂಬುದು ಕೇವಲ ಒಂದು ಪದವಲ್ಲ - ನನ್ನ ದೇಶವು ಈ ಸ್ಥಾನಮಾನವನ್ನು ಸಾಧಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಸ್ನೇಹಿತರೇ,

ನಮ್ಮ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ. ಅದು ನಿಮಗೆ ಚೆನ್ನಾಗಿ ತಿಳಿದಿದೆ. ರಾಷ್ಟ್ರ ಮತ್ತು ಅದರ ಜನರ ಆಕಾಂಕ್ಷೆಗಳು ನಮಗೆ ಅತ್ಯಂತ ಮುಖ್ಯ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಭಾರತದ ಕೈಗಾರಿಕೆ ಮತ್ತು ಖಾಸಗಿ ವಲಯವನ್ನು ಪ್ರಬಲ ಮಾಧ್ಯಮಗಳೆಂದು ನಾನು ಪರಿಗಣಿಸುತ್ತೇನೆ. ಸಂಪತ್ತಿನ ಸೃಷ್ಟಿಕರ್ತರಾದ ನಿಮ್ಮಂತಹ ಸ್ನೇಹಿತರನ್ನು ಭಾರತದ ಬೆಳವಣಿಗೆಯ ಪ್ರಮುಖ ಹಾಗೂ ಪ್ರಾಥಮಿಕ ಚಾಲಕರೆಂದು ನಾನು ನಂಬುತ್ತೇನೆ. ಕೆಂಪು ಕೋಟೆಯ ಈ ಜಾಗದಿಂದಲೂ ಇದನ್ನು ಹೇಳಲು ನನಗೆ ತುಂಬಾ ಹೆಮ್ಮೆಯಾಗುತ್ತದೆ.

ಸ್ನೇಹಿತರೇ,

ಇಂದು, ಇಡೀ ಜಗತ್ತು ಭಾರತವನ್ನು ಮತ್ತು ನಿಮ್ಮೆಲ್ಲರನ್ನೂ ಬಹಳ ನಿರೀಕ್ಷೆಯಿಂದ ನೋಡುತ್ತಿದೆ. ಭಾರತದ ನೀತಿಗಳು, ಸಮರ್ಪಣೆ, ದೃಢನಿಶ್ಚಯ, ನಿರ್ಧಾರಗಳು ಮತ್ತು ಇಲ್ಲಿ ಮಾಡಲಾಗುತ್ತಿರುವ ಹೂಡಿಕೆಗಳು ಜಾಗತಿಕ ಪ್ರಗತಿಯನ್ನು ರೂಪಿಸುತ್ತಿವೆ. ಪ್ರಪಂಚದಾದ್ಯಂತದ ಹೂಡಿಕೆದಾರರು ಇಲ್ಲಿಗೆ ಬರಲು ಆತುರ ಹಾಗೂ ಉತ್ಸುಕರಾಗಿದ್ದಾರೆ. ವಿಶ್ವ ನಾಯಕರು ಭಾರತದ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಹೊಂದಿದ್ದಾರೆ. ಇದು ಭಾರತದ ಉದ್ಯಮಕ್ಕೆ ಒಂದು ಸುವರ್ಣಾವಕಾಶವಾಗಿದ್ದು, ಅದನ್ನು ನಾವು ವ್ಯರ್ಥ ಮಾಡಬಾರದು. ನೀತಿ ಆಯೋಗದ ಸಭೆಯಲ್ಲಿ, ಮುಖ್ಯಮಂತ್ರಿಳಿಗೆ ತಮ್ಮ ರಾಜ್ಯಗಳ ಹೂಡಿಕೆದಾರ-ಸ್ನೇಹಿ ಪಟ್ಟಿಯನ್ನು ತಯಾರಿಸುವಂತೆ ನಾನು ತಿಳಿಸಿದ್ದೆ. ಹೂಡಿಕೆಯನ್ನು ಆಕರ್ಷಿಸಲು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು ಮತ್ತು ಪ್ರತಿಯೊಂದು ರಾಜ್ಯವು ಈ ಬೆಳವಣಿಗೆಯ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ಒಂದೇ ಒಂದು ರಾಜ್ಯವು ಈ ವಿಷಯದಲ್ಲಿ ಹಿಂದೆ ಉಳಿಯಬಾರದು. ಹೂಡಿಕೆಗೆ ಸಂಬಂಧಿಸಿದ ನೀತಿಗಳಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ತರುವ ಮೂಲಕ, ಉತ್ತಮ ವಾತಾವರಣವನ್ನು ಸೃಷ್ಟಿಸುವ ಮೂಲಕ ಮತ್ತು ಪ್ರತಿ ಹಂತದಲ್ಲೂ ಉತ್ತಮ ಆಡಳಿತವನ್ನು ನೀಡುವ ಮೂಲಕ, ನಾವು ದೇಶದ ಪ್ರತಿಯೊಂದು ರಾಜ್ಯಕ್ಕೂ ಹೂಡಿಕೆದಾರರನ್ನು ಆಕರ್ಷಿಸಬಹುದಾಗಿದೆ.

ಸ್ನೇಹಿತರೇ,

ಕಳೆದ ದಶಕದ ಅನುಭವ ಮತ್ತು ಜಾಗತಿಕ ಪರಿಸ್ಥಿತಿಗಳ ಸಂಪೂರ್ಣ ತಿಳುವಳಿಕೆಯ ಆಧಾರದ ಮೇಲೆ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಶುಭ ಸಂದರ್ಭದಲ್ಲಿ, ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲಿದ್ದೇವೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ. ನಾವು ಲೂಟಿಗೊಳಗಾದ ಬಡ ದೇಶವಾಗಿ, ಪ್ರಪಂಚದಿಂದ ಪದೇ ಪದೇ ಲೂಟಿ ಮಾಡಲ್ಪಟ್ಟ ದೇಶವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಆದರೂ, ನಾವು ನಮ್ಮ ಪ್ರಯಾಣವನ್ನು ಪ್ರಾರಂಭಿಸಿ, ಈ ಪ್ರಯಾಣದಲ್ಲಿ ಮುಂದುವರೆದು, 100 ವರ್ಷಗಳಲ್ಲಿ ಎಲ್ಲಾ ಅಡೆತಡೆಗಳನ್ನು ದಾಟಿ, ಅಭಿವೃದ್ಧಿ ಹೊಂದಿದ ಭಾರತ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ನಮ್ಮ ನಿರ್ಣಯಗಳನ್ನು ಪೂರೈಸಲಿದ್ದೇವೆ. ಭವಿಷ್ಯದ ಪೀಳಿಗೆಯು ಹೆಮ್ಮೆಯ, ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಬಾಳಿ ಬದುಕಬೇಕು ಎಂಬುದು ನಮ್ಮ ಕನಸು, ನಾವು ಅದನ್ನು ನೋಡಲು ಬದುಕಿಲ್ಲದಿದ್ದರೂ ಸಹ ಅದು ನಮ್ಮ ಮಹದಾಸೆಯಾಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಇದನ್ನು ಸಾಧಿಸಲು, ಸಮಾಜ ಮತ್ತು ದೇಶಕ್ಕೆ ನಾವು ನೀಡಬಹುದಾದ ಅತ್ಯುತ್ತಮ ಕೊಡುಗೆಯನ್ನು ನೀಡೋಣ. ಈ ಮನೋಭಾವದಿಂದ, ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಹಾರೈಸುತ್ತೇನೆ.

 

ಧನ್ಯವಾದಗಳು!

 

ಹಕ್ಕು ನಿರಾಕರಣೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ನೀಡಲಾಗಿದೆ.

****


(रिलीज़ आईडी: 2177192) आगंतुक पटल : 21
इस विज्ञप्ति को इन भाषाओं में पढ़ें: English , Urdu , हिन्दी , Hindi_MP , Marathi , Assamese , Manipuri , Bengali , Punjabi , Gujarati , Odia , Tamil , Telugu , Malayalam