ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತಿನ ತಾರಾಭ್ ನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ
Posted On:
22 FEB 2024 4:27PM by PIB Bengaluru
ಜೈ ವಲಿನಾಥ್! ಜೈ-ಜೈ ವಲಿನಾಥ್!
ಪರಂಬ ಹಿಂಗ್ಲಾಜ್ ಮಾತಾಜಿ ಕಿ- ಜೈ! ಹಿಂಗ್ಲಾಜ್ ಮಾತಾಜಿ ಕಿ - ಜೈ!
ಭಗವಾನ್ ಶ್ರೀ ದತ್ತಾತ್ರೇಯ ಕಿ - ಜೈ! ಭಗವಾನ್ ಶ್ರೀ ದತ್ತಾತ್ರೇಯ ಕಿ - ಜೈ!
ನೀವೆಲ್ಲರೂ ಹೇಗಿದ್ದೀರಿ? ನಾನು ಈ ಹಳ್ಳಿಯ ಹಳೆಯ ತಪಸ್ವಿಗಳನ್ನು ನೋಡಿದೆ ಮತ್ತು ಹಳೆಯ ಸಹಚರರನ್ನು ಸಹ ಭೇಟಿಯಾದೆ. ವಲಿನಾಥ್ ಹಬ್ಬದ ಉತ್ಸಾಹವನ್ನು ಸೃಷ್ಟಿಸಿದ್ದಾರೆ. ನಾನು ಈ ಹಿಂದೆ ಹಲವು ಬಾರಿ ವಲಿನಾಥ್ ಗೆ ಬಂದಿದ್ದೇನೆ, ಆದರೆ ಇಂದಿನ ವೈಭವವು ಬೇರೆಯೇ ಆಗಿದೆ. ಜಗತ್ತಿನಲ್ಲಿ ಒಬ್ಬರಿಗೆ ಎಷ್ಟೇ ಸ್ವಾಗತ ಮತ್ತು ಗೌರವ ಸಿಕ್ಕರೂ, ಮನೆಯಲ್ಲಿದ್ದಾಗ, ಅದರ ಸಂತೋಷವು ಸಂಪೂರ್ಣವಾಗಿ ಬೇರೆಯೇ ಆಗಿರುತ್ತದೆ. ಇಂದು ಗ್ರಾಮಸ್ಥರಲ್ಲಿ ನಾನು ವಿಶೇಷವಾದದ್ದನ್ನು ನೋಡಿದೆ ಮತ್ತು ನಾನು ನನ್ನ ಚಿಕ್ಕಪ್ಪನ ಮನೆಗೆ ಬಂದಾಗ, ಅದರ ಸಂತೋಷವು ಸಹ ವಿಶಿಷ್ಟವಾಗಿತ್ತು. ನಾನು ನೋಡಿದ ವಾತಾವರಣದ ಆಧಾರದ ಮೇಲೆ, ಭಕ್ತಿ ಮತ್ತು ನಂಬಿಕೆಯಲ್ಲಿ ಮುಳುಗಿರುವ ಎಲ್ಲಾ ಭಕ್ತರನ್ನು ನಾನು ಸ್ವಾಗತಿಸುತ್ತೇನೆ. ಇದು ಎಷ್ಟು ಕಾಕತಾಳೀಯ ನೋಡಿ! ಕೇವಲ ಒಂದು ತಿಂಗಳ ಹಿಂದೆ, ಜನವರಿ 22 ರಂದು, ನಾನು ಅಯೋಧ್ಯೆಯಲ್ಲಿ ಭಗವಾನ್ ರಾಮನ ಪಾದಗಳ ಬಳಿ ಇದ್ದೆ. ಅಲ್ಲಿ ನನಗೆ ಭಗವಾನ್ ರಾಮಲಲ್ಲಾ ಅವರ ಪವಿತ್ರೀಕರಣದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ಸಿಕ್ಕಿತು. ನಂತರ ಅಬುಧಾಬಿಯಲ್ಲಿ, ಫೆಬ್ರವರಿ 14 ರಂದು ಬಸಂತ್ ಪಂಚಮಿಯಂದು ಗಲ್ಫ್ ದೇಶಗಳಲ್ಲಿ ಮೊದಲ ಹಿಂದೂ ದೇವಾಲಯದ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತು. ಮತ್ತು ಕೇವಲ ಎರಡು-ಮೂರು ದಿನಗಳ ಹಿಂದೆ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಕಲ್ಕಿ ಧಾಮದ ಅಡಿಪಾಯ ಹಾಕುವ ಅವಕಾಶ ನನಗೆ ಸಿಕ್ಕಿತು. ಮತ್ತು ಇಂದು, ತಾರಾಭ್ ನಲ್ಲಿರುವ ಈ ಭವ್ಯ ಮತ್ತು ದೈವಿಕ ದೇವಾಲಯದಲ್ಲಿ ಪವಿತ್ರೀಕರಣದ ನಂತರ ಪೂಜಾ ಸಮಾರಂಭದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿದೆ.
ಸ್ನೇಹಿತರೇ,
ದೇಶ ಮತ್ತು ಜಗತ್ತಿಗೆ, ವಲಿನಾಥ ಶಿವ ಧಾಮವು ಒಂದು ತೀರ್ಥಯಾತ್ರೆಯ ಸ್ಥಳವಾಗಿದೆ. ಆದರೆ ರಬಾರಿ ಸಮುದಾಯಕ್ಕೆ, ಇದು 'ಗುರುಗಡಿ' (ಗುರುವಿನ ಸ್ಥಾನ). ಇಂದು, ದೇಶಾದ್ಯಂತದ ರಬಾರಿ ಸಮುದಾಯದ ಭಕ್ತರನ್ನು ಮತ್ತು ವಿವಿಧ ರಾಜ್ಯಗಳ ಜನರು ಸಹ ನನಗೆ ಗೋಚರಿಸುತ್ತಿದ್ದಾರೆ. ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಭಾರತದ ಅಭಿವೃದ್ಧಿ ಪಯಣದಲ್ಲಿ ಇದು ಅದ್ಭುತ ಅವಧಿ. 'ದೇವ ಕಾಜ್' (ದೈವಿಕ ಕಾರ್ಯಗಳು) ಮತ್ತು 'ದೇಶ್ ಕಾಜ್' (ರಾಷ್ಟ್ರೀಯ ಕಾರ್ಯಗಳು) ಎರಡೂ ವೇಗವಾಗಿ ಪ್ರಗತಿ ಹೊಂದುತ್ತಿರುವ ಸಮಯ ಇದು. 'ದೇವ ಸೇವೆ' (ದೇವರಿಗೆ ಸೇವೆ) ನಡೆಯುತ್ತಿದೆ ಮತ್ತು 'ದೇಶ ಸೇವೆ' (ರಾಷ್ಟ್ರಕ್ಕೆ ಸೇವೆ) ಕೂಡ ನಡೆಯುತ್ತಿದೆ. ಒಂದೆಡೆ, ಈ ಪವಿತ್ರ ಕಾರ್ಯಗಳು ಇಂದು ನೆರವೇರಿದರೆ, ಮತ್ತೊಂದೆಡೆ, ರೂಪಾಯಿ 13,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಅಡಿಪಾಯ ಹಾಕುವಿಕೆ ಮತ್ತು ಉದ್ಘಾಟನೆಯೂ ನಡೆದಿದೆ. ಈ ಯೋಜನೆಗಳು ರೈಲ್ವೆ, ರಸ್ತೆಗಳು, ಬಂದರು ಸಾರಿಗೆ, ನೀರು, ರಾಷ್ಟ್ರೀಯ ಭದ್ರತೆ, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಇನ್ನೂ ಹೆಚ್ಚಿನವುಗಳಂತಹ ಅನೇಕ ಪ್ರಮುಖ ಅಭಿವೃದ್ಧಿ ಕಾರ್ಯಗಳೊಂದಿಗೆ ಸಂಬಂಧ ಹೊಂದಿವೆ. ಈ ಯೋಜನೆಗಳು ಜನರ ಜೀವನವನ್ನು ಸುಲಭಗೊಳಿಸುತ್ತವೆ ಮತ್ತು ಈ ಪ್ರದೇಶದ ಯುವಕರಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ.
ನನ್ನ ಕುಟುಂಬದ ಸದಸ್ಯರೇ,
ಇಂದು, ಈ ಪವಿತ್ರ ಭೂಮಿಯ ಮೇಲೆ ನಾನು ದೈವಿಕ ಶಕ್ತಿಯನ್ನು ಅನುಭವಿಸುತ್ತೇನೆ. ಈ ಶಕ್ತಿಯು ಸಾವಿರಾರು ವರ್ಷಗಳಿಂದ ಹರಿಯುತ್ತಿರುವ ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ, ಇದು ಭಗವಾನ್ ಕೃಷ್ಣ ಮತ್ತು ಶಿವ ಇಬ್ಬರಿಗೂ ಸಂಬಂಧಿಸಿದೆ. ಈ ಶಕ್ತಿಯು ಮೊದಲ ಗಡಿಪತಿ ಮಹಾಂತ ವೀರಂ-ಗಿರಿ ಬಾಪು ಜಿ ಅವರು ಪ್ರಾರಂಭಿಸಿದ ಪ್ರಯಾಣದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ನಾನು ಗಡಿಪತಿ ಪೂಜ್ಯ ಜಯರಾಮ್ ಗಿರಿ ಬಾಪು ಅವರನ್ನೂ ಗೌರವದಿಂದ ಸ್ವಾಗತಿಸುತ್ತೇನೆ. ಗಡಿಪತಿ ಮಹಾಂತ ಬಲದೇವ್ ಗಿರಿ ಬಾಪು ಅವರ ನಿರ್ಣಯವನ್ನು ನೀವು ಮುಂದಕ್ಕೆ ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತಂದಿದ್ದೀರಿ. ನಿಮ್ಮಲ್ಲಿ ಹಲವರಿಗೆ ತಿಳಿದಿದೆ, ನನಗೆ ಬಲದೇವ್ ಗಿರಿ ಬಾಪು ಅವರೊಂದಿಗೆ ಸುಮಾರು 3-4 ದಶಕಗಳ ಕಾಲ ಆಳವಾದ ಸಂಬಂಧವಿತ್ತು. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಅವರನ್ನು ನನ್ನ ನಿವಾಸಕ್ಕೆ ಹಲವು ಬಾರಿ ಸ್ವಾಗತಿಸುವ ಅವಕಾಶ ಸಿಕ್ಕಿತು. ಸುಮಾರು 100 ವರ್ಷಗಳ ಕಾಲ, ಅವರು ನಮ್ಮಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದರು, ಮತ್ತು 2021ರಲ್ಲಿ ಅವರು ನಮ್ಮನ್ನು ಅಗಲಿದಾಗಲೂ, ನಾನು ಫೋನ್ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದೆ. ಆದರೆ ಇಂದು, ಅವರ ಕನಸು ನನಸಾಗುವುದನ್ನು ನಾನು ನೋಡಿದಾಗ, ನನ್ನ ಆತ್ಮ ಹೇಳುತ್ತದೆ - ಅವರು ಇಂದು ಎಲ್ಲಿದ್ದರೂ, ಅವರು ಈ ಸಾಧನೆಯನ್ನು ನೋಡಿ ಸಂತೋಷಪಡಬೇಕು ಮತ್ತು ನಮ್ಮನ್ನು ಆಶೀರ್ವದಿಸಬೇಕು. ನೂರಾರು ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಈಗ 21ನೇ ಶತಮಾನದ ಭವ್ಯತೆ ಮತ್ತು ಪ್ರಾಚೀನ ದೈವತ್ವದೊಂದಿಗೆ ನಿರ್ಮಿಸಲಾಗಿದೆ. ಈ ದೇವಾಲಯವು ವರ್ಷಗಳಲ್ಲಿ ನೂರಾರು ಕುಶಲಕರ್ಮಿಗಳು ಮತ್ತು ಕಾರ್ಮಿಕರ ಅವಿಶ್ರಾಂತ ಪ್ರಯತ್ನದ ಫಲಿತಾಂಶವಾಗಿದೆ. ಈ ಕಠಿಣ ಪರಿಶ್ರಮದಿಂದಾಗಿಯೇ ಇಂದು ವಲಿನಾಥ ಮಹಾದೇವ, ಪರಂಬ ಶ್ರೀ ಹಿಂಗ್ಲಾಜ್ ಮಾತಾಜಿ ಮತ್ತು ಭಗವಾನ್ ದತ್ತಾತ್ರೇಯರು ಈ ಭವ್ಯ ದೇವಾಲಯದಲ್ಲಿ ಉಪಸ್ಥಿತರಿದ್ದಾರೆ. ದೇವಾಲಯದ ನಿರ್ಮಾಣದಲ್ಲಿ ಭಾಗಿಯಾಗಿದ್ದ ನನ್ನ ಎಲ್ಲಾ ಸಹೋದ್ಯೋಗಿಗಳಿಗೂ ನಾನು ನಮಸ್ಕರಿಸುತ್ತೇನೆ.
ಸಹೋದರ ಸಹೋದರಿಯರೇ,
ನಮ್ಮ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಅಥವಾ ಕೇವಲ ಆಚರಣೆಗಳ ಸ್ಥಳಗಳೂ ಅಲ್ಲ. ಬದಲಾಗಿ, ಅವು ಸಾವಿರಾರು ವರ್ಷಗಳಷ್ಟು ಹಳೆಯದಾದ ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯದ ಸಂಕೇತಗಳಾಗಿವೆ. ನಮ್ಮ ದೇಶದಲ್ಲಿ, ದೇವಾಲಯಗಳು ಜ್ಞಾನ ಮತ್ತು ವಿಜ್ಞಾನದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ, ರಾಷ್ಟ್ರ ಮತ್ತು ಸಮಾಜವನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುತ್ತವೆ. ಶಿವ ಧಾಮ್ ಶ್ರೀ ವಲಿನಾಥ ಅಖಾಡವು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯ ಈ ಪವಿತ್ರ ಸಂಪ್ರದಾಯವನ್ನು ನಿಷ್ಠೆಯಿಂದ ಮುನ್ನಡೆಸಿದೆ. ನಾನು ಪೂಜ್ಯ ಬಲದೇವ್ ಗಿರಿ ಮಹಾರಾಜ್ ಜಿ ಅವರೊಂದಿಗೆ ಮಾತನಾಡಿದಾಗಲೆಲ್ಲಾ, ಅವರು ಆಧ್ಯಾತ್ಮಿಕ ಅಥವಾ ದೇವಾಲಯದ ವಿಷಯಗಳಿಗಿಂತ ಸಮಾಜದ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು ಎಂದು ನನಗೆ ಸ್ಪಷ್ಟವಾಗಿ ನೆನಪಿದೆ. ಪುಸ್ತಕ ಮೇಳಗಳ ಸಂಘಟನೆಯಿಂದ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಶಾಲೆಗಳು ಮತ್ತು ಹಾಸ್ಟೆಲ್ಗಳ ನಿರ್ಮಾಣವು ಶಿಕ್ಷಣದ ಮಟ್ಟವನ್ನು ಸುಧಾರಿಸಿದೆ. ಇಂದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ವಸತಿ ಮತ್ತು ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ದೈವಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಯ ಸಂಯೋಜನೆಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲವೇ? ಅಂತಹ ಸಂಪ್ರದಾಯವನ್ನು ಮುಂದುವರೆಸಿದ್ದಕ್ಕಾಗಿ ರಬಾರಿ ಸಮುದಾಯವು ಪ್ರಶಂಸೆಗೆ ಅರ್ಹವಾಗಿದೆ. ದುರದೃಷ್ಟವಶಾತ್, ರಬಾರಿ ಸಮುದಾಯವು ಬಹಳ ಕಡಿಮೆ ಪ್ರಶಂಸೆಯನ್ನು ಪಡೆಯುತ್ತಿದೆ.
ಸಹೋದರ ಸಹೋದರಿಯರೇ,
ಇಂದು, ದೇಶವು 'ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ (ಸಬ್ಕಾ ಸಾಥ್, ಸಬ್ಕಾ ವಿಕಾಸ್)' ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ. ಈ ಮಂತ್ರದ ಚೈತನ್ಯ ಮತ್ತು ಅದು ನಮ್ಮ ದೇಶದಲ್ಲಿ ಹೇಗೆ ಬೇರೂರಿದೆ ಎಂಬುದು ವಾಲಿನಾಥ ಧಾಮದಲ್ಲಿಯೂ ನಮಗೆ ಸ್ಪಷ್ಟವಾಗಿದೆ. ದೇವರು ರಬರಿ ಕುರುಬ ಸಹೋದರನನ್ನು ತನ್ನ ಅಭಿವ್ಯಕ್ತಿಗೆ ಸಾಧನವನ್ನಾಗಿ ಮಾಡಿದ ಸ್ಥಳ ಇದು. ಇಲ್ಲಿ, ಪೂಜೆಯ ಜವಾಬ್ದಾರಿ ರಬರಿ ಸಮುದಾಯಕ್ಕೆ ಸೇರಿದೆ, ಆದರೆ ಅದು ಇಡೀ ಸಮಾಜಕ್ಕೆ ಮುಕ್ತವಾಗಿದೆ. ಸಂತರ ಅದೇ ಭಾವನೆಗೆ ಅನುಗುಣವಾಗಿ, ನಮ್ಮ ಸರ್ಕಾರವು ಸಮಾಜದ ಪ್ರತಿಯೊಂದು ವಿಭಾಗ ಮತ್ತು ವರ್ಗಕ್ಕೆ ಜೀವನದ ಪ್ರತಿಯೊಂದು ಅಂಶವನ್ನು ಉತ್ತಮಗೊಳಿಸಲು ಬದ್ಧವಾಗಿದೆ. ಸಮಾಜದ ಕೆಳ ಹಂತದಲ್ಲಿರುವ ನಾಗರಿಕರ ಜೀವನವನ್ನು ಬದಲಾಯಿಸುವುದು ಮೋದಿಯವರ ಭರವಸೆಯ ಉದ್ದೇಶವಾಗಿದೆ. ಆದ್ದರಿಂದ, ದೇಶದಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುತ್ತಿರುವಾಗ, ಬಡವರಿಗಾಗಿ ಲಕ್ಷಾಂತರ ಪಕ್ಕಾ ಮನೆಗಳನ್ನು ಸಹ ನಿರ್ಮಿಸಲಾಗುತ್ತಿದೆ. ಕೆಲವೇ ದಿನಗಳ ಹಿಂದೆ, ಗುಜರಾತ್‌ನಲ್ಲಿ ಬಡವರಿಗಾಗಿ 1.25 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸಲು ಮತ್ತು ಶಿಲಾನ್ಯಾಸ ಮಾಡಲು ನನಗೆ ಅವಕಾಶ ಸಿಕ್ಕಿತು. ಈ ಬಡ ಕುಟುಂಬಗಳ ಆಶೀರ್ವಾದವನ್ನು ಊಹಿಸಿ! ಇಂದು, ದೇಶದಲ್ಲಿ 80 ಕೋಟಿ ಜನರು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ, ಇದರಿಂದ ಬಡವರ ಮನೆಯ ಒಲೆ ಕೂಡ ಉರಿಯುತ್ತಲೇ ಇರುತ್ತದೆ. ಇದು ಒಂದು ರೀತಿಯಲ್ಲಿ ದೇವರ 'ಪ್ರಸಾದ' (ಉಡುಗೊರೆ). ಇಂದು, ದೇಶದಲ್ಲಿ 10 ಕೋಟಿ ಹೊಸ ಕುಟುಂಬಗಳು ಕೊಳವೆ - ನಲ್ಲಿಗಳ ಮೂಲಕ ನೀರು ಪಡೆಯಲು ಪ್ರಾರಂಭಿಸಿವೆ. ನೀರಿನ ವ್ಯವಸ್ಥೆಗಾಗಿ ದೂರ ದೂರ ಹೋಗಬೇಕಾಗಿದ್ದ ಬಡ ಕುಟುಂಬಗಳಿಗೆ ಇದು 'ಅಮೃತ' (ಮಕರಂದ) ಕ್ಕಿಂತ ಕಡಿಮೆಯಿಲ್ಲ. ನಮ್ಮ ಉತ್ತರ ಗುಜರಾತ್ ನ ಜನರು ನೀರಿಗಾಗಿ ಎಷ್ಟು ಕಷ್ಟಗಳನ್ನು ಸಹಿಸಬೇಕಾಯಿತು ಎಂದು ತಿಳಿದಿದ್ದಾರೆ. ಅವರು ಎರಡು ಮೂರು ಕಿಲೋಮೀಟರ್‌ಗಳವರೆಗೆ ತಮ್ಮ ತಲೆಯ ಮೇಲೆ ಹೂಜಿಗಳನ್ನು ಹೊತ್ತುಕೊಂಡು ಹೋಗಬೇಕಾಗಿತ್ತು. ಮತ್ತು ನಾನು ಸುಜಲಾಮ್-ಸುಫಲಾಮ್ ಯೋಜನೆಯನ್ನು ಪ್ರಾರಂಭಿಸಿದಾಗ, ಉತ್ತರ ಗುಜರಾತ್ನ ಕಾಂಗ್ರೆಸ್ ಶಾಸಕರು ಸಹ ನನಗೆ ಹೇಳುತ್ತಿದ್ದರು, "ಸರ್, ನೀವು ಮಾಡಿದ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಇದನ್ನು ಜನರು 100 ವರ್ಷಗಳವರೆಗೆ ಮರೆಯುವುದಿಲ್ಲ." ಅವಋು ಕೂಡಾ ಸಾಕ್ಷಿಗಳಾಗಿ ಇಲ್ಲಿ ಕುಳಿತಿದ್ದಾರೆ.
ಸ್ನೇಹಿತರೇ,
ಕಳೆದ ಎರಡು ದಶಕಗಳಲ್ಲಿ, 'ವಿಕಾಸ್' (ಅಭಿವೃದ್ಧಿ) ಜೊತೆಗೆ, ಗುಜರಾತ್‌ನಲ್ಲಿ 'ವಿರಾಸತ್' (ಪಾರಂಪರಿಕ) ತಾಣಗಳ ಭವ್ಯತೆಯನ್ನು ಹೆಚ್ಚಿಸುವ ಕೆಲಸವನ್ನೂ ನಾವು ಮಾಡಿದ್ದೇವೆ. ದುರದೃಷ್ಟವಶಾತ್, ಸ್ವತಂತ್ರ ಭಾರತದಲ್ಲಿ, ಅಭಿವೃದ್ಧಿ ಮತ್ತು ಪರಂಪರೆಯ ನಡುವೆ ದೀರ್ಘಕಾಲ ಬಿರುಕು ಸೃಷ್ಟಿಯಾಯಿತು. ಇದಕ್ಕೆ ಯಾರಾದರೂ ಕಾರಣರಿದ್ದರೆ, ಅದು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್. ಸೋಮನಾಥದಂತಹ ಪವಿತ್ರ ಸ್ಥಳಗಳನ್ನು ವಿವಾದಾತ್ಮಕವಾಗಿಸಿದ್ದವರು ಇವರು. ಪಾವಗಡದಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸುವ ಬಯಕೆಯನ್ನು ತೋರಿಸದ ಅದೇ ಜನರು ಇವರು. ದಶಕಗಳ ಕಾಲ, ಮೊಧೇರಾದ ಸೂರ್ಯ ದೇವಾಲಯವನ್ನು ಮತ ಬ್ಯಾಂಕ್ ರಾಜಕೀಯದ ಮೂಲಕ ನೋಡುತ್ತಿದ್ದವರು ಇವರು. ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಮತ್ತು ಅವರ ದೇವಾಲಯದ ನಿರ್ಮಾಣಕ್ಕೆ ಅಡ್ಡಿಪಡಿಸಿದ ಅದೇ ಜನರು ಇವರು. ಮತ್ತು ಇಂದು, ಭಗವಾನ್ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯದ ನಿರ್ಮಾಣ ಪೂರ್ಣಗೊಂಡಾಗ ಮತ್ತು ಇಡೀ ದೇಶವು ಸಂತೋಷಪಡುತ್ತಿರುವಾಗ, ನಕಾರಾತ್ಮಕತೆಯ ಮೇಲೆ ಅಭಿವೃದ್ಧಿ ಹೊಂದುವವರು ಇನ್ನೂ ದ್ವೇಷದ ಹಾದಿಯನ್ನು ಬಿಡುತ್ತಿಲ್ಲ.
ಸಹೋದರ ಸಹೋದರಿಯರೇ,
ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಪರಂಪರೆಯನ್ನು ಸಂರಕ್ಷಿಸುವುದು ಬಹಳ ಮುಖ್ಯ. ಗುಜರಾತಿನಲ್ಲೂ ಭಾರತದ ಪ್ರಾಚೀನ ನಾಗರಿಕತೆಯ ಹಲವಾರು ಚಿಹ್ನೆಗಳು ಇವೆ. ಈ ಚಿಹ್ನೆಗಳು ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನು ಅವರ ಬೇರುಗಳೊಂದಿಗೆ ಸಂಪರ್ಕಿಸಲು ಸಹ ಮುಖ್ಯವಾಗಿದೆ. ಆದ್ದರಿಂದ, ನಮ್ಮ ಸರ್ಕಾರವು ಈ ಚಿಹ್ನೆಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಜಾಗತಿಕ ಪರಂಪರೆಯ ತಾಣಗಳಾಗಿ ಅಭಿವೃದ್ಧಿಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈಗ, ವಡ್ ನಗರದಲ್ಲಿ ಉತ್ಖನನದ ಮೂಲಕ ಇತಿಹಾಸದ ಹೊಸ ಅಂಶಗಳು ಹೇಗೆ ಹೊರಹೊಮ್ಮುತ್ತಿವೆ ಎಂಬುದನ್ನು ನೋಡೋಣ. ಕಳೆದ ತಿಂಗಳಷ್ಟೇ, 2800 ವರ್ಷಗಳ ಹಿಂದೆ ಜನರು ವಾಸಿಸುತ್ತಿದ್ದ ವಡ್ನಗರದಲ್ಲಿ 2800 ವರ್ಷಗಳಷ್ಟು ಹಳೆಯದಾದ ವಸಾಹತುವಿನ ಕುರುಹುಗಳು ಪತ್ತೆಯಾಗಿವೆ. ಅದೇ ರೀತಿ, ಧೋಲಾವಿರದಲ್ಲಿ, ನಾವು ಪ್ರಾಚೀನ ಭಾರತದ ದೈವಿಕ ದೃಶ್ಯಗಳನ್ನು ವೀಕ್ಷಿಸುತ್ತೇವೆ. ಇವು ಭಾರತದ ಹೆಮ್ಮೆ. ನಮ್ಮ ಶ್ರೀಮಂತ ಪರಂಪರೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ.
ಸ್ನೇಹಿತರೇ,
ಇಂದು, ಹೊಸ ಭಾರತದಲ್ಲಿ ಮಾಡಲಾಗುತ್ತಿರುವ ಪ್ರತಿಯೊಂದು ಪ್ರಯತ್ನವು ಭವಿಷ್ಯದ ಪೀಳಿಗೆಗೆ ಪರಂಪರೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ನಿರ್ಮಿಸಲಾಗುತ್ತಿರುವ ಹೊಸ ಮತ್ತು ಆಧುನಿಕ ರಸ್ತೆಗಳು, ಹಾಕಲಾಗುತ್ತಿರುವ ರೈಲ್ವೆ ಹಳಿಗಳು, ಇವು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ದ ಮಾರ್ಗಗಳಾಗಿವೆ. ಇಂದು, ಮೆಹ್ಸಾನಾದ ರೈಲ್ವೆಯ ಸಂಪರ್ಕವನ್ನು ಬಲಪಡಿಸಲಾಗಿದೆ. ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆಯೊಂದಿಗೆ, ಬನಸ್ಕಂತ ಮತ್ತು ಪಟನ್ ನಿಂದ ಕಾಂಡ್ಲಾ, ಟ್ಯೂನ ಮತ್ತು ಮುಂದ್ರಾ ಬಂದರುಗಳಿಗೆ ಸಂಪರ್ಕ ಸುಧಾರಿಸಿದೆ. ಇದು ಹೊಸ ರೈಲುಗಳನ್ನು ಓಡಿಸಲು ಸಾಧ್ಯವಾಗಿಸಿದೆ ಮತ್ತು ಸರಕು ರೈಲುಗಳಿಗೆ ಸೌಲಭ್ಯಗಳನ್ನು ಒದಗಿಸಿದೆ. ಇಂದು, ದೀಸಾ ವಾಯುಪಡೆ ನಿಲ್ದಾಣದ ರನ್‌ವೇಯನ್ನು ಸಹ ಉದ್ಘಾಟಿಸಲಾಗಿದೆ. ಮತ್ತು ಈ ವಾಯುಪಡೆ ನಿಲ್ದಾಣವು ರನ್‌ವೇಗಳನ್ನು ಹೊಂದಿರುವುದಲ್ಲದೆ ಭವಿಷ್ಯದಲ್ಲಿ ಭಾರತದ ಭದ್ರತೆಗೆ ಮಹತ್ವದ ಕೇಂದ್ರವಾಗಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ಈ ಯೋಜನೆಗಾಗಿ ಭಾರತ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ಬರೆದು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂದು ನನಗೆ ನೆನಪಿದೆ. ಆದರೆ ಈ ಹಿಂದೆ ನಮ್ಮನ್ನಾಳಿದ ಕಾಂಗ್ರೆಸ್ ಸರ್ಕಾರ ಈ ಕೆಲಸವನ್ನು ನಿಲ್ಲಿಸಲು, ಈ ನಿರ್ಮಾಣವನ್ನು ನಿಲ್ಲಿಸಲು ಇರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲು ಒಂದೂ ಅವಕಾಶಗಳನ್ನೂ ಬಿಡಲಿಲ್ಲ. ವಾಯುಪಡೆಯ ಅಧಿಕಾರಿಗಳು ಈ ಸ್ಥಳವು ಭಾರತದ ಭದ್ರತೆಗೆ ಬಹಳ ಮುಖ್ಯ ಎಂದು ಹೇಳುತ್ತಿದ್ದರು, ಆದರೆ ಏನೂ ಮಾಡಲಾಗಿಲ್ಲ. 2004 ರಿಂದ 2014 ರವರೆಗೆ, ಕಾಂಗ್ರೆಸ್ ಸರ್ಕಾರ ತನ್ನ ಫೈಲ್ ಗಳನ್ನು ಮರೆತು ಕುಳಿತಿತ್ತು. ನಾನು ಒಂದೂವರೆ ವರ್ಷಗಳ ಹಿಂದೆ ಈ ರನ್ ವೇ ಗೆ ಅಡಿಪಾಯ ಹಾಕಿದೆ. ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸುತ್ತಾರೆ; ಇಂದು ದೀಸಾದಲ್ಲಿ ರನ್‌ವೇ ಉದ್ಘಾಟನೆ ಅದಕ್ಕೆ ಒಂದು ಉದಾಹರಣೆಯಾಗಿದೆ. ಮತ್ತು ಮೋದಿ ಅವರ ಭರವಸೆ ಇದನ್ನೇ ಒಳಗೊಂಡಿದೆ.
ಸ್ನೇಹಿತರೇ,
20-25 ವರ್ಷಗಳ ಹಿಂದೆ ಉತ್ತರ ಗುಜರಾತಿನಲ್ಲಿ ಅವಕಾಶಗಳು ಬಹಳ ಸೀಮಿತವಾಗಿದ್ದ ಕಾಲವೂ ಇತ್ತು. ಆಗ, ರೈತರಿಗೆ ಹೊಲಗಳಲ್ಲಿ ನೀರಿರಲಿಲ್ಲ, ಮತ್ತು ಜಾನುವಾರು ಸಾಕಣೆದಾರರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು. ಕೈಗಾರಿಕೀಕರಣದ ವ್ಯಾಪ್ತಿಯೂ ಬಹಳ ಸೀಮಿತವಾಗಿತ್ತು. ಆದರೆ ಇಂದು ಬಿಜೆಪಿ ಸರ್ಕಾರದಲ್ಲಿ ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದೆ. ಇಲ್ಲಿನ ರೈತರು ವರ್ಷಕ್ಕೆ 2-3 ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಇಡೀ ಪ್ರದೇಶದ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಇಂದು, ನೀರು ಸರಬರಾಜು ಮತ್ತು ನೀರಿನ ಮೂಲಗಳಿಗೆ ಸಂಬಂಧಿಸಿದ 8 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ನಡೆದಿದೆ. ಈ ಯೋಜನೆಗಳಿಗೆ 1500 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗುವುದು. ಇದು ಉತ್ತರ ಗುಜರಾತ್ ನ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಉತ್ತರ ಗುಜರಾತ್ ನ ರೈತರು ಹನಿ ನೀರಾವರಿಯಂತಹ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ರೀತಿ ಅದ್ಭುತವಾಗಿದೆ. ಈಗ, ರಾಸಾಯನಿಕ ಮುಕ್ತ, ಸಾವಯವ ಕೃಷಿಯ ಪ್ರವೃತ್ತಿಯೂ ಹೆಚ್ಚುತ್ತಿರುವುದನ್ನು ನಾನು ಇಲ್ಲಿ ನೋಡುತ್ತೇನೆ. ನಿಮ್ಮ ಪ್ರಯತ್ನಗಳು ದೇಶಾದ್ಯಂತ ನೈಸರ್ಗಿಕ ಕೃಷಿಯ ಕಡೆಗೆ ರೈತರ ಉತ್ಸಾಹವನ್ನು ಹೆಚ್ಚಿಸುತ್ತವೆ.
ಸಹೋದರ ಸಹೋದರಿಯರೇ,
ಒಟ್ಟಾಗಿ, ನಮ್ಮ ಪರಂಪರೆಯನ್ನು ಸಂರಕ್ಷಿಸುತ್ತಾ ನಾವು ಅಭಿವೃದ್ಧಿಯನ್ನು ಮುಂದುವರಿಸುತ್ತೇವೆ. ಕೊನೆಯಲ್ಲಿ, ಈ ದೈವಿಕ ಅನುಭವದಲ್ಲಿ ನನ್ನನ್ನು ಪಾಲುದಾರನನ್ನಾಗಿ ಮಾಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಎಲ್ಲರಿಗೂ ತುಂಬಾ ಧನ್ಯವಾದಗಳು!
ದಯಮಾಡಿ ಎಲ್ಲರೂ ಒಟ್ಟಾಗಿ ನನ್ನೊಂದಿಗೆ ಹೇಳಿ --
ಭಾರತ್ ಮಾತಾ ಕಿ- ಜೈ!
ಭಾರತ್ ಮಾತಾ ಕಿ- ಜೈ!
ಭಾರತ್ ಮಾತಾ ಕಿ- ಜೈ!
ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಹಿಂದಿ ಭಾಷಣದ ಕೆಲವು ಭಾಗಗಳು ಗುಜರಾತಿ ಭಾಷೆಯಲ್ಲಿಯೂ ಇವೆ, ಅವುಗಳನ್ನು ಕೂಡಾ ಇಲ್ಲಿ ಅನುವಾದಿಸಲಾಗಿದೆ.
*****
(Release ID: 2176904)
Visitor Counter : 9
Read this release in:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam