ಪ್ರಧಾನ ಮಂತ್ರಿಯವರ ಕಛೇರಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ; ಮುಂಬೈನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ
ಮುಂಬೈನಲ್ಲಿ ಪ್ರಯಾಣ ಮತ್ತು ಸಂಪರ್ಕ ಪರಿವರ್ತಿಸಲು ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನೆಲದಡಿ ಮೆಟ್ರೋ ಸಜ್ಜಾಗಿದೆ: ಪ್ರಧಾನಮಂತ್ರಿ
ವಿಕಸಿತ ಭಾರತ ಎಂದರೆ ಆವೇಗ ಮತ್ತು ಪ್ರಗತಿ ಎರಡೂ ಇರುವ ಸ್ಥಳ, ಅಲ್ಲಿ ಸಾರ್ವಜನಿಕ ಕಲ್ಯಾಣವು ಅತ್ಯುನ್ನತವಾಗಿದೆ, ಸರ್ಕಾರಿ ಯೋಜನೆಗಳು ಪ್ರತಿಯೊಬ್ಬ ನಾಗರಿಕನ ಜೀವನವನ್ನು ಸುಲಭಗೊಳಿಸುತ್ತವೆ: ಪ್ರಧಾನಮಂತ್ರಿ
ಉಡಾನ್ ಯೋಜನೆಗೆ ಧನ್ಯವಾದಗಳು, ಕಳೆದ ದಶಕದಲ್ಲಿ ಲಕ್ಷಾಂತರ ಜನರು ಮೊದಲ ಬಾರಿಗೆ ವಿಮಾನದಲ್ಲಿ ಸಂಚರಿಸಿದ್ದಾರೆ, ಅವರ ಕನಸುಗಳನ್ನು ನನಸಾಗಿಸಿದ್ದಾರೆ: ಪ್ರಧಾನಮಂತ್ರಿ
ಹೊಸ ವಿಮಾನ ನಿಲ್ದಾಣಗಳು ಮತ್ತು ಉಡಾನ್ ಯೋಜನೆಯು ಭಾರತವನ್ನು ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯನ್ನಾಗಿ ಮಾಡುವ ಜತೆಗೆ ವಿಮಾನ ಪ್ರಯಾಣವನ್ನು ಸುಲಭಗೊಳಿಸಿದೆ: ಪ್ರಧಾನಮಂತ್ರಿ
ಇಂದು ಭಾರತವು ವಿಶ್ವದಲ್ಲೇ ಹೆಚ್ಚಿನ ಯುವಕರನ್ನು ಹೊಂದಿರುವ ದೇಶವಾಗಿದೆ, ನಮ್ಮ ನಿಜವಾದ ಶಕ್ತಿ ನಮ್ಮ ಯುವಕರಲ್ಲಿ ಅಡಗಿದೆ: ಪ್ರಧಾನಮಂತ್ರಿ
ನಮಗೆ, ನಮ್ಮ ರಾಷ್ಟ್ರ ಮತ್ತು ಅದರ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗಿಂತ ಮುಖ್ಯವಾದುದು ಯಾವುದೂ ಇಲ್ಲ: ಪ್ರಧಾನಮಂತ್ರಿ
Posted On:
08 OCT 2025 5:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿಂದು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದರು. ಜತೆಗೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ಗಣ್ಯರನ್ನು ಸ್ವಾಗತಿಸಿದ ಮೋದಿ ಅವರು, ಉಪಸ್ಥಿತರಿದ್ದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಇತ್ತೀಚೆಗೆ ನಡೆದ ವಿಜಯದಶಮಿ ಮತ್ತು ಕೊಜಗರಿ ಪೂರ್ಣಿಮೆಯ ಆಚರಣೆ, ಮುಂಬರುವ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಮುಂಬೈ ನಗರವು ತನ್ನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪಡೆಯುವುದರೊಂದಿಗೆ ಅದರ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ಈ ವಿಮಾನ ನಿಲ್ದಾಣವು ಈ ಪ್ರದೇಶವನ್ನು ಏಷ್ಯಾದ ಅತಿದೊಡ್ಡ ಸಂಪರ್ಕ ಕೇಂದ್ರಗಳಲ್ಲಿ ಒಂದಾಗಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಂಬೈಗೆ ಈಗ ಸಂಪೂರ್ಣ ಭೂಗತ ಮೆಟ್ರೋ ದೊರೆತಿದೆ, ಇದು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಪ್ರಯಾಣಿಕರಿಗೆ ಸಮಯವನ್ನು ಉಳಿಸುತ್ತದೆ. ಭೂಗತ ಮೆಟ್ರೋವನ್ನು ಅಭಿವೃದ್ಧಿಶೀಲ ಭಾರತದ ಜೀವಂತ ಸಂಕೇತವೆಂದು ಬಣ್ಣಿಸಿದ ಪ್ರಧಾನಮಂತ್ರಿ, ಮುಂಬೈನಂತಹ ಜನದಟ್ಟಣೆಯ ನಗರದಲ್ಲಿ, ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸುತ್ತಾ ಈ ಗಮನಾರ್ಹ ಮೆಟ್ರೋವನ್ನು ಭೂಮಿ ಒಳಗೆ ನಿರ್ಮಿಸಲಾಗಿದೆ. ಯೋಜನೆಯಲ್ಲಿ ಭಾಗಿಯಾಗಿರುವ ಕಾರ್ಮಿಕರು ಮತ್ತು ಎಂಜಿನಿಯರ್‌ಗಳಿಗೆ ಅವರು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತವು ತನ್ನ ಯುವ ಸಮುದಾಯಕ್ಕೆ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ನೀಡುತ್ತದೆ. ದೇಶಾದ್ಯಂತ ಹಲವಾರು ಐ.ಟಿ.ಐಗಳನ್ನು ಉದ್ಯಮದೊಂದಿಗೆ ಸಂಪರ್ಕಿಸುವ ಗುರಿ ಹೊಂದಿರುವ 60,000 ಕೋಟಿ ರೂ. ವೆಚ್ಚದ ಪ್ರಧಾನ ಮಂತ್ರಿ ಸೇತು ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಇಂದಿನಿಂದ ಮಹಾರಾಷ್ಟ್ರ ಸರ್ಕಾರವು ನೂರಾರು ಐ.ಟಿ.ಐಗಳು ಮತ್ತು ತಾಂತ್ರಿಕ ಶಾಲೆಗಳಲ್ಲಿ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಈ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳು ಡ್ರೋನ್‌ಗಳು, ರೊಬೊಟಿಕ್ಸ್, ವಿದ್ಯುತ್ ವಾಹನಗಳು, ಸೌರಶಕ್ತಿ ಮತ್ತು ಹಸಿರು ಹೈಡ್ರೋಜನ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತರಬೇತಿ ಪಡೆಯುತ್ತಾರೆ ಎಂದರಲ್ಲದೆ, ಮಹಾರಾಷ್ಟ್ರದ ಯುವಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಮಹಾರಾಷ್ಟ್ರದ ಪುತ್ರ ಲೋಕನೇತ ಶ್ರೀ ಡಿ.ಬಿ. ಪಾಟೀಲ್ ಅವರು ಸಮಾಜ ಮತ್ತು ರೈತರಿಗೆ ಸಲ್ಲಿಸಿದ ಸಮರ್ಪಿತ ಸೇವೆಯನ್ನು ಸ್ಮರಿಸಿದ, ಅವರಿಗೆ ಗೌರವ ಸಲ್ಲಿಸಿದರು. ಶ್ರೀ ಪಾಟೀಲ್ ಅವರ ಸೇವಾ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ, ಅವರ ಜೀವನವು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವವರನ್ನು ಪ್ರೇರೇಪಿಸುತ್ತಲೇ ಇರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
"ಇಂದು ಇಡೀ ರಾಷ್ಟ್ರವು ಆವೇಗ ಮತ್ತು ಪ್ರಗತಿ ಎರಡರಿಂದಲೂ ವ್ಯಾಖ್ಯಾನಿಸಲ್ಪಟ್ಟ ಭಾರತವಾದ ವಿಕಸಿತ ಭಾರತದ ಸಂಕಲ್ಪವನ್ನು ಪೂರೈಸಲು ಬದ್ಧವಾಗಿದೆ, ಸಾರ್ವಜನಿಕ ಕಲ್ಯಾಣವು ಅತ್ಯುನ್ನತವಾಗಿದೆ, ಸರ್ಕಾರಿ ಯೋಜನೆಗಳು ನಾಗರಿಕರ ಜೀವನವನ್ನು ಸರಳಗೊಳಿಸುತ್ತದೆ". ಕಳೆದ 11 ವರ್ಷಗಳಲ್ಲಿ, ಈ ಮನೋಭಾವವು ದೇಶದ ಮೂಲೆ ಮೂಲೆಗಳಲ್ಲಿ ಅಭಿವೃದ್ಧಿ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಿದೆ. ವಂದೇ ಭಾರತ್ ಅತಿ ವೇಗದ ರೈಲುಗಳು ಹಳಿಗಳ ಮೇಲೆ ಚಲಿಸಿದಾಗ, ಬುಲೆಟ್ ರೈಲು ಯೋಜನೆಗಳು ವೇಗವನ್ನು ಪಡೆದಾಗ, ವಿಶಾಲ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ಹೊಸ ನಗರಗಳನ್ನು ಸಂಪರ್ಕಿಸಿದಾಗ, ಪರ್ವತಗಳ ಮೂಲಕ ಉದ್ದವಾದ ಸುರಂಗಗಳನ್ನು ಕೆತ್ತಿದಾಗ ಮತ್ತು ಎತ್ತರದ ಸಮುದ್ರ ಸೇತುವೆಗಳು ದೂರದ ತೀರಗಳನ್ನು ಸಂಪರ್ಕಿಸಿದಾಗ, ಭಾರತದ ವೇಗ ಮತ್ತು ಪ್ರಗತಿ ಗೋಚರಿಸುತ್ತದೆ. ತಹ ಪ್ರಗತಿಗಳು ಭಾರತದ ಯುವಜನರ ಆಕಾಂಕ್ಷೆಗಳಿಗೆ ಹೊಸ ರೆಕ್ಕೆಪುಕ್ಕೆ ನೀಡುತ್ತವೆ ಎಂದರು.
ಇಂದಿನ ಕಾರ್ಯಕ್ರಮವು ಭಾರತದ ಅಭಿವೃದ್ಧಿ ಪಯಣದ ಆವೇಗವನ್ನು ಮುಂದುವರೆಸುತ್ತದೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಯೋಜನೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವು ಕಮಲದ ಹೂವಿನ ಆಕಾರದಲ್ಲಿದೆ, ಇದು ಸಂಸ್ಕೃತಿ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಈ ಹೊಸ ವಿಮಾನ ನಿಲ್ದಾಣವು ಮಹಾರಾಷ್ಟ್ರದ ರೈತರನ್ನು ಯುರೋಪ್ ಮತ್ತು ಮಧ್ಯಪ್ರಾಚ್ಯದ ಸೂಪರ್‌ಮಾರ್ಕೆಟ್‌ಗಳಿಗೆ ಸಂಪರ್ಕಿಸುತ್ತದೆ, ತಾಜಾ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು ಮತ್ತು ಮೀನುಗಾರಿಕೆ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತ್ವರಿತವಾಗಿ ತಲುಪಲು ಅನುವು ಮಾಡಿಕೊಡುತ್ತದೆ. ವಿಮಾನ ನಿಲ್ದಾಣವು ಹತ್ತಿರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ರಫ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ, ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯಮಗಳ ಸ್ಥಾಪನೆಗೆ ಕಾರಣವಾಗುತ್ತದೆ. ಹೊಸ ವಿಮಾನ ನಿಲ್ದಾಣಕ್ಕಾಗಿ ಮಹಾರಾಷ್ಟ್ರ ಮತ್ತು ಮುಂಬೈ ಜನರಿಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಕನಸುಗಳನ್ನು ಈಡೇರಿಸುವ ಸಂಕಲ್ಪ ಮತ್ತು ನಾಗರಿಕರಿಗೆ ತ್ವರಿತ ಅಭಿವೃದ್ಧಿಯನ್ನು ತಲುಪಿಸುವ ಬಲವಾದ ಇಚ್ಛಾಶಕ್ತಿ ಇದ್ದಾಗ, ಫಲಿತಾಂಶಗಳು ಅನಿವಾರ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಭಾರತದ ವಾಯುಯಾನ ವಲಯವು ಈ ಪ್ರಗತಿಗೆ ಪ್ರಮುಖ ಸಾಕ್ಷಿಯಾಗಿದೆ. ಅಧಿಕಾರ ವಹಿಸಿಕೊಂಡ ನಂತರ ತಮ್ಮ 2014ರ ಭಾಷಣ ನೆನಪಿಸಿಕೊಂಡ ಶ್ರೀ ಮೋದಿ, ಹವಾಯಿ ಚಪ್ಪಲಿಗಳನ್ನು ಧರಿಸಿದವರು ಸಹ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂಬ ತಮ್ಮ ದೃಷ್ಟಿಕೋನವನ್ನು ಪುನರುಚ್ಚರಿಸಿದರು. ಈ ಕನಸನ್ನು ನನಸಾಗಿಸಲು, ದೇಶಾದ್ಯಂತ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿತ್ತು. ಸರ್ಕಾರವು ಈ ಧ್ಯೇಯವನ್ನು ಗಂಭೀರವಾಗಿ ಪರಿಗಣಿಸಿದೆ, ಕಳೆದ 11 ವರ್ಷಗಳಲ್ಲಿ, ಹೊಸ ವಿಮಾನ ನಿಲ್ದಾಣಗಳನ್ನು ಒಂದರ ನಂತರ ಒಂದರಂತೆ ನಿರ್ಮಿಸಲಾಗಿದೆ. 2014ರಲ್ಲಿ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಆದರೆ ಇಂದು, ಈ ಸಂಖ್ಯೆ 160 ದಾಟಿದೆ.
ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣವು ನಿವಾಸಿಗಳಿಗೆ ವಿಮಾನ ಪ್ರಯಾಣಕ್ಕಾಗಿ ಹೊಸ ಆಯ್ಕೆಗಳನ್ನು ಒದಗಿಸಿದೆ. ಆರ್ಥಿಕ ನಿರ್ಬಂಧಗಳನ್ನು ಪರಿಹರಿಸಲು, ಸರ್ಕಾರವು ಸಾಮಾನ್ಯ ನಾಗರಿಕರಿಗೆ ವಿಮಾನ ಟಿಕೆಟ್‌ಗಳನ್ನು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವ ಉಡಾನ್ ಯೋಜನೆ ಪ್ರಾರಂಭಿಸಿತು. ಕಳೆದ ದಶಕದಲ್ಲಿ, ಲಕ್ಷಾಂತರ ಜನರು ಈ ಯೋಜನೆಯಡಿ ಮೊದಲ ಬಾರಿಗೆ ವಿಮಾನಯಾನ ಮಾಡಿದ್ದಾರೆ, ಅವರ ಬಹುಕಾಲದ ಕನಸುಗಳನ್ನು ನನಸಾಗಿಸಿದ್ದಾರೆ ಎಂದು ಅವರು ತಿಳಿಸಿದರು.
ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಉಡಾನ್ ಯೋಜನೆಯು ನಾಗರಿಕರಿಗೆ ಅನುಕೂಲ ಒದಗಿಸಿದೆ. ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ನಿರಂತರವಾಗಿ ವಿಸ್ತರಿಸುತ್ತಿವೆ, ನೂರಾರು ಹೊಸ ವಿಮಾನಗಳಿಗೆ ಆದೇಶಗಳನ್ನು ನೀಡುತ್ತಿವೆ. ಈ ಬೆಳವಣಿಗೆಯು ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ, ಎಂಜಿನಿಯರ್‌ಗಳು ಮತ್ತು ನೆಲಗಟ್ಟಿನ ಕೆಲಸಗಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ವಿಮಾನಗಳ ಸಂಖ್ಯೆ ಹೆಚ್ಚಾದಂತೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯಾಚರಣೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಈ ಅಗತ್ಯವನ್ನು ಪೂರೈಸಲು ಭಾರತ ದೇಶೀಯವಾಗಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತವನ್ನು ಪ್ರಮುಖ ಎಂ.ಆರ್.ಒ (ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ) ಕೇಂದ್ರವಾಗಿ ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಈ ಉಪಕ್ರಮವು ಭಾರತದ ಯುವಕರಿಗೆ ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.
"ಭಾರತವು ವಿಶ್ವದ ಅತ್ಯಂತ ಹೆಚ್ಚಿನ ಯುವ ಸಮುದಾಯ ಹೊಂದಿರುವ ಚಿರಯೌವ್ವನ ದೇಶ, ಮತ್ತು ಅದರ ನಿಜವಾದ ಶಕ್ತಿ ಯುವಜನರಲ್ಲಿ ಅಡಗಿದೆ". ಪ್ರತಿಯೊಂದು ಸರ್ಕಾರಿ ನೀತಿಯು ಯುವ ಜನರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸುತ್ತದೆ. ಮೂಲಸೌಕರ್ಯದಲ್ಲಿ ಹೆಚ್ಚಿದ ಹೂಡಿಕೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತಿದೆ, 76,000 ಕೋಟಿ ರೂ. ವಧವನ್ ಬಂದರು ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ವ್ಯಾಪಾರ ವಿಸ್ತರಿಸಿದಾಗ ಮತ್ತು ಸರಕು ಸಾಗಣೆ ವಲಯವು ವೇಗ ಪಡೆದಾಗ, ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.
ರಾಷ್ಟ್ರೀಯ ನೀತಿಯು ರಾಜಕೀಯದ ಆಧಾರವನ್ನು ರೂಪಿಸುವ ಮೌಲ್ಯಗಳಲ್ಲಿ ಭಾರತವನ್ನು ಪೋಷಿಸಲಾಗಿದೆ. ಸರ್ಕಾರಕ್ಕೆ, ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಪ್ರತಿ ರೂಪಾಯಿ ನಾಗರಿಕರ ಅನುಕೂಲತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಿದೆ. ಸಾರ್ವಜನಿಕ ಕಲ್ಯಾಣಕ್ಕಿಂತ ಅಧಿಕಾರಕ್ಕೆ ಆದ್ಯತೆ ನೀಡುವ ದೇಶದ ರಾಜಕೀಯ ಪ್ರವಾಹದೊಂದಿಗೆ ಕೊಚ್ಚಿ ಹೋಗುತ್ತದೆ. ಅಂತಹ ವ್ಯಕ್ತಿಗಳು ಅಭಿವೃದ್ಧಿ ಕಾರ್ಯಗಳನ್ನು ಅಡ್ಡಿಪಡಿಸುತ್ತಾರೆ, ಹಗರಣಗಳು ಮತ್ತು ಭ್ರಷ್ಟಾಚಾರದ ಮೂಲಕ ಯೋಜನೆಗಳ ಹಳಿ ತಪ್ಪಿಸುತ್ತಾರೆ ಮತ್ತು ದೇಶವು ದಶಕಗಳಿಂದ ಇಂತಹ ದುರಾಡಳಿತವನ್ನು ಕಂಡಿದೆ ಎಂದು ಅವರು ಹೇಳಿದರು.
ಇಂದು ಉದ್ಘಾಟನೆಯಾದ ಮೆಟ್ರೋ ಮಾರ್ಗವು ಹಿಂದಿನ ಕೆಲವು ಆಡಳಿತಗಳ ಕ್ರಮಗಳ ಜ್ಞಾಪನೆಯಾಗಿ ಕಾರ್ಯ ನಿರ್ವಹಿಸುತ್ತದೆ, ಈ ಯೋಜನೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಇದು ಮುಂಬೈನ ಲಕ್ಷಾಂತರ ಕುಟುಂಬಗಳ ಕಷ್ಟಗಳನ್ನು ನಿವಾರಿಸುವ ಭರವಸೆ ಹುಟ್ಟುಹಾಕಿತ್ತು. ಆದಾಗ್ಯೂ, ನಂತರದ ಸರ್ಕಾರವು ಯೋಜನೆಯನ್ನು ಸ್ಥಗಿತಗೊಳಿಸಿತು, ಇದರಿಂದಾಗಿ ರಾಷ್ಟ್ರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಯಿತು, ಹಲವಾರು ವರ್ಷಗಳ ಕಾಲ ಅನನುಕೂಲತೆ ಉಂಟಾಗಿತ್ತು. ಆದರೆ ಈಗ ಈ ಮೆಟ್ರೋ ಮಾರ್ಗ ಪೂರ್ಣಗೊಂಡ ನಂತರ, ಎರಡರಿಂದ ಎರಡೂವರೆ ಗಂಟೆಗಳ ಪ್ರಯಾಣವು ಈಗ ಕೇವಲ 30 ರಿಂದ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮುಂಬೈನಂತಹ ನಗರದಲ್ಲಿ, ಪ್ರತಿ ನಿಮಿಷವೂ ಮುಖ್ಯವಾಗಿದೆ, ನಾಗರಿಕರು 3 ರಿಂದ 4 ವರ್ಷಗಳ ಕಾಲ ಈ ಸೌಲಭ್ಯದಿಂದ ವಂಚಿತರಾಗಿದ್ದರು, ಇದು ಗಂಭೀರ ಅನ್ಯಾಯ ಎಂದು ಪ್ರಧಾನಮಂತ್ರಿ ತಿಳಿಸಿದರು.
"ಕಳೆದ 11 ವರ್ಷಗಳಿಂದ, ನಾಗರಿಕರ ಜೀವನ ಸುಗಮತೆ ಸುಧಾರಿಸಲು ಸರ್ಕಾರ ಬಲವಾದ ಒತ್ತು ನೀಡಿದೆ". ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳು, ಮೆಟ್ರೋಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳಂತಹ ಸೌಲಭ್ಯಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಈ ಅಭಿವೃದ್ಧಿಗೆ ಉದಾಹರಣೆಗಳಾಗಿ ಅಟಲ್ ಸೇತು ಮತ್ತು ಕರಾವಳಿ ರಸ್ತೆಯಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಪ್ರಯಾಣಿಕರು ಕಷ್ಟಪಟ್ಟು ಸಾರಿಗೆ ವಿಧಾನಗಳನ್ನು ಬದಲಾಯಿಸುವ ಅಗತ್ಯವನ್ನು ನಿವಾರಿಸುವ ಮೂಲಕ, ಸುಗಮ ಪ್ರಯಾಣ ಖಚಿತಪಡಿಸಿಕೊಳ್ಳಲು ಎಲ್ಲಾ ಸಾರಿಗೆ ವಿಧಾನಗಳನ್ನು ಸಂಯೋಜಿಸಲು ಪ್ರಯತ್ನಗಳು ನಡೆಯುತ್ತಿವೆ. ಭಾರತವು ಒಂದು ರಾಷ್ಟ್ರ, ಒಂದು ಚಲನಶೀಲತೆಯ ದೃಷ್ಟಿಕೋನದತ್ತ ಸಾಗುತ್ತಿದೆ. ಮುಂಬೈ ಒಂದು ಅಪ್ಲಿಕೇಶನ್ ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದ್ದು, ನಾಗರಿಕರು ಟಿಕೆಟ್‌ಗಳಿಗಾಗಿ ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್‌ನೊಂದಿಗೆ, ಸ್ಥಳೀಯ ರೈಲುಗಳು, ಬಸ್‌ಗಳು, ಮೆಟ್ರೋಗಳು ಮತ್ತು ಟ್ಯಾಕ್ಸಿಗಳಲ್ಲಿ ಒಂದೇ ಟಿಕೆಟ್ ಬಳಸಬಹುದು.
ಭಾರತದ ಆರ್ಥಿಕ ರಾಜಧಾನಿ ಮತ್ತು ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾಗಿರುವ ಮುಂಬೈ ಅನ್ನು 2008ರ ದಾಳಿಯಲ್ಲಿ ಭಯೋತ್ಪಾದಕರು ಗುರಿಯಾಗಿಸಿಕೊಂಡರು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರದ ದೌರ್ಬಲ್ಯವು ಭಯೋತ್ಪಾದನೆಯ ಮುಂದೆ ಶರಣಾಗುವಂತೆ ತೋರುತ್ತಿತ್ತು. ಮುಂಬೈ ದಾಳಿಯ ನಂತರ ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು ಎಂದು ವಿರೋಧ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಗೃಹ ಸಚಿವರೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದನ್ನು ಶ್ರೀ ಮೋದಿ ಉಲ್ಲೇಖಿಸಿದರು. ಇಡೀ ರಾಷ್ಟ್ರವು ಅಂತಹ ಕ್ರಮವನ್ನು ಬೆಂಬಲಿಸಿದೆ. ಆದಾಗ್ಯೂ, ವಿರೋಧ ಪಕ್ಷದ ನಾಯಕರ ಪ್ರಕಾರ, ವಿದೇಶಗಳ ಒತ್ತಡದಿಂದಾಗಿ ಸರ್ಕಾರ ಮಿಲಿಟರಿ ಕ್ರಮವನ್ನು ನಿಲ್ಲಿಸಿತು. ಈ ನಿರ್ಧಾರದ ಮೇಲೆ ಪ್ರಭಾವ ಬೀರಿದವರು ಯಾರು ಎಂಬುದನ್ನು ವಿರೋಧ ಪಕ್ಷ ಸ್ಪಷ್ಟಪಡಿಸಬೇಕೆಂದು ಪ್ರಧಾನಮಂತ್ರಿ ಒತ್ತಾಯಿಸಿದರು, ಇದು ಮುಂಬೈ ಮತ್ತು ರಾಷ್ಟ್ರದ ಭಾವನೆಗಳನ್ನು ದುರ್ಬಲಗೊಳಿಸಿದೆ. ವಿರೋಧ ಪಕ್ಷದ ದೌರ್ಬಲ್ಯವು ಭಯೋತ್ಪಾದಕರಿಗೆ ಧೈರ್ಯ ತುಂಬಿತು, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡ ಪರಿಣಾಮ, ದೇಶದ ಮುಗ್ಧ ಜೀವಗಳು ಬಲಿಯಾದವು ಎಂದರು.
"ನಮ್ಮ ಸರ್ಕಾರಕ್ಕೆ, ರಾಷ್ಟ್ರ ಮತ್ತು ಅದರ ನಾಗರಿಕರ ಭದ್ರತೆಗಿಂತ ಏನೂ ಮುಖ್ಯವಲ್ಲ", ಇಂದಿನ ಭಾರತವು ಶಕ್ತಿಯಿಂದ ಪ್ರತಿಕ್ರಿಯಿಸುತ್ತದೆ ಮತ್ತು ಶತ್ರು ಪ್ರದೇಶಿಸಿದರೆ ಪ್ರತಿದಾಳಿ ಮಾಡುತ್ತದೆ. ಇದನ್ನು ಆಪರೇಷನ್ ಸಿಂದೂರ್ ಸಮಯದಲ್ಲಿ ಜಾಗತಿಕವಾಗಿ ಸ್ಪಷ್ಟಪಡಿಸಲಾಗಿದೆ.
ಬಡವರು, ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸುವುದು ರಾಷ್ಟ್ರೀಯ ಆದ್ಯತೆಯಾಗಿದೆ. ಈ ಕುಟುಂಬಗಳು ಸೌಲಭ್ಯಗಳು ಮತ್ತು ಗೌರವ ಪಡೆದಾಗ, ಅವರ ಸಾಮರ್ಥ್ಯಗಳು ಬೆಳೆಯುತ್ತವೆ ಮತ್ತು ನಾಗರಿಕರ ಸಾಮೂಹಿಕ ಬಲವು ರಾಷ್ಟ್ರವನ್ನು ಬಲಪಡಿಸುತ್ತದೆ. ಜಿ.ಎಸ್.ಟಿಯಲ್ಲಿನ ಇತ್ತೀಚಿನ ಮುಂದಿನ ಪೀಳಿಗೆಯ ಸುಧಾರಣೆಗಳು ಹಲವಾರು ಸರಕುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಿವೆ, ಇದು ಜನರ ಖರೀದಿ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮಾರುಕಟ್ಟೆ ದತ್ತಾಂಶವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಈ ನವರಾತ್ರಿ ಋತುವು ಬಹು ವರ್ಷಗಳ ಮಾರಾಟ ದಾಖಲೆಗಳನ್ನು ಮುರಿದಿದೆ, ದಾಖಲೆ ಸಂಖ್ಯೆಯ ಜನರು ಸ್ಕೂಟರ್‌ಗಳು, ಬೈಕ್‌ಗಳು, ಟೆಲಿವಿಷನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳನ್ನು ಖರೀದಿಸುತ್ತಿದ್ದಾರೆ ಎಂದರು.
ಸರ್ಕಾರವು ನಾಗರಿಕರ ಜೀವನ ಸುಧಾರಿಸುವ ಮತ್ತು ರಾಷ್ಟ್ರವನ್ನು ಬಲಪಡಿಸುವ ಕ್ರಮಗಳನ್ನು ಮುಂದುವರಿಸುತ್ತದೆ. ಪ್ರತಿಯೊಬ್ಬರೂ ಸ್ವದೇಶಿಯನ್ನು ಸ್ವೀಕರಿಸಲು ಮತ್ತು ಹೆಮ್ಮೆಯಿಂದ "ಇದು ಸ್ವದೇಶಿ" ಎಂದು ಹೇಳಬೇಕು ಒತ್ತಾಯಿಸಿದರು. ಇದು ಪ್ರತಿ ಮನೆ ಮತ್ತು ಮಾರುಕಟ್ಟೆಯಲ್ಲಿ ಪ್ರತಿಧ್ವನಿಸುವ ಮಂತ್ರ. ಪ್ರತಿಯೊಬ್ಬ ನಾಗರಿಕನು ಸ್ವದೇಶಿ ಬಟ್ಟೆ ಮತ್ತು ಬೂಟುಗಳನ್ನು ಖರೀದಿಸಿದಾಗ, ಸ್ವದೇಶಿ ಉತ್ಪನ್ನಗಳನ್ನು ಮನೆಗೆ ತಂದಾಗ ಮತ್ತು ಸ್ವದೇಶಿ ಉಡುಗೊರೆಗಳನ್ನು ನೀಡಿದಾಗ, ರಾಷ್ಟ್ರದ ಸಂಪತ್ತು ದೇಶದೊಳಗೆ ಉಳಿಯುತ್ತದೆ. ಇದು ಭಾರತೀಯ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುತ್ತದೆ ಮತ್ತು ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇಡೀ ರಾಷ್ಟ್ರವು ಸ್ವದೇಶಿಯನ್ನು ಅಳವಡಿಸಿಕೊಂಡಾಗ ಭಾರತವು ಪಡೆಯುವ ಅಪಾರ ಶಕ್ತಿಯನ್ನು ಕಲ್ಪಿಸಿಕೊಳ್ಳಬೇಕು ಪ್ರಧಾನಮಂತ್ರಿ ಜನರನ್ನು ಪ್ರೋತ್ಸಾಹಿಸಿದರು.
ಭಾರತದ ಅಭಿವೃದ್ಧಿ ವೇಗಗೊಳಿಸುವಲ್ಲಿ ಮಹಾರಾಷ್ಟ್ರ ಯಾವಾಗಲೂ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರದ ಪ್ರತಿಯೊಂದು ಪಟ್ಟಣ ಮತ್ತು ಹಳ್ಳಿಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವಿಶ್ರಾಂತವಾಗಿ ಶ್ರಮಿಸುತ್ತಿವೆ. ಈ ಎಲ್ಲಾ ಅಭಿವೃದ್ಧಿ ಉಪಕ್ರಮಗಳಿಗಾಗಿ ಎಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಶ್ರೀ ರಾಮದಾಸ್ ಅಠಾವಳೆ, ಶ್ರೀ ರಾಮಮೋಹನ್ ನಾಯ್ಡು ಕಿಂಜರಪು, ಶ್ರೀ ಮುರಳೀಧರ್ ಮೊಹೋಲ್, ಭಾರತದಲ್ಲಿರುವ ಜಪಾನ್ ರಾಯಭಾರಿ ಶ್ರೀ ಕೀಚಿ ಓನೊ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಭಾರತವನ್ನು ಜಾಗತಿಕ ವಾಯುಯಾನ ಕೇಂದ್ರವಾಗಿ ಪರಿವರ್ತಿಸುವ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಸುಮಾರು 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಎನ್.ಎಂ.ಐ.ಎ) ಹಂತ 1 ಅನ್ನು ಉದ್ಘಾಟಿಸಿದರು.
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿದ್ದು, ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ) ಅಡಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈ ಮಹಾನಗರ ಪ್ರದೇಶದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಎನ್‌ಎಂಐಎ, ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಸಿ.ಎಸ್.ಎಂ.ಐ.ಎ)ದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತದೆ, ಇದು ಪ್ರಯಾಣಿಕ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಂಬೈಯನ್ನು ಜಾಗತಿಕ ಬಹು-ವಿಮಾನ ನಿಲ್ದಾಣ ವ್ಯವಸ್ಥೆಗಳ ಲೀಗ್‌ಗೆ ಏರಿಸುತ್ತದೆ. 1,160 ಹೆಕ್ಟೇರ್ ಭೂ ಪ್ರದೇಶದ ವಿಸ್ತೀರ್ಣದೊಂದಿಗೆ ವಿಶ್ವದ ಅತ್ಯಂತ ಪರಿಣಾಮಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗುವಂತೆ ವಿನ್ಯಾಸಗೊಳಿಸಲಾದ ಈ ವಿಮಾನ ನಿಲ್ದಾಣವು ಅಂತಿಮವಾಗಿ ವಾರ್ಷಿಕವಾಗಿ 90 ದಶಲಕ್ಷ ಪ್ರಯಾಣಿಕರನ್ನು(ಎಂ.ಪಿ.ಪಿ.ಎ) ಮತ್ತು 3.25 ದಶಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸುತ್ತದೆ.
ಇದರ ವಿಶಿಷ್ಟ ಕೊಡುಗೆಗಳಲ್ಲಿ ಸ್ವಯಂಚಾಲಿತ ಪೀಪಲ್ ಮೂವರ್(ಎ.ಪಿ.ಎಂ) ಸೇರಿದೆ, ಇದು ಸುಗಮ ಅಂತರ-ಟರ್ಮಿನಲ್ ವರ್ಗಾವಣೆಗಳಿಗಾಗಿ ಎಲ್ಲಾ 4 ಪ್ರಯಾಣಿಕರ ಟರ್ಮಿನಲ್‌ಗಳನ್ನು ಸಂಪರ್ಕಿಸಲು ಯೋಜಿಸಲಾದ ಸಾರಿಗೆ ವ್ಯವಸ್ಥೆಯಾಗಿದೆ, ಜೊತೆಗೆ ನಗರ-ಬದಿಯ ಮೂಲಸೌಕರ್ಯವನ್ನು ಸಂಪರ್ಕಿಸುವ ಲ್ಯಾಂಡ್‌ಸೈಡ್ ಎ.ಪಿ.ಎಂ ಆಗಿದೆ. ಸುಸ್ಥಿರ ಅಭ್ಯಾಸಗಳಿಗೆ ಅನುಗುಣವಾಗಿ, ವಿಮಾನ ನಿಲ್ದಾಣವು ಸುಸ್ಥಿರ ವಿಮಾನ ಇಂಧನ(ಎಸ್.ಎ.ಎಫ್)ಕ್ಕಾಗಿ ಮೀಸಲಾದ ಸಂಗ್ರಹಣೆ, ಸುಮಾರು 47 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮತ್ತು ನಗರದಾದ್ಯಂತ ಸಾರ್ವಜನಿಕ ಸಂಪರ್ಕಕ್ಕಾಗಿ ಇವಿ ಬಸ್ ಸೇವೆಗಳನ್ನು ಒಳಗೊಂಡಿರುತ್ತದೆ. ಎನ್.ಎಂ.ಐ.ಎ ವಾಟರ್ ಟ್ಯಾಕ್ಸಿ ಮೂಲಕ ಸಂಪರ್ಕ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣವೂ ಆಗಲಿದೆ.
ಪ್ರಧಾನಮಂತ್ರಿ ಆಚಾರ್ಯ ಅತ್ರೆ ಚೌಕ್‌ನಿಂದ ಕಫೆ ಪರೇಡ್‌ವರೆಗೆ ವಿಸ್ತರಿಸಿರುವ ಮುಂಬೈ ಮೆಟ್ರೋ ಲೈನ್-3 ರ ಹಂತ 2ಬಿ ಅನ್ನು ಉದ್ಘಾಟಿಸಿದರು, ಇದನ್ನು ಸುಮಾರು 12,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ, ಅವರು ಒಟ್ಟು 37,270 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚದ ಸಂಪೂರ್ಣ ಮುಂಬೈ ಮೆಟ್ರೋ ಲೈನ್ 3 (ಆಕ್ವಾ ಲೈನ್) ಅನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ, ಇದು ನಗರದ ನಗರ ಸಾರಿಗೆ ಪರಿವರ್ತನೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ಮುಂಬೈನ ಮೊದಲ ಮತ್ತು ಏಕೈಕ ಸಂಪೂರ್ಣ ಭೂಗತ ಮೆಟ್ರೋ ಮಾರ್ಗವಾಗಿ, ಈ ಯೋಜನೆಯು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ(ಎಂ.ಎಂ.ಆರ್)ದಾದ್ಯಂತ ಪ್ರಯಾಣವನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ, ಇದು ಲಕ್ಷಾಂತರ ನಿವಾಸಿಗಳಿಗೆ ವೇಗವಾದ, ಹೆಚ್ಚು ಪರಿಣಾಮಕಾರಿ ಮತ್ತು ಆಧುನಿಕ ಸಾರಿಗೆ ಪರಿಹಾರವನ್ನು ನೀಡುತ್ತದೆ.
ಕಫೆ ಪರೇಡ್ ನಿಂದ ಆರೆ ಜೆ.ವಿ.ಎಲ್.ಆರ್ ವರೆಗೆ 33.5 ಕಿ.ಮೀ ಉದ್ದದ ಮುಂಬೈ ಮೆಟ್ರೋ ಲೈನ್ -3, 27 ನಿಲ್ದಾಣಗಳನ್ನು ಹೊಂದಿದ್ದು, ಪ್ರತಿದಿನ 13 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ. ಯೋಜನೆಯ ಅಂತಿಮ ಹಂತ 2ಬಿ ದಕ್ಷಿಣ ಮುಂಬೈನ ಪರಂಪರೆ ಮತ್ತು ಸಾಂಸ್ಕೃತಿಕ ಜಿಲ್ಲೆಗಳಾದ ಫೋರ್ಟ್, ಕಲಾ ಘೋಡಾ ಮತ್ತು ಮೆರೈನ್ ಡ್ರೈವ್‌ಗಳಿಗೆ ತಡೆರಹಿತ ಸಂಪರ್ಕ ಒದಗಿಸುತ್ತದೆ, ಜೊತೆಗೆ ಬಾಂಬೆ ಹೈಕೋರ್ಟ್, ಮಂತ್ರಾಲಯ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿ.ಎಸ್.ಇ) ಮತ್ತು ನಾರಿಮನ್ ಪಾಯಿಂಟ್ ಸೇರಿದಂತೆ ಪ್ರಮುಖ ಆಡಳಿತ ಮತ್ತು ಹಣಕಾಸು ಕೇಂದ್ರಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ.
ರೈಲ್ವೆಗಳು, ವಿಮಾನ ನಿಲ್ದಾಣಗಳು, ಇತರ ಮೆಟ್ರೋ ಮಾರ್ಗಗಳು ಮತ್ತು ಮೋನೋರೈಲ್ ಸೇವೆಗಳು ಸೇರಿದಂತೆ ಇತರ ಸಾರಿಗೆ ವಿಧಾನಗಳೊಂದಿಗೆ ಪರಿಣಾಮಕಾರಿ ಏಕೀಕರಣ ಖಚಿತಪಡಿಸಿಕೊಳ್ಳಲು ಮೆಟ್ರೋ ಲೈನ್ -3 ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಅನತಿ ದೂರದ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಮಹಾನಗರ ಪ್ರದೇಶದಾದ್ಯಂತ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
ಮೆಟ್ರೋ, ಮೊನೊರೈಲ್, ಉಪನಗರ ರೈಲ್ವೆಗಳು ಮತ್ತು ಬಸ್ ಪಿಟಿಒಗಳಲ್ಲಿ 11 ಸಾರ್ವಜನಿಕ ಸಾರಿಗೆ ನಿರ್ವಾಹಕರಿಗೆ (ಪಿ.ಟಿ.ಒ) "ಮುಂಬೈ ಒನ್" - ಇಂಟಿಗ್ರೇಟೆಡ್ ಕಾಮನ್ ಮೊಬಿಲಿಟಿ ಅಪ್ಲಿಕೇಶನ್ ಅನ್ನು ಪ್ರಧಾನಮಂತ್ರಿ ಅನಾವರಣಗೊಳಿಸಿದರು. ಇವುಗಳಲ್ಲಿ ಮುಂಬೈ ಮೆಟ್ರೋ ಲೈನ್ 2ಎ & 7, ಮುಂಬೈ ಮೆಟ್ರೋ ಲೈನ್ 3, ಮುಂಬೈ ಮೆಟ್ರೋ ಲೈನ್ 1, ಮುಂಬೈ ಮೊನೊರೈಲ್, ನವಿ ಮುಂಬೈ ಮೆಟ್ರೋ, ಮುಂಬೈ ಸಬ್‌ಅರ್ಬನ್ ರೈಲ್ವೆ, ಬೃಹನ್‌ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ(BEST), ಥಾಣೆ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್, ಮೀರಾ ಭಯಂದರ್ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್, ಕಲ್ಯಾಣ್ ಡೊಂಬಿವಲಿ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್ ಮತ್ತು ನವಿ ಮುಂಬೈ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್ ಸೇರಿವೆ.
ಮುಂಬೈ ಒನ್ ಆಪ್ ಪ್ರಯಾಣಿಕರಿಗೆ ಬಹು ಸಾರ್ವಜನಿಕ ಸಾರಿಗೆ ನಿರ್ವಾಹಕರಲ್ಲಿ ಸಂಯೋಜಿತ ಮೊಬೈಲ್ ಟಿಕೆಟಿಂಗ್, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ಸರತಿ ಸಾಲಿನಲ್ಲಿ ನಿಲ್ಲುವುದನ್ನು ನಿವಾರಿಸುವುದು ಮತ್ತು ಬಹು ಸಾರಿಗೆ ವಿಧಾನಗಳನ್ನು ಒಳಗೊಂಡ ಪ್ರವಾಸಗಳಿಗೆ ಒಂದೇ ಡೈನಾಮಿಕ್ ಟಿಕೆಟ್ ಮೂಲಕ ತಡೆರಹಿತ ಮಲ್ಟಿಮೋಡಲ್ ಸಂಪರ್ಕ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ವಿಳಂಬಗಳು, ಪರ್ಯಾಯ ಮಾರ್ಗಗಳು ಮತ್ತು ಅಂದಾಜು ಆಗಮನದ ಸಮಯಗಳ ಕುರಿತು ನೈಜ-ಸಮಯದ ಪ್ರಯಾಣ ನವೀಕರಣಗಳನ್ನು ಒದಗಿಸುತ್ತದೆ, ಜೊತೆಗೆ ಹತ್ತಿರದ ನಿಲ್ದಾಣಗಳು, ಆಕರ್ಷಣೆಗಳು ಮತ್ತು ಆಸಕ್ತಿಯ ಸ್ಥಳಗಳ ನಕ್ಷೆ ಆಧಾರಿತ ಮಾಹಿತಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಸ್ಒಎಸ್ ವೈಶಿಷ್ಟ್ಯವನ್ನು ಸಹ ಒದಗಿಸುತ್ತದೆ. ಈ ವೈಶಿಷ್ಟ್ಯಗಳು ಒಟ್ಟಾಗಿ, ಅನುಕೂಲತೆ, ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತವೆ, ಮುಂಬೈನಾದ್ಯಂತ ಸಾರ್ವಜನಿಕ ಸಾರಿಗೆ ಅನುಭವವನ್ನು ಪರಿವರ್ತಿಸುತ್ತವೆ.
ಪ್ರಧಾನಮಂತ್ರಿ ಮಹಾರಾಷ್ಟ್ರದಲ್ಲಿ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆಯ ಪ್ರವರ್ತಕ ಉಪಕ್ರಮವಾದ ಅಲ್ಪಾವಧಿಯ ಉದ್ಯೋಗಾವಕಾಶ ಕಾರ್ಯಕ್ರಮ(STEP)ವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು 400 ಸರ್ಕಾರಿ ಐಟಿಐಗಳು ಮತ್ತು 150 ಸರ್ಕಾರಿ ತಾಂತ್ರಿಕ ಪ್ರೌಢಶಾಲೆಗಳಲ್ಲಿ ಜಾರಿಗೆ ತರಲಾಗುವುದು, ಇದು ಉದ್ಯೋಗಾವಕಾಶ ಹೆಚ್ಚಿಸಲು ಕೈಗಾರಿಕಾ ಅವಶ್ಯಕತೆಗಳೊಂದಿಗೆ ಕೌಶಲ್ಯ ಅಭಿವೃದ್ಧಿಯನ್ನು ಜೋಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. STEP ಮಹಿಳೆಯರಿಗೆ 364 ವಿಶೇಷ ಬ್ಯಾಚ್‌ಗಳು ಮತ್ತು ಕೃತಕ ಬುದ್ಧಿಮತ್ತೆ(ಎ.ಐ.), ಇಂಟರ್ನೆಟ್ ಆಫ್ ಥಿಂಗ್ಸ್ (ಐ.ಒ.ಟಿ), ಎಲೆಕ್ಟ್ರಿಕ್ ವೆಹಿಕಲ್ಸ್ (ಇ.ವಿ.), ಸೌರ ಮತ್ತು ಸಂಯೋಜಕ ಉತ್ಪಾದನೆ ಮುಂತಾದ ಉದಯೋನ್ಮುಖ ತಂತ್ರಜ್ಞಾನ ಕೋರ್ಸ್‌ಗಳಲ್ಲಿ 408 ಬ್ಯಾಚ್‌ಗಳು ಸೇರಿದಂತೆ 2,500 ಹೊಸ ತರಬೇತಿ ಬ್ಯಾಚ್‌ಗಳನ್ನು ಸ್ಥಾಪಿಸಲಿದೆ.
*****
(Release ID: 2176662)
Visitor Counter : 9
Read this release in:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam