ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಅನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


'ಇಂಡಿಯಾ ಮೊಬೈಲ್ ಕಾಂಗ್ರೆಸ್' ಮತ್ತು ಟೆಲಿಕಾಂ ವಲಯದಲ್ಲಿ ದೇಶದ ಯಶಸ್ಸು, 'ಆತ್ಮನಿರ್ಭರ ಭಾರತ' ದೃಷ್ಟಿಕೋನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

ಒಂದು ಕಾಲದಲ್ಲಿ 2G ಗಾಗಿ ಹೆಣಗಾಡುತ್ತಿದ್ದ ದೇಶವು, ಇಂದು ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ 5G ಹೊಂದಿದೆ: ಪ್ರಧಾನಮಂತ್ರಿ

ಭಾರತವು ತನ್ನ 'ಮೇಡ್ ಇನ್ ಇಂಡಿಯಾ 4G ಸ್ಟಾಕ್' ಅನ್ನು ಬಿಡುಗಡೆ ಮಾಡಿದೆ. ಇದು ದೇಶಕ್ಕೆ ಒಂದು ಪ್ರಮುಖ ಸ್ವದೇಶಿ ಸಾಧನೆಯಾಗಿದೆ. ಇದರೊಂದಿಗೆ, ಈ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಕೇವಲ ಐದು ದೇಶಗಳ ಪಟ್ಟಿಗೆ ಭಾರತ ಸೇರಿದೆ: ಪ್ರಧಾನಮಂತ್ರಿ

ನಾವು ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ, ಎರಡನೇ ಅತಿದೊಡ್ಡ 5G ಮಾರುಕಟ್ಟೆಯನ್ನು ಹೊಂದಿದ್ದೇವೆ. ಮುನ್ನಡೆಸಲು ಬೇಕಾದ ಮಾನವಶಕ್ತಿ, ಚಲನಶೀಲತೆ ಮತ್ತು ಮನಸ್ಥಿತಿ ನಮ್ಮಲ್ಲಿದೆ: ಪ್ರಧಾನಮಂತ್ರಿ

ಭಾರತದಲ್ಲಿ ಡಿಜಿಟಲ್ ಸಂಪರ್ಕವು ಇನ್ನು ಮುಂದೆ ವಿಶೇಷ ಸೌಲಭ್ಯ ಅಥವಾ ಐಷಾರಾಮಿತನವಲ್ಲ, ಅದು ಈಗ ಪ್ರತಿಯೊಬ್ಬ ಭಾರತೀಯನ ಜೀವನದ ಅವಿಭಾಜ್ಯ ಅಂಗವಾಗಿದೆ: ಪ್ರಧಾನಮಂತ್ರಿ

ಭಾರತದಲ್ಲಿ ಹೂಡಿಕೆ ಮಾಡಲು, ನಾವೀನ್ಯತೆ ತೋರಲು ಮತ್ತು ತಯಾರಿಸಲು ಮೇಕ್ ಇನ್ ಇಂಡಿಯಾ  ಅತ್ಯುತ್ತಮ ಸಮಯ!: ಪ್ರಧಾನಮಂತ್ರಿ

​​​​​​​ಮೊಬೈಲ್, ಟೆಲಿಕಾಂ, ಎಲೆಕ್ಟ್ರಾನಿಕ್ಸ್ ಮತ್ತು ಸಂಪೂರ್ಣ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ, ಜಗತ್ತಿನಲ್ಲಿ ಎಲ್ಲೆಲ್ಲಿ

ಪ್ರಕಟಣಾ ದಿನಾಂಕ: 08 OCT 2025 12:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಯಶೋಭೂಮಿಯಲ್ಲಿ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ಸಮಾವೇಶವಾದ 'ಇಂಡಿಯಾ ಮೊಬೈಲ್ ಕಾಂಗ್ರೆಸ್' (IMC) 2025ರ 9ನೇ ಆವೃತ್ತಿಯನ್ನು ಉದ್ಘಾಟಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ನ ಈ ವಿಶೇಷ ಆವೃತ್ತಿಗೆ ಎಲ್ಲಾ ಗಣ್ಯರನ್ನು ಸ್ವಾಗತಿಸಿದ ಶ್ರೀ ಮೋದಿಯವರು, ಹಣಕಾಸು ವಂಚನೆ ತಡೆಗಟ್ಟುವಿಕೆ, ಕ್ವಾಂಟಮ್ ಸಂವಹನ, 6G, ಆಪ್ಟಿಕಲ್ ಸಂವಹನ ಮತ್ತು ಸೆಮಿಕಂಡಕ್ಟರ್ಗಳಂತಹ ನಿರ್ಣಾಯಕ ವಿಷಯಗಳ ಕುರಿತು ಹಲವಾರು ಸ್ಟಾರ್ಟ್ಅಪ್ಗಳು ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಿವೆ ಎಂದು ತಿಳಿಸಿದರು. ಇಂತಹ ಪ್ರಮುಖ ವಿಷಯಗಳ ಕುರಿತಾದ ಪ್ರಸ್ತುತಿಗಳನ್ನು ನೋಡುವುದು, ಭಾರತದ ತಾಂತ್ರಿಕ ಭವಿಷ್ಯವು ಸಮರ್ಥ ಕೈಗಳಲ್ಲಿದೆ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಅವರು ಈ ಸಮಾವೇಶಕ್ಕೆ ಮತ್ತು ಎಲ್ಲಾ ಹೊಸ ಉಪಕ್ರಮಗಳಿಗೆ ತಮ್ಮ ಶುಭಾಶಯಗಳನ್ನು ಕೋರಿದರು.

ಇಂಡಿಯಾ ಮೊಬೈಲ್ ಕಾಂಗ್ರೆಸ್ ಕೇವಲ ಮೊಬೈಲ್ ಮತ್ತು ಟೆಲಿಕಾಂ ಕ್ಷೇತ್ರವನ್ನು ಮೀರಿ ಬೆಳೆದಿದ್ದು, ಕೆಲವೇ ವರ್ಷಗಳಲ್ಲಿ ಏಷ್ಯಾದ ಅತಿದೊಡ್ಡ ಡಿಜಿಟಲ್ ತಂತ್ರಜ್ಞಾನ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಮೋದಿಯವರು ಒತ್ತಿ ಹೇಳಿದರು. ಈ ಯಶೋಗಾಥೆ ಹೇಗೆ ಮತ್ತು ಯಾರಿಂದ ಬರೆಯಲ್ಪಟ್ಟಿತು ಎಂದು ಪ್ರಶ್ನಿಸಿದ ಅವರು, ಭಾರತದ ತಂತ್ರಜ್ಞಾನ-ಸ್ನೇಹಿ ಮನಸ್ಥಿತಿ, ಯುವಕರ ನೇತೃತ್ವ ಮತ್ತು ದೇಶದ ಪ್ರತಿಭೆಗಳಿಂದ ಇದು ರೂಪುಗೊಂಡಿದೆ ಎಂದು ದೃಢಪಡಿಸಿದರು.

ನಾವೀನ್ಯಕಾರರು ಮತ್ತು ಸ್ಟಾರ್ಟ್ಅಪ್ ಗಳು ಈ ಬೆಳವಣಿಗೆಗೆ ಚಾಲನೆ ನೀಡಿವೆ, ಮತ್ತು ದೇಶದ ಸಾಮರ್ಥ್ಯದ ಜೊತೆ ದೃಢವಾಗಿ ನಿಲ್ಲುವ ಸರ್ಕಾರದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಸ್ಟಾರ್ಟ್ಅಪ್ ಗಳಿಗೆ ಹಣಕಾಸು ನೆರವು ನೀಡಲಾಗುತ್ತಿರುವ 'ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿ' ಮತ್ತು 'ಡಿಜಿಟಲ್ ಕಮ್ಯುನಿಕೇಷನ್ಸ್ ಇನ್ನೋವೇಶನ್ಸ್ ಸ್ಕ್ವೇರ್' ದಂತಹ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಉತ್ಪನ್ನ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ಸರ್ಕಾರವು 5G, 6G, ಸುಧಾರಿತ ಆಪ್ಟಿಕಲ್ ಸಂವಹನ ಮತ್ತು ಟೆರಾ-ಹರ್ಟ್ಜ್ನಂತಹ ತಂತ್ರಜ್ಞಾನಗಳಿಗಾಗಿ ಟೆಸ್ಟ್ ಬೆಡ್ ಗಳಿಗೆ ಹಣಕಾಸು ಒದಗಿಸುತ್ತಿದೆ ಎಂದು ಅವರು ಹೇಳಿದರು. ಸ್ಟಾರ್ಟ್ಅಪ್ ಗಳು ಮತ್ತು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನಡುವಿನ ಸಹಭಾಗಿತ್ವಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಮತ್ತು ಸರ್ಕಾರದ ಬೆಂಬಲದೊಂದಿಗೆ, ಭಾರತೀಯ ಉದ್ಯಮ, ಸ್ಟಾರ್ಟ್ಅಪ್ ಗಳು ಮತ್ತು ಶೈಕ್ಷಣಿಕ ವಲಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸಹಕರಿಸುತ್ತಿವೆ ಎಂದು ಅವರು ತಿಳಿಸಿದರು. ಭಾರತವು ಎಲ್ಲಾ ಆಯಾಮಗಳಲ್ಲಿ ಮುನ್ನಡೆಯುತ್ತಿದೆ—ಸ್ವದೇಶಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಸ್ತರಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸುವುದು ಮತ್ತು ಜಾಗತಿಕ ಮಾನದಂಡಗಳಿಗೆ ಕೊಡುಗೆ ನೀಡುವುದು. ಈ ಪ್ರಯತ್ನಗಳು ಭಾರತವನ್ನು ಜಾಗತಿಕ ರಂಗದಲ್ಲಿ ಒಂದು ಪರಿಣಾಮಕಾರಿ ವೇದಿಕೆಯಾಗಿ ನಿಲ್ಲಿಸಿವೆ ಎಂದು ಅವರು ಹೇಳಿದರು.

ಇಂಡಿಯಾ ಮೊಬೈಲ್ ಕಾಂಗ್ರೆಸ್' ಮತ್ತು ಟೆಲಿಕಾಂ ವಲಯದಲ್ಲಿನ ಭಾರತದ ಯಶಸ್ಸು, 'ಆತ್ಮನಿರ್ಭರ ಭಾರತ' ದೃಷ್ಟಿಕೋನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ," ಎಂದು ಪ್ರಧಾನಮಂತ್ರಿಯವರು ಉದ್ಗರಿಸಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ದಶಕಗಳೇ ಹಿಡಿಯುತ್ತಿದ್ದ ವಿಳಂಬವನ್ನು ಉಲ್ಲೇಖಿಸಿ, ತಂತ್ರಜ್ಞಾನದ ಮುಂದುವರಿದ ಉತ್ಪನ್ನಗಳನ್ನು ತಯಾರಿಸುವ ಭಾರತದ ಸಾಮರ್ಥ್ಯವನ್ನು ಅನುಮಾನಿಸುತ್ತಿದ್ದ ಸಂಶಯವಾದಿಗಳು 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯನ್ನು ಹೇಗೆ ಗೇಲಿ ಮಾಡುತ್ತಿದ್ದರು ಎಂಬುದನ್ನು ಅವರು ಸ್ಮರಿಸಿದರು. ಆದರೆ, ರಾಷ್ಟ್ರವು ಇದಕ್ಕೆ ನಿರ್ಣಾಯಕವಾಗಿ ಉತ್ತರ ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ಒಂದು ಕಾಲದಲ್ಲಿ 2G ಗಾಗಿಯೇ ಹೆಣಗಾಡುತ್ತಿದ್ದ ದೇಶವು, ಇಂದು ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ 5G ವ್ಯಾಪ್ತಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. 2014 ರಿಂದೀಚೆಗೆ ಎಲೆಕ್ಟ್ರಾನಿಕ್ಸ್  ಉತ್ಪಾದನೆಯು ಆರು ಪಟ್ಟು, ಮೊಬೈಲ್ ಫೋನ್ ತಯಾರಿಕೆಯು ಇಪ್ಪತ್ತೆಂಟು ಪಟ್ಟು ಮತ್ತು ಅದರ ರಫ್ತು ನೂರಾ ಇಪ್ಪತ್ತೇಳು ಪಟ್ಟು ಹೆಚ್ಚಾಗಿದೆ. ಕಳೆದ ದಶಕದಲ್ಲಿ, ಮೊಬೈಲ್ ಫೋನ್ ತಯಾರಿಕಾ ವಲಯವು ಲಕ್ಷಾಂತರ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಪ್ರಮುಖ ಸ್ಮಾರ್ಟ್ಫೋನ್ ಕಂಪನಿಯೊಂದರ ಇತ್ತೀಚಿನ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಕೇವಲ ಆ ಒಂದೇ ಕಂಪನಿಯ ಪೂರೈಕೆ ಸರಪಳಿಯಲ್ಲಿ 45 ಭಾರತೀಯ ಸಂಸ್ಥೆಗಳು ಭಾಗಿಯಾಗಿದ್ದು, ಸುಮಾರು 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ತಿಳಿಸಿದರು. ದೇಶಾದ್ಯಂತ ಹಲವಾರು ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ನಡೆಸುತ್ತಿದ್ದು, ಪರೋಕ್ಷ ಉದ್ಯೋಗಾವಕಾಶಗಳನ್ನು ಸೇರಿಸಿದಾಗ, ಈ ಸಂಖ್ಯೆ ಇನ್ನೂ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದರು.

"ಭಾರತವು ಇತ್ತೀಚೆಗೆ ತನ್ನ 'ಮೇಡ್-ಇನ್-ಇಂಡಿಯಾ 4G ಸ್ಟಾಕ್' ಅನ್ನು ಬಿಡುಗಡೆ ಮಾಡಿದ್ದು, ಇದು ಒಂದು ಪ್ರಮುಖ ಸ್ವದೇಶಿ ಸಾಧನೆಯಾಗಿದೆ. ಇದರೊಂದಿಗೆ, ಈ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಐದು ದೇಶಗಳ ಪಟ್ಟಿಗೆ ಭಾರತ ಈಗ ಸೇರ್ಪಡೆಯಾಗಿದೆ," ಎಂದು ಶ್ರೀ ಮೋದಿ ಹೇಳಿದರು. ಇದನ್ನು ಡಿಜಿಟಲ್ ಸ್ವಾವಲಂಬನೆ ಮತ್ತು ತಾಂತ್ರಿಕ ಸ್ವಾತಂತ್ರ್ಯದತ್ತ ಒಂದು ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದರು. ಈ ಸ್ವದೇಶಿ 4G ಮತ್ತು 5G ಸ್ಟಾಕ್ ಮೂಲಕ, ಭಾರತವು ತನ್ನ ನಾಗರಿಕರಿಗೆ ಅಡೆತಡೆಯಿಲ್ಲದ ಸಂಪರ್ಕವನ್ನು ಖಚಿತಪಡಿಸುವುದಲ್ಲದೆ, ಅತಿ ವೇಗದ ಇಂಟರ್ನೆಟ್ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಸಹ ಒದಗಿಸುತ್ತದೆ ಎಂದು ಅವರು ತಿಳಿಸಿದರು.

4G ಸ್ಟಾಕ್ ಬಿಡುಗಡೆಯಾದ ದಿನದಂದೇ, ದೇಶಾದ್ಯಂತ ಏಕಕಾಲದಲ್ಲಿ ಸುಮಾರು ಒಂದು ಲಕ್ಷ 4G ಟವರ್ ಗಳನ್ನು ಸಕ್ರಿಯಗೊಳಿಸಲಾಯಿತು, ಇದರಿಂದಾಗಿ ಎರಡು ಕೋಟಿಗೂ ಹೆಚ್ಚು ಜನರು ಭಾರತದ ಡಿಜಿಟಲ್ ಆಂದೋಲನದ ಭಾಗವಾಗಲು ಸಾಧ್ಯವಾಯಿತು ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು. ಈ ಪ್ರದೇಶಗಳಲ್ಲಿ ಹಲವು ದುರ್ಗಮವಾಗಿದ್ದವು ಮತ್ತು ಈ ಹಿಂದೆ ಡಿಜಿಟಲ್ ಸಂಪರ್ಕದಲ್ಲಿ ಹಿಂದುಳಿದಿದ್ದವು, ಆದರೆ ಈಗ ಅಂತಹ ಎಲ್ಲಾ ಪ್ರದೇಶಗಳಿಗೂ ಇಂಟರ್ನೆಟ್ ಸೌಲಭ್ಯ ತಲುಪಿದೆ ಎಂದು ಅವರು ಒತ್ತಿ ಹೇಳಿದರು.

ಭಾರತದ 'ಮೇಡ್-ಇನ್-ಇಂಡಿಯಾ 4G ಸ್ಟಾಕ್'ನ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಅದರ ರಫ್ತು-ಸಿದ್ಧತೆ ಎಂದು ಶ್ರೀ ಮೋದಿಯವರು ಪ್ರಸ್ತಾಪಿಸಿದರು. ಈ ಸ್ವದೇಶಿ ಸ್ಟಾಕ್ ಭಾರತದ ವ್ಯಾಪಾರ ವಿಸ್ತರಣೆಗೆ ಒಂದು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು 'ಇಂಡಿಯಾ 6G ವಿಷನ್ 2030' ಗುರಿಯನ್ನು ಸಾಧಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ಕಳೆದ ದಶಕದಲ್ಲಿ ಭಾರತದ ತಾಂತ್ರಿಕ ಕ್ರಾಂತಿಯು ವೇಗವಾಗಿ ಮುಂದುವರೆದಿದೆ ಮತ್ತು ಈ ವೇಗ ಹಾಗೂ ವ್ಯಾಪ್ತಿಗೆ ಸರಿಸಾಟಿಯಾಗಿ, ಒಂದು ಬಲಿಷ್ಠ ಕಾನೂನು ಮತ್ತು ಆಧುನಿಕ ನೀತಿಯ ಚೌಕಟ್ಟಿನ ಅವಶ್ಯಕತೆ ಇತ್ತು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಸರ್ಕಾರವು ಹೊಸ 'ದೂರಸಂಪರ್ಕ ಕಾಯ್ದೆ' (Telecommunications Act) ಯನ್ನು ಜಾರಿಗೆ ತಂದಿರುವುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ಕಾಯ್ದೆಯು, ಇಂದಿನ ಅನೇಕ ನಾಗರಿಕರ ಜನನಕ್ಕೂ ಹಿಂದಿನಿಂದಲೂ ಇದ್ದ 'ಭಾರತೀಯ ಟೆಲಿಗ್ರಾಫ್ ಕಾಯ್ದೆ' ಮತ್ತು 'ಭಾರತೀಯ ವೈರ್ ಲೆಸ್ ಟೆಲಿಗ್ರಾಫಿ ಕಾಯ್ದೆ'ಗಳಂತಹ ಹಳೆಯ ಕಾನೂನುಗಳನ್ನು ಬದಲಿಸಿದೆ. 21ನೇ ಶತಮಾನದ ದೃಷ್ಟಿಕೋನಗಳಿಗೆ ಅನುಗುಣವಾಗಿ ಹೊಸ ಚೌಕಟ್ಟನ್ನು ಸ್ಥಾಪಿಸುವ ಅಗತ್ಯವಿತ್ತು ಮತ್ತು ಸರ್ಕಾರ ಅದನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಶ್ರೀ ಮೋದಿ ಹೇಳಿದರು. ಈ ಹೊಸ ಕಾನೂನು ನಿಯಂತ್ರಕನಾಗಿ ಅಲ್ಲ, ಬದಲಿಗೆ ಅನುಕೂಲಕಾರನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಬಣ್ಣಿಸಿದರು. ಇದರಿಂದಾಗಿ ಅನುಮೋದನೆಗಳು ಸುಲಭವಾಗಿದ್ದು, 'ರೈಟ್-ಆಫ್-ವೇ' ಅನುಮತಿಗಳು ಈಗ ಹೆಚ್ಚು ವೇಗವಾಗಿ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ, ಫೈಬರ್ ಮತ್ತು ಟವರ್ ನೆಟ್ ವರ್ಕ್ ವಿಸ್ತರಣೆಯು ವೇಗ ಪಡೆದುಕೊಳ್ಳುತ್ತಿದೆ, ವ್ಯಾಪಾರ ಮಾಡುವ ಸುಲಭತೆಯನ್ನು (ease of doing business) ಹೆಚ್ಚಿಸುತ್ತಿದೆ, ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಉದ್ಯಮಗಳು ದೀರ್ಘಾವಧಿಯ ಯೋಜನೆಗಳನ್ನು ರೂಪಿಸಲು ಅನುವು ಮಾಡಿಕೊಡುತ್ತಿದೆ ಎಂದು ಶ್ರೀ ಮೋದಿಯವರು ತಿಳಿಸಿದರು.

ದೇಶದಲ್ಲಿ ಸೈಬರ್ ಭದ್ರತೆಗೆ ಅಷ್ಟೇ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸೈಬರ್ ವಂಚನೆಗಳ ವಿರುದ್ಧದ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ, ಜವಾಬ್ದಾರಿಯನ್ನು ಹೆಚ್ಚಿಸಲಾಗಿದೆ ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆಗಳನ್ನು ಸುಧಾರಿಸಲಾಗಿದೆ ಎಂದು ಅವರು ಹೇಳಿದರು. ಈ ಕ್ರಮಗಳಿಂದ ಉದ್ಯಮ ಮತ್ತು ಗ್ರಾಹಕರಿಬ್ಬರೂ ಗಣನೀಯವಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ವಿಶ್ವವು ಭಾರತದ ಸಾಮರ್ಥ್ಯವನ್ನು ಹೆಚ್ಚೆಚ್ಚು ಗುರುತಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ ಮತ್ತು ಎರಡನೇ ಅತಿದೊಡ್ಡ 5G ಮಾರುಕಟ್ಟೆಯ ಸ್ಥಾನವನ್ನು ಹೊಂದಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಮಾರುಕಟ್ಟೆಯ ಶಕ್ತಿಯ ಜೊತೆಗೆ, ಭಾರತವು ಮಾನವಶಕ್ತಿ, ಚಲನಶೀಲತೆ ಮತ್ತು ಪ್ರಗತಿಪರ ಮನಸ್ಥಿತಿಯನ್ನು ಹೊಂದಿದೆ. ಮಾನವಶಕ್ತಿಯ ವಿಷಯಕ್ಕೆ ಬಂದರೆ, ಭಾರತವು ಪ್ರಮಾಣ ಮತ್ತು ಕೌಶಲ್ಯ ಎರಡನ್ನೂ ಪ್ರದರ್ಶಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದ್ದು, ಈ ಪೀಳಿಗೆಗೆ ಬೃಹತ್ ಪ್ರಮಾಣದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇಂದು ಭಾರತವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡೆವಲಪರ್ಗಳ ಸಮುದಾಯವನ್ನು ಹೊಂದಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಒಂದು GB ವೈರ್ ಲೆಸ್ ಡೇಟಾದ ಬೆಲೆಯು ಈಗ ಒಂದು ಕಪ್ ಚಹಾದ ಬೆಲೆಗಿಂತಲೂ ಕಡಿಮೆಯಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ಪ್ರತಿ ಬಳಕೆದಾರರ ಡೇಟಾ ಬಳಕೆಯಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು, ಡಿಜಿಟಲ್ ಸಂಪರ್ಕವು ಇನ್ನು ಮುಂದೆ ವಿಶೇಷ ಸೌಲಭ್ಯ ಅಥವಾ ಐಷಾರಾಮಿತನವಲ್ಲ, ಬದಲಿಗೆ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

"ಉದ್ಯಮ ಮತ್ತು ಹೂಡಿಕೆಯನ್ನು ವಿಸ್ತರಿಸುವ ಮನಸ್ಥಿತಿಯೊಂದಿಗೆ ಭಾರತವು ಮುನ್ನಡೆಯುತ್ತಿದೆ," ಎಂದು ಹೇಳಿದ ಶ್ರೀ ಮೋದಿಯವರು, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ, ಸರ್ಕಾರದ ಸ್ವಾಗತಾರ್ಹ ಧೋರಣೆ ಮತ್ತು 'ವ್ಯಾಪಾರ ಮಾಡುವ ಸುಲಭತೆ'ಯ ನೀತಿಗಳು ಭಾರತವನ್ನು ಹೂಡಿಕೆದಾರ-ಸ್ನೇಹಿ ತಾಣವನ್ನಾಗಿ ಮಾಡಿವೆ ಎಂದು ಒತ್ತಿ ಹೇಳಿದರು. ಸರ್ಕಾರದ 'ಡಿಜಿಟಲ್-ಫಸ್ಟ್' ಮನಸ್ಥಿತಿಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಯಶಸ್ಸೇ ಸಾಕ್ಷಿ ಎಂದು ಅವರು ಉಲ್ಲೇಖಿಸಿದರು. ಪೂರ್ಣ ವಿಶ್ವಾಸದಿಂದ ಪ್ರಧಾನಮಂತ್ರಿಯವರು, “ಭಾರತದಲ್ಲಿ ಹೂಡಿಕೆ ಮಾಡಲು, ನಾವೀನ್ಯತೆ ತೋರಲು ಮತ್ತು ಉತ್ಪಾದಿಸಲು, ಮೇಕ್ ಇನ್ ಇಂಡಿಯಾ ಇದು ಅತ್ಯುತ್ತಮ ಸಮಯ!” ಎಂದು ಘೋಷಿಸಿದರು. ತಯಾರಿಕೆಯಿಂದ ಹಿಡಿದು ಸೆಮಿಕಂಡಕ್ಟರ್ ಗಳವರೆಗೆ, ಮೊಬೈಲ್ ಗಳಿಂದ ಎಲೆಕ್ಟ್ರಾನಿಕ್ಸ್ ವರೆಗೆ ಮತ್ತು ಎಲ್ಲಾ ವಲಯಗಳ ಸ್ಟಾರ್ಟ್ಅಪ್ ಗಳಲ್ಲಿ, ಭಾರತವು ಸಾಧ್ಯತೆಗಳು ಮತ್ತು ಶಕ್ತಿಯಿಂದ ತುಂಬಿತುಳುಕುತ್ತಿದೆ ಎಂದು ಅವರು ದೃಢಪಡಿಸಿದರು.

ಕೆಂಪು ಕೋಟೆಯಿಂದ ಇತ್ತೀಚೆಗೆ ತಾವು ನೀಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಪ್ರಸಕ್ತ ವರ್ಷವನ್ನು ಪ್ರಮುಖ ಸುಧಾರಣೆಗಳು ಮತ್ತು ಪರಿವರ್ತನಾಶೀಲ ಬದಲಾವಣೆಗಳ ವರ್ಷವೆಂದು ಘೋಷಿಸಿದ್ದನ್ನು ನೆನಪಿಸಿಕೊಂಡರು. ಸುಧಾರಣೆಗಳ ವೇಗವು ಹೆಚ್ಚಾಗುತ್ತಿದ್ದು, ಇದರಿಂದಾಗಿ ಉದ್ಯಮ ಮತ್ತು ನಾವೀನ್ಯಕಾರರ ಜವಾಬ್ದಾರಿಯೂ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ತಮ್ಮ ವೇಗ ಮತ್ತು ಅಪಾಯಗಳನ್ನು ಎದುರಿಸುವ ಸಾಮರ್ಥ್ಯದ ಮೂಲಕ ಹೊಸ ದಾರಿಗಳನ್ನು ಮತ್ತು ಅವಕಾಶಗಳನ್ನು ಸೃಷ್ಟಿಸುತ್ತಿರುವ ಸ್ಟಾರ್ಟ್ಅಪ್ ಗಳು ಹಾಗೂ ಯುವ ನಾವೀನ್ಯಕಾರರ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು. ಈ ವರ್ಷ, 'ಇಂಡಿಯಾ ಮೊಬೈಲ್ ಕಾಂಗ್ರೆಸ್' 500ಕ್ಕೂ ಹೆಚ್ಚು ಸ್ಟಾರ್ಟ್ಅಪ್ ಗಳನ್ನು ಆಹ್ವಾನಿಸಿ, ಹೂಡಿಕೆದಾರರು ಮತ್ತು ಜಾಗತಿಕ ಮಾರ್ಗದರ್ಶಕರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಅಮೂಲ್ಯವಾದ ಅವಕಾಶಗಳನ್ನು ಒದಗಿಸಿರುವುದಕ್ಕೆ ಶ್ರೀ ಮೋದಿಯವರು ಸಂತಸ ವ್ಯಕ್ತಪಡಿಸಿದರು.

ಈ ವಲಯದ ವಿಸ್ತರಣೆಯಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಪ್ರಮುಖ ಕಂಪನಿಗಳು  ಮಹತ್ವದ ಪಾತ್ರವನ್ನು ವಹಿಸುತ್ತಿವೆ ಎಂದು ಪುನರುಚ್ಚರಿಸಿದ ಶ್ರೀ ಮೋದಿಯವರು, ಈ ಕಂಪನಿಗಳು ಬಲಿಷ್ಠ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳೊಂದಿಗೆ ದೇಶದ ಆರ್ಥಿಕತೆಯನ್ನು ಮುನ್ನಡೆಸಲು ಸ್ಥಿರತೆ, ವ್ಯಾಪ್ತಿ ಮತ್ತು ದಿಕ್ಕನ್ನು ಒದಗಿಸುತ್ತವೆ ಎಂದು ಹೇಳಿದರು. "ಸ್ಟಾರ್ಟ್ಅಪ್ ಗಳ ವೇಗ ಮತ್ತು ಸ್ಥಾಪಿತ ಕಂಪನಿಗಳ ವ್ಯಾಪ್ತಿ ಒಟ್ಟಾಗಿ ಕೆಲಸ ಮಾಡಿದಾಗ ಭಾರತವು ಸಶಕ್ತಗೊಳ್ಳುತ್ತದೆ" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಉದ್ಯಮದೊಳಗಿನ ಹಲವಾರು ನಿರ್ಣಾಯಕ ಕ್ಷೇತ್ರಗಳಿಗೆ ಯುವ ಸ್ಟಾರ್ಟ್ಅಪ್ ನಾವೀನ್ಯಕಾರರು, ಶೈಕ್ಷಣಿಕ ವಲಯ, ಸಂಶೋಧನಾ ಸಮುದಾಯ ಮತ್ತು ನೀತಿ ನಿರೂಪಕರಿಂದ ಸಹಯೋಗದ ಪ್ರಯತ್ನಗಳು ಬೇಕಾಗುತ್ತವೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, 'ಇಂಡಿಯಾ ಮೊಬೈಲ್ ಕಾಂಗ್ರೆಸ್' ನಂತಹ ವೇದಿಕೆಗಳು ಇಂತಹ ಸಂವಾದಕ್ಕೆ ಪರಿಣಾಮಕಾರಿ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಮೊಬೈಲ್, ಟೆಲಿಕಾಂ, ಎಲೆಕ್ಟ್ರಾನಿಕ್ಸ್ ಮತ್ತು ವಿಶಾಲ ತಂತ್ರಜ್ಞಾನ ವಲಯದಲ್ಲಿನ ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳ ಬಗ್ಗೆ ಗಮನ ಹರಿಸುವಂತೆ ಅವರು ಒತ್ತಾಯಿಸಿದರು. "ಎಲ್ಲೆಲ್ಲಿ ಜಾಗತಿಕ ಅಡಚಣೆಗಳಿವೆಯೋ, ಅಲ್ಲೆಲ್ಲಾ ಭಾರತವು ಪರಿಹಾರಗಳನ್ನು ನೀಡುವ ಅವಕಾಶವನ್ನು ಹೊಂದಿದೆ," ಎಂದು ಅವರು ಹೇಳಿದರು. ಶ್ರೀ ಮೋದಿಯವರು ಸೆಮಿಕಂಡಕ್ಟರ್ ತಯಾರಿಕೆಯ ಉದಾಹರಣೆಯನ್ನು ನೀಡಿದರು. ಹಿಂದೆ ಈ ಸಾಮರ್ಥ್ಯವು ಕೆಲವೇ ದೇಶಗಳಲ್ಲಿ ಕೇಂದ್ರೀಕೃತವಾಗಿತ್ತು, ಮತ್ತು ಜಗತ್ತು ಈಗ ವೈವಿಧ್ಯೀಕರಣವನ್ನು ಬಯಸುತ್ತಿದೆ. ಭಾರತವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ದೇಶಾದ್ಯಂತ ಹತ್ತು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ದೃಢಪಡಿಸಿದರು.

ಎಲೆಕ್ಟ್ರಾನಿಕ್ಸ್ ತಯಾರಿಕಾ ವಲಯದಲ್ಲಿ, ಜಾಗತಿಕ ಕಂಪನಿಗಳು ವ್ಯಾಪ್ತಿ (scale) ಮತ್ತು ವಿಶ್ವಾಸಾರ್ಹತೆ (reliability) ಎರಡನ್ನೂ ನೀಡಬಲ್ಲ ನಂಬಿಕಸ್ಥ ಪಾಲುದಾರರನ್ನು ಹುಡುಕುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಟೆಲಿಕಾಂ ನೆಟ್ವರ್ಕ್ ಉಪಕರಣಗಳ ವಿನ್ಯಾಸ ಮತ್ತು ತಯಾರಿಕೆಗಾಗಿ ಜಗತ್ತಿಗೆ ವಿಶ್ವಾಸಾರ್ಹ ಪಾಲುದಾರರ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು ಮತ್ತು "ಭಾರತೀಯ ಕಂಪನಿಗಳು ಏಕೆ ವಿಶ್ವಾಸಾರ್ಹ ಜಾಗತಿಕ ಪೂರೈಕೆದಾರರು ಮತ್ತು ವಿನ್ಯಾಸ ಪಾಲುದಾರರಾಗಲು ಸಾಧ್ಯವಿಲ್ಲ?" ಎಂಬ ಸ್ಪೂರ್ತಿದಾಯಕ ಪ್ರಶ್ನೆಯನ್ನು ಮುಂದಿಟ್ಟರು.

ಮೊಬೈಲ್ ತಯಾರಿಕೆಯಲ್ಲಿ, ಚಿಪ್ ಸೆಟ್ ಗಳು, ಬ್ಯಾಟರಿಗಳು, ಡಿಸ್ಪ್ಲೇಗಳು ಮತ್ತು ಸೆನ್ಸರ್ಗಳಂತಹ ಬಿಡಿಭಾಗಗಳನ್ನು ದೇಶದೊಳಗೇ ಹೆಚ್ಚೆಚ್ಚು ಉತ್ಪಾದಿಸಬೇಕು ಎಂದು ಶ್ರೀ ಮೋದಿಯವರು ಹೇಳಿದರು. ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಡೇಟಾವನ್ನು ಉತ್ಪಾದಿಸುತ್ತಿದ್ದು, ಇದರಿಂದಾಗಿ ಸಂಗ್ರಹಣೆ, ಭದ್ರತೆ  ಮತ್ತು ಸಾರ್ವಭೌಮತ್ವ ದಂತಹ ವಿಷಯಗಳು ಅತ್ಯಂತ ನಿರ್ಣಾಯಕವಾಗಿವೆ ಎಂದು ಅವರು ತಿಳಿಸಿದರು. ಡೇಟಾ ಸೆಂಟರ್ಗಳು ಮತ್ತು ಕ್ಲೌಡ್ ಮೂಲಸೌಕರ್ಯಗಳ ಕೆಲಸವನ್ನು ಮುಂದುವರಿಸುವ ಮೂಲಕ, ಭಾರತವು 'ಜಾಗತಿಕ ಡೇಟಾ ಹಬ್' ಆಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ದೃಢಪಡಿಸಿದರು. ಮುಂಬರುವ ಅಧಿವೇಶನಗಳು ಇದೇ ದೃಷ್ಟಿಕೋನ ಮತ್ತು ಗಮನದೊಂದಿಗೆ ಮುಂದುವರೆಯಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾ ಪ್ರಧಾನಮಂತ್ರಿಯವರು ತಮ್ಮ ಮಾತುಗಳನ್ನು ಮುಗಿಸಿದರು. 'ಇಂಡಿಯಾ ಮೊಬೈಲ್ ಕಾಂಗ್ರೆಸ್'ನ ಸಂಪೂರ್ಣ ಕಾರ್ಯಕ್ರಮಕ್ಕಾಗಿ ಅವರು ಮತ್ತೊಮ್ಮೆ ಎಲ್ಲಾ ಭಾಗವಹಿಸುವವರಿಗೆ ತಮ್ಮ ಶುಭಾಶಯಗಳನ್ನು ಕೋರಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಡಾ. ಚಂದ್ರ ಶೇಖರ್ ಪೆಮ್ಮಸಾನಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಜಂಟಿಯಾಗಿ ಆಯೋಜಿಸಿರುವ 'ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025', ಅಕ್ಟೋಬರ್ 8 ರಿಂದ 11 ರವರೆಗೆ ನಡೆಯುತ್ತಿದೆ. "ಪರಿವರ್ತನೆಗಾಗಿ ನಾವೀನ್ಯತೆ" (Innovate to Transform) ಎಂಬ ವಿಷಯದಡಿ ನಡೆಯುವ ಈ ಸಮಾವೇಶವು, ಡಿಜಿಟಲ್ ಪರಿವರ್ತನೆ ಮತ್ತು ಸಾಮಾಜಿಕ ಪ್ರಗತಿಗಾಗಿ ನಾವೀನ್ಯತೆಯನ್ನು ಬಳಸಿಕೊಳ್ಳುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

IMC 2025, ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಇತ್ತೀಚಿನ ಪ್ರಗತಿಗಳನ್ನು ಪ್ರದರ್ಶಿಸಲಿದ್ದು, ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮ ತಜ್ಞರು ಮತ್ತು ನಾವೀನ್ಯಕಾರರನ್ನು ಒಂದೆಡೆ ಸೇರಿಸಲಿದೆ. ಈ ಕಾರ್ಯಕ್ರಮವು ಆಪ್ಟಿಕಲ್ ಸಂವಹನ, ಟೆಲಿಕಾಂನಲ್ಲಿ ಸೆಮಿಕಂಡಕ್ಟರ್ ಗಳು, ಕ್ವಾಂಟಮ್ ಸಂವಹನ, 6G, ಮತ್ತು ವಂಚನೆ ಅಪಾಯ ಸೂಚಕಗಳು (Fraud Risk Indicators) ಸೇರಿದಂತೆ ಪ್ರಮುಖ ವಿಷಯಗಳ ಮೇಲೆ ಗಮನಹರಿಸಲಿದೆ. ಇವು ಮುಂದಿನ ಪೀಳಿಗೆಯ ಸಂಪರ್ಕ, ಡಿಜಿಟಲ್ ಸಾರ್ವಭೌಮತ್ವ, ಸೈಬರ್ ವಂಚನೆ ತಡೆಗಟ್ಟುವಿಕೆ ಮತ್ತು ಜಾಗತಿಕ ತಂತ್ರಜ್ಞಾನ ನಾಯಕತ್ವದಲ್ಲಿ ಭಾರತದ ವ್ಯೂಹಾತ್ಮಕ ಆದ್ಯತೆಗಳನ್ನು ತೋರಿಸುತ್ತವೆ.

ಈ ಸಮಾವೇಶದಲ್ಲಿ 150ಕ್ಕೂ ಹೆಚ್ಚು ದೇಶಗಳಿಂದ 1.5 ಲಕ್ಷಕ್ಕೂ ಹೆಚ್ಚು ಸಂದರ್ಶಕರು, 7,000ಕ್ಕೂ ಹೆಚ್ಚು ಜಾಗತಿಕ ಪ್ರತಿನಿಧಿಗಳು ಮತ್ತು 400ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. 5G/6G, AI, ಸ್ಮಾರ್ಟ್ ಮೊಬಿಲಿಟಿ, ಸೈಬರ್ ಸೆಕ್ಯುರಿಟಿ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಹಸಿರು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ 1,600ಕ್ಕೂ ಹೆಚ್ಚು ಹೊಸ ಉಪಯೋಗಗಳನ್ನು, 100ಕ್ಕೂ ಹೆಚ್ಚು ಗೋಷ್ಠಿಗಳು ಮತ್ತು 800ಕ್ಕೂ ಹೆಚ್ಚು ಭಾಷಣಕಾರರ ಮೂಲಕ ಪ್ರದರ್ಶಿಸಲಾಗುವುದು.

IMC 2025 ಅಂತರರಾಷ್ಟ್ರೀಯ ಸಹಯೋಗಕ್ಕೂ ಒತ್ತು ನೀಡಿದ್ದು, ಜಪಾನ್, ಕೆನಡಾ, ಯುನೈಟೆಡ್ ಕಿಂಗ್ ಡಮ್, ರಷ್ಯಾ, ಐರ್ಲೆಂಡ್ ಮತ್ತು ಆಸ್ಟ್ರಿಯಾಗಳ ನಿಯೋಗಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

 

****

 


(ಪ್ರಕಟಣೆ ಐ.ಡಿ.: 2176525) ವಿಸಿಟರ್ ಕೌಂಟರ್ : 38