ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಏಷ್ಯಾದ ಪ್ರಧಾನ ದೂರಸಂಪರ್ಕ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಐ.ಎಂ.ಸಿ(IMC) 2025 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ
ಐ.ಎಂ.ಸಿ 2025 ಅಕ್ಟೋಬರ್ 8 ರಿಂದ 11 ರವರೆಗೆ ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ
ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಯಶೋಭೂಮಿಯಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರ ಸಿದ್ಧತೆಗಳನ್ನು ಪರಿಶೀಲಿಸಿದರು
"ಪರಿವರ್ತನೆಗಾಗಿ ಹೊಸತನ" (Innovate to Transform) ಎಂಬ ಥೀಮ್ ನೊಂದಿಗೆ ಐ.ಎಂ.ಸಿ 2025 ದೂರಸಂಪರ್ಕ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಮತ್ತು ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬಲಿದೆ
6G ಪರಿಸರ ವ್ಯವಸ್ಥೆ, ಸೈಬರ್ ಭದ್ರತೆ, ಉಪಗ್ರಹ ಸಂವಹನ, ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಹಾಗೂ ದೂರಸಂಪರ್ಕ ಉತ್ಪಾದನೆ ಗಮನದಲ್ಲಿರಲಿರುವ ಪ್ರಮುಖ ವಿಷಯಗಳಾಗಿವೆ
1.5 ಲಕ್ಷಕ್ಕೂ ಹೆಚ್ಚು ಸಂದರ್ಶಕರು, 7,000+ ಜಾಗತಿಕ ಪ್ರತಿನಿಧಿಗಳು ಮತ್ತು 400+ ಪ್ರದರ್ಶಕರು ನಿರೀಕ್ಷೆ
5G, AI, ಸೈಬರ್ ಭದ್ರತೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ 1,600+ ಹೊಸ ತಂತ್ರಜ್ಞಾನ ಬಳಕೆಯ ನಿದರ್ಶನಗಳು
ಪರಿವರ್ತಕ ತಂತ್ರಜ್ಞಾನಗಳ ಮೇಲೆ 100+ ಅಧಿವೇಶನಗಳು ಮತ್ತು 800+ ಭಾಷಣಕಾರರು
ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಭಾರತದ ಡಿಜಿಟಲ್ ದೃಷ್ಟಿಕೋನ ಮತ್ತು ಜಾಗತಿಕ ನಾಯಕತ್ವವನ್ನು ವೇಗಗೊಳಿಸಲಿದೆ
Posted On:
06 OCT 2025 4:05PM by PIB Bengaluru

ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು, ಅಕ್ಟೋಬರ್ 8, 2025 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐ.ಎಂ.ಸಿ) 2025ರ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಲು, ದ್ವಾರಕಾದ ಯಶೋಭೂಮಿಯಲ್ಲಿರುವ ಕಾರ್ಯಕ್ರಮದ ಸ್ಥಳಕ್ಕೆ ಇಂದು ಭೇಟಿ ನೀಡಿದರು. ಕೇಂದ್ರ ಸಚಿವರಾದ ಶ್ರೀ ಸಿಂಧಿಯಾ ಅವರು ನವದೆಹಲಿಯ ಶಿವಾಜಿ ಕ್ರೀಡಾಂಗಣದಿಂದ ಏರ್ಪೋರ್ಟ್ ಮೆಟ್ರೋ ಮೂಲಕ ಸ್ಥಳಕ್ಕೆ ತೆರಳಿ ಹಿಂತಿರುಗಿದರು.

ಈ ಭೇಟಿಯ ವೇಳೆ, ಕೇಂದ್ರ ಸಚಿವರು ಪ್ರದರ್ಶನ ಪ್ರದೇಶವನ್ನು ಕೂಲಂಕಷವಾಗಿ ವೀಕ್ಷಿಸಿದರು, ಭಾಗವಹಿಸುತ್ತಿರುವ ಸ್ಟಾರ್ಟ್ಅಪ್ಗಳು ಮತ್ತು ಪ್ರದರ್ಶಕರೊಂದಿಗೆ ಸಂವಾದ ನಡೆಸಿದರು ಹಾಗೂ ದೂರಸಂಪರ್ಕ ಇಲಾಖೆ (DoT), ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಮತ್ತು ಪಾಲುದಾರ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೆ, ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ಐ.ಎಂ.ಸಿ 2025ರ ಪ್ರಮಾಣ, ಮಹತ್ವಾಕಾಂಕ್ಷೆ ಮತ್ತು ಜಾಗತಿಕ ಮಹತ್ವವನ್ನು ವಿವರಿಸಿದರು.
ಕೇಂದ್ರ ಸಚಿವರಾದ ಶ್ರೀ ಸಿಂಧಿಯಾ ಅವರು, ಐ.ಎಂ.ಸಿ 2025 ಸಂಪರ್ಕಕ್ಕೆ ಹೊಸ ಮಾದರಿಯನ್ನು ತರಲಿದೆ ಎಂದು ಹೇಳಿದರು. ಇಲ್ಲಿ ದೂರಸಂಪರ್ಕವು 5G, AI, ML, IoT ಮತ್ತು ಉಪಗ್ರಹ ಸಂವಹನಗಳಂತಹ ತಂತ್ರಜ್ಞಾನಗಳಿಗೆ ಹೆದ್ದಾರಿ ಮತ್ತು ಮಾರ್ಗವಾಗಿ ಕಾರ್ಯನಿರ್ವಹಿಸಲಿದ್ದು, ಭಾರತವನ್ನು ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ಸಂಪರ್ಕಿಸುತ್ತದೆ. ಈ ತಾಂತ್ರಿಕ ಸಬಲೀಕರಣದ ದೃಷ್ಟಿಕೋನವು ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಚ್ಚರಿಕೆಯಿಂದ ರೂಪಿಸಿದ ಕಾರ್ಯತಂತ್ರವಾಗಿದ್ದು, ಜಾಗತಿಕ ಪ್ರಗತಿಯನ್ನು ಮುನ್ನಡೆಸುವ ಸ್ವಾವಲಂಬಿ, ಸಶಕ್ತ ಮತ್ತು ನವೀನ ಭಾರತವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಈ ವರ್ಷದ ಇಂಡಿಯಾ ಮೊಬೈಲ್ ಕಾಂಗ್ರೆಸ್ ಯಶೋಭೂಮಿಯ 4.5 ಲಕ್ಷ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಡೆಯಲಿದ್ದು, 1.5 ಲಕ್ಷಕ್ಕೂ ಹೆಚ್ಚು ಸಂದರ್ಶಕರು, 150ಕ್ಕೂ ಹೆಚ್ಚು ದೇಶಗಳಿಂದ 7,000 ಪ್ರತಿನಿಧಿಗಳು ಮತ್ತು ಭಾಗವಹಿಸುವವರು ಹಾಗೂ 400 ಪ್ರದರ್ಶಕರಿಗೆ ಆತಿಥ್ಯ ವಹಿಸಲಿದೆ. ಐ.ಎಂ.ಸಿ ಕೇವಲ ರಾಷ್ಟ್ರೀಯ ವೇದಿಕೆಯಾಗಿ ಉಳಿದಿಲ್ಲ, ಬದಲಾಗಿ "ಡಿಜಿಟಲ್ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯ ಮತ್ತು ನಾಯಕತ್ವವನ್ನು ಪ್ರತಿಬಿಂಬಿಸುವ ಏಷ್ಯಾದ ಮತ್ತು ಜಾಗತಿಕ ತಂತ್ರಜ್ಞಾನ ಸಮಾವೇಶವಾಗಿ" ಬೆಳೆದಿದೆ ಎಂದು ಕೇಂದ್ರ ಸಚಿವ ಶ್ರೀ ಸಿಂಧಿಯಾ ಅವರು ಅಭಿಪ್ರಾಯಪಟ್ಟರು.
ಇದಲ್ಲದೆ, ಐ.ಎಂ.ಸಿ 2025 ರಲ್ಲಿ ಆರು ಪ್ರಮುಖ ಜಾಗತಿಕ ಶೃಂಗಸಭೆಗಳು ನಡೆಯಲಿವೆ. ಇವುಗಳಲ್ಲಿ ಪ್ರತಿಯೊಂದೂ ಡಿಜಿಟಲ್ ನಾವೀನ್ಯತೆಯ ಮುಂಚೂಣಿಯನ್ನು ಪ್ರತಿನಿಧಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಅವುಗಳೆಂದರೆ:
- ಅಂತಾರಾಷ್ಟ್ರೀಯ ಭಾರತ್ 6G ವಿಚಾರ ಸಂಕಿರಣ, ಇದು ಭಾರತ್ 6G ಅಲಯನ್ಸ್ ಮೂಲಕ 6G ಸಂಶೋಧನೆಯಲ್ಲಿ ಭಾರತದ ನಾಯಕತ್ವವನ್ನು ಪ್ರದರ್ಶಿಸುತ್ತದೆ;
- ಅಂತಾರಾಷ್ಟ್ರೀಯ AI ಶೃಂಗಸಭೆ, ಇದು ನೆಟ್ವರ್ಕ್ಗಳು ಮತ್ತು ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯ ಪರಿವರ್ತನಾಶೀಲ ಪರಿಣಾಮದ ಮೇಲೆ ಗಮನಹರಿಸುತ್ತದೆ;
- ಸೈಬರ್ ಭದ್ರತಾ ಶೃಂಗಸಭೆ, ಇದು 120 ಕೋಟಿಗೂ ಹೆಚ್ಚು ದೂರಸಂಪರ್ಕ ಬಳಕೆದಾರರನ್ನು ರಕ್ಷಿಸುವ ಮಹತ್ವವನ್ನು ಒತ್ತಿಹೇಳುತ್ತದೆ
- ಸ್ಯಾಟ್ ಕಾಮ್ ಶೃಂಗಸಭೆ, ಇದು ಭಾರತದಲ್ಲಿ ಉಪಗ್ರಹ ಆಧಾರಿತ ಸಂವಹನ ಸೇವೆಗಳ ಹೊಸ ಯುಗದ ಕುರಿತು ಚರ್ಚಿಸಲಿದೆ
- ಐ.ಎಂ.ಸಿ ಆಕಾಂಕ್ಷೆ ಕಾರ್ಯಕ್ರಮ, ಇದು ಸುಮಾರು 500 ಸ್ಟಾರ್ಟ್ಅಪ್ ಗಳು ಮತ್ತು 300 ವೆಂಚರ್ ಕ್ಯಾಪಿಟಲಿಸ್ಟ್ ಗಳು, ಖಾಸಗಿ ಇಕ್ವಿಟಿ ಹೂಡಿಕೆದಾರರು ಹಾಗೂ ಉದ್ಯಮದ ಮುಖಂಡರನ್ನು ಒಟ್ಟುಗೂಡಿಸುತ್ತದೆ.
- ಗ್ಲೋಬಲ್ ಸ್ಟಾರ್ಟ್ಅಪ್ ವರ್ಲ್ಡ್ ಕಪ್ – ಇಂಡಿಯಾ ಆವೃತ್ತಿ, ಇದರಲ್ಲಿ 15 ಫೈನಲಿಸ್ಟ್ ಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಒಂದು ಮಿಲಿಯನ್ ಡಾಲರ್ ಹೂಡಿಕೆಯ ಅವಕಾಶಕ್ಕಾಗಿ ಸ್ಪರ್ಧಿಸಲಿದ್ದಾರೆ
ಈ ಎಲ್ಲಾ ಕಾರ್ಯಕ್ರಮಗಳು ಒಟ್ಟಾಗಿ ಐ.ಎಂ.ಸಿ 2025 ಅನ್ನು ಕಲ್ಪನೆಗಳು, ತಂತ್ರಜ್ಞಾನಗಳು ಮತ್ತು ಹೂಡಿಕೆಗಳ ಜಾಗತಿಕ ಸಂಗಮವಾಗಿ ರೂಪಿಸುತ್ತವೆ. ಇದು ಭಾರತದ ದೂರಸಂಪರ್ಕ ಮತ್ತು ಡಿಜಿಟಲ್ ಬೆಳವಣಿಗೆಯ ಕಥೆಯನ್ನು ವ್ಯಾಖ್ಯಾನಿಸುವ ನಾವೀನ್ಯತೆಯ ಸ್ಪೂರ್ತಿಯನ್ನು ಸಾಕಾರಗೊಳಿಸುತ್ತದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ದೂರಸಂಪರ್ಕ ವಲಯದಲ್ಲಿ ಭಾರತದ ಸಾಧನೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಸಿಂಧಿಯಾ, "ಇಂದು ಭಾರತವು 120 ಕೋಟಿ (1.2 ಬಿಲಿಯನ್) ಮೊಬೈಲ್ ಚಂದಾದಾರರು, 97 ಕೋಟಿ ಇಂಟರ್ನೆಟ್ ಬಳಕೆದಾರರೊಂದಿಗೆ ವಿಶ್ವದ ಅಗ್ರ ಮೂರು ಡಿಜಿಟಲ್ ರಾಷ್ಟ್ರಗಳಲ್ಲಿ ಒಂದಾಗಿದೆ. ಅಲ್ಲದೆ, ಕೇವಲ 22 ತಿಂಗಳಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ 5G ಸೇವೆಯನ್ನು ಜಾರಿಗೊಳಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ" ಎಂದು ಹೇಳಿದರು.
"ಭಾರತದಲ್ಲೇ ವಿನ್ಯಾಸಗೊಳಿಸುವುದು, ಭಾರತದಲ್ಲೇ ಪರಿಹಾರ ಕಂಡುಕೊಳ್ಳುವುದು ಮತ್ತು ಭಾರತದಲ್ಲೇ ಅದನ್ನು ವಿಸ್ತರಿಸುವುದು ನಮ್ಮ ಶಕ್ತಿಯಾಗಿದೆ. ಐ.ಎಂ.ಸಿ 2025 ತಾಂತ್ರಿಕ ಸ್ವಾವಲಂಬನೆ ಮತ್ತು ನಾವೀನ್ಯತೆಯ ಈ ಪಯಣವನ್ನು ಆಚರಿಸಲಿದೆ" ಎಂದು ಅವರು ಹೇಳಿದರು.
"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 8, 2025 ರಂದು ಬೆಳಿಗ್ಗೆ 9:30 ಗಂಟೆಗೆ ದ್ವಾರಕಾದ ಯಶೋಭೂಮಿಯಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಅನ್ನು ಉದ್ಘಾಟಿಸಲಿದ್ದಾರೆ" ಎಂದು ಕೇಂದ್ರ ಸಚಿವರು ಘೋಷಿಸಿದರು. "ಗೌರವಾನ್ವಿತ ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ, ಭಾರತದ ದೂರಸಂಪರ್ಕ ವಲಯವು ನಾವೀನ್ಯತೆ, ಸಂಪರ್ಕ ಮತ್ತು ಒಳಗೊಳ್ಳುವಿಕೆಯ ದಾರಿದೀಪವಾಗಿ ಹೊರಹೊಮ್ಮಿದೆ. ಐ.ಎಂ.ಸಿ 2025 ವಿಶ್ವದ ಮುಂದೆ ಭಾರತದ ಡಿಜಿಟಲ್ ಪರಿವರ್ತನೆಯ ಪ್ರತಿಬಿಂಬವಾಗಲಿದೆ" ಎಂದು ಅವರು ಹೇಳಿದರು.
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(Release ID: 2175464)
Visitor Counter : 7