ಸಂಪುಟ
2025-26 ರಿಂದ 2030-31 ರವರೆಗೆ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತ ಅಭಿಯಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
2030-31ರ ವೇಳೆಗೆ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು 350 ಲಕ್ಷ ಟನ್ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿರುವ ದ್ವಿದಳ ಧಾನ್ಯ ಮಿಷನ್
ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸಲು ರೂ.11,440 ಕೋಟಿ ಹೂಡಿಕೆ ಬೆಂಬಲ
ಬೀಜಗಳು, ಕೊಯ್ಲಿನ ನಂತರದ ಮೂಲಸೌಕರ್ಯ ಮತ್ತು ಖಚಿತ ಸಂಗ್ರಹಣೆಯನ್ನು ಸುಧಾರಿಸುವ ಮೂಲಕ ಅಂದಾಜು 2 ಕೋಟಿ ರೈತರಿಗೆ ಪ್ರಯೋಜನವನ್ನು ನೀಡುವ ಬೇಳೆಕಾಳುಗಳ ಮಿಷನ್
ರೈತರಿಗೆ ಆಧುನಿಕ ಬೇಳೆಕಾಳುಗಳ ಸುಲಭಲಭ್ಯತೆಯನ್ನು ಹೆಚ್ಚಿಸಲು 88 ಲಕ್ಷ ಉಚಿತ ಬೀಜ ಕಿಟ್ಗಳು
ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಲು 1,000 ಸಂಸ್ಕರಣಾ ಘಟಕಗಳ ಯೋಜನೆ
ಮುಂದಿನ 4 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ತೊಗರಿ, ಉದ್ದು ಮತ್ತು ಮಸೂರ ಬೇಳೆ (ಮೈಸೂರ ಬೇಳೆ)ಯ 100% ಖರೀದಿ
Posted On:
01 OCT 2025 3:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಬೇಳೆಕಾಳುಗಳಲ್ಲಿ ಆತ್ಮನಿರ್ಭರ ಮಿಷನ್ಗೆ ಅನುಮೋದನೆ ನೀಡಿದೆ. ಇದು ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಂದು ಮಹತ್ತರ ಉಪಕ್ರಮವಾಗಿದ್ದು, ಇದರ ಉದ್ದೇಶ ಬೇಳೆಕಾಳುಗಳಲ್ಲಿ ಸ್ವಾವಲಂಬನೆ (ಆತ್ಮನಿರ್ಭರತ) ಸಾಧಿಸುವುದಾಗಿದೆ. ಈ ಮಿಷನ್ ಅನ್ನು 2025-26 ರಿಂದ 2030-31 ರವರೆಗಿನ ಆರು ವರ್ಷಗಳ ಅವಧಿಯಲ್ಲಿ, ರೂ. 11,440 ಕೋಟಿ ಆರ್ಥಿಕ ವೆಚ್ಚದೊಂದಿಗೆ ಜಾರಿಗೆ ತರಲಾಗುವುದು.
ಭಾರತದ ಬೆಳೆ ವ್ಯವಸ್ಥೆಗಳು ಮತ್ತು ಆಹಾರ ಪದ್ಧತಿಗಳಲ್ಲಿ ಬೇಳೆಕಾಳುಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಭಾರತವು ವಿಶ್ವದ ಅತಿದೊಡ್ಡ ಬೇಳೆಕಾಳು ಧಾನ್ಯಗಳ ಉತ್ಪಾದಕ ಮತ್ತು ಬಳಕೆ ಮಾಡವ ರಾಷ್ಟ್ರವಾಗಿದೆ. ಹೆಚ್ಚುತ್ತಿರುವ ಆದಾಯ ಮತ್ತು ಜೀವನ ಮಟ್ಟದೊಂದಿಗೆ, ಬೇಳೆಕಾಳುಗಳ ಬಳಕೆ ಹೆಚ್ಚಾಗಿದೆ. ಆದಾಗ್ಯೂ, ದೇಶದಲ್ಲಿನ ಉತ್ಪಾದನೆಯು ಬೇಡಿಕೆಗೆ ಅನುಗುಣವಾಗಿಲ್ಲ, ಇದು ಬೇಳೆಕಾಳುಗಳ ಆಮದುಗಳಲ್ಲಿ 15-20% ಹೆಚ್ಚಳಕ್ಕೆ ಕಾರಣವಾಗಿದೆ.
ಈ ಆಮದಿನ ಅವಲಂಬನೆಯನ್ನು ಕಡಿಮೆ ಮಾಡಲು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು, 2025-26 ರ ಹಣಕಾಸು ವರ್ಷದ ಬಜೆಟ್ನಲ್ಲಿ 6 ವರ್ಷಗಳ " ಬೇಳೆಕಾಳುಗಳ ಆತ್ಮನಿರ್ಭರತಕ್ಕಾಗಿ ಮಿಷನ್" ಅನ್ನು ಘೋಷಿಸಲಾಯಿತು. ಸಂಶೋಧನೆ, ಬೀಜ ವ್ಯವಸ್ಥೆಗಳು, ಪ್ರದೇಶ ವಿಸ್ತರಣೆ, ಸಂಗ್ರಹಣೆ ಮತ್ತು ಬೆಲೆ ಸ್ಥಿರತೆಯನ್ನು ಒಳಗೊಂಡ ಸಮಗ್ರ ಕಾರ್ಯತಂತ್ರವನ್ನು ಮಿಷನ್ ಅಳವಡಿಸಿಕೊಳ್ಳುತ್ತದೆ.
ಹೆಚ್ಚಿನ ಉತ್ಪಾದಕತೆ, ಕೀಟ ನಿರೋಧಕ ಮತ್ತು ಹವಾಮಾನ ನಿರೋಧಕತೆಯನ್ನು ಹೊಂದಿರುವ ಆಧುನಿಕ ಬೇಳೆಕಾಳುಗಳು ಧಾನ್ಯಗಳ ತಳಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಸಾರ ಮಾಡುವುದರ ಮೇಲೆ ಒತ್ತು ನೀಡಲಾಗುವುದು. ಪ್ರಾದೇಶಿಕ ಸೂಕ್ತತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಬೇಳೆಕಾಳುಗಳನ್ನು ಬೆಳೆಯುವ ರಾಜ್ಯಗಳಲ್ಲಿ ವಿವಿಧ ಸ್ಥಳಗಳಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು.
ಇದಲ್ಲದೆ, ಪ್ರೀಮಿಯಂ ಗುಣಮಟ್ಟದ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳು ಐದು ವರ್ಷಗಳ ರೋಲಿಂಗ್ ಬೀಜ ಉತ್ಪಾದನಾ ಯೋಜನೆಗಳನ್ನು ಸಿದ್ಧಪಡಿಸುತ್ತವೆ. ತಳಿ ಬೀಜ ಉತ್ಪಾದನೆಯನ್ನು ಐಸಿಎಆರ್ ಮೇಲ್ವಿಚಾರಣೆ ಮಾಡುತ್ತದೆ. ರಾಜ್ಯ ಮತ್ತು ಕೇಂದ್ರ ಮಟ್ಟದ ಏಜೆನ್ಸಿಗಳು ಫೌಂಡೇಶನ್ ಮತ್ತು ಪ್ರಮಾಣೀಕೃತ ಬೀಜ ಉತ್ಪಾದನೆಯನ್ನು ಮಾಡುತ್ತವೆ ಹಾಗು ಬೀಜ ದೃಢೀಕರಣ, ಪತ್ತೆಹಚ್ಚುವಿಕೆ ಮತ್ತು ಸಮಗ್ರ ದಾಸ್ತಾನು (SATHI -ಸಾಥಿ) ಪೋರ್ಟಲ್ ಮೂಲಕ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತವೆ.
ಸುಧಾರಿತ ಪ್ರಭೇದಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು, 2030-31 ರ ವೇಳೆಗೆ 370 ಲಕ್ಷ ಹೆಕ್ಟೇರ್ ಗಳನ್ನು ಒಳಗೊಂಡಂತೆ 126 ಲಕ್ಷ ಕ್ವಿಂಟಾಲ್ ಪ್ರಮಾಣೀಕೃತ ಬೀಜಗಳನ್ನು ಬೇಳೆಕಾಳುಗಳನ್ನು ಬೆಳೆಯುವ ರೈತರಿಗೆ ವಿತರಿಸಲಾಗುತ್ತದೆ.
ಮಣ್ಣಿನ ಆರೋಗ್ಯ ಕಾರ್ಯಕ್ರಮ, ಕೃಷಿ ಯಾಂತ್ರೀಕರಣದ ಉಪ-ಮಿಷನ್, ಸಮತೋಲಿತ ರಸಗೊಬ್ಬರ ಬಳಕೆ, ಸಸ್ಯ ರಕ್ಷಣೆ ಮತ್ತು ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಲು ಐಸಿಎಆರ್, ಕೆವಿಕೆಗಳು ಮತ್ತು ರಾಜ್ಯ ಇಲಾಖೆಗಳಿಂದ ವ್ಯಾಪಕವಾದ ಪ್ರಾತ್ಯಕ್ಷಿಕೆಗಳೊಂದಿಗೆ ಇದು ಪೂರಕವಾಗಿರುತ್ತದೆ.
ಋತುಮಾನಕ್ಕನುಗುಣವಾಗಿ ಭತ್ತಬೆಳೆಯುವ ಪ್ರದೇಶಗಳು ಮತ್ತು ಇತರ ವೈವಿಧ್ಯಮಯ ಭೂಮಿಗಳನ್ನು ಗುರಿಯಾಗಿಟ್ಟುಕೊಂಡು, ಅಂತರ ಬೆಳೆ ಮತ್ತು ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವ ಮೂಲಕ ಬೇಳೆಕಾಳು ಧಾನ್ಯಗಳ ಅಡಿಯಲ್ಲಿ ಬೆಳೆಯುವ ಪ್ರದೇಶಗಳನ್ನು ಹೆಚ್ಚುವರಿಯಾಗಿ 35 ಲಕ್ಷ ಹೆಕ್ಟೇರ್ಗಳಷ್ಟು ವಿಸ್ತರಿಸಲು ಮಿಷನ್ ಪ್ರಯತ್ನಿಸುತ್ತದೆ. ಇದಕ್ಕಾಗಿ, ರೈತರಿಗೆ 88 ಲಕ್ಷ ಬೀಜ ಕಿಟ್ ಅನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಸುಸ್ಥಿರ ತಂತ್ರಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಉತ್ತೇಜಿಸಲು ರಚನಾತ್ಮಕ ತರಬೇತಿ ಕಾರ್ಯಕ್ರಮಗಳ ಮೂಲಕ ರೈತರು ಮತ್ತು ಬೀಜ ಬೆಳೆಗಾರರ ಸಾಮರ್ಥ್ಯ ವೃದ್ಧಿಯನ್ನು ಕೈಗೊಳ್ಳಲಾಗುವುದು.
ಮಾರುಕಟ್ಟೆಗಳು ಮತ್ತು ಮೌಲ್ಯ ಸರಪಳಿಗಳನ್ನು ಬಲಪಡಿಸಲು, 1000 ಸಂಸ್ಕರಣಾ ಘಟಕಗಳು ಸೇರಿದಂತೆ ಕೊಯ್ಲಿನ ನಂತರದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮಿಷನ್ ಸಹಾಯ ಮಾಡುತ್ತದೆ, ಇದರಿಂದಾಗಿ ಬೆಳೆ ನಷ್ಟವನ್ನು ಕಡಿಮೆ ಮಾಡುತ್ತದೆ, ಮೌಲ್ಯವರ್ಧನೆಯನ್ನು ಸುಧಾರಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಸಂಸ್ಕರಣೆ, ಪ್ಯಾಕೇಜಿಂಗ್ ಘಟಕಗಳ ಸ್ಥಾಪನೆಗೆ ಗರಿಷ್ಠ ರೂ. 25 ಲಕ್ಷ ಸಬ್ಸಿಡಿ ಲಭ್ಯವಿರುತ್ತದೆ.
ಈ ಮಿಷನ್ ಕ್ಲಸ್ಟರ್ ಆಧಾರಿತ ವಿಧಾನವನ್ನು ಅಳವಡಿಸಿಕೊಂಡು, ಪ್ರತಿ ಕ್ಲಸ್ಟರ್ನ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಮಧ್ಯಸ್ಥಿಕೆಗಳನ್ನು ರೂಪಿಸುತ್ತದೆ. ಇದು ಸಂಪನ್ಮೂಲಗಳ ಹೆಚ್ಚು ಪರಿಣಾಮಕಾರಿ ಹಂಚಿಕೆಗೆ ಅನುವು ಮಾಡಿಕೊಡುತ್ತದೆ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಹಾಗು ಬೇಳೆಕಾಳುಗಳ ಉತ್ಪಾದನೆಯ ಭೌಗೋಳಿಕ ವೈವಿಧ್ಯೀಕರಣವನ್ನು ಉತ್ತೇಜಿಸುತ್ತದೆ.
ಪಿಎಂ-ಆಶಾ (PM-AASHA) ದ ಬೆಲೆ ಬೆಂಬಲ ಯೋಜನೆ (ಪಿ.ಎಸ್.ಎಸ್) ಅಡಿಯಲ್ಲಿ ತೊಗರಿ, ಉದ್ದು ಮತ್ತು ಮಸೂರ್ (ಮೈಸೂರು ಬೇಳೆ)ನ ಗರಿಷ್ಠ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಏಜೆನ್ಸಿಗಳಲ್ಲಿ ನೋಂದಾಯಿಸಿಕೊಳ್ಳುವ ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳುವ ರೈತರಿಂದ ಮುಂದಿನ ನಾಲ್ಕು ವರ್ಷಗಳ ಕಾಲ ಭಾಗವಹಿಸುವ ರಾಜ್ಯಗಳಲ್ಲಿ ಎನ್.ಎ.ಎಫ್.ಇ.ಡಿ ಮತ್ತು ಎನ್.ಸಿ.ಸಿ.ಎಫ್ 100% ಖರೀದಿಯನ್ನು ಮಾಡುತ್ತವೆ.
ಹೆಚ್ಚುವರಿಯಾಗಿ, ರೈತರ ವಿಶ್ವಾಸವನ್ನು ಕಾಪಾಡಲು, ಮಿಷನ್ ಜಾಗತಿಕ ಬೇಳೆಕಾಳುಗಳ ಬೆಲೆಗಳನ್ನು ಮೇಲ್ವಿಚಾರಣೆ ಮಾಡಲು ಒಂದು ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.
2030-31ರ ವೇಳೆಗೆ, ಮಿಷನ್ ಬೇಳೆಕಾಳುಗಳ ಅಡಿಯಲ್ಲಿ ಪ್ರದೇಶವನ್ನು 310 ಲಕ್ಷ ಹೆಕ್ಟೇರ್ಗಳಿಗೆ ವಿಸ್ತರಿಸುವ, ಉತ್ಪಾದನೆಯನ್ನು 350 ಲಕ್ಷ ಟನ್ಗಳಿಗೆ ಹೆಚ್ಚಿಸುವ ಮತ್ತು ಇಳುವರಿಯನ್ನು 1130 ಕೆಜಿ/ಹೆಕ್ಟೇರ್ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಉತ್ಪಾದಕತೆಯ ಲಾಭದ ಜೊತೆಗೆ, ಮಿಷನ್ ಗಮನಾರ್ಹ ಉದ್ಯೋಗವನ್ನು ಕೂಡ ಸೃಷ್ಟಿಸುತ್ತದೆ.
ಮಿಷನ್ ಬೇಳೆಕಾಳುಗಳಲ್ಲಿ ಆತ್ಮನಿರ್ಭರತೆ ಗುರಿಯನ್ನು ಸಾಧಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವಾಗ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ. ಈ ಮಿಷನ್ ಹವಾಮಾನ ಚೇತರಿಕೆ ಅಭ್ಯಾಸಗಳು ಮತ್ತು ಸುಧಾರಿತ ಮಣ್ಣಿನ ಆರೋಗ್ಯ ಹಾಗು ಋತುಮಾನಕ್ಕನುಗುಣವಾಗಿ ಬೆಳೆಯುವ ಜಾಗಗಳನ್ನ ಸಂಪೂರ್ಣ ಉತ್ಪಾದಕ ಬಳಕೆಯನ್ನು ಮಾಡುವ ರೂಪದಲ್ಲಿ ಗಮನಾರ್ಹ ಪರಿಸರ ಪ್ರಯೋಜನಗಳನ್ನು ಸಹ ಪಡೆಯುತ್ತದೆ.
*****
(Release ID: 2173765)
Visitor Counter : 8
Read this release in:
Odia
,
Hindi
,
Malayalam
,
English
,
Urdu
,
Marathi
,
Assamese
,
Bengali
,
Punjabi
,
Gujarati
,
Tamil
,
Telugu