ಪ್ರಧಾನ ಮಂತ್ರಿಯವರ ಕಛೇರಿ
ಗ್ರೇಟರ್ ನೋಯ್ಡಾದಲ್ಲಿ “ಉತ್ತರ ಪ್ರದೇಶದ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ”ದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
25 SEP 2025 1:15PM by PIB Bengaluru
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಉತ್ತರ ಪ್ರದೇಶದ ಸರ್ಕಾರದ ಸಚಿವರುಗಳೆ, ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಭೂಪೇಂದ್ರ ಚೌಧರಿ ಜಿ, ಉದ್ಯಮದ ಎಲ್ಲಾ ಸ್ನೇಹಿತರೆ, ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ,
ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನಕ್ಕೆ ಆಗಮಿಸಿರುವ ಎಲ್ಲಾ ಉದ್ಯಮಿಗಳು, ಹೂಡಿಕೆದಾರರು, ವ್ಯಾಪಾರಿಗಳು ಮತ್ತು ಯುವ ಸ್ನೇಹಿತರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. 2,200ಕ್ಕಿಂತ ಹೆಚ್ಚಿನ ಪ್ರದರ್ಶಕರು ಇಲ್ಲಿ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಈ ಬಾರಿ, ವ್ಯಾಪಾರ ಪ್ರದರ್ಶನದ ದೇಶದ ಪಾಲುದಾರ ರಷ್ಯಾ. ಇದರರ್ಥ ಈ ವ್ಯಾಪಾರ ಪ್ರದರ್ಶನದಲ್ಲಿ, ನಾವು ಸಮಯ-ಪರೀಕ್ಷಿತ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಯೋಗಿ ಜಿ, ಇತರೆ ಎಲ್ಲಾ ಸರ್ಕಾರಿ ಸಹೋದ್ಯೋಗಿಗಳು ಮತ್ತು ಪಾಲುದಾರರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇಂದು ನಮ್ಮ ಮಾರ್ಗದರ್ಶಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿ ಅವರ ಜನ್ಮ ದಿನಾಚರಣೆ. ದೀನದಯಾಳ್ ಜಿ ನಮಗೆ ಅಂತ್ಯೋದಯದ ಮಾರ್ಗವನ್ನು ತೋರಿಸಿದರು. ಅಂತ್ಯೋದಯ ಎಂದರೆ ಕೊನೆಯ ಹಂತದಲ್ಲಿರುವವರ ಉದಯ. ಅಭಿವೃದ್ಧಿ ಬಡವರಲ್ಲಿ ಬಡವರನ್ನು ತಲುಪಬೇಕು ಮತ್ತು ಎಲ್ಲಾ ತಾರತಮ್ಯಗಳು ಕೊನೆಗೊಳ್ಳಬೇಕು, ಇದು ಅಂತ್ಯೋದಯ ಮತ್ತು ಸಾಮಾಜಿಕ ನ್ಯಾಯದ ಬಲ ಇರುವುದು ಅಂತ್ಯೋದಯದಲ್ಲಿ. ಇಂದು ಭಾರತವು ಈ ಅಭಿವೃದ್ಧಿಯ ಮಾದರಿಯನ್ನು ಜಗತ್ತಿಗೆ ನೀಡುತ್ತಿದೆ.
ಸ್ನೇಹಿತರೆ,
ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಇಂದು, ನಮ್ಮ ಹಣಕಾಸು ತಂತ್ರಜ್ಞಾನ ವಲಯದ ಬಗ್ಗೆ ವಿಶ್ವಾದ್ಯಂತ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಈ ಹಣಕಾಸು ತಂತ್ರಜ್ಞಾನ ಕ್ಷೇತ್ರದ ಅತ್ಯಂತ ಮಹತ್ವದ ಅಂಶವೆಂದರೆ, ಅದು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಗಮನಾರ್ಹವಾಗಿ ಸಬಲೀಕರಣಗೊಳಿಸಿದೆ ಮತ್ತು ಉತ್ತೇಜಿಸಿದೆ. ಭಾರತವು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮುಕ್ತ ವೇದಿಕೆಗಳನ್ನು ರಚಿಸಿದೆ. ಯುಪಿಐ, ಆಧಾರ್, ಡಿಜಿ ಲಾಕರ್, ಒಎನ್‌ಡಿಸಿ. ಇವು ಎಲ್ಲರಿಗೂ ಅವಕಾಶ ಒದಗಿಸುತ್ತಿವೆ. ಅಂದರೆ ಎಲ್ಲರಿಗೂ ವೇದಿಕೆ, ಎಲ್ಲರಿಗೂ ಪ್ರಗತಿ. ಇಂದು ಇದರ ಪರಿಣಾಮ ಭಾರತದಲ್ಲಿ ಎಲ್ಲೆಡೆ ಗೋಚರಿಸುತ್ತಿದೆ. ಮಾಲ್‌ನಲ್ಲಿ ಶಾಪಿಂಗ್ ಮಾಡುವ ವ್ಯಕ್ತಿಯೂ ಯುಪಿಐ ಬಳಸುತ್ತಾನೆ, ರಸ್ತೆಯಲ್ಲಿ ಚಹಾ ಮಾರುವ ವ್ಯಕ್ತಿಯೂ ಯುಪಿಐ ಬಳಸುತ್ತಾನೆ. ಒಂದು ಕಾಲದಲ್ಲಿ ದೊಡ್ಡ ಕಂಪನಿಗಳಿಗೆ ಮಾತ್ರ ಲಭ್ಯವಿದ್ದ ಔಪಚಾರಿಕ ಸಾಲ ಸೌಲಭ್ಯ ಈಗ ಪಿಎಂ ಸ್ವನಿಧಿ ಮೂಲಕ ಬೀದಿ ವ್ಯಾಪಾರಿಗಳನ್ನು ತಲುಪುತ್ತಿದೆ.
ಸ್ನೇಹಿತರೆ,
ಅಂತಹವುಗಳಲ್ಲಿ ಸರ್ಕಾರಿ ವಿದ್ಯುನ್ಮಾನ ಮಾರುಕಟ್ಟೆ ಸ್ಥಳ(ಇ-ಮಾರ್ಕೆಟ್ ಪ್ಲೇಸ್), ಅಂದರೆ ಜಿಇಎಂ. ಒಂದು ಕಾಲದಲ್ಲಿ ಸರ್ಕಾರವು ಯಾವುದೇ ಸರಕುಗಳನ್ನು ಮಾರಾಟ ಮಾಡಬೇಕಾದರೆ, ಅದು ದೊಡ್ಡ ಕಂಪನಿಗಳ ಕೈಯಲ್ಲಿತ್ತು, ಅದು ಒಂದು ರೀತಿಯಲ್ಲಿ ಅವರ ನಿಯಂತ್ರಣದಲ್ಲಿತ್ತು. ಆದರೆ ಇಂದು, ಸುಮಾರು 25 ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಜಿಇಎಂ ಪೋರ್ಟಲ್‌ಗೆ ಸಂಪರ್ಕ ಹೊಂದಿದ್ದಾರೆ, ಅವರು ಸರ್ಕಾರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇವರು ಸಣ್ಣ ವ್ಯಾಪಾರಿಗಳು, ಉದ್ಯಮಿಗಳು, ಮತ್ತು ವರ್ತಕರಾಗಿದ್ದಾರೆ. ಭಾರತ ಸರ್ಕಾರದ ಅವಶ್ಯಕತೆಯಂತೆ, ಅವರು ತಮ್ಮ ಸರಕುಗಳನ್ನು ನೇರವಾಗಿ ಭಾರತ ಸರ್ಕಾರಕ್ಕೆ ಮಾರಾಟ ಮಾಡುತ್ತಿದ್ದಾರೆ, ಭಾರತ ಸರ್ಕಾರವು ಅವುಗಳನ್ನು ಖರೀದಿಸುತ್ತಿದೆ. ಇಲ್ಲಿಯವರೆಗೆ ಭಾರತ ಸರ್ಕಾರವು ಜಿಇಎಂ ಮೂಲಕ 15 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳು ಅಥವಾ ಸೇವೆಗಳನ್ನು ಖರೀದಿಸಿದೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಪೋರ್ಟಲ್‌ನಲ್ಲಿ ನಮ್ಮ ಎಂಎಸ್ಎಂಇಗಳ ಸಣ್ಣ ಕೈಗಾರಿಕೆಗಳಿಂದ ಸುಮಾರು 7 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಖರೀದಿಸಲಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇದನ್ನು ಊಹಿಸಲೂ ಅಸಾಧ್ಯವಾಗಿತ್ತು, ಆದರೆ ಇಂದು ದೇಶದ ದೂರದ ಮೂಲೆಗಳಲ್ಲಿರುವ ಸಣ್ಣ ವರ್ತಕರು ಮತ್ತು ವ್ಯಾಪಾರಿಗಳು ತಮ್ಮ ಸರಕುಗಳನ್ನು ಜಿಇಎಂ ಪೋರ್ಟಲ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ನಿಜವಾದ ಅರ್ಥದಲ್ಲಿ ಅಂತ್ಯೋದಯ, ಇದು ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ.
ಸ್ನೇಹಿತರೆ,
ಇಂದು ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಸಾಗುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಅಡೆತಡೆಗಳು ಮತ್ತು ಅನಿಶ್ಚಯಗಳ ಹೊರತಾಗಿಯೂ, ಭಾರತದ ಬೆಳವಣಿಗೆ ಪ್ರಭಾವಶಾಲಿಯಾಗಿದೆ. ಅಡೆತಡೆಗಳು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ, ಆದರೆ ಆ ಸಂದರ್ಭಗಳಿಂದ ನಾವು ಹೊಸ ನಿರ್ದೇಶನಗಳನ್ನು ಕಂಡುಕೊಳ್ಳುತ್ತಿದ್ದೇವೆ, ಹೊಸ ದಿಕ್ಕಿಗೆ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದೇವೆ. ಆದ್ದರಿಂದ, ಈ ಅಡೆತಡೆಗಳ ನಡುವೆ, ಇಂದು ಭಾರತವು ಮುಂಬರುವ ದಶಕಗಳಿಗೆ ಅಡಿಪಾಯವನ್ನು ಬಲಪಡಿಸುತ್ತಿದೆ. ಇದರಲ್ಲಿಯೂ ನಮ್ಮ ಸಂಕಲ್ಪ, ನಮ್ಮ ಮಂತ್ರ, ಸ್ವಾವಲಂಬಿ ಭಾರತವಾಗಿದೆ. ಇತರರ ಮೇಲೆ ಅವಲಂಬಿತವಾಗಿರುವುದಕ್ಕಿಂತ ದೊಡ್ಡ ಅಸಹಾಯಕತೆ ಇನ್ನೊಂದಿಲ್ಲ. ಈ ಬದಲಾಗುತ್ತಿರುವ ಜಗತ್ತಿನಲ್ಲಿ, ಒಂದು ದೇಶವು ಇತರರ ಮೇಲೆ ಹೆಚ್ಚು ಅವಲಂಬಿತವಾದಷ್ಟೂ, ಅದರ ಬೆಳವಣಿಗೆಯಲ್ಲಿ ಹೆಚ್ಚು ರಾಜಿಯಾಗುತ್ತದೆ. ಆದ್ದರಿಂದ, ಭಾರತದಂತಹ ದೇಶವು ಯಾರನ್ನೂ ಅವಲಂಬಿಸುವುದು ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಆದ್ದರಿಂದ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಾಗುತ್ತದೆ. ನಾವು ಭಾರತದಲ್ಲಿ ತಯಾರಿಸಬಹುದಾದ ಪ್ರತಿಯೊಂದು ಉತ್ಪನ್ನವನ್ನು ನಾವು ಭಾರತದಲ್ಲೇ ತಯಾರಿಸಬೇಕು. ಇಂದು ನನ್ನ ಮುಂದೆ ಹೆಚ್ಚಿನ ಸಂಖ್ಯೆಯ ಉದ್ಯಮಶೀಲರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಕುಳಿತಿರುವುದನ್ನು ನಾನು ನೋಡುತ್ತಿದ್ದೇನೆ. ನೀವು ಈ ಸ್ವಾವಲಂಬಿ ಭಾರತ ಅಭಿಯಾನದಲ್ಲಿ ದೊಡ್ಡ ಪಾಲುದಾರರಾಗಿದ್ದೀರಿ. ಸ್ವಾವಲಂಬಿ ಭಾರತವನ್ನು ಬಲಪಡಿಸುವ ರೀತಿಯಲ್ಲಿ ನಿಮ್ಮ ವ್ಯವಹಾರ ಮಾದರಿಯನ್ನು ಅಭಿವೃದ್ಧಿಪಡಿಸಲು ನಾನು ಇಂದು ನಿಮ್ಮನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೆ,
ಸರ್ಕಾರವು ಮೇಕ್ ಇನ್ ಇಂಡಿಯಾ ಮತ್ತು ಉತ್ಪಾದನೆಗೆ ಎಷ್ಟು ಒತ್ತು ನೀಡುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಚಿಪ್‌ಗಳಿಂದ ಹಿಡಿದು ಹಡಗುಗಳವರೆಗೆ ಎಲ್ಲವನ್ನೂ ಭಾರತದಲ್ಲೇ ತಯಾರಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರವು 40 ಸಾವಿರಕ್ಕೂ ಹೆಚ್ಚು ಕಟ್ಟುಪಾಡು ಅಥವಾ ಅನುಸರಣೆಗಳನ್ನು ತೆಗೆದುಹಾಕಿದೆ. ವ್ಯವಹಾರದಲ್ಲಿನ ಸಣ್ಣ ತಪ್ಪುಗಳಿಗೂ ನಿಮ್ಮ ವಿರುದ್ಧ ಮೊಕದ್ದಮೆ ಹೂಡಲು ಕಾರಣವಾಗುತ್ತಿದ್ದ ನೂರಾರು ನಿಯಮಗಳನ್ನು ಸರ್ಕಾರವು ಅಪರಾಧ ಮುಕ್ತಗೊಳಿಸಿದೆ. ಸರ್ಕಾರವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದೆ.
ಆದರೆ ಸ್ನೇಹಿತರೆ,
ನನಗೂ ಕೆಲವು ನಿರೀಕ್ಷೆಗಳಿವೆ, ಅದನ್ನು ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನೀವು ಏನೇ ಉತ್ಪಾದಿಸುತ್ತಿದ್ದರೂ ಅದು ಉತ್ತಮ ಗುಣಮಟ್ಟದ್ದಾಗಿರಬೇಕು, ಅತ್ಯುತ್ತಮದ್ದಾಗಿರಬೇಕು. ಇಂದು, ದೇಶವಾಸಿಗಳು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ, ಸ್ಥಳೀಯ ಉತ್ಪನ್ನಗಳ ಗುಣಮಟ್ಟ ನಿರಂತರವಾಗಿ ಸುಧಾರಿಸಬೇಕು, ಅವು ಬಳಕೆದಾರ ಸ್ನೇಹಿಯಾಗಿರಬೇಕು ಮತ್ತು ದೀರ್ಘಕಾಲದವರೆಗೆ ಉಪಯುಕ್ತವಾಗಿರಬೇಕು. ಆದ್ದರಿಂದ, ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು. ಇಂದು ದೇಶದ ಪ್ರತಿಯೊಬ್ಬ ನಾಗರಿಕನು ಸ್ವದೇಶಿಯೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ, ಸ್ವದೇಶಿ ಖರೀದಿಸಲು ಬಯಸುತ್ತಾರೆ, ಹೆಮ್ಮೆಯಿಂದ "ಇದು ಸ್ವದೇಶಿ" ಎಂದು ಹೇಳುತ್ತಿದ್ದಾರೆ. ಇಂದು ನಾವು ಎಲ್ಲೆಡೆ ಈ ಭಾವನೆಯನ್ನು ಅನುಭವಿಸುತ್ತಿದ್ದೇವೆ. ನಮ್ಮ ವ್ಯಾಪಾರಿಗಳು ಸಹ ಈ ಮಂತ್ರ ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಲಭ್ಯವಿರುವ ಯಾವುದಕ್ಕಾದರೂ ಆದ್ಯತೆ ನೀಡಬೇಕು.
ಸ್ನೇಹಿತರೆ,
ಸಂಶೋಧನೆಯು ಒಂದು ನಿರ್ಣಾಯಕ ವಿಷಯವಾಗಿದೆ. ನಾವು ಸಂಶೋಧನೆಯಲ್ಲಿ ಹೂಡಿಕೆ ಹೆಚ್ಚಿಸಬೇಕು; ನಾವು ಅದನ್ನು ಹಲವು ಬಾರಿ ಹೆಚ್ಚಿಸಬೇಕು. ನಾವೀನ್ಯತೆ ಇಲ್ಲದಿದ್ದರೆ ಜಗತ್ತು ಸ್ಥಗಿತಗೊಳ್ಳುತ್ತದೆ, ವ್ಯವಹಾರ ಸ್ಥಗಿತಗೊಳ್ಳುತ್ತದೆ, ಜೀವನ ಸ್ಥಗಿತಗೊಳ್ಳುತ್ತದೆ. ಇದನ್ನು ಪರಿಹರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈಗ, ಸಂಶೋಧನೆಯಲ್ಲಿ ಖಾಸಗಿ ಹೂಡಿಕೆ ಪ್ರೋತ್ಸಾಹಿಸಲು ಎಲ್ಲರೂ ಮುಂದಾಗಬೇಕು. ಇದು ಇಂದಿನ ಅಗತ್ಯವಾಗಿದೆ. ನಾವು ಸ್ಥಳೀಯ ಸಂಶೋಧನೆ, ಸ್ಥಳೀಯ ವಿನ್ಯಾಸ ಮತ್ತು ಅಭಿವೃದ್ಧಿಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ರೂಪಿಸಬೇಕು.
ನಮ್ಮ ಉತ್ತರ ಪ್ರದೇಶವು ಹೂಡಿಕೆಗೆ ಅದ್ಭುತ ಸಾಮರ್ಥ್ಯ ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ನಡೆದಿರುವ ಸಂಪರ್ಕ ಕ್ರಾಂತಿಯು ಸರಕು ಸಾಗಣೆ ಕ್ಸ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಉತ್ತರ ಪ್ರದೇಶವು ದೇಶದಲ್ಲಿ ಗರಿಷ್ಠ ಸಂಖ್ಯೆಯ ಎಕ್ಸ್‌ಪ್ರೆಸ್‌ವೇಗಳನ್ನು ಹೊಂದಿರುವ ರಾಜ್ಯವಾಗಿದೆ. ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ; ಇದು ದೇಶದ 2 ಪ್ರಮುಖ ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ಗಳ ಕೇಂದ್ರವಾಗಿದೆ. ಉತ್ತರ ಪ್ರದೇಶವು ಪರಂಪರೆ ಪ್ರವಾಸೋದ್ಯಮದಲ್ಲಿಯೂ ಪ್ರಥಮ ಸ್ಥಾನದಲ್ಲಿದೆ. ನಮಾಮಿ ಗಂಗೆಯಂತಹ ಅಭಿಯಾನಗಳು ಉತ್ತರ ಪ್ರದೇಶವನ್ನು ಕ್ರೂಸ್ ಪ್ರವಾಸೋದ್ಯಮ ನಕ್ಷೆಯಲ್ಲಿ ಇರಿಸಿವೆ. "ಒಂದು ಜಿಲ್ಲೆ, ಒಂದು ಉತ್ಪನ್ನ" ಉಪಕ್ರಮವು ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಿಂದ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಂದಿದೆ. ನಾನು ವಿದೇಶಿ ಅತಿಥಿಗಳನ್ನು ಭೇಟಿ ಮಾಡಬೇಕಾಗಿದೆ, ಆದ್ದರಿಂದ ಇತ್ತೀಚಿನ ದಿನಗಳಲ್ಲಿ ನಾನು ಯಾರಿಗೂ ಏನು ನೀಡಬೇಕೆಂದು ಹೆಚ್ಚು ಯೋಚಿಸಬೇಕಾಗಿಲ್ಲ. ನಮ್ಮ ತಂಡವು "ಒಂದು ಜಿಲ್ಲೆ, ಒಂದು ಉತ್ಪನ್ನ" ಕ್ಯಾಟಲಾಗ್ ಪರಿಶೀಲಿಸುತ್ತದೆ, ನಾನು ಅವುಗಳನ್ನು ವಿಶ್ವಾದ್ಯಂತದ ಜನರಿಗೆ ಸರಳವಾಗಿ ನೀಡುತ್ತೇನೆ.
ಸ್ನೇಹಿತರೆ,
ಉತ್ಪಾದನಾ ಕ್ಷೇತ್ರದಲ್ಲೂ ಉತ್ತರಪ್ರದೇಶ ಹೊಸ ದಾಖಲೆಗಳನ್ನು ಮಾಡುತ್ತಿದೆ. ಉದಾಹರಣೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನಾ ವಲಯದಲ್ಲಿ, ಭಾರತವು ಕಳೆದ ದಶಕದಲ್ಲಿ ವಿಶ್ವದ 2ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಇದರಲ್ಲಿ ಉತ್ತರ ಪ್ರದೇಶವು ಮಹತ್ವದ ಪಾತ್ರ ವಹಿಸುತ್ತಿದೆ. ಇಂದು ಭಾರತದಲ್ಲಿ ತಯಾರಾಗುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ, ಸುಮಾರು 55 ಪ್ರತಿಶತವನ್ನು ಇಲ್ಲಿ ಉತ್ತರ ಪ್ರದೇಶದಲ್ಲಿ ತಯಾರಿಸಲಾಗುತ್ತಿದೆ. ಉತ್ತರ ಪ್ರದೇಶವು ಈಗ ಸೆಮಿಕಂಡಕ್ಟರ್ ವಲಯದಲ್ಲಿಯೂ ಭಾರತದ ಸ್ವಾವಲಂಬನೆಯನ್ನು ಬಲಪಡಿಸುತ್ತದೆ. ಕೆಲವೇ ಕಿಲೋಮೀಟರ್ ದೂರದಲ್ಲಿರುವ ದೊಡ್ಡ ಸೆಮಿಕಂಡಕ್ಟರ್ ಸೌಲಭ್ಯದ ಕೆಲಸ ಪ್ರಾರಂಭವಾಗಲಿದೆ.
ಸ್ನೇಹಿತರೆ,
ಇನ್ನೊಂದು ರಕ್ಷಣಾ ವಲಯದ ಉದಾಹರಣೆ ನೀಡುತ್ತೇನೆ. ನಮ್ಮ ಪಡೆಗಳು ಸ್ವದೇಶಿಯನ್ನು ಬಯಸುತ್ತಿವೆ, ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಲು ಬಯಸುತ್ತಿವೆ. ಆದ್ದರಿಂದ, ನಾವು ಭಾರತದಲ್ಲೇ ಒಂದು ರೋಮಾಂಚಕ ರಕ್ಷಣಾ ವಲಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಪ್ರತಿಯೊಂದು ಬಿಡಿಭಾಗವು "ಭಾರತದಲ್ಲಿ ತಯಾರಿಸಲ್ಪಟ್ಟಿದೆ" ಎಂಬ ಲೇಬಲ್ ಹೊಂದಿರುವ ಪರಿಸರ ವ್ಯವಸ್ಥೆಯನ್ನು ನಾವು ರೂಪಿಸುತ್ತಿದ್ದೇವೆ. ಉತ್ತರ ಪ್ರದೇಶವು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಶೀಘ್ರದಲ್ಲೇ, ರಷ್ಯಾದ ಸಹಯೋಗದೊಂದಿಗೆ ನಿರ್ಮಿಸಲಾದ ಕಾರ್ಖಾನೆಯಿಂದ ಎಕೆ 203 ರೈಫಲ್‌ಗಳ ಉತ್ಪಾದನೆ ಪ್ರಾರಂಭವಾಗಲಿದೆ. ಉತ್ತರಪ್ರದೇಶದಲ್ಲಿ ರಕ್ಷಣಾ ಕಾರಿಡಾರ್ ಸಹ ನಿರ್ಮಿಸಲಾಗುತ್ತಿದೆ. ಇದರಲ್ಲಿ ಬ್ರಹ್ಮೋಸ್ ಕ್ಷಿಪಣಿಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳ ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ. ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ, ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ, ಇಲ್ಲೇ ತಯಾರಿಸಿ. ಇಲ್ಲಿ ಲಕ್ಷಾಂತರ ಎಂಎಸ್ಎಂಇಗಳ ಬಲವಾದ ಜಾಲವಿದೆ, ಅದು ನಿರಂತರವಾಗಿ ಬೆಳೆಯುತ್ತಿದೆ. ಅವುಗಳ ಸಾಮರ್ಥ್ಯವನ್ನು ಬಳಸಿಕೊಳ್ಳಿ, ಇಲ್ಲೇ ಸಂಪೂರ್ಣ ಉತ್ಪನ್ನಗಳನ್ನು ತಯಾರಿಸಿ. ಉತ್ತರ ಪ್ರದೇಶ ಸರ್ಕಾರ ಮತ್ತು ಭಾರತ ಸರ್ಕಾರವು ನಿಮ್ಮೊಂದಿಗಿದ್ದು, ಇದಕ್ಕೆ ಎಲ್ಲಾ ಬೆಂಬಲವನ್ನು ನೀಡುತ್ತವೆ.
ಸ್ನೇಹಿತರೆ,
ಇಂದು ಭಾರತವು ತನ್ನ ಉದ್ಯಮ, ವ್ಯಾಪಾರಿಗಳು, ನಾಗರಿಕರೊಂದಿಗೆ ಸುಧಾರಣೆ, ಕಾರ್ಯಕ್ಷಮತೆ, ಪರಿವರ್ತನೆಯ ಬದ್ಧತೆಯೊಂದಿಗೆ ನಿಂತಿದೆ. ಕೇವಲ 3 ದಿನಗಳ ಹಿಂದೆ, ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಈ ಜಿಎಸ್ಟಿ ಬದಲಾವಣೆಗಳು ಭಾರತದ ಬೆಳವಣಿಗೆಯ ಯಶೋಗಾಥೆಗೆ ಹೊಸ ರೆಕ್ಕೆಪುಕ್ಕ ನೀಡುವ ರಚನಾತ್ಮಕ ಸುಧಾರಣೆಗಳಾಗಿವೆ. ಈ ಸುಧಾರಣೆಗಳು ಜಿಎಸ್ಟಿ ನೋಂದಣಿಯನ್ನು ಸರಳಗೊಳಿಸುತ್ತದೆ, ತೆರಿಗೆ ವಿವಾದಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಂಎಸ್ಎಂಇಗಳಿಗೆ ಮರುಪಾವತಿಯನ್ನು ತ್ವರಿತಗೊಳಿಸುತ್ತದೆ. ಪ್ರತಿಯೊಂದು ವಲಯವು ಇದರಿಂದ ಪ್ರಯೋಜನ ಪಡೆಯುತ್ತದೆ. ನೀವೆಲ್ಲರೂ 3 ಸಂದರ್ಭಗಳನ್ನು ಅನುಭವಿಸಿದ್ದೀರಿ: ಜಿಎಸ್ಟಿಗಿಂತ ಮೊದಲು, ಜಿಎಸ್ಟಿ ನಂತರ, ಮತ್ತು ಈಗ 3ನೇ ಹಂತವಾಗಿ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು. ಕೆಲವು ಉದಾಹರಣೆಗಳ ಮೂಲಕ ಎಷ್ಟು ದೊಡ್ಡ ವ್ಯತ್ಯಾಸ ಬಂದಿದೆ ಎಂಬುದನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು 2014ಕ್ಕಿಂತ ಮೊದಲು, ಅಂದರೆ, ನೀವು ನನಗೆ ಜವಾಬ್ದಾರಿ ನೀಡುವ ಮೊದಲಿನ ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದ್ದೇನೆ. 2014ಕ್ಕಿಂತ ಮೊದಲು, ಹಲವು ತೆರಿಗೆಗಳು, ಒಂದು ರೀತಿಯ ತೆರಿಗೆ ಗೋಜಲು ಇದ್ದವು. ಅದರಿಂದಾಗಿ, ವ್ಯಾಪಾರ ವೆಚ್ಚಗಳು ಮತ್ತು ಕುಟುಂಬ ಬಜೆಟ್‌ಗಳು ಎಂದಿಗೂ ಸಮತೋಲನದಲ್ಲಿರಲಿಲ್ಲ; ಅವುಗಳನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು. 1,000 ರೂ. ಮೌಲ್ಯದ ಶರ್ಟ್ ಬಗ್ಗೆ, ನಾನು 2014ಕ್ಕಿಂತ ಮೊದಲಿನ ದರದ ಬಗ್ಗೆ ಮಾತನಾಡುತ್ತಿದ್ದೇನೆ, ನಿಮ್ಮ ಬಳಿ ಹಳೆಯ ಬಿಲ್ ಇದ್ದರೆ ಅದನ್ನು ಹೊರತೆಗೆಯಿರಿ, 2014ಕ್ಕಿಂತ ಮೊದಲು, 1000 ರೂ. ಮೌಲ್ಯದ ಶರ್ಟ್‌ಗೆ 170 ರೂ. ತೆರಿಗೆ ವಿಧಿಸಲಾಗುತ್ತಿತ್ತು. 2017ರಲ್ಲಿ ನಾವು ಜಿಎಸ್ಟಿ ಪರಿಚಯಿಸಿದಾಗ, ಜಿಎಸ್ಟಿ ದರವನ್ನು 170 ರೂ.ಗಳಿಂದ 50 ರೂ.ಗೆ ಇಳಿಸಲಾಯಿತು. ಅಂದರೆ, ಮೊದಲು 1000 ರೂ. ಮೌಲ್ಯದ ಶರ್ಟ್ ಮೇಲಿನ ತೆರಿಗೆ 170 ರೂ. ಇತ್ತು, 2017ರಲ್ಲಿ ನಾವು ಜಿಎಸ್ಟಿ ಪರಿಚಯಿಸಿದಾಗ ಅದು 50 ರೂ.ಗೆ ತಲುಪಿತು. ಈಗ ಸೆಪ್ಟೆಂಬರ್ 22ರಂದು ಜಾರಿಗೆ ಬಂದ ದರಗಳ ನಂತರ, 1000 ರೂ. ಮೌಲ್ಯದ ಅದೇ ಶರ್ಟ್ ಮೇಲೆ ಕೇವಲ 35 ರೂ. ತೆರಿಗೆ ಪಾವತಿಸಬೇಕಾಗುತ್ತದೆ.
ಸ್ನೇಹಿತರೆ,
2014ರಲ್ಲಿ, ಯಾರಾದರೂ ಟೂತ್‌ಪೇಸ್ಟ್, ಶಾಂಪೂ, ಹೇರ್ ಆಯಿಲ್, ಶೇವಿಂಗ್ ಕ್ರೀಮ್ ಇತ್ಯಾದಿಗಳಿಗೆ 100 ರೂಪಾಯಿ ಖರ್ಚು ಮಾಡಿದ್ದರೆ, ಅವರು 100 ರೂಪಾಯಿಗೆ 31 ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು. ಇದರರ್ಥ 100 ರೂಪಾಯಿ ಬಿಲ್ 131 ರೂಪಾಯಿ ಬರುತ್ತಿತ್ತು. ನಾನು 2014ರ ಹಿಂದಿನ ಅವಧಿಯ ಬಗ್ಗೆ ಮಾತನಾಡುತ್ತಿದ್ದೇನೆ. 2017ರಲ್ಲಿ ಜಿಎಸ್‌ಟಿ ಪರಿಚಯಿಸಿದಾಗ, 100 ರೂಪಾಯಿ ಬೆಲೆಯ ಅದೇ ವಸ್ತು 118 ರೂಪಾಯಿಗೆ ತಗ್ಗಿತು, ಅಂದರೆ 131 ರೂಪಾಯಿಯಿಂದ 118 ರೂಪಾಯಿಗೆ ತಗ್ಗಿತು. ಇದರರ್ಥ ಪ್ರತಿ 100 ರೂಪಾಯಿ ಬಿಲ್‌ನಲ್ಲಿ 13 ರೂಪಾಯಿಗಳ ನೇರ ಉಳಿತಾಯ. ಈಗ, ಮುಂದಿನ ಪೀಳಿಗೆಯ ಜಿಎಸ್‌ಟಿಯಲ್ಲಿ, ಅಂದರೆ ಈ ಬಾರಿ ನಡೆದಿರುವ ಜಿಎಸ್‌ಟಿ ಸುಧಾರಣೆಯಲ್ಲಿ, ಈ ವಸ್ತುಗಳ ಬೆಲೆ 100 ರೂ.ಗೆ 5 ರೂ. ತೆರಿಗೆ ಸೇರಿ, 105 ರೂ. ಆಗಿದೆ. 131 ರೂ.ನಿಂದ 105 ರೂ.ಗೆ ಇಳಿದಿದೆ. ಇದರರ್ಥ 2014ಕ್ಕಿಂತ ಮೊದಲು ಇದ್ದ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ, ಸಾಮಾನ್ಯ ನಾಗರಿಕನಿಗೆ ಪ್ರತಿ 100 ರೂ.ಗೆ 26 ರೂ. ನೇರ ಉಳಿತಾಯವಾಗುತ್ತಿದೆ. ಈ ಉದಾಹರಣೆಯಿಂದ ನೀವು ಸರಾಸರಿ ಕುಟುಂಬವು ಪ್ರತಿ ತಿಂಗಳು ಎಷ್ಟು ಉಳಿತಾಯ ಮಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಒಂದು ಕುಟುಂಬವು 2014ರಲ್ಲಿ 1 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದೆ ಎಂದು ಭಾವಿಸಿ, ಅವರು ತಮ್ಮ ಯಾವುದೇ ಅಗತ್ಯಗಳಿಗಾಗಿ ತಮ್ಮ ವಾರ್ಷಿಕ ವೆಚ್ಚಗಳನ್ನು ಲೆಕ್ಕ ಹಾಕಿದರೆ, 2014ಕ್ಕಿಂತ ಮೊದಲು ಸುಮಾರು 1 ಲಕ್ಷ ರೂ. ಮೌಲ್ಯದ ಖರೀದಿಗಳನ್ನು ಮಾಡಿದ್ದರೆ, ಅವರು ಸುಮಾರು 25,000 ರೂ. ತೆರಿಗೆ ಪಾವತಿಸಬೇಕಾಗಿತ್ತು. ಒಂದು ವರ್ಷದಲ್ಲಿ ಅವರು 1 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರೆ, ನಾನು ಅಧಿಕಾರಕ್ಕೆ ಬರುವ ಮೊದಲು 2014ಕ್ಕಿಂತ ಮೊದಲು ತೆರಿಗೆ 25,000 ರೂ. ಇತ್ತು. ಆದರೆ ಈಗ ಮುಂದಿನ ಪೀಳಿಗೆಯ ಜಿಎಸ್‌ಟಿ ನಂತರ, ಒಂದೇ ಕುಟುಂಬದ ವಾರ್ಷಿಕ ತೆರಿಗೆ ಕೇವಲ 25,000 ರೂ.ಗಳಿಂದ ಸುಮಾರು 5,000-6,000 ರೂ.ಗೆ ಇಳಿದಿದೆ. 25000 ರೂ.ನಿಂದ ಕೇವಲ 5000 ರೂ.ಗೆ ಇಳಿದಿದೆ. ಏಕೆಂದರೆ ಈಗ ಹೆಚ್ಚಿನ ಅಗತ್ಯ ವಸ್ತುಗಳ ಮೇಲೆ ಕೇವಲ 5 ಪ್ರತಿಶತದಷ್ಟು ಜಿಎಸ್‌ಟಿ ಇದೆ.
ಸ್ನೇಹಿತರೆ,
ನಮ್ಮ ಗ್ರಾಮೀಣ ಆರ್ಥಿಕತೆಯಲ್ಲಿ ಟ್ರ್ಯಾಕ್ಟರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. 2014ರ ಮೊದಲು, ಟ್ರ್ಯಾಕ್ಟರ್ ಖರೀದಿಸಲು ಒಬ್ಬರು 70,000 ರೂಪಾಯಿಗಿಂತ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿತ್ತು. ಇದು 2014ರ ಮೊದಲು 70 ಸಾವಿರ ರೂಪಾಯಿಗಳಷ್ಟಿತ್ತು, ಈಗ ಅದೇ ಟ್ರ್ಯಾಕ್ಟರ್‌ಗೆ ಕೇವಲ 30 ಸಾವಿರ ರೂಪಾಯಿ ತೆರಿಗೆ ವಿಧಿಸಲಾಗುತ್ತಿದೆ. ಇದರರ್ಥ ರೈತರು ಒಂದು ಟ್ರ್ಯಾಕ್ಟರ್‌ನಲ್ಲಿ ನೇರವಾಗಿ 40 ಸಾವಿರ ರೂಪಾಯಿಗಿಂತ ಹೆಚ್ಚು ಉಳಿತಾಯ ಮಾಡುತ್ತಿದ್ದಾರೆ. ಅದೇ ರೀತಿ, ತ್ರಿಚಕ್ರ ವಾಹನಗಳು ಬಡವರಿಗೆ ಉದ್ಯೋಗದ ಪ್ರಮುಖ ಮೂಲವಾಗಿದೆ. 2014ರ ಮೊದಲು, ತ್ರಿಚಕ್ರ ವಾಹನದ ಮೇಲೆ ಸುಮಾರು 55 ಸಾವಿರ ರೂಪಾಯಿ ತೆರಿಗೆ ವಿಧಿಸಲಾಗುತ್ತಿತ್ತು, ಈಗ ಅದೇ ತ್ರಿಚಕ್ರ ವಾಹನದ ಮೇಲಿನ ಜಿಎಸ್‌ಟಿ ಸುಮಾರು 35 ಸಾವಿರಕ್ಕೆ ಇಳಿದಿದೆ, ಅಂದರೆ 20 ಸಾವಿರ ರೂಪಾಯಿ ನೇರ ಉಳಿತಾಯವಾಗಿದೆ. ಅದೇ ರೀತಿ, ಜಿಎಸ್‌ಟಿ ಕಡಿಮೆಯಾದ ಕಾರಣ, 2014ಕ್ಕೆ ಹೋಲಿಸಿದರೆ ಸ್ಕೂಟರ್‌ಗಳು ಸುಮಾರು 8,000 ರೂಪಾಯಿ ಮತ್ತು ಮೋಟಾರ್‌ಸೈಕಲ್‌ಗಳು ಸುಮಾರು 9,000 ರೂಪಾಯಿ ಅಗ್ಗವಾಗಿವೆ. ಇದರರ್ಥ ಬಡವರು, ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದವರಿಂದ ಹಿಡಿದು ಎಲ್ಲರಿಗೂ ಉಳಿತಾಯವಾಗಿದೆ.
ಆದರೆ ಸ್ನೇಹಿತರೆ,
ಇದರ ಹೊರತಾಗಿಯೂ, ಕೆಲವು ರಾಜಕೀಯ ಪಕ್ಷಗಳು ದೇಶದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 2014ರ ಮೊದಲು ಅವರು ನಡೆಸಿದ್ದ ಸರ್ಕಾರದ ವೈಫಲ್ಯಗಳನ್ನು ಮರೆಮಾಡಲು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿವೆ. ಸತ್ಯವೆಂದರೆ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ, ತೆರಿಗೆ ವಂಚನೆ ವ್ಯಾಪಕವಾಗಿತ್ತು, ಲೂಟಿ ಮಾಡಿದ ಹಣವನ್ನು ಸಹ ಲೂಟಿ ಮಾಡಲಾಯಿತು. ದೇಶದ ಸಾಮಾನ್ಯ ನಾಗರಿಕನು ತೆರಿಗೆಯ ಹೊರೆಯಿಂದ ಬಳಲುತ್ತಿದ್ದ. ನಮ್ಮ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ತೆರಿಗೆಗಳನ್ನು ಕಡಿಮೆ ಮಾಡಿದೆ, ಹಣದುಬ್ಬರವನ್ನು ಸಹ ಕಡಿಮೆ ಮಾಡಿದೆ. ನಾವು ಈ ದೇಶದ ಜನರ ಆದಾಯ ಹೆಚ್ಚಿಸಿದ್ದೇವೆ, ಅವರ ಉಳಿತಾಯವನ್ನೂ ಹೆಚ್ಚಿಸಿದ್ದೇವೆ. 2014ರಲ್ಲಿ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ, 2 ಲಕ್ಷ ರೂ.ವರೆಗಿನ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ಇತ್ತು, ಅದು ಕೇವಲ 2 ಲಕ್ಷ ರೂ.ಗಳು. ಇಂದು 12 ಲಕ್ಷ ರೂ.ಗಳ ಆದಾಯವನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ಮತ್ತು ಹೊಸ ಜಿಎಸ್ಟಿ ಸುಧಾರಣೆಯ ಮೂಲಕ, ದೇಶದ ಜನರು ಈ ವರ್ಷ 2.5 ಲಕ್ಷ ಕೋಟಿ ರೂ. ಉಳಿಸಲಿದ್ದಾರೆ. ದೇಶವಾಸಿಗಳ ಜೇಬಿನಲ್ಲಿ 2.5 ಲಕ್ಷ ಕೋಟಿ ರೂ. ಉಳಿಸಲಾಗುವುದು. ಅದಕ್ಕಾಗಿಯೇ ದೇಶವು ಇಂದು ಜಿಎಸ್ಟಿಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಜಿಎಸ್ಟಿ ಉಳಿತಾಯ ಹಬ್ಬವನ್ನು ಆಚರಿಸಲಾಗುತ್ತಿದೆ. ನಾವು ಇಲ್ಲಿಗೆ ನಿಲ್ಲುವುದಿಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. 2017ರಲ್ಲಿ ನಾವು ಆರ್ಥಿಕತೆ ಬಲಪಡಿಸಲು ಕೆಲಸ ಮಾಡುವ ಮೂಲಕ ಜಿಎಸ್ಟಿ ಪರಿಚಯಿಸಿದ್ದೇವೆ. 2025ರಲ್ಲಿ ಅದನ್ನು ಮತ್ತೆ ತಂದಿದ್ದೇವೆ, ನಂತರ ನಾವು ಆರ್ಥಿಕತೆಯನ್ನು ಬಲಪಡಿಸಿದ್ದೇವೆ. ಆರ್ಥಿಕತೆಯು ಬಲಗೊಂಡಂತೆ, ತೆರಿಗೆ ಹೊರೆ ಕಡಿಮೆಯಾಗುತ್ತದೆ. ನಮ್ಮ ದೇಶವಾಸಿಗಳ ಆಶೀರ್ವಾದದೊಂದಿಗೆ, ಜಿಎಸ್ಟಿ ಸುಧಾರಣೆಗಳ ಪ್ರಕ್ರಿಯೆ ಮುಂದುವರಿಯುತ್ತದೆ.
ಸ್ನೇಹಿತರೆ,
ಇಂದು ಭಾರತವು ಸುಧಾರಣೆಗಳಿಗೆ ಬಲವಾದ ಇಚ್ಛಾಶಕ್ತಿ ಹೊಂದಿದೆ, ನಮ್ಮಲ್ಲಿ ಪ್ರಜಾಪ್ರಭುತ್ವ ಮತ್ತು ರಾಜಕೀಯ ಸ್ಥಿರತೆ ಮತ್ತು ನೀತಿ ಮುನ್ಸೂಚನೆಯೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಭಾರತವು ಬಹಳ ದೊಡ್ಡ ಯುವ ಮತ್ತು ಕೌಶಲ್ಯಪೂರ್ಣ ಕಾರ್ಯಪಡೆ ಮತ್ತು ಕ್ರಿಯಾತ್ಮಕ ಯುವ ಗ್ರಾಹಕ ನೆಲೆಯನ್ನು ಹೊಂದಿದೆ. ಈ ಎಲ್ಲಾ ವಿಷಯಗಳು ಪ್ರಪಂಚದ ಯಾವುದೇ ಪ್ರದೇಶದಲ್ಲಿ, ಅಂದರೆ, ಒಂದೇ ಸ್ಥಳದಲ್ಲಿ, ವಿಶ್ವದ ಯಾವುದೇ ದೇಶದಲ್ಲಿ ಒಟ್ಟಿಗೆ ಇಲ್ಲ. ಭಾರತವು ಎಲ್ಲವನ್ನೂ ಹೊಂದಿದೆ. ತಮ್ಮ ಬೆಳವಣಿಗೆಯನ್ನು ವೇಗಗೊಳಿಸಲು ಬಯಸುವ ವಿಶ್ವದ ಯಾವುದೇ ಹೂಡಿಕೆದಾರರು ಅಥವಾ ಕಂಪನಿಗೆ, ಭಾರತದಲ್ಲಿ ಹೂಡಿಕೆ ಮಾಡುವುದು ಅತ್ಯಂತ ಆಕರ್ಷಕ ಆಯ್ಕೆಯಾಗಿದೆ. ಆದ್ದರಿಂದ, ಭಾರತದಲ್ಲಿ, ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವುದು ನಿಮಗೆ ಗೆಲುವು-ಗೆಲುವಿನ ಸನ್ನಿವೇಶವಾಗಿದೆ. ನಮ್ಮ ಪ್ರಯತ್ನಗಳು ಒಟ್ಟಾಗಿ ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶವನ್ನು ನಿರ್ಮಿಸುತ್ತವೆ. ಮತ್ತೊಮ್ಮೆ, ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನಕ್ಕಾಗಿ ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ. ತುಂಬು ಧನ್ಯವಾದಗಳು.
*****
(Release ID: 2171565)
Visitor Counter : 5
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Telugu