ಸಂಪುಟ
azadi ka amrit mahotsav

2277.397 ಕೋಟಿ ರೂ. ವೆಚ್ಚದ ಡಿ ಎಸ್ ಐ ಆರ್ ನ "ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ" ಯೋಜನೆಗೆ ಸಂಪುಟದ ಅನುಮೋದನೆ

Posted On: 24 SEP 2025 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ, ಹದಿನೈದನೇ ಹಣಕಾಸು ಆಯೋಗದ 2021-22 ರಿಂದ 2025-26 ರವರೆಗಿನ ಆವರ್ತನ ಅವಧಿಗೆ ಒಟ್ಟು 2277.397 ಕೋಟಿ ರೂ.ಗಳ "ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ" ಕುರಿತ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ/ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಡಿ ಎಸ್ ಐ ಆರ್ / ಸಿ ಎಸ್ ಐ ಆರ್ ) ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಯನ್ನು ಸಿ ಎಸ್ ಐ ಆರ್ ಜಾರಿಗೆ ತರುತ್ತಿದ್ದು, ದೇಶಾದ್ಯಂತದ ಎಲ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ರಾಷ್ಟ್ರೀಯ ಪ್ರಯೋಗಾಲಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು, ಶ್ರೇಷ್ಠತಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಇದು ಒಳಗೊಳ್ಳುತ್ತದೆ. ಈ ಉಪಕ್ರಮವು ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು, ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಯುವ, ಉತ್ಸಾಹಿ ಸಂಶೋಧಕರಿಗೆ ವಿಶಾಲ ವೇದಿಕೆಯನ್ನು ಒದಗಿಸುತ್ತದೆ. ಪ್ರಖ್ಯಾತ ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ, ಈ ಯೋಜನೆಯು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧ ಮತ್ತು ಗಣಿತ ವಿಜ್ಞಾನಗಳ (STEMM) ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಸಂಶೋಧಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ ಡಿ ಜಿ) ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲಗಳ ಗುಂಪನ್ನು ವಿಸ್ತರಿಸುವ ಮೂಲಕ ಈ ಯೋಜನೆಯು ತನ್ನ ಪ್ರಸ್ತುತತೆಯನ್ನು ಸಾಬೀತುಪಡಿಸಿದೆ.

ಕಳೆದ ದಶಕದಲ್ಲಿ ಭಾರತ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಯಲ್ಲಿ ನಡೆಸಿದ ಸಂಘಟಿತ ಪ್ರಯತ್ನಗಳ ಪರಿಣಾಮವಾಗಿ, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಶ್ರೇಯಾಂಕದ ಪ್ರಕಾರ, ಭಾರತವು 2024 ರಲ್ಲಿ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (ಜಿಐಐ) ತನ್ನ ಸ್ಥಾನವನ್ನು 39 ನೇ ಸ್ಥಾನಕ್ಕೆ ಹೆಚ್ಚಿಸಿಕೊಂಡಿದೆ. ಇದು ಭಾರತದ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿಸಲಿದೆ. ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡಿದ ಬೆಂಬಲದ ಪರಿಣಾಮವಾಗಿ, ಅಮೆರಿಕದ ಎನ್ ಎಸ್ ಎಫ್ ದತ್ತಾಂಶದ ಪ್ರಕಾರ ವೈಜ್ಞಾನಿಕ ಪ್ರಬಂಧ ಪ್ರಕಟಣೆಗಳ ವಿಷಯದಲ್ಲಿ ಭಾರತವು ಈಗ ಅಗ್ರ ಮೂರು ಸ್ಥಾನಗಳಲ್ಲಿದೆ. ಡಿ ಎಸ್ ಐ ಆರ್ಯೋಜನೆಯು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನೆಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡಿದ ಸಾವಿರಾರು ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಬೆಂಬಲ ನೀಡುತ್ತಿದೆ.

ಈ ಅನುಮೋದನೆಯು ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಗೆ ಸಿ ಎಸ್ ಐ ಆರ್ ನ 84 ವರ್ಷಗಳ ಸೇವೆಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ, ಸಮೂಹ ಯೋಜನೆಯ ಅನುಷ್ಠಾನದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯಲ್ಲಿ ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಗತಿಯನ್ನು ವೇಗಗೊಳಿಸುತ್ತದೆ. ಸಿ ಎಸ್ ಐ ಆರ್ ನ "ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ (ಸಿ ಬಿ ಎಚ್ ಆರ್ ಡಿ)" ಸಮೂಹ ಯೋಜನೆಯು ನಾಲ್ಕು ಉಪ-ಯೋಜನೆಗಳನ್ನು ಒಳಗೊಂಡಿದೆ, ಅವುಗಳೆಂದರೆ (i) ಡಾಕ್ಟರಲ್ ಮತ್ತು ಪೋಸ್ಟ್ಡಾಕ್ಟರಲ್ ಫೆಲೋಶಿಪ್ ಗಳು (ii) ಎಕ್ಸ್ಟ್ರಾಮುರಲ್ ರಿಸರ್ಚ್ ಸ್ಕೀಮ್, ಎಮೆರಿಟಸ್ ಸೈಂಟಿಸ್ಟ್ ಸ್ಕೀಮ್ ಮತ್ತು ಭಟ್ನಾಗರ್ ಫೆಲೋಶಿಪ್ ಪ್ರೋಗ್ರಾಂ; (iii) ಪ್ರಶಸ್ತಿ ಯೋಜನೆಯ ಮೂಲಕ ಶ್ರೇಷ್ಠತೆಯ ಉತ್ತೇಜನ ಮತ್ತು ಗುರುತಿಸುವಿಕೆ; ಮತ್ತು (iv) ಪ್ರಯಾಣ ಮತ್ತು ವಿಚಾರಸಂಕಿರಣ ಅನುದಾನ ಯೋಜನೆಯ ಮೂಲಕ ಜ್ಞಾನ ಹಂಚಿಕೆಯನ್ನು ಉತ್ತೇಜಿಸುವುದು.

ಈ ಉಪಕ್ರಮವು ಬಲವಾದ ಸಂಶೋಧನೆ ಮತ್ತು ಅಭಿವೃದ್ಧಿ ಆಧಾರಿತ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು 21ನೇ ಶತಮಾನದಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ವಿಜ್ಞಾನವನ್ನು ಸಿದ್ಧಪಡಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(Release ID: 2170754) Visitor Counter : 17