ಸಂಸ್ಕೃತಿ ಸಚಿವಾಲಯ
azadi ka amrit mahotsav

ʻಯುನೆಸ್ಕೋʼದ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಭಾರತದ ಏಳು ನೈಸರ್ಗಿಕ ಪಾರಂಪರಿಕ ತಾಣಗಳ ಸೇರ್ಪಡೆ

Posted On: 18 SEP 2025 4:48PM by PIB Bengaluru

ನವದೆಹಲಿ: ಭಾರತವು ತನ್ನ ಶ್ರೀಮಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ಅದನ್ನು ಪ್ರದರ್ಶಿಸುವಲ್ಲಿ ಗಮನಾರ್ಹ ದಾಪುಗಾಲು ಇಡುತ್ತಿದೆ. ಇಡೀ ರಾಷ್ಟ್ರವು ಹೆಮ್ಮೆಪಡುವ ಬೆಳವಣಿಗೆಯಲ್ಲಿ, ದೇಶದ ಏಳು ಪ್ರಮುಖ ನೈಸರ್ಗಿಕ ಪಾರಂಪರಿಕ ತಾಣಗಳನ್ನು ʻಯುನೆಸ್ಕೋದ ವಿಶ್ವ ಪಾರಂಪರಿಕ ತಾಣʼಗಳ ತಾತ್ಕಾಲಿಕ ಪಟ್ಟಿಯಲ್ಲಿ ಯಶಸ್ವಿಯಾಗಿ ಸೇರಿಸಲಾಗಿದೆ. ಇದರೊಂದಿಗೆ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ತಾಣಗಳ ಸಂಖ್ಯೆಯು 62 ರಿಂದ 69 ಕ್ಕೆ ಏರಿದೆ.

ಈ ಸೇರ್ಪಡೆಯೊಂದಿಗೆ, ಭಾರತವು ಈಗ ʻಯುನೆಸ್ಕೋʼದ ಪರಿಗಣನೆಯಲ್ಲಿರುವ ಒಟ್ಟು 69 ತಾಣಗಳನ್ನು ಹೊಂದಿದೆ, ಇದರಲ್ಲಿ 49 ಸಾಂಸ್ಕೃತಿಕ, 17 ನೈಸರ್ಗಿಕ ಮತ್ತು 3 ಮಿಶ್ರ ಪಾರಂಪರಿಕ ಆಸ್ತಿಗಳು ಸೇರಿವೆ. ಈ ಸಾಧನೆಯು ತನ್ನ ಅಸಾಧಾರಣ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ʻಯುನೆಸ್ಕೋʼದ ಶಿಷ್ಟಾಚಾರದ ಪ್ರಕಾರ, ಪ್ರತಿಷ್ಠಿತ ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನಗೊಳ್ಳಲು ಯಾವುದೇ ತಾಣವನ್ನು ತಾತ್ಕಾಲಿಕ ಪಟ್ಟಿಗೆ ಸೇರಿಸುವುದು ಪೂರ್ವಾಪೇಕ್ಷಿತವಾಗಿದೆ.

ಹೊಸದಾಗಿ ಸೇರಿಸಲಾದ ತಾಣಗಳ ವಿವರಗಳು:

  1. ಮಹಾರಾಷ್ಟ್ರದ ಪಂಚಗಣಿ ಮತ್ತು ಮಹಾಬಲೇಶ್ವರದಲ್ಲಿ ಡೆಕ್ಕನ್ ಟ್ರ್ಯಾಪ್‌ಗಳು: ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಮತ್ತು ಅಧ್ಯಯನಕ್ಕೆ ಒಳಪಡಿಸಲಾದ ವಿಶ್ವದ ಕೆಲವೇ ಲಾವಾ ಹರಿವುಗಳಿಗೆ ನೆಲೆಯಾಗಿರುವ ಈ ತಾಣವು ಬೃಹತ್ ʻಡೆಕ್ಕನ್ ಟ್ರ್ಯಾಪ್‌ʼಗಳ ಭಾಗವಾಗಿದೆ ಮತ್ತು ಈಗಾಗಲೇ ʻಯುನೆಸ್ಕೋʼ ವಿಶ್ವ ಪಾರಂಪರಿಕ ತಾಣವಾದ ಕೊಯ್ನಾ ವನ್ಯಜೀವಿ ಅಭಯಾರಣ್ಯದೊಳಗೆ ಇದು ನೆಲೆಗೊಂಡಿದೆ.
  2. ಸೇಂಟ್ ಮೇರಿಸ್ ದ್ವೀಪ ಸಮೂಹದ ಭೂವೈಜ್ಞಾನಿಕ ಪರಂಪರೆ, ಕರ್ನಾಟಕ: ಅಪರೂಪದ ಲಂಬವಾದ ಬಸಾಲ್ಟಿಕ್ ಬಂಡೆಗಳ ರಚನೆಗಳಿಗೆ ಹೆಸರುವಾಸಿಯಾದ ಈ ದ್ವೀಪ ಸಮೂಹವು ಕ್ರೆಟೇಷಿಯಸ್ ಅವಧಿಯದ್ದಾಗಿದೆ, ಇದು ಸುಮಾರು 85 ದಶಲಕ್ಷ ವರ್ಷಗಳ ಹಿಂದಿನ ಭೂವೈಜ್ಞಾನಿಕ ಚಿತ್ರಣವನ್ನು ನೀಡುತ್ತದೆ.
  3. ಮೇಘಾಲಯನ್‌ ಯುಗದ ಗುಹೆಗಳು, ಮೇಘಾಲಯ: ಮೇಘಾಲಯದ ಬೆರಗುಗೊಳಿಸುವ ಗುಹೆ ವ್ಯವಸ್ಥೆಗಳು, ವಿಶೇಷವಾಗಿ ಮಾವ್ಲುಹ್ ಗುಹೆಯು ʻಹೊಲೊಸೀನ್ ಯುಗʼದಲ್ಲಿ ಮೇಘಾಲಯನ್‌ ಯುಗದ ಜಾಗತಿಕ ಉಲ್ಲೇಖವಾಗಿ ಸ್ಥಾನ ಪಡೆದಿದೆ, ಇದು ಗಮನಾರ್ಹ ಹವಾಮಾನ ಮತ್ತು ಭೂವೈಜ್ಞಾನಿಕ ಪರಿವರ್ತನೆಗಳನ್ನು ಪ್ರತಿಬಿಂಬಿಸುತ್ತದೆ.
  4. ನಾಗಾ ಹಿಲ್ ಒಫಿಯೋಲೈಟ್, ನಾಗಾಲ್ಯಾಂಡ್: ಒಫಿಯೋಲೈಟ್ ಬಂಡೆಗಳ ಅಪರೂಪದ ಮಾನ್ಯತೆಯನ್ನು ಪಡೆದಿರುವ ಈ ಬೆಟ್ಟಗಳು ಭೂಖಂಡದ ಫಲಕಗಳ ಮೇಲೆ ಮೇಲಕ್ಕೆತ್ತಲ್ಪಟ್ಟ ಸಾಗರದ ಹೊರಪದರವನ್ನು ಪ್ರತಿನಿಧಿಸುತ್ತವೆ - ಟೆಕ್ಟೋನಿಕ್ ಪ್ರಕ್ರಿಯೆಗಳು ಮತ್ತು ಮಧ್ಯ-ಸಾಗರ ಏಣಿನ ಚಲನಶಾಸ್ತ್ರದ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸುತ್ತವೆ.
  5. ಎರ್ರ ಮಟ್ಟಿ ದಿಬ್ಬಾಲು (ಕೆಂಪು ಮಣ್ಣಿನ ಬೆಟ್ಟಗಳು), ಆಂಧ್ರಪ್ರದೇಶ: ವಿಶಾಖಪಟ್ಟಣಂ ಬಳಿಯ ಈ ದೃಗ್ಗೋಚರ ಕೆಂಪು ಮರಳಿನ ರಚನೆಗಳು ಭೂಮಿಯ ಹವಾಮಾನ ಇತಿಹಾಸ ಮತ್ತು ಕ್ರಿಯಾತ್ಮಕ ವಿಕಾಸವನ್ನು ಬಹಿರಂಗಪಡಿಸುವ ವಿಶಿಷ್ಟ ಪ್ಯಾಲಿಯೊ-ಹವಾಮಾನ ಮತ್ತು ಕರಾವಳಿ ಭೂರೂಪಶಾಸ್ತ್ರೀಯ ಲಕ್ಷಣಗಳನ್ನು ಪ್ರದರ್ಶಿಸುತ್ತವೆ.
  6. ಆಂಧ್ರಪ್ರದೇಶದ ತಿರುಮಲ ಬೆಟ್ಟಗಳ ನೈಸರ್ಗಿಕ ಪರಂಪರೆ: ʻಎಪಾರ್ಚಿಯನ್ʼ ಅಸಂಗತತೆ ಮತ್ತು ಅಪ್ರತಿಮ ʻಸಿಲಥೋರನಂʼ (ನೈಸರ್ಗಿಕ ಕಮಾನು) ಅನ್ನು ಒಳಗೊಂಡಿರುವ ಈ ತಾಣವು ಅಪಾರ ಭೌಗೋಳಿಕ ಮಹತ್ವವನ್ನು ಹೊಂದಿದೆ, ಇದು ಭೂಮಿಯ ಇತಿಹಾಸದ 1.5 ಶತಕೋಟಿ ವರ್ಷಗಳನ್ನು ಪ್ರತಿನಿಧಿಸುತ್ತದೆ.
  7. ವರ್ಕಲಾ ಬಂಡೆಗಳು, ಕೇರಳ: ಕೇರಳದ ಕರಾವಳಿಯುದ್ದಕ್ಕೂ ಇರುವ ರಮಣೀಯ ಬಂಡೆಗಳು ʻಮಿಯೋ-ಪ್ಲಿಯೋಸೀನ್ʼ ಯುಗದ ʻವರ್ಕಳ್ಳಿ ರಚನೆʼಯನ್ನು ಬಹಿರಂಗಪಡಿಸುತ್ತವೆ. ಜೊತೆಗೆ ನೈಸರ್ಗಿಕ ಬುಗ್ಗೆಗಳು ಮತ್ತು ಗಮನಾರ್ಹ ಸವೆತದ ಭೂಸ್ವರೂಪಗಳು, ವೈಜ್ಞಾನಿಕ ಮತ್ತು ಪ್ರವಾಸೋದ್ಯಮ ಮೌಲ್ಯವನ್ನು ನೀಡುತ್ತವೆ.

ಜಾಗತಿಕ ಪರಂಪರೆಗೆ ಭಾರತದ ಬದ್ಧತೆ

ಈ ತಾಣಗಳ ಸೇರ್ಪಡೆಯು ವಿಶ್ವ ಪರಂಪರೆಯ ಪಟ್ಟಿಗೆ ಭವಿಷ್ಯದ ನಾಮನಿರ್ದೇಶನಗಳತ್ತ ಮಹತ್ವದ ಹೆಜ್ಜೆಯಾಗಿದೆ ಮತ್ತು ಜಾಗತಿಕ ಸಂರಕ್ಷಣಾ ಪ್ರಯತ್ನಗಳೊಂದಿಗೆ ತನ್ನ ನೈಸರ್ಗಿಕ ಅದ್ಭುತಗಳನ್ನು ಸಂಯೋಜಿಸುವಲ್ಲಿ ಭಾರತದ ಕಾರ್ಯತಂತ್ರದ ಗಮನವನ್ನು ಸೂಚಿಸುತ್ತದೆ.

ಭಾರತದ ಪರವಾಗಿ ವಿಶ್ವ ಪರಂಪರೆಯ ಸಮಾವೇಶದ ನೋಡಲ್ ಏಜೆನ್ಸಿಯಾದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು(ಎಎಸ್ಐ) ನಾಮಪತ್ರಗಳನ್ನು ಸಂಗ್ರಹಿಸುವಲ್ಲಿ ಮತ್ತು ಸಲ್ಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ಯಾರಿಸ್‌ನ ಯುನೆಸ್ಕೋದ ಭಾರತದ ಖಾಯಂ ಪ್ರತಿನಿಧಿ ಈ ಪ್ರಯತ್ನದಲ್ಲಿ ಸಮರ್ಪಿತ ಕಾರ್ಯಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬಗ್ಗೆ ಪ್ರಾಮಾಣಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತವು ಜುಲೈ 2024ರಲ್ಲಿ ನವದೆಹಲಿಯಲ್ಲಿ ವಿಶ್ವ ಪಾರಂಪರಿಕ ಸಮಿತಿಯ 46ನೇ ಅಧಿವೇಶನವನ್ನು ಹೆಮ್ಮೆಯಿಂದ ಆಯೋಜಿಸಿತ್ತು, ಇದರಲ್ಲಿ 140ಕ್ಕೂ ಹೆಚ್ಚು ದೇಶಗಳಿಂದ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ತಜ್ಞರು ಭಾಗವಹಿಸಿದ್ದರು.

ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿರುವ ಏಳು ತಾಣಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

*****


(Release ID: 2168445)