ಕೃಷಿ ಸಚಿವಾಲಯ
azadi ka amrit mahotsav

'ರಾಷ್ಟ್ರೀಯ ಕೃಷಿ ಸಮಾವೇಶ–ಹಿಂಗಾರು ಅಭಿಯಾನ 2025'ಅನ್ನು ನವದೆಹಲಿಯಲ್ಲಿ ಉದ್ಘಾಟಿಸಿದ ಕೇಂದ್ರ ಕೃಷಿ ಸಚಿವಾಲಯ


“ರೈತರು ಮತ್ತು ವಿಜ್ಞಾನಿಗಳ ಪರಿಶ್ರಮದಿಂದ ಹಾಗೂ ಸರ್ಕಾರದ ನೀತಿಗಳಿಂದಾಗಿ ದೇಶದಲ್ಲಿ ಕೃಷಿ ಶೇ. 3.7ರಷ್ಟು ಪ್ರಗತಿ ಸಾಧಿಸುತ್ತಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ - ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್

“ದೇಶದಲ್ಲಿ ಆಹಾರಧಾನ್ಯಗಳು, ಹಣ್ಣು ಮತ್ತು ತರಕಾರಿಗಳ ಕೊರತೆ ಇಲ್ಲ; ನಾವು ಭಾರತವನ್ನು ಜಗತ್ತಿನ ಆಹಾರ ಬುಟ್ಟಿಯನ್ನಾಗಿ ಮಾಡುತ್ತೇವೆ” - ಶ್ರೀ ಚೌಹಾಣ್

“ನಕಲಿ ರಸಗೊಬ್ಬರ, ಬೀಜ ಮತ್ತು ಕೀಟನಾಶಕ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಮಾನದಂಡಗಳನ್ನು ಪೂರೈಸುವ ಜೈವಿಕ ಉತ್ತೇಜಕಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿಸಲಾಗುವುದು’’ - ಶಿವರಾಜ್ ಸಿಂಗ್

ದೇಶಾದ್ಯಂತದ ಹಿರಿಯ ಕೃಷಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್

Posted On: 15 SEP 2025 8:56PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯೋಜಿಸಿದ್ದ ಎರಡು ದಿನಗಳ ‘ರಾಷ್ಟ್ರೀಯ ಕೃಷಿ ಸಮಾವೇಶ – ಹಿಂಗಾರು ಅಭಿಯಾನ 2025’ ನವದೆಹಲಿಯ ಪುಸಾದಲ್ಲಿಂದು ಉದ್ಘಾಟನೆಗೊಂಡಿತು. ಸಮಾವೇಶದ ಘೋಷವಾಕ್ಯ ‘ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ’ ಎಂಬುದಾಗಿದ್ದು, ಕೃಷಿ ವಲಯದಲ್ಲಿ ಸಮನ್ವಯದ ಪ್ರಯತ್ನಗಳು ಮತ್ತು ಪಾಲುದಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರ ಒತ್ತಾಸೆ ಉಪಕ್ರಮದಂತೆ ಇದೇ ಮೊದಲ ಬಾರಿಗೆ ಎರಡು ದಿನಗಳ ಹಿಂಗಾರು ಸಮಾವೇಶವನ್ನು ಆಯೋಜಿಸಲಾಗಿದೆ. ಶ್ರೀ ಶಿವರಾಜ ಸಿಂಗ್ ಚೌಹಾಣ್ ಅವರು ತಮ್ಮ ಭಾಷಣದಲ್ಲಿ “ದೇಶದಲ್ಲಿ ಆಹಾರಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ಯಾವುದೇ ಕೊರತೆ ಇಲ್ಲ ಮತ್ತು ನಾವು ಭಾರತವನ್ನು ವಿಶ್ವದ ಆಹಾರಬುಟ್ಟಿಯನ್ನಾಗಿ ಮಾಡುತ್ತೇವೆ’’ ಎಂದು ಹೇಳಿದರು. ಇದೇ ವೇಳೆ ದೇಶಾದ್ಯಂತದ ಹಿರಿಯ ಕೃಷಿ ಅಧಿಕಾರಿಗಳೊಂದಿಗೆ ಕೇಂದ್ರ ಕೃಷಿ ಸಚಿವರು ಸಂವಾದ ನಡೆಸಿ, ಅವರಿಗೆ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು. 

ಮೊದಲ ದಿನದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವರು, “ದೇಶದಲ್ಲಿ ಕೃಷಿ ವಲಯ ಶೇ. 3.7ರಷ್ಟು ಪ್ರಗತಿಯನ್ನು ಸಾಧಿಸುತ್ತಿದೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಅದಕ್ಕಾಗಿ ನಮ್ಮ ರೈತರು ಮತ್ತು ವಿಜ್ಞಾನಿಗಳ ಪರಿಶ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸಲಾಗುವುದು ಮತ್ತು ಸರ್ಕಾರದ ರೈತಸ್ನೇಹಿ ನೀತಿಗಳು ಸಹ ಇದಕ್ಕೆ ಕಾರಣವಾಗಿವೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿವೆ. ಅವು ನಮ್ಮ ರಾಷ್ಟ್ರ, ನಮ್ಮ ಜನತೆ ಮತ್ತು ನಮ್ಮ ರೈತರಿಗಾಗಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ. ರೈತರ ಕಲ್ಯಾಣ ನಮಗೆ ಅಗ್ರ ಆದ್ಯತೆಯಾಗಿದ್ದು, ಅದಕ್ಕಾಗಿ ನಾವು ಸಂಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದರು. “ಭಾರತದ ಕೃಷಿ ಆಯಾಮವನ್ನು ಪರಿವರ್ತಿಸುವ ಜವಾಬ್ದಾರಿ ನಮಗೆ ದೊರೆತಿರುವುದು ನಮ್ಮ ಅದೃಷ್ಟವಾಗಿದೆ. ನಾವು ಸಾಮಾನ್ಯ ಜನರಲ್ಲ, ನಾವು ರಾಷ್ಟ್ರದ ಅರ್ಧದಷ್ಟು ಜನಸಂಖ್ಯೆಯ ಭವಿಷ್ಯವನ್ನು ರೂಪಿಸುವವರಾಗಿದ್ದೇವೆ. ನಾವು ಅತ್ಯಂತ ಬದ್ಧತೆಯಿಂದ ಕೆಲಸ ಮಾಡಬೇಕಿದೆ. ನಮ್ಮ ನಿಜವಾದ ಕಾಳಜಿ ರೈತರು ಮತ್ತು ಅವರ ಏಳಿಗೆಯಾಗಿದೆ” ಎಂದು ಹೇಳಿದರು. 

ನಕಲಿ ರಸಗೊಬ್ಬರ, ಬೀಜಗಳು ಮತ್ತು ಕೀಟನಾಶಕಗಳ ವಿಚಾರದ ಬಗ್ಗೆ ಮಾತನಾಡಿದ ಶ್ರೀ ಶಿವರಾಜ್ ಸಿಂಗ್, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಮಾನದಂಡಗಳು ಮತ್ತು ಮಾನಕಗಳನ್ನು ಪೂರೈಸುವ ಜೈವಿಕ ಉತ್ತೇಜಕಗಳು (ಸಸ್ಯ ಬೆಳವಣಿಗೆ ವರ್ಧಕಗಳು) ಮಾತ್ರ ಈಗ ಮಾರಾಟಕ್ಕೆ ಅನುಮತಿಸಲಾಗುವುದು ಎಂದು ಹೇಳಿದರು. “ನಾವು ರೈತರನ್ನು ಶೋಷಣೆ ಮಾಡಲು ಬಿಡುವುದಿಲ್ಲ. ಕೃಷಿ ವಿಸ್ತರಣೆ ಕಾರ್ಯ ಅತ್ಯಂತ ಪ್ರಮುಖವಾದುದು. ಕೇಂದ್ರ ಸರ್ಕಾರದ ಜತೆಗೂಡಿ ರಾಜ್ಯ ಕೃಷಿ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಸಂಬಂಧಿಸಿದ ಎಲ್ಲಾ ಸಂಘಟನೆಗಳು ನಿರ್ದಿಷ್ಟ ಕಾರ್ಯಕ್ರಮಗಳನ್ನು ಸಿದ್ಧಪಡಿಸಬೇಕು ಮತ್ತು ಕಾರ್ಯತಂತ್ರಗಳನ್ನು ರೂಪಿಸಬೇಕು ಹಾಗು ತಳಮಟ್ಟದಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಕೆಲಸಕ್ಕೆ ತಮ್ಮ ಮೌಲ್ಯವನ್ನು ಸೇರ್ಪಡೆ ಮಾಡಬೇಕು. ನಾವು ಕೃಷಿ ಮತ್ತು ರೈತರ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದೇವೆ. ಅದಕ್ಕಾಗಿ ನಾವು ಸಂಪೂರ್ಣ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ಅದೇ ಮನೋಭಾವದೆಡೆ ಈ ಹಿಂಗಾರು ಸಮಾವೇಶವನ್ನು ಆಯೋಜಿಸಿದ್ದು, ಇಲ್ಲಿ ರೈತರ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಚರ್ಚೆಗಳನ್ನು ಮಾಡಲಾಗುವುದು” ಎಂದು ಸಚಿವರು ಹೇಳಿದರು.  

“ಹವಾಮಾನ ಮುನ್ಸೂಚನೆಯನ್ನು ಊಹಿಸಲಾಗದು, ಹಾಗಾಗಿ ಹೆಚ್ಚು ಹೆಚ್ಚು ರೈತರು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಬೇಕು ಮತ್ತು ಅಧಿಕಾರಿಗಳು ಅದನ್ನು ಖಾತ್ರಿಪಡಿಸಲು ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಶ್ರೀ ಶಿವರಾಜ್ ಸಿಂಗ್ ಹೇಳಿದರು. “ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯನ್ನು ರೈತರಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಅಕ್ಟೋಬರ್ ನಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವನ್ನು ಕೈಗೊಳ್ಳಲಾಗುವುದು. ನಾವು ಇದೀಗ ಕೃಷಿ ಸಂಶೋಧನೆಯಲ್ಲಿ ಕೇವಲ ಪ್ರಬಂಧಗಳ ಪ್ರಕಟಣೆಗೆ ಒತ್ತು ನೀಡುತ್ತಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಿದ್ದೇವೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ರೈತರಿಗೆ ಪರಿಹಾರ ದೊರಕಿಸಿಕೊಡಲು ಇಡೀ ಆಡಳಿತ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಬೇಕು’’ ಎಂದರು. 

ಕೇಂದ್ರ ಕೃಷಿ ಕಾರ್ಯದರ್ಶಿ ಡಾ. ದೇವೇಶ್ ಚತುರ್ವೇದಿ , ಐ.ಸಿ.ಎ.ಆರ್ ನ ಮಹಾ ನಿರ್ದೇಶಕ ಡಾ. ಎಂ.ಎಲ್. ಜಾಟ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉದ್ಘಾಟನಾ ಸಮಾರಂಭದಲ್ಲಿ ರಾಜಸ್ತಾನದ ಕೃಷಿ ಸಚಿವರಾದ ಡಾ. ಕಿರೋಡಿ ಲಾಲ್ ಮೀನಾ ಅವರು ಕೂಡ ಉಪಸ್ಥಿತರಿದ್ದರು. 

ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐ.ಸಿ.ಎ.ಆರ್)ಯ ವಿಜ್ಞಾನಿಗಳು, ಕೃಷಿ ತಜ್ಞರು, ರೈತ ಪ್ರತಿನಿಧಿಗಳು ಮತ್ತು ಇತರೆ ಪಾಲುದಾರರು ಭಾಗವಹಿಸಿದ್ದರು. ಈ ವೇದಿಕೆ ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ರಾಜ್ಯಗಳ ಪ್ರತಿನಿಧಿಗಳಿಗೆ 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಸಮಗ್ರ ಸಿದ್ಧತೆಗಳು, ಉತ್ಪಾದನಾ ಗುರಿಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆಗಳನ್ನು ನಡೆಸಲು ಒಂದು ವೇದಿಕೆಯನ್ನು ಒದಗಿಸಿದೆ. 

 

*****
 


(Release ID: 2167003) Visitor Counter : 2
Read this release in: English , Hindi , Marathi , Gujarati