ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಹರಿಯಾಣದ ಸೋಹ್ನಾದಲ್ಲಿ ಅತ್ಯಾಧುನಿಕ ಸುಧಾರಿತ ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು
ಕ್ಯಾಮೆರಾ ಮಾಡ್ಯೂಲ್‌ಗಳು, ಪಿ.ಸಿ.ಬಿ ಜೋಡಣೆ, ಸೆಮಿಕಂಡಕ್ಟರ್‌ಗಳು ಅಥವಾ ಬ್ಯಾಟರಿಗಳು ಇರಲಿ, ಹಂತ ಹಂತವಾಗಿ ಪ್ರತಿಯೊಂದು ಎಲೆಕ್ಟ್ರಾನಿಕ್ ಘಟಕವನ್ನು ಭಾರತದಲ್ಲಿ ತಯಾರಿಸಲಾಗುವುದು; ಸುಧಾರಿತ ತಂತ್ರಜ್ಞಾನದ ಆಗಮನವು ಒಂದು ಪ್ರಮುಖ ಮೈಲಿಗಲ್ಲು: ಶ್ರೀ ಅಶ್ವಿನಿ ವೈಷ್ಣವ್
ವಾರ್ಷಿಕವಾಗಿ 20 ಕೋಟಿ ಬ್ಯಾಟರಿ ಪ್ಯಾಕ್‌ಗಳನ್ನು ತಯಾರಿಸುವ ಹೊಸ ಸೌಲಭ್ಯ, ಭಾರತದ ಅವಶ್ಯಕತೆಯ 40% ನಷ್ಟನ್ನು ಪೂರೈಸುವುದು; 5,000 ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಭಾರತದ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬಲಪಡಿಸುವುದು
Posted On:
04 SEP 2025 4:26PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಹರಿಯಾಣದ ಸೋಹ್ನಾದಲ್ಲಿ ಟಿ.ಡಿ.ಕೆ ಕಾರ್ಪೊರೇಷನ್‌ನ ಅಡ್ವಾನ್ಸ್ಡ್ ಟೆಕ್ನಾಲಜೀಸ್ ಲಿಥಿಯಂ-ಐಯಾನ್ (ಲಿ-ಐಯಾನ್) ಬ್ಯಾಟರಿ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.

ಭಾರತದ ಎಲೆಕ್ಟ್ರಾನಿಕ್ಸ್ ಪ್ರಯಾಣದಲ್ಲಿ ಇದು ಮತ್ತೊಂದು ಮಹತ್ವದ ತಿರುವು ಎಂದು ಒತ್ತಿ ಹೇಳಿದ ಸಚಿವರು, "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ್ ದೃಷ್ಟಿಕೋನವನ್ನು ನಾವು ಈಡೇರಿಸುತ್ತಿರುವುದರಿಂದ ಇದು ನಮಗೆ ಬಹಳ ಮುಖ್ಯವಾದ ಮೈಲಿಗಲ್ಲು. ಅದು ಕ್ಯಾಮೆರಾ ಮಾಡ್ಯೂಲ್‌ಗಳು, ಪಿ.ಸಿ.ಬಿ ಜೋಡಣೆ, ಸೆಮಿಕಂಡಕ್ಟರ್‌ಗಳು ಅಥವಾ ಬ್ಯಾಟರಿಗಳು ಆಗಿರಲಿ - ಮುಂಬರುವ ವರ್ಷಗಳಲ್ಲಿ ಪ್ರತಿಯೊಂದು ಘಟಕವನ್ನು ನಮ್ಮ ದೇಶದಲ್ಲಿ ತಯಾರಿಸಲಾಗುತ್ತದೆ. ಭಾರತದಲ್ಲಿ ಇಂತಹ ಸುಧಾರಿತ ತಂತ್ರಜ್ಞಾನದ ಆಗಮನವು ಎಲೆಕ್ಟ್ರಾನಿಕ್ಸ್‌ನಲ್ಲಿ ನಮ್ಮ ಸ್ವಾವಲಂಬನೆಗೆ ಪ್ರಮುಖ ಮೈಲಿಗಲ್ಲು." ಎಂದರು.
2025 ರ ಸೆಮಿಕಾನ್ ಇಂಡಿಯಾ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಗೆ ಭಾರತದಲ್ಲಿಯೇ ತಯಾರಿಸಲಾದ ಮೊದಲ ಚಿಪ್‌ಗಳನ್ನು ನೀಡಲಾಯಿತು ಎಂದು ಅವರು ಹೇಳಿದರು. ಈ ಸೌಲಭ್ಯವನ್ನು ಪ್ರಾರಂಭಿಸುವುದರೊಂದಿಗೆ, ಮೊಬೈಲ್ ಫೋನ್‌ಗಳು, ಧರಿಸಬಹುದಾದ ಸಾಧನಗಳು, ಕೈಗಡಿಯಾರಗಳು, ಇಯರ್‌ಬಡ್‌ಗಳು, ಏರ್‌ಪಾಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಕೇಳುವ ಸಾಧನಗಳಲ್ಲಿ (ಹಿಯರಬಲ್‌ಗಳಲ್ಲಿ) ಬಳಸುವ ಲಿ-ಐಯಾನ್ ಬ್ಯಾಟರಿಗಳನ್ನು ದೇಶೀಯವಾಗಿ ತಯಾರಿಸಲಾಗುವುದು. ಅತ್ಯಾಧುನಿಕ ಸ್ಥಾವರವು ಪ್ರತಿ ವರ್ಷ ಸುಮಾರು 20 ಕೋಟಿ (200 ಮಿಲಿಯನ್) ಬ್ಯಾಟರಿ ಪ್ಯಾಕ್‌ಗಳನ್ನು ಉತ್ಪಾದಿಸುತ್ತದೆ, ಇದು ಭಾರತದ ವಾರ್ಷಿಕ ಅಗತ್ಯತೆಯ ಸುಮಾರು 40% ರಷ್ಟು ಅಂದರೆ 50 ಕೋಟಿ ಪ್ಯಾಕ್‌ಗಳನ್ನು ಪೂರೈಸುತ್ತದೆ. ವಿಸ್ತರಣೆಗೆ ದೊಡ್ಡ ಅವಕಾಶದೊಂದಿಗೆ, ಈ ಸೌಲಭ್ಯವು ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಜ್ಜಾಗಿದೆ ಎಂದವರು ನುಡಿದರು.

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ (ಇ.ಎಂ.ಸಿ.-EMC) ಯೋಜನೆಯಡಿಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ವೈಷ್ಣವ್ ಒತ್ತಿ ಹೇಳಿದರು. ಉದ್ಯೋಗ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಶ್ರೀ ವೈಷ್ಣವ್, ಈ ಸ್ಥಾವರವು ಸುಮಾರು 5,000 ಜನರಿಗೆ ನೇರ ಉದ್ಯೋಗಗಳನ್ನು ಒದಗಿಸುತ್ತದೆ, ಈಗಾಗಲೇ ಎ.ಟಿ. ಬವಾಲ್ ಸ್ಥಾವರದಲ್ಲಿ ನಿಖರವಾದ ತರಬೇತಿಯನ್ನು ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಕ್ಕಾಗಿ ಸಚಿವರು ಹರಿಯಾಣ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಸೋಹ್ನಾ ಘಟಕದ ಉದ್ಘಾಟನೆಯು ಸಂಪೂರ್ಣ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಭಾರತದ ಸ್ಥಿರ ಪ್ರಯಾಣದಲ್ಲಿ ಮತ್ತೊಂದು ಹೆಜ್ಜೆಯನ್ನು ಸೂಚಿಸುತ್ತದೆ. ಪ್ರತಿ ಮೈಲಿಗಲ್ಲಿನೊಂದಿಗೆ - ಅರೆವಾಹಕಗಳು, ಬ್ಯಾಟರಿಗಳು, ಪಿ.ಸಿ.ಬಿ. ಅಸೆಂಬ್ಲಿಗಳು ಅಥವಾ ಕ್ಯಾಮೆರಾ ಮಾಡ್ಯೂಲ್‌ಗಳಲ್ಲಿ - ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಜಾಗತಿಕ ಕೇಂದ್ರವಾಗಲು ಹತ್ತಿರವಾಗುತ್ತಿದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ.
ಟಿ.ಡಿ.ಕೆ ಕಾರ್ಪೊರೇಷನ್ ಬಗ್ಗೆ
ಟಿ.ಡಿ.ಕೆ ಪ್ರಪಂಚದಾದ್ಯಂತ 30ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ 250 ಕ್ಕೂ ಹೆಚ್ಚು ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಮಾರಾಟ ತಾಣಗಳನ್ನು ನಿರ್ವಹಿಸುವ ಪ್ರಮುಖ ಎಲೆಕ್ಟ್ರಾನಿಕ್ ಘಟಕ ಕಂಪನಿಯಾಗಿದೆ.
*****
(Release ID: 2163780)
Visitor Counter : 2