ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀಮತಿ ಅನ್ನಪೂರ್ಣ ದೇವಿ ಅವರು ಜಂಟಿಯಾಗಿ "ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಕಲ್ಪಿಸಲು ಮಾರ್ಗಸೂಚಿಗಳು" ಬಿಡುಗಡೆ ಮಾಡಿದರು
Posted On:
03 SEP 2025 7:13PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಸೆಪ್ಟೆಂಬರ್ 3, 2025 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಕಲ್ಪಿಸಲು ಮಾರ್ಗಸೂಚಿಗಳನ್ನು ಜಂಟಿಯಾಗಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಧರ್ಮೇಂದ್ರ ಪ್ರಧಾನ್, ಈ ಉಪಕ್ರಮವು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಹೇಳಿದರು. ಮುಂಬರುವ ದಿನಗಳಲ್ಲಿ, ಪ್ರತಿಯೊಬ್ಬ ಗರ್ಭಿಣಿ ತಾಯಿ, ನವಜಾತ ಶಿಶು ಮತ್ತು ಶಾಲಾಪೂರ್ವದ ಮಗುವಿಗೆ ಸಂಪೂರ್ಣ ಆರೈಕೆಯನ್ನು ನಾವು ಖಚಿತಪಡಿಸಿಕೊಂಡಾಗ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
12ನೇ ತರಗತಿಯವರೆಗೆ ಅಧ್ಯಯನ ಮಾಡದ ಆದರೆ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಉತ್ಸುಕರಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ("ದೀದಿ") ಮೀಸಲಾದ ಕಲಿಕಾ ಮಾಡ್ಯೂಲ್ ಅನ್ನು ರಚಿಸುವ ಪ್ರಸ್ತಾಪವನ್ನು ಸಚಿವರು ಮಂಡಿಸಿದರು.
ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಅವರು, ಇಂದಿನ ಜಗತ್ತು ಕೃತಕ ಬುದ್ಧಿಮತ್ತೆ (ಎಐ) ಮತ್ತು ಇತರ ನಾವೀನ್ಯತೆಗಳೊಂದಿಗೆ ಹೆಚ್ಚು ಸುಲಭವಾಗಿ ಪ್ರವೇಶಿಸಬಹುದಾಗಿದೆ ಮತ್ತು ಮಕ್ಕಳ ಭವಿಷ್ಯವನ್ನು ರೂಪಿಸಲು ಈ ಸಾಧನಗಳನ್ನು ಬಳಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತರು ಮಗುವಿನ ಜೀವನದಲ್ಲಿ ಮೊದಲ ಶಿಕ್ಷಕರು ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಭಾರತೀಯ ಭಾಷೆಗಳಲ್ಲಿ ಬೋಧನೆ-ಕಲಿಕಾ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಅವರು ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 2 ಲಕ್ಷ ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲೆಗಳನ್ನು ಬ್ರಾಡ್‌ಬ್ಯಾಂಡ್ ನೊಂದಿಗೆ ಸಂಪರ್ಕಿಸಲಾಗುವುದು ಎಂದು ಸಚಿವರು ಹೇಳಿದರು. ಇತ್ತೀಚೆಗೆ ಬಿಡುಗಡೆಯಾದ ASER ಮತ್ತು PARAKH ಡೇಟಾವನ್ನು ಉಲ್ಲೇಖಿಸಿ, ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕಾ ಫಲಿತಾಂಶಗಳು ನಗರ ಪ್ರದೇಶಗಳ ಮಕ್ಕಳ ಕಲಿಕಾ ಫಲಿತಾಂಶಗಳಿಗಿಂತ ಉತ್ತಮವಾಗಿದೆ ಎಂದು ಅವರು ಹೇಳಿದರು. ಈ ಗಮನಾರ್ಹ ಸಾಧನೆಯು ಅಂಗನವಾಡಿ ಕಾರ್ಯಕರ್ತರ ಅವಿರತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ದೇಶದ ಸುಮಾರು 15 ಕೋಟಿ ಮಕ್ಕಳಿಗೆ ಸರಿಯಾದ ಆರೈಕೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಆಗ ಮಾತ್ರ 'ವಿಕಸಿತ ಭಾರತ್ 2047' ಕನಸು ಮತ್ತು 'ನಿಪುಣ್ ಭಾರತ್' ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ನನಸಾಗಿಸಬಹುದು ಎಂದು ಶ್ರೀ ಪ್ರಧಾನ್ ಹೇಳಿದರು.


ದೇಶದ ಶಿಕ್ಷಣ ನೀತಿಯ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ), 2020, ಮೂರು ವರ್ಷಗಳ ಶಾಲಾಪೂರ್ವ (ಪ್ರಿ-ಸ್ಕೂಲ್) ವನ್ನು 5+3+3+4 ರಚನೆಯಲ್ಲಿ ಸಂಯೋಜಿಸುವ ಮೂಲಕ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ವನ್ನು ಕಲಿಕೆಯ ನಿರಂತರತೆಯ ಅಡಿಪಾಯವೆಂದು ಗುರುತಿಸುತ್ತದೆ.
ದೇಶಾದ್ಯಂತ ಉತ್ತಮ ಗುಣಮಟ್ಟದ ಇಸಿಸಿಇಗೆ ಸಾರ್ವತ್ರಿಕ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಎನ್ ಇ ಪಿ 2020 ಹೇಳುತ್ತದೆ, " ಇಸಿಸಿಇ ಅನ್ನು (ಎ) ಸ್ವತಂತ್ರ ಅಂಗನವಾಡಿಗಳು; (ಬಿ) ಪ್ರಾಥಮಿಕ ಶಾಲೆಗಳೊಂದಿಗೆ ಸಹ-ಸ್ಥಾಪಿತವಾದ ಅಂಗನವಾಡಿಗಳು; (ಸಿ) ಅಸ್ತಿತ್ವದಲ್ಲಿರುವ ಪ್ರಾಥಮಿಕ ಶಾಲೆಗಳೊಂದಿಗೆ ಸಹ-ಸ್ಥಾಪಿತವಾದ ಕನಿಷ್ಠ 5 ರಿಂದ 6 ವರ್ಷ ವಯಸ್ಸಿನ ಪೂರ್ವ-ಪ್ರಾಥಮಿಕ ಶಾಲೆಗಳು/ವಿಭಾಗಗಳು; ಮತ್ತು (ಡಿ) ಸ್ವತಂತ್ರ ಪ್ರಿ ಸ್ಕೂಲ್ ಗಳು - ಇವೆಲ್ಲವೂ ಇಸಿಸಿಇ ಯ ಪಠ್ಯಕ್ರಮ ಮತ್ತು ಕಲಿಕೆಯಲ್ಲಿ ವಿಶೇಷವಾಗಿ ತರಬೇತಿ ಪಡೆದ ಕೆಲಸಗಾರರುಶಿಕ್ಷಕರನ್ನು ನೇಮಿಸಿಕೊಳ್ಳುತ್ತವೆ" (ಪ್ಯಾರಾ 1.4 ಎನ್ ಇ ಪಿ 2020).
ಈ ನಿಟ್ಟಿನಲ್ಲಿ, ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ, ಈ ಕೆಳಗಿನ ಉದ್ದೇಶಗಳೊಂದಿಗೆ "ಶಾಲೆಗಳ ಬಳಿ ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಕಲ್ಪಿಸಲು ಮಾರ್ಗಸೂಚಿಗಳನ್ನು" ಬಿಡುಗಡೆ ಮಾಡಿದೆ:
- ಪ್ರಾಥಮಿಕ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳಿಂದ 1 ನೇ ತರಗತಿಗೆ ಮಕ್ಕಳ ಶಾಲಾ ಸಿದ್ಧತೆ ಮತ್ತು ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳುವುದು.
- ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಕಾರಣವಾಗುವ ಸಂತೋಷದಾಯಕ ಕಲಿಕಾ ಅನುಭವಗಳು ಮತ್ತು ಉತ್ತೇಜಕ ವಾತಾವರಣವನ್ನು ಒದಗಿಸಲು ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ ಶಾಲೆಗಳ ನಡುವೆ ಉತ್ತಮ ಸಂಪರ್ಕ ಮತ್ತು ಸಮನ್ವಯವನ್ನು ಹೊಂದುವುದು.
- ವಿವಿಧ ಹಂತದ ಕಲಿಕೆಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರಾಥಮಿಕ ಹಂತದಲ್ಲಿ ಮಕ್ಕಳ ಧಾರಣ ದರವನ್ನು ಖಚಿತಪಡಿಸಿಕೊಳ್ಳುವುದು.
ಈ ಮಾರ್ಗಸೂಚಿಗಳಲ್ಲಿ ಎರಡು ಸಚಿವಾಲಯಗಳ ನಡುವಿನ ಸಹಯೋಗವು ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಮೂರು ವಲಯಗಳಲ್ಲಿ ಉತ್ತಮ ಏಕೀಕರಣವನ್ನು ಖಚಿತಪಡಿಸಿಕೊಳ್ಳುವ ಮೂಲಕ ಇಡೀ ಸರ್ಕಾರದ ವಿಧಾನವನ್ನು ಪ್ರತಿಬಿಂಬಿಸುತ್ತದೆ.
ಶಾಲೆಗಳ ಬಳಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸುವುದು ಎಂದರೆ ಸಾಧ್ಯವಾದಲ್ಲೆಲ್ಲಾ ಶಾಲಾ ಆವರಣದಲ್ಲಿ ಅಂಗನವಾಡಿ ಇರುವುದಾಗಿದೆ. ಈ ಉಪಕ್ರಮವು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಕ ಕಲಿಕೆ ಮತ್ತು 1 ನೇ ತರಗತಿಯಿಂದ ಪ್ರಾರಂಭವಾಗುವ ಔಪಚಾರಿಕ ಶಾಲಾ ಶಿಕ್ಷಣದ ನಡುವೆ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಇದು ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ, ಸಮುದಾಯದ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಮಕ್ಕಳಿಗೆ ಪ್ರಿಸ್ಕೂಲ್ ನಿಂದ ಪ್ರಾಥಮಿಕ ಶಾಲೆಗೆ ಸುಗಮ ಪರಿವರ್ತನೆಯನ್ನು ಒದಗಿಸುತ್ತದೆ. ಮಾರ್ಗಸೂಚಿಗಳು ಈ ಕೆಳಗಿನ ಪ್ರಮುಖ ಅಂಶಗಳನ್ನು ಒತ್ತಿಹೇಳುತ್ತವೆ:
- ಭಾರತದಲ್ಲಿ ಇಸಿಸಿಇ: ಒಂದು ಸಂಯೋಜಿತ ವಿಧಾನ
- ಅಂಗನವಾಡಿ ಕೇಂದ್ರಗಳನ್ನು ಪಕ್ಕದ ಶಾಲೆಗಳೊಂದಿಗೆ ಜೋಡಿಸಲು ಮಾನದಂಡಗಳು ಮತ್ತು ನಿಯಮಗಳು
- ಅಂಗನವಾಡಿಡಿ ಕೇಂದ್ರಗಳನ್ನು ಪಕ್ಕದ ಶಾಲೆಗಳೊಂದಿಗೆ ಸಂಯೋಜಿಸುವುದು
- ಮಕ್ಕಳ ಸ್ನೇಹಿ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು
- ಸಮುದಾಯ ಮತ್ತು ಪೋಷಕರ ತೊಡಗಿಸಿಕೊಳ್ಳುವಿಕೆ
- ಪ್ರಾಥಮಿಕ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ವಿವಿಧ ಪಾಲುದಾರರ ಪಾತ್ರ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಸ್ತುತ ವಿಭಿನ್ನ ಮಾದರಿಗಳನ್ನು ಜಾರಿಗೆ ತರುತ್ತಿವೆ ಮತ್ತು ನಿರ್ದಿಷ್ಟ ಕಾರ್ಯಾಚರಣೆಯ ಸವಾಲುಗಳನ್ನು ಹೊಂದಿವೆ ಎಂದು ಮಾರ್ಗಸೂಚಿಗಳು ಉಲ್ಲೇಖಿಸುತ್ತವೆ. ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಎರಡೂ ಇಲಾಖೆಗಳ ನಡುವಿನ ಸಕಾಲಿಕ ಅನುಷ್ಠಾನ ಮತ್ತು ಸಮನ್ವಯವು ಇಸಿಸಿಇ ಮತ್ತು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (ಎಫ್ ಎಲ್ ಎನ್) ಸೇವೆಗಳನ್ನು ಗಮನಾರ್ಹವಾಗಿ ಬಲಪಡಿಸುತ್ತದೆ. ಈ ವಿಧಾನವು ಎನ್ ಇ ಪಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿದೆ, ಇದು ಯುವ, ಆರೋಗ್ಯವಂತ ಕಲಿಯುವವರಿಗೆ ಬಲವಾದ ಅಡಿಪಾಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈ ಮಾರ್ಗಸೂಚಿಗಳು 'ನಿಪುಣ್ ಭಾರತ್ ಮಿಷನ್' ಅನ್ನು 'ಪೋಷಣ್ ಭಿ ಪಢಾಯಿ ಭಿ' ಯೊಂದಿಗೆ ಸಂಯೋಜಿಸುವತ್ತ ಒಂದು ಹೆಜ್ಜೆಯಾಗಿದೆ. ಇದು ಜಾದೂ ಪಿಠಾರ, ಇ-ಜಾದೂ ಪಿಠಾರ ಮತ್ತು ಆಧಾರಶಿಲಾದಂತಹ ಟಿ ಎಲ್ ಎಂ ಗಳ ಬಳಕೆಯನ್ನು ಸಹ ಒಟ್ಟುಗೂಡಿಸುತ್ತದೆ, ಇವೆಲ್ಲವನ್ನೂ ಎನ್ ಇ ಪಿ 2020 ರೊಂದಿಗೆ ಹೊಂದಾಣಿಕೆಯೊಂದಿಗೆ ಮೂಲಭೂತ ಹಂತಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರು ಹೇಳಿದಂತೆ, 2047 ರ ವೇಳೆಗೆ ಭಾರತವನ್ನು ವಿಕಸಿತ ಭಾರತದ ದೃಷ್ಟಿಕೋನದತ್ತ ಕೊಂಡೊಯ್ಯುವ "ಮಕ್ಕಳನ್ನು ಉತ್ತಮ, ನೈತಿಕ, ಚಿಂತನಶೀಲ ಮತ್ತು ಸಹಾನುಭೂತಿಯುಳ್ಳ ಮನುಷ್ಯರನ್ನಾಗಿ ಬೆಳೆಸಲು ಪೂರ್ವ ಪ್ರಾಥಮಿಕ ಹಂತದಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ".
*****
(Release ID: 2163553)
Visitor Counter : 2