ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿಯವರು ಭಾಗವಹಿಸಿದರು

Posted On: 01 SEP 2025 5:58PM by PIB Bengaluru

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 1, 2025) ಕರ್ನಾಟಕದ ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಎ ಐ ಐ ಎಸ್ ಎಚ್) ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಇತರ ಸಮಸ್ಯೆಗಳಂತೆ, ವಾಕ್ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳಿಗೂ ತಜ್ಞರು ಲಕ್ಷಣಗಳನ್ನು ಗುರುತಿಸಿ ಆರಂಭಿಕ ಹಂತಗಳಲ್ಲಿ ರೋಗನಿರ್ಣಯ ಮಾಡುವ ಅಗತ್ಯವಿದೆ ಎಂದು ಹೇಳಿದರು. ಸಮಾಜವು ಜಾಗೃತವಾಗಿರಬೇಕು ಮತ್ತು ವಾಕ್ ಮತ್ತು ಶ್ರವಣ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಬಗ್ಗೆ ಬೆಂಬಲ ಮತ್ತು ಸಹಾನುಭೂತಿಯ ಮನೋಭಾವವನ್ನು ಹೊಂದಿರಬೇಕು. ಈ ಎಲ್ಲಾ ಕ್ಷೇತ್ರಗಳಲ್ಲಿ ಎ ಐ ಐ ಎಸ್ ಎಚ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಅಖಿಲ ಭಾರತ ಸಂಸ್ಥೆಯಾಗಿ, ಎ ಐ ಐ ಎಸ್ ಎಚ್ ಭಾರತ ಮತ್ತು ವಿದೇಶಗಳಲ್ಲಿನ ಸಂಸ್ಥೆಗಳಿಗೆ ಮಾದರಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡಬೇಕು ಎಂದು ರಾಷ್ಟ್ರಪತಿಯವರು ಹೇಳಿದರು. ಎ ಐ ಐ ಎಸ್ ಎಚ್ ಸ್ಥಾಪಿಸಿದ 'ಇನ್ಕ್ಲೂಸಿವ್ ಥೆರಪಿ ಪಾರ್ಕ್' ಭಾರತ ಮತ್ತು ವಿದೇಶಗಳಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಂವಹನ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು. 'ಎ ಐ ಐ ಎಸ್ ಎಚ್ ಆರೋಗ್ಯ ವಾಣಿ' ಸಂವಹನ ಅಸ್ವಸ್ಥತೆಗಳು ಮತ್ತು ಅವುಗಳ ಆರಂಭಿಕ ಗುರುತಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ಒಂದು ವಿಶಿಷ್ಟ ಉಪಕ್ರಮವಾಗಿದೆ. ದೇಶದ ಪ್ರಮುಖ ಸಂಸ್ಥೆಯಾಗಿರುವ ಎ ಐ ಐ ಎಸ್ ಎಚ್ ಸಂವಹನ ಅಸ್ವಸ್ಥತೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ನೀತಿ ನಿರೂಪಣೆಯಲ್ಲಿ ಸಲಹೆ ನೀಡಬಲ್ಲದು ಎಂದು ಅವರು ಹೇಳಿದರು.

ಇಂದು ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಇತ್ತೀಚಿನ ತಂತ್ರಜ್ಞಾನಗಳ ಬಳಕೆಯು ವಾಕ್ ಮತ್ತು ಶ್ರವಣ ದೋಷಗಳನ್ನು ನಿವಾರಿಸುವಲ್ಲಿ ಬಹಳ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಆದರೆ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸಾಧನಗಳನ್ನು ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಲು, ದೇಶದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ತಯಾರಿಸುವುದು ಅತ್ಯಗತ್ಯವಾಗಿದೆ. ಉದಾಹರಣೆಗೆ, ಕಾಕ್ಲಿಯರ್ ಇಂಪ್ಲಾಂಟ್ ಗಳಂತಹ ಸಾಧನಗಳನ್ನು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡಲು, ನಾವು ಅವುಗಳ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು. ಎ ಐ ಐ ಎಸ್ ಎಚ್ ನಂತಹ ಸಂಸ್ಥೆಗಳು ಈ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು. ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ, ಎ ಐ ಐ ಎಸ್ ಎಚ್ ರಾಷ್ಟ್ರ ನಿರ್ಮಾಣಕ್ಕೆ ತನ್ನ ಕೊಡುಗೆಯನ್ನು ಮತ್ತಷ್ಟು ಬಲಪಡಿಸಬಹುದು. ಸಂಸ್ಥೆಯು ದೇಶದ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಬಹುದು. ಎ ಐ ಐ ಎಸ್ ಎಚ್ ನಂತಹ ಸಂಸ್ಥೆಗಳು ನಾವೀನ್ಯತೆಯ ಮನೋಭಾವ ಮತ್ತು ಸಂವೇದನೆಯೊಂದಿಗೆ ಕೆಲಸ ಮಾಡುವ ಮತ್ತು ವಾಕ್ ಮತ್ತು ಶ್ರವಣ ದೋಷವುಳ್ಳ ಜನರು  ಸಾಮಾನ್ಯ ಜೀವನವನ್ನು ನಡೆಸಲು ಮಾತ್ರವಲ್ಲದೆ ಸಮಾಜ ಮತ್ತು ಆರ್ಥಿಕತೆಗೆ ತಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಸರ್ಕಾರವು ವಿವಿಧ ಕಲ್ಯಾಣ ಉಪಕ್ರಮಗಳ ಮೂಲಕ ದಿವ್ಯಾಂಗರಿಗೆ ಅಡೆತಡೆಗಳಿಲ್ಲದ ವಾತಾವರಣವನ್ನು ಸೃಷ್ಟಿಸುತ್ತಿದೆ, ಇದರಿಂದಾಗಿ ಅವರು ಯಾವುದೇ ತೊಂದರೆಯಿಲ್ಲದೆ ತಮ್ಮ ಜೀವನದಲ್ಲಿ ಪ್ರಗತಿ ಸಾಧಿಸಬಹುದಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು.  'ಸುಗಮ್ಯ ಭಾರತ ಅಭಿಯಾನ'ದ ಅಡಿಯಲ್ಲಿ, ದಿವ್ಯಾಂಗರಿಗೆ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಸಮಾನ ಅವಕಾಶಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳು, ಸೌಲಭ್ಯಗಳು ಮತ್ತು ಮಾಹಿತಿಯ ಮೂಲಗಳನ್ನು ದಿವ್ಯಾಂಗ ಸ್ನೇಹಿಯನ್ನಾಗಿ ಮಾಡುವ ಮೂಲಕ, ನಾವು ದಿವ್ಯಾಂಗರಿಗೆ ಅನುಕೂಲ ಮಾಡಿಕೊಡುವುದಲ್ಲದೆ, ಸಮಾಜವು ಅವರ ಬಗ್ಗೆ ಕಾಳಜಿ ವಹಿಸುತ್ತದೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸುತ್ತೇವೆ ಎಂದು ಅವರು ಹೇಳಿದರು.

ರಾಷ್ಟ್ರಪತಿಯವರು ಎ ಐ ಐ ಎಸ್ ಎಚ್ ಭೇಟಿಯ ಸಂದರ್ಭದಲ್ಲಿ, ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾಂಗ ಮಕ್ಕಳೊಂದಿಗೆ ಮತ್ತು ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ನಂತರ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರುವ ದಿವ್ಯಾಂಗ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.

Please click here to see the President's Speech

 

*****


(Release ID: 2162914) Visitor Counter : 2