ಗೃಹ ವ್ಯವಹಾರಗಳ ಸಚಿವಾಲಯ
ಪ್ರಕೃತಿ ವಿಕೋಪಗಳಿಂದ ಬಾಧಿತವಾದ ರಾಜ್ಯಗಳ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ತಗ್ಗಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರದಿಂದ ಆ ರಾಜ್ಯಗಳಿಗೆ ಹೆಗಲಿಗೆ ಹೆಗಲು ನೀಡಿ ಬೆಂಬಲ
ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಭಾರೀ ಮಳೆ, ಪ್ರವಾಹ, ದಿಢೀರ್ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತಗಳಿಂದ ಉಂಟಾದ ಹಾನಿಯ ಮೌಲ್ಯಮಾಪನಕ್ಕೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯದಿಂದ ಅಂತರ-ಸಚಿವಾಲಯ ಕೇಂದ್ರ ತಂಡಗಳ (IMCTs) ರಚನೆ
ಮುಂದಿನ ವಾರದ ಆರಂಭದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪ್ರವಾಹ/ಭೂಕುಸಿತ ಪೀಡಿತ ಜಿಲ್ಲೆಗಳಿಗೆ ಈ ಕೇಂದ್ರ ತಂಡಗಳ ಭೇಟಿ
ಐಎಂಸಿಟಿಗಳಿಂದ ಸ್ಥಳದಲ್ಲೇ ಪರಿಸ್ಥಿತಿ ಪರಾಮರ್ಶೆ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳ ಮೌಲ್ಯಮಾಪನ
Posted On:
31 AUG 2025 7:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದ ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪಗಳಿಂದ ಬಾಧಿತವಾದ ರಾಜ್ಯಗಳ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ಕಡಿಮೆ ಮಾಡಲು ಆ ರಾಜ್ಯಗಳಿಗೆ ಹೆಗಲಿಗೆ ಹೆಗಲು ನೀಡಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯವು (MHA) ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರೀ ಮಳೆ, ಪ್ರವಾಹ, ದಿಢೀರ್ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತಗಳಿಂದ ಉಂಟಾದ ಹಾನಿಯ ಮೌಲ್ಯಮಾಪನ ಮಾಡಲು ಈ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ತಲಾ ಒಂದರಂತೆ ಅಂತರ-ಸಚಿವಾಲಯ ಕೇಂದ್ರ ತಂಡಗಳನ್ನು (IMCTs) ರಚಿಸಿದೆ. ಈ IMCTಗಳು ಆಯಾ ರಾಜ್ಯ ಸರ್ಕಾರಗಳು ಕೈಗೊಂಡಿರುವ ಪರಿಹಾರ ಕಾರ್ಯಗಳು ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳದಲ್ಲೇ ಮೌಲ್ಯಮಾಪನ ಮಾಡಲಿವೆ.
ಪ್ರಸಕ್ತ ಮುಂಗಾರು ಋತುವಿನಲ್ಲಿ ಭಾರಿ ಮಳೆ ಮತ್ತು ದಿಢೀರ್ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತಗಳಿಂದ ತೀವ್ರವಾಗಿ ಬಾಧಿತವಾಗಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಗಳಿಗೆ ಈ ಕೇಂದ್ರ ತಂಡಗಳು ಮುಂದಿನ ವಾರದ ಆರಂಭದಲ್ಲಿ ಭೇಟಿ ನೀಡಲಿವೆ. ಐಎಂಸಿಟಿ ಮತ್ತು ಬಹು-ವಲಯ ತಂಡವು ಈಗಾಗಲೇ ಹಿಮಾಚಲ ಪ್ರದೇಶ ರಾಜ್ಯಕ್ಕೆ ಭೇಟಿ ನೀಡಿದೆ.
ಗೃಹ ಸಚಿವಾಲಯ / ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿ ಎಂ ಎ)ದ ಜಂಟಿ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಗಳು ಕೇಂದ್ರ ತಂಡಗಳ ನೇತೃತ್ವ ವಹಿಸಿದ್ದು ವೆಚ್ಚ, ಕೃಷಿ ಮತ್ತು ರೈತ ಕಲ್ಯಾಣ, ಜಲಶಕ್ತಿ, ವಿದ್ಯುತ್, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು/ ಇಲಾಖೆಗಳ ಹಿರಿಯ ಅಧಿಕಾರಿಗಳು ತಂಡದಲ್ಲಿದ್ದಾರೆ.
ಗೃಹ ಸಚಿವಾಲಯವು ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಅಗತ್ಯ ಸೇವೆಗಳ ಪುನಃಸ್ಥಾಪನಾ ಕಾರ್ಯಕ್ಕಾಗಿ ಅಗತ್ಯವಿರುವ ಎನ್‌ಡಿಆರ್‌ಎಫ್, ಸೇನೆ ತಂಡಗಳ ನಿಯೋಜನೆ ಮತ್ತು ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಒದಗಿಸುವ ಮೂಲಕ ಅಗತ್ಯವಿರುವ ಎಲ್ಲಾ ಸಾಗಣೆ ನೆರವನ್ನು ನೀಡುತ್ತಿದೆ.
ಆಗಸ್ಟ್ 2019ರಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕೈಗೊಂಡ ನಿರ್ಧಾರದ ಪ್ರಕಾರ, ತೀವ್ರ ವಿಪತ್ತಿನ ನಂತರ, ಅಧಿಕೃತ ಜ್ಞಾಪನಕ್ಕಾಗಿ ಕಾಯದೇ, ಹಾನಿಯ ಬಗ್ಗೆ ಸ್ಥಳದಲ್ಲೇ ಮೌಲ್ಯಮಾಪನ ಮಾಡಲು ಗೃಹ ಸಚಿವಾಲಯವು IMCT ಗಳನ್ನು ತಕ್ಷಣವೇ ರಚಿಸುತ್ತದೆ. IMCTಯು ಹಾನಿಯ ಮೌಲ್ಯಮಾಪನವನ್ನು ಮಾಡಿದ ಬಳಿಕ, ಕೇಂದ್ರ ಸರ್ಕಾರವು ಸ್ಥಾಪಿತ ಕಾರ್ಯವಿಧಾನದ ಪ್ರಕಾರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್ ಡಿ ಆರ್ ಎಫ್) ನಿಂದ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸು ನೆರವನ್ನು ನೀಡುತ್ತದೆ.
ಹಣಕಾಸು ವರ್ಷ 2025-26 ರಲ್ಲಿ, ವಿಪತ್ತಿನಿಂದ ಬಾಧಿತವಾದ ರಾಜ್ಯಗಳು ಸಂತ್ರಸ್ತರಿಗೆ ತಕ್ಷಣ ಪರಿಹಾರ ನೆರವು ನೀಡಲು ಕೇಂದ್ರ ಸರ್ಕಾರವು 24 ರಾಜ್ಯಗಳಿಗೆ SDRF ನಲ್ಲಿ 10,498.80 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಮತ್ತು 12 ರಾಜ್ಯಗಳಿಗೆ ಎನ್ ಡಿ ಆರ್ ಎಫ್ ನಿಂದ 1988.91 ಕೋಟಿ ರೂ.ಗಳನ್ನು, 20 ರಾಜ್ಯಗಳಿಗೆ ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿ (SDMF) ನಿಂದ 3274.90 ಕೋಟಿ ರೂ.ಗಳನ್ನು ಹಾಗೂ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ (NDMF) ನಿಂದ 09 ರಾಜ್ಯಗಳಿಗೆ 372.09 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
*****
(Release ID: 2162544)
Visitor Counter : 9