ಕೃಷಿ ಸಚಿವಾಲಯ
ಗ್ವಾಲಿಯರ್ ನಲ್ಲಿ ನಡೆದ 64ನೇ ಅಖಿಲ ಭಾರತ ಗೋಧಿ ಮತ್ತು ಬಾರ್ಲಿ (ಜವೆಗೋದಿ) ಸಂಶೋಧನಾ ಕೆಲಸಗಾರರ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
"ಗೋಧಿ ಮತ್ತು ಬಾರ್ಲಿ (ಜವೆಗೋದಿ) ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಗತ್ಯ": ಶ್ರೀ ಶಿವರಾಜ್ ಸಿಂಗ್ ಚೌಹಾಣ್
Posted On:
27 AUG 2025 9:07AM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಭಾರತವು ಇಂದು ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಅಷ್ಟೇ ಮುಖ್ಯವಾಗಿದೆ. ಇದರಿಂದ ಕೃಷಿ ಹೆಚ್ಚು ಲಾಭದಾಯಕವಾಗುತ್ತದೆ ಎಂದು ಹೇಳಿದರು. ಗ್ವಾಲಿಯರ್ ನ ರಾಜಮಾತಾ ವಿಜಯರಾಜೆ ಸಿಂಧಿಯಾ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 64ನೇ ಅಖಿಲ ಭಾರತ ಗೋಧಿ ಮತ್ತು ಬಾರ್ಲಿ ಸಂಶೋಧನಾ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಶತಮಾನೋತ್ಸವ ವರ್ಷದಲ್ಲಿ ಅವರಿಗೆ ಶ್ರೀ ಚೌಹಾಣ್ ಅವರು ಗೌರವ ನಮನ ಸಲ್ಲಿಸಿದರು. ದೇಶದ ಆಹಾರ ಸ್ವಾವಲಂಬನೆಗೆ ಅವರು ನೀಡಿದ ಅವಿಸ್ಮರಣೀಯ ಕೊಡುಗೆಯನ್ನು ಸ್ಮರಿಸಿದರು.
ರೈತರ ಕಠಿಣ ಪರಿಶ್ರಮಕ್ಕೆ ನಮನ ಸಲ್ಲಿಸಿದ ಅವರು, ಅವರ ಕಠಿಣ ಪರಿಶ್ರಮ ಮತ್ತು ನಮ್ಮ ವಿಜ್ಞಾನಿಗಳ ಸಂಶೋಧನೆಯಿಂದಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬಲವಾದ ಕೃಷಿ ರಾಷ್ಟ್ರವಾಗಿ ಎದ್ದು ನಿಂತಿದೆ ಎಂದರು.
ಕಳೆದ 10-11 ವರ್ಷಗಳಲ್ಲಿ, ಗೋಧಿ ಉತ್ಪಾದನೆಯು 86.5 ದಶಲಕ್ಷ ಟನ್ ಗಳಿಂದ 117.5 ದಶಲಕ್ಷ ಟನ್ ಗಳಿಗೆ ಏರಿದೆ - ಇದು ಸುಮಾರು ಶೇ. 44 ರಷ್ಟು ಹೆಚ್ಚಳವಾಗಿದೆ ಎಂದು ಸಚಿವರು ಒತ್ತಿ ಹೇಳಿದರು. ಈ ಸಾಧನೆ ಗಮನಾರ್ಹವಾಗಿದ್ದರೂ, ಪ್ರತಿ ಹೆಕ್ಟೇರ್ ಉತ್ಪಾದಕತೆಯನ್ನು ಜಾಗತಿಕ ಸರಾಸರಿಗೆ ಸಮನಾಗಿ ತರುವ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸಬೇಕು ಎಂದು ಅವರು ಹೇಳಿದರು. ಗೋಧಿ ಮತ್ತು ಅಕ್ಕಿ ಉತ್ಪಾದನೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿದ್ದರೂ, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದಕತೆಯನ್ನು ಹೆಚ್ಚಿಸುವುದು ಪ್ರಸ್ತುತ ಆದ್ಯತೆಯಾಗಿದೆ. ಬಾರ್ಲಿಯಂತಹ ಸಾಂಪ್ರದಾಯಿಕ ಧಾನ್ಯಗಳ ಔಷಧೀಯ ಮೌಲ್ಯವನ್ನು ಅವರು ಒತ್ತಿಹೇಳಿದರು. ಜತೆಗೆ ಇದಕ್ಕೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದರು.
ಜೈವಿಕ ಬಲವರ್ಧಿತ ಗೋಧಿಯನ್ನು ಅಭಿವೃದ್ಧಿಪಡಿಸುವಂತೆ ಮತ್ತು ಮಣ್ಣಿನ ಗುಣಮಟ್ಟದ ಮೇಲೆ ಅಸಮತೋಲಿತ ರಸಗೊಬ್ಬರದ ಬಳಕೆಯಿಂದ ಉಂಟಾಗುವ ಹಾನಿಕಾರಕ ಪರಿಣಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶ್ರೀ ಚೌಹಾಣ್ ಅವರು ವಿಜ್ಞಾನಿಗಳನ್ನು ಒತ್ತಾಯಿಸಿದರು. ಬೆಳೆಯನ್ನು ಕತ್ತರಿಸಿದ ನಂತರ ನೆಲದಲ್ಲಿ ಉಳಿದಿರುವ ಧಾನ್ಯ ಮತ್ತು ಚಿಕ್ಕ ಕಾಂಡಗಳ ನಿರ್ವಹಣೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಶಿಕ್ಷಣ ನೀಡುವ ಮಹತ್ವವನ್ನು ಅವರು ಒತ್ತಿ ಹೇಳಿದರು. ನಕಲಿ ರಸಗೊಬ್ಬರಗಳು ಮತ್ತು ಕೀಟನಾಶಕಗಳಿಂದ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು. ತಮ್ಮ ಉತ್ಪನ್ನಗಳಿಂದ ಬೆಳೆಗಳಿಗೆ ಹಾನಿ ಮಾಡಿದ ಕಂಪನಿಗಳ ಪರವಾನಗಿಗಳನ್ನು ರದ್ದುಪಡಿಸಲಾಗುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಕೃಷಿಯನ್ನು ಪಶುಸಂಗೋಪನೆ, ಜೇನು ಸಾಕಾಣಿಕೆ, ಮೀನುಗಾರಿಕೆ ಮತ್ತು ತೋಟಗಾರಿಕೆಯೊಂದಿಗೆ ಸಂಯೋಜಿಸುವುದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಮಗ್ರ ಕೃಷಿ ಅತ್ಯಂತ ಪ್ರಯೋಜನಕಾರಿ ಮಾರ್ಗವಾಗಿದೆ ಎಂದು ಸಚಿವರು ಹೇಳಿದರು. ನಮ್ಮ ದೈನಂದಿನ ಜೀವನದಲ್ಲಿ ದೇಶೀಯ ಉತ್ಪನ್ನಗಳನ್ನು ಬಳಸುವಂತೆ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಕೊಡುಗೆ ನೀಡುವಂತೆ ಅವರು ಎಲ್ಲಾ ನಾಗರಿಕರಿಗೆ ಮನವಿ ಮಾಡಿದರು. ಈ ಸಮ್ಮೇಳನವು ಕೇವಲ ಔಪಚಾರಿಕವಲ್ಲ, ಆದರೆ ಕ್ರಿಯಾತ್ಮಕ ಸಲಹೆಗಳು ಮತ್ತು ತೀರ್ಮಾನಗಳನ್ನು ದೃಢವಾದ ಮಾರ್ಗಸೂಚಿಯಾಗಿ ಪರಿವರ್ತಿಸುವ ವೇದಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಅಂತಿಮವಾಗಿ, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಜ್ಞಾನಿಗಳು ತಮ್ಮ ಸಂಶೋಧನೆ ನೇರವಾಗಿ ರೈತರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು ಇದರಿಂದ 'ಲ್ಯಾಬ್ ಟು ಲ್ಯಾಂಡ್' (ಪ್ರಯೋಗಾಲಯದಿಂದ ಕೃಷಿ ಭೂಮಿವರೆಗೆ)ಗುರಿಯನ್ನು ನಿಜವಾಗಿಯೂ ಸಾಧಿಸಬಹುದು ಎಂದು ಹೇಳಿದರು.
*****
(Release ID: 2161147)