ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
ಕೊಚ್ಚಿಯಲ್ಲಿ ನಾಳೆಯಿಂದ ಲೋಕ ಸಂವರ್ಧನ ಪರ್ವ ಆರಂಭ
Posted On:
25 AUG 2025 11:28AM by PIB Bengaluru
ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಆಗಸ್ಟ್ 26 ರಿಂದ ಸೆಪ್ಟೆಂಬರ್ 4, 2025 ರವರೆಗೆ ಕೇರಳದ ಕೊಚ್ಚಿಯ ಷಣ್ಮುಗಂ ರಸ್ತೆಯಲ್ಲಿರುವ ಮರೈನ್ ಡ್ರೈವ್ ಮೈದಾನದಲ್ಲಿ 5ನೇ ಆವೃತ್ತಿಯ ಲೋಕ ಸಂವರ್ಧನ ಪರ್ವವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಶ್ರೀ ಜಾರ್ಜ್ ಕುರಿಯನ್ ಅವರು ಉದ್ಘಾಟಿಸಲಿದ್ದಾರೆ.
ಲೋಕ ಸಂವರ್ಧನ ಪರ್ವ ಎಂಬುದು ಸಚಿವಾಲಯದ ಪ್ರಮುಖ ಉಪಕ್ರಮವಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳ ಕುಶಲಕರ್ಮಿಗಳು, ಕರಕುಶಲಿಗಳು, ನೇಕಾರರು, ಪಾಕ ತಜ್ಞರು ಮತ್ತು ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕ ಮತ್ತು ರಾಷ್ಟ್ರೀಯ ಮನ್ನಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ತಮ್ಮ ಕಲೆ, ಕರಕುಶಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಅವರಿಗೆ ವೇದಿಕೆಯನ್ನು ನೀಡುವ ಮೂಲಕ ಆರ್ಥಿಕ ಸಬಲೀಕರಣವನ್ನು ಬಲಪಡಿಸುತ್ತದೆ ಮತ್ತು ಭಾರತದ ರೋಮಾಂಚಕ ವೈವಿಧ್ಯತೆಯನ್ನು ಆಚರಿಸುತ್ತದೆ. ಕೊಚ್ಚಿ ಆವೃತ್ತಿಯು ಕೇರಳದಲ್ಲಿ ಮೊಟ್ಟಮೊದಲ ಲೋಕ ಸಂವರ್ಧನ ಪರ್ವ ಆಗಿದ್ದು, ಇದು ನಗರದ ವಿಶ್ವಮಾನವ ಮನೋಭಾವ, ಉದ್ಯಮಶೀಲತೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವುದರಿಂದ ವಿಶೇಷ ಮಹತ್ವ ಪಡೆದಿದೆ.
ಹತ್ತು ದಿನಗಳ ಈ ಉತ್ಸವದಲ್ಲಿ ದೇಶಾದ್ಯಂತದ 100ಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು 15 ಪಾಕ ತಜ್ಞರು ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದ ಝರಿ ಮತ್ತು ಚಿಕಂಕಾರಿ, ಪಂಜಾಬಿನ ಫುಲ್ಕರಿ ಕಸೂತಿ, ಬಿಹಾರದ ಮಧುಬನಿ ವರ್ಣಚಿತ್ರಗಳು ಮತ್ತು ರಾಜಸ್ಥಾನದ ನೀಲಿ ಕುಂಬಾರಿಕೆ, ಲಡಾಖ್ ನ ಪಶ್ಮಿನಾ ನೇಯ್ಗೆ, ಛತ್ತೀಸಗಢದ ಬಸ್ತರ್ ಕಬ್ಬಿಣದ ಕರಕುಶಲತೆ, ಕರ್ನಾಟಕದ ಚನ್ನಪಟ್ಟಣ ಮರದ ಆಟಿಕೆಗಳು ಮತ್ತು ಕೇರಳದ ನೆಟ್ಟಿಪಟ್ಟಂ ಕಲೆ ಸೇರಿದಂತೆ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಗುವುದು. ಸಾಂಪ್ರದಾಯಿಕ ಪಾಕವಿಧಾನಗಳು, ಮಸಾಲೆಗಳು, ಉಪ್ಪಿನಕಾಯಿ, ಬೇಕರಿ ಉತ್ಪನ್ನಗಳು, ಗಿಡಮೂಲಿಕೆಗಳು ಮತ್ತು ಕರಾವಳಿ ಖಾದ್ಯಗಳನ್ನು ಒಳಗೊಂಡ ವಿಸ್ತಾರವಾದ ಪಾಕಗಳ ಪ್ರದರ್ಶನವನ್ನು ಆನಂದಿಸಲು ಸಂದರ್ಶಕರಿಗೆ ಅವಕಾಶ ಸಿಗುತ್ತದೆ. ಪ್ರದರ್ಶನಗಳ ಜೊತೆಗೆ, ಉತ್ಸವವು ಅಲ್ಪಸಂಖ್ಯಾತ ಸಮುದಾಯಗಳ ಶ್ರೀಮಂತ ಕಲಾತ್ಮಕ ಪರಂಪರೆಯನ್ನು ಎತ್ತಿ ತೋರಿಸುವ ಸಾಂಸ್ಕೃತಿಕ ಪ್ರಸ್ತುತಿಗಳು ಮತ್ತು ನೇರ ಪ್ರದರ್ಶನಗಳನ್ನು ಸಹ ಒಳಗೊಂಡಿರುತ್ತದೆ.
ದೆಹಲಿ ಮತ್ತು ಶ್ರೀನಗರದಲ್ಲಿ ನಡೆದ ಲೋಕ ಸಂವರ್ಧನ ಪರ್ವದ ಹಿಂದಿನ ಆವೃತ್ತಿಗಳು ಅಪಾರ ಉತ್ಸಾಹದಿಂದ ಕೂಡಿದ್ದವು, ಸಮಗ್ರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಿದ್ದಕ್ಕಾಗಿ ಪ್ರಶಂಸೆಯನ್ನು ಗಳಿಸಿದವು. ಕೊಚ್ಚಿ ಆವೃತ್ತಿಯು ಈ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ, ಇದು ಕುಶಲಕರ್ಮಿಗಳು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಮಾತ್ರವಲ್ಲದೆ ಸಾಂಸ್ಕೃತಿಕ ವಿನಿಮಯ ಮತ್ತು ಸಮೃದ್ಧಿಗೂ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸಂಸ್ಕೃತಿಯ ಮೂಲಕ ಸಮುದಾಯಗಳನ್ನು ಸಬಲೀಕರಣಗೊಳಿಸುವ ಲೋಕ ಸಂವರ್ಧನ ಪರ್ವ ಕೇವಲ ಒಂದು ಪ್ರದರ್ಶನವಲ್ಲ, ಬದಲಾಗಿ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಆಚರಣೆಯಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯಗಳ ಕಲಾವಿದರು ಮತ್ತು ಪಾಕತಜ್ಞರಿಗೆ ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ, ಸ್ವಾವಲಂಬನೆ, ಆರ್ಥಿಕ ಸಬಲೀಕರಣ ಮತ್ತು ಕೋಮು ಸಾಮರಸ್ಯವನ್ನು ಉತ್ತೇಜಿಸುತ್ತದೆ. ಕೊಚ್ಚಿ ತನ್ನ ವಿಶ್ವಮಾನವ ಮನೋಭಾವದೊಂದಿಗೆ, ಈ ರೋಮಾಂಚಕ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲು ಸೂಕ್ತ ಸ್ಥಳವಾಗಿದೆ.
ಲೋಕ ಸಂವರ್ಧನ ಪರ್ವವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್, ದೃಷ್ಟಿಕೋನಕ್ಕೆ ಅನುಗುಣವಾಗಿ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವುದರ ಜೊತೆಗೆ ಸಾಂಸ್ಕೃತಿಕ ಬಾಂಧವ್ಯಗಳನ್ನು ಬಲಪಡಿಸುವ ವೇದಿಕೆಯಾಗಿದೆ.
ಉತ್ಸವದ ವಿವರಗಳು
📍 ಸ್ಥಳ: ಮರೈನ್ ಡ್ರೈವ್ ಮೈದಾನ, ಷಣ್ಮುಗಂ ರಸ್ತೆ, ಕೊಚ್ಚಿ, ಕೇರಳ
📅 ದಿನಾಂಕಗಳು: 26 ಆಗಸ್ಟ್ - 4 ಸೆಪ್ಟೆಂಬರ್, 2025
🕒 ಸಮಯ: ಬೆಳಗ್ಗೆ 10:00 - ಸಂಜೆ 7:00 (ಪ್ರತಿದಿನ)
👉 ಪ್ರವೇಶ ಉಚಿತವಾಗಿದೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ.
*****
(Release ID: 2160474)