ಹಣಕಾಸು ಸಚಿವಾಲಯ
"ವೀಡ್ ಔಟ್" ಹೆಸರಿನ ದೇಶವ್ಯಾಪಿ ಕಾರ್ಯಾಚರಣೆಯಲ್ಲಿ ಸುಮಾರು 72 ಕೋಟಿ ರೂಪಾಯಿ ಮೌಲ್ಯದ 72 ಕೆಜಿ ಮಣ್ಣಿಲ್ಲದೇ ಬೆಳೆದ ಗಾಂಜಾ (ಹೈಡ್ರೋಪೋನಿಕ್ ಕಳೆ) ವಶಪಡಿಸಿಕೊಂಡ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ)
Posted On:
22 AUG 2025 3:42PM by PIB Bengaluru
ಭಾರತಕ್ಕೆ ಮಣ್ಣಿಲ್ಲದೇ ಬೆಳೆಯುವ ಗಾಂಜಾ (ಹೈಡ್ರೋಪೋನಿಕ್ ಕಳೆ)ಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಗುಂಪನ್ನು "ವೀಡ್ ಔಟ್" ಎಂಬ ಹೆಸರಿನ ದೇಶವ್ಯಾಪಿ ಕಾರ್ಯಾಚರಣೆಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತೊಡೆದು ಹಾಕಿದೆ. 2025ರ ಆಗಸ್ಟ್ 20 ರಂದು ಸಂಜೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಭೋಪಾಲ್ ನಿಲ್ದಾಣಗಳಲ್ಲಿ DRI ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದರು.


ದೆಹಲಿಗೆ ತೆರಳಲು ಬೆಂಗಳೂರಿನಲ್ಲಿ ರಾಜಧಾನಿ ರೈಲು (22691) ಹತ್ತಿದ್ದ ಇಬ್ಬರು ಪ್ರಯಾಣಿಕರ ಚೀಲಗಳನ್ನು ಕೂಲಂಕಷವಾಗಿ ಪರಿಶೀಲಿಸಿ, 29.88 ಕೆಜಿ ಹೈಡ್ರೋಪೋನಿಕ್ ಕಳೆ ವಶಪಡಿಸಿಕೊಳ್ಳಲಾಗಿದೆ. ಸಂಘಟಿತ ಕಾರ್ಯಾಚರಣೆಯಲ್ಲಿ, ಭೋಪಾಲ್ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ 24.186 ಕೆಜಿ ಕಳೆ ವಶಪಡಿಸಿಕೊಳ್ಳಲಾಗಿದ್ದು, ಇವರು 2025ರ ಆಗಸ್ಟ್ 19 ರಂದು ಬೆಂಗಳೂರಿನಲ್ಲಿ ರಾಜಧಾನಿ ರೈಲು ಹತ್ತಿದ್ದರು.
ಈ ಮಧ್ಯೆ, ಈ ಗುಂಪಿನ ಸಹ ಮಾಸ್ಟರ್ ಮೈಂಡ್ ನನ್ನು ನವದೆಹಲಿಯಲ್ಲಿ ಪತ್ತೆ ಮಾಡಿ, ಮಾದಕವಸ್ತು ಕಳ್ಳಸಾಗಣೆಯಿಂದ ಆತ ಪಡೆದಿದ್ದ 1.02 ಕೋಟಿ ರೂಪಾಯಿ ಹಣವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ತ್ವರಿತ ಕ್ರಮವಾಗಿ, 2025ರ ಆಗಸ್ಟ್ 20 ರಂದು ಥಾಯ್ಲೆಂಡ್ ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನನ್ನು 2025ರ ಆಗಸ್ಟ್ 21 ರಂದು ಬೆಳಗಿನ ಜಾವ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ವಿಚಾರಣೆ ಮಾಡಿದ್ದು, ಆತನಿಂದ 17.958 ಕೆಜಿ ಹೈಡ್ರೋಪೋನಿಕ್ ಕಳೆ ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (NDPS) 1985 ರ ನಿಬಂಧನೆಗಳ ಅಡಿಯಲ್ಲಿ ಸುಮಾರು 72 ಕೋಟಿ ರೂ. ಮೌಲ್ಯದ ಒಟ್ಟು 72.024 ಕೆಜಿ ಮಣ್ಣಿಲ್ಲದೇ ಬೆಳೆದ ಗಾಂಜಾ ಮತ್ತು ಕಳ್ಳಸಾಗಣೆ ಮೂಲಕ ಗಳಿಸಿದ 1.02 ಕೋಟಿ ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಸಹವರ್ತಿ ಮಾಸ್ಟರ್ ಮೈಂಡ್ ಮತ್ತು ಭಾಗಿಯಾಗಿದ್ದ ಎಲ್ಲಾ ಐವರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಈ ಗುಂಪು ಕಾಲೇಜು ವಿದ್ಯಾಭ್ಯಾಸ ತೊರೆದವರು, ಅರೆಕಾಲಿಕ ಉದ್ಯೋಗಿಗಳು ಅಥವಾ ನಿರುದ್ಯೋಗಿ ಯುವಕರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸುತ್ತಿತ್ತು. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮಾದಕವಸ್ತುಗಳ ಬಳಕೆಯ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
*****
(Release ID: 2159836)