ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿಯಾದ 2024ನೇ ಬ್ಯಾಚ್‌ನ ಐ.ಎಫ್‌.ಎಸ್ ಅಧಿಕಾರಿ ತರಬೇತಿದಾರರು


‘ವಿಶ್ವಬಂಧು’ವಾಗಿ ಭಾರತದ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಅವರು ಚರ್ಚಿಸಿದರು. ಸಂಕಷ್ಟದಲ್ಲಿರುವ ದೇಶಗಳಿಗೆ ಭಾರತವು ಹೇಗೆ ಮೊದಲ ಪ್ರತಿಕ್ರಿಯೆ ನೀಡುವ ದೇಶವಾಗಿ ಹೊರಹೊಮ್ಮಿದೆ ಎಂಬುದಕ್ಕೆ ಅವರು ಉದಾಹರಣೆಗಳನ್ನು ನೀಡಿದರು

2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶ ಸಾಗುತ್ತಿರುವಾಗ, ಭವಿಷ್ಯದ ರಾಜತಾಂತ್ರಿಕರಾಗಿ ಅಧಿಕಾರಿ ತರಬೇತುದಾರರ ಪಾತ್ರದ ಮಹತ್ವವನ್ನು ಪ್ರಧಾನಮಂತ್ರಿ ಅವರು ಚರ್ಚಿಸಿದರು

ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಸಂವಹನದ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಅವರು ಒತ್ತು ನೀಡಿದರು

ರಸಪ್ರಶ್ನೆಗಳು ಮತ್ತು ಚರ್ಚೆಗಳ ಮೂಲಕ ವಿವಿಧ ದೇಶಗಳ ಯುವಜನರಲ್ಲಿ ಭಾರತದ ಬಗ್ಗೆ ಕುತೂಹಲ ಮೂಡಿಸುವಂತೆ ಪ್ರಧಾನಮಂತ್ರಿ ತರಬೇತುದಾರರಿಗೆ ಕರೆ ನೀಡಿದರು

ಜಾಗತಿಕವಾಗಿ ಖಾಸಗಿ ವಲಯಕ್ಕೆ ಅವಕಾಶಗಳು ಹೆಚ್ಚುತ್ತಿದ್ದು, ಬಾಹ್ಯಾಕಾಶ ವಲಯದಲ್ಲಿನ ಈ ಅವಕಾಶವನ್ನು ತುಂಬುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು

Posted On: 19 AUG 2025 8:34PM by PIB Bengaluru

ಭಾರತೀಯ ವಿದೇಶಾಂಗ ಸೇವೆ (ಐ.ಎಫ್‌.ಎಸ್)ಯ 2024ರ ಬ್ಯಾಚ್‌ ನ ಅಧಿಕಾರಿ ತರಬೇತಿದಾರರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅವರ 7, ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಭೇಟಿಯಾದರು. 2024ರ ಈ ಬ್ಯಾಚ್‌ನಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ 33 ಐ.ಎಫ್‌.ಎಸ್ ಅಧಿಕಾರಿ ತರಬೇತಿದಾರರಿದ್ದಾರೆ.

ಪ್ರಧಾನಮಂತ್ರಿ ಅವರು ಪ್ರಸ್ತುತದ ಬಹು-ಧ್ರುವೀಯ ಜಗತ್ತಿನ ಬಗ್ಗೆ ಮತ್ತು ‘ವಿಶ್ವಬಂಧು’ವಾಗಿ ಎಲ್ಲರೊಂದಿಗೂ ಸ್ನೇಹವನ್ನು ಕಾಪಾಡುವ ಭಾರತದ ವಿಶಿಷ್ಟ ಪಾತ್ರದ ಬಗ್ಗೆ ಚರ್ಚಿಸಿದರು. ಸಂಕಷ್ಟದಲ್ಲಿರುವ ದೇಶಗಳಿಗೆ ಭಾರತವು ಹೇಗೆ ಮೊದಲ ಪ್ರತಿಕ್ರಿಯೆ ನೀಡುವ ದೇಶವಾಗಿ ಹೊರಹೊಮ್ಮಿದೆ ಎಂಬುದಕ್ಕೆ ಅವರು ಉದಾಹರಣೆಗಳನ್ನು ನೀಡಿದರು. ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ನೆರವಾಗಲು ಭಾರತ ಕೈಗೊಂಡಿರುವ ಸಾಮರ್ಥ್ಯ ನಿರ್ಮಾಣ ಪ್ರಯತ್ನಗಳು ಮತ್ತು ಇತರ ಕಾರ್ಯಕ್ರಮಗಳನ್ನು ಸಹ ಅವರು ಒತ್ತಿ ಹೇಳಿದರು. ವಿದೇಶಾಂಗ ನೀತಿಯ ವಿಕಸನಗೊಳ್ಳುತ್ತಿರುವ ಮಹತ್ವ ಮತ್ತು ಜಾಗತಿಕ ವೇದಿಕೆಗಳಲ್ಲಿ ಅದರ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. ಜಾಗತಿಕ ವೇದಿಕೆಯಲ್ಲಿ ದೇಶವು ‘ವಿಶ್ವಬಂಧು’ವಾಗಿ ಬೆಳೆಯುವಲ್ಲಿ ರಾಜತಾಂತ್ರಿಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶ ಸಾಗುತ್ತಿರುವಾಗ, ಭವಿಷ್ಯದ ರಾಜತಾಂತ್ರಿಕರಾಗಿ ಈ ಅಧಿಕಾರಿ ತರಬೇತುದಾರರ ಪಾತ್ರದ ಮಹತ್ವವನ್ನು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿ ಅವರು ಅಧಿಕಾರಿ ತರಬೇತಿದಾರರೊಂದಿಗೆ ವ್ಯಾಪಕ ಸಂವಾದ ನಡೆಸಿದರು ಮತ್ತು ಸರ್ಕಾರಿ ಸೇವೆಗೆ ಸೇರಿದ ನಂತರದ ಅವರ ಅನುಭವಗಳ ಬಗ್ಗೆ ವಿಚಾರಿಸದರು. ಅಧಿಕಾರಿ ತರಬೇತಿದಾರರು ತಮ್ಮ ತರಬೇತಿ ಮತ್ತು ಸಂಶೋಧನಾ ಕಾರ್ಯಗಳ ಅನುಭವಗಳನ್ನು ಹಂಚಿಕೊಂಡರು. ಇದರಲ್ಲಿ ಸಾಗರಯಾನ ರಾಜತಾಂತ್ರಿಕತೆ, ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್, ಆಯುರ್ವೇದ, ಸಾಂಸ್ಕೃತಿಕ ಸಂಪರ್ಕ, ಆಹಾರ ಮತ್ತು ಮೃದು ಶಕ್ತಿ (Soft Power) ಮುಂತಾದ ವಿಷಯಗಳು ಸೇರಿದ್ದವು.

'ನಿಮ್ಮ ಭಾರತವನ್ನು ತಿಳಿಯಿರಿ' (Know Your Bharat) ರಸಪ್ರಶ್ನೆಗಳು ಮತ್ತು ಚರ್ಚೆಗಳ ಮೂಲಕ ನಾವು ವಿವಿಧ ದೇಶಗಳ ಯುವಜನರಲ್ಲಿ ಭಾರತದ ಬಗ್ಗೆ ಕುತೂಹಲವನ್ನು ಸೃಷ್ಟಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಈ ರಸಪ್ರಶ್ನೆಗಳ ಪ್ರಶ್ನೆಗಳನ್ನು ನಿಯಮಿತವಾಗಿ ನವೀಕರಿಸಬೇಕು ಮತ್ತು ಮಹಾಕುಂಭ, ಗಂಗೈಕೊಂಡ ಚೋಳಪುರಂ ದೇವಾಲಯದ 1000 ವರ್ಷಗಳ ಸಂಭ್ರಮಾಚರಣೆ ಮುಂತಾದ ಭಾರತದ ಸಮಕಾಲೀನ ವಿಷಯಗಳನ್ನು ಅದರಲ್ಲಿ ಸೇರಿಸಬೇಕು ಎಂದು ಕೂಡ ಅವರು ಹೇಳಿದರು.

ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಸಂವಹನದ ಪ್ರಮುಖ ಪಾತ್ರವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಭಾರತೀಯ ವಲಸಿಗರೊಂದಿಗೆ ಪರಿಣಾಮಕಾರಿ ಸಂವಹನಕ್ಕಾಗಿ ಎಲ್ಲಾ ರಾಯಭಾರ ಕಚೇರಿಗಳ ವೆಬ್‌ ಸೈಟ್‌ ಗಳನ್ನು ಪರಿಶೀಲಿಸಿ, ಅವುಗಳನ್ನು ಸುಧಾರಿಸಲು ಏನು ಮಾಡಬಹುದು ಎಂಬುದನ್ನು ಕಂಡುಕೊಳ್ಳುವಂತೆ ಅವರು ಅಧಿಕಾರಿ ತರಬೇತಿದಾರರಿಗೆ ಕರೆ ನೀಡಿದರು.

ಬಾಹ್ಯಾಕಾಶ ವಲಯವನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸುತ್ತಿರುವುದರ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿ, ಈ ವಲಯದಲ್ಲಿ ಬರುತ್ತಿರುವ ಭಾರತೀಯ ಸ್ಟಾರ್ಟ್‌ ಅಪ್‌ ಗಳ ವ್ಯಾಪ್ತಿಯನ್ನು ವಿಸ್ತರಿಸಲು ಇತರ ದೇಶಗಳಲ್ಲಿನ ಅವಕಾಶಗಳನ್ನು ಅನ್ವೇಷಿಸುವಂತೆ ಒತ್ತಿ ಹೇಳಿದರು. ಬಾಹ್ಯಾಕಾಶ ವಲಯದಲ್ಲಿನ ಈ ಅವಕಾಶವನ್ನು ತುಂಬುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 

*****
 


(Release ID: 2158206)