ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 18ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು


ಭಾರತದಲ್ಲಿ, ಸಂಪ್ರದಾಯವು ನಾವೀನ್ಯತೆಯನ್ನು ಭೇಟಿ ಮಾಡುತ್ತದೆ, ಆಧ್ಯಾತ್ಮಿಕತೆಯು ವಿಜ್ಞಾನವನ್ನು ಭೇಟಿ ಮಾಡುತ್ತದೆ ಮತ್ತು ಕುತೂಹಲವು ಸೃಜನಶೀಲತೆಯನ್ನು ಭೇಟಿ ಮಾಡುತ್ತದೆ; ಶತಮಾನಗಳಿಂದ, ಭಾರತೀಯರು ಆಕಾಶವನ್ನು ವೀಕ್ಷಿಸುತ್ತಿದ್ದಾರೆ ಮತ್ತು ದೊಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ: ಪ್ರಧಾನಮಂತ್ರಿ

ನಾವು ವಿಶ್ವದ ಅತಿ ಎತ್ತರದ, ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿ ಖಗೋಳ ವೀಕ್ಷಣಾಲಯಗಳಲ್ಲಿ ಒಂದನ್ನು ಲಡಾಖ್‌ನಲ್ಲಿ ನಿಯೋಜಿಸಿದ್ದೇವೆ, ಇದು ನಕ್ಷತ್ರಗಳೊಂದಿಗೆ ಕೈಕುಲುಕುವಷ್ಟು ಹತ್ತಿರದಲ್ಲಿದೆ: ಪ್ರಧಾನಮಂತ್ರಿ

ಭಾರತವು ವೈಜ್ಞಾನಿಕ ಕುತೂಹಲವನ್ನು ಪೋಷಿಸಲು ಮತ್ತು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸಲು ಕಟಿಬದ್ಧವಾಗಿದೆ: ಪ್ರಧಾನಮಂತ್ರಿ

ನಾವು ವಿಶ್ವವನ್ನು ಅನ್ವೇಷಿಸುವಾಗ, ಬಾಹ್ಯಾಕಾಶ ವಿಜ್ಞಾನವು ಹೇಗೆ ಭೂಮಿಯ ಮೇಲಿನ ಜನರ ಜೀವನವನ್ನು ಇನ್ನಷ್ಟು ಸುಧಾರಿಸಬಲ್ಲುದು ಎಂಬುದನ್ನು ನಾವು ಕೇಳಬೇಕು: ಪ್ರಧಾನಮಂತ್ರಿ

ಭಾರತವು ಅಂತಾರಾಷ್ಟ್ರೀಯ ಸಹಯೋಗದ ಶಕ್ತಿಯನ್ನು ನಂಬುತ್ತದೆ ಮತ್ತು ಈ ಒಲಿಂಪಿಯಾಡ್ ಆ ಮನೋಭಾವವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

Posted On: 12 AUG 2025 7:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 18 ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು 64 ದೇಶಗಳಿಂದ ಬಂದಿದ್ದ 300 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ  ಸಂಪರ್ಕ ಸಾಧಿಸಲು ಸಾಧ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಾಗಿ ಭಾರತಕ್ಕೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. "ಭಾರತದಲ್ಲಿ, ಸಂಪ್ರದಾಯವು ನಾವೀನ್ಯತೆಯನ್ನು ಭೇಟಿ ಮಾಡುತ್ತದೆ, ಆಧ್ಯಾತ್ಮಿಕತೆಯು ವಿಜ್ಞಾನವನ್ನು ಸಂಗಮಿಸುತ್ತದೆ ಮತ್ತು ಕುತೂಹಲವು ಸೃಜನಶೀಲತೆಯನ್ನು ಭೇಟಿ ಮಾಡುತ್ತದೆ. ಶತಮಾನಗಳಿಂದ, ಭಾರತೀಯರು ಆಕಾಶವನ್ನು ಗಮನಿಸುತ್ತಿದ್ದಾರೆ ಮತ್ತು ದೊಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ" ಎಂದು ಶ್ರೀ ಮೋದಿ ಹೇಳಿದರು. 5 ನೇ ಶತಮಾನದಲ್ಲಿ ಶೂನ್ಯವನ್ನು ಕಂಡುಹಿಡಿದ ಮತ್ತು ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ ಎಂದು ಮೊದಲು ಹೇಳಿದ ಆರ್ಯಭಟನ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. "ಅಕ್ಷರಶಃ, ಅವರು ಶೂನ್ಯದಿಂದ ಪ್ರಾರಂಭಿಸಿ ಇತಿಹಾಸವನ್ನು ನಿರ್ಮಿಸಿದರು!" ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು.

"ಭಾರತವು ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದನ್ನು ಹೊಂದಿದೆ, ಇದು ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿದೆ. ಇದು ನಕ್ಷತ್ರಗಳೊಂದಿಗೆ ಕೈಕುಲುಕುವಷ್ಟು ಹತ್ತಿರದಲ್ಲಿದೆ!" ಎಂದು ಶ್ರೀ ಮೋದಿ ಹೇಳಿದರು. ಪುಣೆಯಲ್ಲಿರುವ ಜೈಂಟ್ ಮೀಟರ್‌ವೇವ್ ರೇಡಿಯೋ ದೂರದರ್ಶಕವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು, ಇದು ಮಿನುಗುವ ನಕ್ಷತ್ರಗಳು(ಪಲ್ಸರ್‌ಗಳು), ಅರೆ ನಕ್ಷತ್ರಗಳಾದ ಕ್ವಾಸಾರ್‌ಗಳು ಮತ್ತು ನಕ್ಷತ್ರಪುಂಜಗಳ (ಗೆಲಕ್ಸಿಗಳ) ರಹಸ್ಯಗಳನ್ನು ಅರ್ಥೈಸುವಲ್ಲಿ ಸಹಾಯ ಮಾಡುವ ವಿಶ್ವದ ಅತ್ಯಂತ ಸೂಕ್ಷ್ಮ ರೇಡಿಯೋ ದೂರದರ್ಶಕಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು. ಬೃಹತ್ ರೇಡಿಯೋ ಟೆಲಿಸ್ಕೋಪ್ ಆಗಿರುವ ಸ್ಕ್ವೇರ್ ಕಿಲೋಮೀಟರ್ ಅರೇ ಮತ್ತು ಲಿಗೋ-ಇಂಡಿಯಾದಂತಹ ಜಾಗತಿಕ ಮೆಗಾ-ವಿಜ್ಞಾನ ಯೋಜನೆಗಳಿಗೆ ಭಾರತ ಹೆಮ್ಮೆಯಿಂದ ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಎರಡು ವರ್ಷಗಳ ಹಿಂದೆ, ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಯುವ ಮೊದಲ ಮಿಷನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ ಎಂದು ಅವರು ನೆನಪಿಸಿಕೊಂಡರು. ಸೌರ ಜ್ವಾಲೆಗಳು, ಬಿರುಗಾಳಿಗಳು ಮತ್ತು ಸೂರ್ಯನ ವಸ್ತುಸ್ಥಿತಿಯ ಏರಿಳಿತಗಳನ್ನು ಮೇಲ್ವಿಚಾರಣೆ ಮಾಡುವ ಆದಿತ್ಯ-ಎಲ್ 1 ಸೌರ ವೀಕ್ಷಣಾಲಯದೊಂದಿಗೆ ಭಾರತವು ಸೂರ್ಯನ ಮೇಲೆ ತನ್ನ ದೃಷ್ಟಿಯನ್ನು ಇರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಕಳೆದ ತಿಂಗಳು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಮ್ಮ ಐತಿಹಾಸಿಕ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು, ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣ ಮತ್ತು ಯುವ ಅನ್ವೇಷಕರಿಗೆ ಸ್ಫೂರ್ತಿ ಎಂದು ಅವರು ಹೇಳಿದರು.

ಭಾರತವು ವೈಜ್ಞಾನಿಕ ಕುತೂಹಲವನ್ನು ಪೋಷಿಸಲು ಮತ್ತು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸಲು ಕಟಿ ಬದ್ಧವಾಗಿದೆ ಎಂದು ದೃಢಪಡಿಸಿದ ಪ್ರಧಾನಮಂತ್ರಿ, ಅಟಲ್ ಟಿಂಕರಿಂಗ್ ಲ್ಯಾಬ್‌ಗಳಲ್ಲಿ ಪ್ರಯೋಗಗಳ ಮೂಲಕ 10 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಟೆಮ್ (STEM) ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ, ಇದರಿಂದಾಗಿ ಕಲಿಕೆ ಮತ್ತು ನಾವೀನ್ಯತೆಯ ಸಂಸ್ಕೃತಿ ಸೃಷ್ಟಿಯಾಗುತ್ತಿದೆ ಎಂದು ಒತ್ತಿ ಹೇಳಿದರು. ಜ್ಞಾನದ ಪ್ರವೇಶವನ್ನು ಹೆಚ್ಚು ಪ್ರಜಾಪ್ರಭುತ್ವೀಕರಣಗೊಳಿಸಲು, 'ಒಂದು ರಾಷ್ಟ್ರ ಒಂದು ಚಂದಾದಾರಿಕೆ' ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉಚಿತವಾಗಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಜರ್ನಲ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಸ್ಟೆಮ್ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಭಾರತವು ಮುಂಚೂಣಿ ಪ್ರಮುಖ ದೇಶವಾಗಿದೆ ಎಂದು ಅವರು ಹೇಳಿದರು. ವಿವಿಧ ಉಪಕ್ರಮಗಳ ಅಡಿಯಲ್ಲಿ, ಸಂಶೋಧನಾ ಪರಿಸರ ವ್ಯವಸ್ಥೆಯಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ಅಧ್ಯಯನ ಮಾಡಲು, ಸಂಶೋಧನೆ ಮಾಡಲು ಮತ್ತು ಸಹಯೋಗಕ್ಕಾಗಿ ಪ್ರಪಂಚದಾದ್ಯಂತದ ಯುವ ಮನಸ್ಸುಗಳಿಗೆ ಅವರು ಆಹ್ವಾನವನ್ನು ನೀಡಿದರು. "ಮುಂದಿನ ದೊಡ್ಡ ವೈಜ್ಞಾನಿಕ ಪ್ರಗತಿಯು ಇಂತಹ ಪಾಲುದಾರಿಕೆಗಳಿಂದ ಜನಿಸಬಹುದೇ ಎಂಬುದನ್ನು  ಯಾರು ಬಲ್ಲರು!" ಎಂದು ಅವರು ಹೇಳಿದರು.

ಮಾನವೀಯತೆಗೆ ಪ್ರಯೋಜನವನ್ನು ನೀಡುವ ಗುರಿಯೊಂದಿಗೆ ಇಲ್ಲಿ ಭಾಗವಹಿಸಿರುವವರು  ತಮ್ಮ ಪ್ರಯತ್ನಗಳನ್ನು ಜೋಡಿಸಲು ಪ್ರೋತ್ಸಾಹಿಸಿದ, ಶ್ರೀ ಮೋದಿ ಅವರು ಬಾಹ್ಯಾಕಾಶ ವಿಜ್ಞಾನವು ಭೂಮಿಯ ಮೇಲಿನ ಜೀವನವನ್ನು ಹೇಗೆ ಮತ್ತಷ್ಟು ಸುಧಾರಿಸುತ್ತದೆ ಎಂಬುದನ್ನು ಗಮನಿಸುವಂತೆ ಯುವ ಅನ್ವೇಷಕರನ್ನು ಆಗ್ರಹಿಸಿದರು. ಅವರು ನಿರ್ಣಾಯಕ ಪ್ರಶ್ನೆಗಳನ್ನು ಕೇಳಿದರು: ರೈತರಿಗೆ ಇನ್ನೂ ಉತ್ತಮ ಹವಾಮಾನ ಮುನ್ಸೂಚನೆಗಳನ್ನು ಹೇಗೆ ಒದಗಿಸಬಹುದು? ನಾವು ನೈಸರ್ಗಿಕ ವಿಕೋಪಗಳನ್ನು ಊಹಿಸಬಹುದೇ? ನಾವು ಕಾಡಿನ ಬೆಂಕಿ ಮತ್ತು ಕರಗುವ ಹಿಮನದಿಗಳನ್ನು ಮೇಲ್ವಿಚಾರಣೆ ಮಾಡಬಹುದೇ? ದೂರದ ಪ್ರದೇಶಗಳಿಗೆ ನಾವು ಉತ್ತಮ ಸಂವಹನವನ್ನು ನಿರ್ಮಿಸಬಹುದೇ? ಎಂಬೆಲ್ಲ ಪ್ರಶ್ನೆಗಳನ್ನು ಅವರು ಕೇಳಿದರು. ವಿಜ್ಞಾನದ ಭವಿಷ್ಯವು ಯುವ ಮನಸ್ಸುಗಳ ಕೈಯಲ್ಲಿದೆ ಮತ್ತು ಕಲ್ಪನೆ ಹಾಗು ಸಹಾನುಭೂತಿಯೊಂದಿಗೆ ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅದರ ಭವಿಷ್ಯವಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಅಲ್ಲಿ ಏನಿದೆ?" ಎಂದು ಕೇಳಲು ಮತ್ತು ಭೂಮಿಯ ಮೇಲಿನ ಜನರ ಜೀವನವನ್ನು ಸುಧಾರಿಸಲು ಅದು ನಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಯೋಚಿಸಲು ಅವರನ್ನು  ಪ್ರಧಾನಮಂತ್ರಿ ಒತ್ತಾಯಿಸಿದರು.

ಭಾರತವು ಅಂತಾರಾಷ್ಟ್ರೀಯ ಸಹಯೋಗದ ಶಕ್ತಿಯನ್ನು ನಂಬುತ್ತದೆ ಮತ್ತು ಒಲಿಂಪಿಯಾಡ್ ಮನೋಭಾವವನ್ನು ಪ್ರತಿಬಿಂಬಿಸುತ್ತದೆ" ಎಂದು ಪ್ರಧಾನಮಂತ್ರಿ ಉದ್ಗರಿಸಿದರು, ಈ ಒಲಿಂಪಿಯಾಡ್ ಆವೃತ್ತಿಯು ಇದುವರೆಗಿನ ಅತಿದೊಡ್ಡ ಆವೃತ್ತಿಯಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರು ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರ ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಉನ್ನತ ಗುರಿ ಮತ್ತು ದೊಡ್ಡ ಕನಸು ಕಾಣುವಂತೆ ಶ್ರೀ ಮೋದಿ ಪ್ರೋತ್ಸಾಹಿಸಿದರು. "ಮತ್ತು ನೆನಪಿಡಿ, ಭಾರತದಲ್ಲಿ, ಆಕಾಶಕ್ಕೆ ಮಿತಿಯಲ್ಲ, ಇದು ಕೇವಲ ಆರಂಭ ಎಂದು ನಾವು ನಂಬುತ್ತೇವೆ!" ಎಂದು ಪ್ರಧಾನಮಂತ್ರಿ ಹೇಳಿದರು.

 


(Release ID: 2155914)