ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಭಾರತದ ಎಥೆನಾಲ್ ಪ್ರಯಾಣವನ್ನು ತಡೆಯಲು ಸಾಧ್ಯವಿಲ್ಲ: ಶ್ರೀ ಹರ್ದೀಪ್ ಸಿಂಗ್ ಪುರಿ
Posted On:
08 AUG 2025 6:55PM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು, ಪಯೋನೀರ್ ಬಯೋಫ್ಯೂಯಲ್ಸ್ 360 ಶೃಂಗಸಭೆಯ ಸಂದರ್ಭದಲ್ಲಿ ಇಂದು ನಡೆದ ಫೈರ್‌ಸೈಡ್ ಚಾಟ್ ಸೆಷನ್‌ನಲ್ಲಿ ಭಾಗವಹಿಸಿ, “ಭಾರತದ ಎಥೆನಾಲ್ ಪ್ರಯಾಣವು ತಡೆಯಲಾಗದು” ಎಂದು ಹೇಳಿದರು.

ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮದ ಯಶಸ್ಸಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರವೇ ಎಥೆನಾಲ್ ಮಿಶ್ರಣವು ಗಂಭೀರ ವೇಗವನ್ನು ಪಡೆದುಕೊಂಡಿತು ಎಂದು ಹೇಳಿದರು. 2014ರಲ್ಲಿ ಎಥೆನಾಲ್ ಮಿಶ್ರಣ ಕೇವಲ ಶೇ. 1.53ರಷ್ಟಿತ್ತು. 2022ರ ವೇಳೆಗೆ, ಭಾರತವು ನಿಗದಿತ ಸಮಯಕ್ಕಿಂತ ಐದು ತಿಂಗಳು ಮೊದಲೇ ಶೇ. 10ರಷ್ಟು ಮಿಶ್ರಣದ ಗುರಿಯನ್ನು ಸಾಧಿಸಿತು. 2030ರ ವೇಳೆಗೆ ಶೇ. 20ರಷ್ಟು ಮಿಶ್ರಣದ (E20) ಮೂಲ ಗುರಿಯನ್ನು 2025ಕ್ಕೆ ನಿಗದಿಪಡಿಸಲಾಗಿದ್ದು, ಪ್ರಸ್ತುತ ಎಥೆನಾಲ್ ಪೂರೈಕೆ ವರ್ಷದಲ್ಲಿ (ESY) ಈಗಾಗಲೇ ಅದನ್ನು ಸಾಧಿಸಲಾಗಿದೆ. ಎಥೆನಾಲ್‌ಗೆ ಖಾತರಿ ಬೆಲೆ ನೀಡುವುದು, ವಿವಿಧ ಮೂಲಗಳಿಂದ ಕಚ್ಚಾ ವಸ್ತುಗಳನ್ನು ಬಳಸಲು ಅವಕಾಶ ನೀಡುವುದು ಮತ್ತು ದೇಶಾದ್ಯಂತ ಡಿಸ್ಟಿಲೇಶನ್ ಸಾಮರ್ಥ್ಯವನ್ನು ವೇಗವಾಗಿ ವಿಸ್ತರಿಸುವಂತಹ ನಿರಂತರ ನೀತಿ ಸುಧಾರಣೆಗಳಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಎಥೆನಾಲ್-ಮಿಶ್ರಿತ ಇಂಧನದ ಬಗ್ಗೆ ಹಬ್ಬಿರುವ ತಪ್ಪು ಮಾಹಿತಿ ಮತ್ತು ಸುಳ್ಳು ಕಥೆಗಳ ಬಗ್ಗೆ ಸ್ಪಷ್ಟನೆ ನೀಡುತ್ತಾ, ಕಳೆದ 10 ತಿಂಗಳಿಂದ E20 ಮೂಲ ಇಂಧನವಾಗಿ ಬಳಕೆಯಾದಾಗಿನಿಂದ, ಒಂದೇ ಒಂದು ಇಂಜಿನ್ ವೈಫಲ್ಯ ಅಥವಾ ಸ್ಥಗಿತವಾದ ಘಟನೆ ವರದಿಯಾಗಿಲ್ಲ ಎಂದು ಶ್ರೀ ಪುರಿ ಒತ್ತಿ ಹೇಳಿದರು. ಬ್ರೆಜಿಲ್‌ನ ಉದಾಹರಣೆಯನ್ನು ಉಲ್ಲೇಖಿಸಿ, ಯಾವುದೇ ಸಮಸ್ಯೆಗಳಿಲ್ಲದೆ ಆ ದೇಶವು ವರ್ಷಗಳಿಂದ E27 ಅನ್ನು ಬಳಸುತ್ತಿದೆ ಎಂದು ಅವರು ತಿಳಿಸಿದರು.
ಕೆಲವು ಲಾಬಿಗಳು ತಮ್ಮ ಸ್ವಾರ್ಥಕ್ಕಾಗಿ ಭಾರತದ ಎಥೆನಾಲ್ ಕ್ರಾಂತಿಗೆ ತಡೆಯೊಡ್ಡಲು ಮತ್ತು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಆದರೆ, ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಬಲವಾದ ನೀತಿ ಬೆಂಬಲ, ಉದ್ಯಮದ ಸನ್ನದ್ಧತೆ ಮತ್ತು ಸಾರ್ವಜನಿಕರ ಸ್ವೀಕಾರದೊಂದಿಗೆ E20 ಪರಿವರ್ತನೆ ಈಗಾಗಲೇ ದೃಢವಾಗಿ ನಡೆಯುತ್ತಿದೆ ಮತ್ತು ಇಲ್ಲಿಂದ ಹಿಂದಿರುಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
E20 ಇಂಧನದಿಂದಾಗುವ ಪ್ರಯೋಜನಗಳ ಕುರಿತು ವಿವರಿಸಿದ ಸಚಿವರು, ಇದು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ, ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ, ಇಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಈಗಾಗಲೇ ₹1.4 ಲಕ್ಷ ಕೋಟಿಗಿಂತಲೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಿದೆ ಎಂದು ಹೇಳಿದರು. ಪಾಣಿಪತ್ ಮತ್ತು ನುಮಾಲಿಗಢದಲ್ಲಿರುವ 2G ಎಥೆನಾಲ್ ಸಂಸ್ಕರಣಾಗಾರಗಳು ಕೃಷಿ ತ್ಯಾಜ್ಯಗಳಾದ ಪರಲಿ ಮತ್ತು ಬಿದಿರನ್ನು ಎಥೆನಾಲ್ ಆಗಿ ಪರಿವರ್ತಿಸುತ್ತಿವೆ, ಇದು ಶುದ್ಧ ಇಂಧನ, ಮಾಲಿನ್ಯ ನಿಯಂತ್ರಣ ಮತ್ತು ರೈತರ ಆದಾಯಕ್ಕೆ ಒಂದು ಉತ್ತಮ ಪರಿಹಾರವಾಗಿದೆ ಎಂದು ಅವರು ತಿಳಿಸಿದರು. ಇದಲ್ಲದೆ, 2021-22ರಲ್ಲಿ ಶೂನ್ಯದಿಂದ ಈ ವರ್ಷ ಶೇ. 42ಕ್ಕೆ ಏರಿಕೆಯಾಗಿರುವ ಮೆಕ್ಕೆಜೋಳ ಆಧಾರಿತ ಎಥೆನಾಲ್ ಉತ್ಪಾದನೆಯ ಗಮನಾರ್ಹ ಬೆಳವಣಿಗೆಯನ್ನು ಅವರು ಒಂದು ಕ್ರಾಂತಿಕಾರಿ ಬದಲಾವಣೆ ಎಂದು ಬಣ್ಣಿಸಿದರು.

ಫ್ಲೆಕ್ಸ್-ಫ್ಯೂಯೆಲ್ ವಾಹನಗಳ (FFV) ಕುರಿತು ಮಾತನಾಡಿದ ಶ್ರೀ ಪುರಿ, ಭಾರತೀಯ ಆಟೋಮೊಬೈಲ್ ಉದ್ಯಮವು ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ ಎಂದು ಹೇಳಿದರು. ಭಾರತದ ವಾಹನ ತಯಾರಕ ಕಂಪನಿಗಳು (OEM) E85 ಇಂಧನಕ್ಕೆ ಹೊಂದಿಕೊಳ್ಳುವ ಮಾದರಿಗಳನ್ನು ತಯಾರಿಸಲು ಪ್ರಾರಂಭಿಸಿವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಮತ್ತು ಇತರ ಪ್ರಮುಖ ವಾಹನ ತಯಾರಕರೊಂದಿಗೆ ನಿರಂತರ ಸಭೆಗಳನ್ನು ನಡೆಸಲಾಗಿದೆ ಮತ್ತು ಹೆಚ್ಚಿನ ಎಥೆನಾಲ್ ಮಿಶ್ರಣಗಳ ಕಡೆಗೆ ಕ್ರಮೇಣ ಸಾಗುವುದು ಸ್ಪಷ್ಟವಾಗಿದೆ. 'ಎಥೆನಾಲ್ ಬ್ಲೆಂಡಿಂಗ್ ರೋಡ್ ಮ್ಯಾಪ್ (2020-25)' ಒಂದು ಬಲವಾದ ಅಡಿಪಾಯ ಹಾಕಿದೆ. ನಿಗದಿತ ಗುರಿಗಿಂತ ಐದು ವರ್ಷ ಮುಂಚಿತವಾಗಿ E20 ಇಂಧನದ ಯಶಸ್ವಿ ಬಿಡುಗಡೆಯು ಉದ್ಯಮ ಮತ್ತು ಗ್ರಾಹಕ ಇಬ್ಬರೂ ಇದಕ್ಕೆ ಸಿದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಈಗ ದೇಶವು, BIS ಮಾನದಂಡಗಳು ಮತ್ತು ಸರ್ಕಾರದ ಪ್ರೋತ್ಸಾಹದೊಂದಿಗೆ, ಹಂತ ಹಂತವಾಗಿ E25, E27, ಮತ್ತು E30 ಇಂಧನಗಳ ಕಡೆಗೆ ಸಾಗಲಿದೆ.
ಎಥೆನಾಲ್ ಮಿಶ್ರಣ ಕೇವಲ ಇಂಧನವನ್ನು ಸೇರಿಸುವುದಲ್ಲ, ಇದು ರೈತರನ್ನು 'ಅನ್ನದಾತ'ರನ್ನಾಗಿ ಮಾಡುವುದರ ಜೊತೆಗೆ 'ಊರ್ಜಾದಾತ'ರನ್ನಾಗಿ ಮಾಡುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ಇದರ ಮುಖ್ಯ ಉದ್ದೇಶ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದು, ವಿದೇಶಿ ವಿನಿಮಯವನ್ನು ಉಳಿಸುವುದು, ಪರಿಸರ ಸ್ನೇಹಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಹವಾಮಾನ ಬದಲಾವಣೆಯ ಕುರಿತಂತೆ ಭಾರತದ ಬದ್ಧತೆಗಳನ್ನು ಈಡೇರಿಸುವುದು. ಕಳೆದ 11 ವರ್ಷಗಳಲ್ಲಿ, ಎಥೆನಾಲ್ ಸಂಗ್ರಹಣೆಯಿಂದಾಗಿ ರೈತರಿಗೆ ₹1.21 ಲಕ್ಷ ಕೋಟಿ ಆದಾಯ ಬಂದಿದೆ. ಇದು 238.68 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿದ್ದು, ₹1.40 ಲಕ್ಷ ಕೋಟಿ ವಿದೇಶಿ ವಿನಿಮಯವನ್ನು ಉಳಿಸಿದೆ.
ಸುಸ್ಥಿರ ವಿಮಾನ ಇಂಧನ (SAF) ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ಮಾತನಾಡಿದ ಶ್ರೀ ಪುರಿ, ಪೆಟ್ರೋಲಿಯಂ ಸಚಿವಾಲಯವು ತೈಲ ಕಂಪನಿಗಳು, ವಿಮಾನಯಾನ ಸಂಸ್ಥೆಗಳು ಮತ್ತು ಜಾಗತಿಕ ತಂತ್ರಜ್ಞಾನ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಎಥೆನಾಲ್ ನಂತೆಯೇ, SAF ಅಳವಡಿಕೆಗೆ ಭಾರತವು ಹಂತಹಂತದ ವಿಧಾನವನ್ನು ಅನುಸರಿಸಲಿದೆ. ಈಗಾಗಲೇ ಮಿಶ್ರಣ ಕಡ್ಡಾಯವನ್ನು ಜಾರಿಗೆ ತರಲಾಗಿದ್ದು, 2027ರ ವೇಳೆಗೆ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಶೇ.1 ರಷ್ಟು SAF ಮಿಶ್ರಣ ಮಾಡುವುದು, 2028ರ ವೇಳೆಗೆ ಅದನ್ನು ಶೇ.2ಕ್ಕೆ ಹೆಚ್ಚಿಸುವುದು ಮತ್ತು ಪೂರೈಕೆ ಸ್ಥಿರವಾದಂತೆ ಅದನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಪಾಣಿಪತ್ ಸಂಸ್ಕರಣಾಗಾರವು ಬಳಸಿದ ಅಡುಗೆ ಎಣ್ಣೆಯಿಂದ SAF ಉತ್ಪಾದಿಸುತ್ತಿದೆ. ಇದು ಭಾರತದ ನವೀನ ಮತ್ತು ಸುಸ್ಥಿರ ಮುಂದಿನ ಹಾದಿಯನ್ನು ತೋರಿಸುತ್ತದೆ ಎಂದು ಅವರು ಉದಾಹರಣೆ ನೀಡಿದರು.
*****
(Release ID: 2154500)