ಪ್ರಧಾನ ಮಂತ್ರಿಯವರ ಕಛೇರಿ
ಫಿಲಿಪ್ಪೀನ್ಸ್ ಅಧ್ಯಕ್ಷರೊಂದಿಗೆ ಜಂಟಿ ಮಾಧ್ಯಮ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಮಾಧ್ಯಮ ಹೇಳಿಕೆಯ ಕನ್ನಡ ಅನುವಾದ
Posted On:
05 AUG 2025 2:00PM by PIB Bengaluru
ಗೌರವಾನ್ವಿತ ಮಾನ್ಯ ಅಧ್ಯಕ್ಷರೇ,
ಎರಡೂ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಮಾಬುಹೇ!
ಮೊದಲನೆಯದಾಗಿ, ನಾನು ಅಧ್ಯಕ್ಷರನ್ನು ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಈ ವರ್ಷ, ಭಾರತ ಮತ್ತು ಫಿಲಿಪ್ಪೀನ್ಸ್ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷವನ್ನು ಆಚರಿಸುತ್ತಿವೆ. ಮತ್ತು ಈ ಸಂದರ್ಭದಲ್ಲಿ, ಈ ಭೇಟಿಯು ವಿಶೇಷ ಮಹತ್ವವನ್ನು ಪಡೆದಿದೆ. ನಮ್ಮ ರಾಜತಾಂತ್ರಿಕ ಸಂಬಂಧಗಳು ಇತ್ತೀಚಿನವಾದರೂ, ನಮ್ಮ ನಾಗರಿಕ ಸಂಪರ್ಕವು ಪ್ರಾಚೀನ ಕಾಲದಿಂದಲೂ ಇದೆ. ರಾಮಾಯಣದ ಫಿಲಿಪ್ಪೀನ್ಸ್ ಆವೃತ್ತಿ - "ಮಹಾರಾಡಿಯಾ ಲಾವಾನಾ" ನಮ್ಮ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಬಂಧಕ್ಕೆ ಜೀವಂತ ಪುರಾವೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಂಚೆ ಚೀಟಿಗಳು, ಎರಡೂ ದೇಶಗಳ ರಾಷ್ಟ್ರೀಯ ಹೂವುಗಳನ್ನು ಒಳಗೊಂಡಿದ್ದು, ನಮ್ಮ ಸ್ನೇಹದ ಪರಿಮಳವನ್ನು ಸುಂದರವಾಗಿ ಸಂಕೇತಿಸುತ್ತವೆ.
ಸ್ನೇಹಿತರೇ,
ಪ್ರತಿಯೊಂದು ಹಂತದಲ್ಲೂ ಸಂವಾದ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರ ನಮ್ಮ ಸಂಬಂಧಗಳ ಹೆಗ್ಗುರುತಾಗಿದೆ. ಇಂದು, ಅಧ್ಯಕ್ಷರು ಮತ್ತು ನಾನು ನಮ್ಮ ದ್ವಿಪಕ್ಷೀಯ ಸಹಕಾರದ ಜೊತೆಗೆ ಪ್ರಾದೇಶಿಕ ವಿಷಯಗಳು ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ವಿವರವಾದ ಚರ್ಚೆ ನಡೆಸಿದ್ದೇವೆ. ನಮ್ಮ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಮೇಲ್ದರ್ಜೆಗೇರಿಸಲು ನಾವು ನಿರ್ಧರಿಸಿದ್ದೇವೆ ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಈ ಪಾಲುದಾರಿಕೆಯ ಸಾಮರ್ಥ್ಯವನ್ನು ಫಲಿತಾಂಶಗಳಾಗಿ ಪರಿವರ್ತಿಸಲು ನಾವು ವಿವರವಾದ ಕ್ರಿಯಾ ಯೋಜನೆಯನ್ನು ಸಹ ಸಿದ್ಧಪಡಿಸಿದ್ದೇವೆ.
ನಮ್ಮ ದ್ವಿಪಕ್ಷೀಯ ವ್ಯಾಪಾರವು ನಿರಂತರವಾಗಿ ಬೆಳೆಯುತ್ತಿದೆ ಮತ್ತು 3 ಶತಕೋಟಿ ಡಾಲರ್ ಗಡಿ ದಾಟಿದೆ. ಇದನ್ನು ಮತ್ತಷ್ಟು ಉತ್ತೇಜಿಸಲು, ಭಾರತ-ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದದ ಪರಾಮರ್ಶೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಾವು ಆದ್ಯತೆ ನೀಡುತ್ತಿದ್ದೇವೆ. ಇದಲ್ಲದೆ, ದ್ವಿಪಕ್ಷೀಯ ʻಆದ್ಯತಾ ವ್ಯಾಪಾರ ಒಪ್ಪಂದʼದ ಕಡೆಗೂ ಕೆಲಸ ಮಾಡಲು ನಾವು ಒಪ್ಪಿದ್ದೇವೆ.
ನಮ್ಮ ಕಂಪನಿಗಳು ಮಾಹಿತಿ ಮತ್ತು ಡಿಜಿಟಲ್ ತಂತ್ರಜ್ಞಾನ, ಆರೋಗ್ಯ, ವಾಹನಗಳು, ಮೂಲಸೌಕರ್ಯ ಮತ್ತು ಖನಿಜಗಳು ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ, ನಾವು ವೈರಾಲಜಿ, ಕೃತಕ ಬುದ್ಧಿಮತ್ತೆ(ಎಐ) ಮತ್ತು ಸಂಯೋಜಿತ ಉತ್ಪಾದನೆಯಂತಹ (3ಡಿ ಪ್ರಿಂಟಿಂಗ್) ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಮಾಡುತ್ತಿದ್ದೇವೆ. ಇಂದು ಅಂಕಿತ ಹಾಕಲಾದ ʻವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕಾರ್ಯಕ್ರಮʼವು ಈ ಪ್ರಯತ್ನಗಳಿಗೆ ಮತ್ತಷ್ಟು ವೇಗ ನೀಡಲಿದೆ.
ವಾರಣಾಸಿಯಲ್ಲಿರುವ ʻಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆʼಯ ಪ್ರಾದೇಶಿಕ ಕೇಂದ್ರವು ʻಅಲ್ಟ್ರಾ-ಲೋ ಗ್ಲೈಸೆಮಿಕ್ ಸೂಚ್ಯಂಕʼ ಅಕ್ಕಿಯ ಮೇಲೆ ಕೆಲಸ ಮಾಡುತ್ತಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ರುಚಿ ಮತ್ತು ಆರೋಗ್ಯ ಎರಡರಲ್ಲೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ! ನಮ್ಮ ಅಭಿವೃದ್ಧಿ ಪಾಲುದಾರಿಕೆಯ ಅಡಿಯಲ್ಲಿ, ನಾವು ಫಿಲಿಪ್ಪೀನ್ಸ್‌ನಲ್ಲಿ ʻತ್ವರಿತ ಪರಿಣಾಮ ಯೋಜನೆʼಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ ಎಂಬ ಸಂಗತಿ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಫಿಲಿಪ್ಪೀನ್ಸ್ನಲ್ಲಿ ಸಾರ್ವತ್ರಿಕ ಡೇಟಾ ಕ್ಲೌಡ್ ಮೂಲಸೌಕರ್ಯದ ಅಭಿವೃದ್ಧಿಯಲ್ಲಿಯೂ ನಾವು ಸಹಕರಿಸುತ್ತೇವೆ.
ಭೂಮಿಯ ಮೇಲೆ ನಮ್ಮ ಪಾಲುದಾರಿಕೆಯು ಈಗಾಗಲೇ ಬಲವಾಗಿದೆ, ಮತ್ತು ಈಗ ನಾವು ಬಾಹ್ಯಾಕಾಶದ ಮೇಲೂ ನಮ್ಮ ದೃಷ್ಟಿಯನ್ನು ನೆಟ್ಟಿದ್ದೇವೆ. ಇದಕ್ಕಾಗಿ ಇಂದು ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.
ಸ್ನೇಹಿತರೇ,
ನಮ್ಮ ರಕ್ಷಣಾ ಸಂಬಂಧಗಳ ಶಕ್ತಿವರ್ಧನೆಯು ನಮ್ಮ ಎರಡೂ ದೇಶಗಳ ನಡುವಿನ ಆಳವಾದ ಪರಸ್ಪರ ನಂಬಿಕೆಯ ಸಂಕೇತವಾಗಿದೆ. ಕಡಲ ರಾಷ್ಟ್ರಗಳಾಗಿ, ಕಡಲ ಕ್ಷೇತ್ರದಲ್ಲಿನ ಸಹಕಾರವು ಸ್ವಾಭಾವಿಕ ಮತ್ತು ಅವಶ್ಯಕವಾಗಿದೆ.
ಮಾನವೀಯ ನೆರವು, ವಿಪತ್ತು ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಂತಹ ಕ್ಷೇತ್ರಗಳಲ್ಲಿ ನಾವು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇಂದು, ಫಿಲಿಪ್ಪೀನ್ಸ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ, ಮೂರು ಭಾರತೀಯ ನೌಕಾ ಹಡಗುಗಳು, ಮೊದಲ ಬಾರಿಗೆ ಫಿಲಿಪ್ಪೀನ್ಸ್‌ನಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿವೆ. ಭಾರತದ ಜಲಪರಿವೇಕ್ಷಣೆ ಹಡಗು ಕೂಡ ಈ ಮಹತ್ವದ ಒಪ್ಪಂದದ ಒಂದು ಭಾಗವಾಗಿದೆ.
ಹಿಂದೂ ಮಹಾಸಾಗರ ಪ್ರದೇಶಕ್ಕಾಗಿ ಭಾರತ ಸ್ಥಾಪಿಸಿರುವ ʻಅಂತಾರಾಷ್ಟ್ರೀಯ ಸಂಗಮ ಕೇಂದ್ರʼಕ್ಕೆ ಸೇರುವ ಫಿಲಿಪ್ಪೀನ್ಸ್ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಾವು ಫಿಲಿಪ್ಪೀನ್ಸ್ ಸರ್ಕಾರ ಮತ್ತು ಅಧ್ಯಕ್ಷರಿಗೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
ಪರಸ್ಪರ ಕಾನೂನು ನೆರವು ಮತ್ತು ಶಿಕ್ಷೆಗೊಳಗಾದ ವ್ಯಕ್ತಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಇಂದು ಅಂಕಿತ ಹಾಕಲಾಗಿರುವ ಒಪ್ಪಂದಗಳು ನಮ್ಮ ಭದ್ರತಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿವೆ.
ಸ್ನೇಹಿತರೇ,
ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ ನೀಡುವ ಫಿಲಿಪ್ಪೀನ್ಸ್ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಫಿಲಿಪ್ಪೀನ್ಸ್‌ನ ಪ್ರವಾಸಿಗರಿಗೆ ಉಚಿತ ʻಇ-ವೀಸಾʼ ಸೌಲಭ್ಯವನ್ನು ವಿಸ್ತರಿಸಲು ಭಾರತ ನಿರ್ಧರಿಸಿದೆ. ಈ ವರ್ಷದೊಳಗೆ ದೆಹಲಿ ಮತ್ತು ಮನಿಲಾ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವುದು.
ಇಂದು ಮುಕ್ತಾಯಗೊಂಡ ʻಸಾಂಸ್ಕೃತಿಕ ವಿನಿಮಯʼ ಕಾರ್ಯಕ್ರಮವು ನಮ್ಮ ಐತಿಹಾಸಿಕ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ.
ಸ್ನೇಹಿತರೇ,
ನಮ್ಮ ʻಆಕ್ಟ್ ಈಸ್ಟ್ ನೀತಿʼ ಮತ್ತು "ಮಹಾಸಾಗರ್" ದೃಷ್ಟಿಕೋನದಲ್ಲಿ ಫಿಲಿಪ್ಪೀನ್ಸ್ ಪ್ರಮುಖ ಪಾಲುದಾರನಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸಮೃದ್ಧಿ ಮತ್ತು ನಿಯಮ ಆಧಾರಿತ ವ್ಯವಹಾರಕ್ಕೆ ನಾವು ಬದ್ಧರಾಗಿದ್ದೇವೆ. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನೌಕಾಯಾನ ಸ್ವಾತಂತ್ರ್ಯವನ್ನು ನಾವು ಬೆಂಬಲಿಸುತ್ತೇವೆ.
ಮುಂದಿನ ವರ್ಷ ಫಿಲಿಪ್ಪೀನ್ಸ್ ʻಆಸಿಯಾನ್ʼನ ಅಧ್ಯಕ್ಷತೆ ವಹಿಸಲಿದೆ. ಅದರ ಯಶಸ್ಸಿಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ.
ಗೌರವಾನ್ವಿತರೇ,
ಭಾರತ ಮತ್ತು ಫಿಲಿಪ್ಪೀನ್ಸ್ ಆಯ್ಕೆಯಿಂದ ಸ್ನೇಹಿತರು ಮತ್ತು ವಿಧಿನಿಯಮದಿಂದ ಪಾಲುದಾರರು. ಹಿಂದೂ ಮಹಾಸಾಗರದಿಂದ ಪೆಸಿಫಿಕ್‌ವರೆಗೆ, ನಾವು ಪರಸ್ಪರ ಹಂಚಿಕೊಂಡ ಮೌಲ್ಯಗಳಿಂದ ಒಂದಾಗಿದ್ದೇವೆ. ನಮ್ಮದು ಕೇವಲ ಭೂತಕಾಲದ ಸ್ನೇಹವಲ್ಲ, ಅದು ಭವಿಷ್ಯದ ಭರವಸೆಯಾಗಿದೆ.
ಅನಂತ ಧನ್ಯವಾದಗಳು.
ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣ ಹಿಂದಿಯಲ್ಲಿ ನೀಡಲಾಗಿದೆ.
*****
(Release ID: 2152760)
Read this release in:
Odia
,
Tamil
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Telugu