ಜವಳಿ ಸಚಿವಾಲಯ
azadi ka amrit mahotsav

11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು 2025ರ ಆಗಸ್ಟ್ 7 ರಂದು ಆಚರಿಸಲಾಗುವುದು


ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಹಾಗೂ ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ ಖಾತೆ ರಾಜ್ಯ ಸಚಿವರಾದ  ಶ್ರೀ ಪಬಿತ್ರಾ ಮಾರ್ಗರಿಟಾ ಅವರು ಉಪಸ್ಥಿತರಿರುತ್ತಾರೆ

ಅತ್ಯುತ್ತಮ ನೇಕಾರರಿಗೆ ಸಂತ ಕಬೀರ್ ಪ್ರಶಸ್ತಿ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು

Posted On: 31 JUL 2025 4:21PM by PIB Bengaluru

11ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು 2025ರ ಆಗಸ್ಟ್ 7 ರಂದು ನವದೆಹಲಿಯ ಭಾರತ ಮಂಟಪದಲ್ಲಿ ಆಚರಿಸಲಾಗುವುದು. ಈ ಸಮಾರಂಭದಲ್ಲಿ ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್, ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ ಖಾತೆ ರಾಜ್ಯ ಸಚಿವ ಶ್ರೀ ಪಬಿತ್ರಾ ಮಾರ್ಗರಿಟಾ, ಜವಳಿ ಕಾರ್ಯದರ್ಶಿ ಶ್ರೀಮತಿ ನೀಲಂ ಶಮಿ ರಾವ್ ಹಾಗೂ ಕೈಮಗ್ಗ ಅಭಿವೃದ್ಧಿ ಆಯುಕ್ತರಾದ ಡಾ. ಎಂ. ಬೀನಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ದೇಶದಾದ್ಯಂತದಿಂದ ಸುಮಾರು 650 ನೇಕಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲದೆ, ವಿದೇಶಿ ಖರೀದಿದಾರರು, ಗಣ್ಯ ವ್ಯಕ್ತಿಗಳು, ರಫ್ತುದಾರರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸಹ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ, 05 ಸಂತ ಕಬೀರ್ ಪ್ರಶಸ್ತಿಗಳು ಮತ್ತು 19 ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳನ್ನು ಶ್ರೇಷ್ಠ ನೇಕಾರರಿಗೆ ಪ್ರದಾನ ಮಾಡಲಾಗುವುದು. ಅದೇ ದಿನ, ಮಾನ್ಯ ರಾಷ್ಟ್ರಪತಿಗಳು ಪ್ರಶಸ್ತಿ ಕ್ಯಾಟಲಾಗ್ ಮತ್ತು ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ನಮ್ಮ ನೇಕಾರರ ಪ್ರತಿಭೆ ಮತ್ತು ಕರಕುಶಲತೆಯನ್ನು ಗುರುತಿಸುವುದರ ಜೊತೆಗೆ, ಭಾರತದ ಕೈಮಗ್ಗ ಪರಂಪರೆಯ ಸಮೃದ್ಧಿ, ಸ್ಥಿತಿಸ್ಥಾಪಕತ್ವ ಮತ್ತು ಪ್ರಸ್ತುತತೆಯನ್ನು ಜಗತ್ತಿಗೆ ಪ್ರದರ್ಶಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಈ ಕಾರ್ಯಕ್ರಮವು ಈ ಕೆಳಗಿನವುಗಳನ್ನು ಸಹ ಒಳಗೊಂಡಿರುತ್ತದೆ:

  • ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನೇಕಾರರ ಸೇವಾ ಕೇಂದ್ರಗಳಿಗೆ ಮಾನ್ಯತೆ.
  • ವಿವಿಧ ಕೈಮಗ್ಗ ಯೋಜನೆಗಳ ಅಡಿಯಲ್ಲಿ ಫಲಾನುಭವಿ ಪ್ರಮಾಣಪತ್ರಗಳ ವಿತರಣೆ.
  • ದೇಶದಾದ್ಯಂತದ ಪ್ರಸಿದ್ಧ ನೆಯ್ಗೆ ಮತ್ತು ಜವಳಿಗಳನ್ನು ಪ್ರದರ್ಶಿಸುವ, ಪ್ರಮುಖ ವಿನ್ಯಾಸಕರಿಂದ ರೂಪಿಸಲ್ಪಟ್ಟ ಒಂದು ಭವ್ಯ ಫ್ಯಾಷನ್ ಶೋ.

ಆಗಸ್ಟ್ 7, 2025 ರ ಮುಖ್ಯ ಕಾರ್ಯಕ್ರಮದ ಹೊರತಾಗಿ, ಆಗಸ್ಟ್ 1 ರಿಂದ 8, 2025 ರ ಅವಧಿಯಲ್ಲಿ ಯೋಜಿಸಲಾದ ಇತರ ಪ್ರಮುಖ ಕಾರ್ಯಕ್ರಮಗಳೆಂದರೆ: ಪ್ರಶಸ್ತಿ ವಿಜೇತ ಕೈಮಗ್ಗದ ಮಾದರಿಗಳ ಪ್ರದರ್ಶನ; ನೇರ ಮಗ್ಗದ ಪ್ರಾತ್ಯಕ್ಷಿಕೆ; 'ಹಾಟ್ ಆನ್ ವೀಲ್ಸ್' (ಮೊಬೈಲ್ ಕೈಮಗ್ಗ ಮಾರಾಟ ಮಳಿಗೆ) ಅನಾವರಣ; ಜನಪಥ್, ನವದೆಹಲಿಯಲ್ಲಿರುವ ಕೈಮಗ್ಗ ಹಾಟ್‌ನಲ್ಲಿ ವಿಶೇಷ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ; ಕ್ರಾಫ್ಟ್ ಮ್ಯೂಸಿಯಂ, ನವದೆಹಲಿಯಲ್ಲಿ ಪುನರುತ್ಪಾದಕ ವಸ್ತುಗಳ ಮೇಲೆ ಕೇಂದ್ರೀಕರಿಸಿದ ವಿಶೇಷ ಪ್ರದರ್ಶನ; ಐಐಟಿ ದೆಹಲಿಯಿಂದ ಲೂಮ್ ಹ್ಯಾಕಥಾನ್; ವಿದೇಶಿ ಖರೀದಿದಾರರು, ರಫ್ತುದಾರರು ಮತ್ತು ಕೈಮಗ್ಗ ನೇಕಾರರೊಂದಿಗೆ ಅಂತರರಾಷ್ಟ್ರೀಯ ಕೈಮಗ್ಗ ಎಕ್ಸ್‌ ಪೋ; ಕೈಮಗ್ಗ ಉತ್ಪನ್ನಗಳ ರಫ್ತಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳು ಇತ್ಯಾದಿ. ಈ ಅವಧಿಯಲ್ಲಿ ಯೋಜಿಸಲಾದ ವಿವಿಧ ಚಟುವಟಿಕೆಗಳ ಪಟ್ಟಿಯನ್ನು ಲಗತ್ತಿಸಲಾಗಿದೆ.

ಕೋಲ್ಕತ್ತಾದ ಟೌನ್ ಹಾಲ್‌ ನಲ್ಲಿ ಆಗಸ್ಟ್ 7, 1905 ರಂದು ಆರಂಭವಾದ ಸ್ವದೇಶಿ ಚಳುವಳಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಮಹತ್ವದ ಘಟನೆಯಾಗಿತ್ತು. ಇದು ದೇಶೀಯ ಉತ್ಪನ್ನಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿತು. ಈ ಐತಿಹಾಸಿಕ ಚಳುವಳಿಗೆ ಗೌರವ ಸಲ್ಲಿಸುವ ಸಲುವಾಗಿ, ಭಾರತ ಸರ್ಕಾರವು 2015 ರಲ್ಲಿ ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನ ಎಂದು ಘೋಷಿಸಿತು. ಇದರ ಉದ್ದೇಶ ಆತ್ಮನಿರ್ಭರತೆಯ ಮನೋಭಾವವನ್ನು ಆಚರಿಸುವುದು ಮತ್ತು ದೇಶದ ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಕೈಮಗ್ಗ ಕ್ಷೇತ್ರದ ಕೊಡುಗೆಯನ್ನು ಗೌರವಿಸುವುದಾಗಿದೆ.

ರಾಷ್ಟ್ರೀಯ ಕೈಮಗ್ಗ ದಿನವನ್ನು ದೇಶಾದ್ಯಂತ ಇರುವ ನೇಕಾರರ ಸೇವಾ ಕೇಂದ್ರಗಳು (WSCs), ಪ್ರಮುಖ ಕೈಮಗ್ಗ ಸಮೂಹಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಂಡ್ಲೂಮ್ ಟೆಕ್ನಾಲಜಿ (IIHTs), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಕ್ಯಾಂಪಸ್‌ಗಳು, ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್‌ ಮೆಂಟ್ ಕಾರ್ಪೊರೇಷನ್ (NHDC), ಟೆಕ್ಸ್‌ ಟೈಲ್ ಕಮಿಟಿ, ಮತ್ತು ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕೈಮಗ್ಗ ಇಲಾಖೆಗಳು ಸೇರಿದಂತೆ ಎಲ್ಲೆಡೆ ಆಚರಿಸಲಾಗುತ್ತಿದೆ.

11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮ ಅಭಿಯಾನವನ್ನೂ ಸಹ ನಡೆಸಲಾಗುತ್ತಿದೆ. ಇದರಲ್ಲಿ ಪ್ರತಿಜ್ಞೆ, ಸೆಲ್ಫಿಗಳು, ರಸಪ್ರಶ್ನೆ ಸ್ಪರ್ಧೆಗಳು ಮುಂತಾದವು ಸೇರಿವೆ. ಟ್ವೀಟ್‌ ಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಇನ್ಫ್ಲುಯೆನ್ಸರ್‌ ಗಳು, ಸ್ಥಳೀಯ ವಾಟ್ಸಾಪ್ ಗ್ರೂಪ್‌ ಗಳು, ಎಫ್‌ ಎಂ ರೇಡಿಯೋ ಇತ್ಯಾದಿಗಳ ಮೂಲಕ ಈ ಅಭಿಯಾನವನ್ನು ನಡೆಸಲಾಗುತ್ತಿದೆ.

ರಾಷ್ಟ್ರೀಯ ಕೈಮಗ್ಗ ದಿನ 2025ರ ವಾರದ ಚಟುವಟಿಕೆಗಳು

 

*****
 


(Release ID: 2152323) Visitor Counter : 12