ಕೃಷಿ ಸಚಿವಾಲಯ
azadi ka amrit mahotsav

ಪಾಟ್ನಾದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಬಿಡುಗಡೆ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್


ಕೃಷಿ ಭಾರತೀಯ ಆರ್ಥಿಕತೆಯ ಬೆನ್ನೆಲುಬು ಮತ್ತು ರೈತರು ಅದರ ಆತ್ಮ: ಶಿವರಾಜ್ ಸಿಂಗ್ ಚೌಹಾಣ್

ಪಿಎಂ-ಕಿಸಾನ್ ಯೋಜನೆಯಡಿ ಈವರೆಗೆ 3,77,000 ಕೋಟಿ ರೂ.ಗಳಿಗೂ ಅಧಿಕ ಹಣ ನೇರವ ರೈತರ ಖಾತೆಗಳಿಗೆ ವರ್ಗಾವಣೆ: ಶಿವರಾಜ್ ಸಿಂಗ್ ಚೌಹಾಣ್

ಮಖಾನಾ ಉತ್ಪಾದನೆಯಲ್ಲಿ ಬಿಹಾರ ಮುಂಚೂಣಿಯಲ್ಲಿ: ಶಿವರಾಜ್ ಸಿಂಗ್ ಚೌಹಾಣ್

Posted On: 02 AUG 2025 2:12PM by PIB Bengaluru

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 20ನೇ ಕಂತಿನ ಬಿಡುಗಡೆಯ ಶುಭ ಸಂದರ್ಭದಲ್ಲಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಹಾರದ ಪಾಟ್ನಾದಲ್ಲಿ ರೈತರು, ಅಧಿಕಾರಿಗಳು ಮತ್ತು ಗಣ್ಯರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪವಿತ್ರ ಶ್ರಾವಣ ಮಾಸದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಬಿಹಾರ ಉಪಮುಖ್ಯಮಂತ್ರಿ ಶ್ರೀ ವಿಜಯ್ ಸಿನ್ಹಾ, ಸಹಕಾರ ಸಚಿವರಾದ ಶ್ರೀ ಪ್ರೇಮ್ ಕುಮಾರ್ ಮತ್ತಿತರ ಗಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಚೌಹಾಣ್‌ ಅವರು ರೈತರನ್ನು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದ ಮಹಿಳೆಯರನ್ನು ಸನ್ಮಾನಿಸಿದರು ಮತ್ತು ನಂತರ ಮಾತನಾಡಿ ರೈತರ ಕಠಿಣ ಪರಿಶ್ರಮ ಮತ್ತು ಕೊಡುಗೆಗಳನ್ನು ಶ್ಲಾಘಿಸಿದರು. ಕೃಷಿ ಭಾರತೀಯ ಆರ್ಥಿಕತೆಯ ಬೆನ್ನೆಲುಬು ಮತ್ತು ರೈತರು ಅದರ ಆತ್ಮ ಎಂದು ಅವರು ಬಣ್ಣಿಸಿದರು. ಇಂತಹ ರೈತರಿಗೆ ಸೇವೆ ಸಲ್ಲಿಸುವುದು ನಮ್ಮ ಪರಮೋಚ್ಛ ಕರ್ತವ್ಯ ಎಂದು ಅವರು ಹೇಳಿದರು. 

ಬಿಹಾರದ ಶ್ರೀಮಂತ ಸಾಂಸ್ಕೃತಿಕ ಮತ್ತು ಕೃಷಿ ಪರಂಪರೆಯನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ಭಗವಾನ್ ಬುದ್ಧನ ತಪಸ್ಸು ಮತ್ತು ಗಂಗಾ ಮಾತೆಯ ಆಶೀರ್ವಾದದಿಂದ ಈ ಭೂಮಿ ಪವಿತ್ರವಾದ ವೈಭವವನ್ನು ಹೊಂದಿದೆ ಎಂದರು. ಜಾಗತಿಕವಾಗಿ ಮೆಚ್ಚುಗೆ ಪಡೆದ ಬಿಹಾರದ ಶ್ರಮಶೀಲ ಜನರನ್ನು ಅವರು ಶ್ಲಾಘಿಸಿದರು.

ಬಿಹಾರದ ಜ್ಞಾನ ಮತ್ತು ಉದ್ಯಮಶೀಲತೆಯ ಪರಂಪರೆಯನ್ನು ಶ್ಲಾಘಿಸಿದ ಅವರು, "ಈ ರಾಜ್ಯದ ಜ್ಞಾನ ಮತ್ತು ಶ್ರಮಶೀಲತೆಯ ಪರಂಪರೆಯನ್ನು ಬೇರೆ ಯಾವುದಕ್ಕೂ ಹೋಲಿಸಲಾಗದು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದ ಮಹಾತ್ಮ ಗಾಂಧಿಯವರ ಚಂಪಾರಣ್ ಸತ್ಯಾಗ್ರಹಕ್ಕೆ ಈ ಭೂಮಿ ಸಾಕ್ಷಿಯಾಗಿತ್ತು’’ ಎಂದು ಹೇಳಿದರು.

ಕೃಷಿಯನ್ನು ಲಾಭದಾಯಕವಾಗಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಂಕಲ್ಪವನ್ನು ಕೇಂದ್ರ ಸಚಿವರು ಪುನರುಚ್ಚರಿಸಿದರು. ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಈವರೆಗೆ  3,77,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೇರ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ದೇಶಾದ್ಯಂತ ಲಕ್ಷಾಂತರ ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ರೈತರ ಖಾತೆಗಳಿಗೆ 20,000 ಕೋಟಿ ರೂ.ಗಳನ್ನು ಜಮಾ ಮಾಡಲಾಯಿತು. 

ಪ್ರತಿ ಹೆಕ್ಟೇರ್‌ಗೆ ಕೃಷಿ ಇಳುವರಿಯನ್ನು ಹೆಚ್ಚಿಸಲು, ವಿಶೇಷವಾಗಿ ಕಡಿಮೆ ಇಳುವರಿ ಇರುವ ಪ್ರದೇಶಗಳಲ್ಲಿ, ಪ್ರಧಾನಮಂತ್ರಿ ಧನ ಧಾನ್ಯ ಯೋಜನೆಯಂತಹ ಪ್ರಯತ್ನಗಳ ಬಗ್ಗೆ ಶ್ರೀ ಚೌಹಾಣ್  ಒತ್ತಿ ಹೇಳಿದರು. ಬಿಹಾರದಲ್ಲಿ ಮಖಾನಾ ಉತ್ಪಾದನೆಯ ಗಮನಾರ್ಹ ಕೊಡುಗೆ ಮತ್ತು ಕೃಷಿ ವಿಜ್ಞಾನವನ್ನು ತೋಟಗಳೊಂದಿಗೆ ಸಂಯೋಜಿಸಲು ನಿರಂತರ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು. 

ರಸಗೊಬ್ಬರಗಳು ಮತ್ತು ಕೀಟನಾಶಕಗಳ ಸಕಾಲಿಕ ಮತ್ತು ಸಮರ್ಪಕ ಲಭ್ಯತೆವಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಬೆಳೆ ವೈಫಲ್ಯದ ಸಂದರ್ಭದಲ್ಲಿ ಪರಿಹಾರವನ್ನು ಒದಗಿಸಲು ವಿವಿಧ ಯೋಜನೆಗಳಡಿಯಲ್ಲಿ ಪ್ರಯತ್ನಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈಗ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ ಪಿ) ಅಡಿ ಖರೀದಿಸಲಾಗುತ್ತದೆ, ಇದಕ್ಕೆ ಉತ್ಪಾದನಾ ವೆಚ್ಚದ ಮೇಲೆ ಶೇಕಡ 50ರಷ್ಟು ಲಾಭವನ್ನು ಸೇರಿಸಲಾಗುತ್ತದೆ ಎಂದು ಅವರು ಹೇಳಿದರು. ಇದು ಸರ್ಕಾರದ ರೈತ ಕೇಂದ್ರಿತ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈತರ ಕಲ್ಯಾಣವು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಶ್ರೀ ಚೌಹಾಣ್ ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಚೌಹಾಣ್, ಡಿಬಿಟಿ (ನೇರ ನಗದು ವರ್ಗಾವಣೆ) ಸಹಾಯದಿಂದ ಸರ್ಕಾರವು ರೈತರ ಖಾತೆಗಳಿಗೆ ಆರ್ಥಿಕ ಸಹಾಯವನ್ನು ನೇರವಾಗಿ ತಲುಪುವಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿದರು. "ಹಿಂದೆ, ರೈತರು ಸರ್ಕಾರ ಕಳುಹಿಸಿದ 1 ರೂಪಾಯಿಗಳಲ್ಲಿ ಕೆಲವೇ ನಾಣ್ಯಗಳನ್ನು ಪಡೆಯುತ್ತಿದ್ದರು, ಆದರೆ ಈಗ ಅವರು ಯಾವುದೇ ಸೋರಿಕೆಯಿಲ್ಲದೆ ಸಂಪೂರ್ಣ ಮೊತ್ತವನ್ನು ಪಡೆಯುತ್ತಾರೆ" ಎಂದು ಅವರು ಹೇಳಿದರು.

ರೈತರನ್ನು ಸಬಲೀಕರಣಗೊಳಿಸುವ ಮತ್ತು ಭಾರತದ ಕೃಷಿ ವಲಯವನ್ನು ಬಲವರ್ಧನೆಗೊಳಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

*****
 


(Release ID: 2151719)