ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಮಾಲ್ಡೀವ್ಸ್
Posted On:
26 JUL 2025 11:04AM by PIB Bengaluru
ಭಾರತದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಮೀನುಗಾರಿಕೆ ಇಲಾಖೆ ಹಾಗೂ ಮಾಲ್ಡೀವ್ಸ್‌ನ ಮೀನುಗಾರಿಕೆ ಮತ್ತು ಸಾಗರ ಸಂಪನ್ಮೂಲ ಸಚಿವಾಲಯವು ಮೀನುಗಾರಿಕೆ ಮತ್ತು ಜಲಚರ ಸಾಕಾಣೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಹೆಚ್ಚಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದವು 2025ರ ಜುಲೈ 25ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದ್ವೀಪ ರಾಷ್ಟ್ರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ವಿನಿಮಯವಾದ 6 ಒಡಂಬಡಿಕೆಗಳ ಭಾಗವಾಗಿದೆ.
ಸುಸ್ಥಿರ ಟ್ಯೂನಾ ಮತ್ತು ಆಳ ಸಮುದ್ರ ಮೀನುಗಾರಿಕೆಯನ್ನು ಉತ್ತೇಜಿಸುವುದು, ಜಲಚರ ಸಾಕಣೆ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಬಲಪಡಿಸುವುದು, ಮೀನುಗಾರಿಕೆ ಆಧಾರಿತ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಉಭಯ ದೇಶಗಳಲ್ಲಿ ನಾವೀನ್ಯತೆ ಮತ್ತು ವೈಜ್ಞಾನಿಕ ಸಂಶೋಧನೆಯನ್ನು ಬೆಂಬಲಿಸುವ ಗುರಿಯನ್ನು ಈ ಪಾಲುದಾರಿಕೆಯು ಹೊಂದಿದೆ.
ಈ ಒಪ್ಪಂದದಲ್ಲಿ ವಿವರಿಸಲಾದ ಸಹಯೋಗದ ಪ್ರಮುಖ ಕ್ಷೇತ್ರಗಳಲ್ಲಿ - ಮೌಲ್ಯ ಸರಪಳಿ ಅಭಿವೃದ್ಧಿ, ಕಡಲ ಕೃಷಿ ಪ್ರಗತಿ, ವ್ಯಾಪಾರ ಸೌಲಭ್ಯ ಮತ್ತು ಮೀನುಗಾರಿಕೆ ವಲಯದಲ್ಲಿ ಸಾಮರ್ಥ್ಯ ವರ್ಧನೆ ಸೇರಿವೆ. ಈ ಉಪಕ್ರಮದ ಭಾಗವಾಗಿ, ಮಾಲ್ಡೀವ್ಸ್ ಶೀತಲ ಸಂಗ್ರಹಾಗಾರ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಹಾಗೂ ಹ್ಯಾಚರಿ ಅಭಿವೃದ್ಧಿ, ಸುಧಾರಿತ ಉತ್ಪಾದನಾ ದಕ್ಷತೆ ಮತ್ತು ಸಂಸ್ಕರಿಸಿದ ಪ್ರಭೇದಗಳ ವೈವಿಧ್ಯೀಕರಣದ ಮೂಲಕ ಜಲಚರ ಸಾಕಾಣೆ ಕ್ಷೇತ್ರವನ್ನು ಬಲಪಡಿಸುವ ಮೂಲಕ ತನ್ನ ಮೀನು ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಈ ಒಪ್ಪಂದವು ಜಲಚರಗಳ ಆರೋಗ್ಯ, ಜೈವಿಕ ಸುರಕ್ಷತಾ ತಪಾಸಣೆ, ಜಲಚರ ಸಾಕಣೆ ಫಾರ್ಮ್ ನಿರ್ವಹಣೆ ಮತ್ತು ಶೈತ್ಯೀಕರಣ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಸಾಗರ ಎಂಜಿನಿಯರಿಂಗ್ ನಂತಹ ವಿಶೇಷ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಮರ್ಥ್ಯ ವರ್ಧನೆಗೆ ಗಮನ ಹರಿಸಲಿದ್ದು, ತರಬೇತಿ ಮತ್ತು ಜ್ಞಾನ ವಿನಿಮಯ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುತ್ತದೆ.
ಈ ಸಹಕಾರವು ಮೀನುಗಾರಿಕೆ ಉದ್ಯಮದ ಸದೃಢತೆ ಹೆಚ್ಚಿಸಲು, ನವೀನ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಭಾರತ ಮತ್ತು ಮಾಲ್ಡೀವ್ಸ್ ನ ಸಮಾನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
*****
(Release ID: 2148795)