ರಕ್ಷಣಾ ಸಚಿವಾಲಯ
ಡಿ ಆರ್ ಡಿ ಒ ದಿಂದ ಸುಧಾರಿತ ಮಾನವರಹಿತ ವೈಮಾನಿಕ ವಾಹನ ಉಡಾವಣಾ ನಿಖರ ಮಾರ್ಗದರ್ಶಿ ಕ್ಷಿಪಣಿ- V3 ನ ಹಾರಾಟ ಪರೀಕ್ಷೆ ಯಶಸ್ವಿ
Posted On:
25 JUL 2025 2:47PM by PIB Bengaluru
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಆಂಧ್ರಪ್ರದೇಶದ ಕರ್ನೂಲ್ ನಲ್ಲಿರುವ ರಾಷ್ಟ್ರೀಯ ಓಪನ್ ಏರಿಯಾ ರೇಂಜ್ (ಎನ್ ಒ ಎ ಆರ್) ಪರೀಕ್ಷಾ ವಲಯದಿಂದ ಮಾನವರಹಿತ ವೈಮಾನಿಕ ವಾಹನ ಉಡಾವಣಾ ನಿಖರ ಮಾರ್ಗದರ್ಶಿ ಕ್ಷಿಪಣಿ (ULPGM)-V3 ನ ಹಾರಾಟ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದು, ಇದು ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಮುಖ ಸಾಧನೆಯಾಗಿದೆ. ಈ ಕ್ಷಿಪಣಿಯು ಡಿಆರ್ ಡಿಒ ಈ ಹಿಂದೆ ಅಭಿವೃದ್ಧಿಪಡಿಸಿ ಸಮರ್ಪಿಸಿದ್ದ ULPGM-V2 ಕ್ಷಿಪಣಿಯ ವರ್ಧಿತ ಆವೃತ್ತಿಯಾಗಿದೆ.
ULPGM-V3 ವಿವಿಧ ರೀತಿಯ ಗುರಿಗಳನ್ನು ಹೊಡೆಯಬಲ್ಲ ಹೈ ಡೆಫಿನಿಷನ್ ಡ್ಯುಯಲ್-ಚಾನೆಲ್ ಸೀಕರ್ ಅನ್ನು ಹೊಂದಿದೆ. ಇದನ್ನು ಬಯಲು ಮತ್ತು ಎತ್ತರದ ಪ್ರದೇಶಗಳಲ್ಲಿ ಹಾರಿಸಬಹುದು. ಇದು ಹಗಲು-ರಾತ್ರಿ ಸಾಮರ್ಥ್ಯ ಮತ್ತು ಉಡಾವಣಾ ನಂತರದ ಗುರಿ/ಗುರಿ-ಬಿಂದು ನವೀಕರಣವನ್ನು ಬೆಂಬಲಿಸಲು ದ್ವಿಮುಖ ದತ್ತಾಂಶ ಲಿಂಕ್ ಅನ್ನು ಹೊಂದಿದೆ. ಕ್ಷಿಪಣಿಯು ಮೂರು ಮಾಡ್ಯುಲರ್ ವಾರ್ ಹೆಡ್ ಆಯ್ಕೆಗಳನ್ನು ಹೊಂದಿದೆ: ಸ್ಫೋಟಕ ರಿಯಾಕ್ಟಿವ್ ಆರ್ಮರ್ (ಇಆರ್ ಎ) ನೊಂದಿಗೆ ರೋಲ್ಡ್ ಹೋಮೋಜೀನಿಯಸ್ ಆರ್ಮರ್ (ಆರ್ ಎಚ್ ಎ) ಹೊಂದಿದ ಆಧುನಿಕ ಯುಗದ ಶಸ್ತ್ರಸಜ್ಜಿತ ವಾಹನಗಳನ್ನು ನಾಶಮಾಡುವ ರಕ್ಷಾಕವಚ; ಬಂಕರ್ ನಿಗ್ರಹ ಅನ್ವಯಿಕೆಯೊಂದಿಗೆ ಒಳನುಗ್ಗುವ ಮತ್ತು ಸ್ಪೋಟಕ ಸಿಡಿತಲೆ ಮತ್ತು ಹೆಚ್ಚಿನ ಮಾರಕ ವಲಯದೊಂದಿಗೆ ಪ್ರೀ-ಫ್ರಾಂಗ್ಮಟೇಷನ್ ಸಿಡಿತಲೆ ಇದೆ.

ಈ ಕ್ಷಿಪಣಿಯನ್ನು ಡಿ ಆರ್ ಡಿ ಒ ಪ್ರಯೋಗಾಲಯಗಳಾದ ರಿಸರ್ಚ್ ಸೆಂಟರ್ ಇಮಾರತ್, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯ, ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯ, ಹೈ-ಎನರ್ಜಿ ಮೆಟೀರಿಯಲ್ಸ್ ಸಂಶೋಧನಾ ಪ್ರಯೋಗಾಲಯ, ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಮತ್ತು ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಸಂಶೋಧನಾ ಪ್ರಯೋಗಾಲಯಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಪ್ರಸ್ತುತ ಪ್ರಯೋಗಗಳನ್ನು ಆಂಟಿ-ಆರ್ಮರ್ ಕಾನ್ ಫಿಗರೇಷನ್ ಗಾಗಿ ನಡೆಸಲಾಯಿತು.
ಈ ಕ್ಷಿಪಣಿಯನ್ನು ಬೆಂಗಳೂರಿನ ನ್ಯೂಸ್ಪೇಸ್ ರಿಸರ್ಚ್ ಟೆಕ್ನಾಲಜೀಸ್ ಎಂಬ ಭಾರತೀಯ ನವೋದ್ಯಮ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಯುಎವಿಯಿಂದ ಬಿಡುಗಡೆ ಮಾಡಲಾಗಿದೆ. ಡಿ ಆರ್ ಡಿ ಒ ಹಲವಾರು ಇತರ ಭಾರತೀಯ ಕಂಪನಿಗಳ ದೂರ ವಲಯದ ಮತ್ತು ಹೆಚ್ಚಿನ ಸಹಿಷ್ಣುತೆಯ ಯುಎವಿಗಳೊಂದಿಗೆ ಯು ಎಲ್ ಪಿ ಜಿ ಎಂ ಶಸ್ತ್ರಾಸ್ತ್ರಗಳ ಏಕೀಕರಣ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮಾಡುತ್ತಿದೆ. ಅಭಿವೃದ್ಧಿ ಮತ್ತು ಉತ್ಪಾದನಾ ಪಾಲುದಾರರು (ಡಿಸಿಪಿಪಿಗಳು) - ಅದಾನಿ ಡಿಫೆನ್ಸ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಹೈದರಾಬಾದ್) ಮತ್ತು 30 ಎಂಎಸ್ಎಂಇಗಳು/ನವೋದ್ಯಮಗಳು ಈ ವಿಶಿಷ್ಟ ಯೋಜನೆಯನ್ನು ಅದ್ಭುತ ಯಶಸ್ಸಿನತ್ತ ಕೊಂಡೊಯ್ಯುತ್ತಿವೆ.
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು, ಯುಬಎಲ್ ಪಿ ಜಿ ಎಂ-ವಿ3 ವ್ಯವಸ್ಥೆಯ ಅಭಿವೃದ್ಧಿ ಮತ್ತು ಯಶಸ್ವಿ ಪ್ರಯೋಗಗಳಿಗಾಗಿ ಡಿ ಆರ್ ಡಿ ಒ ಮತ್ತು ಉದ್ಯಮ ಪಾಲುದಾರರು, ಡಿಸಿಪಿಪಿಗಳು, ಎಂಎಸ್ಎಂಇಗಳು ಮತ್ತು ನವೋದ್ಯಮಗಳನ್ನು ಅಭಿನಂದಿಸಿದ್ದಾರೆ. ಭಾರತೀಯ ಉದ್ಯಮವು ಈಗ ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳನ್ನು ಹೊಂದಲು ಮತ್ತು ಉತ್ಪಾದಿಸಲು ಸಿದ್ಧವಾಗಿದೆ ಎಂಬುದಕ್ಕೆ ಈ ಯಶಸ್ಸು ಪುರಾವೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿ ಆರ್ ಡಿ ಒ ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಅವರು ತಂಡಗಳು, ಡಿಸಿಪಿಪಿಗಳು ಮತ್ತು ನವೋದ್ಯಮಗಳನ್ನು ಅಭಿನಂದಿಸಿದರು ಮತ್ತು ಇಂತಹ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಇದು ಅತ್ಯಂತ ಸೂಕ್ತ ಸಮಯವಾಗಿದೆ ಎಂದು ಹೇಳಿದರು.
*****
(Release ID: 2148392)