ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ ಸರ್ಕಾರದ ಬೆಂಬಲದಿಂದ ಭಾರತದಲ್ಲಿ ಸೆಮಿಕಂಡಕ್ಟರ್ ನವೋದ್ಯಮಗಳು ದಾಖಲೆಯ ಹೂಡಿಕೆಯನ್ನು ಆಕರ್ಷಿಸುತ್ತಿವೆ
Posted On:
24 JUL 2025 5:19PM by PIB Bengaluru
ಭಾರತದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಪರಿಸರ ವ್ಯವಸ್ಥೆಯು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ (MeitY) ವಿನ್ಯಾಸ ಆಧರಿತ ಪ್ರೋತ್ಸಾಹಧನ (ಡಿಎಲ್‌ಐ) ಯೋಜನೆ ಹಾಗೂ ʻಚಿಪ್‌ನಿಂದ ನವೋದ್ಯಮದವರೆಗೆʼ (ಚಿಪ್ಸ್ ಟು ಸ್ಟಾರ್ಟ್‌ಅಪ್-C2S) ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತ ನವೋದ್ಯಮಗಳು ಈಗ ಗಮನಾರ್ಹ ವೇಗವನ್ನು ಪಡೆಯುತ್ತಿವೆ.
107 ಕೋಟಿ ರೂ. ಸಾಹಸೋದ್ಯಮ ಬಂಡವಾಳ (ವಿ.ಸಿ) ಹೂಡಿಕೆ ಪಡೆದ ʻನೇತ್ರಸೆಮಿʼ
ಸರ್ಕಾರದ ಚಿಪ್ ವಿನ್ಯಾಸ ಯೋಜನೆಯಡಿ ಬೆಂಬಲ ಪಡೆದಿರುವ ನವೋದ್ಯಮವಾದ ʻನೇತ್ರಸೆಮಿʼ ಸಂಸ್ಥೆಯು 107 ಕೋಟಿ ರೂ. ಸಾಹಸೋದ್ಯಮ ಬಂಡವಾಳ ಹೂಡಿಕೆಯನ್ನು ಪಡೆದಿದೆ. ಕಂಪನಿಯು ಸ್ಮಾರ್ಟ್ ವಿಷನ್, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮುಂತಾದವುಗಳಲ್ಲಿ ಬಳಸಲು ಚಿಪ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಅಭಿವೃದ್ಧಿಯನ್ನು ಸ್ವಾಗತಿಸಿ, "ಭಾರತವು ಗಮನಾರ್ಹ ವಿನ್ಯಾಸ ಸಾಮರ್ಥ್ಯಗಳನ್ನು ಹೊಂದಿದೆ. ʻಭಾರತ ಸೆಮಿಕಂಡಕ್ಟರ್ ಮಿಷನ್ʼ ಭಾರತದಲ್ಲಿ ವಿನ್ಯಾಸವನ್ನು ಬೆಂಬಲಿಸುತ್ತಿದ್ದು, ʻನೇತ್ರಸೆಮಿʼಯ ಯಶಸ್ಸು ಇತರ ಭಾರತೀಯ ನವೋದ್ಯಮಗಳಿಗೆ ಪ್ರೋತ್ಸಾಹ ನೀಡುತ್ತದೆ," ಎಂದು ಹೇಳಿದರು.
ಭಾರತೀಯ ನವೋದ್ಯಮಗಳಿಗೆ 234 ಕೋಟಿ ರೂ. ಬದ್ಧತೆ
2022 ರಲ್ಲಿ ʻಡಿಎಲ್‌ಐʼ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ:
- ಸರ್ಕಾರವು 690 ಕೋಟಿ ರೂ.ಗಳ ಒಟ್ಟು ಯೋಜನಾ ವೆಚ್ಚದೊಂದಿಗೆ, 22 ಕಂಪನಿಗಳ 234 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಬೆಂಬಲ ನೀಡಲು ಬದ್ಧತೆ ವ್ಯಕ್ತಪಡಿಸಿದೆ.
- ಈ ಚಿಪ್‌ಗಳನ್ನು ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ನೆಟ್‌ವರ್ಕ್‌ಗಳು, ಉಪಗ್ರಹಗಳು, ಕಾರುಗಳು, ಸ್ಮಾರ್ಟ್ ಸಾಧನಗಳು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
- ಈ ನವೋದ್ಯಮಗಳು ಒಟ್ಟಾಗಿ ಸಾಹಸೋದ್ಯಮ ಬಂಡವಾಳ ಹೂಡಿಕೆದಾರರಿಂದ 380 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿವೆ.
- ಐದು ನವೋದ್ಯಮಗಳು ಈಗಾಗಲೇ ತಮ್ಮ ಚಿಪ್ ವಿನ್ಯಾಸಗಳನ್ನು ರೂಪಿಸಿ, ಜಾಗತಿಕ ಚಿಪ್ ತಯಾರಕರೊಂದಿಗೆ ಪರೀಕ್ಷಿಸಿವೆ.
- ಚಿಪ್‌ಗಳ ವಿನ್ಯಾಸಕ್ಕೆ ಸಹಾಯ ಮಾಡಲು 72ಕ್ಕೂ ಹೆಚ್ಚು ಕಂಪನಿಗಳಿಗೆ ಸುಧಾರಿತ ತಂತ್ರಾಂಶ ಪರಿಕರಗಳಿಗೆ ಪ್ರವೇಶವನ್ನು ನೀಡಲಾಗಿದೆ.
ಖಾಸಗಿ ಹೂಡಿಕೆಯ ಮೂಲಕ ಬೆಂಬಲಿತವಾದ ನವೋದ್ಯಮಗಳಿಗೆ ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ:
- ಮೈಂಡ್‌ಗ್ರೋವ್ ಟೆಕ್ನಾಲಜೀಸ್ (ಸಿಸಿಟಿವಿ ಚಿಪ್ ವಿನ್ಯಾಸ) 85 ಕೋಟಿ ರೂ. ಸಂಗ್ರಹಿಸಿದೆ.
- ಫೆರ್ಮಿಯೋನಿಕ್ ವಿನ್ಯಾಸ (ಉಪಗ್ರಹ ಸಂವಹನ ಚಿಪ್) 50 ಕೋಟಿ ರೂ. ಸಂಗ್ರಹಿಸಿದೆ.
- ʻಮಾರ್ಫಿಂಗ್ ಮಷಿನ್ಸ್ʼ, ʻಇನ್‌ಕೋರ್ ಸೆಮಿಕಂಡಕ್ಟರ್ಸ್ʼ ಮತ್ತು ʻಬಿಗ್‌ಎಂಡಿಯನ್ ಸೆಮಿಕಂಡಕ್ಟರ್ಸ್ʼ ಸಂಸ್ಥೆಗಳು ಉತ್ಪಾದನಾ ಹಂತಗಳತ್ತ ವೇಗವಾಗಿ ಪ್ರಗತಿ ಸಾಧಿಸುತ್ತಿವೆ.
ʼಉತ್ಪನ್ನ ರಾಷ್ಟ್ರʼವಾಗಿ ಆಗುವ ನಿಟ್ಟಿನಲ್ಲಿ ಚಿಪ್ ವಿನ್ಯಾಸದಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಲು ಸರ್ಕಾರವು ಯುವ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದೆ. ಮತ್ತೊಂದೆಡೆ, ಖಾಸಗಿ ಹೂಡಿಕೆದಾರರು ನವೋದ್ಯಮಗಳನ್ನು ಬೆಳೆಸಲು ಮತ್ತು ಅವುಗಳು ತಯಾರಿಸುವ ಚಿಪ್‌ಗಳನ್ನು ಮಾರುಕಟ್ಟೆಗೆ ತರಲು ಬೆಂಬಲಿಸುತ್ತಿದ್ದಾರೆ.
*****
(Release ID: 2148114)