ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

2025ರ ಜುಲೈ 18ರಿಂದ 20ರವರೆಗೆ ವಾರಣಾಸಿಯಲ್ಲಿ 'ಯುವ ಆಧ್ಯಾತ್ಮಿಕ ಶೃಂಗಸಭೆ' ಆಯೋಜನೆ ಘೋಷಿಸಿದ ಕೇಂದ್ರ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ


ಐತಿಹಾಸಿಕ ʻಕಾಶಿ ಘೋಷಣೆʼ ಮೂಲಕ ಮಾದಕವಸ್ತು ಮುಕ್ತ ಸಮಾಜವನ್ನು ಸಾಧಿಸಲು ರಾಷ್ಟ್ರೀಯ ಮಾರ್ಗಸೂಚಿ ರೂಪಿಸಲಾಗುವುದು

100 ಆಧ್ಯಾತ್ಮಿಕ ಸಂಸ್ಥೆಗಳ ಯುವ ಘಟಕಗಳು ರಾಷ್ಟ್ರೀಯ ಶೃಂಗಸಭೆಯಲ್ಲಿ ಮಾದಕವಸ್ತು ವಿರೋಧಿ ಅಭಿಯಾನವನ್ನು ಮುನ್ನಡೆಸಲಿವೆ

Posted On: 14 JUL 2025 3:44PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು, ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ʻವಿಕಸಿತ ಭಾರತಕ್ಕಾಗಿ ಮಾದಕ ವಸ್ತು ಮುಕ್ತ ಯುವಜನತೆʼ ವಿಷಯಾಧಾರಿತವಾಗಿ 'ಯುವ ಆಧ್ಯಾತ್ಮಿಕ ಶೃಂಗಸಭೆ' ಆಯೋಜಿಸುವುದಾಗಿ ನವದೆಹಲಿಯಲ್ಲಿ ಇಂದು ಘೋಷಿಸಿದರು. ಇದು ಭಾರತದ ಯುವ ಶಕ್ತಿಯನ್ನು ಸಬಲೀಕರಣಗೊಳಿಸುವ ಮತ್ತು ಮಾದಕವಸ್ತು ಮುಕ್ತ ಸಮಾಜವನ್ನು ಬೆಳೆಸುವ ಗುರಿಯನ್ನು ಹೊಂದಿರುವ ಕ್ರಾಂತಿಕಾರಿ ಉಪಕ್ರಮವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, "ಯುವಕರು ಅಮೃತ ಕಾಲದ ದಾರಿದೀಪಗಳು - ವಿಕಸಿತ ಭಾರತದ ಹಾದಿ," ಎಂದು ಬಣ್ಣಿಸಿದರು. ಭಾರತದ ಜನಸಂಖ್ಯೆಯ 65 ಪ್ರತಿಶತಕ್ಕೂ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಸರಾಸರಿ ವಯಸ್ಸು ಕೇವಲ 28 ವರ್ಷಗಳು, ಇದು ನಮ್ಮ ಯುವಕರನ್ನು ರಾಷ್ಟ್ರೀಯ ಅಭಿವೃದ್ಧಿಯ ಪ್ರೇರಕ ಶಕ್ತಿಯನ್ನಾಗಿ ಮಾಡಿದೆ ಎಂದು ಸಚಿವರು ಒತ್ತಿ ಹೇಳಿದರು.

2047ರ ವೇಳೆಗೆ ʻವಿಕಸಿತ ಭಾರತʼ ಸಾಧನೆ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕರೆಯನ್ನು ಪುನರುಚ್ಛರಿಸಿದ ಡಾ. ಮಾಂಡವೀಯ, “ನಮ್ಮ ಯುವ ಪೀಳಿಗೆಯು ಫಲಾನುಭವಿಗಳಾಗಿ ಮಾತ್ರವಲ್ಲದೆ ಭಾರತದ ಹಣೆಬರಹವನ್ನು ರೂಪಿಸುವ ಬದಲಾವಣೆಯ ರೂವಾರಿಯಾಗಿ ಮುನ್ನಡೆಯಬೇಕು  ಎಂದು ಒತ್ತಿ ಹೇಳಿದರು. ಆದಾಗ್ಯೂ, ಮಾದಕ ದ್ರವ್ಯ ಸೇವನೆಯು ನಮ್ಮ ಯುವಕರು ಎದುರಿಸುತ್ತಿರುವ ಗಂಭೀರ ಅಪಾಯಗಳಲ್ಲಿ ಒಂದಾಗಿದೆ. ಯುಕರನ್ನು ಅವರ ಜೀವನದ ಪ್ರಮುಖ ಘಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿಸುವುದಲ್ಲದೆ, ರಾಷ್ಟ್ರೀಯ ಪ್ರಗತಿಗೆ ದೊಡ್ಡ ಸವಾಲು ಒಡ್ಡುತ್ತದೆ ಎಂದು ಅವರು ಎಚ್ಚರಿಸಿದರು.

ಈ ತುರ್ತು ಕಳವಳವನ್ನು ಪರಿಹರಿಸಲು ಭಾರತ ಸರ್ಕಾರವು ಸರಕಾರೇತರ ಸೇವಾ ಸಂಸ್ಥೆಗಳು (ಎನ್‌ಜಿಒ), ಶಿಕ್ಷಣ ಸಂಸ್ಥೆಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ, ಸಮಗ್ರ, ಎಲ್ಲರನ್ನೂ ಒಳಗೊಂಡ ಹಾಗೂ ಭವಿಷ್ಯ-ಆಧಾರಿತ ಮಾದಕವಸ್ತು ವಿರೋಧಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಗಂಗಾ ನದಿಯ ಪವಿತ್ರ ಘಟ್ಟಗಳ ಉದ್ದಕ್ಕೂ ಮೂರು ದಿನಗಳ ಶೃಂಗಸಭೆಯು ಈ ಪ್ರಯತ್ನದ ಕೇಂದ್ರಬಿಂದುವಾಗಿದೆ.  ಅಲ್ಲಿ 100 ಆಧ್ಯಾತ್ಮಿಕ ಸಂಸ್ಥೆಗಳ ಯುವ ಘಟಕಗಳಿಂದ ಆಯ್ಕೆ ಮಾಡಲಾದ 500 ಯುವ ಪ್ರತಿನಿಧಿಗಳು ಒಗ್ಗೂಡಿ ಆತ್ಮಾವಲೋಕನ, ಚರ್ಚೆಯಲ್ಲಿ ತೊಡಗಲಿದ್ದಾರೆ. ಮಾದಕ ವ್ಯಸನವನ್ನು ನಿರ್ಮೂಲನೆ ಮಾಡಲು ಕ್ರಿಯಾತ್ಮಕ ತಂತ್ರಗಳನ್ನು ರೂಪಿಸಲಿದ್ದಾರೆ.

"ಈ ಶೃಂಗಸಭೆಯು ಮಾದಕವಸ್ತು ಮೂಲಗಳನ್ನು ಗುರುತಿಸಲು, ಅವುಗಳನ್ನು ಬೇರುಮಟ್ಟದಿಂದ ನಿರ್ಮೂಲನೆ ಮಾಡಲು ಮತ್ತು ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸಲು ಬೃಹತ್ ತಳಮಟ್ಟದ ಆಂದೋಲನ - ಜನಾಂದೋಲನಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ಡಾ.ಮಾಂಡವಿಯಾ ವಿಶ್ವಾಸ ವ್ಯಕ್ತಪಡಿಸಿದರು. ಶೃಂಗಸಭೆಯ ಕೊನೆಯಲ್ಲಿ, ಐತಿಹಾಸಿಕ ʻಕಾಶಿ ಘೋಷಣೆʼಯನ್ನು ಅನಾವರಣಗೊಳಿಸಲಾಗುವುದು, ಇದು ಸಾಮೂಹಿಕ ಸಂಕಲ್ಪವನ್ನು ಒಳಗೊಂಡಿದ್ದು, ಮಾದಕವಸ್ತು ಮುಕ್ತ ಸಮಾಜವನ್ನು ಸಾಧಿಸಲು ರಾಷ್ಟ್ರೀಯ ಮಾರ್ಗಸೂಚಿಯನ್ನು ರೂಪಿಸುತ್ತದೆ ಎಂದು ಸಚಿವರು ಪ್ರಕಟಿಸಿದರು.

ಶೃಂಗಸಭೆಯ ನಾಲ್ಕು ಪೂರ್ಣ ಅಧಿವೇಶನಗಳು: ವ್ಯಸನ ಮತ್ತು ಯುವಕರ ಮೇಲೆ ಅದರ ಪರಿಣಾಮ ಅರ್ಥಮಾಡಿಕೊಳ್ಳುವುದು; ಪೆಡ್ಲರ್ ಜಾಲಗಳು ಮತ್ತು ವಾಣಿಜ್ಯ ಹಿತಾಸಕ್ತಿಗಳನ್ನು ನಾಶಪಡಿಸುವುದು; ಪರಿಣಾಮಕಾರಿ ಪ್ರಚಾರ ಮತ್ತು ತಲುಪುವಿಕೆ; ಮತ್ತು 2047ರ ವೇಳೆಗೆ ಮಾದಕವಸ್ತು ಮುಕ್ತ ಭಾರತದತ್ತ ಸಮಗ್ರ ಬದ್ಧತೆಯನ್ನು ರೂಪಿಸುವುದನ್ನು ಒಳಗೊಂಡಿರುತ್ತವೆ. ತಜ್ಞರ ಪ್ರಧಾನ ಭಾಷಣಗಳು, ತಜ್ಞರ ಚರ್ಚೆಗಳು ಹಾಗೂ ಮುಕ್ತ ವೈಟ್ ಬೋರ್ಡ್ ವೇದಿಕೆಗಳು ಈ ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಲು ಪ್ರತಿಯೊಬ್ಬ ಪ್ರತಿನಿಧಿಯೂ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತದೆ.

ʻಮೈ ಭಾರತ್ʼ ಸ್ವಯಂಸೇವಕರ ನೇತೃತ್ವದ ಪಾದಯಾತ್ರೆಗಳ ಮೂಲಕ ಪ್ರತಿ ರಾಷ್ಟ್ರೀಯ ಸಂದರ್ಭವನ್ನು ʻವಿಕಸಿತ ಭಾರತʼದ ದೃಷ್ಟಿಕೋನದೊಂದಿಗೆ ಜೋಡಿಸಿರುವ ʻಮೈ ಭಾರತ್ʼ ಸ್ವಯಂಸೇವಕರ ಅಚಲ ಮನೋಭಾವವನ್ನು ಆಧರಿಸಿ, ʻವಿಜಯ್ ದಿವಸ್ʼ ಅಂಗವಾಗಿ ಜುಲೈ 26 ರಂದು ಕಾರ್ಗಿಲ್‌ನಲ್ಲಿ ವಿಶೇಷ ಪಾದಯಾತ್ರೆಯನ್ನು ನಡೆಸುವುದಾಗಿ ಕೇಂದ್ರ ಸಚಿವರು ಘೋಷಿಸಿದರು. ಸ್ಥಳೀಯ ಯುವಕರು, ʻಮೈ ಭಾರತ್ ಯೂತ್ ಕ್ಲಬ್ʼಗಳು ಮತ್ತು ಸೇನಾ ಪ್ರತಿನಿಧಿಗಳನ್ನು ಒಳಗೊಂಡ ಈ ಮೆರವಣಿಗೆಯು ʻಫಿಟ್ ಇಂಡಿಯಾʼ ಆಂದೋಲನವನ್ನು ಉತ್ತೇಜಿಸುವುದರ ಜೊತೆಗೆ ನಮ್ಮ ಹುತಾತ್ಮರಿಗೆ ಸಲ್ಲಿಸುವ ಗೌರವೂ ಹೌದು.

ʻಯುವ ಆಧ್ಯಾತ್ಮಿಕ ಶೃಂಗಸಭೆʼ ಮತ್ತು ʻಕಾರ್ಗಿಲ್ ವಿಜಯ್ ದಿವಸ್ʼ ಪಾದಯಾತ್ರೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ʻಮೈ ಭಾರತ್ ವೇದಿಕೆʼಯಲ್ಲಿ (https://mybharat.gov.in/) ಲಭ್ಯವಾಗಿಸಲಾಗುವುದು.

 

*****


(Release ID: 2144712)