ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಶಿಕ್ಷಣ ನೀತಿ-2020ರ ʻಪಂಚ ಸಂಕಲ್ಪʼವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶಕ ತತ್ವವಾಗಲಿದೆ: ಧರ್ಮೇಂದ್ರ ಪ್ರಧಾನ್


2035ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ʻಸಮಗ್ರ ದಾಖಲಾತಿ ಅನುಪಾತʼವನ್ನು (ಜಿ.ಇ.ಆರ್) ಶೇ.50ಕ್ಕೆ(50%) ಹೆಚ್ಚಿಸುವ ಗುರಿ ಹೊಂದಲಾಗಿದೆ: ಧರ್ಮೇಂದ್ರ ಪ್ರಧಾನ್

ವಿದ್ಯಾರ್ಥಿಗಳು ನಮ್ಮ ರಾಷ್ಟ್ರೀಯ ಶಕ್ತಿಯಾಗಿದ್ದಾರೆ, ಹಾಗಾಗಿ ʻವಿದ್ಯಾರ್ಥಿಗಳು ಮೊದಲುʼ ಕಾರ್ಯ ವಿಧಾನವನ್ನು ʻಎನ್.ಇ.ಪಿ-2020ʼ ಉತ್ತೇಜಿಸುತ್ತದೆ 

ʻವಿಕಸಿತ ಭಾರತʼದ ಆಶಯವನ್ನು ಸಾಧಿಸಲು ಪ್ರತಿ ವಿಶ್ವವಿದ್ಯಾಲಯವೂ ಕಾರ್ಯತಂತ್ರದ ರೂಪುರೇಷೆಯನ್ನು ಸಿದ್ಧಪಡಿಸಬೇಕು: ಧರ್ಮೇಂದ್ರ ಪ್ರಧಾನ್

ಕೆವಾಡಿಯಾದಲ್ಲಿ ಉಪಕುಲಪತಿಗಳ ಸಮ್ಮೇಳನ ಉದ್ಘಾಟಿಸಿದ ಶ್ರೀ ಧರ್ಮೇಂದ್ರ ಪ್ರಧಾನ್

ʻಎನ್.ಇ.ಪಿ-2020ʼ ಅನುಷ್ಠಾನವನ್ನು ವೇಗಗೊಳಿಸಲು ಕೈಗೊಳಳಬಹುದಾದ ಪ್ರಾಥಮಿಕ ಸುಧಾರಣೆಗಳ ಕುರಿತು ಮೊದಲ ದಿನದ ಚರ್ಚೆಗಳು ಗಮನ ಕೇಂದ್ರೀಕರಿಸಲಿವೆ

Posted On: 10 JUL 2025 2:45PM by PIB Bengaluru

ಕೇಂದ್ರೀಯ ವಿಶ್ವವಿದ್ಯಾಲಯಗಳ ಎರಡು ದಿನಗಳ ಉಪಕುಲಪತಿಗಳ ಸಮ್ಮೇಳನವು ಇಂದು ಗುಜರಾತ್ನ ಕೆವಾಡಿಯಾದಲ್ಲಿ ಪ್ರಾರಂಭವಾಯಿತು. ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ 50ಕ್ಕೂ ಹೆಚ್ಚು ಉಪಕುಲಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು, ʻರಾಷ್ಟ್ರೀಯ ಶಿಕ್ಷಣ ನೀತಿ 2020ʼರ (ಎನ್.ಇ.ಪಿ 2020) ಅನುಷ್ಠಾನವನ್ನು ಪರಿಶೀಲಿಸುವಲ್ಲಿ, ಮೌಲ್ಯಮಾಪನ ಮಾಡುವಲ್ಲಿ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ಇವರು ತೊಡಗಿಕೊಳ್ಳಲಿದ್ದಾರೆ. ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ಈ ಕಾರ್ಯಕ್ರಮವು, ʻವಿಕಸಿತ ಭಾರತ-2047ʼರ ಗುರಿ ಸಾಧನೆಗೆ ಮಾರ್ಗಸೂಚಿ ರೂಪಿಸುವಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಂಸ್ಥಿಕ ಪ್ರಗತಿಯನ್ನು ಕ್ರೋಢೀಕರಿಸುವ ಮತ್ತು ಪರಿಶೀಲಿಸುವ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು, ಕಳೆದ ಒಂದು ದಶಕದಲ್ಲಿ ಭಾರತದ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯು ಮೂಲಭೂತ ಪರಿವರ್ತನೆಗೆ ಒಳಗಾಗಿದೆ. ಇದು ಈಗ ಮತ್ತಷ್ಟು ನಮ್ಯತೆ, ಬಹು-ವಿಭಾಗಗಳ ಸಂಯೋಜನೆ, ಸಮಗ್ರತೆ ಹಾಗೂ ನಾವೀನ್ಯತೆಯಿಂದ ಬೆಂಬಲಿಸಲ್ಪಟ್ಟಿದೆ. ಇದರ ಪರಿಣಾಮವಾಗಿ, ಒಟ್ಟು ವಿದ್ಯಾರ್ಥಿಗಳ ದಾಖಲಾತಿ 4.46 ಕೋಟಿಯನ್ನು ತಲುಪಿದೆ, ಇದು 2014-15ರ ಅವಧಿಗೆ ಹೋಲಿಸಿದರೆ ಶೇ. 30ರಷ್ಟು(30%) ಹೆಚ್ಚಳವಾಗಿದೆ.  ಮಹಿಳಾ ದಾಖಲಾತಿ ಶೇ. 38ರಷ್ಟು(38%) ಹೆಚ್ಚಾಗಿರುವುದಷ್ಟೇ ಅಲ್ಲದೆ, ಮಹಿಳಾ ʻಸಮಗ್ರ ದಾಖಲಾತಿ ಅನುಪಾತʼವು(ಜಿ.ಇ.ಆರ್) ಈಗ ಪುರುಷ ʻಜಿ.ಇ.ಆರ್ʼ ಅನ್ನು ಮೀರಿದೆ.  ʻಪಿ.ಎಚ್.ಡಿʼ ದಾಖಲಾತಿ ಬಹುತೇಕ ದ್ವಿಗುಣಗೊಂಡಿದೆ ಮತ್ತು ಮಹಿಳಾ ʻಪಿ.ಎಚ್.ಡಿʼ ವಿದ್ವಾಂಸರ ಸಂಖ್ಯೆ 136% ರಷ್ಟು ಬೆಳವಣಿಗೆ ಕಂಡಿದೆ. ಪರಿಶಿಷ್ಟ ಪಂಗಡಗಳ ʻಜಿ.ಇ.ಆರ್ʼ ಶೇಕಡಾ 10ರಷ್ಟು ಹೆಚ್ಚಾಗಿದೆ, ಪರಿಶಿಷ್ಟ ಜಾತಿಗಳ ʻಜಿ.ಪಿ.ಆರ್ʼ ಶೇಕಡಾ 8ರಷ್ಟು ಹೆಚ್ಚಾಗಿದೆ ಎಂದು ಶ್ರೀ ಪ್ರಧಾನ್ ಅವರು ಮಾಹಿತಿ ನೀಡಿದರು. ಇದು ಎಲ್ಲರನ್ನೂ ಒಳಗೊಂಡ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ.  ಸಕಾರಾತ್ಮಕ ನೀತಿ ಉಪಕ್ರಮಗಳ ಪರಿಣಾಮವಾಗಿ 1,200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 46,000ಕ್ಕೂ ಹೆಚ್ಚು ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಭಾರತ ಜಾಗತಿಕವಾಗಿ ಅತಿದೊಡ್ಡ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಅವರು ಉಲ್ಲೇಖಿಸಿದರು.

ಶ್ರೀ ಪ್ರಧಾನ್ ಅವರು ತಮ್ಮ ಭಾಷಣದಲ್ಲಿ,  ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪಂಚ ಸಂಕಲ್ಪದ ಪರಿಕಲ್ಪನೆಯನ್ನು ಎತ್ತಿ ತೋರಿದರು.  ಇದು ವಿಶ್ವವಿದ್ಯಾಲಯದ ಗುರುಕುಲಗಳಲ್ಲಿನ ಉಪಕುಲಪತಿಗಳಿಗೆ ಮಾರ್ಗದರ್ಶಿಯಾಗಲಿದೆ ಎಂದರು. ಈಗಿನ ಶಿಕ್ಷಣದ ಪ್ರಮುಖ ಥೀಮ್ಗಳಲ್ಲಿ ʻಮುಂದಿನ ಪೀಳಿಗೆಯ ಉದಯೋನ್ಮುಖ ಶಿಕ್ಷಣʼ, ʻಬಹುಶಾಸ್ತ್ರೀಯ ಶಿಕ್ಷಣʼ, ʻನವೀನ ಶಿಕ್ಷಣʼ, ʻಸಮಗ್ರ ಶಿಕ್ಷಣʼ ಮತ್ತು ʻಭಾರತೀಯ ಶಿಕ್ಷಣʼ ಮುಂತಾದವು ಸೇರಿವೆ. ʻಭೂತಕಾಲವನ್ನು ಆಚರಿಸುವುದುʼ (ಭಾರತದ ಶ್ರೀಮಂತಿಕೆ), ʻವರ್ತಮಾನವನ್ನು ಮಾಪನಾಂಕ ಮಾಡುವುದುʼ(ಭಾರತದ ಕಥಾನಕದ ಪರಿಷ್ಕರಣೆ) ಮತ್ತು ʻಭವಿಷ್ಯವನ್ನು ರಚಿಸುವುದುʼ (ಜಾಗತಿಕ ಕ್ರಮದಲ್ಲಿ ಭಾರತದ ಪಾತ್ರ) - ಎಂಬ ಮೂರು ಮಾರ್ಗಗಳ ಮೂಲಕ ಶೈಕ್ಷಣಿಕ ʻತ್ರಿವೇಣಿ ಸಂಗಮʼದ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಬದಲಾವಣೆಗಳನ್ನು ಸೂಚಿಸುವಂತೆ ಉಪಕುಲಪತಿಗಳಿಗೆ ಸಚಿವರು ಕರೆ ನೀಡಿದರು. ಇದು ಭೂತಕಾಲವನ್ನು ಅರ್ಥಮಾಡಿಕೊಳ್ಳುವುದು, ವರ್ತಮಾನವನ್ನು ಬಹಿರಂಗಪಡಿಸುವುದು ಮತ್ತು ಸಮಕಾಲೀನ ಚೌಕಟ್ಟಿನಲ್ಲಿ ಭವಿಷ್ಯವನ್ನು ಅನಾವರಣಗೊಳಿಸುವುದನ್ನು ಖಚಿತಪಡಿಸುತ್ತದೆ ಎಂದರು.

ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸುವುದು, ಡಿಜಿಟಲ್ ವ್ಯವಸ್ಥೆಗಳನ್ನು ನಿರ್ಮಿಸುವುದು, ಅಧ್ಯಾಪಕರಿಗೆ ತರಬೇತಿ ನೀಡುವುದು ಹಾಗೂ ಬಹುಶಾಸ್ತ್ರೀಯ ಕಾರ್ಯವಿಧಾನಗಳನ್ನು ಉತ್ತೇಜಿಸುವುದು ಮುಂತಾದ ನಿರ್ಣಾಯಕ ಕ್ಷೇತ್ರಗಳಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುವ ಮೂಲಕ 2035ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ʻಸಮಗ್ರ ದಾಖಲಾತಿ ಅನುಪಾತʼವನ್ನು (ಜಿ.ಇ.ಆರ್) ಶೇ. 50ಕ್ಕೆ(50%) ಹೆಚ್ಚಿಸುವುದು ಮುಖ್ಯ ಎಂದು ಸಚಿವರು ಒತ್ತಿ ಹೇಳಿದರು. ಈ ಉದ್ದೇಶವನ್ನು ಸಾಧಿಸಲು, ವಿದ್ಯಾರ್ಥಿಗಳ ಮನಸ್ಥಿತಿ ಮತ್ತು ಆಕಾಂಕ್ಷೆಗಳನ್ನು ರೂಪಿಸುವಲ್ಲಿ ಉಪಕುಲಪತಿಗಳು ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದರು. ವಿಶ್ವವಿದ್ಯಾಲಯಗಳು "ವಿದ್ಯಾರ್ಥಿಗಳು-ಮೊದಲು" ಕಾರ್ಯವಿಧಾನವನ್ನು ಅನುಸರಿಸಬೇಕು, ವಿದ್ಯಾರ್ಥಿಗಳು ನಮ್ಮ ಎಲ್ಲಾ ಸುಧಾರಣೆಗಳ ಕೇಂದ್ರಬಿಂದುವಾಗಿರಬೇಕು. ಏಕೆಂದರೆ ಭವಿಷ್ಯದಲ್ಲಿ ನಮ್ಮ ರಾಷ್ಟ್ರೀಯ ಶಕ್ತಿಯ ಮೂಲ ಅವರೇ ಆಗಿರುತ್ತಾರೆ ಎಂದು ಶ್ರೀ ಪ್ರಧಾನ್ ಒತ್ತಿ ಹೇಳಿದರು.  ಭವಿಷ್ಯ ಸನ್ನದ್ಧ ಶಿಕ್ಷಣ ಸಂಸ್ಥೆಗಳ ನಿರ್ಮಾಣವನ್ನು ಕಾಯ್ದುಕೊಳ್ಳುವಂತೆ ಉಪಕುಲಪತಿಗಳಿಗೆ ಸಚಿವರು ಕರೆ ನೀಡಿದರು.  ಶಿಕ್ಷಣ ಸಂಸ್ಥೆಗಳು ಭವಿಷ್ಯ ಸನ್ನದ್ಧ ಕೌಶಲ ಕೇಂದ್ರಗಳಾಗಿರುವ ಮೂಲಕ ಅಲ್ಲಿ ಓದುವ ವಿದ್ಯಾರ್ಥಿಗಳನ್ನು ಉದ್ಯೋಗ ಸೃಷ್ಟಿಕರ್ತರು, ಸಾಮಾಜಿಕ ಉದ್ಯಮಿಗಳು ಮತ್ತು ನೈತಿಕ ಆವಿಷ್ಕಾರಕರಾಗಲು ಉತ್ತೇಜಿಸಬೇಕು ಎಂದು ಕರೆ ನೀಡಿದರು.

ತಮ್ಮ ಭಾಷಣದ ವೇಳೆ ಸಚಿವರು, ಪ್ರತಿ ವಿಶ್ವವಿದ್ಯಾಲಯದಲ್ಲಿ ʻಎನ್.ಇ.ಪಿ-2020ʼರ ಸಂಪೂರ್ಣ ಅನುಷ್ಠಾನಕ್ಕಾಗಿ ಕಾರ್ಯತಂತ್ರದ ರೂಪುರೇಷೆ ಸಿದ್ಧಪಡಿಸುವಂತೆ ಸಭೆಯಲ್ಲಿ ಭಾಗವಹಿಸುವವರಿಗೆ ಕರೆ ನೀಡಿದರು. ಈ ಕಾರ್ಯತಂತ್ರ ದಾಖಲೆಯು -  ವಿಷಯಗಳ ಬಹುಶಾಸ್ತ್ರೀಯ ಸಂಯೋಜನೆ, ಭಾರತೀಯ ಜ್ಞಾನ ವ್ಯವಸ್ಥೆಯನ್ನು (ಐ.ಕೆ.ಎಸ್) ಮುಖ್ಯವಾಹಿನಿಗೆ ತರುವುದು, ಕೌಶಲ್ಯ ಮತ್ತು ಉನ್ನತ-ಕೌಶಲ್ಯವನ್ನು ಉತ್ತೇಜಿಸಲು ತಂತ್ರಜ್ಞಾನ ಚಾಲಿತ ಶಿಕ್ಷಣಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುವುದು, ನಾವೀನ್ಯತೆ ಮತ್ತು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ತಂತ್ರಜ್ಞಾನದ ಏಕೀಕರಣವನ್ನು ಕೇಂದ್ರೀಕರಿಸುವ ಕ್ಯಾಂಪಸ್ ಉಪಕ್ರಮಗಳು ಮತ್ತು ವಿಸಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಪ್ರತ್ಯೇಕ ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ಆಯೋಜಿಸಬೇಕು ಮುಂತಾದ ಕ್ರಮಗಳನ್ನು  ಒಳಗೊಂಡಿರಬೇಕು ಎಂದರು.

ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಹಶ್ಮುಖ್ ಅಧಿಯಾ ಅವರು ಮಾತನಾಡಿ, ಕರ್ಮಯೋಗದ "ಆರು ತತ್ವಗಳನ್ನು" ಸಮಗ್ರವಾಗಿ ವಿವರಿಸಿದರು ಮತ್ತು ವ್ಯಕ್ತಿಗಳು, ಸಮಾಜ ಮತ್ತು ರಾಷ್ಟ್ರದ ಜೀವನದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಪಾತ್ರ ಮತ್ತು ಮಹತ್ವವನ್ನು ಒತ್ತಿ ಹೇಳಿದರು. ಜೀವನದಲ್ಲಿ ತಮ್ಮ ಗುರಿಗಳು ಮತ್ತು ಉದ್ದೇಶಗಳನ್ನು ಸಾಧಿಸುವಲ್ಲಿ ತತ್ವಗಳನ್ನು ಅಭ್ಯಾಸ ಮಾಡುವಂತೆ ಅವರು ಭಾಗವಹಿಸುವವರಿಗೆ ಕರೆ ನೀಡಿದರು.

ಉನ್ನತ ಶಿಕ್ಷಣ ಕಾರ್ಯದರ್ಶಿ ಡಾ. ವಿನೀತ್ ಜೋಶಿ ಅವರು ಮಾತನಾಡಿ, ʻರಾಷ್ಟ್ರೀಯ ಶಿಕ್ಷಣ ನೀತಿ-2020ʼ ಪ್ರಾರಂಭವಾಗಿ ಐದು ವರ್ಷಗಳನ್ನು ನಾವು ಪೂರ್ಣಗೊಳಿಸುತ್ತಿರುವ ಹೊತ್ತಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ನಮ್ಮ ಪ್ರಗತಿಯನ್ನು ಪ್ರತಿಬಿಂಬಿಸಲು ಮತ್ತು ಸಮಗ್ರ, ಬಹುಶಾಸ್ತ್ರೀಯ ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ಉನ್ನತ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಮಾರ್ಗಸೂಚಿಯನ್ನು ಪರಿಷ್ಕರಿಸಲು ಅವಕಾಶವನ್ನು ಒದಗಿಸುತ್ತದೆ ಎಂದರು. ʻಎನ್.ಇ.ಪಿ-2020ʼ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಗೆ ಮಹತ್ವಾಕಾಂಕ್ಷೆಯ, ಆದರೆ ಸಾಧಿಸಬಹುದಾದ ದೃಷ್ಟಿಕೋನವನ್ನು ರೂಪಿಸಿದೆ – ಅದು ಎಲ್ಲರಿಗೂ ಲಭ್ಯತೆ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಉತ್ತರದಾಯಿತ್ವವನ್ನು ಆಧರಿಸಿದೆ ಎಂದು ಅವರು ಹೇಳಿದರು. ಇದು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಕೇವಲ ಪದವಿ-ನೀಡುವ ಸಂಸ್ಥೆಗಳಾಗಿ ಅಲ್ಲದೆ, ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ, ಸಂಶೋಧನೆ ಮತ್ತು ಸಮಗ್ರ ಅಭಿವೃದ್ಧಿಯ ಪರಿಸರ ವ್ಯವಸ್ಥೆಗಳಾಗಿ ಮರುಕಲ್ಪಿಸುತ್ತದೆ ಎಂದರು.

ಉನ್ನತ ಶಿಕ್ಷಣದ ಹೆಚ್ಚುವರಿ ಕಾರ್ಯದರ್ಶಿ ಡಾ. ಸುನಿಲ್ ಬರ್ನ್ವಾಲ್ ಅವರು ಮಾತನಾಡಿ, ʻಎನ್.ಇ.ಪಿ-2020ʼರ ಐದು ಅಡಿಪಾಯ ಸ್ತಂಭಗಳಾದ ಲಭ್ಯತೆ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಉತ್ತರದಾಯಿತ್ವದ ಪಾತ್ರ ಮತ್ತು ಮಹತ್ವವನ್ನು ಒತ್ತಿ ಹೇಳಿದರು. ʻಎನ್.ಇ.ಪಿʼಯ ಗುರಿಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾಲುದಾರರ ಸಹಭಾಗಿತ್ವದ ಪಾತ್ರವನ್ನು ಅವರು ಒತ್ತಿ ಹೇಳಿದರು.

ಉದ್ಘಾಟನಾ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಮ ಶಂಕರ್ ದುಬೆ ಅವರು, ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು ತಮ್ಮ ವೈಯಕ್ತಿಕ ಕ್ಯಾಂಪಸ್ಗಳ ಮೂಲಕ ʻವಿಕಸಿತ ಭಾರತʼದ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳಲಿವೆ ಎಂದು ಉಲ್ಲೇಖಿಸಿದರು.

ಎರಡು ದಿನಗಳ ಅಧಿವೇಶನದಲ್ಲಿ ಮೂರು ಪ್ರಮುಖ ಕ್ಷೇತ್ರಗಳ ಬಗ್ಗೆ ವಿಶಾಲ ಚರ್ಚೆ ನಡೆಯುವ ನಿರೀಕ್ಷೆಯಿದೆ, ಅವುಗಳೆಂದರೆ

1. ಕಾರ್ಯತಂತ್ರದ ಜೋಡಣೆ: ಕೇಂದ್ರೀಯ ವಿಶ್ವವಿದ್ಯಾಲಯಗಳು ಶಿಕ್ಷಣ ನೀತಿಯ ಮುಂದಿನ ಹಂತದ ಗುರಿಗಳೊಂದಿಗೆ ಹೊಂದಿಕೆಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವುದು.
2. ಸಮಾನಮನಸ್ಕ ಕಲಿಕೆ ಮತ್ತು ಜ್ಞಾನ ವಿನಿಮಯ: ಸಾಂಸ್ಥಿಕ ಆವಿಷ್ಕಾರಗಳು, ಪರಿಸರವನ್ನು ಸಕ್ರಿಯಗೊಳಿಸುವುದು ಮತ್ತು ಪರಸ್ಪರ ಸಮಾನ ಸವಾಲುಗಳ ಬಗ್ಗೆ ಶೈಕ್ಷಣಿಕ ಮುಖಂಡರ ನಡುವೆ ಸಂವಾದವನ್ನು ಬೆಳೆಸುವುದು.
3. ಮುಂದುವರಿಯುವ ಯೋಜನೆ ಮತ್ತು ಸನ್ನದ್ಧತೆ: ಮುಂಬರುವ ನೀತಿ ಮೈಲಿಗಲ್ಲುಗಳು, ನಿಯಂತ್ರಕ ಪರಿವರ್ತನೆಗಳು ಮತ್ತು 2047ರ ಜಾಗತಿಕ ಶೈಕ್ಷಣಿಕ ಭೂದೃಶ್ಯಕ್ಕೆ ಅನುಗುಣವಾಗಿ ಸಂಸ್ಥೆಗಳನ್ನು ಸಜ್ಜುಗೊಳಿಸುವುದು.

ಎರಡು ದಿನಗಳ ಸಮ್ಮೇಳನದಲ್ಲಿ ಉನ್ನತ ಶಿಕ್ಷಣದ ಪ್ರಮುಖ ಅಂಶಗಳಾದ - ಬೋಧನೆ / ಕಲಿಕೆ, ಸಂಶೋಧನೆ ಮತ್ತು ಆಡಳಿತದ ಬಗ್ಗೆ ಕೆಳಕಂಡ ಹತ್ತು ವಿಷಯಾಧಾರಿತ ಅಧಿವೇಶನಗಳ ಮೂಲಕ ಚರ್ಚಿಸಲಾಗುವುದು. ಇವುಗಳಲ್ಲಿ ಇವು ಸೇರಿವೆ:

1.    ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮದ (ಎಫ್.ವೈ.ಯು.ಪಿ.) ಮೇಲೆ ಗಮನ ಕೇಂದ್ರೀಕರಿಸಿ ʻಎನ್.ಎಚ್.ಇ.ಕ್ಯೂ.ಎಫ್ / ಎನ್.ಸಿ.ಆರ್.ಎಫ್ (NHEQF/NCrF) ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನುಷ್ಠಾನಗೊಳಿಸುವುದು
2.    ಕೆಲಸದ ಭವಿಷ್ಯ - ಭವಿಷ್ಯದ ಉದ್ಯೋಗ ಪಾತ್ರದ ಅಗತ್ಯಕ್ಕೆ ಅನುಗುಣವಾಗಿ ಕೋರ್ಸ್ಗಳ ಜೋಡಣೆ
3.    ಡಿಜಿಟಲ್ ಶಿಕ್ಷಣ - ಕ್ರೆಡಿಟ್ ವರ್ಗಾವಣೆಯ ಮೇಲೆ ಗಮನ ಕೇಂದ್ರೀಕರಿಸಿ ʻಸ್ವಯಂʼ, ʻಸ್ವಯಂ ಪ್ಲಸ್ʼ, ʻಎ.ಎ.ಪಿ.ಎ.ಆರ್ʼ 
4.    ವಿಶ್ವವಿದ್ಯಾಲಯ ಆಡಳಿತ ವ್ಯವಸ್ಥೆ - ʻಸಮರ್ಥ್ʼ
      5. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವುದು – ಎಲ್ಲರನ್ನೂ ಒಳಗೊಂಡ ಮತ್ತು ಸಮಾನ ವಾತಾವರಣವನ್ನು ಬೆಳೆಸುವುದು.                        
ʻಪಿ.ಎಂ. ವಿದ್ಯಾ ಲಕ್ಷ್ಮಿʼ, ʻಒಂದು ದೇಶ- ಒಂದು ಚಂದಾದಾರಿಕೆʼ

6. ಭಾರತೀಯ ಭಾಷೆ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಶಿಕ್ಷಣ, ಭಾರತೀಯ ಭಾಷಾ ಪುಸ್ತಕ ಯೋಜನೆ
7. ʻ ಎ.ಎನ್.ಆರ್.ಎಫ್ʼ, ಸಿ.ಒ.ಇ, ʻಪಿ.ಎಂ. ಆರ್.ಎಫ್ʼ ಸೇರಿದಂತೆ ಸಂಶೋಧನೆ ಮತ್ತು ನಾವೀನ್ಯತೆ
8. ಶ್ರೇಯಾಂಕ ಮತ್ತು ಮಾನ್ಯತೆ ವ್ಯವಸ್ಥೆ
9. ಭಾರತದಲ್ಲಿ ವಿದ್ಯಾಭ್ಯಾಸ ಸೇರಿದಂತೆ ಅಂತರರಾಷ್ಟ್ರೀಯೀಕರಣ
10. ಅಧ್ಯಾಪಕರ ಅಭಿವೃದ್ಧಿ - ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕಾರ್ಯಕ್ರಮ

ದೆಹಲಿ ವಿಶ್ವವಿದ್ಯಾಲಯ, ಹರಿಯಾಣ ಕೇಂದ್ರೀಯ ವಿಶ್ವವಿದ್ಯಾಲಯ, ಅಸ್ಸಾಂ ವಿಶ್ವವಿದ್ಯಾಲಯ, ಹೇಮಾವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯ, ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯ, ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯ, ವಿಶ್ವ-ಭಾರತಿ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ (ಐ.ಜಿ.ಎನ್.ಟಿ.ಯು), ಸಿಕ್ಕಿಂ ವಿಶ್ವವಿದ್ಯಾಲಯ, ತ್ರಿಪುರಾ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆ.ಎನ್.ಯು), ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಸೇರಿದಂತೆ ಅನೇಕ ಸಂಸ್ಥೆಗಳು ಸಮ್ಮೇಳನದಲ್ಲಿ ಭಾಗವಹಿಸಿವೆ.

ಭಾರತದ ಉನ್ನತ ಶಿಕ್ಷಣ ಭೂದೃಶ್ಯವನ್ನು ಪರಿವರ್ತಿಸುವ ಸ್ಪಷ್ಟ ದೃಷ್ಟಿಕೋನವನ್ನು ʻಎನ್.ಇ.ಪಿ-2020ʼ ಹೊಂದಿದೆ. ಇದು ವಿಚಾರಣೆ, ಸಹಯೋಗ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಸದೃಢ, ಬಹುಶಾಸ್ತ್ರೀಯ ಸಂಸ್ಥೆಗಳನ್ನು ರೂಪಿಸುತ್ತದೆ. ಈ ದೃಷ್ಟಿಕೋನಕ್ಕೆ ಅನುಗುಣವಾಗಿ ಮತ್ತು ವಿವಿಧ ಮಧ್ಯಸ್ಥಗಾರರ ನಡುವೆ ಸಮನ್ವಯವನ್ನು ನಿರ್ಮಿಸಲು, ಉಪಕುಲಪತಿಗಳ ಸಮ್ಮೇಳನವು ಅರ್ಥಪೂರ್ಣ ಒಳನೋಟಗಳನ್ನು ಸೃಷ್ಟಿಸುತ್ತದೆ. ಜೊತೆಗ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುತ್ತದೆ ಮತ್ತು ʻಎನ್.ಇ.ಪಿ-2020ʼ ಅನುಷ್ಠಾನದ ಮುಂದಿನ ಹಂತಕ್ಕೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಮ್ಮೇಳನದ ಫಲಿತಾಂಶಗಳು ಭಾರತದಲ್ಲಿ ಉನ್ನತ ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು 2047ರ ವೇಳೆಗೆ ʻವಿಕಸಿತ ಭಾರತʼ ನಿರ್ಮಾಣ ರಾಷ್ಟ್ರದ ಸಾಮೂಹಿಕ ಆಶಯವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಉದ್ಘಾಟನಾ ದಿನದಂದು ಭಾರತದ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯ ಆಧಾರ ಸ್ತಂಭಗಳನ್ನು ಬಲಪಡಿಸುವುದು; ಶೈಕ್ಷಣಿಕ ಚಲನಶೀಲತೆ, ಬೋಧನೆ ಮತ್ತು ಕಲಿಕೆಯನ್ನು ಕೆಲಸದ ಭವಿಷ್ಯದೊಂದಿಗೆ ಹೊಂದಿಸುವುದು; ಕೌಶಲ್ಯ ಜೋಡಣೆ, ಡಿಜಿಟಲ್ ಶಿಕ್ಷಣ, ವಿಶ್ವವಿದ್ಯಾಲಯ ಆಡಳಿತ ವ್ಯವಸ್ಥೆಗಳು, ಉನ್ನತ ಶಿಕ್ಷಣದಲ್ಲಿ ಸಮಾನತೆ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ ಏಕೀಕರಣವನ್ನು ಕೇಂದ್ರೀಕರಿಸಿದ ಆರು ವಿಷಯಾಧಾರಿತ ಅಧಿವೇಶನಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

 

*****
 


(Release ID: 2143900) Visitor Counter : 4