ಪ್ರಧಾನ ಮಂತ್ರಿಯವರ ಕಛೇರಿ
ನಮೀಬಿಯಾದ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Posted On:
09 JUL 2025 10:14PM by PIB Bengaluru
ಗೌರವಾನ್ವಿತ ಸ್ಪೀಕರ್ ಮೇಡಂ,
ನಿವೃತ್ತ ಗೌರವಾನ್ವಿತ ಪ್ರಧಾನಮಂತ್ರಿಗಳೇ,
ಗೌರವಾನ್ವಿತ ಉಪ ಪ್ರಧಾನಮಂತ್ರಿಗಳೇ,
ಗೌರವಾನ್ವಿತ ಉಪ ಸಭಾಪತಿಗಳೇ,
ಗೌರವಾನ್ವಿತ ಸಂಸತ್ ಸದಸ್ಯರೇ,
ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ಓಂವಾ ಉಹಲಾ ಪೋ ನವಾ?
ಶುಭ ಮಧ್ಯಾಹ್ನ!
ಗೌರವಾನ್ವಿತ ಸದನವನ್ನು ಉದ್ದೇಶಿಸಿ ಮಾತನಾಡುವುದು ನನಗೆ ದೊರೆತ ಸುಯೋಗ. ಈ ಗೌರವವನ್ನು ನನಗೆ ನೀಡಿದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ.
ಪ್ರಜಾಪ್ರಭುತ್ವದ ತಾಯಿ ಎನಿಸಿದ ದೇಶದ ಪ್ರತಿನಿಧಿಯಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ನಾನು ನನ್ನೊಂದಿಗೆ 140 ಕೋಟಿ ಭಾರತೀಯರ ಆತ್ಮೀಯ ಶುಭಾಶಯಗಳನ್ನು ತಂದಿದ್ದೇನೆ.
ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ನನ್ನ ಮಾತುಗಳನ್ನು ಪ್ರಾರಂಭಿಸಲು ದಯವಿಟ್ಟು ನನಗೆ ಅವಕಾಶ ನೀಡಿ. ಈ ಮಹಾನ್ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಜನರು ನಿಮಗೆ ಜನಾದೇಶವನ್ನು ನೀಡಿದ್ದಾರೆ. ರಾಜಕೀಯದಲ್ಲಿ, ನಿಮಗೆ ತಿಳಿದಿರುವಂತೆ, ಇದು ಒಂದು ಗೌರವ ಹಾಗೂ ಅಷ್ಟೇ ದೊಡ್ಡ ಜವಾಬ್ದಾರಿಯೂ ಹೌದು. ನಿಮ್ಮ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿಮಗೆ ಸಂಪೂರ್ಣ ಯಶಸ್ಸು ಸಿಗಲಿ ಎಂದು ನಾನು ಹಾರೈಸುತ್ತೇನೆ.
ಸ್ನೇಹಿತರೇ,
ಕೆಲವೇ ತಿಂಗಳುಗಳ ಹಿಂದೆ, ನೀವು ಒಂದು ಐತಿಹಾಸಿಕ ಸಂಭ್ರಮವನ್ನು ಆಚರಿಸಿದಿರಿ. ನಮೀಬಿಯಾ ತನ್ನ ಪ್ರಪ್ರಥಮ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಿತು. ನಿಮ್ಮ ಈ ಹೆಮ್ಮೆ ಮತ್ತು ಸಂತೋಷದಲ್ಲಿ ನಾವೂ ಕೂಡ ಹೆಮ್ಮೆಯಿಂದ ಭಾಗಿಯಾಗಿದ್ದೇವೆ. ಏಕೆಂದರೆ, ಭಾರತದಲ್ಲಿಯೂ ನಾವು ಬಹಳ ಅಭಿಮಾನದಿಂದ 'ಮೇಡಂ ಪ್ರೆಸಿಡೆಂಟ್' ಎಂದು ಸಂಬೋಧಿಸುತ್ತೇವೆ.
ಇದುವೇ ಭಾರತದ ಸಂವಿಧಾನ. ಇದರ ಫಲವಾಗಿಯೇ, ಒಬ್ಬ ಬಡ ಆದಿವಾಸಿ ಕುಟುಂಬದ ಮಗಳು ಇಂದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಯಾಗಿದ್ದಾರೆ. ಇದೇ ಸಂವಿಧಾನದ ಶಕ್ತಿ. ಈ ಶಕ್ತಿಯಿಂದಲೇ ನನ್ನಂತಹ ಬಡ ಕುಟುಂಬದಲ್ಲಿ ಜನಿಸಿದ ವ್ಯಕ್ತಿಗೆ ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗುವ ಅವಕಾಶ ಲಭಿಸಿದೆ. ಯಾರ ಬಳಿ ಏನೂ ಇರುವುದಿಲ್ಲವೋ, ಅವರಿಗೆ ನಮ್ಮ ಸಂವಿಧಾನವೇ ಒಂದು ಭರವಸೆಯಾಗಿದೆ!
ಗೌರವಾನ್ವಿತ ಸದಸ್ಯರೇ,
ಈ ಗೌರವಾನ್ವಿತ ಸದನದಲ್ಲಿ ನಿಂತು, ಈ ವರ್ಷದ ಆರಂಭದಲ್ಲಿ ನಿಧನರಾದ ನಮೀಬಿಯಾದ ಪ್ರಥಮ ರಾಷ್ಟ್ರಪತಿ ಮತ್ತು ರಾಷ್ಟ್ರಪಿತ ಸ್ಯಾಮ್ ನುಜೋಮಾ ಅವರಿಗೆ ನಾನು ಗೌರವವನ್ನು ಸಲ್ಲಿಸುತ್ತೇನೆ. ಅವರು ಒಮ್ಮೆ ಹೇಳಿದ್ದರು, ಮತ್ತು ನಾನು ಅದನ್ನು ಉಲ್ಲೇಖಿಸುತ್ತೇನೆ:
"ನಾವು ಸ್ವಾತಂತ್ರ್ಯವನ್ನು ಸಾಧಿಸಿರುವುದು ನಮ್ಮ ಮೇಲೆ ಒಂದು ದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ. ಕಷ್ಟಪಟ್ಟು ಗಳಿಸಿದ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸುವುದು ಮಾತ್ರವಲ್ಲದೆ, ಜನಾಂಗ, ಧರ್ಮ, ಅಥವಾ ವರ್ಣದ ಭೇದವಿಲ್ಲದೆ ಎಲ್ಲರಿಗೂ ಸಮಾನತೆ, ನ್ಯಾಯ ಮತ್ತು ಅವಕಾಶಗಳ ಉನ್ನತ ಗುಣಮಟ್ಟವನ್ನು ನಾವೇ ಸ್ಥಾಪಿಸಿಕೊಳ್ಳಬೇಕು."
ನ್ಯಾಯಯುತ ಮತ್ತು ಸ್ವತಂತ್ರ ರಾಷ್ಟ್ರದ ಕುರಿತಾದ ಅವರ ದೃಷ್ಟಿ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ನಿಮ್ಮ ಸ್ವಾತಂತ್ರ್ಯ ಸಂಗ್ರಾಮದ ವೀರರಾದ ಹೋಸಿಯಾ ಕುಟಾಕೊ, ಹೆಂಡ್ರಿಕ್ ವಿಟ್ಬೂಯಿ, ಮಾಂಡುಮೆ ಯಾ ನೆಗೆಡೆಮಾಫಾಯೊ, ಮತ್ತು ಅನೇಕ ಇತರರ ನೆನಪುಗಳಿಗೂ ನಾವು ಗೌರವ ಸಲ್ಲಿಸುತ್ತೇವೆ.
ನಿಮ್ಮ ವಿಮೋಚನಾ ಹೋರಾಟದ ಸಮಯದಲ್ಲಿ ಭಾರತದ ಜನರು ಹೆಮ್ಮೆಯಿಂದ ನಮೀಬಿಯಾದ ಜೊತೆ ನಿಂತಿದ್ದರು. ನಮಗೆ ಸ್ವಾತಂತ್ರ್ಯ ಸಿಗುವ ಮುಂಚೆಯೇ, ಭಾರತವು ವಿಶ್ವಸಂಸ್ಥೆಯಲ್ಲಿ ನೈಋತ್ಯ ಆಫ್ರಿಕಾದ (ಸೌತ್ ವೆಸ್ಟ್ ಆಫ್ರಿಕಾ) ವಿಷಯವನ್ನು ಪ್ರಸ್ತಾಪಿಸಿತ್ತು.
ನಿಮ್ಮ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ನಾವು ಸ್ವಾಪೋ (SWAPO) ಸಂಘಟನೆಯನ್ನು ಬೆಂಬಲಿಸಿದ್ದೆವು. ವಾಸ್ತವವಾಗಿ, ನವದೆಹಲಿಯು ವಿದೇಶದಲ್ಲಿ ಅವರ ಮೊಟ್ಟಮೊದಲ ರಾಯಭಾರಿ ಕಚೇರಿಗೆ ಆತಿಥ್ಯ ನೀಡಿತ್ತು. ಮತ್ತು, ನಮೀಬಿಯಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಮುನ್ನಡೆಸಿದ್ದು ಒಬ್ಬ ಭಾರತೀಯರಾದ ಲೆಫ್ಟಿನೆಂಟ್ ಜನರಲ್ ದಿವಾನ್ ಪ್ರೇಮ್ ಚಂದ್ ಅವರು.
ಕೇವಲ ಮಾತಿನಲ್ಲಿ ಮಾತ್ರವಲ್ಲದೆ, ಕೃತಿಯಲ್ಲೂ ನಿಮ್ಮೊಂದಿಗೆ ನಿಂತಿದ್ದಕ್ಕೆ ಭಾರತ ಹೆಮ್ಮೆ ಪಡುತ್ತದೆ. ಸುಪ್ರಸಿದ್ಧ ನಮೀಬಿಯನ್ ಕವಿ ಮ್ವುಲಾ ಯಾ ನಂಗೋಲೊ ಅವರು ಬರೆದಿದನ್ನು ನಾನು ಉಲ್ಲೇಖಿಸುತ್ತೇನೆ:
"ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ನಾವು ಹೆಮ್ಮೆಯಿಂದ ಅತ್ಯಂತ ಭವ್ಯವಾದ ಸ್ಮಾರಕವನ್ನು ನೆನಪಿಗಾಗಿ ನಿರ್ಮಿಸುತ್ತೇವೆ."
ಇಂದು, ಇದೇ ಸಂಸತ್ತು, ಮತ್ತು ಈ ಸ್ವತಂತ್ರ ಹಾಗೂ ಹೆಮ್ಮೆಯ ನಮೀಬಿಯಾ, ಜೀವಂತ ಸ್ಮಾರಕಗಳಾಗಿವೆ.
ಗೌರವಾನ್ವಿತ ಸದಸ್ಯರೇ,
ಭಾರತ ಮತ್ತು ನಮೀಬಿಯಾಗಳ ನಡುವೆ ಅನೇಕ ಸಾಮ್ಯತೆಗಳಿವೆ. ನಾವಿಬ್ಬರೂ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡಿದ್ದೇವೆ. ನಾವಿಬ್ಬರೂ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತೇವೆ. ನಮ್ಮ ಸಂವಿಧಾನಗಳು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಎತ್ತಿಹಿಡಿಯಲು ನಮಗೆ ಮಾರ್ಗದರ್ಶನ ನೀಡುತ್ತವೆ. ನಾವು 'ಗ್ಲೋಬಲ್ ಸೌತ್'ನ (Global South) ಭಾಗವಾಗಿದ್ದೇವೆ ಮತ್ತು ನಮ್ಮ ಜನರ ಭರವಸೆಗಳು ಮತ್ತು ಕನಸುಗಳು ಒಂದೇ ಆಗಿವೆ.
ಇಂದು, ನಮ್ಮ ಜನರ ನಡುವಿನ ಸ್ನೇಹದ ಸಂಕೇತವಾಗಿ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಅತೀವ ಗೌರವವನ್ನು ಹೊಂದಿದ್ದೇನೆ. ನಮೀಬಿಯಾದ ಗಟ್ಟಿಯಾದ ಮತ್ತು ಸುಂದರವಾದ ಸಸ್ಯಗಳಂತೆ, ನಮ್ಮ ಸ್ನೇಹವೂ ಕಾಲದ ಪರೀಕ್ಷೆಯನ್ನು ಎದುರಿಸಿದೆ. ಅತ್ಯಂತ ಶುಷ್ಕ ವಾತಾವರಣದಲ್ಲೂ ಇದು ಸದ್ದಿಲ್ಲದೆ ಬೆಳೆಯುತ್ತದೆ. ಮತ್ತು, ನಿಮ್ಮ ರಾಷ್ಟ್ರೀಯ ಸಸ್ಯವಾದ ವೆಲ್ವಿಟ್ಸಿಯಾ ಮಿರಾಬಿಲಿಸ್ ((Welwitschia Mirabilis) ನಂತೆಯೇ, ಇದು ವಯಸ್ಸು ಮತ್ತು ಸಮಯದೊಂದಿಗೆ ಇನ್ನಷ್ಟು ಬಲಗೊಳ್ಳುತ್ತದೆ. ಭಾರತದ 1.4 ಶತಕೋಟಿ ಜನರ ಪರವಾಗಿ, ಈ ಗೌರವಕ್ಕಾಗಿ ನಾನು ಮತ್ತೊಮ್ಮೆ ನಮೀಬಿಯಾದ ಅಧ್ಯಕ್ಷರಿಗೆ, ಸರ್ಕಾರಕ್ಕೆ ಮತ್ತು ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸ್ನೇಹಿತರೇ,
ನಮೀಬಿಯಾದೊಂದಿಗಿನ ತನ್ನ ಐತಿಹಾಸಿಕ ಬಾಂಧವ್ಯವನ್ನು ಭಾರತವು ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿಸುತ್ತದೆ. ನಾವು ನಮ್ಮ ಗತಕಾಲದ ಸಂಬಂಧಗಳನ್ನು ಗೌರವಿಸುವುದು ಮಾತ್ರವಲ್ಲದೆ, ನಮ್ಮಿಬ್ಬರ ಉಜ್ವಲ ಭವಿಷ್ಯದ ಸಾಮರ್ಥ್ಯವನ್ನು ಸಾಕಾರಗೊಳಿಸುವತ್ತಲೂ ಗಮನ ಕೇಂದ್ರೀಕರಿಸಿದ್ದೇವೆ. ನಮೀಬಿಯಾದ 'ವಿಷನ್ 2030' ಮತ್ತು 'ಹರಂಬೀ ಸಮೃದ್ಧಿ ಯೋಜನೆ'ಯಲ್ಲಿ ಜೊತೆಗೂಡಿ ಕೆಲಸ ಮಾಡುವುದರಲ್ಲಿ ನಾವು ಮಹತ್ತರವಾದ ಮೌಲ್ಯವನ್ನು ಕಾಣುತ್ತೇವೆ.
ಮತ್ತು, ನಮ್ಮ ಪಾಲುದಾರಿಕೆಯ ಕೇಂದ್ರಬಿಂದು ನಮ್ಮ ಜನರೇ. ಇದುವರೆಗೆ 1700ಕ್ಕೂ ಹೆಚ್ಚು ನಮೀಬಿಯನ್ನರು ಭಾರತದಲ್ಲಿ ವಿದ್ಯಾರ್ಥಿವೇತನಗಳು ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿದ್ದಾರೆ. ನಮೀಬಿಯಾದ ಮುಂದಿನ ಪೀಳಿಗೆಯ ವಿಜ್ಞಾನಿಗಳು, ವೈದ್ಯರು ಮತ್ತು ನಾಯಕರನ್ನು ಬೆಂಬಲಿಸಲು ನಾವು ಉತ್ಸುಕರಾಗಿದ್ದೇವೆ. ಮಾಹಿತಿ ತಂತ್ರಜ್ಞಾನದಲ್ಲಿನ ಉತ್ಕೃಷ್ಟತಾ ಕೇಂದ್ರ (Centre of Excellence in IT), ನಮೀಬಿಯಾ ವಿಶ್ವವಿದ್ಯಾಲಯದ JEDS ಕ್ಯಾಂಪಸ್ ನಲ್ಲಿರುವ ಇಂಡಿಯಾ ವಿಂಗ್, ಹಾಗೂ ರಕ್ಷಣೆ ಮತ್ತು ಭದ್ರತಾ ತರಬೇತಿ – ಇವೆಲ್ಲವೂ 'ಸಾಮರ್ಥ್ಯವೇ ಅತ್ಯುತ್ತಮ ಕರೆನ್ಸಿ' ಎಂಬ ನಮ್ಮ ಹಂಚಿಕೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ.
ಹಣಕಾಸಿನ ವಿಷಯಕ್ಕೆ ಬಂದರೆ, ಈ ವಲಯದಲ್ಲಿ ಭಾರತದ ಯುಪಿಐ (UPI - ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಅನ್ನು ಅಳವಡಿಸಿಕೊಂಡ ಮೊದಲ ದೇಶಗಳಲ್ಲಿ ನಮೀಬಿಯಾ ಕೂಡ ಒಂದಾಗಿದೆ ಎಂಬುದು ನಮಗೆ ಅತೀವ ಸಂತಸ ತಂದಿದೆ. ಶೀಘ್ರದಲ್ಲೇ, 'ತಂಗಿ ಉನೇನೆ' (ಧನ್ಯವಾದಗಳು) ಎಂದು ಹೇಳುವುದಕ್ಕಿಂತ ವೇಗವಾಗಿ ಜನರು ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಶೀಘ್ರದಲ್ಲೇ, ಕುನೆನೆಯಲ್ಲಿರುವ ಹಿಂಬಾ ಅಜ್ಜಿಯಾಗಲಿ, ಅಥವಾ ಕಟುಟುರಾದ ಅಂಗಡಿಯವನಾಗಲಿ, ಸ್ಪ್ರಿಂಗ್ ಬಾಕ್ ಜಿಂಕೆಗಿಂತಲೂ ವೇಗವಾಗಿ, ಕೇವಲ ಒಂದು ಬೆರಳ ತುದಿಯ ಸ್ಪರ್ಶದಿಂದ ಡಿಜಿಟಲ್ ಪಾವತಿಗಳನ್ನು ಮಾಡಲು ಶಕ್ತರಾಗುತ್ತಾರೆ.
ನಮ್ಮ ದ್ವಿಪಕ್ಷೀಯ ವ್ಯಾಪಾರವು 800 ಮಿಲಿಯನ್ ಡಾಲರ್‌ಗಳನ್ನು ದಾಟಿದೆ. ಆದರೆ, ಕ್ರಿಕೆಟ್ ಮೈದಾನದಲ್ಲಿರುವಂತೆ, ನಾವು ಈಗಷ್ಟೇ ವಾರ್ಮ್-ಅಪ್ ಆರಂಭಿಸಿದ್ದೇವೆ. ನಾವು ಇನ್ನಷ್ಟು ವೇಗವಾಗಿ ಮತ್ತು ಇನ್ನಷ್ಟು ಹೆಚ್ಚು ರನ್ ಗಳನ್ನು ಗಳಿಸಲಿದ್ದೇವೆ.
ನಮೀಬಿಯಾದ ಯುವಜನತೆಯನ್ನು ಹೊಸ 'ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ'ದ ಮೂಲಕ ಬೆಂಬಲಿಸಲು ನಮಗೆ ಗೌರವವಿದೆ. ಇದು ಉದ್ಯಮದ ಕನಸುಗಳಿಗೆ ಮಾರ್ಗದರ್ಶನ, ಹಣಕಾಸಿನ ನೆರವು ಮತ್ತು ಸ್ನೇಹಿತರನ್ನೂ ಸಹ ಪಡೆಯಬಹುದಾದ ಸ್ಥಳವಾಗಲಿದೆ.
ಆರೋಗ್ಯವು ನಮ್ಮಿಬ್ಬರ ಆದ್ಯತೆಗಳ ಮತ್ತೊಂದು ಪ್ರಮುಖ ಆಧಾರಸ್ತಂಭವಾಗಿದೆ. ಭಾರತದ ಆರೋಗ್ಯ ವಿಮಾ ಯೋಜನೆ 'ಆಯುಷ್ಮಾನ್ ಭಾರತ್' ಸುಮಾರು 500 ಮಿಲಿಯನ್ ಜನರನ್ನು ಒಳಗೊಂಡಿದೆ. ಆದರೆ ಆರೋಗ್ಯದ ಬಗ್ಗೆ ಭಾರತದ ಕಾಳಜಿ ಕೇವಲ ಭಾರತೀಯರಿಗೆ ಸೀಮಿತವಾಗಿಲ್ಲ.
ಭಾರತದ ಧ್ಯೇಯವಾದ - "ಒಂದೇ ಭೂಮಿ, ಒಂದೇ ಆರೋಗ್ಯ," (One Earth, One Health) ಆರೋಗ್ಯವನ್ನು ಜಾಗತಿಕ ಸಹಭಾಗಿತ್ವದ ಜವಾಬ್ದಾರಿ ಎಂದು ಪರಿಗಣಿಸುತ್ತದೆ.
ಸಾಂಕ್ರಾಮಿಕದ ಸಮಯದಲ್ಲಿ, ಅನೇಕರು ಸಹಾಯ ಮಾಡಲು ನಿರಾಕರಿಸಿದಾಗಲೂ ನಾವು ಆಫ್ರಿಕಾದ ಜೊತೆ ನಿಂತೆವು – ಲಸಿಕೆಗಳನ್ನು ಮತ್ತು ಔಷಧಿಗಳನ್ನು ಒದಗಿಸಿದೆವು. ನಮ್ಮ "ಆರೋಗ್ಯ ಮೈತ್ರಿ" ಉಪಕ್ರಮವು ಆಫ್ರಿಕಾವನ್ನು ಆಸ್ಪತ್ರೆಗಳು, ಉಪಕರಣಗಳು, ಔಷಧಿಗಳು ಮತ್ತು ತರಬೇತಿಯೊಂದಿಗೆ ಬೆಂಬಲಿಸುತ್ತದೆ. ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಾಗಿ ನಮೀಬಿಯಾಗೆ 'ಭಾಭಾಟ್ರಾನ್' ರೇಡಿಯೊಥೆರಪಿ ಯಂತ್ರವನ್ನು ಪೂರೈಸಲು ಭಾರತ ಸಿದ್ಧವಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಈ ಯಂತ್ರವನ್ನು 15 ದೇಶಗಳಲ್ಲಿ ಅಳವಡಿಸಲಾಗಿದೆ ಮತ್ತು ಇದು ವಿವಿಧ ದೇಶಗಳಲ್ಲಿ ಸುಮಾರು ಅರ್ಧ ಮಿಲಿಯನ್ (ಐದು ಲಕ್ಷ) ರೋಗಿಗಳಿಗೆ ಗಂಭೀರ ಕ್ಯಾನ್ಸರ್ ಚಿಕಿತ್ಸೆ ನೀಡಲು ಸಹಾಯ ಮಾಡಿದೆ.
ಅಲ್ಲದೆ, ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪಡೆಯಲು 'ಜನೌಷಧಿ' ಕಾರ್ಯಕ್ರಮಕ್ಕೆ ಸೇರಲು ನಾವು ನಮೀಬಿಯಾವನ್ನು ಆಹ್ವಾನಿಸುತ್ತೇವೆ. ಈ ಕಾರ್ಯಕ್ರಮದ ಅಡಿಯಲ್ಲಿ, ಭಾರತದಲ್ಲಿ ಔಷಧಿಗಳ ಬೆಲೆಯನ್ನು ಶೇ. 50 ರಿಂದ 80 ರಷ್ಟು ಕಡಿಮೆ ಮಾಡಲಾಗಿದೆ. ಇದು ಪ್ರತಿದಿನ 1 ಮಿಲಿಯನ್ ಗಿಂತಲೂ (ಹತ್ತು ಲಕ್ಷಕ್ಕೂ) ಹೆಚ್ಚು ಭಾರತೀಯರಿಗೆ ಸಹಾಯ ಮಾಡುತ್ತಿದೆ. ಮತ್ತು ಇಲ್ಲಿಯವರೆಗೆ, ಇದು ರೋಗಿಗಳ ಆರೋಗ್ಯ ವೆಚ್ಚದಲ್ಲಿ ಸುಮಾರು 4.5 ಬಿಲಿಯನ್ ಯುಎಸ್ ಡಾಲರ್ ಗಳನ್ನು ಉಳಿಸಲು ಸಹಾಯ ಮಾಡಿದೆ.
ಸ್ನೇಹಿತರೇ,
ನಮ್ಮ ದೇಶದಲ್ಲಿ ಚಿರತೆಗಳನ್ನು ಪುನಃ ಪರಿಚಯಿಸಲು ನೀವು ನಮಗೆ ಸಹಾಯ ಮಾಡಿದಾಗ, ಭಾರತ ಮತ್ತು ನಮೀಬಿಯಾಗಳು ಸಹಕಾರ, ಸಂರಕ್ಷಣೆ ಮತ್ತು ಸಹಾನುಭೂತಿಯ ಒಂದು ಶಕ್ತಿಯುತ ಕಥೆಯನ್ನು ಬರೆದವು. ನಿಮ್ಮ ಈ ಕೊಡುಗೆಗೆ ನಾವು ಸದಾ ಆಭಾರಿಯಾಗಿರುತ್ತೇವೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಅವುಗಳನ್ನು ಬಿಡುಗಡೆ ಮಾಡುವ ಸೌಭಾಗ್ಯ ನನಗೆ ಲಭಿಸಿತ್ತು.
ಅವುಗಳು ನಿಮಗೆ ಒಂದು ಸಂದೇಶವನ್ನು ಕಳುಹಿಸಿವೆ: ಇನಿಮಾ ಐಶೆ ಓಯಿಲಿ ನಾವಾ (ಎಲ್ಲವೂ ಚೆನ್ನಾಗಿದೆ).
ಅವು ಸಂತೋಷವಾಗಿವೆ ಮತ್ತು ತಮ್ಮ ಹೊಸ ಮನೆಗೆ ಚೆನ್ನಾಗಿ ಹೊಂದಿಕೊಂಡಿವೆ. ಅವುಗಳ ಸಂಖ್ಯೆಯೂ ಹೆಚ್ಚಿದೆ. ಸ್ಪಷ್ಟವಾಗಿ, ಅವು ಭಾರತದಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿವೆ.
ಸ್ನೇಹಿತರೇ,
ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟದಂತಹ ಉಪಕ್ರಮಗಳ ಮೂಲಕ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇಂದು ನಮೀಬಿಯಾ ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟವನ್ನು ಸೇರಿಕೊಂಡಿದೆ.
ಭವಿಷ್ಯದತ್ತ ನೋಡುವಾಗ, ನಮೀಬಿಯಾದ ರಾಷ್ಟ್ರೀಯ ಪಕ್ಷಿಯಾದ ಆಫ್ರಿಕನ್ ಫಿಶ್ ಈಗಲ್‌ನಿಂದ ನಾವು ಮಾರ್ಗದರ್ಶನ ಪಡೆಯೋಣ. ತನ್ನ ತೀಕ್ಷ್ಣ ದೃಷ್ಟಿ ಮತ್ತು ಭವ್ಯ ಹಾರಾಟಕ್ಕೆ ಹೆಸರುವಾಸಿಯಾದ ಇದು ನಮಗೆ ಹೀಗೆ ಕಲಿಸುತ್ತದೆ:
ಒಟ್ಟಾಗಿ ಗಗನಕ್ಕೇರಿ,
ಕ್ಷಿತಿಜವನ್ನು ಸೂಕ್ಷ್ಮವಾಗಿ ಅವಲೋಕಿಸಿ,
ಮತ್ತು, ಅವಕಾಶಗಳಿಗಾಗಿ ಧೈರ್ಯದಿಂದ ಮುನ್ನಡೆಯಿರಿ!
ಸ್ನೇಹಿತರೇ,
2018ರಲ್ಲಿ, ನಾನು ಆಫ್ರಿಕಾದೊಂದಿಗಿನ ನಮ್ಮ ಸಹಭಾಗಿತ್ವದ ಹತ್ತು ತತ್ವಗಳನ್ನು ರೂಪಿಸಿದ್ದೆ. ಇಂದು, ಅವುಗಳಿಗೆ ಭಾರತದ ಸಂಪೂರ್ಣ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ. ಅವು ಗೌರವ, ಸಮಾನತೆ ಮತ್ತು ಪರಸ್ಪರ ಲಾಭದ ಮೇಲೆ ಆಧಾರಿತವಾಗಿವೆ. ನಾವು ಸ್ಪರ್ಧಿಸಲು ಬಯಸುವುದಿಲ್ಲ, ಬದಲಿಗೆ ಸಹಕರಿಸಲು ಬಯಸುತ್ತೇವೆ. ನಮ್ಮ ಗುರಿ ಕಬಳಿಸುವುದಲ್ಲ, ಬದಲಿಗೆ ಒಟ್ಟಾಗಿ ಬೆಳೆಯುವುದು; ಕಟ್ಟುವುದು, ಕಸಿದುಕೊಳ್ಳುವುದಲ್ಲ.
ಆಫ್ರಿಕಾದಲ್ಲಿನ ನಮ್ಮ ಅಭಿವೃದ್ಧಿ ಪಾಲುದಾರಿಕೆಯ ಮೌಲ್ಯ 12 ಶತಕೋಟಿ ಡಾಲರ್ ಗಳಿಗಿಂತ ಹೆಚ್ಚಾಗಿದೆ. ಆದರೆ ಅದರ ನಿಜವಾದ ಮೌಲ್ಯವು ಹಂಚಿಕೆಯ ಬೆಳವಣಿಗೆ ಮತ್ತು ಹಂಚಿಕೆಯ ಉದ್ದೇಶದಲ್ಲಿದೆ. ನಾವು ಸ್ಥಳೀಯ ಕೌಶಲ್ಯಗಳನ್ನು ನಿರ್ಮಿಸುವುದನ್ನು, ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುವುದನ್ನು ಮತ್ತು ಸ್ಥಳೀಯ ನಾವೀನ್ಯತೆಯನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ.
ಆಫ್ರಿಕಾ ಕೇವಲ ಕಚ್ಚಾ ವಸ್ತುಗಳ ಮೂಲವಾಗಿರಬಾರದು ಎಂದು ನಾವು ನಂಬುತ್ತೇವೆ. ಆಫ್ರಿಕಾ ಮೌಲ್ಯ ಸೃಷ್ಟಿ ಮತ್ತು ಸುಸ್ಥಿರ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರಬೇಕು. ಅದಕ್ಕಾಗಿಯೇ ಕೈಗಾರಿಕೀಕರಣಕ್ಕಾಗಿ ಆಫ್ರಿಕಾದ ಅಜೆಂಡಾ 2063 ಅನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ರಕ್ಷಣೆ ಮತ್ತು ಭದ್ರತೆಯಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸಲು ನಾವು ಸಿದ್ಧರಿದ್ದೇವೆ. ವಿಶ್ವ ವ್ಯವಹಾರಗಳಲ್ಲಿ ಆಫ್ರಿಕಾದ ಪಾತ್ರವನ್ನು ಭಾರತ ಗೌರವಿಸುತ್ತದೆ. ನಮ್ಮ G20 ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ನಾವು ಆಫ್ರಿಕಾದ ಧ್ವನಿಗೆ ಬೆಂಬಲ ನೀಡಿದೆವು. ಮತ್ತು ಆಫ್ರಿಕನ್ ಯೂನಿಯನ್ ಅನ್ನು G20 ಯ ಖಾಯಂ ಸದಸ್ಯರಾಗಿ ಹೆಮ್ಮೆಯಿಂದ ಸ್ವಾಗತಿಸಿದೆವು.
ಸ್ನೇಹಿತರೇ,
ಭಾರತವು ಇಂದು ತನ್ನ ಅಭಿವೃದ್ಧಿಯ ಜೊತೆಜೊತೆಗೆ ಜಗತ್ತಿನ ಕನಸುಗಳಿಗೂ ದಿಕ್ಕು ತೋರುತ್ತಿದೆ. ಮತ್ತು ಇದರಲ್ಲಿಯೂ ನಮ್ಮ ಒತ್ತು 'ಗ್ಲೋಬಲ್ ಸೌತ್' ಮೇಲಿದೆ.
20ನೇ ಶತಮಾನದಲ್ಲಿ, ಭಾರತದ ಸ್ವಾತಂತ್ರ್ಯವು ಒಂದು ಕಿಡಿಯನ್ನು ಹೊತ್ತಿಸಿತು – ಅದು ಆಫ್ರಿಕಾ ಸೇರಿದಂತೆ ಜಗತ್ತಿನಾದ್ಯಂತ ಸ್ವಾತಂತ್ರ್ಯ ಚಳುವಳಿಗಳಿಗೆ ಸ್ಫೂರ್ತಿ ನೀಡಿತು. 21ನೇ ಶತಮಾನದಲ್ಲಿ, ಭಾರತದ ಅಭಿವೃದ್ಧಿಯು ಒಂದು ದಾರಿದೀಪವಾಗಿದೆ. 'ಗ್ಲೋಬಲ್ ಸೌತ್' ಕೂಡ ಉದಯಿಸಬಹುದು, ಮುನ್ನಡೆಯಬಹುದು ಮತ್ತು ತನ್ನದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ಇದು ತೋರಿಸುತ್ತಿದೆ. ಇದರ ಸಂದೇಶವೇನೆಂದರೆ - ನಿಮ್ಮ ಅಸ್ಮಿತೆಯನ್ನು ಕಳೆದುಕೊಳ್ಳದೆ, ನಿಮ್ಮದೇ ಆದ ನಿಯಮಗಳ ಮೇಲೆ ನೀವು ಯಶಸ್ವಿಯಾಗಬಹುದು.
ಇದುವೇ ಭಾರತದ ಸಂದೇಶ — ನಿಮ್ಮದೇ ಆದ ಹಾದಿಯಲ್ಲಿ ಸಾಗಿ, ನಿಮ್ಮ ಸಂಸ್ಕೃತಿ ಮತ್ತು ಘನತೆಯೊಂದಿಗೆ, ನೀವು ಯಶಸ್ಸನ್ನು ಸಾಧಿಸಬಹುದು.
ಈ ಸಂದೇಶವು ಇನ್ನಷ್ಟು ಗಟ್ಟಿಯಾಗಿ ಪ್ರತಿಧ್ವನಿಸಲು, ನಾವೆಲ್ಲರೂ ಒಟ್ಟಾಗಿ ಕಾರ್ಯೋನ್ಮುಖರಾಗಬೇಕು. ನಾವು ರೂಪಿಸಬೇಕಾದ ಭವಿಷ್ಯವು ಹೀಗಿರಲಿ:
- ಅದು ಶಕ್ತಿಯಿಂದಲ್ಲ, ಸಹಭಾಗಿತ್ವದಿಂದ ಕೂಡಿರಲಿ.
- ಅದು ಪ್ರಾಬಲ್ಯದಿಂದಲ್ಲ, ಸಂವಾದದಿಂದ ಕೂಡಿರಲಿ.
- ಅದು ಬಹಿಷ್ಕಾರದಿಂದಲ್ಲ, ಸಮಾನತೆಯಿಂದ ಕೂಡಿರಲಿ.
ಇದೇ ನಮ್ಮ ಸಹಬಾಗಿತ್ವ ದೃಷ್ಟಿಕೋನದ ಆಶಯ –
"ಸ್ವಾತಂತ್ರ್ಯದಿಂದ ಭವಿಷ್ಯದೆಡೆಗೆ" - ಸ್ವಾತಂತ್ರ್ಯದಿಂದ ಸಮೃದ್ಧಿ, ಸಂಕಲ್ಪದಿಂದ ಸಿದ್ಧಿ.
ಸ್ವಾತಂತ್ರ್ಯದ ಕಿಡಿಯಿಂದ, ಸಹಭಾಗಿತ್ವದ ಪ್ರಗತಿಯ ಬೆಳಕಿನೆಡೆಗೆ. ಬನ್ನಿ, ಈ ಹಾದಿಯಲ್ಲಿ ಒಟ್ಟಾಗಿ ಸಾಗೋಣ. ಸ್ವಾತಂತ್ರ್ಯದ ಅಗ್ನಿಯಲ್ಲಿ ಅರಳಿದ ಎರಡು ರಾಷ್ಟ್ರಗಳಾದ ನಾವು, ಈಗ ಘನತೆ, ಸಮಾನತೆ ಮತ್ತು ಅವಕಾಶಗಳಿರುವ ಭವಿಷ್ಯದ ಕನಸು ಕಾಣೋಣ ಮತ್ತು ಅದನ್ನು ನಿರ್ಮಿಸೋಣ. ಕೇವಲ ನಮ್ಮ ಜನರಿಗಾಗಿ ಮಾತ್ರವಲ್ಲ, ಇಡೀ ಮನುಕುಲಕ್ಕಾಗಿ.
ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಪಾಲುದಾರರಾಗಿ ನಾವು ಮುನ್ನಡೆಯೋಣ. ನಮ್ಮ ಮಕ್ಕಳು ನಾವು ಹೋರಾಡಿ ಗಳಿಸಿದ ಸ್ವಾತಂತ್ರ್ಯವನ್ನು ಆನುವಂಶಿಕವಾಗಿ ಪಡೆಯುವುದು ಮಾತ್ರವಲ್ಲ, ನಾವು ಒಟ್ಟಾಗಿ ನಿರ್ಮಿಸುವ ಭವಿಷ್ಯಕ್ಕೂ ಹಕ್ಕುದಾರರಾಗಲಿ. ಇಂದು ನಾನಿಲ್ಲಿ ನಿಂತಿರುವಾಗ, ನನ್ನ ಹೃದಯವು ಭರವಸೆಯಿಂದ ತುಂಬಿ ತುಳುಕುತ್ತಿದೆ. ಭಾರತ-ನಮೀಬಿಯಾ ಸಂಬಂಧಗಳ ಸುವರ್ಣ ಅಧ್ಯಾಯವು ನಮ್ಮ ಮುಂದಿದೆ.
ಸ್ನೇಹಿತರೇ,
ನನ್ನ ಮಾತುಗಳನ್ನು ಮುಕ್ತಾಯಗೊಳಿಸುವ ಮುನ್ನ, 2027ರ ಕ್ರಿಕೆಟ್ ವಿಶ್ವಕಪ್‌ನ ಸಹ-ಆತಿಥ್ಯ ವಹಿಸಲಿರುವ ನಮೀಬಿಯಾಗೆ ಅತ್ಯಂತ ಯಶಸ್ಸು ಸಿಗಲೆಂದು ಮನಃಪೂರ್ವಕವಾಗಿ ಹಾರೈಸುತ್ತೇನೆ. ಒಂದು ವೇಳೆ ನಿಮ್ಮ 'ಈಗಲ್ಸ್' ಪಡೆಗೆ ಕ್ರಿಕೆಟ್ ನ ಸೂಕ್ಷ್ಮತೆಗಳ ಬಗ್ಗೆ ಸಲಹೆ ಬೇಕಾದಲ್ಲಿ, ನಾವು ಸದಾ ಸಿದ್ಧರಿದ್ದೇವೆ ಎಂಬುದು ನಿಮಗೆ ತಿಳಿದಿದೆ!
ಈ ಗೌರವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಟಂಗಿ ಉನೆನೆ!
*****
(Release ID: 2143656)
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam