ಕೃಷಿ ಸಚಿವಾಲಯ
ಹತ್ತಿ ಉತ್ಪಾದನೆ ಕುರಿತು ಚರ್ಚಿಸಲು ಸಭೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ವಿಡಿಯೋ ಮೂಲಕ ಘೋಷಣೆ
“ಹತ್ತಿ ಉತ್ಪಾದನೆ ಕುರಿತ ವಿಶೇಷ ಸಭೆಯು ಇದೇ ಜುಲೈ 11, 2025 ರಂದು ಕೊಯಮತ್ತೂರಿನಲ್ಲಿ ನಡೆಯಲಿದೆ” – ಶ್ರೀ ಶಿವರಾಜ್ ಸಿಂಗ್ ಚೌಹಾಣ್
“ಹತ್ತಿಯ ಇಳುವರಿ ಹಾಗೂ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಗಂಭೀರ ಸಮಾಲೋಚನೆ ನಡೆಸಲಾಗುತ್ತಿದೆ” – ಶ್ರೀ ಚೌಹಾಣ್
ಹತ್ತಿ ಇಳುವರಿಯನ್ನು ಹೆಚ್ಚಿಸಲು ಕೇಂದ್ರ ಕೃಷಿ ಸಚಿವರು ರೈತ ಬಾಂಧವರಿಂದ ಸಲಹೆಗಳನ್ನೂ ಆಹ್ವಾನಿಸಿದ್ದಾರೆ
प्रविष्टि तिथि:
09 JUL 2025 6:11PM by PIB Bengaluru
ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಬೆಳೆವಾರು ಸಮಸ್ಯೆಗಳನ್ನು ಚರ್ಚಿಸುವ ಸರಣಿ ಸಭೆಗಳ ಮುಂದುವರಿದ ಭಾಗವಾಗಿ, ಇಂದು ವಿಡಿಯೋ ಸಂದೇಶವೊಂದನ್ನು ಬಿಡುಗಡೆಗೊಳಿಸಿದ್ದಾರೆ. ಹತ್ತಿ ಉತ್ಪಾದನೆಯಲ್ಲಿನ ಬಿಕ್ಕಟ್ಟನ್ನು ಚರ್ಚಿಸಲು ಮುಂಬರುವ ಶುಕ್ರವಾರ, ಜುಲೈ 11, 2025 ರಂದು ಕೊಯಮತ್ತೂರಿನಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿರುವ ಬಗ್ಗೆ ಅವರು ಮಾಹಿತಿ ನೀಡಿದ್ದು, ಈ ನಿಟ್ಟಿನಲ್ಲಿ ದೇಶದ ಸಮಸ್ತ ರೈತ ಸಹೋದರ ಸಹೋದರಿಯರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.
ತಮ್ಮ ಸಂದೇಶದಲ್ಲಿ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೀಗೆ ಹೇಳಿದ್ದಾರೆ:
“ಹತ್ತಿ ಬೆಳೆಯುವ ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ,…”
ನಮ್ಮ ದೇಶದಲ್ಲಿ ಹತ್ತಿಯ ಇಳುವರಿ ಸದ್ಯಕ್ಕೆ ಬಹಳ ಕಡಿಮೆಯಿದೆ. ಅದರಲ್ಲೂ ಇತ್ತೀಚೆಗೆ, ಬಿಟಿ ಹತ್ತಿಗೆ 'ಟಿಎಸ್ವಿ' (TSV) ವೈರಸ್ ತಗುಲುತ್ತಿರುವುದರಿಂದ ಇಳುವರಿಯು ಮತ್ತಷ್ಟು ಕುಸಿದಿದೆ. ಹತ್ತಿ ಉತ್ಪಾದನೆಯು ಹೀಗೆ ವೇಗವಾಗಿ ಕುಸಿಯುತ್ತಿರುವುದು ನಮ್ಮ ರೈತ ಬಾಂಧವರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಕೃಷಿ ವೆಚ್ಚವನ್ನು ತಗ್ಗಿಸಿ, ಹತ್ತಿ ಉತ್ಪಾದನೆಯನ್ನು ಹೆಚ್ಚಿಸುವುದು ನಮ್ಮ ದೃಢ ಸಂಕಲ್ಪವಾಗಿದೆ. ವೈರಸ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ, ಬದಲಾಗುವ ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಈ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ, ನಾವು ಇದೇ ಶುಕ್ರವಾರ, ಜುಲೈ 11, 2025 ರಂದು, ಬೆಳಿಗ್ಗೆ 10 ಗಂಟೆಗೆ ಕೊಯಮತ್ತೂರಿನಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿದ್ದೇವೆ. ಈ ಸಭೆಯಲ್ಲಿ ಹತ್ತಿ ಬೆಳೆಗಾರರ ಪ್ರತಿನಿಧಿಗಳು, ರೈತ ಸಂಘಟನೆಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಮಹಾನಿರ್ದೇಶಕರು ಸೇರಿದಂತೆ ಪ್ರಖ್ಯಾತ ವಿಜ್ಞಾನಿಗಳು, ಹತ್ತಿ ಬೆಳೆಯುವ ರಾಜ್ಯಗಳ ಕೃಷಿ ಸಚಿವರು, ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಹತ್ತಿ ಉದ್ಯಮದ ಪ್ರಮುಖರು ಮತ್ತು ಕೃಷಿ ವಿಶ್ವವಿದ್ಯಾಲಯಗಳ ತಜ್ಞರು ಭಾಗವಹಿಸಲಿದ್ದಾರೆ.
ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಹತ್ತಿಯ ಇಳುವರಿ ಮತ್ತು ಗುಣಮಟ್ಟ, ಎರಡನ್ನೂ ಸುಧಾರಿಸುವ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಈ ಕುರಿತು ನಿಮ್ಮಲ್ಲಿ ಯಾವುದೇ ಸಲಹೆ-ಸೂಚನೆಗಳಿದ್ದರೆ, ದಯಮಾಡಿ ನಮ್ಮ ಟೋಲ್-ಫ್ರೀ ಸಂಖ್ಯೆ: 1800-180-1551 ಕ್ಕೆ ಕರೆ ಮಾಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ಕೋರುತ್ತೇನೆ. ನೀವು ನೀಡುವ ಪ್ರತಿಯೊಂದು ಸಲಹೆಯನ್ನೂ ನಾನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇನೆ. ನಾವೆಲ್ಲರೂ ಒಗ್ಗೂಡಿ, ನಮ್ಮ ದೇಶದಲ್ಲಿ ಹತ್ತಿ ಉತ್ಪಾದನೆಯನ್ನು ಹೆಚ್ಚಿಸಲು ಒಂದು ಸಮಗ್ರವಾದ ಮಾರ್ಗಸೂಚಿಯನ್ನು ರೂಪಿಸೋಣ.
*****
(रिलीज़ आईडी: 2143546)
आगंतुक पटल : 19