ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಹೇಳಿಕೆ: ಬಹುಪಕ್ಷೀಯತೆ, ಆರ್ಥಿಕ ಹಣಕಾಸು ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಲಪಡಿಸುವುದು

Posted On: 07 JUL 2025 9:53AM by PIB Bengaluru

ಗೌರವಾನ್ವಿತರೇ,

ವಿಸ್ತೃತ ಬ್ರಿಕ್ಸ್ ಕುಟುಂಬದ ನನ್ನ ಸ್ನೇಹಿತರೊಂದಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಬಹಳ ಸಂತೋಷವಾಗಿದೆ. ಬ್ರಿಕ್ಸ್ ಔಟ್ರೀಚ್ ಶೃಂಗಸಭೆಯಲ್ಲಿ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದ ಸ್ನೇಹಪರ ರಾಷ್ಟ್ರಗಳೊಂದಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ ಅಧ್ಯಕ್ಷ ಲೂಲಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಸ್ನೇಹಿತರೇ,

ಬ್ರಿಕ್ಸ್ ಗುಂಪಿನ ವೈವಿಧ್ಯತೆ ಮತ್ತು ಬಹುನಾಯಕತ್ವತೆಯ   ಬಗ್ಗೆ ಇರುವ ನಮ್ಮ ವಿಶ್ವಾಸವು ನಮ್ಮ ದೊಡ್ಡ ಶಕ್ತಿಯಾಗಿದೆ. ಇಂದು, ವಿಶ್ವದ ವ್ಯವಸ್ಥೆಯು  ಎಲ್ಲಾ ಕಡೆಯಿಂದ ಒತ್ತಡಗಳನ್ನು ಎದುರಿಸುತ್ತಿರುವಾಗ ಮತ್ತು ಜಗತ್ತು ಅನೇಕ ಸವಾಲುಗಳು ಹಾಗು ಅನಿಶ್ಚಿತತೆಗಳ ಮೂಲಕ ಸಾಗುತ್ತಿರುವಾಗ, ಬ್ರಿಕ್ಸ್ ನ ಹೆಚ್ಚುತ್ತಿರುವ ಪ್ರಸ್ತುತತೆ ಮತ್ತು ಪ್ರಭಾವವು ಇರುವುದು ಸಹಜ . ಮುಂಬರುವ ಕಾಲದಲ್ಲಿ ಬ್ರಿಕ್ಸ್ ಬಹುನಾಯಕತ್ವದ ಜಗತ್ತಿಗೆ ಹೇಗೆ ಮಾರ್ಗದರ್ಶಿಯಾಗಬಹುದು ಎನ್ನುವುದನ್ನು ನಾವು ಒಟ್ಟಾಗಿ ಪರಿಗಣಿಸಬೇಕು.

ಈ ನಿಟ್ಟಿನಲ್ಲಿ ನಾನು ಕೆಲವು ಸಲಹೆಗಳನ್ನು ಸಲ್ಲಿಸಲು ಬಯಸುತ್ತೇನೆ:

ಮೊದಲನೆಯದಾಗಿ, ಬ್ರಿಕ್ಸ್ ಅಡಿಯಲ್ಲಿ, ನಮ್ಮ ಆರ್ಥಿಕ ಸಹಕಾರವು ಸ್ಥಿರವಾಗಿ ಪ್ರಗತಿಯಲ್ಲಿದೆ. ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮತ್ತು ಬ್ರಿಕ್ಸ್ ಮಹಿಳಾ ವ್ಯಾಪಾರ ಒಕ್ಕೂಟವು ಇದರಲ್ಲಿ ವಿಶೇಷ ಪಾತ್ರವನ್ನು ವಹಿಸಿವೆ. ಬ್ರೆಜಿಲ್ ಅಧ್ಯಕ್ಷತೆಯಲ್ಲಿ, ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣೆಗಳ ಮೇಲೆ ವಿಶೇಷ ಒತ್ತು ನೀಡಲಾಗಿದೆ. ಇದನ್ನು ನಾವು  ಸ್ವಾಗತಿಸುತ್ತೇವೆ.

ಬ್ರಿಕ್ಸ್ ಹೊಸ ಅಭಿವೃದ್ಧಿ ಬ್ಯಾಂಕಿನ (ಬ್ರಿಕ್ಸ್ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್) ರೂಪದಲ್ಲಿ, ಜಾಗತಿಕ ದಕ್ಷಿಣದ ದೇಶಗಳ ಅಭಿವೃದ್ಧಿ ಆಕಾಂಕ್ಷೆಗಳನ್ನು ಬೆಂಬಲಿಸಲು ನಾವು ಬಲವಾದ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ನೀಡಿದ್ದೇವೆ. ಯೋಜನೆಗಳನ್ನು ಅನುಮೋದಿಸುವಾಗ, ಬೇಡಿಕೆ ಆಧಾರಿತ   ವಿಧಾನಗಳು, ದೀರ್ಘಕಾಲೀನ ಆರ್ಥಿಕ ಸುಸ್ಥಿರತೆ ಮತ್ತು ಆರೋಗ್ಯಕರ ಕ್ರೆಡಿಟ್ ರೇಟಿಂಗ್ ನ ಮೇಲೆ ಎನ್.ಡಿ.ಬಿ ಗಮನ ಹರಿಸಬೇಕು. ನಮ್ಮ ಆಂತರಿಕ ವ್ಯವಸ್ಥೆಗಳನ್ನು ಬಲಪಡಿಸುವುದು ಸುಧಾರಿತ ಬಹುಪಕ್ಷೀಯತೆಗಾಗಿ ನಮ್ಮ ಕರೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಎರಡನೆಯದಾಗಿ, ಇಂದು ಜಾಗತಿಕ ದಕ್ಷಿಣದ ದೇಶಗಳು ಬ್ರಿಕ್ಸ್ ನಿಂದ ಕೆಲವು ವಿಶೇಷ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿವೆ. ಅವುಗಳನ್ನು ಪೂರೈಸಲು ನಾವು ಒಟ್ಟಾಗಿ ಕೆಲಸ ಮಾಡಬಹುದು. ಉದಾಹರಣೆಗೆ, ಭಾರತದಲ್ಲಿ ಸ್ಥಾಪಿಸಲಾದ ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆಯು ಕೃಷಿ ಸಂಶೋಧನೆಯಲ್ಲಿ ಸಹಯೋಗವನ್ನು ಹೆಚ್ಚಿಸಲು ಒಂದು ಅಮೂಲ್ಯವಾದ ಉಪಕ್ರಮವಾಗಿದೆ. ಕೃಷಿ-ಜೈವಿಕ ತಂತ್ರಜ್ಞಾನ, ನಿಖರ ಕೃಷಿ ಮತ್ತು ಹವಾಮಾನ ಬದಲಾವಣೆಯ ರೂಪಾಂತರದಂತಹ ವಿಷಯಗಳಲ್ಲಿ ಸಂಶೋಧನೆ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಇದು ಮಾಧ್ಯಮವಾಗಬಹುದು. ಜಾಗತಿಕ ದಕ್ಷಿಣದ ದೇಶಗಳಿಗೂ ನಾವು ಅದರ ಪ್ರಯೋಜನಗಳನ್ನು ವಿಸ್ತರಿಸಬಹುದು.

ಅದೇ ರೀತಿ, ಭಾರತವು ಶೈಕ್ಷಣಿಕ ಪತ್ರಿಕೆಗಳಿಗೆ ರಾಷ್ಟ್ರವ್ಯಾಪಿ ಲಭ್ಯವಾಗುವುದನ್ನು   ಖಚಿತಪಡಿಸಿಕೊಳ್ಳಲು 'ಒಂದು ರಾಷ್ಟ್ರ, ಒಂದು ಚಂದಾದಾರಿಕೆ' ಉಪಕ್ರಮವನ್ನು ಪ್ರಾರಂಭಿಸಿದೆ. ಇತರ ಬ್ರಿಕ್ಸ್ ದೇಶಗಳಲ್ಲಿಯೂ ಇದೇ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಜಾಗತಿಕ ದಕ್ಷಿಣದ ದೇಶಗಳಿಗೆ ಅಮೂಲ್ಯವಾದ ಸಂಪನ್ಮೂಲವಾಗಿಯೂ ಕಾರ್ಯನಿರ್ವಹಿಸಬಹುದಾದ ಬ್ರಿಕ್ಸ್ ವಿಜ್ಞಾನ ಮತ್ತು ಸಂಶೋಧನಾ ಭಂಡಾರದ ರಚನೆಯನ್ನು ನಾವು ಸಾಮೂಹಿಕವಾಗಿ ಅನ್ವೇಷಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ.

ಮೂರನೆಯದಾಗಿ, ಬಹು ಮುಖ್ಯವಾದ  ಖನಿಜಗಳು ಮತ್ತು ತಂತ್ರಜ್ಞಾನಕ್ಕಾಗಿ ಪೂರೈಕೆ ಸರಪಳಿಗಳನ್ನು ಸುರಕ್ಷಿತವಾಗಿಸಲು  ಮತ್ತು ವಿಶ್ವಾಸಾರ್ಹವಾಗಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಯಾವುದೇ ದೇಶವು ಈ ಸಂಪನ್ಮೂಲಗಳನ್ನು ತನ್ನ ಸ್ವಾರ್ಥ ಲಾಭಕ್ಕಾಗಿ ಅಥವಾ ಇತರರ ವಿರುದ್ಧ ಆಯುಧವನ್ನಾಗಿ ಬಳಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

ನಾಲ್ಕನೆಯದಾಗಿ, 21ನೇ ಶತಮಾನದಲ್ಲಿ, ಜನರ ಪ್ರಗತಿ ಮತ್ತು ಯೋಗಕ್ಷೇಮವು ಹೆಚ್ಚಾಗಿ ತಂತ್ರಜ್ಞಾನವನ್ನು, ವಿಶೇಷವಾಗಿ ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸಿರುತ್ತದೆ. ಒಂದೆಡೆ, ಎಐ  ದೈನಂದಿನ ಜೀವನವನ್ನು ಹೆಚ್ಚು ಸುಧಾರಿಸಬಹುದು; ಮತ್ತೊಂದೆಡೆ, ಇದು ಅಪಾಯಗಳು, ನೀತಿಶಾಸ್ತ್ರ ಮತ್ತು ಪಕ್ಷಪಾತದ ಬಗ್ಗೆ ಕಳವಳಗಳನ್ನು ಹುಟ್ಟುಹಾಕುತ್ತದೆ. ಈ ವಿಷಯದ ಬಗ್ಗೆ ಭಾರತದ ವಿಧಾನ ಮತ್ತು ನೀತಿ ಸ್ಪಷ್ಟವಾಗಿದೆ: ನಾವು ಎ ಐ ಅನ್ನು ಮಾನವ ಮೌಲ್ಯಗಳು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಮಾಧ್ಯಮವಾಗಿ ನೋಡುತ್ತೇವೆ. "ಎಲ್ಲರಿಗೂ ಎ.ಐ." ಎಂಬ ಮಂತ್ರದ ಮೇಲೆ ಕೆಲಸ ಮಾಡುತ್ತಾ, ಇಂದು ನಾವು ಭಾರತದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತದಂತಹ ಕ್ಷೇತ್ರಗಳಲ್ಲಿ ಎ ಐ  ಅನ್ನು ವ್ಯಾಪಕವಾಗಿ ಮತ್ತು ಸಕ್ರಿಯವಾಗಿ ಬಳಸುತ್ತಿದ್ದೇವೆ.

ಎ ಐ ಆಡಳಿತದಲ್ಲಿ ಸಮಸ್ಯೆಗಳನ್ನು  ಪರಿಹರಿಸುವುದು ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವುದಕ್ಕೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ನಾವು ನಂಬುತ್ತೇವೆ. ಜವಾಬ್ದಾರಿಯುತ ಎಐ  ಗಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ಡಿಜಿಟಲ್ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದಾದ ಜಾಗತಿಕ ಮಾನದಂಡಗಳನ್ನು ರಚಿಸಬೇಕು, ಇದರಿಂದ ನಾವು ವಿಷಯದ ಮೂಲವನ್ನು ಗುರುತಿಸಬಹುದು ಹಾಗು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ದುರುಪಯೋಗವನ್ನು ತಡೆಯಬಹುದು.

ಇಂದಿನ ಸಭೆಯಲ್ಲಿ ಬಿಡುಗಡೆಯಾಗುತ್ತಿರುವ "ಎಐ  ನ ಜಾಗತಿಕ ಆಡಳಿತದ ಕುರಿತು ನಾಯಕರ ಹೇಳಿಕೆ" ಈ ದಿಕ್ಕಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ. ಎಲ್ಲಾ ದೇಶಗಳ ನಡುವಿನ ಸುಧಾರಿತ ಸಹಕಾರಕ್ಕಾಗಿ, ನಾವು ಮುಂದಿನ ವರ್ಷ ಭಾರತದಲ್ಲಿ "ಎಐ ಪ್ರಭಾವದ ಬಗ್ಗೆ ಶೃಂಗಸಭೆ"ಯನ್ನು ("AI Impact Summit”) ಆಯೋಜಿಸುತ್ತೇವೆ. ಈ ಶೃಂಗಸಭೆಯನ್ನು ಅತ್ಯಂತ ಯಶಸ್ವಿಗೊಳಿಸಲು ನೀವೆಲ್ಲರೂ ಸಕ್ರಿಯವಾಗಿ ಕೊಡುಗೆ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ.
ಸ್ನೇಹಿತರೇ,

ಜಾಗತಿಕ ದಕ್ಷಿಣವು ನಮ್ಮಿಂದ ಅನೇಕ ನಿರೀಕ್ಷೆಗಳನ್ನು ಹೊಂದಿದೆ. ಅವುಗಳನ್ನು ಪೂರೈಸಲು, ನಾವು "ಉದಾಹರಣೆಯಿಂದ ಮುನ್ನಡೆಸುವ" ತತ್ವವನ್ನು ಅನುಸರಿಸಬೇಕು. ನಮ್ಮ ಸಾಮಾನ್ಯ ಗುರಿಗಳನ್ನು ಸಾಧಿಸಲು ನಮ್ಮ ಎಲ್ಲಾ ಪಾಲುದಾರರೊಂದಿಗೆ ಜೊತೆಯಾಗಿ ನಿಂತು ಕೆಲಸ ಮಾಡಲು ಭಾರತವು ಸಂಪೂರ್ಣವಾಗಿ ಬದ್ಧವಾಗಿದೆ.

ತುಂಬಾ ಧನ್ಯವಾದಗಳು.

ಸೂಚನೆ - ಇದು ಪ್ರಧಾನಮಂತ್ರಿಯವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****
 


(Release ID: 2143041)