ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯಕ್ಕೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿಯ ಕುರಿತು ಜಂಟಿ ಹೇಳಿಕೆ

Posted On: 05 JUL 2025 9:02AM by PIB Bengaluru

ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯದ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರ ಆಹ್ವಾನದ ಮೇರೆಗೆ, ಜುಲೈ 3 ರಿಂದ 4, 2025 ರವರೆಗೆ ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಿದರು.

ಕಳೆದ 26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಕೈಗೊಂಡ ಮೊಟ್ಟಮೊದಲ ದ್ವಿಪಕ್ಷೀಯ ಭೇಟಿ ಇದಾಗಿದ್ದು, ಈ ಪ್ರವಾಸವು ಐತಿಹಾಸಿಕ ಮಹತ್ವವನ್ನು ಪಡೆದಿತ್ತು. 1845ರಲ್ಲಿ ಭಾರತೀಯ ವಲಸಿಗರು ಟ್ರಿನಿಡಾಡ್ ಮತ್ತು ಟೊಬಾಗೋ ನಾಡಿಗೆ ಕಾಲಿಟ್ಟ 180ನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಈ ಭೇಟಿ ನಡೆದಿದ್ದು ಮತ್ತೊಂದು ವಿಶೇಷವಾಗಿತ್ತು. ಎರಡೂ ದೇಶಗಳ ಚಿರಕಾಲದ ಸ್ನೇಹಕ್ಕೆ ಅಡಿಪಾಯವಾಗಿರುವ ಗಟ್ಟಿಯಾದ ನಾಗರಿಕತೆಯ ಬಾಂಧವ್ಯ, ಜನರ ನಡುವಿನ ಉತ್ಸಾಹಭರಿತ ಸಂಪರ್ಕ ಮತ್ತು ಸಮಾನವಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಈ ಭೇಟಿಯು ಪುನರ್ ದೃಢೀಕರಿಸಿತು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನಃಪೂರ್ವಕವಾಗಿ ಅಭಿನಂದಿಸಿದರು. ಅಲ್ಲದೆ, ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವಲ್ಲಿ ಶ್ರೀಮತಿ ಬಿಸೆಸ್ಸಾರ್ ಅವರ ಗಣನೀಯ ಕೊಡುಗೆಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಭಾರತದೊಳಗೆ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಸಾಧಾರಣ ನಾಯಕತ್ವವನ್ನು ಗುರುತಿಸಿ, ಅವರಿಗೆ ಟ್ರಿನಿಡಾಡ್ ಮತ್ತು ಟೊಬಾಗೋದ ಅತ್ಯುನ್ನತ ರಾಷ್ಟ್ರೀಯ ಗೌರವವಾದ ‘ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಅಂಡ್ ಟೊಬಾಗೋ’ (Order of the Republic of Trinidad and Tobago) ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಇಬ್ಬರು ಪ್ರಧಾನಮಂತ್ರಿಗಳು ಪರಸ್ಪರ ಹಿತಾಸಕ್ತಿಯುಳ್ಳ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಲಯದ ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿದರು. ಉಭಯ ನಾಯಕರೂ ತಮ್ಮ ಸಂಬಂಧದ ಆಳ ಮತ್ತು ವಿಸ್ತಾರಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಹಾಗೆಯೇ, ಆರೋಗ್ಯ, ಐಸಿಟಿ (ICT), ಸಂಸ್ಕೃತಿ, ಕ್ರೀಡೆ, ವ್ಯಾಪಾರ, ಆರ್ಥಿಕ ಅಭಿವೃದ್ಧಿ, ಕೃಷಿ, ನ್ಯಾಯ, ಕಾನೂನು ವ್ಯವಹಾರಗಳು, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ವಿಸ್ತಾರವಾದ, ಎಲ್ಲರನ್ನೂ ಒಳಗೊಂಡ ಮತ್ತು ದೂರದೃಷ್ಟಿಯುಳ್ಳ ಸಹಭಾಗಿತ್ವವನ್ನು ನಿರ್ಮಿಸುವ ತಮ್ಮ ಸಂಕಲ್ಪವನ್ನು ಪುನರ್ ದೃಢೀಕರಿಸಿದರು.

ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆಯಿಂದ ಎದುರಾಗುವ ಸಮಾನ ಅಪಾಯವನ್ನು ಉಭಯ ನಾಯಕರೂ ಒಪ್ಪಿಕೊಂಡರು. ಅವರು ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದರು ಮತ್ತು ಅದರ ವಿರುದ್ಧ ತಮ್ಮ ದೃಢವಾದ ವಿರೋಧವನ್ನು ಪುನರುಚ್ಚರಿಸಿದರು. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ, ಯಾವುದೇ ರೀತಿಯ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ಘೋಷಿಸಿದರು.

ಔಷಧ, ಅಭಿವೃದ್ಧಿ ಸಹಕಾರ, ಶೈಕ್ಷಣಿಕ ವಲಯ, ಸಾಂಸ್ಕೃತಿಕ ವಿನಿಮಯ, ರಾಜತಾಂತ್ರಿಕ ತರಬೇತಿ ಮತ್ತು ಕ್ರೀಡೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ಮತ್ತು ತಿಳುವಳಿಕಾ ಒಡಂಬಡಿಕೆಗಳಿಗೆ (MoUs) ಸಹಿ ಹಾಕಿದ್ದನ್ನು ಉಭಯ ನಾಯಕರೂ ಸ್ವಾಗತಿಸಿದರು. ನವೆಂಬರ್ 2024ರಲ್ಲಿ ನಡೆದ 2ನೇ ಭಾರತ-ಕ್ಯಾರಿಕಾಮ್ (India–CARICOM) ಶೃಂಗಸಭೆಯ ಫಲಿತಾಂಶಗಳನ್ನು ಉಭಯ ನಾಯಕರು ಸ್ಮರಿಸಿದರು ಮತ್ತು ಅದರಲ್ಲಿ ಘೋಷಿಸಲಾದ ಉಪಕ್ರಮಗಳ ಅನುಷ್ಠಾನವನ್ನು ತ್ವರಿತಗೊಳಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಎರಡೂ ದೇಶಗಳು ಡಿಜಿಟಲ್ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸಲು ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿದವು. ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾದ 'ಏಕೀಕೃತ ಪಾವತಿ ಇಂಟರ್ಫೇಸ್' (ಯುಪಿಐ) ಅನ್ನು ಅಳವಡಿಸಿಕೊಂಡ ಮೊದಲ ಕೆರಿಬಿಯನ್ ರಾಷ್ಟ್ರವಾದದ್ದಕ್ಕೆ ಪ್ರಧಾನಿ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋವನ್ನು ಅಭಿನಂದಿಸಿದರು. ಡಿಜಿಲಾಕರ್ (DigiLocker), ಇ-ಸೈನ್ (e−Sign), ಮತ್ತು ಸರ್ಕಾರಿ ಇ-ಮಾರುಕಟ್ಟೆ (GeM) ಸೇರಿದಂತೆ 'ಇಂಡಿಯಾ ಸ್ಟ್ಯಾಕ್' (India Stack) ಪರಿಹಾರಗಳ ಅನುಷ್ಠಾನದಲ್ಲಿ ಮತ್ತಷ್ಟು ಸಹಯೋಗವನ್ನು ಅನ್ವೇಷಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಸರ್ಕಾರಿ ಭೂಮಿ ನೋಂದಣಿ ವ್ಯವಸ್ಥೆಯ ಡಿಜಿಟಲೀಕರಣ ಮತ್ತು ಉನ್ನತೀಕರಣದಲ್ಲಿ ಭಾರತದ ಬೆಂಬಲವನ್ನು ಟ್ರಿನಿಡಾಡ್ ಮತ್ತು ಟೊಬಾಗೋ ಕೋರಿತು. ಡಿಜಿಟಲ್ ಆಡಳಿತ ಮತ್ತು ಸಾರ್ವಜನಿಕ ಸೇವಾ ವಿತರಣೆಯು, ಸಮಗ್ರ ಅಭಿವೃದ್ಧಿ, ನಾವೀನ್ಯತೆ ಮತ್ತು ರಾಷ್ಟ್ರೀಯ ಸ್ಪರ್ಧಾತ್ಮಕತೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬಲ್ಲವು ಎಂದು ಉಭಯ ನಾಯಕರೂ ಒತ್ತಿ ಹೇಳಿದರು.

ಶಿಕ್ಷಣವನ್ನು ಡಿಜಿಟಲೀಕರಣಗೊಳಿಸುವ ಪ್ರಧಾನಮಂತ್ರಿ ಪರ್ಸಾದ್-ಬಿಸೆಸ್ಸಾರ್ ಅವರ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಪ್ರಧಾನಮಂತ್ರಿ ಮೋದಿ ಅವರು ಶ್ಲಾಘಿಸಿದರು. ಹಾಗೆಯೇ, ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವನ್ನು ಬೆಂಬಲಿಸಲು 2000 ಲ್ಯಾಪ್‌ ಟಾಪ್‌ ಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದರು. ಭಾರತ ಸರ್ಕಾರವು ನೀಡುವ ವಿವಿಧ ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಅಡಿಯಲ್ಲಿ, ಭಾರತದಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ಅನ್ವೇಷಿಸುವಂತೆ ಪ್ರಧಾನಮಂತ್ರಿ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

ಕೃಷಿ ಮತ್ತು ಆಹಾರ ಭದ್ರತೆಯನ್ನು ಮತ್ತೊಂದು ಆದ್ಯತಾ ಕ್ಷೇತ್ರವೆಂದು ಉಭಯ ನಾಯಕರೂ ಗುರುತಿಸಿದರು. ಆಹಾರ ಸಂಸ್ಕರಣೆ ಮತ್ತು ಸಂಗ್ರಹಣೆಗಾಗಿ, ಭಾರತವು 1 ದಶಲಕ್ಷ ಯುಎಸ್ ಡಾಲರ್ ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಟ್ರಿನಿಡಾಡ್ ಮತ್ತು ಟೊಬಾಗೋದ 'ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮತ್ತು ಅಭಿವೃದ್ಧಿ ನಿಗಮ'ಕ್ಕೆ (NAMDEVCO) ಉಡುಗೊರೆಯಾಗಿ ನೀಡಿದ್ದನ್ನು ಶ್ಲಾಘಿಸಲಾಯಿತು. ಒಂದು ಸಾಂಕೇತಿಕ ಸಮಾರಂಭದಲ್ಲಿ, ಪ್ರಧಾನಮಂತ್ರಿ ಮೋದಿ ಅವರು NAMDEVCO ಗಾಗಿ ಮೊದಲ ಹಂತದ ಯಂತ್ರೋಪಕರಣಗಳನ್ನು ಹಸ್ತಾಂತರಿಸಿದರು. ಅಲ್ಲದೆ, ನೈಸರ್ಗಿಕ ಕೃಷಿ, ಸಮುದ್ರ-ಪಾಚಿ ಆಧಾರಿತ ರಸಗೊಬ್ಬರಗಳು ಮತ್ತು ಸಿರಿಧಾನ್ಯಗಳ ಕೃಷಿಯಂತಹ ಕ್ಷೇತ್ರಗಳಲ್ಲಿ ಭಾರತದ ನೆರವನ್ನು ನೀಡುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದರು.

ಆರೋಗ್ಯ ಕ್ಷೇತ್ರದ ಕುರಿತು, 'ಇಂಡಿಯನ್ ಫಾರ್ಮಕೋಪಿಯಾ'ವನ್ನು (Indian Pharmacopoeia) ಮಾನ್ಯ ಮಾಡಿದ ಟ್ರಿನಿಡಾಡ್ ಮತ್ತು ಟೊಬಾಗೋ ಸರ್ಕಾರದ ಕ್ರಮವನ್ನು ಪ್ರಧಾನಮಂತ್ರಿ ಮೋದಿ ಅವರು ಶ್ಲಾಘಿಸಿದರು. ಈ ಕ್ರಮವು, ಔಷಧ ವಲಯದಲ್ಲಿ ನಿಕಟ ಸಹಕಾರವನ್ನು ಖಚಿತಪಡಿಸುವುದರ ಜೊತೆಗೆ, ಭಾರತದ ಉತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಜೆನೆರಿಕ್ ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಯು ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಮುಂಬರುವ ತಿಂಗಳುಗಳಲ್ಲಿ, ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ 800 ವ್ಯಕ್ತಿಗಳಿಗಾಗಿ ಕೃತಕ ಕಾಲು ಜೋಡಣಾ ಶಿಬಿರವನ್ನು ಆಯೋಜಿಸಲಾಗುವುದು ಎಂದೂ ಸಹ ಅವರು ಘೋಷಿಸಿದರು. ಆರೋಗ್ಯ ಸಹಕಾರವನ್ನು ಕೇವಲ ಔಷಧಿ ಮತ್ತು ಉಪಕರಣಗಳಾಚೆಗೆ ಕೊಂಡೊಯ್ಯುವ ಈ ನೆರವಿಗಾಗಿ ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನೆರವಾಗುವಂತೆ ಭಾರತ ಸರ್ಕಾರವು ನೀಡಿದ ಇಪ್ಪತ್ತು (20) ಹಿಮೋಡಯಾಲಿಸಿಸ್ ಘಟಕಗಳು (Haemodialysis Units) ಮತ್ತು ಎರಡು (2) ಸಾಗರ ಆಂಬ್ಯುಲೆನ್ಸ್‌ ಗಳ (Sea ambulances) ದೇಣಿಗೆಗಾಗಿ ಅವರು ಟ್ರಿನಿಡಾಡ್‌ ಮತ್ತು ಟೊಬಾಗೋದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಅಭಿವೃದ್ಧಿ ಸಹಕಾರದ ಮೌಲ್ಯವನ್ನು ಟ್ರಿನಿಡಾಡ್ ಮತ್ತು ಟೊಬಾಗೋ ಒತ್ತಿಹೇಳಿತು. ಭಾರತದ ನೆರವಿನೊಂದಿಗೆ, ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವು ಮಾಡಿಕೊಡುವ 'ಕ್ಷಿಪ್ರ ಪರಿಣಾಮದ ಯೋಜನೆಗಳ' (Quick Impact Projects) ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ್ದನ್ನು ಅದು ಸ್ವಾಗತಿಸಿತು.

ಕೋವಿಡ್-19 ಸಾಂಕ್ರಾಮಿಕದ ಕಠಿಣ ಕಾಲದಲ್ಲಿ ಅಮೂಲ್ಯವಾದ ಮಾನವ ಜೀವಗಳನ್ನು ಉಳಿಸುವಲ್ಲಿ ಭಾರತ ವಹಿಸಿದ ನಾಯಕತ್ವದ ಪಾತ್ರವನ್ನು ಪ್ರಧಾನಮಂತ್ರಿ ಪರ್ಸಾದ್-ಬಿಸೆಸ್ಸಾರ್ ಅವರು ಶ್ಲಾಘಿಸಿದರು. ಭಾರತದ ತ್ವರಿತ ಸ್ಪಂದನೆ ಮತ್ತು ಟ್ರನಿಡಾಡ್ ಮತ್ತು ಟೊಬಾಗೋಗೆ ಕೋವಿಡ್ ಲಸಿಕೆ ಹಾಗೂ ವೈದ್ಯಕೀಯ ಉಪಕರಣಗಳ ಅಮೂಲ್ಯ ಪೂರೈಕೆಯನ್ನು ಅವರು ಮೆಚ್ಚುಗೆಯಿಂದ ಸ್ಮರಿಸಿದರು. 1 ದಶಲಕ್ಷ ಯುಎಸ್ ಡಾಲರ್ ಮೌಲ್ಯದ 'ಕೋವಿಡ್-19 ಯೋಜನೆಯಲ್ಲಿ ಹಾಲ್ಟ್' (HALT – High and Low Technology) ಯೋಜನೆಯಡಿ ಭಾರತ ನೀಡಿದ ಬೆಂಬಲವನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. ಈ ಯೋಜನೆಯಡಿ ಮೊಬೈಲ್ ಆರೋಗ್ಯ ರೋಬೋಟ್‌ ಗಳು, ಟೆಲಿಮೆಡಿಸಿನ್ ಕಿಟ್‌ ಗಳು ಮತ್ತು ಕೈ ಸ್ವಚ್ಛತಾ ಕೇಂದ್ರಗಳನ್ನು ಪೂರೈಸಲಾಗಿತ್ತು.

‘ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ’ (CDRI) ಮತ್ತು ‘ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ’ಕ್ಕೆ (Global Biofuel Alliance) ಸೇರುವ ಟ್ರಿನಿಡಾಡ್ ಮತ್ತು ಟೊಬಾಗೋದ ನಿರ್ಧಾರವನ್ನು ಪ್ರಧಾನಮಂತ್ರಿ ಮೋದಿ ಅವರು ಸ್ವಾಗತಿಸಿದರು. ಈ ನಿರ್ಧಾರವು, ಹವಾಮಾನ ಕ್ರಮ, ಸ್ಥಿತಿಸ್ಥಾಪಕತ್ವ ನಿರ್ಮಾಣ, ಮತ್ತು ಸುಸ್ಥಿರ ಅಭಿವೃದ್ಧಿಯೆಡೆಗಿನ ಉಭಯ ದೇಶಗಳ ಸಮಾನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಭಾರತವು ಅಭಿವೃದ್ಧಿಪಡಿಸಿದ ಮುನ್ನೆಚ್ಚರಿಕಾ ವ್ಯವಸ್ಥೆಗಳ ಕ್ಷೇತ್ರದಲ್ಲಿ ಮತ್ತಷ್ಟು ಸಹಯೋಗವನ್ನು ಅನ್ವೇಷಿಸಲು ಉಭಯ ನಾಯಕರೂ ಒಪ್ಪಿಕೊಂಡರು. ವಿದೇಶಾಂಗ ಮತ್ತು ಕ್ಯಾರಿಕಾಮ್ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಚೇರಿಯ ಛಾವಣಿಯ ಮೇಲೆ ದ್ಯುತಿವಿದ್ಯುಜ್ಜನಕ (photovoltaic − PV) ವ್ಯವಸ್ಥೆಯನ್ನು ಅಳವಡಿಸಲು ಭಾರತ ನೀಡಿದ ಅನುದಾನದ ಕೊಡುಗೆಯನ್ನು ಟ್ರಿನಿಡಾಡ್ ಮತ್ತು ಟೊಬಾಗೋ ಸರ್ಕಾರವು ಶ್ಲಾಘಿಸಿತು.

ಜಾಗರೂಕ ಬಳಕೆ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯುಳ್ಳ ‘ಮಿಷನ್ ಲೈಫ್’ (Mission LiFE) ಉಪಕ್ರಮವನ್ನು ಪ್ರಧಾನಮಂತ್ರಿ ಪರ್ಸಾದ್-ಬಿಸೆಸ್ಸಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಾಗತಿಕ ನಾಗರಿಕರನ್ನು ಹವಾಮಾನ-ಜಾಗೃತ ನಡವಳಿಕೆಯೆಡೆಗೆ ಸಜ್ಜುಗೊಳಿಸುವಲ್ಲಿ ಈ ಉಪಕ್ರಮದ ಪ್ರಸ್ತುತತೆಯನ್ನು ಅವರು ಶ್ಲಾಘಿಸಿದರು.

ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ನಡುವಿನ ಸಹಭಾಗಿತ್ವದಲ್ಲಿ, ಸಾಮರ್ಥ್ಯ ವೃದ್ಧಿಯನ್ನು  ಒಂದು ಪ್ರಮುಖ ಆಧಾರಸ್ತಂಭವೆಂದು ಗುರುತಿಸಲಾಯಿತು. ತಮ್ಮ ಯುವಜನರ ಸಾಮರ್ಥ್ಯ ವೃದ್ಧಿಗಾಗಿ, ಭಾರತವು ವಾರ್ಷಿಕವಾಗಿ ವಿವಿಧ ಕ್ಷೇತ್ರಗಳಲ್ಲಿ 85 ಐಟೆಕ್ (ITEC) ಸ್ಥಾನಗಳನ್ನು ನೀಡುತ್ತಿರುವುದನ್ನು ಟ್ರಿನಿಡಾಡ್ ಮತ್ತು ಟೊಬಾಗೋ ನಿಯೋಗವು ಶ್ಲಾಘಿಸಿತು. ಅಲ್ಲಿನ ಅಧಿಕಾರಿಗಳಿಗೆ ಬೃಹತ್ ಪ್ರಮಾಣದಲ್ಲಿ ತರಬೇತಿ ನೀಡಲು, ಭಾರತದಿಂದ ತಜ್ಞರು ಮತ್ತು ತರಬೇತುದಾರರನ್ನು ಕಳುಹಿಸಲು ಭಾರತೀಯ ನಿಯೋಗವು ಸಿದ್ಧತೆಯನ್ನು ವ್ಯಕ್ತಪಡಿಸಿತು.

ವಿಧಿವಿಜ್ಞಾನ (forensic science) ಮತ್ತು ನ್ಯಾಯಾಂಗ ವ್ಯವಸ್ಥೆಯ ಕ್ಷೇತ್ರದಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೋದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗೆ ಬೆಂಬಲ ನೀಡಲು ಪ್ರಧಾನಮಂತ್ರಿ ಮೋದಿ ಅವರು ಸಿದ್ಧತೆಯನ್ನು ವ್ಯಕ್ತಪಡಿಸಿದರು. ತರಬೇತಿಗಾಗಿ ಅವರನ್ನು ಭಾರತಕ್ಕೆ ಕಳುಹಿಸುವುದು ಮತ್ತು ಭಾರತದಿಂದ ತಜ್ಞರನ್ನು ಅಲ್ಲಿಗೆ ಕಳುಹಿಸುವ ಮೂಲಕ ಈ ಸಹಕಾರ ನೀಡಲಾಗುವುದು.

ಎರಡೂ ದೇಶಗಳ ವ್ಯಾಪಾರ ಬೆಂಬಲ ಸಂಸ್ಥೆಗಳ ನಡುವೆ ನೇರ ಸಂಪರ್ಕವನ್ನು ಪ್ರೋತ್ಸಾಹಿಸುವ ಮೂಲಕ, ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ವಿನಿಮಯವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವನ್ನು ಉಭಯ ನಾಯಕರೂ ಒತ್ತಿ ಹೇಳಿದರು.

ಎರಡೂ ದೇಶಗಳ ನಡುವಿನ ಬಲವಾದ ಕ್ರೀಡಾ ಬಾಂಧವ್ಯವನ್ನು, ವಿಶೇಷವಾಗಿ ಕ್ರಿಕೆಟ್ ಮೇಲಿನ ಸಮಾನ ಒಲವನ್ನು ಉಭಯ ನಾಯಕರೂ ಶ್ಲಾಘಿಸಿದರು. ತರಬೇತಿ, ಪ್ರತಿಭೆಗಳ ವಿನಿಮಯ, ಮೂಲಸೌಕರ್ಯ ಅಭಿವೃದ್ಧಿ, ಮತ್ತು ಜಂಟಿ ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸುವ 'ಕ್ರೀಡಾ ಸಹಕಾರ' ಕುರಿತ ತಿಳುವಳಿಕಾ ಒಡಂಬಡಿಕೆಗೆ (MoU) ಸಹಿ ಹಾಕಿದ್ದನ್ನು ಉಭಯ ನಾಯಕರೂ ಸ್ವಾಗತಿಸಿದರು. ಟ್ರಿನಿಡಾಡ್ ಮತ್ತು ಟೊಬಾಗೋದ ಭರವಸೆಯ ಯುವ ಮಹಿಳಾ ಕ್ರಿಕೆಟಿಗರಿಗೆ ಭಾರತದಲ್ಲಿ ತರಬೇತಿ ನೀಡುವ ತಮ್ಮ ಪ್ರಸ್ತಾಪವನ್ನು ಪ್ರಧಾನಮಂತ್ರಿ ಮೋದಿ ಅವರು ಪುನರುಚ್ಚರಿಸಿದರು.

ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ ನಡೆಯೊಂದರಲ್ಲಿ, ಟ್ರಿನಿಡಾಡ್ ಮತ್ತು ಟೊಬಾಗೋದ ಪಂಡಿತರ ತಂಡವೊಂದಕ್ಕೆ ಭಾರತದಲ್ಲಿ ತರಬೇತಿ ನೀಡುವುದಾಗಿ ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದರು. ಈ ಪಂಡಿತರು ಭಾರತದಲ್ಲಿ ನಡೆಯುವ ‘ಗೀತಾ ಮಹೋತ್ಸವ’ದಲ್ಲಿಯೂ ಭಾಗವಹಿಸಲಿದ್ದಾರೆ. ಈ ಕ್ರಮಕ್ಕಾಗಿ ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ, ಭಾರತದಲ್ಲಿನ ಆಚರಣೆಗಳ ಜೊತೆಜೊತೆಗೆ, ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿಯೂ ಜಂಟಿಯಾಗಿ 'ಗೀತಾ ಮಹೋತ್ಸವ'ವನ್ನು ಆಚರಿಸುವ ಭಾರತದ ಪ್ರಸ್ತಾಪವನ್ನು ಅವರು ಉತ್ಸಾಹದಿಂದ ಬೆಂಬಲಿಸಿದರು.

ಸಾಂಸ್ಕೃತಿಕ ಸಹಕಾರದ ಕುರಿತು, ದ್ವಿಪಕ್ಷೀಯ 'ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ'ದ (Programme of Cultural Exchanges) ಪ್ರಗತಿಪರ ಪಾತ್ರವನ್ನು ಉಭಯ ನಾಯಕರೂ ಗುರುತಿಸಿದರು. ಇದರ ಮೂಲಕವೇ 1997ರಲ್ಲಿ 'ಮಹಾತ್ಮ ಗಾಂಧಿ ಸಾಂಸ್ಕೃತಿಕ ಸಹಕಾರ ಸಂಸ್ಥೆ'ಯನ್ನು ಸ್ಥಾಪಿಸಲಾಗಿತ್ತು. 2025-28ರ ಅವಧಿಗೆ ಈ ಕಾರ್ಯಕ್ರಮವನ್ನು ನವೀಕರಿಸಲು ತಿಳುವಳಿಕಾ ಒಡಂಬಡಿಕೆಗೆ (MoU) ಸಹಿ ಹಾಕಲಾಯಿತು. ಈ ನವೀಕೃತ ಒಡಂಬಡಿಕೆಯ ಅಡಿಯಲ್ಲಿ, ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ವೃದ್ಧಿಸಲು, ಟ್ರಿನಿಡಾಡ್ ಮತ್ತು ಟೊಬಾಗೋ ತಾಳವಾದ್ಯ (ಸ್ಟೀಲ್ ಪ್ಯಾನ್) ಮತ್ತು ಇತರ ಸಾಂಸ್ಕೃತಿಕ ಪ್ರಕಾರಗಳ ಕಲಾವಿದರನ್ನು ಭಾರತಕ್ಕೆ ಕಳುಹಿಸಲಿದೆ. ದೇಶಾದ್ಯಂತ ಯೋಗ ಮತ್ತು ಹಿಂದಿ ಭಾಷೆಯ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಭಾರತದಿಂದ ಯೋಗ ತರಬೇತುದಾರರನ್ನು ಕಳುಹಿಸಲು ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ರಾಷ್ಟ್ರೀಯ ಶಾಲಾ ಪಠ್ಯಕ್ರಮದಲ್ಲಿ ಯೋಗವನ್ನು ಸೇರಿಸಲು ಬೆಂಬಲ ನೀಡುವುದಾಗಿ ಅವರು ಪ್ರಸ್ತಾಪಿಸಿದರು.

1845ರಲ್ಲಿ ಮೊದಲ ಭಾರತೀಯ ವಲಸಿಗರು ಟ್ರಿನಿಡಾಡ್ ಮತ್ತು ಟೊಬಾಗೋಗೆ ಆಗಮಿಸಿದ 180ನೇ ವಾರ್ಷಿಕೋತ್ಸವವನ್ನು ಮೇ 30, 2025 ರಂದು ಆಚರಿಸಿದ್ದನ್ನು ಉಭಯ ಪ್ರಧಾನಮಂತ್ರಿಗಳೂ ಸ್ಮರಿಸಿದರು. ಸಾಂಸ್ಕೃತಿಕ ಪ್ರವಾಸೋದ್ಯಮದ ತಾಣವಾಗಿ ನೆಲ್ಸನ್ ದ್ವೀಪದ ಮಹತ್ವವನ್ನು ಹಾಗೂ ರಾಷ್ಟ್ರೀಯ ದಾಖಲಾತಿ ಸಂಗ್ರಹಾಲಯದಲ್ಲಿರುವ  ಭಾರತೀಯರ ಆಗಮನ ಮತ್ತು ಇತರ ದಾಖಲೆಗಳ ಡಿಜಿಟಲೀಕರಣದ ಅಗತ್ಯವನ್ನು ಅವರು ಗುರುತಿಸಿದರು. ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ಭಾರತೀಯ ವಲಸಿಗರ ಆರನೇ ತಲೆಮಾರಿನವರೆಗೂ 'ಸಾಗರೋತ್ತರ ಭಾರತೀಯ ಪೌರತ್ವ' (Overseas Citizenship of India − OCI) ಕಾರ್ಡ್‌ ಗಳನ್ನು ನೀಡುವ ಭಾರತ ಸರ್ಕಾರದ ನಿರ್ಧಾರವನ್ನು ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದರು.

ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ಎರಡೂ ದೇಶಗಳ ಪ್ರಧಾನ ಮಂತ್ರಿಗಳು ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಮತ್ತು ಭಾರತೀಯ ಅಧ್ಯಯನಗಳ ಶೈಕ್ಷಣಿಕ ವಿಭಾಗಗಳನ್ನು ಪುನರುಜ್ಜೀವನಗೊಳಿಸಿರುವುದನ್ನು ಸ್ವಾಗತಿಸಿದರು. ಇದು ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ನಡುವೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸಲು ಹಾಗೂ ಆಯುರ್ವೇದದ ಪ್ರಾಚೀನ ಜ್ಞಾನ ಮತ್ತು ಪರಂಪರೆಯನ್ನು ಪ್ರಚಾರ ಮಾಡಲು ಸಹಾಯ ಮಾಡುತ್ತದೆ.

ಎರಡೂ ದೇಶಗಳ ನಾಯಕರು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೋ ಸಂಸದೀಯ ಸ್ನೇಹ ಗುಂಪು ಪುನರಾರಂಭಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ, ಟ್ರಿನಿಡಾಡ್ ಮತ್ತು ಟೊಬಾಗೋದ ಸಂಸದರಿಗೆ ಭಾರತದಲ್ಲಿ ತರಬೇತಿ ನೀಡುವುದು ಮತ್ತು ಪರಸ್ಪರ ದೇಶಗಳಿಗೆ ಸಂಸದೀಯ ನಿಯೋಗಗಳ ನಿಯಮಿತ ಭೇಟಿಗಳ ವಿನಿಮಯಕ್ಕೆ ಒತ್ತು ನೀಡಿದರು.

ಎರಡೂ ಕಡೆಯವರು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಶಾಂತಿ, ಹವಾಮಾನ ನ್ಯಾಯ, ಸಮಗ್ರ ಅಭಿವೃದ್ಧಿ ಮತ್ತು ಗ್ಲೋಬಲ್ ಸೌತ್‌ ನ ಧ್ವನಿಯನ್ನು ಬಲಪಡಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ನೀಡಿದ ಬೆಂಬಲಕ್ಕಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ಜಾಗತಿಕ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ ಸೇರಿದಂತೆ, ವಿಶ್ವಸಂಸ್ಥೆಯಲ್ಲಿ ಸಮಗ್ರ ಸುಧಾರಣೆಗಳ ಅಗತ್ಯವನ್ನು ಉಭಯ ನಾಯಕರೂ ಪುನರ್ ದೃಢೀಕರಿಸಿದರು. ಹೆಚ್ಚುತ್ತಿರುವ ಭೌಗೋ-ರಾಜಕೀಯ ಉದ್ವಿಗ್ನತೆಗಳು ಮತ್ತು ಜಾಗತಿಕ ಸಂಘರ್ಷಗಳನ್ನು ಗುರುತಿಸುತ್ತಲೇ, ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿನ ದಾರಿ ಎಂದು ಉಭಯ ನಾಯಕರೂ ಕರೆ ನೀಡಿದರು. ವಿಸ್ತರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಟ್ರಿನಿಡಾಡ್ ಮತ್ತು ಟೊಬಾಗೋ ತನ್ನ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿತು. 2027-28ರ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವಕ್ಕಾಗಿ ಟ್ರಿನಿಡಾಡ್ ಮತ್ತು ಟೊಬಾಗೋದ ಉಮೇದುವಾರಿಕೆಯನ್ನು ಭಾರತವು ಬೆಂಬಲಿಸಲು, ಹಾಗೂ 2028-29ರ ಅವಧಿಗೆ ಭಾರತದ ಉಮೇದುವಾರಿಕೆಯನ್ನು ಟ್ರಿನಿಡಾಡ್ ಮತ್ತು ಟೊಬಾಗೋ ಬೆಂಬಲಿಸಲು ಸಹ ಒಪ್ಪಿಗೆ ಸೂಚಿಸಲಾಯಿತು.

ತಮಗೆ ನೀಡಿದ ಅಸಾಧಾರಣ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋದ ಸರ್ಕಾರ ಮತ್ತು ಜನರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅವರು ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರಿಗೆ ಆಹ್ವಾನ ನೀಡಿದರು. ಪ್ರಧಾನಿ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರು ಸಹ ಪರಸ್ಪರ ಅನುಕೂಲಕರ ಸಮಯದಲ್ಲಿ ಮತ್ತೊಮ್ಮೆ ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದರು. ಭಾರತ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಟ್ರಿನಿಡಾಡ್ ಮತ್ತು ಟೊಬಾಗೋದ ಅತ್ಯಂತ ಯಶಸ್ವಿ ಅಧಿಕೃತ ಭೇಟಿಯ ಫಲಿತಾಂಶವು, ಎರಡೂ ರಾಷ್ಟ್ರಗಳ ನಡುವೆ ಉನ್ನತ ಮಟ್ಟದ ದ್ವಿಪಕ್ಷೀಯ ಸಂಬಂಧಗಳ ಹೊಸ ಯುಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಉಭಯ ನಾಯಕರೂ ಒಪ್ಪಿಕೊಂಡರು. ಹಾಗೆಯೇ, ಬಲಿಷ್ಠ, ಎಲ್ಲರನ್ನೂ ಒಳಗೊಂಡ, ಮತ್ತು ದೂರದೃಷ್ಟಿಯುಳ್ಳ ಭಾರತ-ಟ್ರಿನಿಡಾಡ್ ಮತ್ತು ಟೊಬಾಗೋ ಸಹಭಾಗಿತ್ವಕ್ಕೆ ತಮ್ಮ ಸಮಾನ ಬದ್ಧತೆಯನ್ನು ಅವರು ಪುನರ್ ದೃಢೀಕರಿಸಿದರು.

 

*****


(Release ID: 2142503)