ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೈಪ್ರಸ್ ಮತ್ತು ಭಾರತ ನಡುವಿನ ಸಮಗ್ರ ಪಾಲುದಾರಿಕೆ ಅನುಷ್ಠಾನದ ಕುರಿತು ಜಂಟಿ ಘೋಷಣೆ

Posted On: 16 JUN 2025 3:13PM by PIB Bengaluru

ಐತಿಹಾಸಿಕ ಭೇಟಿ ಮತ್ತು ಶಾಶ್ವತ ಪಾಲುದಾರಿಕೆ

ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್  ಅವರು, 2025ರ ಜೂನ್ 15 ರಿಂದ 16 ರವರೆಗೆ ಸೈಪ್ರಸ್‌ಗೆ ಅಧಿಕೃತ ಭೇಟಿ ನೀಡಿದ ಭಾರತ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಎರಡು ದಶಕಗಳ ಬಳಿಕ, ಭಾರತದ ಪ್ರಧಾನಿಯೊಬ್ಬರು ಸೈಪ್ರಸ್‌ ಗೆ ನೀಡಿದ ಈ ಭೇಟಿಯು, ಉಭಯ ರಾಷ್ಟ್ರಗಳ ನಡುವಿನ ಗಾಢ ಮತ್ತು ಶಾಶ್ವತ ಸ್ನೇಹವನ್ನು ಪುನರುಚ್ಚರಿಸುವ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಭೇಟಿಯು, ಕೇವಲ ಸಮಾನ ಇತಿಹಾಸದ ಆಚರಣೆಯಾಗಿರದೆ, ಜಂಟಿ ವ್ಯೂಹಾತ್ಮಕ ದೃಷ್ಟಿ, ಪರಸ್ಪರ ನಂಬಿಕೆ ಮತ್ತು ಗೌರವದ ತಳಹದಿಯ ಮೇಲೆ ನಿಂತಿರುವ ಭವಿಷ್ಯದ ಪಾಲುದಾರಿಕೆಯ ಸಂಕೇತವಾಗಿದೆ.

ಉಭಯ ನಾಯಕರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆಗಳನ್ನು ನಡೆಸಿದರು. ಇದು ಸೈಪ್ರಸ್ ಮತ್ತು ಭಾರತದ ನಡುವಿನ ಸಹಕಾರದ ಹೆಚ್ಚುತ್ತಿರುವ ವ್ಯಾಪ್ತಿ ಮತ್ತು ಆಳವನ್ನು ಒತ್ತಿಹೇಳಿತು. ಸಂಬಂಧದ ಕ್ರಿಯಾಶೀಲ ಮತ್ತು ವಿಕಸನಗೊಳ್ಳುತ್ತಿರುವ ಸ್ವಭಾವವನ್ನು ಪ್ರತಿಬಿಂಬಿಸುವಂತೆ, ಆರ್ಥಿಕ, ತಾಂತ್ರಿಕ ಮತ್ತು ಜನ-ಜನರ ನಡುವಿನ ಸಂಬಂಧಗಳಲ್ಲಿನ ಇತ್ತೀಚಿನ ಪ್ರಗತಿಯನ್ನು ಅವರು ಸ್ವಾಗತಿಸಿದರು.

ತಮ್ಮ ಮೌಲ್ಯಗಳು, ಹಿತಾಸಕ್ತಿಗಳು, ಅಂತರರಾಷ್ಟ್ರೀಯ ದೃಷ್ಟಿಕೋನ ಮತ್ತು ಮುನ್ನೋಟಗಳಲ್ಲಿ ಹೆಚ್ಚುತ್ತಿರುವ ಹೊಂದಾಣಿಕೆಯನ್ನು ಗುರುತಿಸಿ, ಉಭಯ ರಾಷ್ಟ್ರಗಳು ಪ್ರಮುಖ ವಲಯಗಳಲ್ಲಿ ಈ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸುವ ತಮ್ಮ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದವು. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವ ವಿಶ್ವಾಸಾರ್ಹ ಮತ್ತು ಅನಿವಾರ್ಯ ಪಾಲುದಾರರಾಗಿ ತಮ್ಮ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ಸೈಪ್ರಸ್ ಮತ್ತು ಭಾರತ ಬದ್ಧತೆಯನ್ನು ವ್ಯಕ್ತಪಡಿಸಿದವು.

ಅವರು ಈ ಕೆಳಗಿನ ಜಂಟಿ ಘೋಷಣೆಗೆ ಒಪ್ಪಿಕೊಂಡರು:

ಹಂಚಿಕೆಯ ಮೌಲ್ಯಗಳು ಮತ್ತು ಜಾಗತಿಕ ಬದ್ಧತೆಗಳು

ಉಭಯ ನಾಯಕರು ಶಾಂತಿ, ಪ್ರಜಾಪ್ರಭುತ್ವ, ಕಾನೂನಿನ ಆಡಳಿತ, ಪರಿಣಾಮಕಾರಿ ಬಹುಪಕ್ಷೀಯತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನಲ್ಲಿ ಆಧಾರಿತವಾದ ನಿಯಮ-ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಗೆ ತಮ್ಮ ಬೆಂಬಲವನ್ನು ಅವರು ಪುನರುಚ್ಚರಿಸಿದರು, ವಿಶೇಷವಾಗಿ ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಂಪ್ರದಾಯ (UNCLOS) ದಲ್ಲಿ ಸಂಚಾರ ಸ್ವಾತಂತ್ರ್ಯ ಮತ್ತು ಸಾರ್ವಭೌಮ ಕಡಲ ಹಕ್ಕುಗಳಿಗೆ ಸಂಬಂಧಿಸಿದಂತೆ ಒತ್ತು ನೀಡಿದರು.

ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ತಮ್ಮ ಅಚಲ ಬೆಂಬಲವನ್ನು ನಾಯಕರು ಪುನರುಚ್ಚರಿಸಿದರು. ಅವರು ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತು ಉಕ್ರೇನ್ ನಲ್ಲಿನ ಯುದ್ಧ ಸೇರಿದಂತೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿದರು. ಪರಮಾಣು ಪೂರೈಕೆದಾರರ ಗುಂಪಿಗೆ ಭಾರತ ಸೇರ್ಪಡೆಗೊಳ್ಳುವುದರ ಮಹತ್ವವನ್ನು ಗುರುತಿಸುವ ಮೂಲಕ ಜಾಗತಿಕ ಪ್ರಸರಣ ತಡೆ ವ್ಯವಸ್ಥೆಯನ್ನು ಎತ್ತಿಹಿಡಿಯುವ ಮಹತ್ವದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು.

ವಿಶ್ವಸಂಸ್ಥೆ ಮತ್ತು ಕಾಮನ್‌ ವೆಲ್ತ್ ಸೇರಿದಂತೆ, ಅಂತರರಾಷ್ಟ್ರೀಯ ಸಂಸ್ಥೆಗಳೊಳಗೆ ಸಮನ್ವಯವನ್ನು ಬಲಪಡಿಸುವ ತಮ್ಮ ಉದ್ದೇಶವನ್ನು ನಾಯಕರು ವ್ಯಕ್ತಪಡಿಸಿದರು. ಸಾಗರ ಆಡಳಿತವನ್ನು ಜಾಗತಿಕ ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವದ ಆಧಾರಸ್ತಂಭವೆಂದು ಎತ್ತಿ ತೋರಿಸುವ 2024ರ 'ಆಪಿಯಾ ಕಾಮನ್‌ವೆಲ್ತ್ ಸಾಗರ ಘೋಷಣೆ'ಯನ್ನು ಅನುಷ್ಠಾನಗೊಳಿಸಲು ಅವರು ನಿಕಟವಾಗಿ ಕೆಲಸ ಮಾಡಲು ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ, 2024ರ ಏಪ್ರಿಲ್‌ನಲ್ಲಿ ಸೈಪ್ರಸ್‌ನಲ್ಲಿ ಮೊದಲ ಕಾಮನ್‌ವೆಲ್ತ್ ಸಾಗರ ಸಚಿವರ ಸಭೆ ನಡೆಯಿತು. ಈ ಸಭೆಯು, ಸುಸ್ಥಿರ ಸಾಗರ ಆಡಳಿತವನ್ನು ಮುನ್ನಡೆಸಲು ಮತ್ತು ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳಾದ್ಯಂತ ಸಾಮರ್ಥ್ಯವನ್ನು ಬಲಪಡಿಸಲು 'ಬ್ಲೂ ಚಾರ್ಟರ್ ಉತ್ಕೃಷ್ಟತಾ ಕೇಂದ್ರ'ದ ಸ್ಥಾಪನೆಗೂ ಸಾಕ್ಷಿಯಾಯಿತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಹೆಚ್ಚು ಪರಿಣಾಮಕಾರಿಯಾಗಿ, ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಹಾಗೂ ಸಮಕಾಲೀನ ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಪ್ರತಿನಿಧಿಸುವಂತೆ ಮಾಡುವ ನಿಟ್ಟಿನಲ್ಲಿ, ಅದರ ಸುಧಾರಣೆಯ ಅಗತ್ಯವನ್ನು ಕುರಿತು ಉಭಯ ನಾಯಕರು ಸಮಾಲೋಚಿಸಿದರು. ಭದ್ರತಾ ಮಂಡಳಿಯ ಸುಧಾರಣೆ ಕುರಿತ ಅಂತರ-ಸರ್ಕಾರಿ ಮಾತುಕತೆಗಳನ್ನು (IGN) ಚುರುಕುಗೊಳಿಸಲು ಮತ್ತು ಪಠ್ಯ-ಆಧಾರಿತ ಸಂವಾದದತ್ತ ಸಾಗಲು ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಇದೇ ಸಂದರ್ಭದಲ್ಲಿ, ವಿಸ್ತರಿತ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವುದರ ಮೂಲಕ, ಮಂಡಳಿಯ ಪ್ರಾತಿನಿಧ್ಯವನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಸೈಪ್ರಸ್ ತನ್ನ ಅಚಲ ಬೆಂಬಲವನ್ನು ಪುನರುಚ್ಚರಿಸಿತು.

ವಿಶ್ವಸಂಸ್ಥೆಯಲ್ಲಿ ನಿಕಟವಾಗಿ ಸಹಕರಿಸಲು ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರರ ಉಮೇದುವಾರಿಕೆಗಳನ್ನು ಅನುಮೋದಿಸುವುದು ಸೇರಿದಂತೆ, ಪರಸ್ಪರರಿಗೆ ಬೆಂಬಲವಾಗಿ ನಿಲ್ಲಲು ಉಭಯ ರಾಷ್ಟ್ರಗಳು ಸಮ್ಮತಿಸಿದವು.

ರಾಜಕೀಯ ಸಂವಾದ

ವಿವಿಧ ವಲಯಗಳಲ್ಲಿ ಸಮನ್ವಯವನ್ನು ಸುಗಮಗೊಳಿಸಲು ಮತ್ತು ಸಹಕಾರವನ್ನು ಮುನ್ನಡೆಸಲು, ಸೈಪ್ರಸ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವಿನ ಕಾರ್ಯವಿಧಾನಗಳು ಸೇರಿದಂತೆ, ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ವ್ಯವಸ್ಥೆಗಳನ್ನು ಬಳಸಿಕೊಂಡು ನಿಯಮಿತವಾಗಿ ರಾಜಕೀಯ ಸಂವಾದ ನಡೆಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡವು. ಎರಡೂ ದೇಶಗಳ ಸಕ್ಷಮ ಪ್ರಾಧಿಕಾರಗಳೊಂದಿಗೆ ನಿಕಟ ಸಮನ್ವಯದಲ್ಲಿ ಸಿದ್ಧಪಡಿಸಲಾಗುವ ಕ್ರಿಯಾ ಯೋಜನೆಯಲ್ಲಿ ಸೇರಿಸಲಾದ ಸಹಕಾರದ ಕ್ಷೇತ್ರಗಳ ಅನುಷ್ಠಾನವನ್ನು, ಮೇಲೆ ತಿಳಿಸಿದ ಸಕ್ಷಮ ಸಚಿವಾಲಯಗಳು ಮೇಲ್ವಿಚಾರಣೆ ಮತ್ತು ನಿಗಾ ವಹಿಸಲಿವೆ.

ಸಾರ್ವಭೌಮತ್ವ ಮತ್ತು ಶಾಂತಿಗಾಗಿ ಬೆಂಬಲ

ಒಪ್ಪಿತವಾದ ವಿಶ್ವಸಂಸ್ಥೆಯ ಚೌಕಟ್ಟು ಮತ್ತು ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ, ರಾಜಕೀಯ ಸಮಾನತೆಯೊಂದಿಗೆ ದ್ವಿ-ವಲಯ, ದ್ವಿ-ಸಮುದಾಯದ ಒಕ್ಕೂಟದ ಆಧಾರದ ಮೇಲೆ 'ಸೈಪ್ರಸ್ ಪ್ರಶ್ನೆ'ಗೆ ಸಮಗ್ರ ಮತ್ತು ಶಾಶ್ವತ ಪರಿಹಾರವನ್ನು ಸಾಧಿಸಲು ವಿಶ್ವಸಂಸ್ಥೆ-ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಪುನರಾರಂಭಿಸಲು ಸೈಪ್ರಸ್ ಮತ್ತು ಭಾರತ ತಮ್ಮ ದೃಢವಾದ ಬದ್ಧತೆಯನ್ನು ವ್ಯಕ್ತಪಡಿಸಿದವು.

ಸೈಪ್ರಸ್ ಗಣರಾಜ್ಯದ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಏಕತೆಗೆ ಭಾರತವು ತನ್ನ ಅಚಲ ಮತ್ತು ಸ್ಥಿರವಾದ ಬೆಂಬಲವನ್ನು ಪುನರುಚ್ಚರಿಸಿತು. ಈ ನಿಟ್ಟಿನಲ್ಲಿ, ಅರ್ಥಪೂರ್ಣ ಮಾತುಕತೆಗಳ ಪುನರಾರಂಭಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಏಕಪಕ್ಷೀಯ ಕ್ರಮಗಳನ್ನು ತೊರೆಯುವ ಅಗತ್ಯವನ್ನು ಉಭಯ ರಾಷ್ಟ್ರಗಳು ಒತ್ತಿಹೇಳಿದವು.

ಭದ್ರತೆ, ರಕ್ಷಣೆ ಮತ್ತು ಬಿಕ್ಕಟ್ಟು ಸಹಕಾರ

ಅಂತಾರಾಷ್ಟ್ರೀಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದದ ಸಕಲ ರೂಪಗಳು ಹಾಗೂ ಅಭಿವ್ಯಕ್ತಿಗಳನ್ನು ಸೈಪ್ರಸ್ ಮತ್ತು ಭಾರತ ಖಡಾಖಂಡಿತವಾಗಿ ಖಂಡಿಸಿದವು. ಶಾಂತಿ ಮತ್ತು ಸ್ಥಿರತೆಗೆ ಭಂಗ ತರುವ ಹೈಬ್ರಿಡ್ ಬೆದರಿಕೆಗಳನ್ನು ಹತ್ತಿಕ್ಕುವ ತಮ್ಮ ಜಂಟಿ ಬದ್ಧತೆಯನ್ನು ಉಭಯ ನಾಯಕರು ಪುನಃ ಪ್ರತಿಪಾದಿಸಿದರು.

ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಸೈಪ್ರಸ್ ತನ್ನ ಸಂಪೂರ್ಣ ಒಗ್ಗಟ್ಟು ಮತ್ತು ಅಚಲ ಬೆಂಬಲವನ್ನು ಘೋಷಿಸಿತು. ಇತ್ತೀಚೆಗೆ ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ‌ನಲ್ಲಿ ನಡೆದ ಹೇಯ ಭಯೋತ್ಪಾದಕ ಕೃತ್ಯದಲ್ಲಿ ನಡೆದ ನಾಗರಿಕರ ಅಮಾನುಷ ಹತ್ಯೆಯನ್ನು ಉಭಯ ನಾಯಕರು ತೀವ್ರವಾಗಿ ಖಂಡಿಸಿದರು. ಭಯೋತ್ಪಾದನೆಯ ವಿಷಯದಲ್ಲಿ ತಮ್ಮದು 'ಶೂನ್ಯ-ಸಹಿಷ್ಣುತೆ'ಯ ಧೋರಣೆ ಎಂಬುದನ್ನು ಪುನರುಚ್ಚರಿಸಿದ ಅವರು, ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಸಮರ್ಥಿಸಲಾಗದು ಎಂದು ಸ್ಪಷ್ಟಪಡಿಸಿದರು. ಈ ಕೃತ್ಯದ ರೂವಾರಿಗಳನ್ನು ನ್ಯಾಯದ ಕಟಕಟೆಗೆ ತರಲೇಬೇಕು ಎಂದು ಅವರು ಆಗ್ರಹಿಸಿದರು.

ಇತರ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವಂತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಖಂಡಿಸುವಂತೆ ಎಲ್ಲಾ ರಾಷ್ಟ್ರಗಳಿಗೆ ನಾಯಕರು ಕರೆ ನೀಡಿದರು. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಜಾಲಗಳನ್ನು ಧ್ವಂಸಗೊಳಿಸುವುದು, ಸುರಕ್ಷಿತ ಆಶ್ರಯತಾಣಗಳನ್ನು ನಿರ್ಮೂಲನೆ ಮಾಡುವುದು, ಭಯೋತ್ಪಾದಕ ಮೂಲಸೌಕರ್ಯವನ್ನು ಕಿತ್ತೊಗೆಯುವುದು ಮತ್ತು ಭಯೋತ್ಪಾದನೆಯ ಅಪರಾಧಿಗಳನ್ನು ಶೀಘ್ರವಾಗಿ ನ್ಯಾಯದ ಕಟಕಟೆಗೆ ತರುವುದಕ್ಕಾಗಿ ಅವರು ಆಗ್ರಹಿಸಿದರು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಒಂದು ಸಮಗ್ರ, ಸಂಘಟಿತ ಮತ್ತು ನಿರಂತರವಾದ ಕಾರ್ಯತಂತ್ರದ ಅಗತ್ಯವನ್ನು ಒತ್ತಿ ಹೇಳಿದ ಅವರು, ದ್ವಿಪಕ್ಷೀಯವಾಗಿ ಮತ್ತು ಬಹುಪಕ್ಷೀಯ ವ್ಯವಸ್ಥೆಯೊಂದಿಗೆ ಸಹಯೋಗದಿಂದ ಕೆಲಸ ಮಾಡುವುದರ ಮಹತ್ವವನ್ನು ಪುನರುಚ್ಚರಿಸಿದರು.

ಭಯೋತ್ಪಾದನೆಯನ್ನು ಎದುರಿಸಲು ಬಹುಪಕ್ಷೀಯ ಪ್ರಯತ್ನಗಳನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರ್ ದೃಢಪಡಿಸಿದರು ಮತ್ತು ವಿಶ್ವಸಂಸ್ಥೆಯ ಚೌಕಟ್ಟಿನೊಳಗೆ 'ಅಂತರರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶ'ವನ್ನು (CCIT) ಶೀಘ್ರವಾಗಿ ಅಂತಿಮಗೊಳಿಸಿ ಅಂಗೀಕರಿಸಲು ಕರೆ ನೀಡಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿಯ ಅಡಿಯಲ್ಲಿರುವ ಭಯೋತ್ಪಾದಕರೂ ಸೇರಿದಂತೆ, ವಿಶ್ವಸಂಸ್ಥೆ ಮತ್ತು ಐರೋಪ್ಯ ಒಕ್ಕೂಟದಿಂದ (EU) ಗೊತ್ತುಪಡಿಸಿದ ಎಲ್ಲಾ ಭಯೋತ್ಪಾದಕರು, ಭಯೋತ್ಪಾದಕ ಸಂಘಟನೆಗಳು ಹಾಗೂ ಅವುಗಳ ಪ್ರಾಕ್ಸಿ ಗುಂಪುಗಳು, ಸಹಾಯಕರು ಮತ್ತು ಪ್ರಾಯೋಜಕರ ವಿರುದ್ಧ ಸಂಘಟಿತ ಕ್ರಮಗಳಿಗೆ ಅವರು ಆಗ್ರಹಿಸಿದರು. ವಿಶ್ವಸಂಸ್ಥೆ ಮತ್ತು ಹಣಕಾಸು ಕಾರ್ಯಪಡೆ (FATF) ಮೂಲಕ ಸೇರಿದಂತೆ, ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಮಾರ್ಗಗಳನ್ನು ನಿಷ್ಕ್ರಿಯಗೊಳಿಸಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುವ ತಮ್ಮ ದೃಢವಾದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಅಂತಾರಾಷ್ಟ್ರೀಯ ಭದ್ರತಾ ಪರಿಸರದಲ್ಲಿ ಹೊಸದಾಗಿ ಹೊರಹೊಮ್ಮುತ್ತಿರುವ ಸವಾಲುಗಳನ್ನು ಗುರುತಿಸಿದ ನಾಯಕರು, ವ್ಯೂಹಾತ್ಮಕ ಸ್ವಾಯತ್ತತೆ, ರಕ್ಷಣಾ ಸನ್ನದ್ಧತೆ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ತಮ್ಮ ತಮ್ಮ ರಕ್ಷಣಾ ಉದ್ಯಮಗಳ ನಡುವಿನ ಸಹಯೋಗದ ಮೂಲಕ, ಸೈಬರ್‌ ಸುರಕ್ಷತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ವಿಶೇಷ ಗಮನಹರಿಸಿ, ತಮ್ಮ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ಅವರು ಒಪ್ಪಿಕೊಂಡರು.

ಭಾರತ ಮತ್ತು ಸೈಪ್ರಸ್ ಎರಡನ್ನೂ ಆಳವಾಗಿ ಬೇರೂರಿರುವ ನೌಕಾ ಸಂಪ್ರದಾಯಗಳನ್ನು ಹೊಂದಿರುವ ಕಡಲ ರಾಷ್ಟ್ರಗಳೆಂದು ಗುರುತಿಸಿದ ನಾಯಕರು, ಕಡಲ ವಲಯವನ್ನೂ ಸೇರಿಸಿಕೊಂಡು ಸಹಕಾರವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದರು. ಕಡಲ ವಲಯದ ಅರಿವು ಮತ್ತು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸಲು, ಭಾರತೀಯ ನೌಕಾ ಹಡಗುಗಳ ನಿಯಮಿತ ಬಂದರು ಭೇಟಿಗಳನ್ನು ಪ್ರೋತ್ಸಾಹಿಸಲು ಮತ್ತು ಜಂಟಿ ಕಡಲ ತರಬೇತಿ ಹಾಗೂ ಸಮರಾಭ್ಯಾಸಗಳ ಅವಕಾಶಗಳನ್ನು ಅನ್ವೇಷಿಸಲು ಅವರು ಒಪ್ಪಿದರು.

ಇದೇ ನಿಟ್ಟಿನಲ್ಲಿ ಮತ್ತು ಪ್ರಸ್ತುತ ಜಾಗತಿಕ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿ ಸನ್ನದ್ಧತೆ ಮತ್ತು ಸಂಘಟಿತ ಬಿಕ್ಕಟ್ಟು ಪ್ರತಿಕ್ರಿಯೆಯಲ್ಲಿ ಸಹಕಾರವನ್ನು ಬಲಪಡಿಸಲು ಉಭಯ ರಾಷ್ಟ್ರಗಳು ಬದ್ಧತೆಯನ್ನು ವ್ಯಕ್ತಪಡಿಸಿದವು. ಹಿಂದಿನ ಯಶಸ್ವಿ ಪ್ರಯತ್ನಗಳ ಆಧಾರದ ಮೇಲೆ, ತೆರವು ಕಾರ್ಯಾಚರಣೆ ಮತ್ತು ಶೋಧ ಹಾಗೂ ರಕ್ಷಣಾ (SAR) ಕಾರ್ಯಾಚರಣೆಗಳಲ್ಲಿ ಸಮನ್ವಯವನ್ನು ಸಾಂಸ್ಥೀಕರಣಗೊಳಿಸಲು ನಾಯಕರು ಒಪ್ಪಿಕೊಂಡರು.

ಸಂಪರ್ಕ ಮತ್ತು ಪ್ರಾದೇಶಿಕ ಸಹಕಾರ

ಪ್ರದೇಶಗಳ ನಡುವೆ ಸೇತುವೆಗಳಾಗಿ ಕಾರ್ಯನಿರ್ವಹಿಸುವ ವ್ಯೂಹಾತ್ಮಕ ದೃಷ್ಟಿಕೋನವನ್ನು ಸೈಪ್ರಸ್ ಮತ್ತು ಭಾರತ ಹಂಚಿಕೊಂಡಿವೆ. ಶಾಂತಿ, ಆರ್ಥಿಕ ಏಕೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ಒಂದು ಪರಿವರ್ತನಾಶೀಲ, ಬಹು-ಮಾದರಿ ಉಪಕ್ರಮವಾಗಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ನ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು. IMEC ಅನ್ನು ರಚನಾತ್ಮಕ ಪ್ರಾದೇಶಿಕ ಸಹಕಾರಕ್ಕೆ ವೇಗವರ್ಧಕವಾಗಿ ಪರಿಗಣಿಸಿದ ಅವರು, ಪೂರ್ವ ಮೆಡಿಟರೇನಿಯನ್ ಮತ್ತು ವಿಶಾಲ ಮಧ್ಯಪ್ರಾಚ್ಯದಲ್ಲಿ ಸ್ಥಿರತೆಯನ್ನು ಉತ್ತೇಜಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತೀಯ ಪರ್ಯಾಯ ದ್ವೀಪದಿಂದ ವಿಶಾಲ ಮಧ್ಯಪ್ರಾಚ್ಯದ ಮೂಲಕ ಯುರೋಪ್‌ ವರೆಗೆ ಆಳವಾದ ಸಹಭಾಗಿತ್ವ ಮತ್ತು ಪರಸ್ಪರ ಸಂಪರ್ಕದ ಕಾರಿಡಾರ್ ಗಳನ್ನು ಪೋಷಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಯುರೋಪ್‌ ಗೆ ಒಂದು ಹೆಬ್ಬಾಗಿಲಾಗಿ ಸೈಪ್ರಸ್‌ನ ಪಾತ್ರವನ್ನು ಮತ್ತು ಈ ಹಿನ್ನೆಲೆಯಲ್ಲಿ, ಸಾಗಣೆ, ಸಂಗ್ರಹಣೆ, ವಿತರಣೆ ಮತ್ತು ಸರಕು-ಸಾಗಾಟ (ಲಾಜಿಸ್ಟಿಕ್ಸ್)ಕ್ಕಾಗಿ ಪ್ರಾದೇಶಿಕ ಕೇಂದ್ರವಾಗಿ ಕಾರ್ಯನಿರ್ವಹಿಸುವ ಅದರ ಸಾಮರ್ಥ್ಯವನ್ನು ಗುರುತಿಸಿದ ಅವರು, ಭಾರತೀಯ ಹಡಗು ಕಂಪನಿಗಳು ಸೈಪ್ರಸ್‌ನಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ಸಾಧ್ಯತೆಯನ್ನು ಸ್ವಾಗತಿಸಿದರು. ಆರ್ಥಿಕ ಮತ್ತು ಸರಕು-ಸಾಗಾಟ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸಾಧನವಾಗಿ, ಸೈಪ್ರಸ್-ಮೂಲದ ಮತ್ತು ಭಾರತೀಯ ಕಡಲ ಸೇವಾ ಪೂರೈಕೆದಾರರನ್ನು ಒಳಗೊಂಡ ಜಂಟಿ ಉದ್ಯಮಗಳ ಮೂಲಕ ಕಡಲ ಸಹಕಾರದ ಪ್ರಗತಿಯನ್ನು ಪ್ರೋತ್ಸಾಹಿಸಲು ಒಪ್ಪಿದರು.

EU-ಭಾರತ ಕಾರ್ಯತಂತ್ರದ ಸಹಭಾಗಿತ್ವ

2026ರ ಆರಂಭದಲ್ಲಿ ಸೈಪ್ರಸ್ ಐರೋಪ್ಯ ಒಕ್ಕೂಟದ (EU) ಪರಿಷತ್ತಿನ ಅಧ್ಯಕ್ಷತೆ ವಹಿಸುವುದನ್ನು ಗಮನದಲ್ಲಿಟ್ಟುಕೊಂಡು, ಉಭಯ ನಾಯಕರು EU-ಭಾರತ ಸಂಬಂಧಗಳನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರ್ ದೃಢಪಡಿಸಿದರು. 'ಕಾಲೇಜ್ ಆಫ್ ಕಮಿಷನರ್ಸ್'ನ ಐತಿಹಾಸಿಕ ಭಾರತ ಭೇಟಿಯನ್ನು ಅವರು ಸ್ಮರಿಸಿದರು. ಮೊದಲ ಭಾರತ-EU ಕಾರ್ಯತಂತ್ರದ ಸಂವಾದದ ಪ್ರಾರಂಭ ಮತ್ತು ವ್ಯಾಪಾರ, ರಕ್ಷಣೆ ಮತ್ತು ಭದ್ರತೆ, ಕಡಲ, ಸಂಪರ್ಕ, ಸ್ವಚ್ಛ ಮತ್ತು ಹಸಿರು ಇಂಧನ, ಹಾಗೂ ಬಾಹ್ಯಾಕಾಶ ಸೇರಿದಂತೆ, ಭೇಟಿಯ ಸಂದರ್ಭದಲ್ಲಿ ಗುರುತಿಸಲಾದ ಆದ್ಯತೆಯ ಕ್ಷೇತ್ರಗಳಲ್ಲಿ ಈಗಾಗಲೇ ಸಾಧಿಸಿರುವ ಪ್ರಗತಿಯ ಬಗ್ಗೆ ಅವರು ಸಂತೃಪ್ತಿ ವ್ಯಕ್ತಪಡಿಸಿದರು.

ತನ್ನ ಅಧ್ಯಕ್ಷತೆಯ ಅವಧಿಯಲ್ಲಿ EU-ಭಾರತ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಗಾಗಿ ಕೆಲಸ ಮಾಡುವ ಭರವಸೆಯನ್ನು ಸೈಪ್ರಸ್ ನೀಡಿತು. ಈ ಒಪ್ಪಂದದ ಗಮನಾರ್ಹ ಆರ್ಥಿಕ ಮತ್ತು ಕಾರ್ಯತಂತ್ರದ ಸಾಮರ್ಥ್ಯವನ್ನು ಗುರುತಿಸಿ, ಈ ವರ್ಷದ (2025) ಅಂತ್ಯದೊಳಗೆ EU-ಭಾರತ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಅಂತಿಮಗೊಳಿಸಲು ಬೆಂಬಲ ನೀಡುವ ಸಿದ್ಧತೆಯನ್ನು ಉಭಯ ರಾಷ್ಟ್ರಗಳು ವ್ಯಕ್ತಪಡಿಸಿದವು. EU-ಭಾರತ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ (TTC) ಮೂಲಕ ನಡೆಯುತ್ತಿರುವ ಕಾರ್ಯಗಳಿಗೆ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಪ್ರಮುಖ ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು, 2025 ರ ಕಾರ್ಯತಂತ್ರದ ಮಾರ್ಗಸೂಚಿಯ ಆಚೆಗೆ ಭವಿಷ್ಯದ ಕಾರ್ಯಸೂಚಿಯನ್ನು ಮುಂದುವರಿಸಲು ಬದ್ಧತೆಯನ್ನು ತೋರಿದರು.

ವ್ಯಾಪಾರ, ನಾವೀನ್ಯತೆ, ತಂತ್ರಜ್ಞಾನ ಮತ್ತು ಆರ್ಥಿಕ ಅವಕಾಶ

ಸೈಪ್ರಸ್ ಮತ್ತು ಭಾರತದ ನಡುವಿನ ಹೆಚ್ಚುತ್ತಿರುವ ಕಾರ್ಯತಂತ್ರದ ಪೂರಕತೆಯನ್ನು ಗುರುತಿಸಿದ ನಾಯಕರು, ಹೆಚ್ಚಿದ ವ್ಯಾಪಾರ, ಹೂಡಿಕೆ ಮತ್ತು ವಿಜ್ಞಾನ, ನಾವೀನ್ಯತೆ ಹಾಗೂ ಸಂಶೋಧನೆಯಲ್ಲಿನ ಸಹಯೋಗದ ಮೂಲಕ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ಸಹಕಾರವನ್ನು ಮುನ್ನಡೆಸಲು, ವ್ಯಾಪಾರ ಪ್ರತಿನಿಧಿಗಳು ಸೇರಿದಂತೆ ಸೈಪ್ರಸ್ ನ ಉನ್ನತ ಮಟ್ಟದ ನಿಯೋಗವು ಭಾರತಕ್ಕೆ ಭೇಟಿ ನೀಡುವುದನ್ನು ಹಾಗೂ ಹೂಡಿಕೆ ಅವಕಾಶಗಳನ್ನು ಉತ್ತೇಜಿಸಲು ಸೈಪ್ರಸ್-ಭಾರತ ವ್ಯಾಪಾರ ವೇದಿಕೆಯನ್ನು ಆಯೋಜಿಸುವುದನ್ನು ಉಭಯ ನಾಯಕರು ಸ್ವಾಗತಿಸುವುದಾಗಿ ತಿಳಿಸಿದರು. ಇಬ್ಬರೂ ನಾಯಕರು ' ಕಾರ್ಯತಂತ್ರದ ಆರ್ಥಿಕ ಪಾಲುದಾರಿಕೆಯನ್ನು ಮುನ್ನಡೆಸುವ' ಕುರಿತ ಸೈಪ್ರಸ್-ಭಾರತ ಉದ್ಯಮ ದುಂಡುಮೇಜಿನ ಸಭೆಯನ್ನೂ ಉದ್ದೇಶಿಸಿ ಮಾತನಾಡಿದರು.

ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಸಹಯೋಗವನ್ನು ಉತ್ತೇಜಿಸಲು ಉಭಯ ನಾಯಕರು ಒಪ್ಪಿಕೊಂಡರು. ಸ್ಟಾರ್ಟ್‌ಅಪ್ ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಬಲವಾದ ಸಂಬಂಧವನ್ನು ಪೋಷಿಸುವುದು, ಮತ್ತು ಕೃತಕ ಬುದ್ಧಿಮತ್ತೆ, ಡಿಜಿಟಲ್ ಮೂಲಸೌಕರ್ಯ ಹಾಗೂ ಸಂಶೋಧನೆಯಂತಹ ಪ್ರಮುಖ ವಲಯಗಳಲ್ಲಿ ನಾವೀನ್ಯತೆಯ ವಿನಿಮಯವನ್ನು ಬೆಂಬಲಿಸುವ ಮೂಲಕ, ಸಂಬಂಧಿತ ತಿಳುವಳಿಕಾ ಒಪ್ಪಂದವನ್ನು (MoU) ಅಂತಿಮಗೊಳಿಸುವ ದೃಷ್ಟಿಯಿಂದ ಕಾರ್ಯನಿರ್ವಹಿಸಲು ಒಪ್ಪಿದರು.

ಸಂಚಾರಶೀಲತೆ, ಪ್ರವಾಸೋದ್ಯಮ ಮತ್ತು ಜನರ ನಡುವಿನ ಬಾಂಧವ್ಯ

ಎರಡೂ ದೇಶಗಳ ಜನರ ನಡುವಿನ ಸಂಪರ್ಕವು ನಮ್ಮ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸಲು ಒಂದು ಪ್ರಮುಖ ಶಕ್ತಿಯಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ಜನರ ಓಡಾಟವನ್ನು (Mobility) ಸುಲಭಗೊಳಿಸುವ ಒಂದು ಪ್ರಾಯೋಗಿಕ ಯೋಜನೆಗೆ ಸಂಬಂಧಿಸಿದ ಒಪ್ಪಂದವನ್ನು 2025ರ ಅಂತ್ಯದೊಳಗೆ ಅಂತಿಮಗೊಳಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿದವು.

ಸಾಂಸ್ಕೃತಿಕವಾಗಿ ಮತ್ತು ಜನರ ನಡುವಿನ ಸಂಪರ್ಕದಿಂದ ಪರಸ್ಪರ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು. ಇದಕ್ಕಾಗಿ ಪ್ರಯಾಣವನ್ನು ಸುಲಭಗೊಳಿಸಲು ಮತ್ತು ದ್ವಿಪಕ್ಷೀಯ ವಿನಿಮಯಕ್ಕೆ ಉತ್ತೇಜನ ನೀಡಲು, ಪ್ರವಾಸೋದ್ಯಮವನ್ನು ಹೆಚ್ಚಿಸುವ, ಸೈಪ್ರಸ್ ಮತ್ತು ಭಾರತದ ನಡುವೆ ನೇರ ವಿಮಾನಯಾನ ಸ್ಥಾಪಿಸುವ ಹಾಗೂ ಇತರ ಪಾಲುದಾರರ ಮೂಲಕ ಸುಧಾರಿತ ವಾಯು ಮಾರ್ಗಗಳನ್ನು ಕಂಡುಕೊಳ್ಳುವ ಅವಕಾಶಗಳನ್ನು ಅನ್ವೇಷಿಸಲು ಅವರು ಒಪ್ಪಿಕೊಂಡರು.

ಭವಿಷ್ಯ: 2025-2029ರ ಕ್ರಿಯಾ ಯೋಜನೆ

ಈ ಜಂಟಿ ಘೋಷಣೆಯು ಸೈಪ್ರಸ್ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಬಾಂಧವ್ಯವನ್ನು ಪುನರುಚ್ಚರಿಸುತ್ತದೆ. ಉಭಯ ನಾಯಕರು ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು ಮತ್ತು ಈ ಪಾಲುದಾರಿಕೆಯು ತಮ್ಮ ಪ್ರದೇಶಗಳಲ್ಲಿ ಮತ್ತು ಅದಕ್ಕೂ ಮೀರಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತಾ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೈಪ್ರಸ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಮುಂದಿನ ಐದು ವರ್ಷಗಳ ಕಾಲ ಮಾರ್ಗದರ್ಶನ ನೀಡಲು ಒಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕೆಂದು ನಾಯಕರು ಒಪ್ಪಿಕೊಂಡರು. ಈ ಯೋಜನೆಯು ಸೈಪ್ರಸ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಸಿದ್ಧಗೊಳ್ಳಲಿದೆ.

 

*****


(Release ID: 2136835)