ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜೂನ್ 6 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಮಂತ್ರಿ ಭೇಟಿ


ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ

ಭಾರತದ ಮೊದಲ ಕೇಬಲ್-ಬಂಧಿತ  ರೈಲು ಸೇತುವೆಯಾದ ಅಂಜಿ ಸೇತುವೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ

ಕತ್ರಾದಲ್ಲಿ 46,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ ಮತ್ತು ದೇಶಕ್ಕೆ ಸಮರ್ಪಿಸಲಿದ್ದಾರೆ

Posted On: 04 JUN 2025 12:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 6 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿಗಳು ಬೆಳಿಗ್ಗೆ 11 ಗಂಟೆಗೆ ಚೆನಾಬ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಸೇತುವೆಯ ಡೆಕ್‌ಗೆ ಭೇಟಿ ನೀಡಲಿದ್ದಾರೆ. ನಂತರ, ಅವರು ಅಂಜಿ ಸೇತುವೆಗೆ ಭೇಟಿ ನೀಡಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅವರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ, ಅವರು ಕತ್ರಾದಲ್ಲಿ 46,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಚೆನಾಬ್ ಮತ್ತು ಅಂಜಿ ರೈಲು ಸೇತುವೆಗಳು

ನದಿಯಿಂದ 359 ಮೀಟರ್ ಎತ್ತರದಲ್ಲಿರುವ ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಇದು ಭೂಕಂಪ ಮತ್ತು ಭಾರೀ ಗಾಳಿ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ. ಈ ಸೇತುವೆಯ ಮುಖ್ಯ ಪ್ರಯೋಜನ ಎಂದರೆ ಅದು ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲು ಮೂಲಕ, ಕತ್ರಾ ಮತ್ತು ಶ್ರೀನಗರ ನಡುವೆ ಪ್ರಯಾಣಿಸಲು ಕೇವಲ 3 ಗಂಟೆ ಸಾಕಾಗುತ್ತದೆ, ಇದು ಚಾಲ್ತಿಯಲ್ಲಿರುವ ಪ್ರಯಾಣದ ಸಮಯವನ್ನು 2-3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ಅಂಜಿ ಸೇತುವೆ ಭಾರತದ ಮೊದಲ ಕೇಬಲ್-ಸ್ಟೇಡ್ (ಗೋಪುರಗಳಿಗೆ ಕೇಬಲ್ ಗಳಿಂದ ಬಿಗಿದು ಕಟ್ಟಿದ)  ರೈಲು ಸೇತುವೆಯಾಗಿದ್ದು, ಇದು ಸವಾಲಿನ ಭೂಪ್ರದೇಶದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲಿದೆ.

ಸಂಪರ್ಕ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಉಪಕ್ರಮಗಳು

ಪ್ರಧಾನಮಂತ್ರಿಯವರು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯು.ಎಸ್.ಬಿ.ಆರ್.ಎಲ್.-USBRL) ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಸುಮಾರು 43,780 ಕೋಟಿ ರೂ. ಮೌಲ್ಯದ 272 ಕಿಮೀ ಉದ್ದದ ಯು.ಎಸ್.ಬಿ.ಆರ್.ಎಲ್.- ಯೋಜನೆಯು 36 ಸುರಂಗಗಳು (119 ಕಿಮೀ ಉದ್ದ) ಮತ್ತು 943 ಸೇತುವೆಗಳನ್ನು ಒಳಗೊಂಡಿದೆ. ಈ ಯೋಜನೆಯು ಕಾಶ್ಮೀರ ಕಣಿವೆ ಮತ್ತು ದೇಶದ ಉಳಿದ ಭಾಗಗಳ ನಡುವೆ ಸರ್ವಋತು,  ತಡೆರಹಿತ ರೈಲು ಸಂಪರ್ಕವನ್ನು ಸ್ಥಾಪಿಸುತ್ತದೆ, ಪ್ರಾದೇಶಿಕ ಚಲನಶೀಲತೆಯನ್ನು ಪರಿವರ್ತಿಸುವ ಮತ್ತು ಸಾಮಾಜಿಕ-ಆರ್ಥಿಕ ಸಮಗ್ರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿಯವರು ಶ್ರೀ ಮಾತಾ ವೈಷ್ಣೋ ದೇವಿ ಕತ್ರದಿಂದ ಶ್ರೀನಗರಕ್ಕೆ ಮತ್ತು ಅಲ್ಲಿಂದ ಹಿಂತಿರುಗಲು ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅವು ನಿವಾಸಿಗಳು, ಪ್ರವಾಸಿಗರು, ಯಾತ್ರಿಕರು ಸೇರಿದಂತೆ ಇತರರಿಗೆ ತ್ವರಿತ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಪ್ರಯಾಣ ಆಯ್ಕೆಯ ಅವಕಾಶವನ್ನು  ನೀಡುತ್ತವೆ.

ಗಡಿ ಪ್ರದೇಶಗಳಲ್ಲಿ ಕೊನೆಯ ಮೈಲಿ ಸಂಪರ್ಕಕ್ಕೆ ಪ್ರಮುಖ ಉತ್ತೇಜನವಾಗಿ, ಪ್ರಧಾನಿಯವರು ವಿವಿಧ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ -701 ರಲ್ಲಿ ರಫಿಯಾಬಾದ್ ನಿಂದ ಕುಪ್ವಾರಾವರೆಗಿನ ರಸ್ತೆ ವಿಸ್ತರಣೆ ಯೋಜನೆ ಮತ್ತು 1,952 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಎನ್.ಎಚ್. -444 ರಲ್ಲಿ ಶೋಪಿಯಾನ್ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಶ್ರೀನಗರದ ರಾಷ್ಟ್ರೀಯ ಹೆದ್ದಾರಿ -1 ರ ಸಂಗ್ರಾಮ ಜಂಕ್ಷನ್ ಮತ್ತು ರಾಷ್ಟ್ರೀಯ ಹೆದ್ದಾರಿ -44 ರ ಬೆಮಿನಾ ಜಂಕ್ಷನ್‌ನಲ್ಲಿ ಎರಡು ಫ್ಲೈಓವರ್ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರಿಗೆ ಸಂಚಾರವನ್ನು  ಸುಲಭಗೊಳಿಸುತ್ತವೆ.

ಪ್ರಧಾನಿಯವರು ಕತ್ರಾದಲ್ಲಿ 350 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಶ್ರೇಷ್ಠತಾ ಸಂಸ್ಥೆಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಇದು ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಗಣನೀಯವಾಗಿ ಕೊಡುಗೆ ನೀಡುವಂತಹ  ರಿಯಾಸಿ ಜಿಲ್ಲೆಯ ಮೊದಲ ವೈದ್ಯಕೀಯ ಕಾಲೇಜಾಗಲಿದೆ.

 

*****


(Release ID: 2133830) Visitor Counter : 4