ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವೀಕರಿಸಬಹುದಾದ ಇಂಧನದಿಂದ ಈಶಾನ್ಯ ಬೆಳವಣಿಗೆಯ ದೃಷ್ಟಿಕೋನ: ಶ್ರೀ ಪ್ರಲ್ಹಾದ್ ಜೋಶಿ


ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ದೇಶಿಸಿ ಕೇಂದ್ರ ಸಚಿವರಾದ ಜೋಶಿ ಅವರು ಮಾತನಾಡಿದರು

Posted On: 23 MAY 2025 5:59PM by PIB Bengaluru

ನವೀಕರಿಸಬಹುದಾದ ಇಂಧನ ವಲಯವು ಈಶಾನ್ಯ ಪ್ರದೇಶದ ಬೆಳವಣಿಗೆಯ ದೃಷ್ಟಿಕೋನವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈಶಾನ್ಯವು ಅಗಾಧವಾದ ಅಭಿವೃದ್ಧಿಯನ್ನು ಕಾಣುತ್ತಿದೆ. ನವದೆಹಲಿಯಲ್ಲಿ ನಡೆದ ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆ 2025ರಲ್ಲಿ 'ಹಸಿರು ಈಶಾನ್ಯ: ಸಶಕ್ತ ಭಾರತಕ್ಕಾಗಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ' ಕುರಿತ ಅಧಿವೇಶನದಲ್ಲಿ ಸಚಿವರು ಈ ಹೇಳಿಕೆಗಳನ್ನು ನೀಡಿದರು.

ಭಾರತದ ಹಸಿರು ಶಕ್ತಿಯ ಅಷ್ಟಲಕ್ಷ್ಮಿ

ದೊಡ್ಡ ಜಲವಿದ್ಯುತ್ ಯೋಜನೆಗಳಿಂದ 129 GW ಗಿಂತ ಹೆಚ್ಚು ಸಾಮರ್ಥ್ಯ ಮತ್ತು ಪಂಪ್ ಮಾಡಿದ ಶೇಖರಣಾ ಸ್ಥಾವರಗಳಿಂದ 18 GW ಗಿಂತ ಹೆಚ್ಚು ಸಾಮರ್ಥ್ಯ ಸೇರಿದಂತೆ ಈಶಾನ್ಯವು ಇನ್ನೂ ಬಳಕೆಯಾಗದ ಅಪಾರ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು. ಈ ನೈಸರ್ಗಿಕ ಅನುಕೂಲಗಳು, ಹೆಚ್ಚುತ್ತಿರುವ ಇಂಧನ ಬೇಡಿಕೆ ಮತ್ತು ಗಡಿಯಾಚೆಗಿನ ಕಾರ್ಯತಂತ್ರದ ಸ್ಥಾನೀಕರಣದೊಂದಿಗೆ ಸೇರಿಕೊಂಡು, ಈ ಪ್ರದೇಶವನ್ನು ಭಾರತದ ಹಸಿರು ಬೆಳವಣಿಗೆಯ ಯೋಜನೆಗಳಿಗೆ ಕೇಂದ್ರವನ್ನಾಗಿ ಮಾಡುತ್ತದೆ.

ಈಶಾನ್ಯವನ್ನು ಭಾರತದ ಅಷ್ಟಲಕ್ಷ್ಮಿ ಎಂದು ಬಣ್ಣಿಸಿದ ಅವರು, "ಹಸಿರು ಶಕ್ತಿಯ ಮೂಲಕ ಈಶಾನ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಸಂಪತ್ತನ್ನಾಗಿ ಪರಿವರ್ತಿಸುವ ಮೂಲಕ, ನಾವು ಪ್ರತಿಯೊಂದು ರಾಜ್ಯವನ್ನು ಶುದ್ಧ ಇಂಧನದ ಲಕ್ಷ್ಮಿಯನ್ನಾಗಿ ಮಾಡುತ್ತಿದ್ದೇವೆ, ಇದು ಭಾರತದ ಸಮೃದ್ಧಿಗೆ ಕೊಡುಗೆ ನೀಡುತ್ತದೆ" ಎಂದು ಹೇಳಿದರು. 'ಒಂದು ರಾಷ್ಟ್ರ, ಒಂದು ಗ್ರಿಡ್' ಅಡಿಯಲ್ಲಿ ಮುಂದಿನ ದಿನಗಳಲ್ಲಿ ಭಾರತದ ಗ್ರಿಡ್ ಸ್ಥಿರತೆಯನ್ನು ಖಚಿತಪಡಿಸುವಲ್ಲಿ ಈಶಾನ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಹೂಡಿಕೆ ಬದ್ಧತೆಗಳು ಮತ್ತು ಕೈಗಾರಿಕಾ ಆಸಕ್ತಿ

ಇತ್ತೀಚಿನ ಹೂಡಿಕೆದಾರರ ಭಾಗವಹಿಸುವಿಕೆಯ ಸಮಯದಲ್ಲಿ, ಪ್ರಮುಖ ಭಾರತೀಯ ಸಂಘಟಿತ ಸಂಸ್ಥೆಗಳು ಈ ಪ್ರದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಬಗ್ಗೆ ಗಮನಾರ್ಹ ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ಶ್ರೀ ಜೋಶಿ ಮಾಹಿತಿ ನೀಡಿದರು. 
ನವೀಕರಿಸಬಹುದಾದ ‌ಇಂಧನ (RE) ವಲಯದಲ್ಲಿ  ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಹೂಡಿಕೆದಾರರ ನಡುವೆ ₹38,856 ಕೋಟಿ ಮೌಲ್ಯದ ಒಟ್ಟು 115 ತಿಳುವಳಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಲಾಗಿದೆ. ಈಶಾನ್ಯದಲ್ಲಿ ಅಪಾರ ಉದ್ಯೋಗ ಮತ್ತು ಅಭಿವೃದ್ಧಿಯನ್ನು ತರುವ ಬಗ್ಗೆ ಇತ್ತೀಚಿನ ವಿವಿಧ ಹೂಡಿಕೆಗಳನ್ನು ಸಚಿವರು ವಿವರಿಸಿದರು.

ಈಶಾನ್ಯಕ್ಕೆ ವಿಶೇಷ ಉಪಕ್ರಮಗಳು

ಈ ಪ್ರದೇಶದಲ್ಲಿ ಶುದ್ಧ ಇಂಧನ ಅಭಿವೃದ್ಧಿಯನ್ನು ಉತ್ತೇಜಿಸಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ತನ್ನ ವಾರ್ಷಿಕ ಯೋಜನಾ ಬಜೆಟ್‌ನಲ್ಲಿ 10% ಅನ್ನು ಈಶಾನ್ಯ ಪ್ರದೇಶಕ್ಕೆ ಪ್ರತ್ಯೇಕವಾಗಿ ಮೀಸಲಿಟ್ಟಿದೆ. ಈ ಮೀಸಲಾದ ಹಂಚಿಕೆಯ ಜೊತೆಗೆ, ಹೂಡಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಸಚಿವಾಲಯವು ಹೆಚ್ಚಿನ‌ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಇದರಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್  ಬಿಜ್ಲಿ ಯೋಜನೆಯಡಿಯಲ್ಲಿ 10% ಹೆಚ್ಚಿನ ಕೇಂದ್ರ ಹಣಕಾಸು ನೆರವು (CFA) ಮತ್ತು PM-KUSUM ಯೋಜನೆಯ B ಮತ್ತು C ಘಟಕಗಳಿಗೆ 20% ಹೆಚ್ಚಿನ CFA ಸೇರಿವೆ.

ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ 20 MW ಸೌರ ಉದ್ಯಾನವನವನ್ನು ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂಬ‌ ಮಾಹಿತಿಯನ್ನು ಶ್ರೀ ಜೋಶಿ ಹಂಚಿಕೊಂಡರು. ಇದು ಪ್ರದೇಶದ ಯೋಜನಾ ಸಿದ್ಧತೆಯನ್ನು ಪ್ರದರ್ಶಿಸುತ್ತದೆ. ಭಾರತದ ಮೊದಲ ಶುದ್ಧ ಹಸಿರು ಹೈಡ್ರೋಜನ್ ಸ್ಥಾವರವನ್ನು ಹೊಂದಿರುವ ಅಸ್ಸಾಂನಲ್ಲಿ 25 MW ಹಸಿರು ಹೈಡ್ರೋಜನ್ ಸ್ಥಾವರವು ಅಭಿವೃದ್ಧಿ ಹಂತದಲ್ಲಿದೆ ಎಂದು ಅವರು ಉಲ್ಲೇಖಿಸಿದರು. ಸೂರ್ಯಮಿತ್ರ, ವರುಣ್ ಮಿತ್ರ ಮತ್ತು ಜಲ ಉರ್ಜಮಿತ್ರದಂತಹ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಈ ಪ್ರದೇಶದ 2000ಕ್ಕೂ ಹೆಚ್ಚು ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಶುದ್ಧ ಇಂಧನ ರಫ್ತಿಗೆ ಈಶಾನ್ಯ ಪ್ರದೇಶವು ಭಾರತದ ಹೆಬ್ಬಾಗಿಲು 

ಭವಿಷ್ಯದ ಇಂಧನ ರಫ್ತು ಕೇಂದ್ರವಾಗಿ ಈ ಪ್ರದೇಶವನ್ನು ಸ್ಥಾನೀಕರಿಸಿದ ಸಚಿವರು, ಈಶಾನ್ಯವು ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಭೂತಾನ್‌ಗೆ ಹತ್ತಿರದಲ್ಲಿದ್ದು, ಇದು ಗಡಿಯಾಚೆಗಿನ ವಿದ್ಯುತ್ ವ್ಯಾಪಾರಕ್ಕೆ ಸೂಕ್ತವಾಗಿದೆ ಎಂದು ಹೇಳಿದರು. ಇಂಗಾಲದ ತಟಸ್ಥತೆ ಮತ್ತು ಹಸಿರು ಪ್ರಮಾಣೀಕರಣದ ಕಡೆಗೆ ಬೆಳೆಯುತ್ತಿರುವ ಜಾಗತಿಕ ಚಳವಳಿ ಬಗ್ಗೆ ವಿವರಿಸಿದರು. ನವೀಕರಿಸಬಹುದಾದ ಇಂಧನದಲ್ಲಿನ ಹೂಡಿಕೆಗಳು ಪ್ರದೇಶ ಮತ್ತು ರಾಷ್ಟ್ರವನ್ನು ಇಂಗಾಲದ ಕಾರ್ಬನ್ ಬಾರ್ಡರ್ ಹೊಂದಾಣಿಕೆ ಕಾರ್ಯವಿಧಾನದಂತಹ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಸಜ್ಜುಗೊಳಿಸುತ್ತದೆ ಎಂದು ಹೇಳಿದರು.

ಉದ್ಯಮದ ನಾಯಕರು ಮತ್ತು ನಾವೀನ್ಯಕಾರರು ಪೂರ್ವಕ್ಕೆ ನೋಡಬೇಕು ಮತ್ತು ಈಶಾನ್ಯದ ಪರಿವರ್ತತನೆಯಲ್ಲಿ  ಭಾಗವಹಿಸಬೇಕು ಮತ್ತು ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು. ಏಕ-ಗವಾಕ್ಷಿ ಅನುಮತಿಗಳು, ಬಂಡವಾಳ ಸಬ್ಸಿಡಿಗಳು ಮತ್ತು ಮೀಸಲಾದ ಸೌರ ಪಾರ್ಕ್ ಅಭಿವೃದ್ಧಿಯ ಮೂಲಕ ಹೂಡಿಕೆದಾರರಿಗೆ ಸಮಗ್ರ ಸರ್ಕಾರಿ ಬೆಂಬಲವನ್ನು ನೀಡುವ ಭರವಸೆ ನೀಡಿದರು. "ಹೂಡಿಕೆ ಮಾಡುವ ಸಮಯ ಈಗ. ಲಾಭಕ್ಕಾಗಿ ಮಾತ್ರವಲ್ಲ, ಪರಿಣಾಮಕ್ಕಾಗಿ, ಸ್ವಚ್ಛ ನಾಳೆ ಮತ್ತು ಸ್ವಾವಲಂಬಿ ಭಾರತಕ್ಕಾಗಿ," ಎಂದು ಸಚಿವರು ಹೇಳಿದರು.

 

*****


(Release ID: 2130900)