ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ವಿಶ್ವ ಪರಿಸರ ದಿನಾಚರಣೆ 2025 (WED 2025) ಆಚರಣೆಯ ಅಂಗವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅಭಿಯಾನ ಪ್ರಾರಂಭ


ವಿಶ್ವ ಪರಿಸರ ದಿನದ ಅಂಗವಾಗಿ, 'ಒಂದು ರಾಷ್ಟ್ರ, ಒಂದು ಗುರಿ: ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ' ಕುರಿತ ಅಭಿಯಾನ ಆರಂಭ

ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ಗೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಚಟುವಟಿಕೆಗಳು

Posted On: 22 MAY 2025 2:05PM by PIB Bengaluru

ವಿಶ್ವ ಪರಿಸರ ದಿನ-2025ರ ಅಂಗವಾಗಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 'ಒಂದು ರಾಷ್ಟ್ರ, ಒಂದು ಧ್ಯೇಯ: ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ’ ಎಂಬ ರಾಷ್ಟ್ರವ್ಯಾಪಿ ಬೃಹತ್ ಜನಾಂದೋಲನಕ್ಕೆ ಇಂದು ಚಾಲನೆ ನೀಡಿದೆ. ಭಾರತದ ಪ್ರಮುಖ ಉಪಕ್ರಮವಾದ 'ಮಿಷನ್ ಲೈಫ್' (ಪರಿಸರ ಸ್ನೇಹಿ ಜೀವನಶೈಲಿ) ತತ್ವಗಳಿಗೆ ಅನುಗುಣವಾಗಿರುವ ಈ ಅಭಿಯಾನವು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ನಿಟ್ಟಿನಲ್ಲಿ ಭಾರತದ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನದ ಪೂರ್ವಭಾವಿ ವಿಡಿಯೋವೊಂದನ್ನು ಅನಾವರಣಗೊಳಿಸಿ, ಪ್ಲಾಸ್ಟಿಕ್ ಮಾಲಿನ್ಯವನ್ನು ತೊಲಗಿಸಲು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಕೇವಲ ಜಾಗೃತಿಗಷ್ಟೇ ಸೀಮಿತರಾಗದೆ ಸಾಮೂಹಿಕವಾಗಿ ಕಾರ್ಯಪ್ರವೃತ್ತರಾಗುವಂತೆ ಎಲ್ಲರಿಗೂ ಕರೆ ನೀಡಿದ್ದಾರೆ.

ಪ್ರತಿ ವರ್ಷ ಜೂನ್ 5 ರಂದು ಆಚರಿಸಲ್ಪಡುವ ವಿಶ್ವ ಪರಿಸರ ದಿನವು, ಪರಿಸರ ಸಂರಕ್ಷಣೆಗಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಹಾಗೂ ಕ್ರಮ ಕೈಗೊಳ್ಳಲು ಪ್ರೋತ್ಸಾಹ ನೀಡುವ ವಿಶ್ವಸಂಸ್ಥೆಯ ಪ್ರಧಾನ ವೇದಿಕೆಯಾಗಿದೆ. ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಸಂದೇಶವನ್ನು ‘ಏಕಬಾರಿ ಬಳಕೆಯ ಪ್ಲಾಸ್ಟಿಕ್‌ಗೆ ವಿದಾಯ ಹೇಳಿ’ ಎಂಬ ಮಿಷನ್ ಲೈಫ್ ಥೀಮ್ ಮತ್ತಷ್ಟು ಬಲಪಡಿಸುತ್ತದೆ.

ಕಾರ್ಯಕ್ರಮದ ಮುಖ್ಯ ಗುರಿಗಳು: 

  • ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಅರಿವು ಮತ್ತು ವಕಾಲತ್ತು 
  • ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯದ ಬಳಕೆ ಮತ್ತು ಉತ್ಪಾದನೆ ಕಡಿತ 
  • ಪ್ಲಾಸ್ಟಿಕ್ ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ, ವಿಲೇವಾರಿ ಮತ್ತು ಮರುಬಳಕೆ ಸೇರಿದಂತೆ ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ನ ನಿರ್ವಹಣೆ 
  • ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ಗೆ ಸಮರ್ಥನೀಯ ಪರ್ಯಾಯಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು

ಕಾರ್ಯಕ್ರಮದ ಚಟುವಟಿಕೆಗಳು ಮತ್ತು ಪಾಲ್ಗೊಳ್ಳುವಿಕೆ

ವಿಶ್ವ ಪರಿಸರ ದಿನಾಚರಣೆ 2025 ರವರೆಗೆ ನಡೆಯುವ ಈ ಅಭಿಯಾನವು ಪ್ಲಾಸ್ಟಿಕ್ ಮಾಲಿನ್ಯದಿಂದಾಗುವ ಅಪಾಯಗಳ ಕುರಿತು ಅರಿವು ಮೂಡಿಸುವುದರ ಮತ್ತು ಪರಿಸರಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದರ ಮೇಲೆ ಗಮನಹರಿಸಿದೆ. ಸಮುದಾಯ ಶಿಕ್ಷಣ, ನಡವಳಿಕೆಯಲ್ಲಿ ಬದಲಾವಣೆ ತರುವಂತಹ ಯೋಜನೆಗಳು ಮತ್ತು ಸುಸ್ಥಿರ ವಸ್ತುಗಳ ಕುರಿತಾದ ಹೊಸ ಆವಿಷ್ಕಾರಗಳ ಮೂಲಕ ಜನರನ್ನು ಹೆಚ್ಚು ಪರಿಸರಸ್ನೇಹಿ ಜೀವನಶೈಲಿಯ ಕಡೆಗೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ.

ಈ ಅಭಿಯಾನದಲ್ಲಿ ಕೇಂದ್ರ ಸಚಿವಾಲಯಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಸಮುದಾಯ ಗುಂಪುಗಳು ಸೇರಿದಂತೆ ವಿವಿಧ ಸ್ತರಗಳಲ್ಲಿ ವ್ಯಾಪಕವಾದ ಚಟುವಟಿಕೆಗಳು ನಡೆಯಲಿವೆ. ಇದರ ಪ್ರಮುಖ ಪಾಲ್ಗೊಳ್ಳುವಿಕೆ ಕ್ಷೇತ್ರಗಳು ಹೀಗಿವೆ:

1. ಅರಿವು ಮತ್ತು ಪ್ರಚಾರ: ಸಾಮಾಜಿಕ ಮಾಧ್ಯಮ ಅಭಿಯಾನಗಳು, ಬೀದಿ ನಾಟಕಗಳು, ಸಾರ್ವಜನಿಕ ಪ್ರತಿಜ್ಞೆಗಳು, ಪೋಸ್ಟರ್ ಮತ್ತು ಪ್ರಬಂಧ ಸ್ಪರ್ಧೆಗಳು, ಮ್ಯಾರಥಾನ್‌ ನಂತಹ ಚಟುವಟಿಕೆಗಳು. 

2. ಸ್ವಚ್ಛತಾ ಕಾರ್ಯಕ್ರಮಗಳು: ಕಡಲ ಕಿನಾರೆಗಳು, ಉದ್ಯಾನವನಗಳು, ನದಿ ದಂಡೆಗಳು, ಶಾಲಾ-ಕಾಲೇಜು ಆವರಣಗಳು, ಪ್ರವಾಸಿ ತಾಣಗಳು, ರೈಲು ನಿಲ್ದಾಣಗಳು ಮತ್ತು ಗ್ರಾಮೀಣ ಪ್ರದೇಶಗಳು ಮುಂತಾದ ಕಡೆಗಳಲ್ಲಿ.

3. ಕಾರ್ಯಾಗಾರಗಳು ಮತ್ತು ವೆಬಿನಾರ್‌ ಗಳು: ಸುಸ್ಥಿರ ಅಭ್ಯಾಸಗಳು ಮತ್ತು ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ಗೆ ಪರ್ಯಾಯಗಳ ಕುರಿತು. 

4. ಶೈಕ್ಷಣಿಕ ಚಟುವಟಿಕೆಗಳು: ಮರುಬಳಕೆಯ ಪ್ಲಾಸ್ಟಿಕ್‌ನಿಂದ ಕಲೆ ಮತ್ತು ಕರಕುಶಲ ರಚನೆ, ಶಾಲಾ ಪ್ರದರ್ಶನಗಳು, ಹ್ಯಾಕಥಾನ್ ಗಳು, ರಸಪ್ರಶ್ನೆಗಳು ಮತ್ತು ಈ ವಿಷಯದ ಕುರಿತ ಸಂವಾದಾತ್ಮಕ ಆಟಗಳು ಒಳಗೊಂಡಿವೆ.

5. ಸಮುದಾಯ ಮತ್ತು ಸಾಂಸ್ಥಿಕ ಸಹಭಾಗಿತ್ವ: ಸ್ಥಳೀಯ ಮಟ್ಟದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆ ಪ್ರಯತ್ನಗಳಲ್ಲಿ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ ಗಳು (RWAs), ಪುರಸಭೆಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಕಾರ ಸಂಘಗಳು ಮುಂತಾದವರ ಪಾಲ್ಗೊಳ್ಳುವಿಕೆ.

ಸರ್ಕಾರಿ ಸಚಿವಾಲಯಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಂಬಂಧಿತ ಸಂಸ್ಥೆಗಳು ಮತ್ತು ಖಾಸಗಿ ಸಂಘಟನೆಗಳು ಸೇರಿದಂತೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಎಲ್ಲಾ ಪಾಲುದಾರರು ತಮ್ಮ ಕಾರ್ಯಕ್ರಮಗಳನ್ನು ಇದರ ಮುಖ್ಯ ಉದ್ದೇಶಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಮತ್ತು 'Meri LiFE' ಅಂತರ್ಜಾಲ ತಾಣದಲ್ಲಿ ಆಯೋಜಿಸಿದ ಚಟುವಟಿಕೆಗಳ ಮಾಹಿತಿಯನ್ನು ದಾಖಲಿಸಲು ಕೋರಲಾಗಿದೆ. ಈ ಪ್ರಯತ್ನಗಳೆಲ್ಲವೂ ಸುಸ್ಥಿರ ಜೀವನದ ಕಡೆಗೆ ಒಂದು ಜನಶಕ್ತಿಯ ಚಳುವಳಿಯನ್ನು ರೂಪಿಸುವ ಗುರಿಯನ್ನು ಹೊಂದಿವೆ.

ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ಮೂಲನೆ ಮಾಡುವ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡುವಂತೆ ಸಚಿವಾಲಯವು ಎಲ್ಲಾ ನಾಗರಿಕರಲ್ಲಿ ವಿನಂತಿಸಿದೆ.

 

*****


(Release ID: 2130732)