ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಪಿಎಂ ಇ-ಡ್ರೈವ್ (PM E-Drive) ಅಡಿಯಲ್ಲಿ ಪ್ರಮುಖ ನಗರಗಳಲ್ಲಿ ಇ-ಬಸ್ ಅಳವಡಿಕೆ ಚುರುಕುಗೊಂಡಿದೆ


ಎಲೆಕ್ಟ್ರಿಕ್ ಬಸ್ ಗಳ ಜಾರಿ ಕುರಿತು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ

ಪ್ರಧಾನಮಂತ್ರಿ ಮೋದಿಯವರ ಸ್ವಚ್ಛ ನಗರ ಸಾರಿಗೆ ಮಿಷನ್, ವೇಗವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಪ್ರಗತಿ ಸಾಧಿಸುತ್ತಿದೆ

ದೆಹಲಿ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಸೂರತ್, ಪ್ರಮುಖ ಫಲಾನುಭವಿಗಳಲ್ಲಿ ಸೇರಿವೆ

 ಕೇಂದ್ರ-ರಾಜ್ಯ ಸಮನ್ವಯದಿಂದ ಭಾರತದ ಸುಸ್ಥಿರ ಸಾರಿಗೆ ದೃಷ್ಟಿಕೋನಕ್ಕೆ ಮತ್ತಷ್ಟು ಬಲ 

Posted On: 22 MAY 2025 3:40PM by PIB Bengaluru

ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು, ಪಿಎಂ ಇ-ಡ್ರೈವ್ (PM e-Drive) ಯೋಜನೆಯ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಸೇವೆಗೆ ಹೊರತರುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯು ಮುಖ್ಯವಾಗಿ ತೆಲಂಗಾಣ, ಕರ್ನಾಟಕ, ದೆಹಲಿ ಮತ್ತು ಗುಜರಾತ್ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಿತ್ತು. ಇದು, ಭಾರತದಾದ್ಯಂತ ಸ್ವಚ್ಛ ಹಾಗೂ ಎಲ್ಲರನ್ನೂ ಒಳಗೊಂಡ ನಗರ ಸಾರಿಗೆ ವ್ಯವಸ್ಥೆಗಳನ್ನು ರೂಪಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿನ ಒಂದು ಮಹತ್ವದ ಹೆಜ್ಜೆಯಾಗಿದೆ.

ವಿಸ್ತೃತ ಚರ್ಚೆಗಳ ನಂತರ, ಭಾರಿ ಕೈಗಾರಿಕಾ ಸಚಿವಾಲಯವು ಪಿಎಂ ಇ-ಡ್ರೈವ್ ಯೋಜನೆಯ ಪ್ರಸ್ತುತ ಹಂತದ ಅಡಿಯಲ್ಲಿ ಬೆಂಗಳೂರಿಗೆ ಸುಮಾರು 4,500, ಹೈದರಾಬಾದ್ ಗೆ 2,000, ದೆಹಲಿಗೆ 2,800, ಅಹಮದಾಬಾದ್ ಗೆ 1,000 ಮತ್ತು ಸೂರತ್ ಗೆ 600 ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದೆ.

WhatsApp Image 2025-05-22 at 14.57.43.jpeg

"ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಧನ್ಯವಾದಗಳು, ಭಾರತ ಈಗ ಸುಸ್ಥಿರ ನಗರ ಸಾರಿಗೆಯತ್ತ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ" ಎಂದು ಶ್ರೀ ಎಚ್.ಡಿ. ಕುಮಾರಸ್ವಾಮಿ ಹೇಳಿದರು. "ಬೆಂಗಳೂರಿನಿಂದ ದೆಹಲಿಯವರೆಗೆ, ನಗರಗಳು ಸಾರ್ವಜನಿಕ ಸಾರಿಗೆಯನ್ನು ಸ್ವಚ್ಛ, ಸುಧಾರಿತ ಮತ್ತು ಹೆಚ್ಚು ದಕ್ಷತೆಯಿಂದ ಕೂಡಿರುವಂತೆ ಮಾಡುಲು ವಿದ್ಯುತ್ ಚಾಲಿತ ಬಸ್ಸುಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುತ್ತಿವೆ" ಎಂದು ಅವರು ಹೇಳಿದರು.

"ನಾವು ಕೇವಲ ವಿದ್ಯುತ್ ಚಾಲಿತ ಬಸ್ಸುಗಳನ್ನು ಹಂಚಿಕೆ ಮಾಡುತ್ತಿರುವುದಷ್ಟೇ ಅಲ್ಲ, ಬದಲಾಗಿ ನಾವೀನ್ಯತೆ ಮತ್ತು ಪರಿಸರ ಕಾಳಜಿಯೊಂದಿಗೆ ಭಾರತದ ಸಾರಿಗೆ ವ್ಯವಸ್ಥೆಯ ಭವಿಷ್ಯವನ್ನು ರೂಪಿಸುತ್ತಿದ್ದೇವೆ" ಎಂದು ಕೇಂದ್ರ ಸಚಿವರು ಹೇಳಿದರು. "ಕೇಂದ್ರ ಸರ್ಕಾರ ಹಾಗೂ ತೆಲಂಗಾಣ, ಕರ್ನಾಟಕ, ದೆಹಲಿ ಮತ್ತು ಗುಜರಾತ್ ನಂತಹ ರಾಜ್ಯಗಳ ನಡುವಿನ ನಿಕಟ ಸಮನ್ವಯದೊಂದಿಗೆ, ನಾವು 'ಪಿಎಂ ಇ-ಡ್ರೈವ್' ವಾಗ್ದಾನವನ್ನು ಈಡೇರಿಸಲು ದೃಢಸಂಕಲ್ಪ ಮಾಡಿದ್ದೇವೆ" ಎಂದು ಅವರು ಹೇಳಿದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿರುವ ಪಿಎಂ ಇ-ಡ್ರೈವ್ ಯೋಜನೆಯು ಏಪ್ರಿಲ್ 2024ರಿಂದ ಮಾರ್ಚ್ 2026ರವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ₹10,900 ಕೋಟಿ ವೆಚ್ಚದಲ್ಲಿ 14,028 ಎಲೆಕ್ಟ್ರಿಕ್ ಬಸ್ ಗಳನ್ನು ನಿಯೋಜಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಸಾರ್ವಜನಿಕ ಸಾರಿಗೆಯನ್ನು ದೊಡ್ಡ ಮಟ್ಟದಲ್ಲಿ ವಿದ್ಯುದ್ದೀಕರಿಸುವ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಪ್ರಯತ್ನಗಳಲ್ಲಿ ಒಂದಾಗಿದೆ. ಭಾರೀ ಕೈಗಾರಿಕಾ ಸಚಿವಾಲಯವು ನಿಗದಿತ ಸಮಯದೊಳಗೆ ವಿತರಣೆ, ಕಾರ್ಯಾಚರಣೆಗೆ ಸಿದ್ಧತೆ ಮತ್ತು ಭಾಗವಹಿಸುವ ಎಲ್ಲ ರಾಜ್ಯಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಗೆ ಬದ್ಧವಾಗಿದೆ.

 

*****


(Release ID: 2130540)