ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಇ-ಡ್ರೈವ್ ಅಡಿಯಲ್ಲಿ ಭಾರತವು ರಾಷ್ಟ್ರೀಯ ಇವಿ ಚಾರ್ಜಿಂಗ್ ಗ್ರಿಡ್ ಅನ್ನು ವೇಗಗೊಳಿಸಿದೆ


ಭಾರತದಾದ್ಯಂತ 72,000 ಇವಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ₹2,000 ಕೋಟಿ ಹಂಚಿಕೆ

ಪ್ರಮುಖ ನಗರಗಳು, ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ಕೈಗಾರಿಕಾ ಕಾರಿಡಾರ್‌ ಗಳನ್ನು ಒಳಗೊಳ್ಳಲಿರುವ ಚಾರ್ಜಿಂಗ್ ಮೂಲಸೌಕರ್ಯ

ಬೇಡಿಕೆ ಕ್ರೋಢೀಕರಣ ಮತ್ತು ಏಕೀಕೃತ ಇವಿ ಸೂಪರ್ ಅಪ್ಲಿಕೇಶನ್‌ನ ಅಭಿವೃದ್ಧಿಗಾಗಿ ಬಿ ಎಚ್‌ ಇ ಎಲ್ ಅನ್ನು ನೋಡಲ್ ಏಜೆನ್ಸಿಯಾಗಿ ಪರಿಗಣಿಸಲಾಗುವುದು

ತ್ವರಿತ ನಿಯೋಜನೆಗಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಅಂತರ-ಸಚಿವಾಲಯ ಸಭೆ

Posted On: 21 MAY 2025 3:42PM by PIB Bengaluru

 ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿಯಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ಅನುಷ್ಠಾನವನ್ನು ಪರಿಶೀಲಿಸಲು ಮತ್ತು ವೇಗಗೊಳಿಸಲು ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಬೃಹತ್ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಅಂತರ ಸಚಿವಾಲಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

WhatsApp Image 2025-05-21 at 15.07.11.jpeg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭಿಸಲಾದ ಈ ಯೋಜನೆಯು, ಸ್ವಚ್ಛ ಸಾರಿಗೆಯನ್ನು ಸಕ್ರಿಯಗೊಳಿಸಲು ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ರಾಷ್ಟ್ರವ್ಯಾಪಿ ವಿದ್ಯುಚ್ಛಾಲಿತ ವಾಹನಗಳಿಗೆ ಸಿದ್ಧವಾದ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

₹2,000 ಕೋಟಿ ಆರ್ಥಿಕ ವೆಚ್ಚದೊಂದಿಗೆ, ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯು ದೇಶಾದ್ಯಂತ ಸುಮಾರು 72,000 ಇವಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡುತ್ತದೆ. ಈ ಕೇಂದ್ರಗಳನ್ನು 50 ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ ಗಳಲ್ಲಿ, ಮೆಟ್ರೋ ನಗರಗಳು, ಟೋಲ್  ಪ್ಲಾಜಾಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಇಂಧನ ತುಂಬಿಸುವ ಕೇಂದ್ರಗಳು ಮತ್ತು ರಾಜ್ಯ ಹೆದ್ದಾರಿಗಳಂತಹ ಹೆಚ್ಚಿನ ದಟ್ಟಣೆಯ ತಾಣಗಳಲ್ಲಿ ಕಾರ್ಯತಂತ್ರವಾಗಿ ನಿಯೋಜಿಸಲಾಗುವುದು.

"ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಸುಸ್ಥಿರ ಸಾರಿಗೆಗೆ ಜಾಗತಿಕ ಮಾದರಿಯಾಗುವ ಹಾದಿಯಲ್ಲಿದೆ. ಪಿಎಂ ಇ-ಡ್ರೈವ್ ಯೋಜನೆಯು ನಮ್ಮ ನಾಗರಿಕರಿಗೆ ಸ್ವಚ್ಛ, ಕೈಗೆಟುಕುವ ಮತ್ತು ಅನುಕೂಲಕರ ಚಲನಶೀಲ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಪರಿವರ್ತನಾ ಉಪಕ್ರಮವಾಗಿದೆ. ನಾವು ಕೇವಲ ಮೂಲಸೌಕರ್ಯವನ್ನು ನಿರ್ಮಿಸುತ್ತಿಲ್ಲ; ಇಂಧನ ಭದ್ರತೆ ಮತ್ತು ಹಸಿರು ಆರ್ಥಿಕ ಬೆಳವಣಿಗೆಗೆ ಅಡಿಪಾಯವನ್ನು ಹಾಕುತ್ತಿದ್ದೇವೆ" ಎಂದು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

WhatsApp Image 2025-05-21 at 15.07.11 (2).jpeg

ಈ ಉಪಕ್ರಮದ ಅನುಷ್ಠಾನದಲ್ಲಿ ವಿವಿಧ ಪಾಲುದಾರರ ಸಮಗ್ರ ಪಾತ್ರವನ್ನು ಸಚಿವರು ಶ್ಲಾಘಿಸಿದರು. ಬೇಡಿಕೆ ಕ್ರೋಢೀಕರಣ ಮತ್ತು ಭಾರತದಾದ್ಯಂತ ವಿದ್ಯುತ್ ವಾಹನ ಬಳಕೆದಾರರಿಗೆ ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುವ ಏಕೀಕೃತ ಡಿಜಿಟಲ್ ಸೂಪರ್ ಅಪ್ಲಿಕೇಶನ್ ಅಭಿವೃದ್ಧಿಗಾಗಿ ಬಿ ಎಚ್‌ ಇ ಎಲ್ (ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್) ಅನ್ನು ನೋಡಲ್ ಏಜೆನ್ಸಿಯಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಅಪ್ಲಿಕೇಶನ್ ನೈಜ-ಸಮಯದ ಸ್ಲಾಟ್ ಬುಕಿಂಗ್, ಪಾವತಿ ಏಕೀಕರಣ, ಚಾರ್ಜರ್ ಲಭ್ಯತೆಯ ಸ್ಥಿತಿ ಮತ್ತು ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರೀಯ ನಿಯೋಜನೆಯನ್ನು ಪತ್ತೆಹಚ್ಚಲು ಪ್ರಗತಿ ಡ್ಯಾಶ್‌ ಬೋರ್ಡ್‌ ಗಳನ್ನು ಒಳಗೊಂಡಿರುತ್ತದೆ. ಚಾರ್ಜರ್ ಸ್ಥಾಪನೆಗಳಿಗೆ ಪ್ರಸ್ತಾವನೆಗಳನ್ನು ಸಂಗ್ರಹಿಸಲು ಮತ್ತು ಮೌಲ್ಯಮಾಪನ ಮಾಡಲು ಬಿ ಎಚ್‌ ಇ ಎಲ್ ರಾಜ್ಯಗಳು ಮತ್ತು ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುತ್ತದೆ.

ಸಹಯೋಗದ ಒಕ್ಕೂಟ ವ್ಯವಸ್ಥೆ ಮತ್ತು ಕಾರ್ಯಾಚರಣೆಗಳ ಸಮನ್ವಯದ ಮಹತ್ವವನ್ನು ಸಚಿವ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು. “ಶುದ್ಧ ಇಂಧನ ಪರಿವರ್ತನೆಯು ಅಡೆತಡೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ಸಭೆಯು ಒಂದೇ ಸರ್ಕಾರವಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಚಿವಾಲಯಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ರಾಜ್ಯಗಳು ವಾಸ್ತವದಲ್ಲಿ ಫಲಿತಾಂಶಗಳನ್ನು ನೀಡಲು ಒಗ್ಗೂಡಿವೆ. ಪ್ರಧಾನಮಂತ್ರಿ ಇ-ಡ್ರೈವ್ ಹೊಸ ಕೈಗಾರಿಕೆಗಳನ್ನು ವೇಗಗೊಳಿಸುತ್ತದೆ, ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ತಡೆರಹಿತ ವಿದ್ಯುತ್ ಚಲನಶೀಲತೆಯನ್ನು ಒದಗಿಸುತ್ತದೆ ಎಂದು ನಮಗೆ ವಿಶ್ವಾಸವಿದೆ.” ಎಂದು ಅವರು ಹೇಳಿದರು.

ಈ ಯೋಜನೆಯ ಯಶಸ್ಸು ಭಾರತದ ಸಾರಿಗೆಯಿಂದ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ವಿದ್ಯುತ್ ವಾಹನಗಳ ಮೂಲಸೌಕರ್ಯದಲ್ಲಿ ಮೇಕ್ ಇನ್ ಇಂಡಿಯಾ ತಯಾರಿಕೆಯನ್ನು ಉತ್ತೇಜಿಸುತ್ತದೆ ಮತ್ತು ನಿವ್ವಳ-ಶೂನ್ಯ ಚಲನಶೀಲತೆಯ ಭವಿಷ್ಯಕ್ಕೆ ಅಡಿಪಾಯ ಹಾಕುತ್ತದೆ ಎಂದು ನಿರೀಕ್ಷಿಸಲಾಗಿದೆ.


(Release ID: 2130281)